ಫೇಸ್ ಬುಕ್ ಡೌನ್: ನಿಮ್ಮನ್ನೂ ಕುಟುಕುತ್ತದೆ..

ಮಧುಸೂದನ ವೈ ಎನ್

ಫೇಸ್ ಬುಕ್ ಡೌನ್ ಆದದ್ದರಿಂದ ಝುಕರ್ ಬರ್ಗ್ ನಲವತ್ತು ಸಾವಿರ ಕೋಟಿ ಕಳೆದುಕೊಂಡ ಎಂಬುದು ಅಲ್ಪ ಸತ್ಯ. ಕಂಪನಿಯ ಶೇರ್ ವ್ಯಾಲ್ಯೂ ಕಡಿಮೆಯಾದ ಮೊತ್ತವನ್ನು ನಷ್ಟವೆಂದು ಹೇಳಲಾಗುತ್ತಿದೆ. ಇನ್ನೊಂದು ವಾರ ತಿಂಗಳಿನಲ್ಲಿ ಶೇರ್ ದರ ಮೊದಲಿನಷ್ಟಾಗುತ್ತದೆ. ತುಸು ಹೆಚ್ಚಾದರೂ ಅಚ್ಚರಿಯಿಲ್ಲ. ಆಗ ನೀವು ಝುಕರ್ಬರ್ಗ್ ಒಂದು‌ ವಾರದಲ್ಲೆ ನಲವತ್ತು ಸಾವಿರ ಕೋಟಿ ಲಾಭ ಗಳಿಸಿದ ಅನ್ನುವುದಿಲ್ಲ ತಾನೆ?
ಹಾಗಿದ್ದಲ್ಲಿ ಈ ಘಟನೆಗೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಸದನ ಮಗ ರೈತರ ಮೇಲೆ ಕಾರು ಹತ್ತಿಸಿದ ಘಟನೆಗೂ ಸಂಬಂಧವಿದೆಯಾ? ಅರ್ಥಾತ್ ವಿಡಿಯೋ ಸಾರ್ವಜನಿಕವಾಗಿ ಲಭ್ಯವಾದ ಕೂಡಲೇ ಯಾರೊ ಏನೊ ಮಸಲತ್ತು ನಡೆಸಿ ಎಫ್ ಬಿ ವಾಟ್ಸಾಪು ಡೌನ್ ಮಾಡಿರುವರಾ? ಸಾಧ್ಯವಿದೆ, ಅದೇ ನಿಜವಾ ಎಂಬುದಕ್ಕೆ ಪೂರ್ಣ ಮಾಹಿತಿಯಿಲ್ಲ.

ಕಾಮನ್ ಸೆನ್ಸ್ ಇರುವ ಯಾರಾದರೂ ತುಸು ಯೋಚಿಸಿದರೆ ಆಗಿರಲಿಕ್ಕೆ ಸಾಧ್ಯ ಎಂಬುದು ಹೊಳೆಯುತ್ತದೆ. ಕಾರಣ ಇಷ್ಟೇ. ಜಗತ್ತಿನಾದ್ಯಂತ ಜನರ ಜೀವಾಳವಾಗಿರುವ ಎಫ್ ಬಿ ಮತ್ತು ವಾಟ್ಸಾಪ್, ಮತ್ತು ಇವುಗಳಿಂದ ಅತಿ ಶ್ರೀಮಂತನಾಗಿರುವ ಝುಕರ್ ಬರ್ಗ್, ಅತಿ ದೊಡ್ಡ ಕಂಪನಿ ಫೇಸ್ ಬುಕ್- ನೂರಕ್ಕೆ ನೂರು HA (high availability, 99.999 means five minutes downtime per year) ಇರುವ ರಿಯಲ್ ಟೈಮ್ ಕಂನ್ಸೂಮರ್ ಆಪ್ ನ ಸರ್ವರುಗಳು ಸತತ ಆರು ಗಂಟೆ ಡೌನ್ ಆಗುವುದು ಶೇಕಡಾ 99 ರಷ್ಟು ಅನುಮಾನಾಸ್ಪದ. ತಜ್ಞರು ನಿಜಕ್ಕೂ ಒಳಗಿನವರ ಕೈವಾಡವಿರಬಹುದು ಎಂದು ಶಂಕಿಸುತ್ತಿದ್ದಾರೆ. ತಾಂತ್ರಿಕ ತಜ್ಞರು ಹಾಗೆಲ್ಲ ಸುಮ್ಮಸುಮ್ಮನೆ ಯಾವ ಯಾವುದೊ ರಾಜಕೀಯ/ಸೈದ್ಧಾಂತಿಕ ಕಾರಣಗಳಿಗೆ ಶಂಕೆ ವ್ಯಕ್ತಪಡಿಸಲಾರರು.

ನೀವು ಕೇಳಬಹುದು- ಆರು ಗಂಟೆ ಕಳೆದ ನಂತರ ವಿಡಿಯೋ ಪುನಃ ಹಂಚಿಕೆಗೆ ಸಿಕ್ಕೇ ಸಿಗುತ್ತದಲ್ಲ ಎಂದು. ಅದು ಎಷ್ಟು ಕೆಟ್ಟ ದುರಾತ್ಮಕ ಪ್ರಚೋದಕ ಘಟನೆಯೆಂದರೆ ಇಂಥದು ನಮ್ಮ ದೇಶದಲ್ಲಿ ಜರುಗುತ್ತದೆ ಎಂದು ನಂಬಲಿಕ್ಕೂ ಅಸಾಧ್ಯ. ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಿರುವ ನರಪೇತಲ ಜನರ ಮೇಲೆ ಸಂಸದನ ಮಗ ಎಸ್ ಯೂ ವಿ ಯನ್ನು ಬೇಕಂತಲೇ ಹರಿಸಿದ್ದಾನೆ. ಪೊರಕೆಯಿಂದ ಗುಡಿಸುತ್ತೀರಲ್ಲ ಹಾಗೆ. ಈಗ ಆತ ಅದು ನಾನಲ್ಲ ಎನ್ನಬಹುದು. ನಿಮಗೆ ಗೊತ್ತಿಲ್ಲವೇ ಶಾಸಕರ ಮಕ್ಕಳು ಅಪರಾಧವೆಸಗಿ ಹಣ ಕೊಟ್ಟು ತಮ್ಮ ಡ್ರೈವರಿಗೆ ಶರಣಾಗಲು ಹೇಳುವುದು?

ಇಂತಿರುವ ಘಟನೆ ದೇಶಾದ್ಯಂತ ಕೋಲಾಹಲವೆಬ್ಬಿಸುವ ಎಲ್ಲ ಸಾಧ್ಯತೆಗಳಿದ್ದವು. ಸಿವಿಲ್ ಅನ್ ರೆಸ್ಟ್. ಹೊತ್ತಿಕೊಳ್ಳುವ ಬೆಂಕಿಯನ್ನು ಆರಿಸುವ ಪ್ರಯತ್ನ ಎಫ್ ಬಿ/ವಾಟ್ಸಾಪ್ ಡೌನ್ ಇದ್ದಿರಬಹುದು.

ಸಾಮಾನ್ಯ ಜನರು ಯೋಚಿಸಬೇಕಾದ್ದು ಎರಡು: ಜೀಪು ಹತ್ತಿಸುವಿಕೆ ಮತ್ತು ಸಂಶಯಾಸ್ಪದ ವಾಟ್ಸಾಪ್ ಡೌನ್.
ಮಧ್ಯಮ ಮೇಲ್ಮಧ್ಯಮ ಹುಡುಗಿ ಮೇಲೆ ಅತ್ಯಾಚಾರವಾದಾಗ ಇಡೀ ದೇಶ ಬೊಬ್ಬಿರಿಯುತ್ತದೆ. ಪಕ್ಕದ ದೇಶದಲ್ಲಿ ನಮ್ಮ ಧರ್ಮದವರ ಮೇಲೆ ಹಲ್ಲೆಯಾಯಿತೆಂಬುದರ ಮೇಲೆ ಚುನಾವಣೆಗಳ ಫಲಿತಾಂಶ ನಿರ್ಧರಿಸಲಾಗುತ್ತದೆ. ಅನ್ಯಧರ್ಮೀಯ ಪ್ರೀತಿಸಿ ಕೈಕೊಟ್ಟರೆ ದೇಶವೇ ರೊಚ್ಚಿಗೇಳುತ್ತದೆ. ಸಲ್ಮಾನ್ ಖಾನ್ ಕುಡಿದು ಪಾದಚಾರಿಗಳ ಮೇಲೆ ಜೀಪು ಹತ್ತಿಸಿರುವುದು ಎಂದಿಗೂ ಜನರ ಮನಸಿನಿಂದ ಮಾಸುವುದಿಲ್ಲ.
ಈ ಘಟನೆಗೆ ಯಾಕೆ ದಿವ್ಯ ಮೌನ? ರೈತರೆಂದೇ? ರೈತರಲ್ಲವೆಂದೇ? ಹತ್ತಿಸಿದವನು ಬಿಜೆಪಿ ಪಕ್ಷದವನೆಂದೇ ಅಲ್ಲ ಅದು ಡ್ರೈವರು ಮಾತ್ರವೆಂದೇ? ಯಾರಾದರೂ ಎಷ್ಟರ ಮಟ್ಟಿಗೆ ಆತ್ಮದ್ರೋಹಿಗಳಾಗಿರಲು ಸಾಧ್ಯ? ಅವರು ರೈತರಲ್ಲದೆ ಪುಡಿ ಕಾರ್ಯಕರ್ತರೇ ಇರಲಿ- ಎಂದ ಮಾತ್ರಕ್ಕೆ ಜೀಪು ಹತ್ತಿಸಿ ಹುಳ ಹೊಸಕಿದಂತೆ ಹೊಸಕಬಹುದೇ?

ನನಗೆ ಏನು ಅನಿಸುತ್ತದೆ ಎಂದರೆ- ಅವರು ನಿಜವಾಗಿ ರೈತರು, ಬಡವರು, ಅಮಾಯಕರು ಎಂಬುದು ನಿಮಗೆ ಗೊತ್ತಿದೆ. ಎಸ್ ಯು ವಿ ಹತ್ತಿಸಿದವರು ಸಂಸದನ ಮಗ ಎಂಬುದೂ ತಿಳಿದಿದೆ. ಅವನ ಅಹಂಕಾರ ದರ್ಪ ಕ್ರೂರತನ ನಿಮಗೆ ಪರಿಚಯವಿದೆ. ಇದು ಯಾಕಾಗಿರಬಹುದು ಹೇಗಾಗಿರಬಹುದು ಎಂಬುದರ ಸ್ಪಷ್ಟ ಕಲ್ಪನೆ ನಿಮಗಿದೆ. ಪರೋಕ್ಷವಾಗಿ ನೀವೂ ಸಹ ಕಾರಣರು ಎಂಬುದು ನಿಮ್ಮೊಳಗೆ ಕುಟುಕುತ್ತಿದೆ. ಆ ಘಟನೆ ನೀವು ಕನ್ನಡಿ ಎದುರು ನಿಂತಾಗ ಕಾಣುವ ದೃಶ್ಯ.

ಹಾಗಾಗಿಯೇ ನಿಮ್ಮನ್ನು ನೀವು ನೋಡಲಾರದೆ ಪಲಾಯನಗೈಯುತ್ತಿರುವಿರಿ. ಧೈರ್ಯವಿಲ್ಲ. ಒಪ್ಪಿಕೊಳ್ಳಲು ಮನಸು ಬರುತ್ತಿಲ್ಲ. ಇದು ಯಾರೋ ಒಬ್ಬ ತಲೆತಿರುಕ ಸ್ಯಾಡಿಸ್ಟ್ ಕ್ರೂರಿ ರಸ್ತೇಲಿ ನಡೆದುಹೋಗುವ ಅಮಾಯಕ ಹೆಣ್ಣು ಒಂಟಿ ಇರುವಳೆಂದು ಮುಗಿಬಿದ್ದಷ್ಟು ವ್ಯಕ್ತಿಗತ ಘಟನೆಯಲ್ಲ. ಹಾಡುಹಗಲು, ಎಲ್ಲರ ಸಮಕ್ಷಮ,ಜನರಿಂದ ಆಯ್ಕೆಯಾದ ಪ್ರತಿನಿಧಿ ತನನ್ನು ಪಟ್ಟಕ್ಕೇರಿಸಿದ ಜನರನ್ನು ಅಂಗಾಲಿಂದ ಹುಳವನ್ನು ನೆಲಕ್ಕೆ ತಿಕ್ಕಿ ತೀಡಿ ರಸಿಕಸಿ ಹೊಸಕಿದಂತೆ ಹೊಸಕಿರುವುದು.

ನಮ್ಮ ಸಮಾಜದ ಒಂದು ಇಡೀ ಲೇಯರಿನ ಮನಸ್ಥಿತಿಯ ಪ್ರತಿಬಿಂಬ. ದಿನವೂ ಅನ್ನವನ್ನು ಹೇಸಿಗೆಯ ರೂಪದಲ್ಲಿ ತಿನ್ನುವವರು. ನಿಮಗೆ ಗೊತ್ತಿರಲಿ- ನಿಮ್ಮ ತೆರಿಗೆ ಹಣದಿಂದ ರೈತರನ್ನು ಸಬ್ಸಿಡೈಜ್ ಮಾಡುತ್ತಿರುವೆವು ಎಂಬ ಭ್ರಮೆಯಲ್ಲಿರುವಿರಿ. ಈ ಕ್ಷಣಕ್ಕೂ ನೀವು ಸೇವಿಸುವ ಆಹಾರ ಬೆಳೆದವರಿಂದ ಸಬ್ಸಿಡೈಜ್ ಆಗಿ ನಿಮ್ಮನ್ನು ತಲುಪಿರುವುದು. ಇದು ವ್ಯಾವಹಾರಿಕ ಮಾತು. ಬಿಡಿ ಅವರು ಭಿಕ್ಷುಕರೇ ಆಗಿದ್ದಲ್ಲಿ ಹಾಗೆ ಮಾಡಬಹುದೇ?

‍ಲೇಖಕರು Admin

October 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: