ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ!

ಅಂಶಿ ಪ್ರಸನ್ನಕುಮಾರ್

ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ ಏಕಾಂತ ಪಡೆಯಲು, ಮುಂದಿನ ಕಥೆಗೊಂದು ಚೆಂದದ ತಿರುವು ಕೊಡಲು, ಸದ್ದಿಲ್ಲದೆ ಎಲ್ಲೋ ಕೂತು ಹೊಸ ಹೊತ್ತಗೆ ಬರೆಯಲು ಈ ‘ನಾಪತ್ತೆ’ಗಳು ನಾನಾ ಕಾರಣದಿಂದ ನೆರವಾಗಿವೆ.

ಅಂಥ ಕಣ್ಮರೆಯ ಕಣ್ಮಣಿಗಳನ್ನು ಕನ್ನಡನಾಡಲ್ಲೂ ಕಾಣಬಹುದು. ಸಣ್ಣ ಕೋಪಕ್ಕೂ ಮೌನವಹಿಸಿ ಎಲ್ಲೋ ಮರೆಯಲ್ಲಿ ಪೆನ್ನು ಹಿಡಿದು ಕೂರುವ ಕಾರಂತರು, ಮದ್ಯದ ಬಾಟಲಿಯೊಂದಿಗೆ ಮಾಯವಾಗುವ ಲಂಕೇಶರು, ಕೋವಿ- ಕ್ಯಾಮೆರಾದೊಂದಿಗೆ ಕಾಡಿನಲ್ಲಿ ಮರೆಯಾಗುವ ತೇಜಸ್ವಿ, ಹಾಗೆಯೇ ಪಟ್ಟಿ ಮುಂದುವರಿದರೆ ಸಿಗುವ ಮತ್ತೊಂದು ಹೆಸರು ‘ದೇವನೂರು ಮಹಾದೇವ’.

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ!

ಮೊನ್ನೆ ಸಿಎಂ, ಮೈಸೂರಿನಲ್ಲಿರುವ ಮಹಾದೇವರ ಮನೆಗೆ ಭೇಟಿ ನೀಡಿದ್ದೇ ದೊಡ್ಡ ಸುದ್ದಿಯಾಯಿತು. ಆದರೆ, ಅದರ ಹಿಂದೆಯೂ ಒಂದು ‘ನಾಪತ್ತೆ ಪ್ರಕರಣ’ವಿತ್ತು ಅನ್ನೋದು ಬಹಳ ಮಂದಿಗೆ ಗೊತ್ತಿಲ್ಲ. ಮೈಸೂರಿನ ಕುವೆಂಪುನಗರದ ನವಿಲು ರಸ್ತೆಯ 11ನೇ ಕ್ರಾಸಿನಲ್ಲಿದೆ ದೇವನೂರು ಮಹಾದೇವ ಅವರ ಮನೆ. ‘ನಿಯೋಜಿತ ಸಿಎಂ ಸಿದ್ದರಾಮಯ್ಯನವರು ನಿಮ್ಮ ಮನೆಗೆ ಬರುತ್ತಾರೆ’- ಹೀಗಂತ ಕೆಂಪುದೀಪದ ಜೀಪಿನಲ್ಲಿ ಬಂದ ಪೊಲೀಸರು ಮುಂಚಿತವಾಗಿಯೇ ತಿಳಿಸಿದ್ದರು.

ಆದರೆ ಮಹಾದೇವ ಇದ್ದಕ್ಕಿದಂತೆ ನಾಪತ್ತೆ!

ಇನ್ನೇನು ಕೆಲವೇ ನಿಮಿಷ. ಸಿಎಂ ಬರುತ್ತಾರೆ. ‘ಎಲ್ಲಿಗೆ ಹೋಗಿರಬಹುದು ಮಹಾದೇವ?’ ಎಂದು ಎಲ್ಲರೂ ತಲೆಕೆಡಿಸಿಕೊಳ್ಳುತ್ತಿರುವಾಗಲೇ ದೇವನೂರು ಹಾಜರ್. ಅವರಿಗೆ ಆಗಾಗ್ಗೆ ಸಿಗರೇಟು ಸೇದುವ ಮತ್ತು ಚಹಾ ಕುಡಿಯುವ ಚಟ. ಇವೆಲ್ಲ ಚಟಗಳನ್ನು ಮನೇಲಿ ಪೂರೈಸಿಕೊಳ್ಳುವ ಪದ್ಧತಿಗೆ ಅವರು ವಿರುದ್ಧ.

ಸಿಗರೇಟು ಪ್ಯಾಕು ಖಾಲಿಯಾದಾಗ ಕೈನೆಟಿಕ್ ಹೊಂಡಾ ಹತ್ತಿಕೊಂಡು, ಹೊರಗಿನ ಬೀದಿಯ ಯಾವುದೋ ಅಂಗಡಿಯೆದರು ಜೇಬಿನಲ್ಲಿ ಚಿಲ್ಲರೆಯನ್ನು ಝಣಪಡಿಸುತ್ತಾರೆ. ಸುರುಳಿ ಹೊಗೆಬಿಟ್ಟು ಹಾಗೆಯೇ ಸರ್ರನೆ ಮನೆಗೆ ಮರಳುತ್ತಾರೆ. ಸದಾ ಪ್ರಚಾರದಿಂದ ದೂರವುಳಿಯುವ ದೇವನೂರು ಮಹಾದೇವ ಅವರು ಮೈಸೂರಿನ ಕೆಲವರಿಗೆ ಗೊತ್ತೇ ಇಲ್ಲ. ಆದರೂ, ತಮ್ಮನ್ನು ‘ದೊಡ್ಡ ಸಾಹಿತಿ’ ಎಂದು ಬಿಂಬಿಸಿಕೊಳ್ಳಲು ಅವರೆಂದೂ ಮುಂದಾದವರಲ್ಲ. ಮೊನ್ನೆ ಸಿಎಂ ಬಂದಾಗ ಅದೂ ಸಾಬೀತಾಗಿ ಹೋಯಿತು.

ಮಹಾದೇವ ಅವರ ಮನೆಗೆ ನವಿಲು ರಸ್ತೆ ಕಡೆಯಿಂದಲೂ ಬರಬಹುದು, ಇಬ್ಬನಿ ರಸ್ತೆ ಮೂಲಕವೂ ಬರಬಹುದು. ನವಿಲು ರಸ್ತೆ ಕಡೆಯಿಂದ ಸಿದ್ದರಾಮಯ್ಯ ಅವರು ಬರುವುದಿದ್ದರಿಂದ ಪೊಲೀಸರು ಅಲ್ಲಿ ಯಾವುದೇ ವಾಹನಗಳನ್ನೂ ಬಿಡುತ್ತಿರಲಿಲ್ಲ. ಅಲ್ಲಿ ನಿಯೋಜಿಸಿದ್ದ ಪೊಲೀಸರಿಗೆ ದೇವನೂರ ಮಹಾದೇವ ಅವರ ಮುಖಪರಿಚಯವೇ ಇರಲಿಲ್ಲ.

ಒಟ್ಟಿನಲ್ಲಿ ದೇವನೂರು ಅವರ ಮನೆಗೆ ಸಿಎಂ ಬರುತ್ತಾರೆಂಬ ಸೂಚನೆ ಮಾತ್ರ ಕಿವಿಗೆ ಬಿದ್ದಿತ್ತು. ನವಿಲು ರಸ್ತೆಯಲ್ಲಿ ಯಾವುದೇ ವಾಹನಗಳನ್ನು ಬಿಡುವಂತಿಲ್ಲ ಎಂದು ಸೂಚನೆಯ ಬೆನ್ನೇರಿದ ಪೊಲೀಸರು, ಸ್ವತಃ ಮಹಾದೇವ ಅವರ ಕೈನೆಟಿಕ್ ಹೊಂಡಾಕ್ಕೆ ತಡೆಯೊಡ್ಡಿದರು. ಹೀಗಾಗಿ ದೇವನೂರು, ಇಬ್ಬನಿ ರಸ್ತೆ ಕಡೆಯಿಂದ ಮನೆ ತಲುಪಿದರು!

ಪದ್ಮಶ್ರೀ ಗೌರವ ಬಂದಾಗಲೂ ದೇವನೂರು ಹೇಳದೆ ಕೇಳದೆ ನಾಪತ್ತೆಯಾಗಿದ್ದರಂತೆ. ‘ಪದ್ಮಶ್ರೀ’ಯಂಥ ಪ್ರತಿಷ್ಠಿತ ಪ್ರಶಸ್ತಿ ಬರೋವಾಗ ಮೀಡಿಯಾದವರು ಬಿಡುತ್ತಾರೆಯೇ, ಕಮ್ಮಿ ಎಂದರೂ ಎಂಟರಿಂದ ಹತ್ತು ಪತ್ರಕರ್ತರು ‘ಸಂದರ್ಶನ ಕೊಡಿ ಸಾರ್…’ ಅಂತ ಬರ್ತಾರೆ. ಪ್ರಶಸ್ತಿಯ ಪ್ರಚಾರಕ್ಕಿಂತ, ಅವರಿಂದ ತಪ್ಪಿಸಿಕೊಳ್ಳೋದೇ ದೊಡ್ಡ ಖುಷಿ ದೇವನೂರು ಅವರಿಗೆ. ಹೀಗಾಗಿ, ‘ಪದ್ಮಶ್ರೀ’ ಪ್ರಶಸ್ತಿ ಬಂದ ನಂತರ ಮೂರು ದಿನ ದೇವನೂರು ಅವರು ಊರಿನಲ್ಲೇ ಇರದೆ, ಯಾವುದೋ ಅಡಗುತಾಣ ಹೊಕ್ಕಿದ್ದರು.

ಚಿತ್ರ: ಮುರುಳಿ ಮೋಹನ್ ಕಾಟಿ

ಮಹಾದೇವ ಅವರು ಮೊದಲೆಲ್ಲಾ ಮೊಪೆಡ್‌ನಲ್ಲಿ ಓಡಾಡುತ್ತಿದ್ದರು. ಈಗ ಕೈನೆಟಿಕ್ ಹೊಂಡಾಗೆ ಬಡ್ತಿ ಪಡೆದಿದ್ದಾರೆ. ಆದರೆ ಅವರಿಗೆ ಹೆಲ್ಮೆಟ್ ಹಾಕಿಕೊಳ್ಳುವುದು ಅಂದರೆ ಕಿರಿಕಿರಿ. ಅವರು ಸೈಕಲ್‌ಗಿಂತ ಕಡಿಮೆ ವೇಗದಲ್ಲಿ ಗಾಡಿ ಓಡಿಸುತ್ತಾರೆ. ಒಮ್ಮೆ ಸಂಚಾರಿ ಪೊಲೀಸರೊಬ್ಬರು ತಡೆದರು. ‘ಎಲ್ರಿ ಹೆಲ್ಮೆಟ್?’ ಅಂದ್ರು. ಮಹಾದೇವ ಮರುಮಾತನಾಡಲಿಲ್ಲ. ‘ಏನ್ ನಿಮ್ ಹೆಸ್ರು?’ ಎಂದು ಆ ಪೊಲೀಸ್ ಜಬರ್ದಸ್ತ್ ಮಾಡಿದರು. ಇವರು ‘ದೇವನೂರ ಮಹಾದೇವ’ ಅಂದ್ರು. ‘ಡಿ. ಮಹಾದೇವ’ ಎಂದು ಬರೆದು ಪೊಲೀಸ್ ರಸೀದಿ ಹರಿದರು.

ಮಹಾದೇವ ಅವರು ಎಂದಿನ ತಮ್ಮ ಶೈಲಿಯಲ್ಲಿ ಎಲ್ಲ ಜೇಬುಗಳನ್ನು ತಡಕಾಡಿ ರು. 100 ದಂಡ ನೀಡಿ, ಮುಂದೆ ಹೋದರು. ಇನ್ನ್ಯಾರೋ ಆಗಿದ್ದಿದ್ದರೆ, ‘ನಾನು ಸಾಹಿತಿ. ಪದ್ಮಶ್ರೀ ಪಡೆದಿದ್ದೀನಿ’ ಅಂತೆಲ್ಲ ಮಾತುಗಳನ್ನು ಹೊರಡಿಸುತ್ತಿದ್ದರೋ ಏನೋ? ಆದರೆ, ದೇವನೂರು ಅವರ ಬದುಕಿಗೆ ಅಂಥ ಪ್ರಚಾರ ಲೇಪಗಳು ಬೇಕಿಲ್ಲ.

ಇವತ್ತಿಗೂ ಅವರು ಸಭೆ, ಸಮಾರಂಭಗಳಿಗೆ ಹೋಗುತ್ತಾರೆ. ಪತ್ರಿಕೆಗಳ ಕಣ್ ತಿರುಗಿಸಲಿಕ್ಕಾಗಿ ಮನಬಂದಂತೆ ಭಾಷಣ ಮಾಡುವುದಿಲ್ಲ. ದೇವನೂರರು ಈವರೆಗೆ ಬರೆದಿರುವುದು ಕಡಿಮೆಯಾದರೂ, ಬೀರಿರುವ ಪ್ರಭಾವ ಅಪಾರ. ಅವರ ಕೃತಿಗಳಿಗೆ ಅಪಾರ ಬೇಡಿಕೆಯಿದೆ. ‘ಕುಸುಮಬಾಲೆ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ. ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಶ್ರೀ, ನಾಡೋಜ ಗೌರವಗಳೆಲ್ಲ ಸಿಕ್ಕರೂ ಸಿಂಪಲ್ಲಾಗಿಯೇ ಇರಲು ಬಯಸುತ್ತಾರೆ. ಎದೆಗೆ ‘ಬಿದ್ದ ಅಕ್ಷರ’ ಇತ್ತೀಚೆಗೆ ಪ್ರಕಟವಾದ ಲೇಖನಗಳ ಸಂಗ್ರಹ. ಮತ್ತೊಂದು ಲೇಖನಗಳ ಸಂಗ್ರಹ ಹೊರತರಲು ಸಿದ್ಧತೆ ನಡೆಸಿದ್ದಾರೆ.

ದೇವನೂರು ಅವರಂಥ ವ್ಯಕ್ತಿತ್ವ ನೂರಾರಾಗಲಿ…

‍ಲೇಖಕರು avadhi

September 27, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

11 ಪ್ರತಿಕ್ರಿಯೆಗಳು

 1. Mohan V Kollegal

  ಇರುವಷ್ಟು ದಿನ ನಾವು ಹೇಗೆ ಬದುಕಬೇಕೆಂಬುದಕ್ಕೆ ಉದಾಹರಣೆ… 🙂

  ಪ್ರತಿಕ್ರಿಯೆ
 2. ದೀಪಕ್ ನಾ. ಹಾಲಿವಾಣ

  ಅವರ ಹೊಸ ಪುಸ್ತಕದ ಹೆಸರೇನು ಮತ್ತು ಯಾವಾಗ ಬಿಡುಗಡೆಯಾಗುತ್ತದೆ?

  ಪ್ರತಿಕ್ರಿಯೆ
 3. ರಮೇಶ್ ಹಿರೇಜಂಬೂರು

  ನಿಜಕ್ಕೂ ಇದು ಲೇಖನ ಚೆನ್ನಾಗಿದೆ. ಸ್ವತಃ ದೇವನೂರು ಅವರಿಗೇ ಬೈಕ್ ಬಿಡದೇ ಇರುವ ಪೇದೆಗಳು, ಚಟಕ್ಕೆ ಬಿದ್ದ ದೇವನೂರು ನಾಪತ್ತೆ ಹವ್ಯಾಸಗಳು ಓದವಾಗ ಖುಷಿ ತರುವ ಜತೆಗೆ ಅವರ ಸರಳತೆಯನ್ನು ಎತ್ತಿ ತೋರಿಸುತ್ತವೆ. ನಿಜವಾಗಿ ತಾನು ಮಾಡಬೇಕಾದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವ ಹಾಗೂ ಮಾಡಿದ ವ್ಯಕ್ತಿಗೆ ಯಾವುದೇ ಪ್ರಚಾರಗಳ ಅಗತ್ಯವಿಲ್ಲ ಎನ್ನುವುದು ಸತ್ಯ.
  -ರಮೇಶ್‌ ಹಿರೇಜಂಬೂರು

  ಪ್ರತಿಕ್ರಿಯೆ
 4. ಮಯೂರ ಬರಗಾಲೆ

  ಯಾವದೇ ಒಬ್ಬ ವ್ಯಕ್ತಿ ಇತಹವರಿಂದ ಕಲಿಯೋದು ಬಹಳ ಇರುತ್ತದೆ.ಧನ್ಯವಾದಗಳು ಸರ್ ನಿಮ್ಮ ಈ ನಡೆಗೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: