ರಾಜಕುಮಾರ ಮಡಿವಾಳರ
“ಫೂ” ಕಥೆಗಾರ…
ಮಂಜುನಾಯ್ಕ ಚಳ್ಳೂರು, ನನ್ನ ಪ್ರೀತಿಯ ಹುಡುಗ, ನಿನ್ನೆ ಮೊನ್ನೆ ಕಾಲೇಜಿಗೆ ಹೋಗಿ ಬರೋನು, ತಮ್ಮನಂತಹ ಗೆಳೆಯ ಅನ್ನುವುದಕ್ಕಿಂತ ತಮ್ಮನಾಗಿಯೇ ಇರುವವನು.
ಈ ಹುಡುಗನ ಆಸಕ್ತಿ, ಬೆಳವಣಿಗೆ, ಆತನ ಮುಗ್ಧತೆ ನನಗೆ ಮೊದಲಿಂದಲೂ ಪ್ರೀತಿ, ಮೊನ್ನೆಯಷ್ಟೆ ಆತನ ಮೊದಲ ಸಂಕಲನ “ಫೂ”ವಿಗೆ, ಕೇಂದ್ರ ಸಾಹಿತ್ಯ ಅಕಾದೆಮಿಯ ಪುರಸ್ಕಾರ. ನಿನ್ನೆ ಆತ ಕಲಿತ ಕಾಲೇಜು, ಆತನನ್ನ ಗದರಿದ, ತಿದ್ದಿದ ಅಧ್ಯಾಪಕರೆಲ್ಲ ಸೇರಿ, ಕಾಲೇಜಿನ ಕಾರ್ಯಕ್ರಮಕ್ಕೆ ಆತನನ್ನೇ ಮುಖ್ಯ ಅತಿಥಿಯಾಗಿ ಕರೆದದ್ದು ನನಗಂತೂ ಕುಣಿಯುವ ಸಂಭ್ರಮ.
ಪ್ರಾಯಶಃ ಕಾರ್ಯಕ್ರಮ ಮುಗಿದು ಅರ್ಧಗಂಟೆ ಆಯ್ತಾ? ಬಂತು ನನ್ನ ಮಂಜ್ಗನ ಫೋನು, ಅಣ್ಣಾ ಎಲ್ಲಿದಿ? ಈಗ ಸ್ವಲ್ಪ ಕೆಲಸ ೮-೩೦ಕ್ಕೆ ಅಂಗಡಿ ಹತ್ರ ಬಾ ಅಂದೆ, ನಮ್ಮ ಅಂಗಡಿ ಸಂಜೆ ೭ ರಿಂದ, ಶಿಕ್ಷಕ ವರ್ಗ, ಸಾಹಿತ್ಯಾಸಕ್ತರು, ಚರ್ಚೆ, ಹರಟೆ,ಚಾ ಪಾರಾಯಣಕ್ಕೆ ತುಂಬಿ ತುಳುಕುತ್ತಿರುತ್ತದೆ.
ಮಂಜು ಸಮಯಕ್ಕೆ ಸರಿಯಾಗಿ ಬಂದ, ನಮ್ಮ ಹುಡುಗರನ್ನ ನಾವು ಗೌರವಿಸೋದು ದೊಡ್ಡವರು (ವಯಸ್ಸಲ್ಲಿ) ಅನಿಸಿಕೊಂಡ ನಮ್ಮ ಸಡಗರ, ಸಂಭ್ರಮ, ಯಾವ ಹೆಗಲ ಮೇಲೆ ಕೈ ಹಾಕಿ ನಡೆಯುತ್ತಿದ್ದೆವೋ, ಆ ಕೊರಳನ್ನ ಹೂಗಳಿಂದ ಸಿಂಗರಿಸುವ ಸೌಭಾಗ್ಯ, ಅಂತಹದ್ದನ್ನ ಈ ನಿಮ್ಮರಾಜಕುಮಾರ ಎಂದೂ ತಪ್ಪಿಸಿಕೊಂಡವನಲ್ಲಾ.
ನಮ್ಮ ಗೌರವ ಸ್ವೀಕರಿಸಿ, ನಮಗೊಂದು ಗೌರವ ತಂದುಕೊಟ್ಟ ಮಂಜುವಿಗೆ ಧನ್ಯವಾದಗಳ ಸಹಿತ, ಆತನ ಪ್ರಾಮಾಣಿಕ ಪ್ರತಿಭೆ ಇನ್ನಷ್ಟು ಗೌರವ, ಮನ್ನಣೆ, ಪುರಸ್ಕಾರ, ಪ್ರಶಸ್ತಿಗಳು ಹುಡುಕಿ ಬರಲಿ ಎಂಬ ಹಾರೈಕೆಯೊಂದಿಗೆ ಬೀಳ್ಕೊಟ್ಟು….
ನನ್ನೆಲ್ಲ ಸಂತಸದ ಬೆನ್ನಿಗೆ ನಿಲ್ಲುವ “ಡಿಡಿ ನಮ್ಮಂಗ್ಡಿ” ಬಳಗದವರಿಗೆಲ್ಲ ಋಣಿ. ತಕ್ಷಣಕ್ಕೆ ಜೊತೆಯಾದ ವೆಂಕಟೇಶ್ ( ಶಿಕ್ಷಕರು) ವಿಜಯಕುಮಾರ ( ಶಿಕ್ಷಕರು) ಇವರಿಗೆ ಕೃತಜ್ಞತೆಗಳು.
0 Comments