ಫುಕುವೋಕಾ, ಮಣ್ಣಿನ ಬಂಡಿ ಮತ್ತು ಭೂಮಿಯ ಜೊತೆ ಮಾತು ಕತೆ

ಎಚ್ ಆರ್ ರಮೇಶ

  •  ಸತೀಶ್ ತಿಪಟೂರು ಅವರ ‘ಮಣ್ಣಿನ ಬಂಡಿ’ಯಲ್ಲಿ ಫುಕುವೋಕಾ ಪುಸ್ತಕದ ಒಂದು ಓದು
  • ಈ ಕೃತಿಯನ್ನು ಭೂಮಿ-ಸಾಂಸ್ಕೃತಿಕ ಅಧ್ಯಯನ ಕೇಂದ್ರ, ತಿಪಟೂರು ಪ್ರಕಟಿಸಿದೆ.
  • ಕೃತಿಗಾಗಿ ಸಂಪರ್ಕಿಸಿ- 99646 95861

ಬದುಕನ್ನು ಯಾವುದೆಲ್ಲಾ ಪ್ರೇರೇಪಿಸುತ್ತದೆ ಮತ್ತು ಅದನ್ನು ಹೇಗೆಲ್ಲ ಅರ್ಥ ಮಾಡಿಕೊಳ್ಳಬೇಕು ಎನ್ನುವ ತುಡಿತ ಮನುಷ್ಯನ ಮೂಲ ಸ್ವಭಾವಗಳಲ್ಲಿ ಒಂದು. ಮತ್ತು ಬದುಕನ್ನು ಅರ್ಥೈಸಿಕೊಳ್ಳಲು ತನಗೆ ಗೊತ್ತಿರುವ ಅನುಭವ, ತಿಳುವಳಿಕೆ, ಜ್ಞಾನ,  ಅರಿವು ಇವುಗಳನ್ನೆಲ್ಲ ಸೇರಿಸಿಕೊಂಡು, ತತ್ವೀಕರಿಸಿ  ಅರ್ಥ ಮಾಡಿಕೊಳ್ಳೂವುದೂ ಸಹ ಅವಿರತ ಪ್ರಯತ್ನ ನಡೆಯುತ್ತಲೇ ಇರುವಂತಹದ್ದು. ಇದು ಮನುಷ್ಯನ ಪ್ರಜ್ಞೆಯ ವಿಕಾಸದ ಜೊತೆಗೆ ನಡೆದು ಕೊಂಡು ಬರುತ್ತಲೇ ಇರುವಂತಹದ್ದು.

ಪ್ರತಿ ಜ್ಞಾನ ಶಾಖೆಯೂ ಆಳದಲ್ಲಿ ಸಹಜ ಬದುಕನ್ನೇ ಧೇನಿಸಿದೆ.  ಅದು ನೆಲದ ದನಿಗೆ ಕಿವಿಗೊಡುತ್ತ ಬದುಕನ್ನು ಬದುಕಬೇಕು ಎನ್ನುವುದನ್ನು ಹೇಳುತ್ತದೆ. ಮತ್ತೂ ತುಸು ವೈಭವಿಕರಿಸಿ ಹೇಳುವುದಾದರೆ, ಈ ಲೋಕದಿಂದ ಮತ್ತೊಂದು ಲೋಕವನ್ನು ಆವಿಷ್ಕರಿಸಿ ಅಲ್ಲಿ ಜೀವಿಸುವ ಸಾಧ್ಯತೆ ಇದ್ದಲ್ಲಿ, ಅಲ್ಲಿಯ ನೆಲದ ಜೊತೆ ನಂಟನ್ನು ಸಾಧಿಸಿಕೊಂಡು ಬದುಕಬೇಕು ಎನ್ನುವುದೇ ಆಗಿರುತ್ತದೆ. ಎಲ್ಲದಕ್ಕೂ “ನೆಲ’ವೇ ಮೂಲ. ಮತ್ತೂ ಅದರ ‘ಗುರುತ್ವ’ ಹಾಗೂ ‘ಆಕರ್ಷಣೆ’ ವಾಸ್ತವ ಬದುಕಿನ ಸಮೀಪಕ್ಕೆ ಕರೆದು ಒಯ್ಯುತ್ತದೆ.

ಈ ನೆಲದ ಜೊತೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಳ್ಳುವಾಗ  ಏನೆಲ್ಲ ವಿಕರ್ಷಣೆಗಳು, ಲಾಲಸೆಗಳು ದಿಕ್ಕು ತಪ್ಪಿಸುತ್ತವೆ. ಇದು ಕಟು ವಾಸ್ತವ. ಆದರೆ ಅವುಗಳನ್ನೆಲ್ಲ ಮೀರಿ ಸಹಜ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವುದು ಎಲ್ಲ ತತ್ವದ ಮೂಲ ದ್ರವ್ಯ. ವಿಶ್ವಾಮಿತ್ರ ‘ಗಾಯತ್ರಿ’ ಯನ್ನು ರಚಿಸಲು ಸಾಧ್ಯವಾಗಿದ್ದು ನೆಲದ ಜೊತೆ ಕರುಳಬಳ್ಳಿಯ ಸಂಬಂಧವನ್ನು ಇಟ್ಟುಕೊಂಡು ಬದುಕಲು ಪ್ರಜ್ಞೆಯ ಬೆಳಕಿನಿಂದ ಪ್ರಚೋದನೆಗೊಂಡು ಕತ್ತಲಿನಿಂದ ಬಿಡುಗಡೆ ಆಗಬೇಕೆನ್ನುವ ಚಿಂತನೆಯೇ ಆಗಿದೆ. ಈ ಕವಿತೆಯಂತಹ ಮಂತ್ರದಲ್ಲಿ ಇರುವುದು ಪ್ರಕೃತಿ ಅಂದರೆ ಬೆಳಕು ಅದು ಸೂರ್ಯ. 

ನಮಗೆಲ್ಲ ಪ್ರಾಥಮಿಕ ಶಾಲೆಗಳಲ್ಲಿ ವಿಜ್ಞಾನ ಪಾಠಗಳಲ್ಲಿ ಹೇಳಿಕೊಟ್ಟಿರುವುದು ಸೂಯ ಬೆಳಕಿನ ಮೂಲ ಎಂದು. ಆ ಬೆಳಕೆ ಮುಂದುವರಿದು ಅನೇಕ ರೂಪಕಗಳಿಗೆ ಪ್ರತೀಕವಾಗಿದೆ. 

ಶೇಕ್ಸ್ ಪಿಯರ್ ಬದುಕನ್ನು ರಂಗಸ್ಥಳಕ್ಕೆ ಸಮೀಕರಿಸಿಕೊಂಡು ಮನುಷ್ಯರ ಬದುಕನ್ನು ತನ್ನ  ಆಸ್ ಯು ಲೈಕ್ ಇಟ್ ಎನ್ನುವ ನಾಟಕದಲ್ಲಿನ ‘ಆಲ್ ದ ವರ್ಲ್ಡ್ ಈಸ್ ಎ ಸ್ಟೇಜ್’ ಎನ್ನುವ ಸಾಲುಗಳಲ್ಲಿ ತುಂಬ ವಾಸ್ತವಿಕ ನೆಲೆಯಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾನೆ.  ಮತ್ತು   ಫುಕುವೋಕಾ ಹುಳು ಹುಪ್ಪಟೆ, ಮರ ಗಿಡಗಳ ಜೊತೆ ಸಾವಯವ ಸಂಬಂಧವನ್ನು ಸಾಧಿಸಿಕೊಂಡಾಗ ಬದುಕಿಗೆ ಮತ್ತು ಮನಸ್ಸಿಗೆ ತನ್ನಿಂದ ತಾನೇ ಒಂದು ತೆರನಾದ ಸಾವಧಾನವು ಸಿಗುವುದು ಎನ್ನುವುದನ್ನು ಸಹಜ ಕೃಷಿಯ ಮೂಲಕ ಸಾಧಿಸಿದ್ದನ್ನು  ಕಾಣಬಹುದು. ಫುಕುವೋಕನ ಪ್ರಕಾರ ಬದುಕು ಇಡೀಯಾಗಿ ಇರುವಂತಹದ್ದು, ಮತ್ತೂ ಅದನ್ನು ಹಾಗೆಯೇ ಬದುಕಬೇಕಾಗಿರುವಂತಹದ್ದು. ಅಲ್ಲಿ ಯಾವುದರ ನಡುವೆಯೂ ತರತಮ ಇಲ್ಲ. ಒಂದು ಕೀಟಕ್ಕೆ ಇರುವ ಪ್ರಾಮುಖ್ಯತೆ ಒಬ್ಬ ಮನುಷ್ಯನಿಗೆ ಇದೆ ಅಷ್ಟೇ.

ಈ ಬಗೆಯ ಆಲೋಚನೆಗಳನ್ನು ಸತೀಶ್ ತಿಪಟೂರು ಅವರ ಇತ್ತೀಚಿನ ವಿಶಿಷ್ಟ ಬಗೆಯ ನಿರೂಪಣೆಯಲ್ಲಿ ಬರೆಯಲ್ಪಟ್ಟಿರುವ  ಮಣ್ಣಿನ ಬಂಡಿ ಯಲ್ಲಿ ಫುಕುವೋಕ ಕೃತಿಯ ಉದ್ದಕ್ಕೂ ಕಾಣಬಹುದಾಗಿದೆ. ಮೂಲತಃ ರಂಗಕರ್ಮಿಯೂ ಆಗಿರುವ ಸತೀಶ್  ನಾಟಕ ಮತ್ತು ನಟನೆ ರೂಪುಗೊಳ್ಳುವ ಬಗೆಯನ್ನು ಪ್ರಾಕ್ಟಿಕಲ್ ನೆಲೆಯಲ್ಲಿ ಚರ್ಚಿಸುತ್ತಲೇ ಅದಕ್ಕೆ ಸ್ಪಿರಿಚುಯಲ್ ಆದ ಆಯಾಮವನ್ನು ಇಲ್ಲಿನ ಪ್ರತಿ ಲೇಖನದಲ್ಲೂ ಕೊಡಲು ಪ್ರಯತ್ನಪಟ್ಟಿದ್ದಾರೆ. ಅವರು ಕೊಟ್ಟಿದ್ದಾರೆ ಎನ್ನುವುದಕ್ಕಿಂತ ನಿರೂಪಣೆಯ ಆಶಯವೇ ಅದಕ್ಕೆ ತಂದುಕೊಟ್ಟಿದೆ. ಬದುಕಿನ ಸಹಜ ಲಯ ದೊರೆತಲ್ಲಿ ಅಂತಃಸತ್ವ ಗಟ್ಟಿಗೊಳ್ಳುವುದು ಎನ್ನುವುದನ್ನು ಆಪ್ತವಾದ ಧ್ವನಿಯಲ್ಲಿ ಹೇಳಿದ್ದಾರೆ. 

ಫುಕುವೋಕನ ಸಹಜ ಕೃಷಿಯ ಚಿಂತನೆಗಳು ಸತೀಶ್ ಅವರ ವೈಯಕ್ತಿಕ ಹಾಗೂ ಸಹಜ ಬದುಕಿಗೆ ಪ್ರಚೋದಕ ಶಕ್ತಿಯಾಗಿ ಈ ಕೃತಿಯನ್ನು ರಚಿಸಲು ಪ್ರೇರೇಪಿಸಿವೆ. ತಮ್ಮಲ್ಲಿರುವ ಆ ಬಗೆಯ ಚಿಂತನೆಗಳನ್ನು ಭೂಮಿ ಎನ್ನುವ ಕಾಲ್ಪನಿಕ ವ್ಯಕ್ತಿಗೆ ಹೇಳುತ್ತಾ ಓದುಗರ ಮನಸ್ಸುಗಳನ್ನು ತಮ್ಮ ಹಿಡಿತದ ಭಾಷೆಯಲ್ಲಿ  ಗಾಢವಾಗಿ ಪ್ರಭಾವಿಸುತ್ತ ಚಿಂತನೆಗೆ ಹಚ್ಚುತ್ತಾರೆ.

ನಟನೆ ಕೃತಕವಾದರೆ ನಾಟಕದ ವಸ್ತು ಎಷ್ಟೇ ಪ್ರಭಾವಶಲಿಯಾಗಿದ್ದರೂ, ನಟನೆಗೆ ಮೂಲಭೂತವಾಗಿ ಬೇಕಾಗುವ ಮನುಷ್ಯ ಸ್ವಭಾವಗಳ ಗ್ರಹಿಕೆಯನ್ನು ಫುಕುವೋಕನ ಸಹಜ ಕೃಷಿಯ ಜೊತೆ ಹೋಲಿಸಿಕೊಂಡು ಈ  ಕೃತಿಯ ಉದ್ದಕ್ಕೂ ಮೆಲುದನಿಯಲ್ಲಿ ಮಾತಾಡುತ್ತ  ಹೋಗಿದ್ದಾರೆ. ಇವರು ಹೇಳುವುದು ಒಂದು ಐಡಿಯ ಆಗಿ  ತತ್ವವಾಗಿ ಸರಿ ಅನ್ನಿಸುತ್ತೆ. ಆದರೆ,  ತಕ್ಷಣಕ್ಕೆ ನನಗೆ ಎರಡು ಸಂಗತಿಗಳು ನೆನಪಾಗುತ್ತವೆ. ಒಂದು ಬ್ರೆಕ್ಪ್ ನ ರಂಗ ಕಲ್ಪನೆ. ಇನ್ನೂಂದು  ಶೇಕ್ಸ್ ಪಿಯರ್ ನ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಲ್ಲಿನ ಒಂದು ಘಟನೆ. ಬ್ರೆಕ್ಟ್ ಗೆ ರಂಗ ಕ್ರಿಯೆ ಒಂದು ಭೌದ್ಧಿಕ ಚಟುವಟಿಕೆ. ಅಲ್ಲಿ ವೈಚಾರಿಕತೆಯೇ ಬಹು ಮುಖ್ಯವಾದುದು. ಶೇಕ್ಸ್ ಪಿಯರ್  ತನ್ನ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಲ್ಲಿ ಇದನ್ನು ತೀರಾ ವಾಸ್ತವಿಕ ನೆಲೆಗೆ ತಂದು ನೋಡುತ್ತಾನೆ. ಸ್ನಗ್ ಎನ್ನುವ ಕಲಾಯಿ ಮಾಡುವ ಕೆಲಸಗಾರ ಸಿಂಹದ ಪಾತ್ರವನ್ನು ಮಾಡಬೇಕಾಗಿರುತ್ತದೆ. ನಾಟಕದ ಶುರುವಿನಲ್ಲಿ ‘ನಾನು ನಿಮಗೆಲ್ಲರಿಗೂ ಚಿರಪರಿಚಿತ ಸ್ಪಗ್.  ನಾಟಕದಲ್ಲಿ ಸಿಂಹದ ಪಾತ್ರವನ್ನು ಮಾಡುತ್ತಿದ್ದು,  ಸಿಂಹ ಘರ್ಜಿಸಿದರೆ ಅದು ಮೃಗ ಅಲ್ಲ, ಅದು ನಿಮ್ಮದೇ ಸ್ನಗ್. ಹಾಗಾಗಿ ಯಾರು ಭಯಭೀತಯಾಗಿ ಪ್ರೇಕ್ಷಾಂಗಣದಿಂದ ಓಡಿಹೋಗಬೇಡಿ’ ಎಂದು ಹೇಳುತ್ತಾನೆ. ಅಂದರೆ ನಟನೆಯು ಕೃತಕವಾದಂತಹದ್ದೆ. ಇರುವ ಭಾವವನ್ನು ಅಭಿನಯಿಸಿ ತೋರಿಸಬೇಕಾಗಿರುವುದು. ನಾಟಕ, ನಟನೆ  ನಾಟಕೀಯತೆ ಇವು ಒಂದರೊಳಗೊಂದು ಬೆರೆತಿರುವಂತಹವು. ಆದರೆ ನಟನೆ ಸಹಜತೆಯನ್ನು ಮೈಗೂಡಿಸಿಕೊಳ್ಳಬೇಕಿದೆ.  

ಸತೀಶ್ ತನ್ನ  ಕೃತಿಯ ಉದ್ದಕ್ಕೂ ತನ್ನ ಬದುಕು ಮತ್ತು ವೃತ್ತಿಯ ಜೊತೆ ಥಳುಕು ಹಾಕಿಕೊಂಡು ಗಂಭೀರವಾದ ಚರ್ಚೆಯನ್ನು ‘ಭೂಮಿ’ಯ ಜೊತೆ ಮಾಡುತ್ತಾರೆ. ನಟನೆ ಎನ್ನುವುದು ಕತೆಯನ್ನು ಕಂಠಪಾಠಮಾಡಿ ಎದುರಿಗೆ ಇರುವವರಿಗೆ ಒಪ್ಪಿಸುವುದಲ್ಲ; ಬದಲಿಗೆ ಬದುಕಿನೊಳಗಡೆಗೆ ಅದನ್ನು ತಂದುಕೊಂಡು ಜೀವಕೊಡುವ ರೂಪಾಂತರ ಕ್ರಿಯೆ. ಆಗ ನಟನೆಯಲ್ಲಿನ ಕೃತಕತೆಯು ಹೋಗಿ ಸಹಜತೆಯು ಬರುವುದು. ಆಗ ನಟನೆಯ ಮಾತು ಬದುಕಿನ ಮಾತು ಆಗಿ ಮರದಲ್ಲಿ ಎಲೆ ಮೂಡುವಂತೆ ಸಹಜ ನಟನೆ ನಿಜ ಬದುಕಿನ ಸನ್ನಿವೇಶವಾಗಿ ಹೊಮ್ಮುವುದು. ಇದು ಆಗದಿದ್ದರೆ ಸುಂದರವಾಗಿ ಕಾಣುವ ಪ್ಲಾಸ್ಟಿಕ್ ಹೂವುಗಳಂತಾಗುವುದು. ಈ ಪ್ರಯತ್ನವನ್ನು ಸತೀಶ್ ತಮ್ಮ ನಟರಿಂದ ಬಯಸುವುದನ್ನು ಹೇಳಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಯೋಚಿಸಲು ಅವರಿಗೆ ಕೆಲ ಮೇಷ್ಟ್ರುಗಳು, ನೀನಾಸಮ್ ಎನ್ನುವ ರಂಗಶಿಕ್ಷಣ ಕೇಂದ್ರ ಹಾಗೂ ಶೂದ್ರಕನ ನಾಟಕಗಳ ಪ್ರೇರಣೆಯನ್ನು ನೆನಪಿಸಿಕೊಂಡು ಒಂದು ಆಪ್ತವಾದ ರಂಗ ಕಥನವನ್ನು ಕಟ್ಟುತ್ತ ಹೋಗುತ್ತಾರೆ. ಕೆಲವು ಕಥನಗಳು ಓದುಗರಲ್ಲಿ ಓದುಗರ ಗ್ರಹಿಕೆಗಳನ್ನು ವಿಸ್ತರಿಸುತ್ತ ಸಮಕಾಲೀನ ಜಗತ್ತಿನ ಆಗುಹೋಗುಗಳನ್ನು ನೆನಪಿಸುತ್ತವೆ. ಅಂಥವು ಸ್ವರತಿಯನ್ನು ಮೀರಿ ಸಾಮುದಾಯಿಕ ಪ್ರಜ್ಞೆಯೊಳಗೆ ಮಿಳಿತಗೊಳ್ಳುವ ಗುಣ ಇರುತ್ತದೆ. ಈ ಮಾತನ್ನು ಇಲ್ಲಿ ಪ್ರಸ್ತಾವಮಾಡಿದ್ದಕ್ಕೆ ಕಾರಣ ಮಣ್ಣಿನ ಬಂಡಿಯಲ್ಲಿ ಫುಕುವೋಕದಲ್ಲೂ ನಿರೂಪಕನ ಆತ್ಮಚರಿತ್ರೆಯ ಪುಟಗಳು ಇವೆ. ಇದರೆ ಎಲ್ಲೂ ಸಹ  ತನ್ನ ಸ್ವಂತದ್ದನ್ನು ಹೇಳುವುದನ್ನು ಮೆರೆಸುವುದಿಲ್ಲ. ಸ್ವಂತದ್ದೂ ಎನ್ನುವುದು ಏನೇ ಇದ್ದರೂ ಅದಕ್ಕೆ ಸಮುದಾಯದ ನಂಟು ಇದೆ ಎಂದೇ ಬಲವಾಗಿ ನಂಬುಕೊಂಡಿರುವರು. ಅದು ಅವರ ಬದುಕಿನ ಬಗೆಗಿನ ಪ್ರೀತಿ ಮತ್ತು ನಿಷ್ಟೆಯನ್ನು ತೋರಿಸುತ್ತದೆ. ಒಟ್ಟಾರೆ ಈ ಕೃತಿಯು ಈ ನೆಲದ ಬದುಕಿನ ಜೊತೆ ‘ಕನೆಕ್ಟ್’ ಆದರೆ ಬದುಕಿನ ಸಮಗ್ರತೆಯನ್ನು ಅನುಭವಿಸಬಹುದು ಎನ್ನುವುದನ್ನು ಪಿಸುನುಡಿಯಲ್ಲಿ ಹೇಳಿರುವುದು

ಕಾಡಿನ ನಡುವೆ ಹರಿಯುವ ತೊರೆಯಂತೆ ಕಾಣುತ್ತದೆ.

—-

‍ಲೇಖಕರು avadhi

September 6, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: