ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ

ಸ್ನೇಹವೆಂಬ ವಿಸ್ಮಯ

ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ ವಿಸ್ಮಯಕಾರಿ. ಜಾತಿ,ಮತ, ಪಂಥಗಳನ್ನು ನೋಡದೆ… ದೇಶ ಭಾಷೆಗಳನ್ನು ಗಮನಿಸದೆ ಪ್ರಾರಂಭವಾಗುವ ಸ್ನೇಹ,  ಒಮ್ಮೊಮ್ಮೆ ಖುಷಿ ನೀಡುತ್ತದೆ. ಮನದಲ್ಲಿ ನೆನಪುಗಳ ಹೂದೋಟವನ್ನು ನಿರ್ಮಿಸುತ್ತದೆ.

ಸುಮಾರು ಹತ್ತೊಂಬತ್ತು ವರ್ಷಗಳ ಹಿಂದೆ ನಾನು ಅನುಭವಿಸಿದ ಒಂದು ಸ್ನೇಹ ಸಂಬಂಧವನ್ನು ಈ ಸಮಯದಲ್ಲಿ ಬಿಚ್ಚಿಡುತ್ತಿದ್ದೇನೆ. ಸಾಮಾಜಿಕ ಜಾಲತಾಣಗಳು, ಮೊಬೈಲ್ ಇಷ್ಟೊಂದು ವ್ಯಾಪಕವಾಗಿ ಹರಡಿರದ ಕಾಲವದು. ಪತ್ರಗಳ ಮೂಲಕ ಸ್ನೇಹ ಬೆಳೆಸುವ ಪತ್ರ ಮೈತ್ರಿ ಎಂಬ ಪದ್ಧತಿ ಚಾಲ್ತಿಯಲ್ಲಿದ್ದ ಕಾಲ. ನನಗೂ ಹಲವರೊಂದಿಗೆ ಪತ್ರ ಮೈತ್ರಿ ಇತ್ತು. ಆ ದಿನಗಳಲ್ಲಿ ನಾಡಿನ ಕೆಲವು ಪತ್ರಿಕೆಗಳಿಗೆ ಚಿಕ್ಕಪುಟ್ಟ ಬರಹಗಳನ್ನು ಬರೆಯುವ ಹವ್ಯಾಸವನ್ನು ನಾನು ಇಟ್ಟುಕೊಂಡಿದ್ದೆ.

ಅನಿರೀಕ್ಷಿತ ಪತ್ರ

ಎರಡು ಸಾವಿರದ ಒಂದರಲ್ಲಿ ಆಕಸ್ಮಿಕವಾಗಿ ಒಂದು ದಿನ, ಸೌದಿ ಅರೇಬಿಯಾದ  ರಿಯಾದ್ ನಿಂದ  ಫಾರೂಕ್  ಎನ್ನುವ ವ್ಯಕ್ತಿಯೊಬ್ಬರು ಒಂದು ಪತ್ರವನ್ನು ಬರೆದಿದ್ದರು. “ನಿಮ್ಮ ವಿಳಾಸವನ್ನು ಮಂಗಳ ವಾರ ಪತ್ರಿಕೆಯಲ್ಲಿ ನೋಡಿದೆ. ನಿಮ್ಮ ಸ್ನೇಹವನ್ನು ಬೆಳೆಸಲು ಇಚ್ಚಿಸುತ್ತೇನೆ. ಪತ್ರ ಮೈತ್ರಿ ಮಾಡೋಣ. ನಾನು  ಮೂಲತಃ  ಮಂಗಳೂರಿನ ಕುಳಾಯಿಯವನು.

ಸುರತ್ಕಲ್ ನಿಂದ  ಸ್ವಲ್ಪ ದೂರದಲ್ಲಿ ಕುಳಾಯಿ ಎಂಬ ಊರಿದೆ. ಅಲ್ಲಿ ನನ್ನ ಮನೆಯಿದೆ. ವರ್ಷಕ್ಕೊಮ್ಮೆ ಊರಿಗೆ ಬರ್ತೀನಿ. ಇಲ್ಲಿ ಬಿಸಿನೆಸ್ ಮಾಡ್ತಾ ಇದ್ದೀನಿ. ನಿಮ್ಮ ಫೋನ್ ನಂಬರ್ ಕೊಡಿ. ಫೋನ್ ನಲ್ಲಿ ಮಾತನಾಡೋಣ.” ಎಂಬ ಸಂಗತಿಗಳೊಂದಿಗೆ ವಿವರವಾದ ಪತ್ರ ಬರೆದಿದ್ದರು.

ಕನ್ನಡಿಗರೊಬ್ಬರು ಅಷ್ಟು ದೂರದಿಂದ ಸ್ನೇಹ ಬಯಸಿ ಪತ್ರ ಬರೆದಿರುವಾಗ ಉತ್ತರ ಬರೆಯದಿರುವುದು ನನಗೆ ಸಾಧ್ಯವಾಗಲಿಲ್ಲ. ಅದಾಗಲೇ ನನಗೆ ರಾಜ್ಯದ ಹಲವೆಡೆಗಳಿಂದ ಸುಮಾರು ನಲವತ್ತರಷ್ಟು ಪತ್ರ ಮಿತ್ರರು ಇದ್ದರು. ಅವರೊಂದಿಗೆ ನಿರಂತರವಾಗಿ ಪತ್ರದ ಮೂಲಕ ಸ್ನೇಹವನ್ನ ಇಟ್ಟುಕೊಂಡಿದ್ದೆ. ಆದರೆ ಆ ಪತ್ರ ವ್ಯವಹಾರಗಳೆಲ್ಲ ಇಪ್ಪತ್ತೈದು ಪೈಸೆಯ ಅಂಚೆ ಕಾರ್ಡಿನಲ್ಲಿ ಮುಗಿಯುತ್ತಿತ್ತು.ಇದು ಸ್ವಲ್ಪ ಹೆಚ್ಚಿನ ಖರ್ಚು ಬಯಸುವ ಪತ್ರ ಮೈತ್ರಿ. ಏರ್ ಮೇಲ್ ಉಪಯೋಗಿಸಿದರೆ ಐದು ರೂಪಾಯಿ ಖರ್ಚು.  ಫಾರೂಕ್ ಅವರಿಗೆ ಒಂದು ಪತ್ರ ಬರೆದು ಹಾಕಿದೆ.

‘ಪ್ರೀತಿಯ ಸಹೋದರ’  ಎಂಬ ಒಕ್ಕಣೆಯೊಂದಿಗೆ ಪತ್ರ ಬರೆದೆ. ನನ್ನ ಪತ್ರ ಮಿತ್ರರಿಗೆಲ್ಲ ನಾನು ಆ ದಿನಗಳಲ್ಲಿ ಸಹೋದರ, ಸಹೋದರಿ ಎಂದು ಸಂಬೋಧಿಸಿ ಪತ್ರ ಬರೆಯುತ್ತಿದ್ದೆ. “ಪತ್ರ ಮೈತ್ರಿಗೆ ನನ್ನ ಒಪ್ಪಿಗೆ ಇದೆ. ಆದರೆ ನಾನು ಫೋನ್ ಮಾಡಲಾರೆ. ನಿಮಗೆ ಇಷ್ಟವಿದ್ದರೆ ನೀವು ಫೋನ್ ಮಾಡಬಹುದು” ಎಂದು ಮೊದಲೇ ನಿರ್ದಾಕ್ಷಿಣ್ಯವಾಗಿ ಬರೆದಿದ್ದೆ.  ಕಾರಣ… ಹೊರದೇಶಕ್ಕೆ  ಫೋನ್ ಮಾಡಿದರೆ  ಆ ಖರ್ಚನ್ನು ನಿಭಾಯಿಸುವ ದುಡಿಮೆ ನನ್ನದಾಗಿರಲಿಲ್ಲ. ವಿವರವಾಗಿ ಪತ್ರ ಬರೆದು ಹಾಕಿದೆ.

ಕೆಲವೇ ದಿನಗಳಲ್ಲಿ ಫಾರೂಕ್ ಪತ್ರಕ್ಕೆ ಉತ್ತರ ಬರೆದರು.  ಹಾಗೆ ಬೆಳಿಗ್ಗೆ ನಾಲ್ಕು ಗಂಟೆಗೆ ಫೋನ್ ಸಹ ಮಾಡಿದರು. ಐದಾರು ತಿಂಗಳು ನಿರಂತರವಾಗಿ ಪತ್ರ  ವ್ಯವಹಾರ ನಮ್ಮಿಬ್ಬರಲ್ಲಿ ನಡೆಯುತ್ತಿತ್ತು. ವಾರಕ್ಕೊಮ್ಮೆ ಅವರು ಬೆಳಿಗ್ಗೆ ನಾಲ್ಕು ಗಂಟೆಗೆ ಫೋನ್ ಸಹ ಮಾಡಿ ಮಾತನಾಡುತ್ತಿದ್ದರು.

ಹಳ್ಳಿ ಮನೆ

ಎರಡು ಕೋಣೆ ಹಾಗೂ ಒಂದು ಹಾಲ್ ಇರುವ ಪುಟ್ಟ ಮನೆ ನಮ್ಮದು. ಒಂದು ಕೋಣೆಯಲ್ಲಿ ನಾನು ಮಡದಿ, ಮತ್ತೊಂದು ಕೋಣೆಯಲ್ಲಿ ಅಪ್ಪ, ಅಮ್ಮ ಮಲಗುತ್ತಿದ್ದರು.  ಹಾಲ್ ನಲ್ಲಿ ನನ್ನ  ತಮ್ಮ ಮಲಗುತ್ತಿದ್ದ. ಹಾಲ್ ನಲ್ಲಿ ಫೋನ್ ಇದ್ದುದರಿಂದ ನಾಲ್ಕು ಗಂಟೆಗೆ ಫೋನ್ ಬಂದರೆ ನಿಜಕ್ಕೂ ತೊಂದರೆಯಾಗುತ್ತಿತ್ತು. ಆದರೆ ಈ ವಿಷಯವನ್ನು ಹೇಳಿ ಫೋನ್ ಮಾಡಬೇಡಿ ಎಂದು ಹೇಳಲು ಮನಸ್ಸು ಒಪ್ಪುತ್ತಿರಲಿಲ್ಲ…ಹಾಗಾಗಿ ಮಾತನಾಡುತ್ತಿದ್ದೆ.  ಪತ್ರ ವ್ಯವಹಾರಕ್ಕೆ ಯಾವುದೇ ಅಡಚಣೆ ಆಗುತ್ತಿರಲಿಲ್ಲ.

ಒಂದು ದಿನ ಫೋನ್ ನಲ್ಲಿ ಫಾರೂಕ್ ಅವರು,  ‘ನಾನು ಊರಿಗೆ ಬರ್ತಾ ಇದ್ದೀನಿ. ನಿಮ್ಮಲ್ಲಿಗೆ ಬರುತ್ತೇನೆ. ನಿಮಗೆ ಇಲೆಕ್ಟ್ರಾನಿಕ್ಸ್ ವಸ್ತು ಏನು ಬೇಕು ಹೇಳಿ’ ಎಂದು ಕೇಳಿದರು. ಇವರು ಸಹಜವಾಗಿ ಕೇಳುತ್ತಾರೆ ಎಂಬುದು ನನ್ನ ಭಾವನೆಯಾಗಿತ್ತು. ನನಗೇನೂ ತರುವುದು ಬೇಡ. ಸುರಕ್ಷಿತವಾಗಿ ಊರಿಗೆ ಬನ್ನಿ. ಸಾಧ್ಯವಾದರೆ ನಮ್ಮ ಮನೆಗೆ ಬನ್ನಿ ಎಂದು ನಾನು ಸಹಜವಾಗಿ ಹೇಳಿದೆ.

ಆಶ್ಚರ್ಯದ ಆಗಮನ

ಆಶ್ಚರ್ಯವೆಂದರೆ ಒಂದು ದಿನ ಸುಮಾರು ಬೆಳಿಗ್ಗೆ ಹತ್ತು ಗಂಟೆಗೆ ನಾನು ಅಂಗಡಿಯಲ್ಲಿ ಇರುವಾಗ ಫಾರೂಕ್ ಅವರಿಂದ ಅಂಗಡಿಗೆ ಫೋನ್ ಬಂತು. “ನಾನು ಊರಿಗೆ ಬಂದು ತಲುಪಿದ್ದೇನೆ. ಅಲ್ಲಿಂದ ಪಣಜಿಯ ರಿಲೇಟಿವ್ಸ್ ಮನೆಗೆ ಹೋಗಿದ್ದೆ. ಈಗ ಪಣಜಿಯಿಂದ ಹೊನ್ನಾವರಕ್ಕೆ ಬಂದಿದ್ದೀನಿ.  ನಿಮ್ಮ ಅಂಗಡಿಗೆ ಬರುವುದು ಹೇಗೆ?” ಎಂದು ಫೋನ್ ನಲ್ಲಿ ಕೇಳಿದರು.  ನನಗೆ ನಿಜಕ್ಕೂ ನಂಬಲಾಗಲಿಲ್ಲ.

ಮನೆಗೆ ಬರ್ತೀನಿ ಎಂದಿದ್ದು ಸಹಜವಾಗಿ ಎಂದುಕೊಂಡಿದ್ದೆ. ಅವರ ಫೋಟೋ ಸಹ ನಾನು ನೋಡಿರಲಿಲ್ಲ. ನನ್ನ ಫೋಟೊ ಸಹ ಅವರಿಗೆ ಕಳಿಸಿರಲಿಲ್ಲ. ಒಂದು ಪತ್ರ ಮೈತ್ರಿಯನ್ನು ಈ ಮಟ್ಟಕ್ಕೆ ಹಚ್ಚಿಕೊಳ್ಳುವವರೂ ಇರ್ತಾರಾ ?ಎಂದು ಆಶ್ಚರ್ಯ ನನಗೆ.

ಫಾರೂಕ್ ಅವರು ಸುಮಾರು ಹನ್ನೊಂದು ಗಂಟೆಗೆ ನನ್ನ ಅಂಗಡಿಗೆ ಬಂದು ತಲುಪಿದರು. ಸುಮಾರು ಮೂವತ್ತು ವರ್ಷದ ಎತ್ತರ ನಿಲುವಿನ ಆಕರ್ಷಕ ವ್ಯಕ್ತಿತ್ವದ ಯುವಕ. ನಮಾಜ್ ಟೈಮಿಗೆ ನನ್ನ ಬೈಕ್ ತೆಗೆದುಕೊಂಡು ಹೋಗಿ ಮಸೀದಿಯಲ್ಲಿ ನಮಾಜ್ ಮಾಡಿ ಬಂದರು. ಆಮೇಲೆ ಅವರನ್ನು ನಾನು ನಮ್ಮ ಹಳ್ಳಿಯ ಮನೆಗೆ ಕರೆದುಕೊಂಡು ಹೋದೆ.

ಬಹುಶಃ  2002 ರ ಏಪ್ರಿಲ್ ತಿಂಗಳಿನ ಕೊನೆಯ ದಿನಗಳು ಎಂದು ನೆನಪು. ರಣರಣ ಬಿಸಿಲು. ನಮ್ಮ ಮನೆ ಇರುವುದು ಚಿತ್ತಾರದಲ್ಲಿ. ಹೈವೆಯಿಂದ ಏಳು ಕಿಲೋಮೀಟರ್ ದೂರದಲ್ಲಿ ಮನೆಯಿದೆ. ಪುಟ್ಟ ತೋಟದ ಮಧ್ಯೆ ಮನೆ. ಈಗ ಒಳ್ಳೆಯ ಟಾರ್ ರಸ್ತೆ ನಿರ್ಮಾಣವಾಗಿದೆ. ಆ ದಿನಗಳಲ್ಲಿ ಜಲ್ಲಿಕಲ್ಲುಗಳು ಎದ್ದಿರುವ ಕಚಡಾ ರಸ್ತೆ ಇತ್ತು. ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ಫಾರೂಕ್ ಅವರನ್ನು ಕರೆದುಕೊಂಡು ನನ್ನ ಬಜಾಜ್   M-80 ಗಾಡಿಯಲ್ಲಿ ಮನೆಗೆ ಬಂದೆ.

ನಮ್ಮ ಮನೆಯಲ್ಲಿ ಆಗಲೂ, ಈಗಲೂ ಸಹ ನೆಲದಲ್ಲಿ ಕುಳಿತು ಊಟ ಮಾಡುವ ಪದ್ಧತಿ. ಫಾರೂಕ್ ಯಾವುದೇ ಮುಜುಗರವಿಲ್ಲದೆ ನೆಲದ ಮೇಲೆ ಕುಳಿತು ಊಟ ಮಾಡಿದರು. ತನಗೆ ಹೀಗೆ ಊಟ ಮಾಡುವುದೇ ಇಷ್ಟ ಎಂದು ಹೇಳಿದರು. ಅಪ್ಪ ನಾನು ನನ್ನ ತಮ್ಮ ಹಾಗೂ ಫಾರೂಕ್ ಒಟ್ಟಿಗೆ ಕುಳಿತು ಊಟ ಮಾಡಿದ ಮೇಲೆ ತೋಟ ಸುತ್ತಲು ಹೊರಟೆವು.

ಅಪರೂಪದ ವ್ಯಕ್ತಿತ್ವದ ಫಾರೂಕ್

ತೋಟ ಸುತ್ತುತ್ತಿದ್ದಾಗ ಫಾರೂಕ್  ತಮ್ಮ ಹಳೆಯ ನೆನಪುಗಳನ್ನು ಬಿಚ್ಚಿಟ್ಟರು. ಅವರು ಗಲ್ಫ್ ಗೆ ಹೋಗುವುದಕ್ಕಿಂತ ಮುಂಚೆ ಮೂರ್ನಾಲ್ಕು ವರ್ಷ ಬಟ್ಟೆ ವ್ಯಾಪಾರ ಮಾಡುತ್ತಿದ್ದರಂತೆ.  ಶಿರಸಿ, ಸಿದ್ದಾಪುರದ ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಬಟ್ಟೆಗಳನ್ನು ಮಾರುತ್ತಿದ್ದರಂತೆ.  ಆ ದಿನಗಳಲ್ಲಿ ಬಹಳ ಹಳ್ಳಿಗಳಲ್ಲಿ ತಾವು ಊಟ ಮಾಡಿದ್ದನ್ನು ನೆನಪಿಸಿಕೊಂಡರು.  

ಶಿರಸಿ ಸಿದ್ದಾಪುರದ ಹಳ್ಳಿಗಳಲ್ಲಿ ಹೋಟೆಲ್ ಗಳು ಇರಲಿಲ್ಲವಾದ್ದರಿಂದ ಹಸಿವೆಯಾದಾಗ ಯಾರಾದ್ರೂ ಊಟಕ್ಕೆ ಕರೆದರೆ ಖುಷಿಯಾಗುತ್ತಿತ್ತು ಎಂದು ಮುಜುಗರವಿಲ್ಲದೆ ಹೇಳಿಕೊಂಡರು.  ಹಲವರ ಹೆಸರುಗಳು ನನಗೆ ಈಗ ನೆನಪಿಲ್ಲ. ಫಾರೂಕ್  ಅವರನ್ನೆಲ್ಲ ನೆನೆಸಿಕೊಂಡು ಕೃತಜ್ಞತೆ ವ್ಯಕ್ತಪಡಿಸಿದ ರೀತಿ ನನಗೆ ನಿಜಕ್ಕೂ ಖುಷಿಯಾಗಿತ್ತು.

ಒಮ್ಮೆಯಂತೂ ಬಟ್ಟೆ ಮಾರಿ ಮಧ್ಯಾಹ್ನ ಹಸಿವೆಯಾಗಿ ರಸ್ತೆಯ ಪಕ್ಕದ ಗಿಡದ ಕೆಳಗೆ ಕುಳಿತಿರುವಾಗ ಫಾರೂಕ್ ಗೆ ಅಲ್ಲಿಯೇ ನಿದ್ದೆ ಬಂದು ಬಿಟ್ಟಿತಂತೆ.  ಯುವತಿಯೊಬ್ಬಳು ಎಬ್ಬಿಸಿ ಮಾತನಾಡಿಸಿ  ಊಟ ಆಗಿಲ್ಲವೆಂಬುದನ್ನು ಅರಿತುಕೊಂಡು ಮನೆಗೆ ಊಟಕ್ಕೆ ಬನ್ನಿ ಎಂದು ಒತ್ತಾಯಿಸಿ ಮನೆಗೆ ಕರೆದು ಊಟ ಮಾಡಿಸಿದ್ದರಂತೆ.  ಅದು ಬ್ರಾಹ್ಮಣರ ಮನೆಯಾಗಿತ್ತು.  

ಅವರ ಮನೆಯಲ್ಲಿ ಕುಡಿದ ಮೊಸರಿನ ಬಗ್ಗೆ ಬಹಳ ಹೇಳಿಕೊಂಡರು ಫಾರೂಕ್. ಅವರ ಮನೆಯಲ್ಲಿ ಯುವತಿಯ ತಾಯಿ ಅಜ್ಜಿ ಎಲ್ಲ ಈಗಲೂ ಇದ್ದಾರೆ. ತಾನು ಸೌದಿಗೆ ಹೋದ ಮೇಲೆ ಕೂಡ ಎರಡು ಬಾರಿ ಅವರ ಮನೆಗೆ ಹೋಗಿ ಬಂದೆ ಎಂದು ಹೇಳಿದ್ದರು. ನನ್ನ ಜೀವನದಲ್ಲಿ ನಾನು ಸ್ನೇಹವನ್ನು ಇಷ್ಟೊಂದು ಹಚ್ಚಿಕೊಳ್ಳುವ  ವ್ಯಕ್ತಿಯನ್ನು ಕಂಡಿರಲಿಲ್ಲ.

ತೋಟವನ್ನೆಲ್ಲ ಸುತ್ತಾಡಿ ಪುನ: ಮನೆಗೆ ಬಂದ ಮೇಲೆ ಸಾಯಂಕಾಲದ ನಮಾಜ್ ವೇಳೆಯಾಗಿತ್ತು. ನಮ್ಮ ಹಳ್ಳಿಯ ಮನೆಯಲ್ಲಿ ಬೇಸಿಗೆಯಲ್ಲಿ ಅಂಗಳಕ್ಕೆ ಚಪ್ಪರ ಹಾಕುವುದು ವಾಡಿಕೆ. ಚಪ್ಪರ ಹಾಕಿರುವ ನಮ್ಮ ಮನೆಯ ಅಂಗಳದಲ್ಲಿ ಅವರು ನಮಾಜ್ ಮಾಡಿದರು. “ಹಬ್ಬದ ಹಾಗೂ ಶುಕ್ರವಾರದ ನಮಾಜ್ ಮಾತ್ರ ಮಸೀದಿಯಲ್ಲಿ ಸಾಮೂಹಿಕವಾಗಿ ಮಾಡಿದರೆ ಒಳ್ಳೆಯದು.

ಉಳಿದ ವೇಳೆ ನಮಾಜ್ ಮಸೀದಿ ಹತ್ತಿರವಿದ್ದರೆ ಮಸೀದಿಯಲ್ಲಿ ಮಾಡಬಹುದು.  ಅನಾನುಕೂಲವಿದ್ದರೆ ತಾವಿರುವ ಸ್ಥಳದಲ್ಲಿಯೇ ಶುಭ್ರ   ಜಾಗದಲ್ಲಿ ಮಾಡಿದರೆ ಯಾವ ನಿರ್ಬಂಧವೂ ತಮ್ಮ ಧರ್ಮದಲ್ಲಿ ಇಲ್ಲ” ಎಂದು ಫಾರೂಕ್ ಅವರೇ ನನಗೆ ಹೇಳಿದ್ದು.

ಫಾರೂಕ್ ಹೊರಟಾಗ

ಫಾರೂಕ್ ನನ್ನ ಅಪ್ಪ ಅಮ್ಮನನ್ನು ಅಪ್ಪ ಅಮ್ಮ ಎಂದೇ ಸಂಭೋಧಿಸಿ  ಪ್ರೀತಿಯಿಂದ ಮಾತನಾಡಿಸಿ ನನ್ನ ಮಡದಿಯನ್ನು ಅತ್ತಿಗೆ ಎಂದು ಸಂಬೋಧಿಸಿ ಮಾತನಾಡಿದ್ದರು.  ಐದಾರು ತಿಂಗಳ ನನ್ನ ಮಗ ಕಾರ್ತಿಕ್ ನನ್ನು ಅವರು ಪ್ರೀತಿಯಿಂದ ಎತ್ತಿಕೊಂಡು  ಮುದ್ದಾಡಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ.

ಮನೆಯವರೆಲ್ಲರೊಡನೆ  ಮನೆಯವರಂತೆ  ಬೆರೆತು ಐದಾರು ತಾಸು ಕಳೆದ ಫಾರೂಕ್ ಹೊರಟು ನಿಂತಾಗ ನಿಜಕ್ಕೂ ನಮಗೆ, ಮನೆಯ ಸದಸ್ಯನೊಬ್ಬ ವಿದೇಶಕ್ಕೆ ಹೊರಟು ನಿಂತ ಹಾಗೆಯೇ ಬೆಸರವಾಗಿತ್ತು.

ಕೊನೆಯಲ್ಲಿ ಅವರು ಹೊರಟು ನಿಂತಾಗ ನಾನು ನೀವು ಇಷ್ಟು ದೂರ ಹುಡುಕಿಕೊಂಡು ಬರಲು ಕಾರಣವೇನೆಂದು ಕೇಳಿದೆ.” ನನ್ನ ಪತ್ರಕ್ಕೆ ನೀವು ಬರೆದ ಉತ್ತರ ನೋಡಿ ನಿಜಕ್ಕೂ ನಾನು ನಿಮ್ಮನ್ನು ನೋಡಲೇ ಬೇಕೆಂದು ಬಯಸಿದ್ದೆ. ಗಲ್ಫ್ ನಲ್ಲಿರುವ ನನ್ನ ಮಿತ್ರರಿಗೆ ನಿಮ್ಮ ಪತ್ರದಲ್ಲಿ ನೀವು ಬರೆದ ಸಂಗತಿಗಳನ್ನು ತಿಳಿಸಿದಾಗ ನಿಮ್ಮ ಪತ್ರ ನೋಡಲು ಅವರೆಲ್ಲ ಬಯಸಿದ್ದರು. ಅವರಿಗೆಲ್ಲ ನಿಮ್ಮ ಪತ್ರದ ಜೆರಾಕ್ಸ್ ಮಾಡಿ ಹಂಚಿದ್ದೇನೆ” ಎಂದಿದ್ದರು ಫಾರೂಕ್.  ಒಂದು  ಪತ್ರ  ಈ ರೀತಿಯ ಸ್ನೇಹವನ್ನು ಬೆಳೆಸುತ್ತದೆ ಎಂಬುದು ನಿಜಕ್ಕೂ ವಿಸ್ಮಯದ ವಿಷಯವಾಗಿತ್ತು ನನಗೆ.

ನಮ್ಮನ್ನೆಲ್ಲ ತನ್ನೂರಿಗೆ ಬರಬೇಕೆಂದು ಬಹಳ ಆತ್ಮೀಯತೆಯಿಂದ ಆಹ್ವಾನಿಸಿದ ಫಾರೂಕ್ ಅವರನ್ನು ನಾನು ನನ್ನ M-80 ಯಲ್ಲಿ  ರೈಲ್ವೇ ಸ್ಟೇಷನ್ ಗೆ ಬಿಟ್ಟೆ. ನನ್ನನ್ನು ಅಪ್ಪಿಕೊಂಡು  ಬೀಳ್ಕೊಳ್ಳುವಾಗ ಅವರು ನಿಜಕ್ಕೂ ಗದ್ಗದಿತರಾಗಿದ್ದರು. ಆ ಕ್ಷಣಗಳು ನನ್ನಲ್ಲಿ ಇನ್ನೂ ಹಸಿರಾಗಿವೆ…

ನಾನೊಂದು ಸ್ಥಾವರ

‘ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ’ ಎಂಬುದು ಶರಣರ ಮಾತು. ಈ ನುಡಿಯಲ್ಲಿ ಅರಿವಿನ ದೀಪವಿದೆ. ನನ್ನ ಸಂಪೂರ್ಣ ಸಹಮತವೂ ಇದೆ. ಆದರೆ ನಾನಿದನ್ನು ಜೀವನದಲ್ಲಿ ಹಿಂದೆ ಅಳವಡಿಸಿಕೊಂಡಿರಲಿಲ್ಲ…ಹಾಗೆ ನೋಡಿದರೆ ಈಗಲೂ ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಒಂದರ್ಥದಲ್ಲಿ ಮನೆ ಹಾಗೂ ಊರು ಬಿಟ್ಟು ಎಲ್ಲೂ ದೂರ ತೆರಳದ ಸ್ಥಾವರ ನಾನು. ಫಾರೂಕ್ ಜಂಗಮ. ಉದ್ಯೋಗಕ್ಕಾಗಿ  ಹಾಗೂ ಸ್ನೇಹಕ್ಕಾಗಿ ಎಷ್ಟು ದೂರ ಬೇಕಾದರೂ ತೆರಳಬಲ್ಲ ವ್ಯಕ್ತಿ.

ರೈಲಿನಲ್ಲಿ ಕುಳಾಯಿ ತಲುಪಿದ  ಅವರು ಫೋನ್ ಮಾಡಿ ಸುರಕ್ಷಿತವಾಗಿ ತಲುಪಿರುವ ಬಗ್ಗೆ ತಿಳಿಸಿದರು. ಊರಿನ ಮನೆಯಲ್ಲಿ ಇರುವುದರಿಂದ  ಫಾರೂಕ್ ಪ್ರತಿ ದಿನ ಸುಮಾರು ಒಂದು ತಿಂಗಳ ಕಾಲ  ಊರಲ್ಲಿರುವಾಗ ಫೋನ್ ಮಾಡ್ತಾ ಇದ್ರು.  ಅವರ ಮನೆಗೆ ಬರಲು ಎಲ್ಲಿಲ್ಲದ ಒತ್ತಾಯ ಮಾಡ್ತಾ ಇದ್ರು.

ಮೊದಲೇ ಹೇಳಿದಂತೆ ನಾನು ಸ್ಥಾವರ. ಮನೆ ಬಿಟ್ಟು ತಿರುಗಾಡೋದು ಕಡಿಮೆ. ನನ್ನ ವೃತ್ತಿ ಹಾಗೂ ನನ್ನ ಆದಾಯಕ್ಕೆ ತಿರುಗಾಟ ಹೊಂದಿಕೆಯೇ ಆಗ್ತಾ ಇರಲಿಲ್ಲ. ನನಗೆ ರೂಢಿಯೂ ಆಗಿರಲಿಲ್ಲ. ಹಲವು ಪತ್ರ ಮಿತ್ರರು ಅವರ ಮನೆಗೆ ಬನ್ನಿ ಎಂದು ಪತ್ರದಲ್ಲಿ ಕರೆದಂತೆ, ಇದು ಸಹ ಎಂದು ನಾನು ಸಬೂಬು ಹೇಳುತ್ತಾ ದಿನಕಳೆದೆ. ಹಗಲಿನ ಹೊತ್ತು ಅಂಗಡಿಗೆ ಫೋನ್ ಮಾಡ್ತಾ ಇದ್ದದ್ದರಿಂದ ಫೋನ್ ನಿಂದ ಯಾವುದೇ ಸಮಸ್ಯೆ ಉಂಟಾಗುತ್ತಿರಲಿಲ್ಲ.

ಸುಮಾರು ಒಂದೂವರೆ ತಿಂಗಳು ರಜೆ ಕಳೆದು ಫಾರೂಕ್ ಸೌದಿಗೆ ಹೊರಟು ನಿಂತಾಗ, ನನಗೆ ಫೋನ್ ಮಾಡಿ ಮುಂದಿನ ಬಾರಿ ತಾನು ಊರಿಗೆ ಬಂದಾಗ ಅವಶ್ಯ ಬರಬೇಕೆಂದು ಹೇಳಿದರು. ಆಮೇಲೆ ಸೌದಿಗೆ ಹೋಗಿ ತಲುಪಿದ ಮೇಲೆ ಮತ್ತೆ ಫೋನ್ ಮಾಡಿದರು ಹಾಗೂ ಪತ್ರವನ್ನು ಬರೆದರು.

ಮುಂದುವರಿದ ಸ್ನೇಹ

ಮುಂದೆ ಪತ್ರ ಬರೆಯುವುದಕ್ಕಿಂತ ಅವರಿಗೆ ನನ್ನೊಡನೆ ಫೋನ್ ನಲ್ಲಿ   ಮಾತನಾಡುವುದರಲ್ಲಿ ಹೆಚ್ಚು ಖುಷಿಯಾಗುತ್ತಿತ್ತು ಎಂದು ಕಾಣುತ್ತದೆ.  ವಾರಕ್ಕೆ ಒಂದು ಎರಡು ಸಲ ಬೆಳಿಗ್ಗೆ ನಾಲ್ಕು ಗಂಟೆಗೆ ಮನೆಯ ನಂಬರಿಗೆ ಫೋನ್ ಮಾಡ್ತಾ ಇದ್ರು.  ನಾನು ಈ ಹಿಂದೆಯೇ ಬರೆದಿರುವಂತೆ ನಮ್ಮ ಫೋನ್ ಹಾಲ್ ನಲ್ಲಿ ಇದ್ದುದರಿಂದ ನಿಜಕ್ಕೂ ಈ ಸಮಯ ಫೋನ್ ರಿಂಗ್ ಆದರೆ ಎಲ್ಲರಿಗೂ ನಿದ್ರಾ ಭಂಗವಾಗುತ್ತಿತ್ತು. ರೂಂನಲ್ಲಿರುವ ನಾನು ಫೋನ್ ಶಬ್ದಕ್ಕೆ ಎಚ್ಚೆತ್ತು ಹಾಲ್ ಗೆ ಬಂದು ಫೋನ್ ಎತ್ತಿದಾಗ ಅನಿವಾರ್ಯವಾಗಿ ಮಾತನಾಡುತ್ತಿದ್ದೆ.

ಆದರೆ ನುಂಗಲಾರದ,   ಉಗುಳಲಾರದ ತುತ್ತಾಗುತ್ತಿತ್ತು ಆ ಫೋನ್ ಕಾಲ್ ಗಳು. ಫೋನ್ ಮಾಡಬೇಡಿ ಎಂದು ಹೇಳಲೂ ಸಹ ಮನಸ್ಸು ಒಪ್ಪುತ್ತಿರಲಿಲ್ಲ.   ಅಷ್ಟು ದೂರದಿಂದ ಫೋನ್ ಮಾಡಿದಾಗ ಮಾತನಾಡದಿದ್ದರೆ ಅಥವಾ ಫೋನ್ ಮಾಡಬೇಡಿ ಎಂದು ಹೇಳಿದರೆ  ಎಲ್ಲಿ ಅವರಿಗೆ ಬೇಸರವಾಗುತ್ತದೆಯೋ  ಏನೋ ಎಂದು ಅನ್ನಿಸುತ್ತಿತ್ತು.

ನೀವು ಚೆನ್ನಾಗಿದ್ದೀರಾ, ಅತ್ತಿಗೆ ಹೇಗಿದ್ದಾರೆ,ಅಪ್ಪ ಅಮ್ಮ ಹೇಗಿದ್ದಾರೆ, ತಮ್ಮ ಹೇಗಿದ್ದಾನೆ, ಮುದ್ದು ಪುಟ್ಟ ಹೇಗಿದ್ದಾನೆ ಎಂದು ಅವರು ಕೇಳುತ್ತಿದ್ದ  ರೀತಿಗೆ…ಪ್ರೀತಿಗೆ ನಿಜಕ್ಕೂ ಬೆರಗಾಗುತ್ತಿತ್ತು. ಅವರಿಗೆ ನಾವು ಯಾರಾಗಬೇಕು….ಯಾಕೆ ಇಷ್ಟು ಹಚ್ಚಿಕೊಂಡಿದ್ದಾರೆ ನಮ್ಮನ್ನು ಎಂದು ಅನ್ನಿಸುತ್ತಿತ್ತು.

ನನ್ನ ತಪ್ಪು ನಿರ್ಧಾರ

ಹೀಗೆ ನಮ್ಮ ಮೈತ್ರಿ  ಮುಂದುವರಿಯುತ್ತಿರುವಾಗ ಒಮ್ಮೆ ನಮ್ಮೂರಿನ ಟೆಲಿಫೋನ್ ಎಕ್ಸ್ಚೇಂಜ್ ನ್ನು ಮೇಲ್ದರ್ಜೆಗೆ ಏರಿಸಲಾಯಿತು. ಆರು ನಂಬರ್ಗಳ ನಮ್ಮ ಟೆಲಿಫೋನ್ ಸಂಖ್ಯೆಯ ಹಿಂದಿನ ಎರಡು ನಂಬರ್ಗಳು  ಬದಲಾದವು.  ಎಸ್ಟಿಡಿ ಕೋಡ್‌ ಹಾಗೆಯೇ ಇತ್ತು. ಆಗ ತಿಂಗಳುಗಳ ಕಾಲ ಫಾರೂಕ್  ಅವರ ಫೋನ್ ಬರಲಿಲ್ಲ. ಯಾಕೆಂದರೆ ಅಲ್ಲಿಂದ ಫೋನ್ ಹಳೆಯ ನಂಬರಿಗೇ ಸಿಗುತ್ತಿರಲಿಲ್ಲ.

ಆಮೇಲೆ ಫಾರೂಕ್ ಸೌದಿಯಿಂದ ಏಳೆಂಟು ಪತ್ರಗಳನ್ನು ಬರೆದಿದ್ದರು ಮೂರ್ನಾಲ್ಕು ತಿಂಗಳಲ್ಲಿ. ಇಲ್ಲಿಂದ ಫೋನ್ ಹೋಗ್ತಾ ಇಲ್ಲ. ನಿಮ್ಮ ನಂಬರ್ ಬದಲಾವಣೆಯಾಗಿದ್ದರೆ ತಿಳಿಸಿ ಎಂದು ಬಹಳ ಕೇಳಿಕೊಂಡಿದ್ದರು. ನಾಲ್ಕು ಗಂಟೆಗೆ ಬರುವ ಫೋನ್ ಕಾಲ್ ರಗಳೆ ತಪ್ಪಿಸಿಕೊಳ್ಳಲು, ಹಾಗೂ ಇದರಿಂದ ನನ್ನ ವಯೋವೃದ್ಧ ತಂದೆ ತಾಯಿಗೆ ಆಗುವ ತೊಂದರೆಯಿಂದ ತಪ್ಪಿಸಿಕೊಳ್ಳಲು ಇದೇ ಸುಸಮಯವೆಂದು ನಾನು ಅಂದುಕೊಂಡುಬಿಟ್ಟಿದ್ದೆ.

ಪತ್ರವೇ ತಲುಪಿಲ್ಲವೆಂದು ಫಾರೂಕ್ ತಿಳಿದುಕೊಳ್ಳುತ್ತಾರೆ;  ಕ್ರಮೇಣ ಪತ್ರ ಬರೆಯುವುದನ್ನು ನಿಲ್ಲಿಸುತ್ತಾರೆ ಎಂಬ ಉದ್ದೇಶದಿಂದ, ನಾನು ಯಾವ ಪತ್ರಕ್ಕೂ ಉತ್ತರ ಬರೆಯಲು ಹೋಗಲಿಲ್ಲ. ಹಾಗೆಯೇ ಆಯಿತು, ನಮ್ಮ ಸಂಪರ್ಕ ಕಡಿದು ಹೋಯ್ತು. ಆಮೇಲೆ  ಬಹಳ ಸಲ ಅನ್ನಿಸುತ್ತಿತ್ತು. ನಾನೀ ವಿಷಯದಲ್ಲಿ ಮಾಡಿದ ನಿರ್ಧಾರ ತಪ್ಪು ಎಂದು.  ಆ ದಿನಗಳಲ್ಲಿ ನನ್ನ ಪರಿಸ್ಥಿತಿಯಲ್ಲಿ ಅದು ನನಗೆ ಅನಿವಾರ್ಯವೇ ಆಗಿತ್ತು..

ಮತ್ತೊಂದು ಆಕಸ್ಮಿಕ

2002 ಕೊನೆಯ ತಿಂಗಳಲ್ಲಿ ಇರಬೇಕು. ಸಂಪೂರ್ಣವಾಗಿ ಫಾರೂಕ್ ಮತ್ತು ನನ್ನ ಸ್ನೇಹ ಸಂಪರ್ಕ ತಪ್ಪಿ ಹೋಯಿತು. ನನ್ನ ನೆನಪು ಸರಿ ಆಗಿರುವುದಾದರೆ 2005  ರ ಜನವರಿ ತಿಂಗಳಲ್ಲಿ ಇರಬೇಕು. ನನ್ನ ಊರಿನ ಆತ್ಮೀಯ ಸ್ನೇಹಿತ ಸಂತೋಷ್ ನನ್ನ ಅಂಗಡಿಯಲ್ಲಿ ನನ್ನ ಜೊತೆ ಮಾತನಾಡುತ್ತಾ ಕುಳಿತಿದ್ದ. ಅದು,ಇದು ಮಾತಾಡುತ್ತ ಹರಟೆ ಹೊಡೆಯುತ್ತಿರುವಾಗ, ಆಕಸ್ಮಿಕವಾಗಿ ಫಾರೂಕ್  ಪ್ರಸ್ತಾಪವನ್ನು ನಾನು ಮಾಡಿದೆ. ನಮ್ಮ ಪತ್ರ ಮೈತ್ರಿಯ ಬಗ್ಗೆ ಮತ್ತು ಆತ ನಮ್ಮ ಮನೆಗೆ ಬಂದು ಹೋದ ವಿಷಯವೆಲ್ಲ ತಿಳಿಸಿ ಆತ ಬರೆದ ಮೊದಲ ಪತ್ರವನ್ನು ಸಂತೋಷ್ ಗೆ ಓದಲು ನೀಡಿದೆ.

ನನ್ನ ಬಳಿ ಆಗ ಮೊಬೈಲ್ ಇರಲಿಲ್ಲ. ಸಂತೋಷ್ ಹೊಸದಾಗಿ ಮೊಬೈಲ್ ಖರೀದಿಸಿದ್ದ.

ಮೊಬೈಲ್ ನ ಹೊಸ ಹುಚ್ಚು ಸಂತೋಷ್ ಗೆ ಇತ್ತು. ಆ ಹುಚ್ಚಿನಲ್ಲಿ ಆತ ಫಾರೂಕ್ ನಂಬರಿಗೆ ಡಯಲ್ ಮಾಡಿ ಬಿಟ್ಟ. ನಾನು ಅದೇನ್ ಮಾಡ್ತಾ ಇದ್ದೀಯಾ ಎಂದು ಎಚ್ಚರಿಸಿದ ಮೇಲೆ,  ಕಾಲ್ ಮಾಡಬೇಡ ಸರಿಯಾಗಲ್ಲ ಎಂದು ಹೇಳಿದ ಮೇಲೆ ಆತ ಕಟ್ ಮಾಡಿದ. ಇಂಡಿಯಾದಿಂದ ಬಂದ ಮಿಸ್ ಕಾಲ್ ಎಂದು ಫಾರೂಕ್ ಮತ್ತೆ ನಿನಗೆ ಫೋನ್ ಮಾಡುವ ಸಾಧ್ಯತೆ ಇದೆ. ನೀನು ಕಾಲ್ ರಿಸೀವ್ ಮಾಡಿದರೆ ಮಾತನಾಡಬೇಕಾಗುತ್ತದೆ. ಊರನ್ನೆಲ್ಲಾ ಹೇಳಿದ ಮೇಲೆ ಆತ ನನ್ನ ವಿಷಯ ಕೇಳಿದರೂ ಕೇಳಬಹುದು. ಯಾವುದೇ ಕಾರಣಕ್ಕೂ ಕಾಲ್ ರಿಸೀವ್ ಮಾಡಬೇಡ ಎಂದು ಸಂತೋಷ್ ಗೆ ಎಚ್ಚರಿಕೆ ನೀಡಿ ಕಳಿಸಿದೆ.

ನಾನು ಅಂದಾಜಿಸಿದಂತೆ ಆಯಿತು.

ಸಂತೋಷ್ ಗೆ ಪದೇ ಪದೇ ಕಾಲ್ ಬಂದು ಸಂತೋಷ್ ಕೊನೆಗೂ ಅನಿವಾರ್ಯವಾಗಿ ರಿಸೀವ್ ಮಾಡಿ ಆಯಿತು. ಫಾರೂಕ್ ಸಂತೋಷ್ ನನ್ನೂರಿನವನೆಂದು ತಿಳಿದುಕೊಂಡ ಮೇಲೆ ಹೇಗಾದರೂ ಮಾಡಿ ನನ್ನ ನಂಬರ್ ಕಲೆಕ್ಟ್ ಮಾಡಿ ಕೊಡಿ ಎಂದು ಸಂತೋಷ್ ಗೆ  ದುಂಬಾಲು ಬಿದ್ದರು. ಕೊನೆಗೂ ಸಂತೋಷ್ ನನ್ನ ನಂಬರ್ ಫಾರೂಕ್ ಗೆ ತಿಳಿಸಿದ… ಕೊನೆಗೆ  ಫಾರೂಕ್  ಕಾಲ್ ನನಗೆ ಬಂದಾಯಿತು.

ನನಗೆ ಪತ್ರ ಸಿಗಲಿಲ್ಲವೆಂದು ನಾನು ಸುಳ್ಳು ಹೇಳಿ ಹೇಗೋ ಬಚಾವಾದೆ. ಸ್ನೇಹಕ್ಕೆ ಹೆಚ್ಚು ಬೆಲೆ ಕೊಡುವ ಫಾರೂಕ್ ಗೆ ನಾನು ಸುಳ್ಳು ಹೇಳಿದ್ದಕ್ಕಾಗಿ ನನ್ನ ಮನಸ್ಸು ಒಳಗೊಳಗೇ ರೋಧಿಸ್ತಾ ಇತ್ತು. ಆದರೆ ಸುಳ್ಳು ಹೇಳುವುದು ನನಗೆ ಅನಿವಾರ್ಯವಾಯಿತು.

ಮಗನನ್ನು ಶಾಲೆಗೆ ಸೇರಿಸುವುದಕ್ಕಾಗಿ ನಾನು ಹಳ್ಳಿಯ ಮನೆಯಿಂದ, ನಮ್ಮ ಅಂಗಡಿಯ ಮಹಡಿಯಲ್ಲಿರುವ ಪುಟ್ಟ ಮನೆಯಲ್ಲಿ ವಾಸವಾಗಿದ್ದರಿಂದ ನನಗೆ ರಾತ್ರಿ ಫೋನ್ ಬಂದರೆ ಮೊದಲಿನಷ್ಟು ತೊಂದರೆಯಾಗುತ್ತಿರಲಿಲ್ಲ. ಮತ್ತೆ ಕೆಲವು ಕಾಲ ನಮ್ಮ ನಡುವೆ ಫೋನ್ ನಲ್ಲಿ ಮಾತುಕತೆ ನಡೆಯುತ್ತಿತ್ತು. ನಮ್ಮ ಕುಟುಂಬದವರನ್ನು ವಿಚಾರಿಸಿಕೊಳ್ಳುವುದರ ಜೊತೆಗೆ ಈಗ ಸಂತೋಷ್ ಬಗ್ಗೆಯೂ ವಿಚಾರಿಸುತ್ತಿದ್ದುದು ಫಾರೂಕ್ ವಿಶೇಷತೆಯಾಗಿತ್ತು.

ಫಾರೂಕ್ ಮಾನವೀಯತೆ

ಮೇ ತಿಂಗಳಲ್ಲಿ ಎಂದು ನೆನಪು. ಫಾರೂಕ್ ತಾನು ಇಂಡಿಯಾಕ್ಕೆ ಬರುತ್ತಿರುವುದಾಗಿ ತಿಳಿಸಿದ್ದರು. ಸಂತೋಷ್ ಬಗ್ಗೆ ವಿಚಾರಿಸಿದಾಗ,   ಆ ಸಂದರ್ಭದಲ್ಲಿ ಸಂತೋಷ್ ತಂದೆಗೆ ಹಾರ್ಟಅಟ್ಯಾಕ್  ಆಗಿದೆ. ಮಣಿಪಾಲದಲ್ಲಿ ಇಟ್ಟಿದ್ದಾರೆ ಎಂದು ಹೇಳಿದೆ.  ಬಹಳ ಬೇಸರ ವ್ಯಕ್ತಪಡಿಸಿದ ಫಾರೂಕ್  ತಾನು ಸಂತೋಷಗೆ ಫೋನ್ ಮಾಡಿ ಮಾತನಾಡುವುದಾಗಿ ತಿಳಿಸಿದರು.

ಮರುದಿನ  ಮಣಿಪಾಲದಿಂದ  ನನಗೆ  ಫೋನ್  ಮಾಡಿದ್ದ ಸಂತೋಷ್ “ನಿಮ್ಮ ಮಿತ್ರ ಫಾರೂಕ್ ನ ಫೋನ್ ಬಂದಿತ್ತು. ತಂದೆಯ ಆರೋಗ್ಯದ ಬಗ್ಗೆ  ವಿಚಾರಿಸಿದರು. ಊರಿಗೆ ಬರುತ್ತಿದ್ದಾರಂತೆ. ಸಾಧ್ಯವಾದರೆ ತಂದೆಯನ್ನು ನೋಡಲು ಮಣಿಪಾಲಕ್ಕೆ ಬರ್ತೀನಿ ಅಂತ ಹೇಳಿದ್ದಾರೆ” ಎಂದು ತಿಳಿಸಿದನು. ಸಹಜವಾಗಿ ಅನಾರೋಗ್ಯ ಪೀಡಿತರಿಗೆ ನೋಡಲು ಬರ್ತೀವಿ ಅಂತ ಹೇಳೋದು ಕಾಮನ್ ಎಂದು ನಾನು ಸಹ ಸುಮ್ಮನಾದೆ. ಅದಾಗಲೇ ಸಂತೋಷ್ ತಂದೆಗೆ ಶಸ್ತ್ರ ಚಿಕಿತ್ಸೆಯಾಗಿ ಆರೋಗ್ಯದಿಂದ ಇದ್ದರು.

ಆಶ್ಚರ್ಯವೆಂದರೆ ನಾಲ್ಕು ದಿನಗಳ ನಂತರ ಬೆಳಗ್ಗೆ ಸುಮಾರು ಹನ್ನೊಂದು ಗಂಟೆಗೆ ಫಾರೂಕ್ ಫೋನ್ ಮಾಡಿ “ತಾನು ಮಣಿಪಾಲ್ ಹಾಸ್ಪಿಟಲ್ ನಲ್ಲಿ ಇದ್ದೀನಿ. ನಾನು ನಿನ್ನೆ ಊರಿಗೆ ಬಂದು ತಲುಪಿದೆ. ಈಗ ಸಂತೋಷ್ ಸಿಕ್ಕಿದ್ದಾರೆ. ಅವರ ತಂದೆಯವರನ್ನು ಒಮ್ಮೆ ನೋಡಿ ಮನೆಗೆ ಹೋಗ್ತೀನಿ” ಎಂದು ಹೇಳಿದರು.

ಆಮೇಲೆ ರಾತ್ರಿ ಸಂತೋಷ್ ನನಗೆ ಫೋನ್ ಮಾಡಿ ಸಖೇದಾಶ್ಚರ್ಯವನ್ನು ವ್ಯಕ್ತಪಡಿಸಿದರು ಫಾರೂಕ್ ಬಗ್ಗೆ.  ಫ್ರೂಟ್ಸ್ ಹಾಗೂ ಕೆಲವು ಬಿಸ್ಕಿಟ್ಗಳ ಜೊತೆ ಸಂತೋಷ್ ತಂದೆಯನ್ನು ನೋಡಲು ಬಂದಿದ್ದು ಹಾಗೂ ಸಂತೋಷ್ ಗೆ ಧೈರ್ಯ ತುಂಬಿ, ತಾನೀಗ ಕುಳಾಯಿಯ ಊರಿನಲ್ಲೇ ಇರ್ತೀನಿ ಒಂದೂವರೆ ತಿಂಗಳು. ಏನಾದ್ರೂ ಹೆಲ್ಪ್ ಬೇಕಿದ್ರೆ ಕೇಳು ಎಂದು ಒತ್ತಾಯದಿಂದ ನುಡಿದಿದ್ದನ್ನು ಸಂತೋಷ್ ನನ್ನಲ್ಲಿ ಹೇಳಿಕೊಂಡ. ಸ್ನೇಹದ ವಿಚಾರಕ್ಕೆ ಬಂದಾಗ ಒಂದು ರೀತಿಯಲ್ಲಿ ಫಾರೂಕ್ ಕೆಲವರಿಗೆ ಹುಚ್ಚ ಎನಿಸಬಹುದು… ಆದರೆ ನನಗೆ ಫಾರೂಕ್ ಒಂದು ವಿಸ್ಮಯ…

ಎರಡನೆಯ ಬಾರಿ ಪುನಃ ನಮ್ಮ ಸ್ನೇಹ ಸಂಪರ್ಕ ಪುನರಾರಂಭವಾದ ಮೇಲೆ ಫಾರೂಕ್  ಕುಳಾಯಿಯಿಂದ ಪ್ರತಿದಿನ ಫೋನ್ ಮಾಡ್ತಾ ಇದ್ದರು. ನಮ್ಮೆಲ್ಲ ಮನೆಯವರ ವಿಚಾರ, ಆರೋಗ್ಯ ವಿಚಾರಿಸಿದ ಹಾಗೆ ಸಂತೋಷ್ ತಂದೆಯ ಬಗ್ಗೆ ಕೂಡ ಪ್ರತಿದಿನ ಕೇಳ್ತಾ ಇದ್ದರು. ಸಂತೋಷ್ ತಂದೆಯ ಶಸ್ತ್ರಚಿಕಿತ್ಸೆ ಮುಗಿದು ಚೇತರಿಸಿಕೊಂಡ ಮೇಲೆ ಅವರನ್ನು ಡಿಸ್ಚಾರ್ಜ್ ಮಾಡಿ ಊರಿಗೆ ಕರೆ ತಂದಿದ್ದರು. ಅವರು ಮನೆಗೆ ಬಂದ ವಿಷಯವನ್ನು ತಿಳಿದ ಮೇಲೆ ಫಾರೂಕ್ ತಾನೊಂದು ದಿನ ನಿಮ್ಮ ಮನೆಗೆ ಬರುತ್ತೇನೆ ಹಾಗೆ ಸಂತೋಷ್ ತಂದೆಯನ್ನು ನೋಡಿ ಬಂದಂತಾಗುತ್ತದೆ ಎಂದು ಹೇಳಿದರು. ನಾನು ಬನ್ನಿ ಎಂದು ಆಹ್ವಾನಿಸಿದೆ.

ಆಮೇಲೊಂದು ದಿನ ಕುಳಾಯಿಯಿಂದ ನಮ್ಮೂರಿಗೆ ಬಂದ ಫಾರೂಕ್   ಸಂತೋಷ್ ಮನೆಗೆ ಹೋಗಿ ಅವರ ತಂದೆಯನ್ನು ಮಾತನಾಡಿಸಿ ಉಪಾಹಾರ ಸ್ವೀಕರಿಸಿ ಅಲ್ಲಿಂದ ನಮ್ಮ ಮನೆಗೆ ಬಂದರು. ಮಧ್ಯಾಹ್ನದ ಊಟವನ್ನು ನಮ್ಮ ಮನೆಯಲ್ಲಿ ಮಾಡಿ ನನ್ನನ್ನು ಹಾಗೂ ಸಂತೋಷನನ್ನು ಅವಶ್ಯವಾಗಿ ತಮ್ಮ ಮನೆಗೆ ಬರಲೇಬೇಕೆಂದು ಆಹ್ವಾನಿಸಿದರು. ಈ ಬಾರಿ ನೀವು ಬರದಿದ್ದರೆ ಮತ್ತೆಂದೂ ನಿಮ್ಮ ಮನೆಗೆ ಬರುವುದಿಲ್ಲ ಹಾಗೂ ನಿಮ್ಮೊಂದಿಗೆ ಮಾತನಾಡುವುದೂ ಇಲ್ಲ ಎಂಬ ಎಚ್ಚರಿಕೆಯನ್ನು ನೀಡಿ ತೆರಳಿದರು.

ಮನದೊಳಗಿನ ಮೌಢ್ಯ

ಸಂತೋಷ್ ನನ್ನ ಹಾಗೆ ಸ್ಥಾವರವಲ್ಲ. ಊರೂರು ಅಲೆದು ಅಭ್ಯಾಸವಿರುವ ಜಂಗಮನೇ ಆಗಿದ್ದ…! ಫಾರೂಕ್ ಸ್ನೇಹದ ವ್ಯಕ್ತಿತ್ವಕ್ಕೆ ಬೆರಗಾಗಿದ್ದ ಸಂತೋಷ್ ತಾವಿಬ್ಬರೂ ಒಮ್ಮೆ ಅವಶ್ಯ ಹೋಗಿ ಬರೋಣ ಎಂದು ನನಗೆ ಮಾತು ಕೊಟ್ಟಿದ್ದ. ಈ ಬಾರಿ ನಾನು ಸಹ ಒಮ್ಮೆ ಹೋಗಿ ಬರುವುದೇ ಚೆನ್ನಾಗಿರುತ್ತದೆ ಎಂಬ ಮನಸ್ಥಿತಿಯನ್ನು ತಲುಪಿದ್ದೆ.

ಫಾರುಕ್ ಮನೆಗೆ ಹೋಗಿ ಬರೋಣ. ಆದರೆ ಊಟ ಉಪಹಾರಕ್ಕೆ ನಿಲ್ಲೋದು ಬೇಡ ಎಂಬ ಮಾತನ್ನು ಹೇಳಿದ ಸಂತೋಷ್. ಆತನ ಈ ಮಾತು ನನಗೆ ಒಪ್ಪಿಗೆಯಾಗಲಿಲ್ಲ ಹಾಗೂ ಇಷ್ಟವೂ ಇರಲಿಲ್ಲ. ಇಷ್ಟು ದೂರದಿಂದ ಅವರ ಮನೆಗೆ ಹೋದ ಮೇಲೆ ಊಟ ಅಥವಾ ಉಪಹಾರ ಮಾಡದೆ ಬರೋದು ಸರಿಯಾಗೋಲ್ಲ.

ಒಂದೊಮ್ಮೆ ಹೋಗದೇ ಇರಬಹುದು; ಹೋಗಿ ಊಟ ಉಪಾಹಾರ ಸೇವಿಸದೆ ಬರುವುದು ಅವರನ್ನು ಅವಮಾನಿಸಿದಂತೆ ಹಾಗೂ ನೋಯಿಸಿದಂತೆ ಆಗುತ್ತದೆ ಎಂದು ನಾನು ಬಹಳ ವಾದ ಮಾಡಿದೆ. ತಾನು ಯಾವತ್ತೂ ಮುಸ್ಲಿಂ ಮನೆಯಲ್ಲಿ ಊಟ ಉಪಾಹಾರ ಸೇವಿಸಿಲ್ಲ.  ತನ್ನಿಂದ ಸಾಧ್ಯವೇ ಇಲ್ಲ ಎಂದು ಸಂತೋಷ್ ಪಟ್ಟು ಹಿಡಿದ.

ಬೇರೆ ಜಾತಿಯವರ ಮನೆಯಲ್ಲಿ ಎಂದೂ ತಾನು ಊಟ ಉಪಹಾರ ಮಾಡಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಸಂತೋಷ್ ಬಗ್ಗೆ ನನಗೆ ತುಂಬಾ ಅಸಮಾಧಾನವಿತ್ತು. ನನಗೆ ಊಟ ಉಪಹಾರದ ವಿಷಯದಲ್ಲಿ ಅಂತಹ ಕಟ್ಟುಪಾಡೇನೂ ಇರಲಿಲ್ಲ. ತುಂಬಾ ಪ್ರವಾಸಗಳನೆಲ್ಲ ಮಾಡುತ್ತಿದ್ದ ಸಂತೋಷ್ ಹೋಟೆಲ್ ಗಳಿಗೆಲ್ಲ ಹೋಗಿ ಊಟ ಉಪಾಹಾರವನ್ನು ಯಾವತ್ತೂ ಮಾಡ್ತಾ ಇರ್ತಿದ್ದ.

ಹೋಟೆಲ್ ಗಳಿಗೆ ಹೋದಾಗ ಒಳಗಡೆ ಅಡುಗೆ ಮಾಡುವವರು ಯಾವ ಜಾತಿಯವರು,  ಯಾವ ಧರ್ಮದವರು ಎಂಬುದು ನಿನಗೆ ತಿಳಿದಿರುತ್ತದೆಯೇ ಎಂದು ನಾನು ಆತನನ್ನು ಪ್ರಶ್ನಿಸಿ ನೋಡಿದೆ. ಸಂತೋಷ್ ನನ್ನ ವಾದಕ್ಕೆ ಸೊಪ್ಪು ಹಾಕಲಿಲ್ಲ. ತಾನು ಬರಲಾರೆ ಎಂದು ಬಿಟ್ಟ.

ನಾನು ಮಾತು ಉಳಿಸಿಕೊಳ್ಳಲಿಲ್ಲ

ಕೊನೆಗೆ ನಾನೊಬ್ಬನೇ ಕುಳಾಯಿಗೆ ಹೋಗಿ ಬರಬೇಕೆಂದು ತೀರ್ಮಾನಿಸಿದ್ದೆ. ಮನೆಯ ಹಾಗೂ ವ್ಯಾಪಾರದ ಕೆಲವು ಸಮಸ್ಯೆಗಳಿಂದಾಗಿ ಅವರ ಮನೆಗೇ ಹೋಗಲಾಗಲಿಲ್ಲ. ಪದೇ ಪದೇ ಫೋನ್ ಮಾಡಿ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದ ಫಾರೂಕ್ ಗೆ   ನನ್ನ ಸಬೂಬು ಗಳನ್ನೆಲ್ಲ ಕೇಳಿ ಬಹಳ ಬೇಸರವಾಗಿರಬೇಕು. ಕೊನೆಗೆ ಪುನಃ ಸೌದಿಗೆ ಹೋದ ಫಾರೂಕ್  ಮತ್ತೆ ನನಗೆ ಫೋನ್ ಮಾಡಲಿಲ್ಲ. ನಮ್ಮ ಸಂಪರ್ಕ ಅಲ್ಲಿಗೆ ಕಡಿದುಹೋಯಿತು.

ಫಾರೂಕ್ ಸಂಪರ್ಕ ಕಡಿದು ಹೋಗಿ ಹದಿನೈದು ವರ್ಷಗಳಿಗೆ ಹತ್ತಿರ ಆಗಿರಬಹುದು.  ನನಗೆ ಆಗಾಗ  ಆತನ ನೆನಪಾಗುತ್ತಿತ್ತು. ಸ್ನೇಹಕ್ಕೆ ಪರಮೋಚ್ಚ ಗೌರವವನ್ನು ಕೊಡುವ ಸನ್ನಡತೆಯ ವ್ಯಕ್ತಿಯೊಬ್ಬನಿಗೆ ದ್ರೋಹ ಮಾಡಿದೆನೇನೋ ಎಂದು ಅನ್ನಿಸುತ್ತಿತ್ತು.  ಫಾರೂಕ್ ಅಂಥ ವ್ಯಕ್ತಿಗಳು ಬಹಳ ಅಪರೂಪ. ಆದರೆ ಎಲ್ಲ ಧರ್ಮಗಳಲ್ಲೂ ಎಲ್ಲ ಜಾತಿಯಲ್ಲೂ ಫಾರೂಕ್  ನಂತಹ ವ್ಯಕ್ತಿಗಳು ಅಲ್ಲಲ್ಲಿ ಇರುತ್ತಾರೆ.

ಯಾವುದೇ ಒಂದು ಜಾತಿ ಅಥವಾ ಯಾವುದೇ ಒಂದು ಧರ್ಮದ ವ್ಯಕ್ತಿಗಳನ್ನು ಸಾಮೂಹಿಕವಾಗಿ ಕೆಟ್ಟವರೆಂದು  ಜರಿಯುವಾಗ ನಮಗಿಂತ ವ್ಯಕ್ತಿಗಳ ನೆನಪಾದರೆ… ನಮ್ಮಷ್ಟಕ್ಕೆ ನಾವು ಸಂಯಮವನ್ನು ಕಂಡುಕೊಳ್ಳಲು ಸಾಧ್ಯ.

ಸಂಯಮ ಹಾಗೂ ಸೌಹಾರ್ದತೆ ಈಗ ಮನುಕುಲಕ್ಕೆ ಅತ್ಯಂತ ಅವಶ್ಯಕ ಹಾಗೂ ಅನಿವಾರ್ಯ.

ಲಾಕ್ ಡೌನ್ ತಂದ ಲಾಭ

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಲಾಕ್ ಡೌನ್ ಘೋಷಣೆಯಾದ ಮೇಲೆ ಮನೆಯಲ್ಲಿಯೇ ಕೆಲವು ದಿನ ಉಳಿದುಕೊಳ್ಳುವಂತಾಯಿತು. ಆ ಸಮಯದಲ್ಲಿ ಫಾರೂಕ್ ನೆನಪಾಗಿ ಈ ನಮ್ಮ ಸ್ನೇಹದ ವಿಷಯಗಳನ್ನೆಲ್ಲ ಫೇಸ್ ಬುಕ್ ನಲ್ಲಿ ಬರೆದುಕೊಂಡುಬಿಟ್ಟೆ.  ಓದುಗ ಸ್ನೇಹಿತರಿಂದ ಒಳ್ಳೆಯ ಪ್ರತಿಕ್ರಿಯೆ ಬಂತು. ಫಾರೂಕ್ ಫೇಸ್ ಬುಕ್ ನಲ್ಲಿ ಇದ್ದರೆ, ಅವರು ನನ್ನ ಬರಹ ನೋಡಿದರೆ ಮತ್ತೆ ನಮ್ಮ ಸ್ನೇಹಕ್ಕೆ ಮರುಜೀವ  ಸಿಗಬಹುದು ಎಂಬುದು ನನ್ನ ಆಸೆಯಾಗಿತ್ತು.

ಫಾರೂಕ್  ಫೇಸ್ ಬುಕ್  ಅಕೌಂಟ್ ಹೊಂದಿದ್ದರು.  ಆದರೆ ಸಕ್ರೀಯರಾಗಿರಲಿಲ್ಲ. ಹಾಗಾಗಿ ನನ್ನ ಬರಹ ಅವರನ್ನು ತಲುಪಲಿಲ್ಲ. ಆದರೆ ಅವರ ಕೆಲವು ಮಿತ್ರರು ನನ್ನ ಫೇಸ್ ಬುಕ್ ಸ್ನೇಹಿತರಾಗಿದ್ದರು. ಅವರಲ್ಲಿ ರಿಯಾಜ್ ಅಷ್ಫಾಕ್ ಹಾಗೂ ಇಮ್ರಾನ್ ಕಾಟಿಪಳ್ಳ ಇವರಿಬ್ಬರು ಹೇಗೋ ನಾನು ಹುಡುಕುತ್ತಿರುವ ಫಾರೂಕ್ ಇವರೇ ಎಂದು ಕಂಡು ಹಿಡಿದು,  ಫಾರೂಕ್ ಗೆ ನನ್ನ ಬರಹದ ಬಗ್ಗೆ ತಿಳಿಸಿ ನನ್ನ ನಂಬರ್ ನೀಡಿದರು. ಅದೇ ರಾತ್ರಿ ಫಾರೂಕ್ ನನಗೆ ಕರೆ ಮಾಡಿ ಮಾತನಾಡಿದರು. ಫೇಸ್ ಬುಕ್ ಹಾಗೂ ನನ್ನ ಕೆಲವರು ಹೊಸ ಸ್ನೇಹಿತರ ಬೆಂಬಲದಿಂದ ಹಳೆಯ ಗೆಳೆಯ ಫಾರೂಕ್ ನನಗೆ ಮತ್ತೆ ಸಿಕ್ಕಿದ್ದಾರೆ.

ಈಗ ಆಗಾಗ ಮಾತನಾಡುತ್ತೇವೆ. ಫೇಸ್ ಬುಕ್ ಮತ್ತು ವಾಟ್ಸಪ್ಪ್ ಮೂಲಕ ನಿರಂತರ ಸಂಪರ್ಕವಿದೆ. ಕೊರೊನಾ ದುರಿತಕಾಲ ಇರುವುದರಿಂದ ಭೇಟಿ ಆಗಿಲ್ಲ. ಸದ್ಯದಲ್ಲೇ  ಭೇಟಿಯಾಗುವ ಅವಕಾಶದ ನಿರೀಕ್ಷೆಯಲ್ಲಿದ್ದೇನೆ. ಸ್ನೇಹ ಮತ್ತೆ ಮರುಕಳಿಸಿದೆ…

ಗಜಾನನ ಮಹಾಲೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಿತ್ತಾರ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದು.(11/07/1972)

 ಕೃಷಿಯ ಜೊತೆಗೆ ಪುಟ್ಟ ಅಂಗಡಿ ನಡೆಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತಿ ಇರುವುದರಿಂದ ಆಗಾಗ ಬರಹ, ಕವನ ಬರೆಯುವುದು ಹವ್ಯಾಸ. 1994 ರಲ್ಲಿ “ಜ್ವಾಲಾಮುಖಿ” ಎಂಬ ಕವನ ಸಂಕಲನ

1996 ರಲ್ಲಿ “ಸಮಸ್ಯೆಗಳ ಸುಳಿಯಲ್ಲಿ ಸ್ವತಂತ್ರ ಭಾರತ” ಎಂಬ ಲೇಖನಗಳ ಸಂಗ್ರಹ ಪ್ರಕಟಿಸಿದ್ದಾರೆ.

ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನ, ಹಾಸ್ಯ, ಕವನ ಬರೆಯುವುದರಲ್ಲಿ ಹೆಚ್ಚು ಆಸಕ್ತಿ.

‍ಲೇಖಕರು Avadhi

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

೧ ಪ್ರತಿಕ್ರಿಯೆ

  1. ಲಲಿತಾ ಸಿದ್ಧಬಸವಯ್ಯ

    ಮುಂದಿನ ಮಾತುಕತೆಯಲ್ಲಿ ಫಾರೂಕ್ ಅವರಿಗೆ ನನ್ನ ನಮಸ್ಕಾರ ತಿಳಿಸಿ. ನಿಮ್ಮ ಲೇಖನ ಓದಿದರೆ ಬಹಳ ಅಪರೂಪದವರು ಅವರು ಅನಿಸಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: