
ಪ ನಾ ಹಳ್ಳಿ ಹರೀಶ್ ಕುಮಾರ್
ನುಡಿದರೆ ಮುತ್ತಿನ ಹಾರದಂತಿರಬೇಕು ಎನ್ನುವ ಮಾತೊಂದಿದೆ. ನನ್ನ ಪ್ರಕಾರ ನಾವು ಮುತ್ತಿನಂತಹ ಮಾತುಗಳನ್ನು ಆಡದಿದ್ದರೂ ಪರವಾಗಿಲ್ಲ ಆಡಿದ ಮಾತಿಗೆ ನಮ್ಮ ಜೀವನದ ನಡೆಗಳು ಹೊಂದುವಂತಿದ್ದರೆ ಸಾಕು. ಯಾರು ತಮ್ಮ ಮಾತು ಮತ್ತು ಕೃತಿಗೆ ನ್ಯಾಯ ಸಲ್ಲಿಸುತ್ತಾರೋ ಅವರು ಎಲ್ಲೆಡೆಯೂ ಸಲ್ಲುತ್ತಾರೆ. ಇಂದಿನ ಸ್ವಾರ್ಥ ಸಮಾಜದಲ್ಲಿ ಅಂತಹ ವ್ಯಕ್ತಿತ್ವದವರನ್ನು ಕಾಣುವುದು ತುಂಬಾ ಅಪರೂಪ. ಇದಕ್ಕೊಂದು ಅಪವಾದ ನಮ್ಮ ಬರಗೂರು ರಾಮಚಂದ್ರಪ್ಪನವರು ತಾವು ನಂಬಿದ್ದನ್ನು ಬರೆಯುತ್ತಾ, ಬರೆದಂತೆ ಬದುಕುತ್ತಾ ಬಂದಿರುವ ನಾಡೋಜಾ ಡಾ. ಬರಗೂರು ರಾಮಚಂದ್ರಪ್ಪನವರು ಈ ವಿಶೇಷ ವ್ಯಕ್ತಿತ್ವದಿಂದಾಗಿ ತಮ್ಮ ಸಮಕಾಲೀನರನ್ನು ಅಲ್ಲದೆ ಹಿರಿ ಕಿರಿಯರನ್ನು ತಮ್ಮತ್ತ ಸೂಜಿಗಲ್ಲಿನಂತೆ ಸೆಳೆಯುತ್ತಾರೆ. ಸಾಹಿತ್ಯ-ಸಿನಿಮಾ ಸಾಂಸ್ಕoತಿಕ ಸಂಘಟನೆ ಹೀಗೆ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡು ಎಲ್ಲದರಲ್ಲೂ ಯಶಸ್ವಿಯಾಗಿರುವ ನಮ್ಮೆಲ್ಲರ ಪ್ರೀತಿಯ ಮೇಷ್ಟ್ರು, ಭಾಷೆ ಮತ್ತು ದೇಶದ ವಿಚಾರಕ್ಕೆ ಬಂದಾಗ ಇತರ ಎಲ್ಲರಿಗಿಂತಲೂ ವಿಶಿಷ್ಟವಾಗಿ ಚಿಂತಿಸುತ್ತಾರೆ.
ನಾನೀಗ ಪರಿಚಯಿಸಲು ಹೊರಟಿರುವ, ಬೆಂಗಳೂರಿನ ಜನ ಪ್ರಕಾಶನ ಹೊರತಂದಿರುವ ದ್ವೇಷ ಬಿಟ್ಟು ದೇಶ ಕಟ್ಟು ಎಂಬ ಕಿರು ಕೃತಿಯು ಇದೇ 2022ರ ಮೇ ತಿಂಗಳಿನಲ್ಲಿ ಕರ್ನಾಟಕದ 20ಕ್ಕೂ ಹೆಚ್ಚು ಪ್ರಗತಿಪರ ಸಂಘಟನೆಗಳು ಒಟ್ಟುಗೂಡಿ ಆಯೋಜಿಸಿದ್ದ ಸೌಹಾರ್ದ ಸಂಸ್ಕøತಿ ಸಮಾವೇಶದಲ್ಲಿ ಉಪಸ್ಥಿತರಿದ್ದ ಡಾ.ಬರಗೂರು ರಾಮಚಂದ್ರಪ್ಪನವರು ಸಮಾವೇಶವನ್ನುದ್ದೇಶಿಸಿ ಮಾಡಿದ ಆಶಯ ಭಾಷಣದ ಲಿಖಿತ ರೂಪವಾಗಿದೆ. ತನ್ನ ಹೆಸರಿನಲ್ಲೇ ಈ ಕಿರುಹೊತ್ತಿಗೆಯು ತನ್ನಲ್ಲಿ ಅಡಕವಾಗಿರಬಹುದಾದ ಆಶಯವನ್ನು ಸ್ಪಷ್ಟವಾಗಿ ತಿಳಿಸುವಂತಿದೆ. ಡಾ.ಬರಗೂರರು ಅಂದು ತಮ್ಮ ಭಾಷಣದುದ್ದಕ್ಕೂ ಸಮಸಮಾಜದ ಪರಿಕಲ್ಪನೆಯನ್ನು ಒತ್ತಿಹೇಳಿದ್ದಾರೆ.

ಧಾರ್ಮಿಕ ದ್ವೇಷವೆಂಬುದು ಸರ್ವಧರ್ಮ ಸಮಾನತೆಯ ಆಶಯವುಳ್ಳ ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡವುತ್ತಿದ್ದು, ಮೂಲಭೂತವಾದಿಗಳು ತಮ್ಮ ಧರ್ಮವನ್ನಷ್ಟೇ ಶ್ರೇಷ್ಠವೆಂದು ವಾದಿಸುತ್ತಾ ಧರ್ಮ-ಧರ್ಮಗಳ ನಡುವೆ ಸಂಘರ್ಷವನ್ನು ತಂದೊಡ್ಡುತ್ತಿದ್ದಾರೆ. ‘ಯಾವ ದೇಶದಲ್ಲಿ ಜನರು ಧರ್ಮದ ಹೆಸರಲ್ಲಿ ಹೊಡೆದಾಡುತ್ತಾರೋ, ಆ ದೇಶ ತಂತಾನೇ ನಾಶಹೊಂದುತ್ತದೆ’ ಎಂದಿದ್ದ ಟಾಲ್ಸ್ಟಾಯ್ ರವರ ಮಾತನ್ನು ಉಲ್ಲೇಖಿಸಿ, ಸಮತೆ ಮತ್ತು ಮಮತೆಯ ಮೌಲ್ಯಗಳನ್ನು ಜೀವನ ಶಕ್ತಿಯಾಗಿಸಿಕೊಂಡ ನಾವ್ಯಾರೂ ನಮ್ಮ ದೇಶವನ್ನು ಹಾಗಾಗಲು ಬಿಡದೇ ವಿವೇಕಾನಂದರ ಧರ್ಮ ಸಾಕ್ಷರತೆಯನ್ನು ಎತ್ತಿ ಹಿಡಿಯೋಣ, ‘ಧರ್ಮ ಇರುವುದು ಮನುಷ್ಯರಿಗಾಗಿ, ಮನುಷ್ಯರಿರುವುದು ಧರ್ಮಕ್ಕಾಗಿ ಅಲ್ಲ’ ಎಂಬ ಡಾ. ಬಿಆರ್ ಅಂಬೇಡ್ಕರ್‍ರವರ ವಾದವನ್ನು ಮಂಡಿಸುತ್ತಾ ಮತೋತ್ಪಾದಕರನ್ನು ನೇರವಾಗಿ ಎಚ್ಚರಿಸಿದ್ದಾರೆ.
ರಾಜಕೀಯ ನಾಯಕರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಸುತ್ತಿರುವ ‘ಮತೋತ್ಪಾದನೆ’ ಎಂಬ ಷಡ್ಯಂತ್ರವನ್ನು ಖಂಡಿಸುವ ಬರಗೂರರು ಅದನ್ನು ಭಯೋತ್ಪಾದನೆಗಿಂತಲೂ ಅಪಾಯಕಾರಿಯಾದದ್ದು ಎಂದಿದ್ದಾರೆ. ಪ್ರತಿ ಧರ್ಮದಲ್ಲಿಯೂ ಧರ್ಮದಲ್ಲಿನ ಸದ್ವಿಚಾರಗಳನ್ನು ಅನುಸರಿಸುವ ಬಹುಸಂಖ್ಯಾತರು ಇದ್ದರೂ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ ಧರ್ಮದೊಳಗಿನ ಕೆಲವರು ಸಣ್ಣ ಸಂಖ್ಯಾತರು (ಅಲ್ಪಸಂಖ್ಯಾತರಲ್ಲ) ಸಮಾಜದಲ್ಲಿ ಧಾರ್ಮಿಕ ಸಂಘರ್ಷವನ್ನು ಉಂಟು ಮಾಡಲು ಪ್ರಯತ್ನಿಸುತ್ತಿದ್ದು ಅದಕ್ಕೆ ಯಾರೂ ಅವಕಾಶವನ್ನು ನೀಡಬಾರದು ಎಂದು ಎಚ್ಚರಿಸುತ್ತಾ, ಬಹುಧರ್ಮೀಯ ಭಾರತದೇಶದಲ್ಲಿ ಧಾರ್ಮಿಕ ಸಾಮರಸ್ಯವನ್ನು ಸುಲಭವಾಗಿ ಸಾಧಿಸಬಹುದು ಎಂದು ಹೇಳುತ್ತಾ ಅದಕ್ಕಾಗಿ ಸಾಕಷ್ಟು ಉದಾಹರಣೆಗಳನ್ನು ನೀಡುತ್ತಾರೆ.
ಮೊದಲನೆಯದಾಗಿ ಧಾರ್ಮಿಕವಾಗಿ ಆಸ್ತಿಕತೆ ಮತ್ತು ನಾಸ್ತಿಕತೆಗಳಿಗಿಂತ ಮಾನವೀಯತೆ ಮುಖ್ಯ ಎಂಬುದನ್ನು ಸಾರಿದ ಆಸ್ತಿಕ ಗಾಂಧಿ ಮತ್ತು ನಾಸ್ತಿಕ ಗೋರಾರನ್ನು ಉದಾಹರಿಸಿದ್ದಾರೆ. ಮುಂದುವರೆದು ಪರಸ್ಪರ ಭಿನ್ನ ಅಭಿಪ್ರಾಯಿಗಳಾಗಿದ್ದ ಅಂಬೇಡ್ಕರ್ ಮತ್ತು ರಾಧಾಕೃಷ್ಣನ್ ರವರು ಸಂವಿಧಾನ ರಚನಾ ಸಭೆಯಲ್ಲಿ ತಮ್ಮ ನಂಬಿಕೆಗಳಿಗೆ ಹೊರತಾದ ಸಮಾನತೆ ಮತ್ತು ಸ್ವಾತಂತ್ರ್ಯದ ತತ್ವವನ್ನು ಒಪ್ಪಿದ್ದನ್ನು ಉದಾಹರಣೆ ನೀಡುತ್ತಾರೆ.

ಶಬರಿ ಮತ್ತು ಕಣ್ಣಪ್ಪನ ಮಾನಸಿಕ ಧಾರ್ಮಿಕತೆ, ಬಸವಣ್ಣನವರ ಕಾಯಕ ತತ್ವದ ಸಮಾನತೆಯ ಸಮಾಜದ ಅವಶ್ಯಕತೆಯನ್ನು ಒತ್ತಿ ಹೇಳುತ್ತ ದೇಶಕ್ಕಾಗಿ ಎಲ್ಲರೂ ತಮ್ಮ ಧಾರ್ಮಿಕ ನಂಬಿಕೆ ಮತ್ತು ನಿಲುವುಗಳನ್ನು ಬದಿಗೊತ್ತಿ ಒಂದಾಗಬೇಕೆಂದು ಕರೆ ನೀಡಿದ್ದಾರೆ. ಸಂತ ಶ್ರೇಷ್ಠ ಕನಕದಾಸರ ರಾಮಧಾನ್ಯ ಚರಿತೆ ಕೃತಿ ಮತ್ತು ಕುವೆಂಪುರವರ ಜಲಗಾರ ನಾಟಕಗಳಲ್ಲಿರುವ ಆಶಯ, ‘ನಾನು ಎಲ್ಲಾ ಜಾತಿಯವರು ನೀಡಿದ ಅನ್ನ ತಿನ್ನುತ್ತಿದ್ದೇನೆ’ ಎಂದ ವರ ನಟ ಡಾ. ರಾಜಕುಮಾರ್ ರವರ ಅಂತಃಕರಣವನ್ನು ನಾವೆಲ್ಲರೂ ಹೊಂದಬೇಕಿದೆ ಎಂದು ಕರೆ ನೀಡುತ್ತಾರೆ.
ಮೂಲಭೂತವಾದಿಗಳು ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ನಡೆಸುವ ಯಾವುದೇ ಹುನ್ನಾರಗಳು ನಮ್ಮ ಕರುನಾಡಿನ ಮಣ ್ಣನಲ್ಲಿ ನಡೆಯಲಾರದು. ನಮ್ಮ ಮಣ್ಣಿನಲ್ಲಿನ ಸೌಹಾರ್ದದ ಬೆಳೆ ಎಂದಿಗೂ ಹಾಳಾಗುವುದಿಲ್ಲ. ಇಲ್ಲಿನ ಜನರ ಮಾನಸಿಕ ಸ್ಥಿತಿಯು ಬೆಂಕಿಯನ್ನು ಬೆಳಕಾಗಿಸುವಂಥದ್ದು. ಕೆಂಡವೂ ಕರುಳಾಗುವ ಶಕ್ತಿ ನನ್ನ ಕರುನಾಡಲ್ಲಿದೆ ಎಂಬ ಆತ್ಮವಿಶ್ವಾಸವನ್ನು ಡಾ. ಬರಗೂರರು ವ್ಯಕ್ತಪಡಿಸಿದ್ದಾರೆ.
‘ಸಂವಿಧಾನವು ಎಷ್ಟೇ ಒಳ್ಳೆಯದಾಗಿರಲಿ ಅದನ್ನು ಪಾಲಿಸುವ ಅಥವಾ ಅನುಷ್ಠಾನಗೊಳಿಸುವ ಜನರು ಕೆಟ್ಟವರಾಗಿದ್ದರೆ ಆ ಸಂವಿಧಾನವನ್ನೂ ಕೆಟ್ಟದ್ದನ್ನಾಗಿಸುತ್ತಾರೆ’ ಎನ್ನುವ ಡಾ.ಅಂಬೇಡ್ಕರ್‍ರವರ ಮಾತನ್ನು ಒತ್ತಿ ಹೇಳುತ್ತಾ ಕೇವಲ ನಾಗರಿಕರನ್ನು ಅಲ್ಲದೇ ಜವಾಬ್ದಾರಿಯುತ ಸ್ಥಾನದಲ್ಲಿರುವ ವಿಚಾರವಾದಿಗಳು, ಪ್ರಗತಿಪರರು, ಅಧಿಕಾರಿಗಳು, ನೌಕರರು, ಧರ್ಮಗುರುಗಳು, ಸಂವಿಧಾನ ತಜ್ಞರು, ಕಾಯಾರ್ಂಗ, ನ್ಯಾಯಾಂಗ ಮತ್ತು ಶಾಸಕಾಂಗದ ಜವಾಬ್ದಾರಿ ಹೊತ್ತ ಸರ್ವ “ಮರ್ಯಾದಸ್ಥ ಮನುಷ್ಯ”ರೂ ಜಾತ್ಯತೀತ ರಾಷ್ಟ್ರದ ಆಶಯವನ್ನು ಸಾಧಿಸಲು ಸಾಮಥ್ರ್ಯವನ್ನು ಮೀರಿ ಶ್ರಮಿಸಬೇಕೆಂದು ಕರೆ ನೀಡುತ್ತಾರೆ.
ಜಾತಿ-ಮತ-ಧರ್ಮಗಳು ದುಷ್ಟರ ಚದುರಂಗದಾಟದ ದಾಳಗಳಾಗದೇ, ಸಮಾನತೆ ಮತ್ತು ಸೌಹಾರ್ದತೆಗಳ ಸ್ಪಂದನವಾದಲ್ಲಿ ದೇಶವು ನಂದನವನವಾಗುತ್ತದೆ ಎನ್ನುವ ಡಾ. ಬರಗೂರರ ಆಶಯ ನುಡಿಗಳನ್ನು ಕೇಳಿದ ಅಥವಾ ಭಾಷಣದ ಮುದ್ರಿತ ಪ್ರತಿಯನ್ನು ಓದಿದ ಯಾವುದೇ ವ್ಯಕ್ತಿತ್ವ ವಾದರೂ ಸರಿ, ಅವರ ಹೃದಯದಲ್ಲಿ ಪರಸ್ಪರ ದ್ವೇಷವನ್ನು ಬಿಟ್ಟು ಸಮೃದ್ಧ ದೇಶವನ್ನು ಕಟ್ಟುವ ಛಲ ಮೂಡದೇ ಇರಲಾರದು…
0 ಪ್ರತಿಕ್ರಿಯೆಗಳು