ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಹಾಜಿ ಮುರಾದ್- ಪೆಟ್ರೋವ್ನ ವಶದಲ್ಲಿ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

18

ದಾಳಿ ನಡೆದ ಮರು ದಿವಸ, ಬೆಳಗ್ಗೆ, ತೀರ ಬೇಗ ಏನಲ್ಲ, ಬಟ್ಲರ್ ಹಿತ್ತಿಲ ಬಾಗಿಲಿನಿಂದ ಹೊರ ಬಿದ್ದು ಉಪಾಹಾರದ ಮೊದಲು ತಾಜಾ ಗಾಳಿಯಲ್ಲಿ ಸುತ್ತಾಡಿ ಬರೋಣ ಎಂದು ಹೊರಟ. ಬೆಳಗಿನ ಉಪಾಹಾರ ಸಾಮಾನ್ಯವಾಗಿ ಪೆಟ್ರೋವ್‍ನ ಜೊತೆಯಲ್ಲಿ ಆಗುತ್ತಿತ್ತು. ಸೂರ್ಯ ಆಗಲೇ ಬೆಟ್ಟಗಳನ್ನು ದಾಟಿ ಮೇಲೆ ಬಂದಿದ್ದ. ರಸ್ತೆಯ ಬಲಗಡೆ ಇದ್ದ ಮನೆಗಳ ಬಿಳಿಯ ಬಣ್ಣ ಬಳಿದ ಗೋಡೆಗಳೆಲ್ಲ ಪ್ರಖರವಾಗಿ ಹೊಳೆಯುತ್ತ ಕಣ್ಣು ಕುಕ್ಕುತ್ತಿದ್ದವು. ಎಂದಿನಂತೆ ಎಡಗಡೆಗೆ ನೋಡಿದರೆ ಏರುವ, ಇಳಿಯುವ ಕಾಡಿನ ಹೊದಿಕೆ ಹೊದ್ದ ಬೆಟ್ಟ ಸಾಲು, ಅದರಾಚೆ ನೋಡಿದರೆ ಮೋಡ ಅನಿಸಿಸುವ ಹಾಗಿದ್ದ ಮಂಜಿನ ಶಿಖರ, ಮನಸಿಗೆ ತಂಪು ಅನಿಸುತ್ತಿತ್ತು. ಬಟ್ಲರ್ ಬೆಟ್ಟ ನೋಡುತ್ತ, ಆಳವಾಗಿ ಉಸಿರೆಳೆದುಕೊಳ್ಳುತ್ತ, ಬದುಕಿರುವುದೇ ಒಂದು ಖುಷಿ, ನನ್ನ ಪಾಡಿಗೆ ನಾನು ಬದುಕಿರುವುದು, ಈ ಚೆಲುವಾದ ಜಾಗದಲ್ಲಿರುವುದು ಖುಷಿ ಅಂದುಕೊಳ್ಳುತ್ತಿದ್ದ.

ನಿನ್ನೆಯ ದಾಳಿಯ ಚೆನ್ನಾಗಿತ್ತು, ದಾಳಿ ಮಾಡುವಾಗಲೂ ವಾಪಸ್ಸು ಬರುವಾಗಲೂ ಬಿಸಿಯೇರಿದ್ದ ಸನ್ನಿವೇಶದಲ್ಲೂ ಖುಷಿ ಇತ್ತು; ದಾಳಿ ಮುಗಿದ ಮೇಲೆ ಪೆಟ್ರೋವ್‍ನ ಪ್ರೇಯಸಿ ಮಾಶಾ ಹಾಕಿದ ಸರಳವಾದ ಊಟ ಬಹಳ ಚೆನ್ನಾಗಿತ್ತು, ವಿಶೇಷವಾಗಿ ನನ್ನನ್ನ ಚೆನ್ನಾಗಿ ನೋಡಿಕೊಂಡಳು ಅನ್ನಿಸಿ ಬಟ್ಲರ್ ಖುಷಿಯಾಗಿದ್ದ. ಮಾಶಾಳ ದಟ್ಟ ಕೂದಲಿನ ಜಡೆ, ಅಗಲವಾದ ಭುಜ, ತುಂಬಿದ ಎದೆ, ಮಚ್ಚೆ ಇರುವ ಮುಖದ ಮೇಲಿನ ನಗು ಇವೆಲ್ಲ ಬಟ್ಲರನನ್ನು ಅವನಿಗೇ ಗೊತ್ತಿಲ್ಲದ ಹಾಗೆ ಸೆಳೆದಿದ್ದವು. ಅವನು ಮದುವೆಯಾಗದ ಯುವಕ, ಹಾಗಾಗಿ ಅವಳು ನನ್ನ ಬಯಸುತ್ತಿರಬಹುದು ಅಂತಲೂ ಅನಿಸಿತ್ತು. ಆದರೆ ಸರಳ ಸ್ವಭಾವದ ಜೊತೆಗಾರ ಒಳ್ಳೆಯವನು, ಅವನಿಗೆ ಅನ್ಯಾಯ ಮಾಡಿದ ಹಾಗಾಗುತ್ತದೆ ಅನ್ನಿಸಿ ಸರಳವಾದ ಗೌರವದ ದೃಷ್ಟಿಯಂದ ಅವಳೊಡನೆ ವ್ಯವಹರಿಸುತ್ತಿದ್ದ. ಅದರಿಂದ, ನಾನೆಷ್ಟು ಒಳ್ಳೆಯವನು ಅನ್ನುವ ಸಂತೋಷ ಅನುಭವಿಸುತ್ತಿದ್ದ.

ಹೀಗೆ ನೆನೆಯುತ್ತ ನಡೆಯುತ್ತಿರುವಾಗ ಕುದುರೆಗಳ ಗೊರಸಿನ ಸದ್ದು ಕೇಳಿಸಿ ತಲೆ ಎತ್ತಿ ನೋಡಿದರೆ, ಮಣ್ಣು ರಸ್ತೆಯ ಮೇಲೆ ಅವನೆದುರಿಗೆ ಹಲವು ಜನ ಸವಾರರು ಸಾವಕಾಶವಾಗಿ ಬರುತ್ತಿದ್ದರು. ಒಂದಿಪ್ಪತ್ತು ಜನ ಕೊಸಾಕ್‍ಗಳ ಗುಂಪಿನ ಮುಂದೆ ಇಬ್ಬರು ಇದ್ದರು. ಒಬ ಬಿಳಿಯ ಸಿರ್ಕಾಸ್ಸಿಯನ್ ಕೋಟು ತೊಟ್ಟು, ಪಪಾಖಾ ಟೋಪಿಯ ಮೇಲೆ ಪೇಟ ಸುತ್ತಿಕೊಂಡವನು, ಇನ್ನೊಬ್ಬ ರಶಿಯನ್ ಸೇನೆಯ ಅಧಿಕಾರಿ ಕಂಡರು. ಅಧಿಕಾರಿಯ ಮೂಗು ಹದ್ದಿನ ಮೂಗಿನ ಹಾಗಿತ್ತು, ಸಮವಸ್ತ್ರದ ತುಂಬ ಬೆಳ್ಳಿಯ ಪದಕಗಳಿದ್ದವು, ಬಂದೂಕು ಕತ್ತಿ ಇದ್ದವು. ಪೇಟದವನು ಕೂತಿದ್ದ ಕುದುರೆಗೆ ಕಂದು ಬಣ್ಣದ ಮೈ, ತೆಳು ಕಂದು ಬಣ್ನದ ಕೇಸರ, ಬಾಲ, ಪುಟ್ಟ ತಲೆ, ಸುಂದರ ಕಣ್ಣು ಇದ್ದವು. ಆಫೀಸರು ದೊಡ್ಡ ಅಲಂಕಾರದ ಕರಬಾಖ್ ಕುದುರೆಯ ಮೇಲಿದ್ದ. ಪೇಟದವನು ಕೂತಿದ್ದ ಕುದುರೆ ಅಪಾರ ಶಕ್ತಿಯದು ಅನ್ನುವುದು ಕುದುರೆಗಳ ಬಗ್ಗೆ ಪ್ರೀತಿ ಇದ್ದ ಬಟ್ಲರನಿಗೆ ಒಂದೇ ನೋಟಕ್ಕೆ ಹೊಳೆಯಿತು. ಯಾರು ಇವರು ಎಂದು ವಿಚಾರಿಸಲು ನಿಂತ.
ಸೈನ್ಯದ ಅಧಿಕಾರಿ, ‘ಇದು ಕಮಾಂಡಿಂಗ್ ಆಫೀಸರ್ ಮನೆಯೋ?’ ಎಂದು ಕೇಳಿದ. ಅವನ ಉಚ್ಚಾರಣೆ ನೋಡಿದರೆ ವಿದೇಶದವನು ಅನಿಸುತ್ತಿತ್ತು. ಹೌದು ಎಂದ ಬಟ್ಲರ್. ಅಧಿಕಾರಿಯ ಹತ್ತಿರ ಬಂದು, ಪೇಟದ ವ್ಯಕ್ತಿಯನ್ನು ತೋರಿಸುತ್ತ ‘ಅವರು ಯಾರು?’ ಎಂದು ಕೇಳಿದ.
‘ಹಾಜಿ ಮುರಾದ್. ಇಲ್ಲೇ ವಾಸ ಮಾಡುವುದಕ್ಕೆ ಬಂದಿದ್ದಾರೆ. ಕಮಾಂಡರ್ ಜೊತೆಯಲ್ಲಿ ಇರುತ್ತಾರೆ,’ ಎಂದ ಅಧಿಕಾರಿ.
ಹಾಜಿ ಮುರಾದ್ ಬಗ್ಗೆ ಬಟ್ಲರ್ ಕೇಳಿ ತಿಳಿದಿದ್ದ. ಅವನು ರಶಿಯಾದ ಪಕ್ಷ ಸೇರಿದ್ದಾನೆ ಅನ್ನುವುದನ್ನೂ ಕೇಳಿದ್ದ. ಅವನನ್ನು ಇಲ್ಲಿ, ಈ ಚಿಕ್ಕ ಕೋಟೆಯಲ್ಲಿ ಕಾಣುತ್ತೇನೆ ಅನ್ನುವ ನಿರೀಕ್ಷೆ ಇರಲಿಲ್ಲ. ಬಟ್ಲರನತ್ತ ಸ್ನೇಹದ ನೋಟ ಬೀರಿದ ಹಾಜಿ ಮುರಾದ್.

‘ನಮಸ್ಕಾರ, ಕೋಶ್ಕೋಲ್ಡಿ,’ ಅನ್ನುತ್ತ ತಾನು ಕಲಿತಿದ್ದ ಹೇಗಿದ್ದೀರಿ ಅನ್ನುವ ಅರ್ಥದ ಟಾರ್ಟರ್ ನುಡಿ ಬಳಸಿದ ಬಟ್ಲರ್.
ಸೌಬಾಲ್ , ಚೆನ್ನಾಗಿದ್ದೇನೆ, ನೀವೂ ಚೆನ್ನಾಗಿರಿ ಅನ್ನುವ ಅರ್ಥದ ಮಾತನ್ನು ಹಾಜಿ ಮುರಾದ್ ಹೇಳಿದ. ಬಟ್ಲರನ ಹತ್ತಿರಕ್ಕೆ ಕುದುರೆ ನಡೆಸಿ ಅವನತ್ತ ಕೈ ಚಾಚಿದ. ಆ ಕೈಯ ಎರಡು ಬೆರಳಲ್ಲಿ ಚಾವಟಿ ಹಿಡಿದಿದ್ದ.
‘ಕಮಾಂಡರ್?’ ಎಂದು ಕೇಳಿದ.
‘ಅಲ್ಲ. ಕಮಾಂಡರ್ ಇಲ್ಲಿ ಒಳಗಿದ್ದಾರೆ. ಹೋಗಿ ಕರೆಯುತ್ತೇನೆ,’ ಎಂದು ಅಧಿಕಾರಿಗೆ ಹೇಳಿದ ಬಟ್ಲರ್ ಮೆಟ್ಟಿಲು ಹತ್ತಿ ಹೋಗಿ ಬಾಗಿಲು ದೂಡಿದ.
ಅತಿಥಿಗಳ ಪ್ರವೇಶದ್ವಾರ (ಆ ಬಾಗಿಲನ್ನು ಮಾಶಾ ಹಾಗೆ ಕರೆಯುತ್ತಿದ್ದಳು) ಮುಚ್ಚಿ ಚಿಲಕ ಹಾಕಿತ್ತು. ಬಟ್ಲರ್ ಬಾಗಿಲು ತಟ್ಟಿದರೂ ತೆರೆಯಲಿಲ್ಲ. ಆರ್ಡರ್ಲಿಯನ್ನು ಕರೆದ. ಉತ್ತರ ಬರಲಿಲ್ಲ. ಇಬ್ಬರು ಆರ್ಡರ್ಲೀಗಳಲ್ಲಿ ಒಬ್ಬನೂ ಕಾಣಲಿಲ್ಲವಾಗಿ ಅವನು ಅಡುಗೆಯ ಮನೆಗೆ ಹೋದ. ಅಲ್ಲಿ ಮಾಶಾ ಮುಖ ಕೆಂಪು ಮಾಡಿಕೊಂಡು, ಕುತ್ತಿಗೆಯ ಸುತ್ತ ಕರ್ಚೀಫು ಕಟ್ಟಿಕೊಂಡು, ಅಂಗಿಯ ತೋಳು ಮೇಲಕ್ಕೆ ಮಡಿಸಿಕೊಂಡು ದುಂಡು ಬಿಳಿಯ ಕೈಯಿಂದ ಅಷ್ಟೇ ಬೆಳ್ಳಗಿದ್ದ ಹಿಟ್ಟು ನಾದಿ ಸಣ್ಣ ಸಣ್ಣ ಉಂಡೆ ಮಾಡುತ್ತಿದ್ದಳು.

‘ಆರ್ಡರ್ಲೀಗಳು ಎಲ್ಲಿ ಹೋದರು?’ ಬಟ್ಲರ್ ಕೇಳಿದ.

‘ಕುಡಿಯೋದಕ್ಕೆ ಹೋಗಿದಾರೆ. ನಿನಗೇನು ಬೇಕು?’

‘ಮುಂದಿನ ಬಾಗಿಲು ತೆಗೆಯಬೇಕು. ಬೆಟ್ಟಗಾಡಿನ ಜನ ಒಂದು ಹಿಂಡು ಮನೆ ಮುಂದೆ ಬಂದು ಸೇರಿದ್ದಾರೆ. ಹಾಜಿ ಮುರಾದ್ ಬಂದಿದ್ದಾನೆ,’ ಅಂದ.

‘ಬೇರೆ ಯಾವುದಾದರೂ ಸುಳ್ಳು ಹುಟ್ಟಿಸಿಕೊಂಡು ಹೇಳು!’ ಅನ್ನುತ್ತ ಮಾಶಾ ನಕ್ಕಳು.

‘ತಮಾಷೆ ಅಲ್ಲ, ನಿಜವಾಗಲೂ ಮನೆ ಮುಂದೆ ಬಂದು ನಿಂತಿದಾನೆ.’

‘ನಿಜವಾಗಲೂ?’

‘ನಿನಗೆ ಯಾಕೆ ಸುಳ್ಳು ಹೇಳಿ ಮೋಸ ಮಾಡಲಿ? ಹೋಗಿ ನೋಡು. ಮುಂದಿನ ಬಾಗಿಲ ಹತ್ತಿರಾನೇ ಇದ್ದಾನೆ.’

‘ಅಯ್ಯೋ, ದೇವರೇ!’ ಅನ್ನುತ್ತ ಮಾಶಾ ಅಂಗಿಯ ತೋಳು ಕೆಳಗಿಳಿಸಿ, ಜಡೆಗೆ ಸಿಕ್ಕಿಸಿದ ಹೇರ್ ಪಿನ್ನು ಸರಿಯಾಗಿವೆಯೋ ಎಂದು ತಲೆ ಮುಟ್ಟಿ ನೋಡಿಕೊಂಡು, ‘ನಾನು ಹೋಗಿ ಇವಾನ್ ಮಾಟೆವಿಚ್‍ನ ಎಬ್ಬಿಸುತೇನೆ,’ ಅಂದಳು.

ಬಟ್ಲರ್, ‘ಬೇಡ, ನಾನೇ ಹೋಗತೇನೆ,’ ಅನ್ನುತ್ತಿದ್ದ ಹಾಗೇ. ಅಲ್ಲಿಗೆ ಬಂದ ಪೆಟ್ರೋವ್‍ನ ಆರ್ಡರ್ಲೀಯನ್ನು ಕಂಡು, ‘ಬಾನ್ಡೆರೆನ್ಕೋ, ಹೋಗಿ ಬಾಗಿಲು ತೆಗಿ,’ ಎಂದು ಹೇಳಿದ.

‘ಸರಿ, ಒಳ್ಳೆಯದೇ ಆಯಿತು!’ ಅಂದು ಮಾಶಾ ಅವಳು ಮಾಡುತ್ತಿದ್ದ ಕೆಲಸ ಮುಂದುವರೆಸಿದಳು.

ಹಾಜಿ ಮುರಾದ್ ತನ್ನ ಬಂದಿದ್ದಾನೆ ಅನ್ನುವ ಸುದ್ದಿ ಕೇಳಿ ಮೇಜರ್ ಪೆಟ್ರೋವ್‍ಗೆ ಆಶ್ಚರ್ಯವಾಗಲಿಲ್ಲ. ಹಾಜಿ ಮುರಾದ್ ಗ್ರೋಝ್ನಿ ಕೋಟೆಗೆ ಬಂದಿರುವ ಸುದ್ದಿ ಅವನಿಗಾಗಲೇ ತಿಳಿದಿತ್ತು. ಹಾಸಿಗೆಯ ಮೇಲೆ ಎದ್ದು ಕೂತು, ಸಿಗರೇಟು ಸುರುಳಿ ಸುತ್ತಿ, ಕಡ್ಡಿ ಗೀರಿ ಹಚ್ಚಿಕೊಂಡು, ಜೋರಾಗಿ ಸದ್ದು ಮಾಡುತ್ತ ಗಂಟಲು ಸರಿಮಾಡಿಕೊಂಡು, ‘ಆ ದೆವ್ವ’ವನ್ನು ತನ್ನ ಬಳಿಗೆ ಕಳಿಸಿದ ಹಿರಿಯ ಅಧಿಕಾರಿಗಳ ಬಗ್ಗೆ ಗೊಣಗಿಕೊಳ್ಳುತ್ತ ಉಡುಪು ತೊಟ್ಟು ಸಿದ್ಧನಾದ.
ಸಿದ್ಧನಾದಮೇಲೆ ಆರ್ಡರ್ಲೀಯನ್ನು ಕರೆದು ಔಷಧ ತೆಗೆದುಕೊಂಡು ಬಾ ಎಂದು ಆಜ್ಞೆ ಮಾಡಿದ. ‘ಔಷಧ’ವೆಂದರೆ ವೋಡ್ಕಾ ಅನ್ನುವುದು ಸೇವಕನಿಗೆ ಗೊತ್ತಿತ್ತು, ತಂದುಕೊಟ್ಟ.

ವೋಡ್ಕಾ ಕುಡಿಯುತ್ತ, ರೈ ಬ್ರೆಡ್ಡು ತಿನ್ನುತ್ತ,‘ ಎರಡು ಥರ ಮದ್ಯ ಬೆರೆಸಿ ಕುಡಿದರೆ ಅದರಷ್ಟು ಕೆಟ್ಟದ್ದು ಇನ್ನೊಂದಿಲ್ಲ. ನಿನ್ನೆ ಚಿಖಿರ್ ಕುಡಿದಿದ್ದೆ, ಇವತ್ತು ತಲೆ ನೋವು’ ಎಂದು ಗೊಣಗಿಕೊಂಡ ಮೇಜರ್. ಸಿದ್ಧನಾಗಿ ದಿವಾನ ಖಾನೆಗೆ ಬಂದ. ಅಷ್ಟು ಹೊತ್ತಿಗೆ ಬಟ್ಲರ್ ಹಾಜಿ ಮುರಾದ್‍ನನ್ನೂ ಜೊತೆಗೆ ಜೊತೆಗೆ ಬಂದಿದ್ದ ಅಧಿಕಾರಿಯನ್ನೂ ಅಲ್ಲಿಗೆ ಕರೆತಂದಿದ್ದ.

ಅಧಿಕಾರಿಯು ಲೆಫ್ಟ್ ಫ್ಲಾಂಕ್‍ನ ಕಮಾಂಡರನ ಆಜ್ಞೆಯನ್ನು ಮೇಜರನಿಗೆ ಒಪ್ಪಿಸಿದ. ಅದರಲ್ಲಿ, ‘ಹಾಜಿ ಮುರಾದ್‍ನನ್ನು ಮೇಜರ್ ಅವರಿಗೆ ಒಪ್ಪಿಸಲಾಗಿದೆ, ಹಾಜಿ ಮುರಾದ್ ಬೆಟ್ಟಗುಡ್ಡಗಳ ಜರನ್ನು ಭೇಟಿಮಾಡುವುದಕ್ಕೆ ಅವಕಾಶ ನೀಡಬೇಕು, ಅಂಥ ಭೇಟಿಯನ್ನು ಗುಪ್ತಚಾರರು ನಿಗಾ ಮಾಡಬೇಕು, ಕೊಸ್ಸಾಕ್‍ಗಳ ಪಡೆ ಇಲ್ಲದೆ ಹಾಜಿ ಮುರಾದ್ ಕೋಟೆಯನ್ನು ಬಿಟ್ಟು ಹೋಗುವಂತಿಲ್ಲ,’ ಎಂದು ಅದರಲ್ಲಿ ಬರೆದಿತ

ಆಜ್ಞೆಯನ್ನು ಮೇಜರ್ ಓದಿದ. ಹಾಜಿ ಮುರಾದ್‍ನನ್ನು ನಿಟ್ಟಿಸಿ ನೋಡಿದ. ಮತ್ತೆ ಕೈಯಲ್ಲಿದ್ದ ಕಾಗದವನ್ನು ದಿಟ್ಟಿಸಿದ. ಹೀಗೆ ಅತ್ತ ಇತ್ತ ಹಲವು ಬಾರಿ ದಿಟ್ಟಿಸಿ ನೊಡಿದ ಮೇಜರ್ ಕೊನೆಗೆ ಹಾಜಿ ಮುರಾದ್‍ನನ್ನು ನೋಡುತ್ತ ‘ಯಕ್‍ಶಿ, ಬೆಕ್; ಯಕ್‍ಶಿ! (ಹ್ಞಾ, ಒಳ್ಳೆಯದು, ಸರಿ! ಸರಿ!)’ ಎಂದ. ಅವನು ಇಲ್ಲಿರಲಿ, ಅವನನ್ನು ಹೊರಕ್ಕೆ ಬಿಡಬಾರದು ಅನ್ನುವ ಆಜ್ಞೆಯಾಗಿದೆ, ಆಜ್ಞೆ ಪವಿತ್ರ ಅಂತ ಹೇಳು! ಸರಿ, ಬಟ್ಲರ್, ಅವನನ್ನ ಎಲ್ಲಿ ಉಳಿಸೋಣ? ಆಫೀಸಿನಲ್ಲಿ ಆಗಬಹುದೋ?’ ಎಂದ.

ಉತ್ತರ ಹೇಳಲು ಬಟ್ಲರ್ ಗೆ ಅವಕಾಶವೇ ಸಿಗಲಿಲ್ಲ. ಆ ಹೊತ್ತಿಗೆ ಮಾಶಾ ಅಡುಗೆ ಮನೆಯಿಂದ ಬಂದು ಬಾಗಿಲಲ್ಲಿ ನಿಂತಿದ್ದಳು. ‘ಅಲ್ಲಿ ಯಾಕೆ? ಇಲ್ಲೇ ಇರಲಿ! ಅವನಿಗೆ ಅತಿಥಿಗಳ ಕೋಣೆ ಜೊತೆಗೆ ಉಗ್ರಾಣ ಬಿಟ್ಟುಕೊಡೋಣ. ನಮ್ಮ ಕಣ್ಣಳತೆಯಲ್ಲೇ ಇರುತ್ತಾನೆ ಎಂದು ಮೇಜರನಿಗೆ ಹೇಳಿದಳು. ಹೇಳುತ್ತ ಹಾಜಿ ಮುರಾದ್‍ನನ್ನು ನೋಡಿ ತಟ್ಟನೆ ದೃಷ್ಟಿ ಹೊರಳಿಸಿದಳು.

‘ಹ್ಞಾ, ನೋಡಿ, ನನಗೂ ಮೇಡಂ ಅವರು ಹೇಳುವುದು ಸರಿ ಅನಿಸತ್ತೆ,’ ಅಂದ ಬಟ್ಲರ್.
‘ಸರಿ, ಸರಿ. ನೀನೀಗ ಹೋಗು! ಹೆಂಗಸರಿಗೆ ಇಲ್ಲಿ ಕೆಲಸವಿಲ್ಲ,’ ಅನ್ನುತ್ತ ಮೇಜರ್ ಹುಬ್ಬು ಗಂಟಿಕ್ಕಿದ.
ಈ ಎಲ್ಲ ಮಾತು ನಡೆಯುತ್ತಿದ್ದಾಗ ಹಾಜಿ ಮುರಾದ್ ಕಠಾರಿಯ ಹಿಡಿಯ ಮೇಲೆ ಕೈ ಇರಿಸಿ, ತುಟಿಯ ಮೇಲೆ ತಿರಸ್ಕಾರದ ನಗುವಿಟ್ಟುಕೊಂಡು ಕೂತಿದ್ದ. ನನ್ನ ವಸತಿ ಎಲ್ಲಿದ್ದರೂ ನಡೆಯುತ್ತದೆ, ಸರ್ದಾರ್ ಅವರು ಅನುಮತಿ ಕೊಟ್ಟಿದ್ದಾರಲ್ಲ, ಗುಡ್ಡಗಾಡಿನ ಜನರ ಜೊತೆ ಮಾತಡಬಹುದು ಅಂತ, ಅದಕ್ಕೆ ಅವಕಾಶ ಸಿಕ್ಕರೆ ಸಾಕು, ಅವರು ನನ್ನ ಹತ್ತಿರ ಬರುವುದಕ್ಕೆ ಅವಕಾಶ ಕೊಡಿ ಎಂದು ಹೇಳಿದ.

ಅದು ಆಗುತ್ತದೆ ಎಂದು ಹೇಳಿ ಮೇಜರ್ ಅತಿಥಿಗಳ ಕೋಣೆ ಸಜ್ಜಾಗುವವರೆಗೆ ಅವರನ್ನು ಮಾತಾಡಿಸಿಕೊಂಡಿರು, ತಿನ್ನುವುದಕ್ಕೆ ಏನಾದರೂ ವ್ಯವಸ್ಥೆ ಮಾಡು, ನಾನು ಕಛೇರಿಗೆ ಹೋಗಿ ಕಾಗದ ಬರೆದು, ಕೆಲವು ಆರ್ಡರುಗಳು ಕಳಿಸಿ ಬರುತ್ತೇನೆ ಎಂದು ಬಟ್ಲರನಿಗೆ ಜವಾಬ್ದಾರಿ ವಹಿಸಿದ.

ಹೊಸಬರ ಜೊತೆಯಲ್ಲಿ ಹಾಜಿ ಮುರಾದ್‍ನ ಸಂಬಂಧ ಬಲು ಬೇಗನೆ ಸ್ಪಷ್ಟ ರೂಪ ಪಡೆಯಿತು. ಮೇಜರ್‍ ನನ್ನು ಕಂಡ ಕ್ಷಣದಿಂದ ಅವನ ಬಗ್ಗೆ ತಿರಸ್ಕಾರ ಹುಟ್ಟಿತ್ತು, ಅವನ ಬಗ್ಗೆ ಸ್ವಲ್ಪ ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದ. ಅವನಿಗಾಗಿ ಊಟ ಸಿದ್ಧಪಡಿಸಿ ಬಡಿಸಿದ ಮಾಶಾಳನ್ನು ಕಂಡು ಅವನಿಗೆ ಸಂತೋಷವಾಗಿತ್ತು. ಅವಳ ಸರಳತೆ ಮತ್ತು ಅವನ ಪಾಲಿಗೆ ವಿದೇಶೀಯ ಅನಿಸುತ್ತಿದ್ದ ಚೆಲುವು ಅವನನ್ನು ಸೆಳೆದಿದ್ದವು. ಅವನ ಬಗ್ಗೆ ಅವಳಲ್ಲಿ ಹುಟ್ಟಿದ್ದ ಆಕರ್ಷಣೆ ಅವನ ಅರಿವಿಗೆ ಬಂದಿತ್ತು. ಅವಳತ್ತ ನೋಡದೆ ಇರಲು, ಅವಳೊಡನೆ ಮಾತಾಡದೆ ಇರಲು ಪ್ರಯತ್ನಪಟ್ಟ. ಆದರೆ ಕಣ್ಣು ಅವನಿಗೇ ತಿಳಿಯದ ಹಾಗೆ ಅವಳನ್ನು ಹಿಂಬಾಲಿಸುತ್ತಿತ್ತು. ಬಟ್ಲರ್ ಬಗ್ಗೆ ಅವನು ಭೇಟಿಯಾದ ಕ್ಷಣದಿಂದಲೇ ಸ್ನೇಹ ಹುಟ್ಟಿತ್ತು. ತನ್ನ ಬದುಕಿನ ಬಗ್ಗೆ ಅವನ ಜೊತೆಯಲ್ಲಿ ಮುಕ್ತವಾಗಿ ಮಾತನಾಡಿದ. ಗುಪ್ತಚಾರರು ತನ್ನ ಕುಟುಂಬದ ಬಗ್ಗೆ ತಂದ ಮಾಹಿತಿಯನ್ನೂ ಅವನ ಜೊತೆಯಲ್ಲಿ ಹಂಚಿಕೊಂಡ. ನಾನೇನು ಮಾಡಿದರೆ ಏನಾಗಬಹುದು ಅನ್ನುವ ಬಗ್ಗೆಯೂ ಅವನೊಡನೆ ಚರ್ಚೆ ಮಾಡಿದ.

ಗೂಢಚಾರರು ತಂದದ್ದು ಕೆಟ್ಟ ಸುದ್ದಿ. ಕೋಟೆಯಲ್ಲಿ ಅವನಿದ್ದ ನಾಲ್ಕು ದಿನಗಳ ಅವಧಿಯಲ್ಲಿ ಗೂಢಚಾರರು ಎರು ಬಾರಿ ಸುದ್ದಿ ತಂದಿದರು, ಎರಡೂ ಕೆಟ್ಟ ಸುದ್ದಿಗಳೇ ಆಗಿದದವು.ಹತ್ತೊಂಬತ್ತರಲ್ಲಿ ಮುಂದುವರೆಯುವುದು]

|ಮುಂದುವರೆಯುವುದು |

‍ಲೇಖಕರು avadhi

February 10, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಾಮನಗರದತ್ತ.. ಕಾವ್ಯ ಯಾನ

ರಾಮನಗರದತ್ತ.. ಕಾವ್ಯ ಯಾನ

ಕಾವ್ಯ ಸಂಸ್ಕೃತಿ ಯಾನಜನರೆಡೆಗೆ ಕಾವ್ಯ ಮೂರನೇ ಕಾವ್ಯ ಯಾನವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಲಬುರಗಿಯ ನನ್ನೆಲ್ಲ ಗೆಳೆಯರಿಗೆ ಧನ್ಯವಾದಗಳು...

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

ನೀವಿಂಗ ಕರೆದರೆ ನಾ ಹೆಂಗಾ ಬರಬೇಕು..

-ಎಸ್. ಕೆ ಉಮೇಶ್ ** ಪೊರಕೆಯ ಹಾಡು ನಾಟಕ ಮೂರು ದಿನದಲ್ಲಿ ಉತ್ತರ ಕರ್ನಾಟಕದಲ್ಲಿ ನಾಲ್ಕು ಪ್ರದರ್ಶನಗಳು ಕಂಡಿವೆ. ನಾಲ್ಕನೇ ಪ್ರದರ್ಶನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This