ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಗಾಯಾಳು ಅವ್ದೀವ್

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

7

ಗಾಯಗೊಂಡಿದ್ದ ಅವ್ದೀವ್‌ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು – ಅದು ಮರದ ದಿಮ್ಮಿಗಳನ್ನು ಜೋಡಿಸಿ, ಮರದ ಹಲಗೆಗಳ ಚಾವಣಿ ಹೊದಿಸಿ ಕೋಟೆಯ ಹೆಬ್ಬಾಗಿಲ ಹತ್ತಿರ ನಿರ್ಮಿಸಿದ್ದ ಕಟ್ಟಡ. ಅದರಲ್ಲಿನ ಸಾಮಾನ್ಯ ವಾರ್ಡಿನಲ್ಲಿ ಖಾಲಿ ಇದ್ದ ಬೆಡ್ಡಿನ ಮೇಲೆ ಗಾಯಾಳುವನ್ನು ಮಲಗಿಸಿದರು. ಆ ವಾರ್ಡಿನಲ್ಲಿ ನಾಲ್ಕು ಜನ ರೋಗಿಗಳಿದ್ದರು. ಒಬ್ಬನು ಟೈಫಸ್ ಕಾರಣಕ್ಕೆ ಬಹಳ ಜ್ವರವಿದ್ದವನು, ಇನ್ನೊಬ್ಬ ಮುಖ ಬಿಳಿಚಿ, ಕಣ್ಣಿನ ಕೆಳಗೆ ಕಪ್ಪು ವರ್ತುಲ ಮೂಡಿದ್ದ ಮೈ ನಡುಕದ ಕಾಯಿಲೆಯವನು — ಮತ್ತೆ ಚಳಿ ಜ್ವರ ಬಂದೀತೆಂದು ಆತಂಕದಿಂದ ಕಾಯುತ್ತ ಒಂದೇ ಸಮ ಆಕಳಿಸುತ್ತಿದ್ದ. ಮೂರು ವಾರದ ಹಿಂದೆ ನಡೆಸಿದ ದಾಳಿಯಲ್ಲಿ ಗಾಯಗೊಂಡವರು ಇಬ್ಬರು — ಒಬ್ಬನ ಕೈಗೆ ಗಾಯವಾಗಿತ್ತು, ಅವನು ಓಡಾಡುತ್ತಿದ್ದ, ಇನ್ನೊಬ್ಬನಿಗೆ ಭುಜಕ್ಕೆ ಏಟು ಬಿದ್ದಿತ್ತು, ಮಂಚದ ಮೇಲೆ ಕೂತಿದ್ದ. ಟೈಫಸ್ ಬಂದಿದ್ದವನನ್ನು ಬಿಟ್ಟು ಉಳಿದವರೆಲ್ಲ ಹೊಸ ರೋಗಿಯನ್ನೂ ಅವನನ್ನು ಹೊತ್ತು ತಂದವರನ್ನೂ ಮುತ್ತಿದರು, ಪ್ರಶ್ನೆಗಳನ್ನು ಕೇಳಿದರು. 

’ಒಂದೊಂದು ಸಲ ಬಟಾಣಿ ಕಾಳು ಎರಚಿದ ಹಾಗೆ ಒಂದೇ ಸಮ ಗುಂಡು ಹಾರಿಸುತ್ತಾರೆ, ಯಾರಿಗೂ ಏನೂ ಅಗಲ್ಲ. ಈಗ ಹಾರಿದ್ದು ಬರೀ ಐದು ಗುಂಡು. ಇವನಿಗೆ ಈ ಗತಿ!’ ಎಂದು ಗಾಯಾಳುವನ್ನು ಕರೆತಂದವರಲ್ಲಿ ಒಬ್ಬ ಹೇಳಿದ.  

’ಅವರವರ ಹಣೆಯಲ್ಲಿ ಬರೆದದ್ದು ಆಗತ್ತೆ!’

ಅವನನ್ನು ಮಂಚದ ಮೇಲೆ ಮಲಗಿಸುತ್ತಿದ್ದಾಗ ನೋವು ತಡೆಯಲು ಪ್ರಯತ್ನಪಡುತ್ತಾ ಅವ್ದೀವ್‌ ಜೋರಾಗಿ ನರಳಿದ. ಮಲಗಿಸಿದ ಮೇಲೆ ನರಳಾಟ ನಿಲ್ಲಿಸಿ, ಹುಬ್ಬು ಗಂಟಿಕ್ಕಿ ಕಾಲು ಒಂದೇ ಸಮ ಒದೆಯುತ್ತ, ಗಾಯದ ಮೇಲೆ ಕೈ ಒತ್ತಿ ಹಿಡಿದು ಸುಮ್ಮನೆ ಕಣ್ಣುಬಿಟ್ಟು ಒಂದೇ ಕಡೆ ದಿಟ್ಟಿಸುತ್ತಿದ್ದ. 

ಡಾಕ್ಟರು ಬಂದು, ‘ಪೇಶೆಂಟನ್ನು ಪಕ್ಕಕ್ಕೆ ಹೊರಳಿಸಿ,’ ಅಂದರು. ಬುಲೆಟ್ಟು ರೋಗಿಯ ದೇಹವನ್ನು ತೂರಿಕೊಂಡು ಹೋಗಿದೆಯೋ ಎಂದು ನೋಡಿದರು. 

’ಏನಿದು?’ ಪೇಶೆಂಟಿನ ಬೆನ್ನ ಮೇಲೆ ತೊಡೆಯ ಹಿಂಬದಿಯಲ್ಲಿ ಇದ್ದ ಗಾಯದ ಬಿಳಿಯ ಗುರುತು ತೋರುತ್ತ ಡಾಕ್ಟರು ಕೇಳಿದರು. 

’ಬಹಳ ಹಿಂದೆ ಆಗಿದ್ದ ಗಾಯ, ಯುವರ್ ಆನರ್!’ ಅವ್ದೀವ್‌ ನರಳುತ್ತ ಉತ್ತರ ಕೊಟ್ಟ. 

ಅವ್ದೀವ್‌ ಕುಡಿದು ದುಡ್ಡು ಹಾಳು ಮಾಡಿದ್ದ ಅನ್ನುವ ಕಾರಣಕ್ಕೆ ಅವನಿಗೆ ವಿಧಿಸಿದ್ದ ಚಡಿ ಏಟುಗಳ ಗುರುತು ಅವು. ಅವ್ದೀವ್‌ನನ್ನು ಮತ್ತೆ ಹೊರಳಿಸಿದರು. ಡಾಕ್ಟರು ಹೊಟ್ಟೆಯನ್ನು ತಡಕಿ ಬುಲೆಟ್ಟನ್ನು ಪತ್ತೆಮಾಡಿದರೂ ಹೊರಕ್ಕೆ ತೆಗೆಯಲಾಗಲಿಲ್ಲ. ಗಾಯಕ್ಕೆ ಡ್ರೆಸಿಂಗ್ ಮಾಡಿ, ಅದಕ್ಕೊಂದು ಪ್ಲಾಸ್ಟರ್ ಹಾಕಿ ಹೊರಟು ಹೋದ. ಡಾಕ್ಟರು ಹೊಟ್ಟೆಯನ್ನು ತಡಕುತ್ತಿದ್ದಷ್ಟೂ ಹೊತ್ತು ಅವ್ದೀವ್‌ ಹಲ್ಲು ಕಚ್ಚಿ ಕಣ್ಣು ಮುಚ್ಚಿ ಮಲಗಿದ್ದ. ಡಾಕ್ಟರು ಹೋದ ಮೇಲೆ ಕಣ್ಣು ತೆರೆದು ಬೆರಗಾದವನ ಹಾಗೆ ಸುತ್ತಲೂ ನೋಡಿದ. ಕಣ್ಣು ಮಿಕ್ಕ ಪೇಶಂಟುಗಳನ್ನು, ಡಾಕ್ಟರನ ಆರ್ಡರ್ಲಿಯನ್ನು ನೋಡಿದರೂ ಯಾರನ್ನೂ ನೋಡುತಿದ್ದ ಹಾಗಿರಲಿಲ್ಲ. ಬೇರೇನೋ ಸಂಗತಿ ಅವನಿಗೆ ಬೆರಗು ಮೂಡಿಸಿತ್ತು. 

ಅವನ ಗೆಳೆಯರು ಪಾನೋವ್, ಸೆರೋಗಿನ್, ಇಬ್ಬರೂ ಬಂದರು. ಅವ್ದೀವ್ ಮಾತ್ರ ಅದೇ ಭಂಗಿಯಲ್ಲಿ ಅದೇ ಬೆರಗಿನ ನೋಟ ಬೀರುತ್ತ ಮಲಗಿದ್ದ. ಕಣ್ಣು ಗೆಳೆಯರನ್ನು ನೋಡುತಿದ್ದರೂ ಅವರ ಗುರುತು ಹಿಡಿಯುವುದಕ್ಕೆ ಬಹಳ ಹೊತ್ತು ಬೇಕಾಯಿತು. 

’ಹೇಯ್, ಪೀಟರ್ ಅವ್ದೀವ್, ಮನೆಗೆ ಏನಾದರೂ ಸುದ್ದಿ ಕಳಿಸುವುದಿದೆಯಾ?’ ಪಾನೋವ್ ಕೇಳಿದ. 

ಅವ್ದೀವ್‌ನ ಕಣ್ಣು ಪಾನೋವ್‌ನನ್ನೇ ದಿಟ್ಟಿಸಿದ್ದರೂ ಮಾತು ಮಾತ್ರ ಆಡಲಿಲ್ಲ.

’ಮನೇಗೆ ಏನಾದರೂ ಸುದ್ದಿ ಕಳಿಸಬೇಕಾ ಅಂತ ಕೇಳಿದೆ!’ ಪಾನೋವ್ ಮತ್ತೆ ಅದನ್ನೇ ಹೇಳುತ್ತ ಅವ್ದೀವ್‌ನ ತಣ್ಣನೆಯ ಉದ್ದ ಕೈಯನ್ನು ಮುಟ್ಟಿದ. 

ಅವ್ದೀವ್‌ಗೆ ಎಚ್ಚರ ಮೂಡಿದ ಹಾಗಿತ್ತು. 

’ಆಹ್…ಪಾನೋವ್!’

’ಹ್ಞೂಂ. ನಾನೇ…ಬಂದಿದೇನೆ! ಮನೆಗೆ ಏನಾದರೂ ಹೇಳಿ ಕಳಿಸಬೇಕಾ? ನೀನು ಹೇಳಿದರೆ ಸೆರೋಗಿನ್ ಕಾಗದ ಬರೀತಾನೆ.’

’ಸೆರೋಗಿನ್…’ ಅನ್ನುತ್ತ ಅವ್ದೀವ್ ಕಷ್ಟ ಪಡುತ್ತಾ ಸೆರೊಗಿನ್‌ನತ್ತ ಕಣ್ಣು ಹೊರಳಿಸಿದ. ’ಬರೀತೀಯಾ?…ಸರಿ. ಹೀಗೆ ಬರಿ: ’ನಿನ್ನ ಮಗ ಪೀಟರ್ ನೀವೆಲ್ಲ ದೀರ್ಘ ಕಾಲ ಬದುಕಿ ಎಂದು ಆಜ್ಞೆ ಮಾಡಿದ್ದಾನೆ. ಅವನಿಗೆ ತನ್ನ ಅಣ್ಣನ ಬಗ್ಗೆ ಹೊಟ್ಟೆಯ ಕಿಚ್ಚಿತ್ತು…’ ಅಂದು ಸ್ವಲ್ಪ ತಡೆದ. ’ನಿಮಗೆ ಆ ವಿಚಾರ ಇವತ್ತು ಬೆಳಿಗ್ಗೆ ಹೇಳಿದ್ದೆ ಅಲ್ಲವಾ…’  ಗೆಳೆಯರಿಗೆ ಹೇಳಿದ.  ಆಮೇಲೆ, ’ಬರಿ…ಈಗ ಪೀಟರ್ ಖುಷಿಯಾಗಿದಾನೆ. ಅವನ ಬಗ್ಗೆ ಚಿಂತೆ ಮಾಡಬೇಡಿ. ಅವನು ಬದುಕಲು ಬಿಡಿ. ದೇವರು ಅವನ ಇಚ್ಛೆ ನೆರವೇರಿಸಲಿ. ನನಗೆ ಬಹಳ ಸಂತೋಷವಾಗಿದೆ!’ ಅಂತ ಬರಿ.  

ಇಷ್ಟು ಹೇಳಿ ಬಹಳ ಹೊತ್ತು ಸುಮ್ಮನಿದ್ದ. ಕಣ್ಣು ಪಾನೋವ್‌ನನ್ನು ನೋಡುತ್ತಿದ್ದವು. 

’ನಿನ್ನ ಪೈಪು ಸಿಕ್ಕಿತಾ?’ ತಟ್ಟನೆ ಕೇಳಿದ. ಪಾನೋವ್ ಉತ್ತರ ಹೇಳಲಿಲ್ಲ. 

’ನಿನ್ನ ಪೈಪು…ನಿನ್ನ ಪೈಪು! ಸಿಕ್ಕಿತಾ ಅಂತ ಕೇಳಿದೆ…’ ಅವ್ದೀವ್‌ ಮತ್ತೆ ಕೇಳಿದ. 

’ನನ್ನ ಚೀಲದಲ್ಲಿತ್ತು.’ 

’ಕರೆಕ್ಟು!…ಸರಿ, ನನಗೊಂದು ಕ್ಯಾಂಡಲ್ ಕೊಡಿ ನಾನು ಸಾಯತೇನೆ…’ ಅಂದ ಅವ್ದೀವ್.

ಅದೇ ಹೊತ್ತಿಗೆ ಪೋಲ್ಟರಾಟ್ಸ್‌ಕಿ ತನ್ನ ತುಕಡಿಯ ಸೈನಿಕನನ್ನು ನೋಡಲು ಒಳಕ್ಕೆ ಬಂದ.

’ಹೇಗಿದೆ, ಬಾಯ್! ತುಂಬಾ ಏಟಾಗಿದೆಯಾ?’ ಅಂದ. 

ಅವ್ದೀವ್ ಕಣ್ಣು ಮುಚ್ಚಿದ. ಇಲ್ಲ ಅನ್ನುವ ಹಾಗೆ ತಲೆ ಆಡಿಸಿದ. ಅವನ ಅಗಲ ಮುಖ ಬಿಳಿಚಿತ್ತು, ಬಿಗಿದಿತ್ತು. ಉತ್ತರವನ್ನೇನೂ ಹೇಳದೆ ’ಕ್ಯಾಂಡಲು ತೆಗೆದುಕೊಂಡು ಬಾ, ನಾನು ಸಾಯತೇನೆ,’ ಎಂದು ಪಾನೋವ್‌ಗೆ ಹೇಳಿದ. 

ಮೇಣದ ಬತ್ತಿಯನ್ನು ತಂದು ಅವನ ಕೈಗಿಟ್ಟರು. ಬೆರಳು ಮಡಿಸುವುದಕ್ಕಾಗಲಿಲ್ಲ. ಹಾಗಾಗಿ ಅವನ ಬೆರಳುಗಳ ನಡುವೆ ಅದನ್ನು ಇರಿಸಿ ತಾವೇ ಹಿಡಿದುಕೊಂಡರು. 

ಪೋಲ್ಟರಾಟ್ಸ್‌ಕಿ ಹೊರಟು ಹೋದ. ಐದು ನಿಮಿಷದ ನಂತರ ಆರ್ಡರ್ಲಿಯು ಅವ್ದೀವ್‌ನ ಎದೆಗೆ ಕಿವಿ ಇಟ್ಟು ಕೇಳಿ, ’ಎಲ್ಲಾ ಮುಗಿಯಿತು!’ ಅಂದ. 

ಟಿಟ್ಲಿಸ್‌ಗೆ ಕಳಿಸಿದ ವರದಿಯಲ್ಲಿ ಅವ್ದೀವ್‌ನ ಸಾವನ್ನು ಹೀಗೆ ವಿವರಿಸಲಾಗಿತ್ತು-

’೨೩ ನವೆಂಬರ್ – ಕುರಿನ್ ರೆಜಿಮೆಂಟಿನ ಎರಡು ಕಂಪನಿಗಳು ಕೋಟೆಯಿಂದ ಹೊರಟು ಸೌದೆ ಕಡಿಯಲು ತೆರಳಿದವು. ಮಧ್ಯಾಹ್ನದ ಹೊತ್ತಿನಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದ ಗುಡ್ಡಗಾಡು ಜನ ಮರ ಕಡಿಯುತ್ತಿದ್ದ ಸೈನಿಕರ ಮೇಲೆ ದಾಳಿ ನಡೆಸಿದರು. ನಮ್ಮ ಗುರಿಕಾರರು ಹಿಂದೆ ಸರಿಯುತ್ತಿದ್ದರು ಆದರೆ ೨ಎ ಕಂಪನಿಯ ಸೈನಿಕರು ಬಯೊನೆಟ್ ದಾಳಿ ನಡೆಸಿ ಗುಡ್ಡಗಾಡು ಜನರನ್ನು ಹಿಮ್ಮೆಟ್ಟಿಸಿದರು. ಈ ಕದನದಲ್ಲಿ ಇಬ್ಬರು ಸೈನಿಕರಿಗೆ ಸಣ್ಣಪುಟ್ಟ ಗಾಯಗಳಾದವು, ಒಬ್ಬ ಸತ್ತು ಹೋದ. ಗುಡ್ಡಗಾಡು ಜನರಲ್ಲಿ ಸುಮಾರು ನೂರು ಜನರನ್ನು ನಮ್ಮ ಸೈನಿಕರು ಕೊಂದರು, ಅನೇಕರನ್ನು ಗಾಯಗೊಳಿಸಿದರು.’

| ಮುಂದುವರೆಯುವುದು |

ಟಿಪ್ಪಣಿ:

  • ಅವ್ದೀವ್—5ನೆಯ ಅಧ್ಯಾಯದಲ್ಲಿ ಗುಂಡೇಟು ತಿಂದ ಸೈನಿಕ
  • ಪಾನೋವ್, ಸೆರೋಗಿನ್-ಅವನ ಸೈನಿಕ ಮಿತ್ರರು
  • ’ನಿನ್ನ ಮಗ ಪೀಟರ್ ನೀವೆಲ್ಲ ದೀರ್ಘ ಕಾಲ ಬದುಕಿ ಎಂದು ಆಜ್ಞೆ ಮಾಡಿದ್ದಾನೆ.’ ಈ ವಾಕ್ಯವನ್ನು ಬರೆಯುವ ಮೂಲಕ ರಶಿಯದ ರೈತರು ಸಾವಿನ ಸುದ್ದಿ ತಿಳಿಸುವ ಪರಿಪಾಠವಿತ್ತು.
  • ಚಿತ್ರಗಳು
  • ಸೈನ್ಯದ ಆಸ್ಪತ್ರೆ

‍ಲೇಖಕರು Admin

November 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: