ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಕ್ಕಿ ಹಾಡು, ಕತ್ತರಿಸಿ ಬಿದ್ದ ಥಿಸಲ್‌ ಮರ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

25

ಹಾಜಿ ಮುರಾದ್ ಸುತ್ತಮುತ್ತಲ ಜಾಗದಲ್ಲಿ ಸವಾರಿ ಹೋಗುವುದಕ್ಕೆ ಅವಕಾಶವಿತ್ತು. ಅವನು ಎಲ್ಲಿ ಹೋದರೂ ಕೊಸಾಕ್‍ಗಳ ಕಾವಲು ಇರುತಿತ್ತು. ಕೊಸಾಕ್‍ ಪಡೆಯ ಅರ್ಧ, ಅಂದರೆ ಇಪ್ಪತ್ತೈದು ಜನ ಮಾತ್ರ ನುಖಾದಲ್ಲಿದ್ದರು. ಅವರಲ್ಲಿ ಹತ್ತು ಜನ ಅಧಿಕಾರಿಗಳ ಕೆಲಸಕ್ಕೆ ಬೇಕಾಗಿತ್ತು, ಹಾಗಾಗಿ ಹತ್ತು ಜನರನ್ನು ಹಾಜಿ ಮುರಾದ್‍ನ ಕಾವಲಿಗೆ ಕಳಿಸುತಿದ್ದರು. (ಮೇಲಿನಿಂದ ಬಂದ ಆಜ್ಞೆಯ ಪ್ರಕಾರ) ಅವರೇ ಹತ್ತು ಜನ ಕಾವಲಿಗೆ ದಿನವೂ ಹೋಗಬೇಕಾಗಿತ್ತು. ಹಾಗಾಗಿ ಮೊದಲ ದಿನ ಹತ್ತು ಜನರ ಕಾವಲು ಪಡೆ ಕಳಿಸಿದ ಮೇಲೆ ಮರುದಿನದಿಂದ ದಿನಕ್ಕೆ ಬಿಟ್ಟು ದಿನ ಐದೈದು ಕಾವಲಿನವರನ್ನು ಕಳಿಸುವ ವ್ಯವಸ್ಥೆಯಾಯಿತು. ಹಾಜಿ ಮುರಾದ್ ತನ್ನ ಜೊತೆಯಲ್ಲಿ ಎಲ್ಲಾ ನೌಕರರನ್ನೂ ಕರಕೊಂಡು ಹೋಗಬಾರದು ಅನ್ನುವ ಶರತ್ತು ಹಾಕಿದ್ದರು. ಆದರೆ 25ನೆಯ ತಾರೀಕು ಅವನ ಜೊತೆಯಲ್ಲಿ ಐವರೂ ನೌಕರರು ಹೊರಟಿದ್ದರು. ಅವನು ಕುದುರೆ ಏರಿದಾಗ ಈ ಸಂಗತಿಯನ್ನು ಗಮನಿಸಿದ ಕಮಾಂಡರ್ ‘ಹೀಗೆ ಎಲ್ಲರನ್ನೂ ಕರಕೊಂಡು ಹೋಗಬಾರದು,’ ಅಂತ ಕೂಗಿ ಹೇಳಿದ. ಅವನು ಕೂಗಿದ್ದು ಕೇಳಿಸಲಿಲ್ಲ ಅನ್ನುವ ಹಾಗೆ ಹಾಜಿ ಮುರಾದ್ ಕುದುರೆ ಮುಂದೆ ನಡೆಸಿದ. ಕಮಾಂಡರ್ ಒತ್ತಾಯ ಮಾಡಲು ಹೋಗಲಿಲ್ಲ. ಕೊಸಾಕ್‍ಗಳ ಜೊತೆಯಲ್ಲಿ ನಜರೋವ್‌ ಅನ್ನುವ ಹೆಸರಿನ ನಾನ್ ಕಮಿಶನ್ಡ್ ಅಧಿಕಾರಿ ಇದ್ದ. ಅವನಿಗೆ ಕ್ರಾಸ್ ಆಫ್ ಸೇಂಟ್ ಜಾರ್ಜ್ ಶೌರ್ಯ ಪ್ರಶಸ್ತಿ ಬಂದಿತ್ತು. ಅವನು ಗುಲಾಬಿಯ ಹಾಗೆ ನಳನಳಿಸುತ್ತಿದ್ದ ಆರೋಗ್ಯವಂತ ಯುವಕ. ತಲೆಯ ತುಂಬ ಕಂದು ಕೂದಲಿತ್ತು. ಅವನು ಓಲ್ಡ್ ಬಿಲೀವರ್ಸ್ ಪಂಥಕ್ಕೆ ಸೇರಿದ್ದ ಬಡ ಕುಟುಂಬವೊಂದರ ಹಿರಿಯ ಮಗ. ಅಪ್ಪ ಇಲ್ಲದೆ ಬೆಳೆದಿದ್ದ, ವಯಸ್ಸಾದ ತಾಯಿ, ಮೂವರು ಸೋದರಿಯರು, ಇಬ್ಬರು ಸೋದರರ ಜವಾಬ್ದಾರಿ ಅವನ ಮೇಲಿತ್ತು.

‘ಹುಷಾರು, ನಜರೋವ್‌, ಅವರ ಹತ್ತಿರವೇ ಇರಬೇಕು,’ ಕಮಾಂಡರ್ ಕೂಗಿ ಹೇಳಿದ.
‘ಎಸ್, ಸರ್!’ ಅನ್ನುತ್ತ ನಜರೋವ್‌, ಬೆನ್ನ ಮೇಲಿನ ಬಂದೂಕು ಸರಿಮಾಡಿಕೊಂಡಿದ್ದ. ಅವನ ದಷ್ಟಪುಷ್ಟ ಕುದುರೆ ಚುರುಕಾಗಿ ಓಡುತಿತ್ತು. ಅವನ ಹಿಂದೆ ನಾಲ್ಕು ಜನ ಕೊಸಾಕ್‍ಗಳು ಹೊರಟರು.ಥೆರಪಾಂಟೋವ್‌, ಎತ್ತರಕ್ಕೆ, ತೆಳ್ಳಗೆ ಇದ್ದ ಕಳ್ಳ (ಅವನೇ ಗಮ್ಜಾಲೋನ ಗನ್ ಪೌಡರ್ ಕದ್ದಿದ್ದವನು), ಇಗ್ನಟೋವ್‌, ಸದಾ ತನ್ನ ಶಕ್ತಿಯ ಬಗ್ಗೆ ಕೊಚ್ಚಿಕೊಳ್ಳುತಿದ್ದವನು, ಆಗಲೇ ಸೇವೆಯ ಕೊನೆಯ ಅವಧಿಯಲ್ಲಿದ್ದ ದೃಢಕಾಯ, ವಯಸಾದ ರೈತ; ಮೆಷ್ಕಿನ್‌, ಎಲ್ಲರೂ ನೋಡಿ ನಗುತ್ತಿದ್ದ ಬಡಕಲು ಮೈಯ, ಚೆಲುವಾದ ಕೂದಲಿನ ಯುವಕ, ತಾಯಿಯ ಒಬ್ಬನೇ ಮಗ, ಯಾವಾಗಲೂ ಸ್ನೇಹಪೂರ್ಣವಾಗಿ, ಖುಷಿಯಾಗಿ ಇರುತಿದ್ದವನು ಇವರೇ ಆ ನಾಲ್ಕು ಜನ.
ಬೆಳಗ್ಗೆ ಕವಿದಿದ್ದ ಕಾವಳ ಬಿಸಿಲೇರಿದ ಹಾಗೆ ನಿಧಾನವಾಗಿ ಕರಗಿತ್ತು. ಗರಿಮುರಿಯದ ಕನ್ನೆ ಹುಲ್ಲು ತುಂಬಿದ ಬಯಲು, ಚಿಗುರಿದ್ದ ಎಳೆಯ ಗಿಡಗಳು, ಜೋರಾಗಿ ಹರಿಯುತಿದ್ದ ಹೊಳೆಯ ಸಪ್ಪಳ ಇವೆಲ್ಲ ರಸ್ತೆಯ ಎಡಬದಿಯಲ್ಲಿ ಕಣ್ಣು, ಕಿವಿಗಳನ್ನು ತುಂಬುತಿದ್ದವು. ಎಳೆ ಬಿಸಿಲು ಹರಡಿತ್ತು.
ಹಾಜಿ ಮುರಾದ್ ನಿಧಾನವಾಗಿ ಸಾಗಿದ್ದ. ಅವನ ಹಿಂದೆ ಕೊಸಾಕ್‍ಗಳು, ಅವರ ಹಿಂದೆ ಅವನ ಸೇವಕರು ಬರುತಿದ್ದರು. ಅವರು ಅದೇ ರಸ್ತೆ ಹಿಡಿದು ಕೋಟೆಯಾಚೆಗೆ ಬಂದರು. ತಲೆಯ ಮೇಲೆ ಬುಟ್ಟಿ ಹೊತ್ತ ಹೆಂಗಸರು, ಗಾಡಿ ಹೊಡೆದುಕೊಂಡು ಹೋಗುತಿದ್ದ ಸೈನಿಕರು, ಎಮ್ಮೆಗಳು ಎಳೆದುಕೊಂಡು ಹೋಗುತ್ತಿದ್ದ ಕಿರುಗುಡುವ ಬಂಡಿಗಳು ಅವರಿಗೆ ಸಿಕ್ಕವು. ಸುಮಾರು ಒಂದೂವರೆ ಮೈಲು ಸಾಗಿದ ಮೇಲೆ ಹಾಜಿ ಮುರಾದ್ ತನ್ನ ಬಿಳಿಯ ಕಬರ್ಡಾ ಕುದುರೆಯ ಬೆನ್ನು ಚಪ್ಪರಿಸಿದ. ಕುದುರೆಯ ವೇಗ ಸ್ವಲ್ಪ ಹೆಚ್ಚಿತು. ನೌಕರರು, ಕೊಸಾಕ್‍ಗಳು ಕೂಡ ಅವನ ಜೊತೆ ಕುಕ್ಕುಲೋಟದಲ್ಲಿ ಸಾಗಬೇಕಾಯಿತು.

‘ಎಂಥಾ ಒಳ್ಳೇ ಕುದುರೆ! ಅವನೇನಾದರೂ ನಮ್ಮ ಶತ್ರು ಅಂತಾಗಿದ್ದಿದ್ದರೆ ಅವನನ್ನ ಬೀಳಿಸಿ ಕುದುರೆ ಲಪಟಾಯಿಸತಿದ್ದೆ!’ ಅಂದ ಥೆರಪಾಂಟೋವ್‌.

‘ಹ್ಞೂಂ. ಟಿಫ್ಲಿಸ್‍ನಲ್ಲಿದ್ದಾಗ ಅವನ ಕುದುರೆಗೆ ಮುನ್ನೂರು ರೂಬಲ್ ಕೊಡುತೇವೆ ಅನ್ನತಿದ್ದರು.’
‘ನನ್ನ ಕುದುರೆ ಮೇಲೇ ಅವನನ್ನ ಹಿಂದಕ್ಕೆ ಹಾಕತೇನೆ ಬೇಕಾದರೆ,’ ಅಂದ ನಜರೋವ್‌.
‘ನೀನು? ಅವನನ್ನ? ಆಗೋದಲ್ಲ, ಹೋಗೋದಲ್ಲ ಬಿಡು!’
ಹಾಜಿ ಮುರಾದ್ ವೇಗ ಇನ್ನಷ್ಟು ಹೆಚ್ಚಿಸಿದ್ದ.
‘ಹೇಯ್, ಕುನಾಕ್, ಹಾಗೆಲ್ಲ ಹೋಗೋ ಹಾಗಿಲ್ಲ. ಸ್ಟಡೀ ಸ್ಟಡೀ!’ ಎಂದು ಕೂಗುತ್ತ ನಜರೋವ್‌ ಹಾಜಿ ಮುರಾದ್‍ನನ್ನು ದಾಟಿ ಹೋಗಲು ನೋಡಿದ.
ತಿರುಗಿ ನೋಡಿದ ಹಾಜಿ ಮುರಾದ್ ಏನೂ ಮಾತಾಡದೆ ಅದೇ ವೇಗದಲ್ಲೇ ಸಾಗಿದ.

‘ಏನೋ ಕಿತಾಪತಿ ಮಾಡತಾರೆ ಈ ದೆಯ್ಯಗಳು!’ ಅಂದ ಇಗ್ನಟೋವ್‌.
‘ಹೇಗೆ ಸ್ಪೀಡಾಗಿ ಹೋಗತಾರೆ ನೋಡು.’
ಹೀಗೇ ಸುಮಾರು ಒಂದು ಮೈಲು ದೂರ ಬೆಟ್ಟಗಳ ದಿಕ್ಕಿಗೆ ಸಾಗಿದರು.
‘ಹಾಗೆಲ್ಲ ಮಾಡೋ ಹಾಗಿಲ್ಲಾ!’ ನಜರೋವ್‌ ಗಟ್ಟಿಯಾಗಿ ಚೀರಿದ.
ಹಾಜಿ ಮುರಾದ್ ಉತ್ತರ ಕೊಡಲಿಲ್ಲ. ಅವನ ಕುದುರೆ ಈಗ ನಾಗಾಲೋಟದಲ್ಲಿತ್ತು.

‘ಮೋಸ! ನೀನು ತಪ್ಪಿಸಿಕೊಳ್ಳಕ್ಕಾಗಲ್ಲ!’ ನಜರೋವ್‌ ಚೀರಿದ. ಅವನು ರೇಗಿದ್ದ. ಕುದುರೆಗೆ ಚಾವಟಿಯಿಂದ ಹೊಡೆದ. ರಿಕಾಪಿನ ಮೇಲೆ ಕಾಲೂರಿ ನಿಂತು ಮೈ ಮುಂದೆ ಬಾಗಿಸಿ, ಕುದುರೆಯನ್ನು ಪೂರಾ ವೇಗದಲ್ಲಿ ಓಡಿಸುತ್ತ ಹಾಜಿ ಮುರಾದ್‍ನ ಬೆನ್ನು ಹತ್ತಿ ಧಾವಿಸಿದ.

ಆಕಾಶ ಥಳಥಳಿಸುತಿತ್ತು. ಗಾಳಿ ಸ್ವಚ್ಛವಾಗಿತ್ತು, ನಜರೋವ್‌ ನ ಮನಸಿನ ತುಂಬ ಖುಷಿ ತುಂಬಿತ್ತು, ಕುದುರೆಯ ಜೊತೆ ತಾನೂ ಒಂದಾದವನ ಹಾಗೆ ಹಾಜಿ ಮುರಾದ್‍ನ ಹಿಂದೆ ತೇಲಿ ಹೋಗುತಿದ್ದ. ಏನಾದರೂ ಕೆಟ್ಟ ಅನಾಹುತ ಆದೀತು ಅನ್ನುವ ಕಲ್ಪನೆಯೂ ಅವನಿಗಿರಲಿಲ್ಲ.

ಹಾಜಿ ಮುರಾದ್ ಒಂದೊಂದು ಹೆಜ್ಜೆ ಹತ್ತಿರವಾದ ಹಾಗೂ ಅವನ ಸಂತೋಷ ಹೆಚ್ಚುತಿತ್ತು.
ಬೆನ್ನ ಹಿಂದೆಯೇ ದೊಡ್ಡ ಕುದುರೆಯ ಹೆಜ್ಜೆ ಸಪ್ಪಳ ಕೇಳುತ್ತಾ ಇನ್ನೇನು ನನ್ನನ್ನು ಹಿಂದೆ ಹಾಕುತ್ತಾನೆ ಅವನು ಅನ್ನುವುದನ್ನು ತಿಳಿದ ಹಾಜಿ ಮುರಾದ್ ಬಲಗೈಯಲ್ಲಿ ಪಿಸ್ತೂಲು ಹಿಡಿದು, ಎಡದ ಕೈಯಲ್ಲಿ ಕಬರ್ಡಾ ಕುದುರೆಯ ಲಗಾಮು ಸ್ವಲ್ಪವೇ ಎಳೆದ. ಬೆನ್ನ ಹಿಂದೆ ಮತ್ತೊಂದು ಕುದುರೆಯ ಗೊರಸಿನ ಸದ್ದು ಕೇಳಿ ಹಾಜಿ ಮುರಾದ್‍ನ ಕುದುರೆಯೂ ಉದ್ರಿಕ್ತವಾಗಿತ್ತು.
‘ನಿಲ್ಲು! ನಿಲ್ಲು!’ ಬಲು ಮಟ್ಟಿಗೆ ಹಾಜಿ ಮುರಾದ್‍ನ ಪಕ್ಕದಲ್ಲೇ ಕುದುರೆ ಓಡಿಸುತಿದ್ದ ನಜರೋವ್‌ ಕೂಗಿದ. ಹಾಜಿ ಮುರಾದ್‍ನ ಕುದುರೆಯ ಲಾಗಮು ಹಿಡಿದು ನಿಲ್ಲಿಸಲು ಕೈ ಚಾಚಿದ. ಲಗಾಮು ಅವನ ಕೈಗೆ ನಿಲುಕುವ ಮೊದಲೇ ಗುಂಡು ಹಾರಿತ್ತು. ‘ಏನು! ಏನು ಮಾಡಿದೇ!’ ನಜರೋವ್‌ ಚೀರುತ್ತ ತನ್ನ ಎದೆಯನ್ನು ಭದ್ರವಾಗಿ ಒತ್ತಿಕೊಂಡ.
‘ಬಿಡಬೇಡಿ, ಹಿಡೀರಿ!’ ಅನ್ನುತಿದ್ದ ಹಾಗೇ ಅವನ ತಲೆ ಮುಂದಕ್ಕೆ ಬಾಗಿತು.

ಬೆಟ್ಟಗಾಡಿನ ನೌಕರರು ಸೈನಿಕರಿಗಿಂತ ಮೊದಲೇ ಆಯುಧಗಳನ್ನು ಹಿರಿದಿದ್ದರು. ಕೊಸಾಕ್‍ಗಳತ್ತ ಗುಂಡು ಹಾರಿಸಿದರು. ಕತ್ತಿಯಲ್ಲಿ ಅವರನ್ನು ಕೊಚ್ಚಿದರು.
ನಜರೋವ್‌ ಕುದುರೆಯ ಕತ್ತಿಗೆ ಜೋತುಬಿದ್ದಿದ್ದ. ಕುದುರೆ ಮೊಗಚಿಕೊಂಡಿತು. ಇಗ್ನಟೋವ್‌ನ ಕುದುರೆ ಕೆಳಗೆ ಬಿತ್ತು, ಅವನ ಕಾಲು ಕುದುರೆಯ ಕೆಳಗೆ ಸಿಕ್ಕಿಬಿದ್ದಿತ್ತು. ಬೆಟ್ಟಗಾಡಿನ ಇಬ್ಬರು ಕುದುರೆಯಿಂದಳಿಯದೆ ಕತ್ತಿ ಬೀಸಿ ಅವನ ತಲೆ, ತೋಳು ಕತ್ತರಿಸಿದರು. ಪೆಟ್ರಕೋವ್‌ ಗೆಳೆಯನ ಸಹಾಯಕ್ಕೆ ಧಾವಿಸುತಿದ್ದ. ಎರಡು ಗುಂಡು, ಒಂದು ಅವನ ಬೆನ್ನಿಗೆ, ಇನ್ನೊಂದು ಅವನ ಪಕ್ಕೆಗೆ ಬಡಿದವು. ಅವನು ಮೂಟೆಯ ಹಾಗೆ ಕುದುರೆಯ ಮೇಲಿಂದ ಉರುಳಿ ಬಿದ್ದ.

ಮಿಷ್ಕಿನ್ ಕುದುರೆಯನ್ನು ತಿರುಗಿಸಿ ಕೋಟೆಯತ್ತ ಧಾವಿಸಿದ. ಖಾನೇಫಿ, ಬಾತಾ ಇಬ್ಬರೂ ಅವನನ್ನು ಅಟ್ಟಿಸಿಕೊಂಡು ಹೋದರು. ಅವನಾಗಲೇ ಬಹಳ ದೂರ ಹೋಗಿದ್ದ, ಅವರ ಕೈಗೆ ಸಿಗಲಿಲ್ಲ. ಇಬ್ಬರೂ ವಾಪಸು ಬಂದರು.

ಪೆಟ್ರಕೋವ್‌ ಅಂಗಾತ ಬಿದ್ದಿದ್ದ. ಅವನ ಹೊಟ್ಟೆ ಸೀಳಿತ್ತು. ಅವನ ಎಳೆಯ ಮುಖ ಆಕಾಶ ನೋಡುತಿತ್ತು. ಉಸಿರಿಗಾಗಿ ಅವನು ಮೀನಿನ ಥರ ಬಾಯಿ ಬಿಡುತ್ತಿದ್ದ.

ಇಗ್ನಟೋವ್‌ ಕತ್ತಿಯಲ್ಲಿ ಹೊಡೆದು ಗಮ್ಜಾಲೋನ ಕಥೆಯನ್ನು ಮುಗಿಸಿ, ನಜರೋವ್‌ನನ್ನೂ ಹೊಡೆದು ಬೀಳಿಸಿದ. ಸತ್ತು ಬಿದ್ದಿದ್ದವರ ತೋಟಾಗಳ ಚೀಲವನ್ನು ಬಾತಾ ಎತ್ತಿಕೊಂಡ. ನಜರೋವ್‌ನ ಕುದುರೆಯನ್ನು ಲಪಟಾಯಿಸಲು ಹೋದ ಖಾನೇಫಿ. ಹಾಜಿ ಮುರಾದ್ ಬೇಡ ಬಾ ಎಂದು ಅವನನ್ನು ಕರೆದು ರಸ್ತೆಯ ಮೇಲೆ ವೇಗವಾಗಿ ಸಾಗಿದ. ಅವನ ಮುರೀದ್‌ಗಳೂ ನಾಗಾಲೋಟದಲ್ಲಿ ಅವನ ಹಿಂದೆಯೇ ಸಾಗಿದರು. ಅವರ ಹಿಂದೆ ಓಡಿ ಬರುತಿದ್ದ ನಜರೋವ್‌ನ ಕುದುರೆಯನ್ನು ಬೆದರಿಸಿ ಓಡಿಸಿದರು. ಅವರು ಆಗಲೇ ನುಖಾದಿಂದ ಆರು ಮೈಲು ದೂರದಲ್ಲಿರುವ ಬತ್ತದ ಗದ್ದೆಗಳ ಹತ್ತಿರಕ್ಕೆ ಬಂದಿದ್ದರು. ಆಗ ಕೋಟೆಯ ಮೇಲಿನ ತೋಪು ಎಚ್ಚರಿಕೆಯ ಗುಂಡು ಹಾರಿಸಿದ ಸದ್ದು ಕೇಳಿಸಿತು.

ಹಾಜಿ ಮುರಾದ್ ತಪ್ಪಿಸಿಕೊಂಡ ಸುದ್ದ ಕೇಳಿದ ತಕ್ಷಣ, ‘ದೇವರೇ! ಏನಪ್ಪಾ ನನ್ನ ಗತೀ! ಎಂಥಾ ಕೆಲಸ ಮಾಡಿದಾ ಅವನೂ!’ ಅನ್ನುತ್ತ ಕೋಟೆಯ ಕಮಾಂಡರು ತಲೆಯ ಮೇಲೆ ಕೈ ಹೊತ್ತು ಕುಳಿತ. ಮೆಷ್ಕಿನ್‌ ಹೇಳಿದ ಕತೆ ಕೇಳಿ, ‘ಎಲ್ಲಾ ಸೇರಿ ನನ್ನ ಕಥೆ ಮುಗಿಸಿದರು! ದುಷ್ಟರು! ಅವನು ತಪ್ಪಿಸಿಕೊಳ್ಳಕೆ ಬಿಟ್ಟರು!’ ಅಂದ.

ಎಚ್ಚರಿಕೆಯ ಗುಂಡು ಹಾರಿಸಿದರು. ಎಲ್ಲೆಲ್ಲೂ ಎಚ್ಚರಿಕೆಯ ಗಂಟೆ ಬಾರಿಸಿದರು. ಕೋಟೆಯಲ್ಲಿದ್ದ ಕೊಸಾಕ್‍ಗಳನ್ನು ಮಾತ್ರವಲ್ಲ ರಶಿಯನ್ ಪರವಾಗಿದ್ದ ಎಲ್ಲ ಔಲ್‍ಗಳಲ್ಲಿದ್ದ ಖಾಸಗಿ ಸೈನಿಕರ ಪಡೆಗಳನ್ನೂ ಒಟ್ಟುಗೂಡಿಸಿದರು. ಜೀವಂತವಾಗಿಯಾಗಲೀ ಶವವಾಗಿಯಾಗಲೀ ಹಾಜಿ ಮುರಾದ್‍ನನ್ನು ಹಿಡಿದು ಕೊಟ್ಟವರಿಗೆ ಸಾವಿರ ರೂಬಲ್‍ಗಳ ಬಹುಮಾನ ಘೋಷಿಸಿದರು. ಹಾಜಿ ಮುರಾದ್ ತನ್ನ ಸಂಗಡಿಗರೊಡನೆ ಕೊಸಾಕ್‍ ಕಾವಲುಗಾರರಿಂದ ತಪ್ಪಿಸಿಕೊಂಡ ಎರಡು ಗಂಟೆಗಳೊಳಗೆ ಇನ್ನೂರಕ್ಕೂ ಹೆಚ್ಚು ಜನರ ಪಡೆ ಸಿದ್ಧವಾಯಿತು. ಮೇಲುಸ್ತುವಾರಿಯ ಅಧಿಕಾರಿಯ ಹಿಂದೆ ಎಲ್ಲರೂ ಹೊರಟು ತಪ್ಪಿಸಿಕೊಂಡವರನ್ನು ಹಿಡಿಯಲು ಧಾವಿಸಿದರು.

ಮುಖ್ಯ ರಸ್ತೆಯ ಮೇಲೇ ಕೆಲವು ಮೈಲು ಸಾಗಿದ ಮೇಲೆ ಹಾಜಿ ಮುರಾದ್ ಕುದುರೆಯನ್ನು ನಿಲ್ಲಿಸಿದ. ಕುದುರೆ ಏದುಸಿರು ಬಿಡುತಿತ್ತು. ಅದರ ಮೈಯೆಲ್ಲ ಬೆವರಿ ಅದರ ಬಿಳಿಯ ಮೈ ಈಗ ನಸುಗಪ್ಪಾಗಿ ಕಾಣುತಿತ್ತು.

ರಸ್ತೆಯ ಬಲಕ್ಕೆ ಬೆನೆರ್‌ಡೆಕ್‌ ಔಲ್‍ನ ಸಕ್ಲ್ಯಾಗಳು, ಮಿನಾರುಗಳು ಕಾಣುತಿದ್ದವು. ಎಡ ಬದಿಯಲ್ಲಿ ಹೊಲ ಗದ್ದೆಗಳಿದ್ದವು. ಅವುಗಳಾಚೆ ಹೊಳೆ ಹರಿಯುತಿತ್ತು. ಬೆಟ್ಟದ ದಾರಿ ಬಲಗಡೆಗೆ ಹೊರಳಿದ್ದರೂ ಹಾಜಿ ಮುರಾದ್ ಅದರ ವಿರುದ್ಧ ದಿಕ್ಕಿಗೆ ಎಡಕ್ಕೆ ಹೊರಳಿದ. ಅಟ್ಟಿಸಿಕೊಂಡು ಬರುವವರು ಬಲಕ್ಕೇ ಹೊರಳುತ್ತಾರೆಂದು ಅವನು ಊಹೆ ಮಾಡಿದ್ದ. ಅವನು ರಸ್ತೆಯನ್ನು ಬಿಟ್ಟು ಅಲಜಾನ್ ಹೊಳೆ ದಾಟಿ
ಅದರ ಇನ್ನೊಂದು ಬದಿಯಲ್ಲಿ ಮುಖ್ಯ ರಸ್ತೆಗೆ ಸೇರಿಕೊಂಡರೆ ಅಲ್ಲಿ ಯಾರೂ ಅವನ ನಿರೀಕ್ಷೆ ಮಾಡಿರುವುದಿಲ್ಲ, ಹಾಗಾಗಿ ಸಲೀಸಾಗಿ ಕಾಡಿನೊಳಕ್ಕೆ ಹೋಗಬಹುದು, ಮತ್ತೆ ಹೊಳೆಯನ್ನು ಇನ್ನೊಂದು ಸಲ ದಾಟಿ ಬೆಟ್ಟದ ದಾರಿ ಹಿಡಿದು ಸಾಗಬಹುದು ಅನ್ನುವುದು ಅವನ ಯೋಜನೆ.

ಹೀಗೆ ತೀರ್ಮಾನ ಮಾಡಿದವನೇ ಎಡಕ್ಕೆ ಹೊರಳಿದ. ಹೊರಳಿದ್ದು ಅಷ್ಟೇ. ಹೊಳೆಯನ್ನು ಮುಟ್ಟುವುದು ಅಸಾಧ್ಯವಾಗಿತ್ತು. ಅಲ್ಲಿಗೆ ತಲುಪಲು ಅವನು ದಾಟಬೇಕಾಗಿದ್ದ ಬತ್ತದ ಗದ್ದೆ ಬಯಲಿಗೆ ನೀರು ಹಾಯಿಸಿದ್ದರು. ಮಣ್ಣೆಲ್ಲ ಕೆಸರಾಗಿತ್ತು. ಕುದುರೆಗಳ ಕಾಲು ಕೆಸರಿನಲ್ಲಿ ಅರ್ಧದಷ್ಟು ಮುಳುಗುತಿದ್ದವು. ಹಾಜಿ ಮುರಾದ್ ಮತ್ತವನ ನೌಕರರು ಎಡಕ್ಕೊಮ್ಮೆ ಬಲಕ್ಕೊಮ್ಮೆ ಹೊರಳುತ್ತ ಒಣ ನೆಲ ಎಲ್ಲಿ ಸಿಕ್ಕೀತೋ ಎಂದು ತಡಕುತಿದ್ದರು. ಅವರಿದ್ದ ಗದ್ದೆಬಯಲಿಗೆ ಪೂರಾ ನೀರು ಹಾಯಿಸಿದ್ದರು. ಮಣ್ಣು ತಣಿಯುವಷ್ಟು ನೀರು ಕುಡಿದಿತ್ತು, ನೀರು ಇಂಗದೆ ನಿಂತಿತ್ತು. ಕೆಸರಲ್ಲಿ ಹೂತ ಕಾಲನ್ನು ಕುದುರೆಗಳು ಶಕ್ತಿ ಬಿಟ್ಟು ಮೇಲೆತ್ತುವಾಗ ಬಾಟಲಿಯಿಂದ ಮುಚ್ಚಳವನ್ನು ಕಿತ್ತಾಗ ಬರುವಂಥ ಸದ್ದಾಗುತಿತ್ತು. ನಾಕೈದು ಹೆಜ್ಜೆಗೆ ಒಂದೊಂದು ಸಾರಿ ನಿಂತು ಏದುಸಿರು ಬಿಡುತ್ತ ದಣಿವಾರಿಸಿಕೊಳ್ಳುತಿದ್ದವು ಕುದುರೆಗಳು.

ಹೀಗೆ ಹೆಣಗಾಡುತ್ತ ಸಾಗಿದರೂ ಮುಸ್ಸಂಜೆಯಾಗುತ್ತ ಬಂದರೂ ಅವರಿನ್ನೂ ಹೊಳೆಯ ಹತ್ತಿರಕ್ಕೆ ಹೋಗಿಯೇ ಇರಲಿಲ್ಲ. ಅವರ ಎಡದ ಬದಿಗೆ ಪೊದೆಗಳು ಬೆಳೆದ ತೆವರು ಇತ್ತು. ಆ ಪೊದೆಗಳ ಮಧ್ಯಕ್ಕೆ ಹೋಗಿ, ಕತ್ತಲಿಳಿಯುವರೆಗೂ ಅಲ್ಲಿ ಅಡಗಿದ್ದು ಕುದುರೆಗಳನ್ನು ಮೇಯಲು ಬಿಟ್ಟು ಅವಕ್ಕೂ ವಿಶ್ರಾಂತಿ ಕೊಡೋಣ ಎಂದು ಹಾಜಿ ಮುರಾದ್ ತೀರ್ಮಾನ ಮಾಡಿದ.
ಅಲ್ಲಿಗೆ ಹೋದರು, ಕುದುರೆಗಳನ್ನು ಮೇಯಲು ಬಿಟ್ಟು ತಾವು ತಂದಿದ್ದ ಬ್ರೆಡ್ಡು, ಗಿಣ್ಣ ತಿಂದರು. ರಾತ್ರಿಯಾಯಿತು. ಹೊಳೆಯುತಿದ್ದ ಚಂದ್ರ ಬೆಟ್ಟದ ಹಿಂದೆ ಮರೆಯಾದ. ಮತ್ತೆ ಅರೆಗತ್ತಲು ಕವಿಯಿತು. ಅಲ್ಲಿ ಬುಲ್‍ಬುಲ್ ಹಕ್ಕಿಗಳು ಹೇರಳವಾಗಿದ್ದವು. ಹಾಜಿ ಮುರಾದ್ ಮತ್ತವನ ಸೇವಕರು ಪೊದೆಗಳ ನಡುವೆ ಗದ್ದಲ ಮಾಡುತಿದ್ದಾಗ ಸುಮ್ಮನಿದ್ದ ಹಕ್ಕಿಗಳು ಅವರೀಗ ಸುಮ್ಮನಾದಾಗ ದನಿಯೆತ್ತಿ ತಮ್ಮ ಬಳಗವನ್ನು ಕರೆಯಲು ಶುರುಮಾಡಿದವು, ಹಾಡಿದವು.

ಇರುಳಿನ ಸದ್ದುಗಳನ್ನು ಆಲಿಸುವುದು ಪ್ರವೃತ್ತಿಯೇ ಆಗಿದ್ದ ಹಾಜಿ ಮುರಾದ್ ಸಹಜವಾಗಿಯೇ ಹಕ್ಕಿಗಳ ಚಿಲಿಪಿಲಿ ಕೇಳುತ್ತಾ ಹಿಂದಿನ ರಾತ್ರಿ ಅವನು ನೀರು ತರಲು ಹೋಗಿದ್ದಾಗ ಕೇಳಿದ್ದ ಹಮ್ಜಾದ್‌ನನ್ನು ಕುರಿತ ಹಾಡು ನೆನಪಿಗೆ ಬಂದಿತ್ತು. ಹಮ್ಜಾದ್‌ಗೆ ಬಂದ ಪರಿಸ್ಥಿತಿ ಯಾವ ಕ್ಷಣದಲ್ಲಾದರೂ ತನಗೇ ಎದುರಾಗಬಹುದು ಅನಿಸಿತು. ಹಾಗೇ ಆದರೆ ಅನ್ನುವ ಯೋಚನೆ ಬಂದು ತಟ್ಟನೆ ಅವನ ಮನಸು ಬಹಳ ಗಂಭೀರವೂ ಆಯಿತು. ಅವನು ಬುರ್ಕಾ ನಿಲುವಂಗಿಯನ್ನು ಹರಡಿ, ಪ್ರಾರ್ಥನೆಗೆ ಕೂತ. ಪ್ರಾರ್ಥನೆ ಮುಗಿಯುತಿದ್ದ ಹಾಗೇ ಯಾವುದೋ ಸದ್ದು ಅವರಿದ್ದ ಜಾಗದ ಹತ್ತಿರ ಹತ್ತಿರಕ್ಕೆ ಬರುತಿತ್ತು. ಕೆಸರಿನಲ್ಲಿ ಕುದುರೆಗಳ ನಡೆಯುತ್ತಿರುವ ಸದ್ದು ಅದು. ಚುರುಕು ಕಣ್ಣಿನ ಬಾತಾ ಅವರಿದ್ದ ಬೋರೆಯ ಅಂಚಿಗೆ ಓಡಿ ಹೋಗಿ ಕಣ್ಣು ಕಿರಿದು ಮಾಡಿ ಕತ್ತಲನ್ನು ದಿಟ್ಟಿಸಿದ. ನಡೆದು ಬರುತಿದ್ದ, ಕುದುರೆಗಳ ಮೇಲಿದ್ದ ಮನುಷ್ಯರ ಕಪ್ಪು ನೆರಳು ಕಂಡಿತು. ಮತ್ತೊಂದು ಬದಿಯಲ್ಲಿ ಖಾನೇಫಿ ಕೂಡ ಅಂಥದೇ ದೃಶ್ಯ ಕಂಡ. ಹಳ್ಳಿಯ ಜನತಾ ಸೈನಿಕರನ್ನು ಕೂಡಿಸಿಕೊಂಡು ಮಿಲಿಟರಿ ಕಮಾಂಡರ್ ಕರಗನೋವ್‌ ಬರುತಿದ್ದ.

‘ಸರಿ, ಹಾಗಾದರೆ ನಾವೂ ಹಮ್ಜಾದ್‌ನ ಹಾಗೇ ಹೋರಾಡಬೇಕು,’ ಅಂದುಕೊಂಡ ಹಾಜಿ ಮುರಾದ್.
ಎಚ್ಚರಿಕೆಯ ಗಂಟೆ ದನಿ ಕೇಳಿದ ಕರಗನೋವ್‌ ಹಳ್ಳಿಯ ಖಾಸಗಿ ಸೈನಿಕರು ಮತ್ತು ಕೊಸಾಕ್‍ಗಳನ್ನು ಕೂಡಿಸಿಕೊಂಡು ಹಾಜಿ ಮುರಾದ್‍ನ ಪತ್ತೆಗೆ ಹೊರಟಿದ್ದ. ಅವನಿಗೆ ಒಂದಿಷ್ಟೂ ಸುಳಿವು ಸಿಕ್ಕಿರಲಿಲ್ಲ. ಆಗಲೇ ಆಸೆ ಕಳೆದುಕೊಂಡಿದ್ದ. ಮನೆಗೆ ವಾಪಸು ಹೊರಟಿದ್ದ. ಸಂಜೆಯ ಹೊತ್ತಿಗೆ ಎದುರಾದ ಮುದುಕನೊಬ್ಬನನ್ನು ‘ಯಾರಾದರೂ ಕುದರೆ ಸವಾರರನ್ನು ನೋಡಿದೆಯಾ?’ ಎಂದು ಕೇಳಿದ್ದ. ಆರು ಜನ ಇದ್ದರು, ಬತ್ತದ ಗದ್ದೆ ಕಡೆ ಹೋದರು, ಆಮೇಲೆ ಅವರು ನದಿಯಲ್ಲಿರುವ ಬೋರೆಯ ಕುರುಚಲು ಕಾಡಿಗೆ ಹೋದರು, ನಾನು ಮರ ಕಡಿಯಲು ಹೋದೆ ಅಂದ ಮುದುಕ. ಅವನನ್ನೂ ಕರೆದುಕೊಂಡು ಕರಗನೋವ್‌ ಮತ್ತೆ ಹುಡುಕಲು ಹೊರಟ. ಕಾಲು ಕಟ್ಟಿ ಹಾಕಿದ್ದ ಕುದುರೆಗಳನ್ನು ಕಂಡು ಹಾಜಿ ಮುರಾದ್ ಅಲ್ಲೇ ಇದ್ದಾನೆಂದು ಗಟ್ಟಿಮಾಡಿಕೊಂಡ. ರಾತ್ರಿಯ ವೇಳೆಯಲ್ಲಿ ಬೋರೆಯ ಸುತ್ತಲೂ ಜನರನ್ನು ನಿಲ್ಲಿಸಿದ. ಹಾಜಿ ಮುರಾದ್‍ನನ್ನು ಹಿಡಿಯಬೇಕು ಇಲ್ಲ ಕೊಲ್ಲಬೇಕು ಅಂದುಕೊಂಡು ಬೆಳಗಾಗುವವರೆಗೆ ಕಾದು ನಿಂತ.

ಜನ ಸುತ್ತುವರಿದಿರುವುದನ್ನು ತಿಳಿದ ಹಾಜಿ ಮುರಾದ್ ಆ ಬೋರೆಯಲ್ಲಿ, ಪೊದೆಗಳ ಮಧ್ಯೆ, ಎಂದೋ ಯಾರೋ ಅಗೆದಿದ್ದ ಕಂದಕದಂಥ ಹಳ್ಳವನ್ನು ನೋಡಿದ. ನಾನೂ ಅಲ್ಲೇ ಅಡಗಬೇಕು, ಮೈಯಲ್ಲಿ ಶಕ್ತಿ ಇರುವವರೆಗೆ, ಮದ್ದು ಗುಂಡು ಇರುವವರೆಗೆ ಹೋರಡಬೇಕು ಅನ್ನುವ ತೀರ್ಮಾನಕ್ಕೆ ಬಂದಿದ್ದ. ಗೆಳೆಯರಿಗೂ ಇದನ್ನು ಹೇಳಿ ಹಳ್ಳದ ಮುಂದೆ ಮರೆಯಾಗಿ ಸೊಪ್ಪು ಸದೆ ತಂದು ಹಾಕಿ ಅಂದ. ನೌಕರರು ತಕ್ಷಣವೇ ಮರದ ಕೊಂಬೆ ಕತ್ತರಿಸಿಕೊಂಡು ಬಂದು ಕಠಾರಿಯ್ಲಿ ನೆಲ ಬಗೆದು ನೆಟ್ಟರು. ಹಾಜಿ ಮುರಾದ್ ಸ್ವತಃ ತಾನೇ ಅವರೊಡನೆ ದುಡಿತ.

ಬೆಳಕು ಹರಿಯುತಿದ್ದ ಹಾಗೇ ಸೈನಿಕರ ಮುಖ್ಯಸ್ಥ ಕಮಾಂಡರ್ ಸೈನಿಕರನ್ನೂ ಕರೆದುಕೊಂಡು ಬೋರೆಯ ಹತ್ತಿರಕ್ಕೆ ಹೋಗಿ,’ಹೇಯ್! ಹಾಜಿ ಮುರಾದ್ ಶರಣಾಗು! ನಾವು ಬಹಳ ಜನ ಇದ್ದೇವೆ!ʼ ಎಂದು ಕೂಗಿ ಹೇಳಿದ.

ಆ ಮಾತಿಗೆ ಉತ್ತರವಾಗಿ ಬಂದೂಕಿನಿಂದ ಗುಂಡು ಹಾರಿದ ಸದ್ದು ಕೇಳಿಸಿತು, ಕಂದಕದಂಥ ಹಳ್ಳದ ಹತ್ತಿರ ಧೂಳೆದ್ದಿತ್ತು. ಹಾರಿ ಬಂದ ಬುಲೆಟ್ಟು ಸೈನಿಕನೊಬ್ಬನ ಕುದುರೆಗೆ ತಾಕಿ, ಅದು ತಡವರಿಸಿ ಕುಸಿಯಿತು. ಪೊದೆಗಳಿದ್ದ ಬೋರೆಯ ಅಂಚಿನಲ್ಲಿದ್ದ ಸೈನಿಕರ ಬಂದೂಕುಗಳು ಒಂದಾದ ಮೇಲೆ ಇನ್ನೊಂದು ಗುಂಡು ಹಾರಿಸಿದವು. ಹಾರಿದ ಗುಂಡುಗಳು ಕಂದಕದ ಮೇಲಿದ್ದ ಕೊಂಬೆ, ರಂಬೆ, ಎಲೆಗಳಿಗೆ ತಾಕಿದವೇ ಹೊರತು ಅಡಗಿ ಕುಳಿತವರಿಗೆ ಏನೂ ಆಗಲಿಲ್ಲ. ಮಿಕ್ಕ ಕುದುರೆಗಳಿಗಿಂತ ದೂರದಲ್ಲಿ ಒಂಟಿಯಾಗಿದ್ದ ಗಮ್ಜಾಲೋನ ಕುದುರೆಯ ಹಣೆಗೆ ಗುಂಡು ತಾಕಿತು. ಅದು ಕೆಳಕ್ಕೆ ಬೀಳದೆ, ಕಾಲಿಗೆ ಕಟ್ಟಿದ್ದ ಹಗ್ಗ ಕಿತ್ತು ಹೋಗುವ ಹಾಗೆ ಜಾಡಿಸಿ ಪೊದೆಗಳ ನಡುವೆ ನುಗ್ಗಿ ಅಲ್ಲಿ ಮೇಯುತಿದ್ದ ಮಿಕ್ಕ ಕುದುರೆಗಳ ಗುಂಪಿನೊಳಗೆ ಮರೆಯಾಯಿತು. ಅದರ ಮೈಯಿಂದ ಸುರಿಯುತಿದ್ದ ರಕ್ತ ಹುಲ್ಲನ್ನು ವದ್ದೆ ಮಾಡಿತು.

ಹಾಜಿ ಮುರಾದ್ ಮತ್ತವನ ನೌಕರರು ಮುಂದೆ ಬರುತಿದ್ದ ಸೈನಿಕರ ಮೇಲೆ ಮಾತ್ರ ಗುರಿ ಇಟ್ಟು ಗುಂಡು ಹಾರಿಸುತಿದ್ದರು. ಅವರ ಗುರಿ ತಪ್ಪುತಿದ್ದದ್ದು ಬಹಳ ಕಡಮೆ ಮೂವರು ಸೈನಿಕರು ಹತರಾದರು. ಉಳಿದವರು ಮುಂದೆ ನುಗ್ಗುವ ಮನಸ್ಸು ಮಾಡದೆ, ನಿಧಾನವಾಗಿ ಹಿಂದೆ ಸರಿಯುತ್ತ, ದೂರದಿಂದಲೇ ಮನ ಬಂದತ್ತ ಗುಂಡು ಹಾರಿಸುತಿದ್ದರು.

ಹೀಗೇ ಸುಮಾರು ಒಂದು ಗಂಟೆ ಕಳೆಯಿತು. ಮರಗಳ ಅರ್ಧದಷ್ಟು ಎತ್ತರಕ್ಕೇರಿದ್ದ ಸೂರ್ಯ. ಕುದುರೆಯನ್ನೇರಿ ಹೊಳೆಯತ್ತ ಯಾಕೆ ಹೊರಟುಬಿಡಬಾರದು ಅನ್ನುವ ಯೋಚನೆ ಹಾಜಿ ಮುರಾದ್‍ಗೆ ಬಂದಿತ್ತು. ಆಗ, ಹೊಸತಾಗಿ ಬಂದು ಸೇರಿದ ಸೈನಿಕರ ಕೂಗಾಟ ಕೇಳಿಸಿತು. ಹಾಜಿ ಆಗಾ ಮತ್ತವನ ಹಿಂಬಾಲಕರು ಬಂದಿದ್ದರು. ಸುಮಾರು ಇನ್ನೂರು ಜನ ಇದ್ದರು. ಹಾಜಿ ಆಗಾ ಹಿಂದೊಮ್ಮೆ ಹಾಜಿ ಮುರಾದ್‍ನ ಕುನಾಕ್‌ ಆಗಿದ್ದವನು. ಅವನ ಜೊತೆಯಲ್ಲೇ ಬೆಟ್ಟ ಕಾಡುಗಳಲ್ಲಿ ಅಲೆದು, ವಾಸವಾಗಿದ್ದವನು. ಆನಂತರದಲ್ಲಿ ಅವನು ರಶಿಯನ್ನರ ಪಕ್ಷಕ್ಕೆ ಸೇರಿದ್ದ. ಈಗ ಅವನ ಜೊತೆಯಲ್ಲಿ ಹಾಜಿ ಮುರಾದ್‍ನ ಹಳೆಯ ಶತ್ರುವಿನ ಮಗ ಅಹ್ಮದ್ ಖಾನ್ ಇದ್ದ.

ಕರಗನೋವ್‌ನಂತೆಯೇ ಹಾಜಿ ಆಗಾ ಕೂಡ ಹಾಜಿ ಮುರಾದನಿಗೆ ಶರಣಾಗುವಂತೆ ಕೂಗಿ ಹೇಳಿದ್ದ. ಆ ಮಾತಿಗೆ ಹಾಜಿ ಮುರಾದ್ ಗುಂಡಿನ ಉತ್ತರ ನೀಡಿದ್ದ.

‘ಸೈನಿಕರೇ! ಕತ್ತಿ!’ ಹಾಜಿ ಆಗಾ ಚೀರಿ ಹೇಳಿದ. ತನ್ನ ಕತ್ತಿ ಹಿರಿದ. ಪೊದೆಗಳ ನಡುವೆ ನುಗ್ಗಿದ. ಸೈನಿಕರೂ ಪೊದೆಗಳ ನಡುವೆ ನುಗ್ಗಿದರು. ಆದರೂ ಕಂದಕದಿಂದ ಬಂದುಕಿನ ಸದ್ದು ಕೇಳುತ್ತಲೇ ಇತ್ತು. ಕೆಲವರು ಕೆಳಗೆ ಬಿದ್ದರು. ದಾಳಿಕೊರರು ಬೋರೆಯ ಹೊರ ಅಂಚಿನಲ್ಲೇ ನಿಂತು ಗುಂಡು ಹಾರಿಸಿದರು. ಹಾಗೆ ಗುಂಡು ಹಾರಿಸುತ್ತ, ಒಂದು ಪೊದೆಯ ಮರೆಯಿಂದ ಮತ್ತೊಂದು ಪೊದೆಯ ಮರೆಗೆ ಸಾಗುತ್ತ ಸಾವಕಾಶವಾಗಿ ಕಂದಕದಂಥ ಹಳ್ಳಕ್ಕೆ ಸಮೀಪವಾದರು. ಕೆಲವರು ಮುಂದೆ ಬಂದರೆ ಇನ್ನು ಕೆಲವರು ಹಾಜಿ ಮುರಾದ್ ಮತ್ತವನ ನೌಕರರ ಗುಂಡಿಗೆ ಬಲಿಯಾದರು. ಹಾಜಿ ಮುರಾದ್ ಗುರಿ ತಪ್ಪದ ಹಾಗೆ ಗುಂಡು ಹಾರಿಸುತಿದ್ದ. ಗಮ್ಜಾಲೋನ ಗುರಿ ಕೂಡ ಬಹಳ ಅಪರೂಪಕ್ಕೆ ತಪ್ಪುತಿತ್ತು. ಒಂದೊಂದೂ ಗುಂಡು ಶತ್ರುವಿಗೆ ತಾಗಿದಾಗಲೂ ಅವನು ಖುಷಿಯಿಂದ ಚೀರುತಿದ್ದ. ಖಾನ್‌ ಮಹೋಮ ಕಂದಕದ ಅಂಚಿನಲ್ಲಿ ಕೂತು ‘ಲಾ ಇಲಾಹ ಇಲ್ಲಲ್ಲಾ’ ಅನ್ನುತ್ತಾ ಆಗೀಗ ಗುಂಡು ಹಾರಿಸುತಿದ್ದ. ಅವನ ಗುರಿ ಸಾಮಾನ್ಯವಾಗಿ ತಪ್ಪುತಿತ್ತು.

ಕಠಾರಿ ಹಿರಿದು ಶತ್ರುವಿನ ಮೇಲೇರಿ ಹೋಗಬೇಕೆಂಬ ಹಂಬಲದ ಅಸಹನೆಯಲ್ಲಿ ಎಲ್ದಾರ್‌ನ ಇಡೀ ಮೈ ಕಂಪಿಸುತಿತ್ತು. ಕಂದಕದಾಚೆಗೆ ಮೈ ಚಾಚಿದ್ದರೂ ಹಾಜಿ ಮುರಾದ್‍ನ ಮೇಲೆ ಸದಾ ದೃಷ್ಟಿ ಇಟ್ಟುಕೊಂಡು ಗುಂಡು ಹಾರಿಸುತಿದ್ದ. ಮೈತುಂಬ ರೋಮವಿದ್ದ ಖಾನೇಫಿ ಅಂಗಿಯ ತೋಳು ಮಡಿಸಿಕೊಂಡು ಇಲ್ಲಿಯೂ ಸೇವಕನ ಚಾಕರಿಯನ್ನೇ ಮಾಡುತಿದ್ದ. ಹಾಜಿ ಮುರಾದ್, ಖಾನ್‌ ಮಹೋಮ ಇಬ್ಬರೂ ಅವನಿಗೆ ಕೊಡುತ್ತಿದ್ದ ಖಾಲಿಯಾದ ಬಂದೂಕುಗಳಿಗೆ ತೋಟಾ, ಚರೆ ಎಲ್ಲವನ್ನ ತುಂಬಿಸಿ ಕೊಡುತ್ತಿದ್ದ. ಬಾತಾ ಮಿಕ್ಕವರ ಹಾಗೆ ಕಂದಕದಲ್ಲಿ ಉಳಿಯದೆ ಕುದುರೆಗಳ ಬಳಿಗೆ ಓಡಿ ಅವನ್ನು ಸುರಕ್ಷಿತ ಜಾಗಗಳಿಗೆ ಅಟ್ಟುತಿದ್ದ. ಒಂದೇ ಸಮ ಚೀರಾಡುತ್ತ ಗುಂಡು ಹಾರಿಸುತಿದ್ದ. ಮೊದಲು ಗಾಯಗೊಂಡವನು ಅವನೇ. ಅವನ ಕುತ್ತಿಗೆಗೆ ಗುಂಡು ತಾಗಿತ್ತು. ನೆಲಕ್ಕೆ ಕುಸಿದು, ಬಾಯಿಂದ ರಕ್ತ ಉಗುಳುತ್ತ, ಬೈಯುತ್ತ ಕೂತಿದ್ದ. ಆನಂತರ ಹಾಜಿ ಮುರಾದ್ ಗಾಯಗೊಂಡ. ಹಾರಿ ಬಂದ ಗುಂಡು ಅವನ ಭುಜವನ್ನು ಹೊಕ್ಕಿತ್ತು. ಅವನ ಬೆಷ್ಮೆತ್‌ನಿಂದ ಸ್ವಲ್ಪ ಹತ್ತಿ ಕಿತ್ತುಕೊಂಡು ಗಾಯಕ್ಕೆ ಅದನ್ನು ಒತ್ತಿಟ್ಟು, ಗುಂಡು ಹಾರಿಸುವುದನ್ನು ಮುಂದುವರೆಸಿದ್ದ.

‘ಕತ್ತಿ ಹಿಡಿದು ನುಗ್ಗೋಣ’ ಎಲ್ದಾರ್ ಮೂರನೆಯ ಬಾರಿ ಕೇಳಿದ. ಅವನು ಮಣ್ಣಿನ ಗುಡ್ಡೆಯ ಹಿಂದಿನಿಂದ ನೋಡುತಿದ್ದ, ಶತ್ರುವಿನ ಮೇಲೇರಿ ಹೋಗಲು ಸಿದ್ಧನಾಗಿದ್ದ. ಹಾರಿ ಬಂದ ಗುಂಡು ಆ ಕ್ಷಣದಲ್ಲಿ ಅವನಿಗೆ ಬಡಿದು, ಅವನು ತಟ್ಟಾಡಿ ಹಾಗೇ ಹಿಂದಕ್ಕೆ, ಹಾಜಿ ಮುರಾದ್‍ನ ಕಾಲಮೇಲೆ ಬಿದ್ದ. ಹಾಜಿ ಮುರಾದ್ ಅವನತ್ತ ತಿರುಗಿ ನೋಡಿದ. ಎಲ್ದಾರ್‌ನ ಕಣ್ಣು ಕುರಿಯ ಕಣ್ಣಿನ ಹಾಗೆ ಮುದ್ದಾಗಿದ್ದವು. ನೋಟ ಕದಲಿಸದೆ ಹಾಜಿ ಮುರಾದ್‍ನನ್ನು ಗಂಭೀರವಾಗಿ ನೋಡುತಿದ್ದವು. ಮಗುವಿನ ತುಟಿಯ ಹಾಗೆ ಉಬ್ಬಿದ್ದ ಅವನ ತುಟಿ ಈಗ ಸೊಟ್ಟಗೆ ತಿರುತಿತ್ತು. ಅವನ ಕೆಳಗೆ ಸಿಕ್ಕಿಬಿದ್ದ ತನ್ನ ಕಾಲನ್ನು ಹಾಜಿ ಮುರಾದ್ ಹೊರಕ್ಕೆಳೆದುಕೊಂಡು ಗುಂಡು ಹಾರಿಸುವುದನ್ನು ಮುಂದುವರೆಸಿದ.

ಖಾನೇಫಿ ಮುಂದಕ್ಕೆ ಬಗ್ಗಿ ಎಲ್ದಾರ್‌ನ ಕೋಟಿನಲ್ಲಿ ಇನ್ನೂ ಬಳಸದೆ ಉಳಿದಿದ್ದ ತೋಟಾಗಳನ್ನು ಎತ್ತಿಕೊಂಡ.
ಖಾನ್‌ ಮಹೋಮ ಆರಾಮವಾಗಿ ಹಾಡು ಹೇಳುತ್ತಾ ಬಂದೂಕಿಗೆ ತೋಟ ತುಂಬುತ್ತ, ಗುಂಡು ಹಾರಿಸುತ್ತಾ ಇದ್ದ.
ಪೊದೆಯಿಂದ ಪೊದೆಗೆ ಓಡುತ್ತ, ಚೀರುತ್ತ, ಕೂಗಾಡುತ್ತ ಶತ್ರು ಹತ್ತಿರ ಹತ್ತಿರ ಬರುತಿದ್ದ.

ಇನ್ನೊಂದು ಗುಮಡು ಹಾಜಿ ಮುರಾದ್‍ನ ಎಡ ಭಾಗಕ್ಕೆ ಬಡಿಯಿತು. ಕಂದಕದೊಳಗೇ ತಲೆ ಬಗ್ಗಿಸಿಕೊಂಡು ಇದ್ದ, ಮತ್ತೆ ಬೆಷ್ಮೆತ್‌ನಿಂದ ಇನ್ನೊಂದಷ್ಟು ಹತ್ತಿಯನ್ನು ಕಿತ್ತು ಗಾಯಕ್ಕೆ ಒತ್ತರಿಸಿದ. ಎಡ ಪಾರ್ಶ್ವಕ್ಕೆ ಆಗಿದ್ದ ಗಾಯ ಮಾರಣಾಂತಿಕವಾಗಿತ್ತು. ಸಾಯುತಿದ್ದೇನೆ ಅನಿಸಿತು ಹಾಜಿ ಮುರಾದ್‍ಗೆ. ಹಲವು ನೆನಪು, ಹಲವು ಚಿತ್ರಗಳು ಅಸಾಮಾನ್ಯ ವೇಗದಲ್ಲಿ ಅವನ ಮನಸಿಗೆ ಬಂದವು.

ಮಹಾ ಶಕ್ತಿವಂತ ಅಬು ನುತ್ಸಲ್‌ ಖಾನ್‌ ಕಿತ್ತು ಬಂದ ಕೆನ್ನೆಯನ್ನು ಒಂದು ಕೈಯಲ್ಲಿ ಒತ್ತಿ ಹಿಡಿದು, ಇನ್ನೊಂದು ಕೈಯಲ್ಲಿ ಕಠಾರಿ ಹಿಡಿದು ಶತ್ರುವಿನ ಮೇಲೇರಿ ಹೋಗುತಿದ್ದ; ದುರ್ಬಲವಾದ, ರಕ್ತಹೀನವಾದ ಮುದುಕ ವರಾನ್ತಸೋವ್‌ನ ಕುತಂತ್ರಿ ಮುಖ ಕಂಡಿತು, ಅವನ ಮಿದುವಾದ ದನಿ ಕೇಳಿಸಿತು; ಮಗ ಯೂಸುಫ್, ಹೆಂಡತಿ ಸೋಫಿಯ, ಕೆಂಪು ಗಡ್ಡದ, ಬಿಳಿಚಿದ ಮುಖದ, ಕಣ್ಣು ಅರೆ ತೆರೆದ ಹಳೆಯ ಶತ್ರು ಶಮೀಲ್ ಕಂಡರು. ಈ ಎಲ್ಲ ಬಿಂಬಗಳು ಮನಸಿನಲ್ಲಿ ಹಾದು ಹೋದರೂ ಅವು ಯಾವ ಭಾವನೆಯನ್ನೂ ಮೂಡಿಸಲಿಲ್ಲ. ಮರುಕವಿರಲಿಲ್ಲ, ಕೋಪವಿರಲಿಲ್ಲ, ಯಾವುದೇ ಆಸೆ ಇರಲಿಲ್ಲ. ಅವನೊಳಗೆ ಏನೋ ಆಗುತಿತ್ತಲ್ಲ, ಆಗಲೇ ಆಗುವುದಕ್ಕೆ ಶುರುವಾಗಿತ್ತಲ್ಲ, ಅದಕ್ಕೆ ಹೋಲಿಸಿದರೆ ಬೇರೆ ಏನೂ ಮುಖ್ಯ ಅನಿಸಲಿಲ್ಲ ಹಾಜಿ ಮುರಾದ್‍ಗೆ.

ಆದರೂ ಹಾಜಿ ಮುರಾದ್‍ನ ದೃಢವಾದ ದೇಹ ತಾನು ಆಗಲೇ ಆರಂಭಿಸಿದ್ದ ಕೆಲಸವನ್ನು ಮುಂದುವರೆಸಿತ್ತು. ಅಳಿದುಳಿದ ಶಕ್ತಿಯನ್ನೆಲ್ಲ ಕೂಡಿಸಿಕೊಂಡು ಮಣ್ಣಿನ ಅಡ್ಡ ಗೋಡಯ ಹಿಂದೆ ಎದ್ದು ನಿಂತಿತು. ತನ್ನತ್ತ ಓಡಿ ಬರುತಿದ್ದ ಸೈನಿಕನ ಮೇಲೆ ಗುಂಡು ಹಾರಿಸಿತು. ಆ ಗುಂಡು ಅವನಿಗೆ ತಾಗಿ ಕೆಳಕ್ಕೆ ಬಿದ್ದ. ಹಾಜಿ ಮುರಾದ್ ಹಳ್ಳದಿಂದ ಮೇಲೆದ್ದು, ಕುಂಟುಗಾಲು ಹಾಕುತ್ತಾ, ಕೈಯಲ್ಲಿ ಕತ್ತಿ ಹಿಡಿದು ನೇರವಾಗಿ ಶತ್ರುವಿನತ್ತ ಸಾಗಿದ. ಹಲವು ಬಂದೂಕುಗಳಿಂದ ಗುಂಡು ಹಾರಿದ ಸದ್ದು ಕೇಳಿಸಿತು. ಅವನು ತಟ್ಟಾಡಿ ಕೆಳಕ್ಕೆ ಬಿದ್ದ. ಒಂದಷ್ಟು ಜನ ಸೈನಿಕರು ಖುಷಿಯಲ್ಲಿ ಚೀರುತ್ತ ಹಾಜಿ ಮುರಾದ್‍ನತ್ತ ಓಡಿ ಬಂದರು.

ಸತ್ತ ಹಾಗೆ ಕಾಣುತಿದ್ದ ದೇಹ ತಟ್ಟನೆ ಚಲಿಸಿತು. ಬೋಳು ತಲೆ, ರಕ್ತ ಸುರಿಯುತ್ತಿರುವ ಕ್ಷೌರ ಮಾಡಿದ ಮುಖ ಮೇಲೆದ್ದವು. ಕೈ ಮೇಲೇರಿ ಮರದ ಬೊಡ್ಡೆ ಹಿಡಿಯಿತು. ನಿಧಾನವಾಗಿ ಇಡೀ ಮೈ ಎದ್ದು ನಿಂತಿತು. ಅವನೆಷ್ಟು ಭಯಂಕರವಾಗಿ ಕಾಣುತಿದ್ದನೆಂದರೆ ಅವನತ್ತ ಓಡಿಬರುತಿದ್ದವರು ಅಲ್ಲಲ್ಲೇ ನಿಂತರು. ಇದ್ದಕಿದ್ದ ಹಾಗೆ ಅವನ ಮೈ ಕಂಪಿಸಿತು. ಮರದಿಂದ ಎರಡು ಹೆಜ್ಜೆ ನಡೆದು ಮುಖವಡಿಯಾಗಿ ಬಿದ್ದು ಕೈಗಳನ್ನು ಎರಡೂ ದಿಕ್ಕಿಗೆ ಉದ್ದವಾಗಿ ಚಾಚಿ, ಕತ್ತರಿಸಿದ ಥಿಸಲ್ ಗಿಡದ ಹಾಗೆ ನಿಶ್ಚಲವಾಗಿ ಬಿದ್ದುಬಿಟ್ಟ.
ನಿಶ್ಚಲವಾಗಿದ್ದರೂ ಅವನಿಗೆಲ್ಲ ಅರಿವಾಗುತಿತ್ತು.
ಅವನ ಹತ್ತಿರಕ್ಕೆ ಹಾಜಿ ಆಗಾ ಮೊದಲು ಬಂದ. ದೊಡ್ಡ ಕಠಾರಿಯಿಂದ ಅವನ ತಲೆಯ ಮೇಲೆ ಹೊಡೆದ. ಯಾರೋ ಸುತ್ತಿಗೆಯಲ್ಲಿ ಹೊಡೆಯುತಿದ್ದಾರೆ ಅನಿಸಿತು ಹಾಜಿ ಮುರಾದ್‍ಗೆ. ಯಾರು ಹೊಡೆಯುತಿದ್ದಾರೆ, ಯಾಕೆ ಅನ್ನುವುದು ಅರ್ಥವಾಗಲಿಲ್ಲ. ಅವನ ದೇಹದ ಜೊತೆಗೆ ಇದ್ದ ಸಂಬಂಧದ ಅರಿವಿಗೆ ಅದೇ ಕೊನೆ. ಆಮೇಲೆ ಅವನಿಗೇನೂ ಅನ್ನಿಸಲಿಲ್ಲ. ಶತ್ರುಗಳು ಅವನ ದೇಹವನ್ನು ಒದ್ದರು, ಕೊಚ್ಚಿ ಹಾಕಿದರು. ಅವನಿಗೂ ಅದೆಲ್ಲ ಆಗುತಿದ್ದ ದೇಹಕ್ಕೂ ಸಂಬಂಧವೇ ಇರಲಿಲ್ಲ.
ಹೆಣದ ಬೆನ್ನ ಮೇಲೆ ಕಾಲಿಟ್ಟ ಹಾಜಿ ಆಗಾ. ಎರಡು ಹೊಡೆತದಲ್ಲಿ ಹೆಣದ ತಲೆ ಕತ್ತರಿಸಿದ. ಆಮೇಲೆ, ಬೂಟಿಗೆ ರಕ್ತ ಮೆತ್ತಿಕೊಳ್ಳದ ಹಾಗೆ ಹುಷಾರಾಗಿ ತಲೆಯನ್ನು ಕಾಲಿನಲ್ಲಿ ಪಕ್ಕಕ್ಕೆ ಹೊರಳಿಸಿದ. ಹೆಣದ ಕತ್ತಿನ ನರಗಳಿಂದ ಕೆಂಪು ರಕ್ತ, ತಲೆಯಿಂದ ಕಪ್ಪು ರಕ್ತ ಚಿಮ್ಮಿ ಹರಿದು ಹುಲ್ಲನ್ನು ತೋಯಿಸಿತು.

ಕರಗನೋವ್‌, ಹಾಜಿ ಆಗಾ, ಅಹ್ಮದ್ ಖಾನ್ ಮತ್ತೆ ಉಳಿದೆಲ್ಲ ಖಾಸಗೀ ಸೈನಿಕರು ಒಟ್ಟಾಗಿ ಸೇರಿದರು—ಬೇಟೆಯಾಡಿ ಕೊಂದ ಪ್ರಾಣಿಯ ಸುತ್ತಲೂ ಬೇಟೆಗಾರರು ನರೆಯುವ ಹಾಗೆ. ಹಾಜಿ ಮುರಾದ್ ಮತ್ತವನ ನೌಕರರ (ಖಾನೇಫಿ, ಖಾನ್‌ ಮಹೋಮ, ಗಮ್ಜಾಲೋ) ದೇಹಗಳನ್ನು ಬಿಗಿದು ಕಟ್ಟಿ, ಬಂದೂಕಿನ ಹೊಗೆ ಅಡರಿದ್ದ ಪೊದೆಗಳ ನಡುವೆ ಗೆಲುವನ್ನು ಸಂಭ್ರಮಿಸಿದರು.
ಬಂದೂಕುಗಳು ಗುಂಡು ಹಾರಿಸುತಿದ್ದಾಗ ಹಾಡುವುದನ್ನು ನಿಲ್ಲಿಸಿದ್ದ ಬುಲ್‍ಬುಲ್ ಹಕ್ಕಿಗಳು ಮತ್ತೆ ಚಿಲಿಪಿಲಿ ಸದ್ದು ಮಾಡಿದವು. ಒಂದು ಹಕ್ಕಿ ಹತ್ತಿರದಲ್ಲಿ ಕೂಗಿದರೆ ಇನ್ನೊಂದು ದೂರದಿಂದ ಮರುದನಿ ನೀಡಿತು.

ಉಳುಮೆಯಾಗಿದ್ದ ಹೊಲದ ಮಧ್ಯೆ ನನಗೆ ಸಿಕ್ಕಿದ ನಜ್ಜುಗುಜ್ಜಾದ ಥಿಸಲ್ ಗಿಡ ನನಗೆ ಈ ಸಾವನ್ನು ನೆನಪು ಮಾಡಿತ್ತು.

[ಲಿಯೊ ಟಾಲ್ಸ್‌ಟಾಯ್. ಹಾಜಿ ಮುರಾದ್.‌ ಕನ್ನಡಕ್ಕೆ ಓ.ಎಲ್.‌ ನಾಗಭೂಷಣ ಸ್ವಾಮಿ]

| ಮುಕ್ತಾಯ |

‍ಲೇಖಕರು avadhi

March 31, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: