ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.
ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.
60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.
ಚಂದ್ರಶೇಖರ ಕಂಬಾರ, ಜಿ.ಎಸ್. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.
ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್ ಪ್ರಕಟವಾಗಲಿದೆ.
23
ಮಧ್ಯರಾತ್ರಿಯ ಹೊತ್ತಿಗೆ ತೀರ್ಮಾನ ಮೂಡಿತ್ತು. ಬೆಟ್ಟಗಾಡಿಗೆ ಓಡಿ ಹೋಗಬೇಕು, ತನಗೆ ಇನ್ನೂ ನಿಷ್ಠವಾಗಿರುವ ಅವರ್ ಬುಡಕಟ್ಟಿನವರನ್ನು ಜೊತೆ ಮಾಡಿಕೊಂಡು ವೆದೆನೋಗೆ ನುಗ್ಗಬೇಕು, ಸಾಯಬೇಕು ಅಥವಾ ಮನೆಯವರನ್ನು ಕಾಪಾಡಬೇಕು. ಅವರನ್ನು ಕಾಪಾಡಿದ ಮೇಲೆ ರಶಿಯನ್ನರ ಬಳಿಗೆ ಮರಳುವುದೋ ಖುನ್ಜಾಕ್ ಹೋಗಿ ಶಮೀಲ್‌ನನ್ನು ಎದುರಿಸುವುದೋ ಆ ತೀರ್ಮಾನವನ್ನು ಅವನಿನ್ನೂ ಮಾಡಿರಲಿಲ್ಲ. ರಶಿಯನ್ನರಿಂದ ತಪ್ಪಿಸಿಕೊಂಡು ಬೆಟ್ಟಗಳ ಸೀಮೆಗೆ ಹೋಗಬೇಕು ಅನ್ನುವುದು ಮಾತ್ರ ಮೊದಲು ಮಾಡಬೇಕಾದ ಕೆಲಸ ಅನ್ನಿಸಿತ್ತು. ತಕ್ಷಣವೇ ಆ ಕೆಲಸಕ್ಕೆ ತೊಡಗಿಕೊಂಡ. ದಿಂಬಿನ ಕೆಳಗಿದ್ದ ಕಪ್ಪು ಬಣ್ಣದ ಬಿಶ್ಮತ್ (ರಜಾಯಿ) ತೆಗೆದುಕೊಂಡು ತನ್ನ ನೌಕರರಿದ್ದ ಕೋಣೆಗೆ ಹೋದ. ಅವರಿಬ್ಬರೂ ಹಾಲ್‍ನ ಇನ್ನೊಂದು ಬದಿಯ ಕೋಣೆಯಲ್ಲಿದ್ದರು. ಅವನು ಹಾಲ್‍ಗೆ ಕಾಲಿಟ್ಟಾಗ ಹೊರಬಾಗಿಲು ತೆರೆದಿತ್ತು. ಇಬ್ಬನಿ ಬೆರೆತ ಮಂಕು ಬೆಳುದಿಂಗಳ ತಾಜಾತನ ಅವನನ್ನು ಆವರಿಸಿತು. ಮನೆಯ ಮುಂದಿನ ತೋಟದಿಂದ ಹಲವು ಇರುಳು ಹಕ್ಕಿಗಳ ಸಿಳ್ಳೆಯಂಥ ದನಿ ಅವನ ಕಿವಿಯನ್ನು ತುಂಬಿತು.
ಹಾಲ್ ದಾಟಿ ಹೋದ ಹಾಜಿ ಮುರಾದ್ ನೌಕರರ ಕೋಣೆಯ ಬಾಗಿಲು ತೆರೆದ. ಒಳಗೆ ಬೆಳಕಿರಲಿಲ್ಲ. ಆರನೆಯ ದಿನ ಚಂದ್ರನ ಹೊಳಪು ಕಿಟಕಿಯಿಂದ ಕಾಣುತಿತ್ತು. ಕೋಣೆಯ ಒಂದು ಪಕ್ಕದ ಗೋಡೆಗೆ ಹತ್ತಿದ ಹಾಗೆ ಒಂದು ಮೇಜು, ಎರಡು ಕುರ್ಚಿ ಇದ್ದವು. ಹಾಜಿ ಮುರಾದ್‍ನ ನಾಲ್ವರು ನೌಕರರು ಆ ಕೋಣೆಯಲ್ಲಿ ಜಮಖಾನೆಯ ಮೇಲೋ ಬುರ್ಖಾ ನಿಲುವಂಗಿಯನ್ನು ನೆಲದ ಮೇಲೆ ಹಾಸಿಕೊಂಡೋ ಮಲಗಿದ್ದರು. ಖಾನೇಫಿಯು ಹೊರಗೆ, ಕುದುರೆಗಳಿರುವಲ್ಲಿ ಮಲಗಿದ್ದ. ಬಾಗಿಲು ಕಿರುಗುಟ್ಟಿದ ಸದ್ದು ಕೇಳಿ ಗಮ್ಜಾಲೋಗೆ ಎಚ್ಚರವಾಗಿ ತಿರುಗಿ ನೋಡಿ, ಹಾಜಿ ಮುರಾದ್‍ನನ್ನು ಕಂಡು. ಅವನ ಗುರುತು ಸಿಕ್ಕಮೇಲೆ ಮತ್ತೆ ಮಲಗಿದ. ಅವನ ಪಕ್ಕದಲ್ಲಿ ಮಲಗಿದ್ದ ಏಲ್ದಾರ್ ಮಾತ್ರ ತಟ್ಟನೆದ್ದು ಬೆಷ್ಮೆತ್ ಹೊದ್ದು ಒಡೆಯನ ಆಜ್ಞೆಗೆ ಕಾದು ನಿಂತ. ಖಾನ್ ಮಹೋಮ, ಬಾತಾ ಇಬ್ಬರೂ ನಿದ್ದೆಯಲ್ಲಿದ್ದರು. ಹಾಜಿ ಮುರಾದ್ ತಾನು ತಂದಿದ್ದ ಬೆಷ್ಮೆತ್ಅನ್ನು ಮೇಜಿನ ಮೇಲಿಟ್ಟ. ಸಣ್ಣದೊಂದು ಸದ್ದಾಯಿತು. ರಜಾಯಿಯ ಹೊಲಿಗೆಗಳೊಳಗೆ ಬಚ್ಚಿಟ್ಟಿದ್ದ ಚಿನ್ನದಿಂದ ಹೊಮ್ಮಿದ ಸದ್ದು ಅದು.
‘ಇವನ್ನೂ ಸೇರಿಸಿ ಹೊಲಿಗೆ ಹಾಕು,’ ಅನ್ನುತ್ತ ಹಾಜಿ ಮುರಾದ್ ಅಂದು ದೊರೆತ ಚಿನ್ನದ ನಾಣ್ಯಗಳನ್ನೂ ಏಲ್ದಾರ್ ಕೈಗೆ ಒಪ್ಪಿಸಿದ. ಅವನ್ನು ತೆಗೆದುಕೊಂಡು ಚಂದ್ರನ ಬೆಳಕಿದ್ದಲ್ಲಿಗೆ ಹೋಗಿ, ಪುಟ್ಟ ಚಾಕುವಿನಿಂದ ಬೆಷ್ಮೆತ್ ನ ಅಂಚಿನ ಹೊಲಿಗೆ ಬಿಚ್ಚಿದ. ಗಮ್ಜಾಲೋ ಎದ್ದು ಚಕ್ಕಂಬಕ್ಕಲು ಹಾಕಿ ಕೂತ.
‘ಗಮ್ಜಾಲೋ ನೀನು ಹೋಗಿ ಎಲ್ಲಾ ಪಿಸ್ತೂಲು, ಮದ್ದು ಗುಂಡು ಸಿದ್ಧಮಾಡುವುದಕ್ಕೆ ಎಲ್ಲರಿಗೂ ಹೇಳು. ನಾಳೆ ನಾವು ಬಹಳ ದೂರ ಹೋಗಬೇಕು,’ ಅಂದ ಹಾಜಿ ಮುರಾದ್.
‘ಬುಲೆಟ್ ಇವೆ, ಮದ್ದಿನ ಪುಡಿ ಇದೆ, ಎಲ್ಲ ಸಿದ್ಧವಾಗಿವೆ,’ ಅಂದ ಗಮ್ಜಾಲೋ, ಅರ್ಥವಾಗದ ಹಾಗೆ ಏನೋ ಗೊಣಗಿದ.
ಬಂದೂಕುಗಳನ್ನು ಲೋಡ್ ಮಾಡಿರೆಂದು ಹಾಜಿ ಮುರಾದ್ ಯಾಕೆ ಹೇಳಿದನೆನ್ನುವುದು ಅವನಿಗೆ ಅರ್ಥವಾಗಿತ್ತು. ಎಷ್ಟು ಸಾಧ್ಯವೋ ಅಷ್ಟು ರಶಿಯನ್ ನಾಯಿಗಳನ್ನು ತಿವಿದು ಕೊಲ್ಲಬೇಕು, ಆಮೇಲೆ ಬೆಟ್ಟಗಾಡಿಗೆ ತಪ್ಪಿಸಿಕೊಂಡ ಹೋಗಬೇಕು ಅನ್ನುವುದು ಅವನಿಗೆ ಮೊದಲಿನಿಂದಲೂ ಇದ್ದ ಆಸೆ. ಈ ಆಸೆ ದಿನವೂ ಒಳಗೇ ಬೆಳೆಯುತಿತ್ತು. ಕೊನೆಗೆ ಈಗ ಹಾಜಿ ಮುರಾದ್ ಕೂಡ ಇದನ್ನೇ ಬಯಸುತ್ತಾನೆಂದು ತಿಳಿದಾಗ ಅವನಿಗೆ ತೃಪ್ತಿಯಾಗಿತ್ತು.
ಹಾಜಿ ಮುರಾದ್ ಹೊರಟು ಹೋದ. ಆಮೇಲೆ ಗಮ್ಜಾಲೋ ಗೆಳೆಯರನ್ನು ಎಬ್ಬಿಸಿದ. ನಾಲ್ಕೂ ಜನ ರಾತ್ರಿಯ ಉಳಿದ ಸಮಯವನ್ನೆಲ್ಲ ತಮ್ಮ ಪಿಸ್ತೂಲಿನ ಚಕಮಕಿಯಿಂದ ಹಿಡಿದು ಬಂದೂಕಿನ ನಳಿಗೆಯನ್ನು ಸ್ವಚ್ಛಮಾಡುವ ಕೋಲಿನವರೆಗೆ ಎಲ್ಲವನ್ನೂ ಪರೀಕ್ಷೆ ಮಾಡಿ, ಹಾಳಾಗಿದ್ದನ್ನು ಬದಲಾಯಿಸಿ, ಕಾರ್ಟ್‍ರಿಜ್ ಕೇಸುಗಳಿಗೆ ಸರಿಯಾದ ಪ್ರಮಾಣದಲ್ಲಿ ಮದ್ದಿನ ಪುಡಿ ತುಂಬಿ, ಬುಲೆಟ್ಟುಗಳನ್ನು ಎಣ್ಣೆಯ ಬಟ್ಟೆಯಲ್ಲಿ ಸುತ್ತಿಟ್ಟು, ಕತ್ತಿ, ಕಠಾರಿಗಳನ್ನು ಉಜ್ಜಿ ಹೊಳಪು ಮಾಡಿ, ಕತ್ತಿಯ ಅಂಚಿಗೆ ಕೊಬ್ಬು ಲೇಪಿಸಿ ಸಜ್ಜಾದರು.
ಬೆಳಕು ಹರಿಯುವ ಮೊದಲೇ ಹಾಜಿ ಮುರಾದ್ ಮತ್ತೆ ಹಾಲ್‍ಗೆ ಬಂದ. ಮುಖ ತೊಳೆಯಲು ನೀರು ಬೇಕಾಗಿತ್ತು. ಬೆಳಗಿನ ಜಾವದಲ್ಲಿ ಹಕ್ಕಿಗಳ ಹಾಡು ಮೊದಲಿಗಿಂತ ಜೋರಾಗಿ ಒಂದೇ ಸಮ ಕಿವಿದುಂಬುತಿತ್ತು. ಅವನ ಸೇವಕರ ಕೋಣೆಯಿಂದ ಕಠಾರಿಗಳನ್ನು ಮಸೆಯುತ್ತಿರುವ ಸದ್ದು ಕೇಳಿಸುತ್ತಿತ್ತು.
ಹಾಜಿ ಮುರಾದ್ ಬೋಗುಣಿಯಲ್ಲಿ ನೀರು ತೆಗೆದುಕೊಂಡು ತನ್ನ ಕೋಣೆಯ ಬಾಗಿಲಿಗೆ ಬಂದಾಗ ಮುರೀದ್‌ಗಳ ಕೋಣೆಯಿಂದ ಕತ್ತಿ ಮಸೆಯುವ ಸದ್ದನ್ನೂ ಮೀರಿ ಖಾನೇಫಿ ಎತ್ತರದ ದನಿಯಲ್ಲಿ ಹಾಡುತಿದ್ದ ಪರಿಚಿತವಾದ ಹಾಡು ಕೇಳಿಸಿತು. ಅದು ಹಮ್ಜಾದ್ ಎಂಬೊಬ್ಬ ಜಿಗಿಟ್ ವೀರರಾದ ಗೆಳೆಯರ ಜೊತೆಯಲ್ಲಿ ರಶಿಯನ್ನರ ಬಿಳಿಯ ಕುದುರೆಗಳ ಗುಂಪನ್ನು ಸೆರೆ ಹಿಡಿದ ಕಥೆ, ರಶಿಯನ್ ಪ್ರಿನ್ಸ್ ಅವನನ್ನು ತೆರೆಕ್‌ನ ಆಚೆಗೂ ಅಟ್ಟಿಸಿಕೊಂಡು ಹೋಗಿ, ಕಾಡಿನಷ್ಟು ವಿಸ್ತಾರವಾದ ಸೈನ್ಯದೊಂದಿಗೆ ಮುತ್ತಿಗೆ ಹಾಕಿದ ಕಥೆಯನ್ನು ಹೇಳುತ್ತಿತ್ತು. ಆಮೇಲೆ ಹಮ್ಜಾದ್ ಕುದುರೆಗಳನ್ನೆಲ್ಲ ಕೊಂದ, ರಕ್ತ ಸುರಿಸುತ್ತಿದ್ದ ಕುದುರೆಗಳ ಹೆಣದ ಗೋಡೆಯ ಹಿಂದೆ ನಿಂತು ಅವನೂ ಅವನ ಗೆಳೆಯರೂ ಬಂದೂಕಿನಲ್ಲಿ ಗುಂಡು, ಸೊಂಟ ಪಟ್ಟಿಯಲ್ಲಿ ಕಠಾರಿ, ಮೈಯಲ್ಲಿ ರಕ್ತದ ಕೊನೆಯ ಹನಿ ಇರುವವರೆಗೆ ರಶಿಯನ್ನರ ವಿರುದ್ಧ ಹೋರಾಡಿದರು ಅನ್ನುವ ಕಥೆ ಇತ್ತು. ಹಮ್ಜಾದ್‌ನು ಸಾಯುವ ಮೊದಲು ಆಕಾಶದಲ್ಲಿ ಹಾರುತಿದ್ದ ಹಕ್ಕಿಗಳನ್ನು ಕಂಡು—
ಹಾರಿ ಹಕ್ಕಿಗಳೆ ಹಾರಿ, ಮನೆಗೆ ಹೋಗಿ
ಅಮ್ಮನಿಗೆ ಹೇಳಿ ಅಕ್ಕನಿಗೆ ಹೇಳಿ ತಂಗಿಗೆ ಹೇಳಿ
ಘಜಾವತ್‌ಗಾಗಿ ಕಾದಾಡುತ್ತಾ ಸತ್ತೆವೆಂದು
ಬಿಳಿಯ ಮೈಯ ಕನ್ಯೆಯರಿಗೆ ಹೇಳಿ
ಸಾವಿನಲ್ಲೂ ನಮಗೆ ನೆಮ್ಮದಿಯಿಲ್ಲ
ತೋಳ ಬಂದು ಗೋರಿ ಅಗೆದು ನಮ್ಮ ಹೆಣ ತಿಂದು
ಕಾಗೆ ಹದ್ದು ಬಂದು ನಮ್ಮ ಹೆಣ ಕುಕ್ಕಿ ಕಣ್ಣು ಕೀಳುತವೆ
ಇದನೆಲ್ಲ ಹೇಳಿ ಹೋಗಿ ಹೇಳಿ
ಹೀಗೆ ಹಾಡು ಮುಗಿಯಿತು. ಕೊನೆಯ ನುಡಿಗೆ ಬಂದಾಗ ದುಃಖದ ದನಿಯನ್ನೂ ಮೀರಿಸುವ ಹಾಗೆ ಬಾತಾನ ಖುಷಿಯ ಸದೃಢವಾದ ದನಿ ಲಾ ಇಲಾಹ ಇಲ್ ಅಲ್ಲಾ ಎಂದು ತೀವ್ರ ಸ್ವರದಲ್ಲಿ ಚೀರಿತು. ಮತ್ತೆ ಎಲ್ಲವೂ ಪ್ರಶಾಂತ. ಮುಚ್ಚಿದ ಕೋಣೆಯ ಬಾಗಿಲ ಹಿಂದಿನಿಂದ ಸಾಣೆಯ ಕಲ್ಲಿನ ಮೇಲೆ ಲೋಹದ ಕತ್ತಿಯ ಅಲುಗು ಜಾರುವ ಸದ್ದು, ತೋಟದಿಂದ ಸಿಳ್ಳೆಯ ಹಾಗೆ ಕೋಗಿಲೆಗಳ ಹಾಡು ಮಾತ್ರ ಕೇಳುತಿತ್ತು.
ಹಾಜಿ ಮುರಾದ್ ಯೋಚನೆಯಲ್ಲಿ ಎಷ್ಟು ಮಗ್ನನಾಗಿದ್ದನೆಂದರೆ ಅವನ ಕೈಯಲ್ಲಿದ್ದ ಬೋಗುಣಿ ಸೊಟ್ಟಗೆ ಜಾರಿ ನೀರು ಚೆಲ್ಲುತ್ತಿರುವುದು ಅವನಿಗೆ ಗೊತ್ತೇ ಆಗಿರಲಿಲ್ಲ. ಎಚ್ಚರಗೊಂಡು, ತಲೆ ಕೊಡವಿ ತನ್ನ ಕೋಣೆಯೊಳಕ್ಕೆ ಕಾಲಿಟ್ಟ.
ಬೆಳಗಿನ ನಮಾಜು ಮುಗಿಸಿದ ಹಾಜಿ ಮುರಾದ್ ಸ್ವಂತದ ಆಯುಧಗಳನ್ನೆಲ್ಲ ಪರೀಕ್ಷೆಮಾಡಿ ನೋಡಿದ. ಹಾಸಿಗೆಯ ಮೇಲೆ ಕೂತ. ಅವನು ಮಾಡಬೇಕಾದ ಕೆಲಸವೇನೂ ಇರಲಿಲ್ಲ. ಮನೆಯಿಂದಾಚೆಗೆ ಹೋಗುವುದಾದರೆ ಉಸ್ತುವಾರಿಗೆ ಇದ್ದ ರಶಿಯನ್ ಅಧಿಕಾರಿಯ ಅನುಮತಿ ಪಡೆಯಬೇಕಾಗಿತ್ತು. ಇನ್ನೂ ಬೆಳಕು ಹರಿದಿರಲಿಲ್ಲ. ಅಧಿಕಾರಿ ಇನ್ನೂ ಮಲಗಿದ್ದ.
ಖಾನೇಫಿಯ ಹಾಡು ಅವನಿಗೆ ಮತ್ತೊಂದು ಹಾಡಿನ ನೆನಪನ್ನು ತಂದಿತ್ತು. ಅವನು ಹುಟ್ಟಿದಾಗ ಅವರಮ್ಮ ಕಟ್ಟಿದ್ದ ಹಾಡು. ಆ ಹಾಡು ಅಪ್ಪನಿಗೆ ಹೇಳಿದ ಮಾತು. ಹಾಜಿ ಮುರಾದ್ ಅದನ್ನು ನೆನಪು ಮಾಡಿಕೊಂಡು ಲೋರಿಸ್ ಮೆಲಿಕೋವ್‍ಗೆ ಹೇಳಿದ್ದ.
ಡಮಾಸ್ಕಸ್ ಉಕ್ಕಿನ ನಿನ್ನ ಕತ್ತಿ ನನ್ನ ಬಿಳಿಯ ಎದೆಯ ಇರಿದಿದೆ,
ಕೂಸಿಗೆ ಹಾಲೂಡುತಿದ್ದ ನನ್ನ ಎದೆಯಿಂದ ಹರಿದ ರಕ್ತ
ಕೂಸಿನ ಮೈ ತೊಳೆದಿದೆ
ಸೊಪ್ಪು ಸದೆಯ ಔಷಧ ಗಾಯವನು ಮಾಯಿಸಿದೆ
ಸಾವಿನ ಭಯವಿಲ್ಲ ನನಗೆ
ನನ್ನ ಮಗನಿಗೂ ಭಯವಿಲ್ಲ
ನನ್ನ ಕೂಸು, ನನ್ನ ಜಿಗಿಟ್ ಭಯವಿರದ ಸ್ವತಂತ್ರನಾಗಿ ಬೆಳೆಯುವನು
ಸಕ್ಲ್ಯಾ ಮಾಳಿಗೆಯ ಮೇಲೆ ಅಮ್ಮ ತನ್ನನ್ನು ಪಕ್ಕದಲ್ಲಿ ಮಲಗಿಸಿಕೊಂಡು ಹೊದಿಕೆ ಹೊದ್ದುಕೊಳ್ಳುತಿದ್ದದ್ದು, ಅವಳೆದೆಗೆ ಆದ ಗಾಯದ ಗುರುತು ತೋರಿಸು ಎಂದು ತಾನು ಕೇಳುತಿದ್ದದ್ದು ಇವೆಲ್ಲ ಹಾಜಿ ಮುರಾದ್‍ಗೆ ನೆನಪಿತ್ತು. ಅಮ್ಮ ಈಗ ಅವನ ಕಣ್ಣೆದುರಿಗೆ ಕಾಣುತಿದ್ದಳು—ಇತ್ತೀಚೆಗೆ ಕಂಡಿದ್ದ ಮುಖ ಸುಕ್ಕಾಗಿ, ಹಲ್ಲು ಸಂದುಬಿಟ್ಟು, ಕೂದಲು ನೆರೆತ ಹೆಂಗಸಿನ ಹಾಗಲ್ಲ, ಐದು ವರ್ಷ ಮಗುವಾಗಿ ಬಹಳ ಭಾರವಿದ್ದ ತನ್ನನ್ನು ಬುಟ್ಟಿಯಲ್ಲಿ ಹೊತ್ತು ಬೆಟ್ಟ ಏರಿ ಅಪ್ಪನ ಮನೆಗೆ ಹೋಗುತಿದ್ದ ಸದೃಢ ಯುವತಿಯಾಗಿ ಈಗ ಕಾಣುತಿದ್ದಳು. ಸುಕ್ಕು ಮುಖದ, ಬಿಳಿಯ ಗಡ್ಡದ ಅಜ್ಜ, ಬೆಳ್ಳಿಯ ನಾಣ್ಯಕ್ಕೆ ಬರಿಗೈಯಲ್ಲೇ ಆಕಾರ ಕೊಡುತಿದ್ದವನು, ಪ್ರಾರ್ಥನೆ ಮಾಡುವುದನ್ನು ಹೇಳಿಕೊಟ್ಟವನು-ಅವನ ನೆನಪೂ ಬರುತಿತ್ತು.
ಬೆಟ್ಟದ ಬುಡದಲ್ಲಿದ್ದ ನೀರಿನ ಚಿಲುಮೆ, ನೀರು ತರಲು ಅಮ್ಮನ ಜೊತೆಗೆ ಅಲ್ಲಿಗೆ ಹೋಗುತಿದ್ದದ್ದು, ಹೋಗುವಾಗ ಅವನು ಅಮ್ಮನ ದೊಗಲೆ ಪ್ಯಾಂಟನ್ನು ಹಿಡಿದು ಹೆಜ್ಜೆ ಹಾಕುತಿದ್ದದ್ದು, ಅವನ ಮುಖವನ್ನು ನೆಕ್ಕುತಿದ್ದ ನಾಯಿ, ಅಮ್ಮ ದನದ ಕೊಟ್ಟಿಗೆಗೆ ಕರೆದುಕೊಂಡು ಹೋದಾಗ ಅಲ್ಲಿರುತಿದ್ದ ಹಾಲಿನ, ಹುಳಿ ಮಜ್ಜಿಗೆಯ ವಾಸನೆ ನೆನಪಾಗುತಿದ್ದವು. ಅಮ್ಮ ಅವನ ತಲೆಯನ್ನು ಮೊದಲ ಬಾರಿ ನುಣ್ಣಗೆ ಬೋಳಿಸಿದ್ದು ಗೋಡೆಗೆ ಹಾಕಿದ್ದ ಥಳಥಳ ತಾಮ್ರದ ಬೋಗುಣಿ ಕನ್ನಡಿಯಲ್ಲಿ ದುಂಡು ಬೋಳುತಲೆ ಕಂಡು ಅವನಿಗೇ ಆಶ್ಚರ್ಯವಾದದ್ದು ನೆನಪಾಯಿತು.
ತನ್ನ ಬಾಲ್ಯದ ನೆನಪುಗಳ ಜೊತೆಗೆ ಹಾಜಿ ಮುರಾದ್‍ಗೆ ಪ್ರೀತಿಯ ಸ್ವಂತ ಮಗನ ನೆನಪೂ ಬಂದಿತ್ತು. ಯೂಸುಫ್‍ನ ಹುಟ್ಟುಗೂದಲನ್ನು ಹಾಜಿ ಮುರಾದ್‍ನೇ ತೆಗೆದಿದ್ದ. ಆ ಯೂಸುಫ್ ಈಗ ಸುಂದರ ಜಿಗಿಟ್‌ನಾಗಿ ಬೆಳೆದಿದ್ದಾನೆ. ಯೂಸುಫ್‍ನನ್ನು ಕೊನೆಯ ಬಾರಿ ನೋಡಿದ್ದಾಗ ಹೇಗಿದ್ದನೋ ಹಾಗೆ ಮನಸಿಗೆ ತಂದುಕೊಳ್ಳಲು ನೊಡಿದ. ಅವತ್ತು ಹಾಜಿ ಮುರಾದ್ ಸ್ಲೆಮೆಸ್‌ನಿಂದ ಹೊರಟ ದಿನ. ಅವನ ಮಗ ಕುದುರೆಯನ್ನು ತಂದಿದ್ದ, ನಾನೂ ಜೊತೆಗೆ ಬರುತ್ತೇನೆಂದು ಆಗಲೇ ಉಡುಪು ತೊಟ್ಟು, ಆಯುಧ ಧರಿಸಿ, ತನ್ನ ಸ್ವಂತ ಕುದುರೆಯ ಲಗಾಮು ಹಿಡಿದು ನಡೆಸಿಕೊಂಡು ಬಂದಿದ್ದ. ಅಪ್ಪನಿಗಿಂತ ಎತ್ತರವಾಗಿದ್ದ ಕೆಂಪು ಮುಖದ ಸುಂದರ ತರುಣನಲ್ಲಿ ಯೌವನದ ಉತ್ಸಾಹ, ಧೈರ್ಯ, ಬದುಕಿನ ಖುಷಿ ಎದ್ದು ಕಾಣುತಿದ್ದವು. ಅವನ ಭುಜದ ಅಗಲ, ನಡುವಿನ ತೆಳುವು, ಪೃಷ್ಠದ ವಿಶಾಲತೆ, ನೀಳ ತೋಳುಗಗಳ ಶಕ್ತಿ, ಅವನ ಒಂದೊಂದು ಚಲನೆಯಲ್ಲೂ ಕಾಣುತಿದ್ದ ಚುರುಕು, ಇವೆಲ್ಲವೂ ಹಾಜಿ ಮುರಾದ್‍ಗೆ ಸಂತೋಷ ತರುತಿದ್ದವು, ಮಗನನ್ನು ಮನಸಾರೆ ಮೆಚ್ಚುತಿದ್ದ.
‘ನೀನು ಮನೆಯಲ್ಲೇ ಇರುವುದು ವಾಸಿ. ಮನೆ ನೋಡಿಕೊಳ್ಳುವುದಕ್ಕೆ ಬೇರೆ ಯಾರೂ ಇಲ್ಲ. ಅಮ್ಮ, ಅಜ್ಜಿಯರನ್ನು ನೀನೇ ನೋಡಿಕೊಳ್ಳಬೇಕು,’ ಅಂದ ಹಾಜಿ ಮುರಾದ್. ಆ ಮಾತು ಕೇಳುತ್ತ ಯುವಕ ಯೂಸುಫನ ಮುಖದಲ್ಲಿ ಮೂಡಿದ್ದ ಹೆಮ್ಮೆ, ಸಂತಸಗಳನ್ನು ಹಾಜಿ ಮುರಾದ್ ನೆನೆದ. ನಾನು ಜೀವಂತ ಇರುವವರೆಗೆ ಅಮ್ಮನಿಗೆ, ಅಜ್ಜಿಗೆ ಯಾವ ತೊಂದರೆಯೂ ಆಗದ ಹಾಗೆ ನೋಡಿಕೊಳ್ಳತೇನೆ ಅಂದಿದ್ದ. ಆದರೂ ಯೂಸುಫ್ ಕುದುರೆಯೇರಿ ಹೊಳೆಯವರೆಗೂ ಬಂದು ಕಳಿಸಿಕೊಟ್ಟಿದ್ದ. ಅದೇ ಕೊನೆ, ಹೆಂಡತಿ, ಅಮ್ಮ, ಮಗ ಯಾರನ್ನೂ ಹಾಜಿ ಮುರಾದ್ ಮತ್ತೆ ಕಂಡಿರಲಿಲ್ಲ. ಇಂಥ ಮಗನ ಕಣ್ಣು ಕೀಳುವುದಾಗಿ ಶಮೀಲ್ ಹೆದರಿಸುತಿದ್ದಾನೆ! ಹೆಂಡತಿಗೆ ಇನ್ನೇನು ಮಾಡಿಯಾನು ಅನ್ನುವ ಯೋಚನೆ ಮಾಡುವುದಕ್ಕೂ ಹಾಜಿ ಮುರಾದ್‍ಗೆ ಮನಸಾಗುತ್ತಿರಲಿಲ್ಲ.
ಇಂಥ ಯೋಚನೆಗಳಲ್ಲಿ ಅವನ ಮನಸ್ಸು ಉದ್ರೇಕಗೊಂಡಿತ್ತು. ಕೂತಲ್ಲಿ ಕೂರಲು ಆಗುತ್ತಿರಲಿಲ್ಲ.ತಟ್ಟನೆದ್ದು, ಕುಂಟು ಕಾಲಿನಲ್ಲೇ ದೊಡ್ಡ ಹೆಹ್ಹೆ ಹಾಕುತ್ತ ಹೋಗಿ ಬಾಗಿಲು ತೆರೆದು ಏಲ್ದಾರ್‌ನನ್ನು ಕೂಗಿದ. ಸೂರ್ಯ ಇನ್ನೂ ಮೂಡಿರದಿದ್ದರೂ ಬೆಳಕಾಗಿತ್ತು. ಕೋಗಿಲೆಗಳು ಇನ್ನೂ ಹಾಡುತಿದ್ದವು.
‘ನಾನು ಸವಾರಿಗೆ ಹೋಗಬೇಕು ಅಂತ ಅಧಿಕಾರಿಗೆ ಹೇಳು. ಕುದುರೆಗೆ ಕಡಿವಾಣ, ಲಗಾಮು ಹಾಕು,’ ಎಂದ ಹಾಜಿ ಮುರಾದ್.
(ಇಪ್ಪತ್ತನಾಲ್ಕನೆಯ ಅಧ್ಯಾಯದಲ್ಲಿ ಮುಂದುವರೆಯುವುದು)
0 ಪ್ರತಿಕ್ರಿಯೆಗಳು