ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಹಾಜಿ ಮುರಾದ್‍ಗೆ ಆಸರೆ ನೀಡಿ ನಾಶವಾದ ಹಳ್ಳಿ…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

17

ನಾಶವಾದ ಔಲ್ ಹಾಜಿ ಮುರಾದನು ರಶ್ಯನ್ನರಿಗೆ ಶರಣಾಗಲು ಹೋಗುವ ಹಿಂದಿನ ದಿನ ತಂಗಿದ್ದ ಹಳ್ಳಿ. ರಶ್ಯನ್ ಪಡೆಗಳು ಬರುತ್ತಿರುವ ಸುದ್ದಿ ತಿಳಿದ ತಕ್ಷಣ ಸಾದೋ ಮನೆಯವರನ್ನೆಲ್ಲ ಕರೆದುಕೊಂಡು ಔಲ್ ಬಿಟ್ಟು ಹೊರಟು ಹೋಗಿದ್ದ. ಅವನು ವಾಪಸು ಬಂದಾಗ ಅವನ ಸಕ್ಲ್ಯಾ  ಪೂರ್ತಿ ನಾಶವಾಗಿತ್ತು. ಬಾಗಿಲು, ಕಂಬಗಳು ಸುಟ್ಟು ಬೂದಿಯಾಗಿ ಚಾವಣಿ ಕುಸಿದಿತ್ತು. ಮನೆಯ ಒಳಗೆಲ್ಲ ಧೂಳು, ಮಣ್ಣು, ಬೂದಿ, ಕಸ. ಅವನ ಮಗ, ಹೊಳಪು ಕಣ್ಣಿನ ಮುದ್ದು ಹುಡುಗ, ಹಾಜಿ ಮುರಾದ್‍ನನ್ನು ಅಷ್ಟು ಉನ್ಮತ್ತನ ಹಾಗೆ ನೋಡಿದ್ದವನ ಹೆಣವನ್ನು ಬುರ್ಖಾ ಹೊದಿಸಿದ ಕುದುರೆಯ ಮೇಲೆ ಮಸೀದಿಗೆ ತಂದರು. ಅವನ ಬೆನ್ನಿಗೆ ಬಯೊನೆಟ್ಟಿನಿಂದ ಇರಿದಿದ್ದರು. ಹಾಜಿ ಮುರಾದ್ ಬಂದಿದ್ದಾಗ ಅವನಿಗೆ ಊಟ ಬಡಿಸಿದ್ದ ಗಂಭೀರ ಮಹಿಳೆ ಈಗ ಮಗನ ಹೆಣದ ಮುಂದೆ ನಿಂತಿದ್ದಳು. ಅವಳ ಉಡುಗೆ ಹರಿದಿತ್ತು. ಎದೆ ತೆರೆದಿತ್ತು. ಕೂದಲು ಕೆದರಿತ್ತು. ಮುಖದಲ್ಲಿ ರಕ್ತ ಬರುವವರೆಗೆ ಉಗುರಲ್ಲಿ ಮುಖ ಒತ್ತಿ ಹಿಡಿದು ಕೊನೆಯೇ ಇರದ ಹಾಗೆ ರೋದಿಸುತ್ತಿದ್ದಳು. ಸಾದೋ ಗುದ್ದಲಿ, ಸನಿಕೆ ಹಿಡಿದು ನಂಟರನ್ನೂ ಕರೆದುಕೊಂಡು ಮಗನಿಗಾಗಿ ಗುಣಿ ತೋಡಲು ಹೋಗಿದ್ದ. ಹಾಳಾಗಿದ್ದ ಸಕ್ಲ್ಯಾದ ಗೋಡೆಗೆ ಒರಗಿ ಮುದುಕ ಕೂತಿದ್ದ. ಕೋಲು ಕತ್ತರಿಸುತ್ತ ಶೂನ್ಯ ಭಾವದಲ್ಲಿ ಸುಮ್ಮನೆ ಏನೂ ನೋಡದೆ ದಿಟ್ಟಿಸುತ್ತ ಕೂತಿದ್ದ. ಆಗ ತಾನೇ ಅವನು ಜೇನು ಗೂಡುಗಳನ್ನು ನೋಡಿಕೊಂಡು ಬಂದಿದ್ದ. ಅಲ್ಲಿದ್ದ ಎರಡು ಮೆದೆ ಹುಲ್ಲಿಗೆ ಬೆಂಕಿ ಹಚ್ಚಿದ್ದರು. ಅವನು ನೆಟ್ಟು ಬೆಳೆಸಿದ್ದ ಏಪ್ರಿಕಾರ್ ಮರ, ಚೆರಿ ಮರ ಕಡಿದೆಸೆದು ಬೆಂಕಿ ಹಾಕಿದ್ದರು. ಎಲ್ಲ ಜೇನು ಗೂಡೂ ಜೇನೂ ಸುಟ್ಟು ಹೊಗಿದ್ದವು. ಹೆಂಗಸರ ಅಳು, ಅಮ್ಮಂದಿರ ಜೊತೆಗೆ ತಾವೂ ಚೀರುತ್ತಿದ್ದ ಮಕ್ಕಳ ಅಳು ಹಸಿದ ದನ ಕರುಗಳ ಕರೆಯೊಂದಿಗೆ ಬೆರೆತು ಹೋಗಿದ್ದವು. ದನ ಕರುಗಳಿಗೆ ಮೇವು ಇರಲಿಲ್ಲ. ದೊಡ್ಡ ಹುಡುಗರು ಆಟಕ್ಕೆ ಹೋಗದೆ ಭಯದ ಕಣ್ಣು ಬಿಟ್ಟುಕೊಂಡು ದೊಡ್ಡವರ ಹಿಂದೆ ಹಿಂದೆ ಓಡಾಡುತ್ತಿದ್ದರು. ನೀರಿನ ಚಿಲುಮೆ ಕಲುಷಿತವಾಗಿತ್ತು. ಕುಡಿಯುವ ನೀರು ಸಿಗಬಾರದೆಂದೇ ಹಾಗೆ ಮಾಡಿದ್ದರು. ಮಸೀದಿಯನ್ನೂ ಹಾಗೇ ಗಲೀಜು ಮಾಡಿದ್ದರು. ಮುಲ್ಲಾ ಮತ್ತವನ ಸಹಾಯಕರು ಮಸೀದಿಯನ್ನು ಸ್ವಚ್ಛ ಮಾಡುತ್ತಿದ್ದರು. 

ಮುದುಕ, ಮನೆ, ಬೆಳೆ ಕಳಕೊಂಡವರು, ಎಲ್ಲರೂ ಊರ ಚೌಕದಲ್ಲಿ ಸೇರಿ ಕುಕ್ಕುರುಗಾಲಲ್ಲಿ ಕೂತು ಮಾತಾಡಿಕೊಳ್ಳುತ್ತಿದ್ದರು. ಯಾರೂ ರಶಿಯನ್ನರನ್ನು ದ್ವೇಷ ಮಾಡುವ ಮಾತು ಆಡಲಿಲ್ಲ. ಚೆಚೆನ್ಯಾದ ಜನರಲ್ಲಿ, ಹುಡುಗರಲ್ಲೂ ಮುದುಕರಲ್ಲೂ ಇದ್ದ ಭಾವನೆ, ದ್ವೇಷಕ್ಕೂ ಮೀರಿದ್ದು, ಅದಕ್ಕಿಂತ ಪ್ರಬಲವಾದದ್ದು. ಅದು ದ್ವೇಷವಲ್ಲ. ಯಾಕೆಂದರೆ ಅವರು ರಶಿಯನ್ ನಾಯಿಗಳನ್ನು ಮನುಷ್ಯರೆಂದೇ ಎಣಿಸುತ್ತಿರಲಿಲ್ಲ. ರಶಿಯನ್ ಜಂತುಗಳು ಎಸಗಿದ ಅರ್ಥಹೀನ ಕ್ರೌರ್ಯವನ್ನು ಕುರಿತು ಎಂಥ ಅಸಹ್ಯ, ತಿರಸ್ಕಾರ ಹುಟ್ಟಿತ್ತೆಂದರೆ ರಶಿಯನ್ನರನ್ನು ಇಲಿಗಳ ಹಾಗೆ, ವಿಷದ ಜೇಡರ ಹುಳುಗಳ ಹಾಗೆ, ತೋಳಗಳ ಹಾಗೆ ನಿರ್ಮೂಲ ಮಾಡಿಬಿಡಬೇಕು ಅನಿಸುತ್ತಿತ್ತು.  ಆತ್ಮರಕ್ಷಣೆಯ ಭಾವದಷ್ಟೇ ಸಹಜವಾದ ಪ್ರವೃತ್ತಿ ಇದು. 

ಔಲ್‍ನ ನಿವಾಸಿಗಳಿಗೆ ಇದ್ದ ಆಯ್ಕೆಯೆಂದರೆ ಅದೇ ಊರಿನಲ್ಲಿದ್ದುಕೊಂಡು, ಅವರು ಅಷ್ಟು ಕಷ್ಟಪಟ್ಟು ಕಟ್ಟಿಕೊಂಡ ಬದುಕು ಅಷ್ಟು ಸಲೀಸಾಗಿ, ಅರ್ಥಹೀನವಾಗಿ ನಾಶವಾದೆಡೆಯಲ್ಲಿಯೇ ಬದುಕಿ ಮತ್ತೆ ಅಂಥದೇ ಘಟನೆ ಮರುಕಳಿಸೀತು ಎಂದು ಅಂಜುತ್ತ ನಿರೀಕ್ಷಿಸುತ್ತ ಇರುವುದು, ಬದುಕನ್ನು ಮತ್ತೆ ಕಟ್ಟಿಕೊಳ್ಳುವುದು ಅಥವಾ ತಮ್ಮ ಧರ್ಮಕ್ಕೆ ವಿರುದ್ಧವಾಗಿ, ಮನಸಿನಲ್ಲಿ ಎಷ್ಟೇ ಅಸಹ್ಯ, ತಿರಸ್ಕಾರ ಇದ್ದರೂ ರಶಿಯನ್ನರಿಗೆ ಶರಣಾಗುವುದು. ಮುದುಕರೆಲ್ಲ ಪ್ರಾರ್ಥನೆ ಮಾಡಿದರು. ನೆರವನ್ನು ಕೋರಿ ಶಮೀಲ್‍ನ ಬಳಿಗೆ ದೂತರನ್ನು ಕಳಿಸುವುದು ಎಂದು ಒಮ್ಮನಸಿನ ತೀರ್ಮಾನಕ್ಕೆ ಬಂದರು. ನಾಶವಾದದ್ದನ್ನೆಲ್ಲ ಮತ್ತೆ ಕಟ್ಟಿಕೊಳ್ಳುವ ಕೆಲಸವನ್ನು ಆ ಕ್ಷಣದಿಂದಲೇ ಶುರು ಮಾಡಿದರು. 

ಚಿತ್ರ: ದಾಗೆಸ್ತಾನ್ ದಾಳಿ 

| ಮುಂದುವರೆಯುತ್ತದೆ |

‍ಲೇಖಕರು Admin

February 3, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: