ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ಬಟ್ಲರ್ ಕನಸಿರದ ಆಳವಾದ ನಿದ್ರೆಗೆ ಜಾರಿದ….

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

16

ನಿಕೋಲಸನ ಆಜ್ಞೆಯನ್ನು ವಿಧೇಯವಾಗಿ ಪಾಲಿಸುತ್ತಾ ಅದೇ ತಿಂಗಳಿನಲ್ಲಿ, ಅಂದರೆ 1852ರ ಜನವರಿಯಲ್ಲಿ, ಚೆಚೆನ್ಯಾದ ಮೇಲೆ ದಾಳಿ ನಡೆಸಲಾಯಿತು.

ದಾಳಿ ಮಾಡಲು ನಿಯೋಜಿಸಿದ ಪಡೆಯಲ್ಲಿ ನಾಲ್ಕು ಪದಾತಿ ಬೆಟಾಲಿಯನ್‍ಗಳಿದ್ದವು, ಎರಡು ಕೊಸಾಕ್ ಕಂಪನಿಗಳಿದ್ದವು, ಎಂಟು ಫಿರಂಗಿ ತೋಪುಗಳಿದ್ದವು. 

ಎತ್ತರದ ಬೂಟು ತೊಟ್ಟ ಕುರಿಯ ಚರ್ಮದ ಕೋಟು ಧರಿಸಿದ ಎತ್ತರದ ಟೋಪಿ ತಲೆಗಿರಿಸಿದ, ಭುಜದ ಮೇಲೆ ಬಂದೂಕು ಒರಗಿಸಿಕೊಂಡು, ಸೊಂಟದ ಬೆಲ್ಟಿಗೆ ಕಾಡತೂಸುಗಳ ಪಟ್ಟಿ ಸಿಕ್ಕಿಸಿಕೊಂಡು ಯಾಗರ್ ಸೈನಿಕ ಸಾಲು ರಸ್ತೆಯ ಎರಡೂ ಬದಿಯಲ್ಲಿ ಈಗ ಕುದುರೆ ಏರಿ ಸಾಗುತ್ತ, ಆಗ ಇಳಿದು ನಡೆಯುತ್ತ ಸಾಗಿತು. ಶತ್ರು ಪ್ರದೇಶದಲ್ಲಿ ಸಾಗುವಾಗ ಸಾಮಾನ್ಯವಾಗಿ ಮಾಡುವಂತೆ ಸಾಧ್ಯವಾದ ಮಟ್ಟಿಗೂ ಮೌನವಾಗಿ ಸಾಗುತಿದ್ದರು. ರಸ್ತೆಯ ಹಳ್ಳಕ್ಕಿಳಿದು ಮತ್ತೆ ಮೇಲೇರುವ ತೋಪುಗಳ ಸರಪಳಿಯ ಸದ್ದು, ಮೌನವಾಗಿರಬೇಕೆಂಬ ಆಜ್ಞೆ ಅರ್ಥವಾಗದ ಕುದುರೆ ಕೆನೆದೋ ಸೀನಿಯೋ ಮಾಡುವ ಸದ್ದು, ತುಕಡಿಯ ಸಿಟ್ಟುಗೊಂಡ ನಾಯಕ ತನ್ನ ಗುಂಪಿನವರು ತೀರ ಚದುರಿದ್ದಾರೆಂದೋ ಒಬ್ಬರಿಗೊಬ್ಬರು ತೀರ ಹತ್ತಿರವಾಗಿಯೋ ದೂರವಾಗಿಯೋ ನಡೆಯುತ್ತಿದ್ದಾರೆಂದು ಪಿಸುದನಿಯಲ್ಲಿ ಗದ್ದರಿಸುವ ಸದ್ದು ಆಗೀಗ ಕೇಳುತಿದ್ದವು.   

ಒಮ್ಮೆ ಮಾತ್ರ. ರಸ್ತೆಯ ಪಕ್ಕದಲ್ಲಿದ್ದ ಮುಳ್ಳು ಪೊದೆಯ ಹಿಂದಿನಿಂದ ಬಿಳಿಯ ಹೊಟ್ಟೆ ಕರಿಯ ಬೆನ್ನು ಇದ್ದ ಆಡು ನೆಗೆದು ರಸ್ತೆ ದಾಟಿ ಹೋಯಿತು. ಅದರ ಹಿಂದೆಯೇ ಅದೇ ಬಣ್ಣದ, ಹಿಂದಕ್ಕೆ ಬಾಗಿದ  ಪುಟ್ಟ ಕೊಂಬಿನ ಟಗರು ಬೆನ್ನು ಹತ್ತಿ ಬಂದಿತ್ತು. ನೆಲಕ್ಕೆ ಕಾಲೂರಿ ಮೇಲೆ ಚಿಮ್ಮಿ ಹಾರುತ್ತ ಚೆಲುವಾದ ಸಾಧು ಪ್ರಾಣಿಗಳು ಸೈನಿಕರ ಸಮೀಪಕ್ಕೆ ಬಂದಿದ್ದವು. ಕೆಲವರು ನಗುತ್ತ, ಚೀರುತ್ತ, ಅವನ್ನು ಬಂದೂಕಿನಲ್ಲಿ ತಿವಿಯಲು ಹೋದರು. ಅವು ಹೊರಳಿ, ಯಾಗರ್ ಸೈನಿಕರ ಸಾಲಿನ ನಡುವೆ ನುಸುಳಿ, ಕೆಲವು ಸವಾರರು ತುಕಡಿಯ ನಾಯಿಗಳು ಅಟ್ಟಿ ಬಂದರೂ ಹಕ್ಕಿಗಳ ಹಾಗೆ ಹಾರುತ್ತ ಬೆಟ್ಟದ ಕಾಡಿನಲ್ಲಿ ಮರೆಯಾದವು. 

ಚಳಿ ಇನ್ನೂ ಇತ್ತು. ಬೆಳಕು ಹರಿಯುವಾಗಲೇ ಹೊರಟಿದ್ದ ಸೈನ್ಯದ ಸಾಲು ನಡುಹಗಲಿನ ಹೊತ್ತಿಗೆ ಸುಮಾರು ಮೂರು ಮೈಲು ನಡೆದಿತ್ತು. ಸೂರ್ಯ ಆಕಾಶದಲ್ಲಿ ಸಾಕಷ್ಟು ಮೇಲೆ ಬಂದಿದ್ದ. ಸೈನಿಕರಿಗೆ ಧಗೆಯಾಗುವಷ್ಟು ಬಿಸಿಲಿತ್ತು. ಎಷ್ಟು ಪ್ರಖರವಾಗಿತ್ತೆಂದರೆ ಬಯೊನೆಟ್ಟುಗಳ ಹೊಳಪು ಕಣ್ಣನ್ನು ಚುಚ್ಚುತ್ತಿತ್ತು. ತೋಪು ಗಾಡಿಗಳ ತಾಮ್ರದ ಪಟ್ಟಿಗಳ ಮೇಲೆ ಕಿರು ಸೂರ್ಯರ ಹಾಗೆ ಹೊಳೆಯುತಿದ್ದ ಪ್ರತಿಬಿಂಬಗಳನ್ನೂ ನೋಡಲಾಗುತ್ತಿರಲಿಲ್ಲ.  

ವೇಗವಾಗಿ ಹರಿಯುತಿದ್ದ ಶುದ್ಧ ನೀರಿನ ಹೊಳೆಯನ್ನು ಸೈನ್ಯದ ತುಕಡಿ ದಾಟಿ ಮುಂದೆ ಬಂದಿತ್ತು. ಉತ್ತ ಹೊಲ, ಕಿರು ಕಣಿವೆಯ ಹುಲ್ಲುಗಾವಲು ಕಣ್ಣೆದುರಿಗಿದ್ದವು. ಅದರಾಚೆಗೆ ಇನ್ನೂ ಮುಂದೆ ಕತ್ತಲು ತುಂಬಿದ ನಿಗೂಢವಾದ ಕಾಡನ್ನು ಹೊದೆದಿದ್ದ ಬೆಟ್ಟಗಳಿದ್ದವು. ಕೋಡುಗಲ್ಲಿನ ಶಿಖರಗಳಾಚೆಗೆ ಸದಾ ಚೆಲುವಾಗಿ ಕಾಣುವ, ಸದಾ ಬದಲಾಗುವ ಚಿತ್ರಗಳ ಹಾಗೆ ಕಾಣುತಿದ್ದ, ವಜ್ರದಂಥ ಹಿಮ ತುಂಬಿದ ಶಿಖರಗಳಿದ್ದವು. ವಜ್ರಗಳಿಂದ ಬರುವ ಬೆಳಕಿನ ಹಾಗೆ ಅಲ್ಲಿಂದ ಬಿಸಿಲು ಪ್ರತಿಫಲಿಸುತ್ತಿತ್ತು. 

ಐದನೆಯ ಕಂಪನಿಯ ಮುಂದೆ ಕಪ್ಪು ಕೋಟು, ಪಪಖಾ ಕ್ಯಾಪು ತೊಟ್ಟು, ಭುಜಕ್ಕೆ ಕತ್ತಿ ನೇತು ಹಾಕಿಕೊಂಡು ಬಟ್ಲರ್ ನಡೆಯುತಿದ್ದ. ಇತ್ತೀಚೆಗಷ್ಟೇ ಗಾರ್ಡ್ಸ್ ನಿಂದ ವರ್ಗವಾಗಿ ಬಂದಿದ್ದ ಈ ಚೆಲುವ ಯುವಕನಲ್ಲಿ ಬದುಕಿನ ಖುಷಿ ತುಂಬಿತ್ತು. ಸಾವಿನ ಭಯವಿತ್ತು. ಸಾಹಸ ಮಾಡುವ ಅಪೇಕ್ಷೆಯಿತ್ತು. ಯಾವುದೋ ಶಕ್ತಿ ನಡೆಸುತ್ತಿರುವ ಈ ವಿಶ್ವದಲ್ಲಿ ನಾನೂ ಭಾಗವಾಗಿದ್ದೇನೆ ಅನ್ನುವ ಅರಿವಿತ್ತು. ಇದು ಅವನು ಪಾಲ್ಗೊಂಡಿದ್ದ ಎರಡನೆಯ ಕಾರ್ಯಾಚರಣೆ. ‘…ಮರುಕ್ಷಣದಲ್ಲೇ ಅವರ ಮೇಲೆ ಗುಂಡು ಹಾರಿಸುತ್ತೇನೆ, ನನ್ನ ತಲೆಯ ಮೇಲೆ ಗುಂಡುಗ ಹಾರಾಡುತ್ತಿದ್ದರೂ ತಲೆ ಮಾತ್ರ ಬಗ್ಗಿಸುವುದಿಲ್ಲ, ಕಿವಿಯ ಪಕ್ಕದಲ್ಲಿ ಗುಂಡು ಸುಂಯ್ಯನೆ ಹಾರಿಹೋದರು ಲೆಕ್ಕಕ್ಕಿಡುವುದಿಲ್ಲ, ತಲೆ ಎತ್ತಿ ಸಾಗುತ್ತ, ಸುತ್ತಲೂ ಇರುವ ಗೆಳೆಯರನ್ನು ನಿರಾತಂಕವಾಗಿ ಕಣ್ಣಲ್ಲಿ ನಗು ತುಂಬಿ ನೋಡುತ್ತೇನೆ, ಬೇರೆ ಯಾವುದಾದರೂ ವಿಷಯ ಖುಷಿಯಾಗಿ ಮಾತಾಡುತ್ತೇನೆ…’ ಅಂದುಕೊಳ್ಳುತಿದ್ದ. 

ಸೈನಿಕ ಪಡೆಯು ಒಳ್ಳೆಯ ರಸ್ತೆಯನ್ನು ಬಿಟ್ಟು ಪಕ್ಕಕ್ಕೆ ಹೊರಳಿ ಮೆಕ್ಕೆ ಜೋಳದ ಕೂಳೆ ಉಳಿದಿದ್ದ ಹೊಲದಲ್ಲಿ, ಜನ ಹೆಚ್ಚು ಬಳಸದ ಹಾದಿಯಲ್ಲಿ ಸಾಗಿತು. ಆಗ, ಎಲ್ಲಿಂದ ಬಂದಿತೆಂದು ಯಾರಿಗೂ ಗೊತ್ತೇ ಆಗದ ಹಾಗೆ, ಗುಂಡೊಂದು ಹಾರಿ ಬಂದು, ಸರಂಜಾಮು ಗಾಡಿಗಳನ್ನು  ದಾಟಿ ರಸ್ತೆಯ ಪಕ್ಕದ ಮಣ್ಣನ್ನು ಇಷ್ಟಗಲ ಕೆತ್ತಿ ಹಾಕಿತು.  

ಪಕ್ಕದಲ್ಲಿ ನಡೆಯುತಿದ್ದ ಸೈನಿಕನನ್ನು ನೋಡಿ ಖುಷಿಯಾಗಿ ನಗುತ್ತಾ ‘ಶುರುವಾಯಿತು,’ ಅಂದ ಬಟ್ಲರ್. 

ಶುರುವಾಗಿತ್ತು. ಹಾರಿ ಬಂದ ಗುಂಡಿನ ಹಿಂದೆಯೇ ಬಾವುಟಗಳನ್ನು ಹಿಡಿದ ಚೆಚೆನ್ಯಾದ ಕುದುರೆ ಸವಾರರ ದೊಡ್ಡ ಗುಂಪು ಕಾಡಿನ ನೆರಳೊಳಗಿಂದ ಬಂದಿತು. ಗುಂಪಿನ ನಡುವೆ ದೊಡ್ಡದೊಂದು ಹಸಿರು ಬಾವುಟವಿತ್ತು. ದೂರದಲ್ಲಿರುವುದು ಕೂಡ ಚೆನ್ನಾಗಿ ಕಾಣುತಿದ್ದ ಸಾರ್ಜೆಂಟ್ ಮೇಜರೊಬ್ಬ ಸಮೀಪ ದೃಷ್ಟಿಯ ಬಟ್ಲರನಿಗೆ, ‘ಸ್ವತಃ ಶಮೀಲ್ ಅಲ್ಲೇ ಇರಬೇಕು,’ ಎಂದು ಹೇಳಿದ.  ಸವಾರರು ಬೆಟ್ಟವಿಳಿದು ರಸ್ತೆಯ ಬಲಭಾಗದಲ್ಲಿ, ರಶಿಯನ್ ಪಡೆಗೆ ಸಮೀಪವಾಗಿದ್ದ ಕಣಿವೆಯ ಏರಿನ ತುದಿಯಲ್ಲಿ ಕಾಣಿಸಿದರು. ಸಣ್ಣ ಆಕಾರದ ಜನರಲ್, ದಪ್ಪ ಬಟ್ಟೆಯ ಕಪ್ಪು ಕೋಟು, ಎತ್ತರದ ಟೋಪಿ ತೊಟ್ಟವನು, ಕುದುರೆಯನ್ನು ಸಾವಕಾಶವಾಗಿ ಸವಾರಿಮಾಡಿಕೊಂಡು ಬಟ್ಲರನ ಹತ್ತಿರಕ್ಕೆ ಬಂದ.  ಬೆಟ್ಟವಿಳಿಯುತ್ತಿರುವ ಸವಾರರ ಎದುರಿಗೆ, ರಸ್ತೆಯ ಬಲ ಬದಿಗೆ ಬಾ ಎಂದು ಕರೆದ. ಬಟ್ಲರ್ ತನ್ನ ತುಕಡಿಯನ್ನು ಅತ್ತ ನಡೆಸಿದ. ಅವರು ಕಣಿವೆಯ ಅಂಚಿಗೆ ತಲುಪುವಷ್ಟರಲ್ಲಿ ಬಟ್ಲರ್ ಬೆನ್ನ ಹಿಂದೆ ಫಿರಂಗಿಯ ಸದ್ದು ಎರಡು ಬಾರಿ ಕೇಳಿಸಿತು. ತಿರುಗಿ ನೋಡಿದ. ಹೊಗೆಯ ಕಪ್ಪು ಮೋಡಗಳೆರಡು ಫಿರಂಗಿಯ ಬಾಯಿಯಿಂದ ಮೇಲೆದ್ದು ಕಣಿವೆಯನ್ನು ಆವರಿಸುತಿದ್ದವು. ಫಿರಂಗಿಗಳು ಎದುರಾಗಬಹುದು ಎಂಬ ಕಲ್ಪನೆ ಮಾಡಿರದ ಬೆಟ್ಟಗಾಡಿನ ಸವಾರರು ಹಿಂದೆ ಸರಿದರು. ಬಟ್ಲರ್ ನ ಕಂಪನಿ ಅವರತ್ತ ಗುಂಡು ಹಾರಿಸಿತು. ಹೊಗೆ, ಮದ್ದಿನ ಪುಡಿಯ ವಾಸನೆ ಇಡೀ ಕಣಿವೆಯನ್ನು ತುಂಬಿದವು. ಕಂದರದ ಆಚೆ ಬೆಟ್ಟವೇರಿ ಹಿಂದೆ ಸರಿಯುತ್ತ ಬೆಟ್ಟಗಾಡು ಜನ ತಮ್ಮನ್ನು ಅಟ್ಟಿ ಬರುತ್ತಿರುವ ಕೊಸಾಕ್‍ಗಳ ಮೇಲೆ ಆಗೀಗ ಗುಂಡು ಹಾರಿಸುತಿದ್ದರು. ಕಂಪನಿಯು ಅವ ಬೆನ್ನು ಹತ್ತಿತ್ತು. ಎರಡನೆಯ ಕಣಿವೆಯ ಏರಿನಲ್ಲಿ ಔಲ್ ಕಂಡಿತು. 

ಕೊಸಾಕ್‍ಗಳ ಹಿಂದೆಯೇ ಬಂದ ಬಟ್ಲರನ ಕಂಪನಿ ಔಲ್ ಒಳಕ್ಕೆ ನುಗ್ಗಿತು. ಹಳ್ಳಿಯಲ್ಲಿ ಯಾರೂ ಇರಲಿಲ್ಲ. ಬೆಳೆಗೆ, ಒಣ ಹುಲ್ಲಿಗೆ, ಸಕ್ಲಾಗಳಿಗೆ ಬೆಂಕಿ ಹಚ್ಚಬೇಕು ಅನ್ನುವ ಆಜ್ಞೆಯಾಯಿತು. ಘಾಟು ಹೊಗೆ ಇಡೀ ಔಲ್‍ಅನ್ನು ತುಂಬಿತು. ಸೈನಿಕರು ಹೊಗೆಯಲ್ಲೇ ಧಾವಿಸಿ ಅತ್ತ ಇತ್ತ ಓಡಾಡುತ ಮನೆಗಳಲ್ಲಿದ್ದ ವಸ್ತುಗಳಲ್ಲಿ ತಮಗೆ ಬೇಕಾದುದನ್ನು ಹೊರಗೆಳೆದು ಹೊತ್ತು ಹೋದರು. ಎಲ್ಲಕ್ಕಿಂತ ಮಿಗಿಲಾಗಿ ಗುಡ್ಡಗಾಡು ಜನ ಒಯ್ಯಲಾಗದಿದ್ದ ಕೋಳಿ, ಕುರಿ, ಬಾತುಗಳನ್ನು ಹಿಡಿಯುವುದಕ್ಕೆ, ಬಂದೂಕಿನಲ್ಲಿ ಶೂಟ್ ಮಾಡುವುದದಕ್ಕೆ ತೊಡಗಿದ್ದರು. ಅಧಿಕಾರಿಗಳು ಹೊಗೆಯಿಂದ ಆಚೆಗೆ ಸ್ವಲ್ಪ ದೂರದಲ್ಲಿ ಕೂತು ಊಟ ಮಾಡುತ್ತ, ಮದ್ಯ ಕುಡಿಯುತ್ತ ಇದ್ದರು. ಸರ್ಜೆಂಟ್ ಮೇಜರ್ ಮರದ ಹಲಗೆಯ ಮೇಲೆ ನಾಲ್ಕಾರು ಜೇನು ಹುಟ್ಟುಗಳನ್ನು ಇರಿಸಿಕೊಂಡು ಬಂದ. ಚೆಚೆನ್ಯಾದ ಜನರ ಸುಳಿವು ಎಲ್ಲಿಯೂ ಇರಲಿಲ್ಲ. ಮಧ್ಯಾಹ್ನ ಕಳೆದ ಮೇಲೆ ಸೇನಾ ಪಡೆ ಹಿಂದೆ ಸರಿಯಬೇಕು ಅನ್ನುವ ಆಜ್ಞೆ ಬಂದಿತು. ಸೈನಿಕ ತುಕಡಿಗಳು ಔಲ್‍ನ ಹಿಂಬದಿಯಲ್ಲಿ ಸಾಲು ನಿಂತವು. ತುಕಡಿಗಳ ಹಿಂಭಾಗದ ರಕ್ಷಣೆಯ ಕೆಲಸದಲ್ಲಿದ್ದ ಬಟ್ಲರ್. ತುಕಡಿಗಳು ಹಿಂದಿರುಗಲು ಆರಂಭಿಸುತಿದ್ದ ಹಾಗೆ ಚೆಚೆನ್ಯಾದ ಜನ ಕಾಣಿಸಿಕೊಂಡು ಅವರ ಮೇಲೆ ಗುಂಡು ಹಾರಿಸುತ್ತ ಹಿಂಬಾಲಿಸಿದರು. 

ಸೈನ್ಯದ ತುಕಡಿಗಳು ಬಯಲಿಗೆ ಬಂದಾಗ ಬೆಟ್ಟಗಾಡಿನವರು ಬೆನ್ನು ಹತ್ತುವುದನ್ನು ಬಿಟ್ಟರು. ಬಟ್ಲರನ ಕಂಪನಿಯಲ್ಲಿ ಯರೊಬ್ಬರಿಗೂ ಗಾಯವಾಗಿರಲಿಲ್ಲ. ಬಟ್ಲರ್ ಬಹಳ ಸಂತೋಷದ, ಚೈತನ್ಯಪೂರ್ಣ ಮೂಡಿನಲ್ಲಿ ವಾಪಸಾಗುತಿದ್ದ. ಸೈನ್ಯದ ಪಡೆ ಬೆಳಗ್ಗೆ ದಾಟಿ ಬಂದಿದ್ದ ತೊರೆಯನ್ನು ಮತ್ತೆ ದಾಟಿ ಮೆಕ್ಕೆಯ ಜೋಳದ ಹೊಲ, ಹುಲ್ಲುಗಾವಲುಗಳಲ್ಲಿ ಚದುರಿದರು. ಒಂದೊಂದು ಕಂಪನಿಯ ಸಂಗೀತಗಾರರೂ ಮುಂದೆ ಬಂದು ಹಾಡಿದರು. ಹಾಡು ಗಾಳಿಯನ್ನೆಲ್ಲ ತುಂಬಿತು. 

‘ಬೇರೆ ಥರ, ತೀರ ಬೇರೆ ಥರ ಯಾಗರ್ ಬೇರೆ ಥರ, ಯಾಗರ್ ಬೇರೆ ಥರ!’ ಎಂದು ಬಟ್ಲರನ ರೆಜಿಮೆಂಟಿನ ಹಾಡುಗಾರರು ಹಾಡಿದರು. ಬಟ್ಲರನ ಕುದುರೆ ಹಾಡಿನ ಲಯಕ್ಕೆ ತಕ್ಕ ಹಾಗೆ ಹೆಜ್ಜೆ ಹಾಕಿತು. ದಟ್ಟ ಕೆದರುಗೂದಲಿನ ನಾಯಿ ತ್ರೆಜೋರ್ಕಾ ಬಲವಾಡಿಸದೆ, ಬಹಳ ಜವಾಬ್ದಾರಿ ಹೊತ್ತಿರುವ ಭಂಗಿಯಲ್ಲಿ, ಕಮಾಂಡರನ ಥರ ಕಂಪನಿಯ ಮುಂಭಾಗದಲ್ಲಿ ಹೆಜ್ಜೆ ಹಾಕುತ್ತಿತ್ತು. ಚೈತನ್ಯ, ಉತ್ಸಾಹ, ಖುಷಿ ತುಂಬಿದ್ದವು ಬಟ್ಲರನ ಮನಸಿನಲ್ಲಿ. ಅವನ ಮಟ್ಟಿಗೆ ಯುದ್ಧವೆಂದರೆ ತನ್ನನ್ನು ಅಪಾಯಕ್ಕೆ ಒಡ್ಡಿಕೊಳ್ಳುವುದು, ಅಕಸ್ಮಾತ್ ಸಾಯುವುದು, ಬಹುಮಾನ ಪಡೆಯುವುದು, ಸೈನ್ಯದ, ರಶಿಯದಲ್ಲಿರುವ ಗೆಳೆಯರ ಮೆಚ್ಚುಗೆ, ಗೌರವ ಗಳಿಸುವುದು ಇಷ್ಟು ಮಾತ್ರವಾಗಿತ್ತು. ಯುದ್ಧದ ಇನ್ನೊಂದು ಮುಖ, ಸೈನಿಕ, ಅಧಿಕಾರಿ, ಬೆಟ್ಟಗಾಡು ಜನರ  ಸಾವು, ಗಾಯ, ನೋವು. ದುಃಖಗಳು ಅವನ ಕಲ್ಪನೆಯಲ್ಲೂ ಇರಲಿಲ್ಲ. ಯುದ್ಧವನ್ನು ಕುರಿತ ಕಾವ್ಯಾತ್ಮಕವಾದ ಕಲ್ಪನೆಗೆ ಧಕ್ಕೆ ಬರದಿರಲೆಂದೇ ಅವನು ಸತ್ತವರತ್ತ, ಗಾಯಗೊಂಡವರತ್ತ ತಿರುಗಿಯೂ ನೋಡುತ್ತಿರಲಿಲ್ಲ. ಹಾಗಾಗಿ ನಮ್ಮ ಪಡೆಗಳಲ್ಲಿ ಮೂವರು ಸತ್ತು ಹನ್ನೆರಡು ಜನ ಗಾಯಗೊಂಡಿದ್ದಾಗ ಬಟ್ಲರ್ ಅಂಗಾತ ಬಿದ್ದಿದ್ದ ಹೆಣವನ್ನು ದಾಟಿ ಹೋಗುತ್ತ ವಾರೆಗಣ್ಣಿನಲ್ಲಿ ಅದನ್ನು ನೋಡಿ ಅದರ ಕೈ ಎಷ್ಟು ವಿಚಿತ್ರವಾಗಿ ತಿರುಚಿದೆ, ಹೆಣೆಯ ಮೇಲೆ ಕಡುಗಂಪು ಬಣ್ಣದ ಗುರುತಿದೆ ಅನ್ನುವುದನ್ನ ಗಮನಿಸಿಯೂ ಗಮನಿಸದೆ, ನಿಂತು ನೋಡದೆ ಮುಂದೆ ಸಾಗಿದ. ಬೆಟ್ಟಗಾಡು ಜನರೆಂದರೆ ಅವನ ಮಟ್ಟಿಗೆ ಕುದುರೆ ಏರಿರುವ ಪರಿಣತ ಯೋಧರು, ಅವರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು ಅಷ್ಟೆ.

ಎರಡು ಹಾಡುಗಳ ನಡುವಿನ ಬಿಡುವಿನಲ್ಲಿ ಬಟ್ಲರನ ಮೇಜರ್ ಹೇಳಿದ: ‘ನೋಡಿ, ಸಾರ್, ‘ಪೀಟರ್ಸ್‍ಬರ್ಗಿನಲ್ಲಿ ಇರುತ್ತಲ್ಲ, ಹಾಗಲ್ಲ ನಮ್ಮ ಕಥೆ.’

‘ತಲೆ ಎಡಕ್ಕೆ! ತಲೆ ಬಲಕ್ಕೆ!’ ಸೈನಿಕರಿಗೆ ಆಜ್ಞೆ ಒಗೆದ.

‘ಇಲ್ಲಿ ನಮ್ಮ ಕೆಲಸ ಇತ್ತು, ಮುಗಿಸಿದೆವು, ಮನೆಗೆ ಹೋದೆವು, ಅಲ್ಲಿ ಮಾಷಾ ಪೈ ಮಾಡುತ್ತಾಳೆ, ಕ್ಯಾಬೇಜು ಸೂಪು ಮಾಡಿ ತಂದುಕೊಡುತ್ತಾಳೆ. ಅದು ನಮ್ಮ ಬದುಕು. ನಿಮಗೆ ಹಾಗನಿಸಲ್ಲವಾ?’ ಎಂದು ಬಟ್ಲರನನ್ನು ಕೇಳಿದ 

ಬೆಳಗಾಯಿತು, ಬೆಳಗಾಯಿತು’  ಹಾಡು ಹೇಳಿ,’ ಎಂದು ತನ್ನ ಪ್ರೀತಿಯ ಹಾಡು ಕೇಳಲು ಬಯಸಿದ.

ಗಾಳಿ ಇರಲಿಲ್ಲ. ಗಾಳಿ ಎಷ್ಟು ತಾಜಾ, ಸ್ಚಚ್ಛ, ಪಾರದರ್ಶಕವಾಗಿತ್ತೆಂದರೆ ನೂರು ಮೈಲು ದೂರದಲ್ಲಿದ್ದ ಹಿಮಶಿಖರಗಳೂ ಇಲ್ಲೇ ಕೈಚಾಚಿದರೆ ಸಿಗುವಷ್ಟು ಹತ್ತಿರದಲ್ಲೇ ಇರುವ ಹಾಗೆ ಸ್ಪಷ್ಟವಾಗಿ ಕಾಣುತಿದ್ದವು. ಹಾಡು ಮುಗಿಯುತಿದ್ದ ಹಾಗೆ, ಇನ್ನೊಂದು ಹಾಡು ಶುರುವಾಗುವ ಮೊದಲು ಬಂದೂಕುಗಳ ಕಿಣಿಕಿಣಿ, ಸೈನಿಕರ ಹೆಜ್ಜೆ ಸಪ್ಪಳ ಕೇಳುತಿದ್ದವು. ಬಟ್ಲರನ ಕಂಪನಿ ಹಾಡುತಿದ್ದ ಹಾಡನ್ನು ಬರೆದಿದ್ದವನು ಒಬ್ಬ ಕ್ಯಾಡೆಟ್. ತನ್ನ ರೆಜಿಮೆಂಟಿನ ಗೌರವಾರ್ಥವಾಗಿ ಅದನ್ನು ಬರೆದಿದ್ದ. ಅದು ನರ್ತನದ ಹಾಡಿನ ರಾಗದಲ್ಲಿತ್ತು. 

‘ಬೇರೆ ಥರ, ತೀರ ಬೇರೆ ಥರ ಯಾಗರ್ ಬೇರೆ ಥರ, ಯಾಗರ್ ಬೇರೆ ಥರ!’ ಅನ್ನುವ ಪಲ್ಲವಿಯನ್ನು ಎಲ್ಲರೂ ಕೋರಸ್ಸಿನಲ್ಲಿ ಒಟ್ಟಾಗಿ ಹೇಳುತಿದ್ದರು. 

ಬಟ್ಲರ್ ತನಗಿಂತ ಒಂದು ಹಂತ ಮೇಲಿನ ಹುದ್ದೆಯಲ್ಲಿದ್ದ ಆಫೀಸರು ಮೇಜರ್ ಪೆಟ್ರೋವ್‍ನ ಪಕ್ಕದಲ್ಲಿ ಕುದುರೆಯ ಮೇಲೆ ಸಾಗುತಿದ್ದ. ಬಟ್ಲರ್ ಅವನ ವಸತಿಯಲ್ಲೇ ಉಳಿದಿದ್ದ. ತನ್ನನ್ನು ಗಾರ್ಡ್ಸ್ ನಿಂದ ಕಾಕಸಸ್‍ಗೆ ವರ್ಗ ಮಾಡಿಸಿದ್ದಕ್ಕೆ ಅವನಿಗೆಷ್ಟು ಕೃತಜ್ಞನಾಗಿದ್ದರು ಸಾಲದು ಅನಿಸುತ್ತಿತ್ತು. ವರ್ಗಾವಣೆಯನ್ನು ಕೇಳಲು ಮುಖ್ಯ ಕಾರಣವೆಂದರೆ ಬಟ್ಲರ್ ತನ್ನ ದುಡ್ಡನ್ನೆಲ್ಲ ಕಾರ್ಡ್ಸ್ ಆಡಿ ಕಳೆದಿದ್ದ. ಗಾರ್ಡ್ಸ್ ನಲ್ಲೇ ಇದ್ದರೆ ಕಳಕೊಳ್ಳುವುದಕ್ಕೆ ಇನ್ನೇನೂ ಇರದಿದ್ದರೂ ಆಡುವ ಚಪಲ ಬಿಡುವುದಿಲ್ಲ ಅನಿಸಿತ್ತು. ಅದೆಲ್ಲ ಮುಗಿದ ಕಥೆ. ಈಗ ಬದುಕು ಬದಲಾಗಿತ್ತು, ಬದುಕು ಖುಷಿ ಅನಿಸುತ್ತಿತ್ತು, ನಾನು ಶೂರ ಅನಿಸುತ್ತಿತ್ತು! ಬದುಕು ನಾಶವಾಗಿದೆ, ತೀರಿಸಬೇಕಾದ ಸಾಲ ಬಹಳವಿದೆ ಅನ್ನುವುದನ್ನು ಮರೆತೇಬಿಟ್ಟಿದ್ದ. ಕಾಕಸಸ್, ಯುದ್ಧ, ಸೈನಿಕರು, ಆಫೀಸರುಗಳು, ಕುಡುಕರು, ವೀರರು, ಒಳ್ಳೆಯ ಸೈನಿಕ ಮಿತ್ರರು, ಜೊತೆಗೆ ಮೇಜರ್ ಪೆಟ್ರೋವ್. ಎಲ್ಲ ಎಷ್ಟು ಸಂತೋಷ ಅನಿಸುತ್ತಿತ್ತೆಂದರೆ ‘ಇದು ನಿಜವೇ, ನಾನು ಪೀಟರ್ಸ್‍ಬರ್ಗಿನ ಸಿಗರೇಟು ಹೊಗೆ ತುಂಬಿದ ಕೋಣೆಯಲ್ಲಿ ಕಾರ್ಡುಗಳ ಎಲೆಯ ಮೂಲೆ ಮಡಿಸುತ್ತ, ಜೂಜಾಡುತ್ತ, ತಲೆಯ ನೋವು ಅನುಭವಿಸುತ್ತ ಇಲ್ಲವೇ!’  ಅನ್ನುವ ಆಶ್ಚರ್ಯ ಹುಟ್ಟುತ್ತಿತ್ತು. ಅವನೀಗ ನಿಜವಾಗಲೂ ಇಲ್ಲಿದ್ದ, ಈ ವೀರ ಕಕೇಶಿಯನ್ನರೊಡನೆ ವೈಭವದ ನಾಡಿನಲ್ಲಿದ್ದ. 

ಮೇಜರ್ ಈಗ ಸರ್ಜನ್ನನ ಆರ್ಡರ್ಲಿಯೊಬ್ಬನ ಮಗಳು ಮಾಷಾಳೊಡನೆ ಇದ್‍ದ. ಈಗ ಅವಳು ಹೆಚ್ಚು ಗೌರವಾನ್ವಿತವಾದ ಮೇರಿ ದ್ಮಿತ್ರಿಯೇವ್ನಾ ಎಂಬ ಹೆಸರಿನಿಂದ ರೆಸಿಕೊಳ್ಳುತಿದ್ದಳು. ಮೇಜರ್-ಮಾಷಾ ಈಗ ಗಂಡ ಹೆಂಡತಿಯರ ಹಾಗೆ ಒಟ್ಟಿಗೆ ಬದುಕುತಿದ್ದರು. ಮೇರಿ ದ್ಮಿತ್ರಿಯೇವ್ನಾ ಸುಮಾರು ಮೂವತ್ತು ವಯಸಿನ, ಸೊಂಪು ಕೂದಲಿದ್ದ, ಮುಖದ ಮೇಲೆ ಮಚ್ಚೆಗಳಿದ್ದ, ಮಕ್ಕಳಿರದ ಸುಂದರಿ. ಹಿಂದೆ ಅವಳು ಹೇಗಿದ್ದಳೋ ಏನೋ ಈಗಂತು ಮೇಜರನ ನಿಷ್ಠಾವಂತ ಜೊತೆಗಾತಿಯಾಗಿದ್ದಳು. ಒಳ್ಳೆಯ ದಾದಿಯ ಹಾಗೆ ಅವನನ್ನು ನೋಡಿಕೊಳ್ಳುತಿದ್ದಳು. ದಿನವೂ ಎಚ್ಚರ ತಪ್ಪುವ ಹಾಗೆ ಕುಡಿಯುತಿದ್ದ ಮೇಜರನಿಗೆ ಆ ರೀತಿಯ ಆರೈಕೆ ಮಾಡುವವರು ಅಗತ್ಯವಾಗಿ ಬೇಕಾಗಿತ್ತು. 

ಕೋಟೆಗೆ ತಲುಪಿದಾಗ ಎಲ್ಲವೂ ಮೇಜರ್ ಕಲ್ಪಿಸಿಕೊಂಡಿದ್ದ ಹಾಗೇ ನಡೆಯಿತು. ಮೇರಿ ದ್ಮಿತ್ರಿಯೇವ್ನಾ ಅವನಿಗೂ, ಬಟ್ಲರನಿಗೂ, ಇನ್ನಿಬ್ಬರು ಅಧಿಕಾರಿಗಳಿಗೂ ಪುಷ್ಟಿಕರವಾದ, ರುಚಿಕರವಾದ ಊಟ ಬಡಿಸಿದಳು. ಮೇಜರ್ ಮಾತೇ ಹೊರಡದಷ್ಟು ಕುಡಿದ. ತನ್ನ ಕೋಣೆಗೆ ಹೋಗಿ ಮಲಗಿದ. ಬಟ್ಲರ್ ದಣಿದಿದ್ದರೂ ತೃಪ್ತನಾಗಿದ್ದ. ಮಾಮೂಲಿಗಿಂತ ಹೆಚ್ಚಾಗಿ ಚಿಖಿರ್ ವೈನು ಕುಡಿದಿದ್ದ. ತನ್ನ ಕೋಣೆಗೆ ಹೋಗಿ, ಬಟ್ಟೆಯನ್ನೂ ಕಳಚದೆ, ತಲೆಯ ಕೆಳಗೆ ಕೈ ಇರಿಸಿಕೊಂಡು ಹಾಸಿಗೆಗೆ ಮೈ ಚಾಚುತಿದ್ದ ಹಾಗೇ ಕನಸಿರದ ಆಳವಾದ ನಿದ್ರೆಗೆ ಜಾರಿದ. 

| ಮುಂದುವರೆಯುತ್ತದೆ |

‍ಲೇಖಕರು Admin

January 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: