ಪ್ರೇಮಾ ಕವಿತೆ- ರಾಧೆಗೆ ಮೈಸುಖದ ಹಂಗಿಲ್ಲ…

ಪ್ರೇಮಾ ಟಿ ಎಂ ಆರ್

ನಗಬೇಕೆಂದುಕೊಳ್ಳುತ್ತೇನೆ ಕೃಷ್ಣಾ
ತುಟಿಗಳು ಸಾಲದ ಹೊರೆ
ಹೇರಿದ ಹಾಗೆ
ಬಿಗಿದು ಕೂತಿವೆ
ನಿನ್ನ ಕೈ ಕೊಳಲಾಗಿ
ತುಟಿಯೊಳಗಿರಬೇಕೆಂದುಕೊಂಡಿದ್ದು
ಅದೆಷ್ಟು ಬಾರಿಯೋ

ಈ ರಾಧೆಗಾವ ಮರುಳು
ಗೋಪಿಯರೂ ಸಹಿಸುತ್ತಿಲ್ಲವೇ
ಕೃಷ್ಣನ ವಿರಹ
ಅಂದುಕೊಳ್ಳುತ್ತಾರೆ ಕಂಡವರು
ಹೂಂ ಅವರಿಗೂ ಇದೆ
ನಿನ್ನಗಲಿಕೆಯ ನೋವು
ಗಂಡ ಮನೆ ಮಕ್ಕಳು
ಜಂಜಡವೂ ಇದೆಯವರಿಗೆ
ಕ್ಷಣವಾದರೂ ಮರೆತಾರು
ಈ ರಾಧೆಗೇನಿದೆ ಹೇಳು
ಬರೀ ನಿನ್ನ ಬಿಟ್ಟರೆ?

ಅಷ್ಟಾವಕ್ರೆಯನ್ನೂ ಇಷ್ಟಕ್ಕೆ
ಇಟ್ಟುಕೊಂಡೆಯಂತೆ
ಕಂಸನ ಕೊಂದೆಯಂತೆ
ಪಟ್ಟ ಬೇಡವೆಂದೆಯಂತೆ
ಮಧುರೆಯ ಚಂದದ ಹೆಣ್ಣುಗಳೆಲ್ಲ
ನಿನ್ನ ಹಿಂದಿಂದೆ ಸುತ್ತುವರಂತೆ
ಗೊಲ್ಲರ ಕೇರಿತುಂಬ ಗುಲ್ಲೇಗುಲ್ಲು ಗಿರಿಧರ
ಯಾರವಳು ರುಕ್ಮಿಣಿ
ನನಗಿಂತ ಚೆಲುವೆಯೇ
ಛೀ ಚೆಲುವಿಗೊಲವಿನ
ನಂಟ ಬೆಸೆದವರಾರು

ಗೋಪಾಲಂಗೆ ಗೋಪಿಕೆಯರ
ಬೆತ್ತಲೆ ನೋಡುವಾಸೆ
ಅನ್ನುವುದೆಲ್ಲ ಸುಳ್ಳೇಸುಳ್ಳು ರಾಧೇ
ನಿನ್ನೊಡನೆ ಸಮಯ ಕಳೆವ
ಹುನ್ನಾರಕ್ಕವರ
ನೀರಲ್ಲಿ ಬಂಧಿಸಿದೆನೆಂದು
ಮುಂಗುರಳ ಕೆದಕಿವನೇ
ಗಲ್ಲಕ್ಕೆ ಮುತ್ತಿಟ್ಟು
ಎದೆಗಮುಕಿಕೊಂಡವನೇ
ನಿನ್ನ ಮುಕುಟದ ಹರಳಾಗುವಾಸೆಯಿರಲಿಲ್ಲ

ಮೇಲ್ದುಟಿಮೇಲಿನ
ಕರಿಯೆಳ್ಳಾಗಿ ಸಿಡಿದ
ತಾಂಬೂಲದ ಕಲೆಯಾಗಿಯಾದರೂ
ನೆಲಸುವಾಸೆಯಿತ್ತು
ಉಸಿರು ಹಾದುಹೋಗುವ
ದಾರಿಯಲ್ಲವೇ ನಿನ್ನೆದೆಗೆ
ಬೇಗ ಬರುತ್ತೇನಂದಲ್ಲವೇ
ನೀ ಮಾತು ಕೊಟ್ಟಿದ್ದು
ಹಾರುವಾತುರದಲ್ಲೂ
ಇನ್ನಷ್ಟು ಹೀರುವ ದುಂಬಿ
ತುಟಿಯ ಕಚ್ಚಿದ ಕಲೆ ಮಾಣಲೇ ಇಲ್ಲ

ನೆನೆದವರೆದುರಲ್ಲಿ ದುತ್ತನೆ
ನಿಲ್ಲುವ ಇಚ್ಛಾಶಕ್ತನಂತೆ
ಉದ್ಧವನ ಬದಲಿಗೆ
ಕ್ಷಣ ಬಂದು ಹೋಗಿದ್ದರೆ…
ಹಿಂದಿಂದೆ ಬಂದು ಬಿಡುತ್ತಿದ್ದೆನೇನೋ
ಎಷ್ಟು ಹೆಣ್ಣುಗಳಿರಲೇನು ನಿನ್ನೊಡನೆ
ರಾಧೆಗೆ ಮೈಸುಖದ ಹಂಗಿಲ್ಲ
ಹೀಗೆ ಬಂದರೆ ರಾಧೆ
ಎಂಜಲೆಲೆ ಅಂದಾರು
ಯಾರ ಎಂಜಲು ಯಾರೋ
ಅವರಿಗೇನು ಗೊತ್ತು ಬಿಡು

ಜಗದ ಆಗುಹೋಗುಗಳ
ಮಂದಹಾಸದಲಿ ಮುನ್ನವೇ ಅರಿವ
ಒಳಗಣ್ಣುಳ್ಳವನಂತೆ
ನಂಬಿಕೆಟ್ಟೆನೋ ನಿನ್ನ ಗೋವಿಂದ
ಮಾತುಳಿಸಿಕೊಳ್ಳಲಿಲ್ಲ ನೀನು
ರಾಧೆಯೇ… ಹಳಸಲು
ಅಂದುಕೊಂಡೆಯೇನೋ
ಅಂದು ವೃಜದ ರಾಜಬೀದಿಗಳಲ್ಲಿ
ಕಾಲ್ದಾರಿಗಳಲ್ಲಿ
ಯಮುನೆಯಂಗಳದಲ್ಲಿ
ಕಾನನೊಲವಿಗೆಂದೇ
ಸುದ್ದಿಯಾದವಳು ನಾನು
ಇಂದು ಪ್ರೇತವಾಗಿ
ಅಲೆಯುತ್ತಿದ್ದೇನೆ ಕೂಡುದಾರಿಗಳಲ್ಲಿ

ಇರದ ದಾರದಲ್ಲಿ
ನೆನಪುಗಳ ಹೆಕ್ಕಿ ಪೋಣಿಸುವ
ಹುಚ್ಚು ಹಠದಲ್ಲಿ
ಅಂದು ಒಂದಾದ ಉಸಿರಿಗೆ
ಸಾಕ್ಷಿಯಾದ ಯಮುನೆಯ
ತಣ್ಣನೆ ದಂಡೆಯಿಂದು
ಬೆಳ್ದಿಂಗಳಿಗೂ ಕಾದುಕೆಂಡ

ಎಂಟೋ ಹದಿನಾರು ಸಾವಿರದೆಂಟೋ
ರಾಧೆಯ ರೀತಿಯೇ ಬೇರೆ
ಅಂದೆಯಂತೆ….
ಸುದ್ದಿಗೆ ಬರವೇ ಮಾಧವ
ಜಗಕೆ ಪ್ರೀತಿಸುವದ ಕಲಿಸಲೆಂದೇ
ಪ್ರೀತಿಸಿದವರು ನಾವು
ಪ್ರೀತಿಯೆಂದರೆ ಬರೀ ಪಡೆಯುವದಲ್ಲ
ಕಳೆದುಕೊಳ್ಳುವದೂ ಹೌದು
ನೀನೇ ಸಾರ ಹೊರಟ ಸತ್ಯ
ಅದಕ್ಕೆ ಚ್ಯತಿಯಾಗದ ಹಾಗೆ
ಇದ್ದು ಹೋಗಲಿಬಿಡು
ನಮ್ಮ ಪ್ರೇಮ…

‍ಲೇಖಕರು nalike

August 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದಣಿವು…

ದಣಿವು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: