ಶಿವಕುಮಾರ ಮಾವಲಿ
ಕನ್ನಡ ಪ್ರಕಾಶನ ರಂಗಕ್ಕೆ ‘ಮಾವಲಿ ಪಬ್ಲಿಕೇಷನ್’ ಪ್ರವೇಶ ಕೊಟ್ಟಿದೆ.
ಇದರ ಮೊದಲ ಕೃತಿಯಾಗಿ ಶಿವಕುಮಾರ ಮಾವಲಿ ಅವರ ‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಪ್ರಕಟಗೊಂಡಿದೆ.
‘ಮಾವಲಿ ಪಬ್ಲಿಕೇಷನ್’ಗೆ ‘ಅವಧಿ’ ಶುಭಹಾರೈಸುತ್ತದೆ.
‘ಪ್ರೇಮಪತ್ರದ ಆಫೀಸು ಮತ್ತು ಅವಳು’ ಅವಧಿಯಲ್ಲಿ ಪ್ರಕಟವಾಗಿರುವ ಕಥಾ ಅಂಕಣ. ಈ ಕೃತಿಗೆ ಶಿವಕುಮಾರ ಮಾವಲಿ ಅವರು ಬರೆದ ಮಾತು ಇಲ್ಲಿದೆ.
“That’s all nonviolence is – organized love.” – Joan Baez
ಹಾಗೆ ನೋಡಿದರೆ ನಮ್ಮೆಲ್ಲರ ಬದುಕು ಮತ್ತಷ್ಟು ಗಟ್ಟಿಯಾಗುವುದು ‘ಸಹಿಷ್ಣುತೆ’ಯಿಂದಲೇ ಹೊರತು, ಪ್ರೀತಿಯಿಂದಲ್ಲ ಎಂಬ ವಾದವೂ ಇದೆ. ಆದರೆ ನಾವು ಸಹಿಷ್ಣುಗಳಾಗುವುದೆಂದರೆ, ನಮ್ಮಲ್ಲಿರುವ ಪ್ರೀತಿಯನ್ನು ಹೊರ ಹಾಕುವುದು ಎಂದೇ ಅರ್ಥ. ಇಲ್ಲಿ ಪ್ರೆಮದ ಕತೆಗಳಿವೆ, ವಿರಹದ ಕತೆಗಳಿವೆ, ಸಂಬಂಧಗಳ ತಾಕಲಾಟದ ಕತೆಗಳಿವೆ. ಇವೆಲ್ಲ ವೈಯಕ್ತಿಕವೇನೋ ಅನ್ನಿಸಬಹುದು. ಆದರೆ, ನಾವು ದೇಶದ ಬಗ್ಗೆ ಯೋಚಿಸಿದಷ್ಟೇ ನಮ್ಮ ದೇಹದ ಬಗ್ಗೆಯೂ ಯೋಚಿಸಬೇಕು. ಎಲ್ಲಾ ಸಾಮುದಾಯಿಕ ಬಿಕ್ಕಟ್ಟುಗಳ ಪರಿಹಾರ,ವೈಯಕ್ತಿಕ ಬದಲಾವಣೆಯಿಂದಲೇ ಪ್ರಾರಂಭವಾಗಬೇಕಿರುತ್ತದೆ. ಆ ಅರಿವಿನಂದಲೇ, ಇಲ್ಲಿನ ಸಣ್ಣ ಕತೆಗಳಲ್ಲಿನ ಪಾತ್ರಗಳು,ವೈಯಕ್ತಿಕ ನೆಲೆಯಲ್ಲಿ ಎದುರಾಗುವ ಸಂದಿಗ್ದಗಳು, ನಮ್ಮೊಳಗನ್ನು ಪ್ರಶ್ನಿಸುತ್ತವೆ.
ಕೆಲವೊಮ್ಮೆ ನಾಟಕೀಯತೆ ಈ ಕತೆಗಳ ಸಂವಿಧಾನವೇನೋ ಅನ್ನಿಸುವಷ್ಟರಲ್ಲೇ, ಬದುಕಿನಲ್ಲಿರುವ ನಾಟಕೀಯತೆಯನ್ನು ಅವು ನೆನಪಿಸುತ್ತವೆ. ‘ಕತೆ ಕಟ್ಟುವಿಕೆ’ ಎಂಬುದನ್ನೇ ನಾನು ನಂಬುತ್ತೇನೆ. ಹಾಗೆ ಕತೆ ಕಟ್ಟುವಾಗ ಓದುಗರಲ್ಲಿ ಒಂದು ವಿಸ್ಮಯ ಹುಟ್ಟಿಸುತ್ತಲೇ, ಅವು ವೈಯಕ್ತಿಕವಾಗಿ ಅವರಿಗೆ ಏನನ್ನೋ ನೆನಪಿಸುವಂತಿರಬೇಕು ಎಂಬುದನ್ನು ನಾನು ಪ್ರಜ್ಞಾಪೂರ್ವಕವಾಗಿ ಇಲ್ಲಿನ ಕತೆಗಳಲ್ಲಿ ತಂದಿದ್ದೇನೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಕತೆಯೊಂದು ಅನಂತರದಲ್ಲಿ ಓದುಗನಲ್ಲಿಯೂ ಮುಂದುವರೆಯಬಹುದು. ಮುಂದುವರೆಯಬೇಕು. ಬಹುತೇಕ ಕತೆಗಳಲ್ಲಿ ಪಾತ್ರಗಳಿಗೆ ಹೆಸರು ನೀಡದೆ ಸರ್ವನಾಮಗಳನ್ನು ಬಳಸಿದ್ದೇನೆ. ಆ ಪಾತ್ರಗಳಿಗೆ ಯಾವ ಹೆಸರು ಕೊಡದಿದ್ದರೂ ನಡೆಯುತ್ತದೆ. ಹಾಗೆಯೇ ಈ ಕತೆಗಳಲ್ಲಿ ಬರುವ ‘ನಾನು’, ಯಾರಾದರೂ ಆಗಬಹುದು ಅಥವಾ ಯಾರೂ ಆಗದೆಯೂ ಇರಬಹುದು. ಒಟ್ಟಿನಲ್ಲಿ ಎಲ್ಲರ ಎದೆಯೊಳಗೆ ಹೋಲ್ ಸೇಲಾಗಿ ಇರುವ ಪ್ರೇಮವೆಂಬ ಸರಕಿನ ವ್ಯಾಪಾರ ಜಗದೊಳಗೆ ನಡೆಯುತ್ತಲೇ ಇರುತ್ತದೆ. ದ್ವೇಷವು ವೈಯಕ್ತಿಕ ನೆಲೆಯಿಂದ ಸಮೂಹದ ನೆಲೆಗೆ ತಿರುಗಿದಾಗ ಅನಾಹುತ ಉಂಟು ಮಾಡಿದರೆ, ಪ್ರೇಮವು, ವೈಯಕ್ತಿಕ ನೆಲೆಯಲ್ಲಿದ್ದಾಗಲೂ ಉಪಕಾರಿ ಮತ್ತು ಸಮೂಹದ ನೆಲೆಗೆ ಬಂದಾಗಲೂ ಪರೋಪಕಾರಿಯಾಗಿರುತ್ತದೆ. ಅಂಥ ಪ್ರೇಮದ ಬಗ್ಗೆ ಓದುವುದು, ಬರೆಯುವುದು, ಮಾತನಾಡುವುದು ಎಲ್ಲವೂ ಒಂದು ಬಗೆಯ ಪ್ರೇಮಕಾರ್ಯಗಳೇ ಆಗಿರುತ್ತವೆ.
ಇಲ್ಲಿನ ಅನೇಕ ಕತೆಗಳು ‘ಅವಧಿ’ಗೆ ಮಾವಲಿ ರಿಟರ್ನ್ಸ್ ಹೆಸರಿನಲ್ಲಿ ಬರೆದವು. ಆ ಅವಕಾಶಕ್ಕಾಗಿ ಜಿ.ಎನ್.ಮೋಹನ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಹಾಗೆಯೇ ನನ್ನ ಇದುವರೆಗಿನ ಪುಸ್ತಕಗಳ ಪ್ರಕಾಶಕರಾದ- ಜಿ.ಎನ್.ಮೋಹನ್, ಸಚಿನ್ ಕುಡತೂರಕರ್, ಜಮೀಲ್ ಸಾವಣ್ಣ ಮತ್ತು ಟೋಟಲ್ ಕನ್ನಡದ ಲಕ್ಷ್ಮಿಕಾಂತ್ -ಇವರೆಲ್ಲರನ್ನು ಕೃತಜ್ಞತೆಯಿಂದ ನೆನಯುತ್ತ, ಈಗ ಮಾವಲಿ ಪಬ್ಲಿಕೇಶನ್ ಮೂಲಕ ಮೊದಲ ಕತಾ ಸಂಕಲನ ಪ್ರಕಟಿಸುತ್ತಿರುವ ಪ್ರೇಮಳಿಗೂ ಶುಭ ಹಾರೈಸುತ್ತೇನೆ.
ಈ ಪುಸ್ತಕದ ಪ್ರಕಟಣೆಯ ಎಲ್ಲಾ ಹಂತಗಳಲ್ಲಿಯೂ ಸೂಕ್ತ ಮಾರ್ಗದರ್ಶನ ನೀಡಿದ ಅಮೂಲ್ಯ ಪುಸ್ತಕದ ಕೃಷ್ಣ ಚೆಂಗಡಿ, ಧರಣಿ ಪ್ರಿಂಟರ್ಸ್ ನ ಹೂವಪ್ಪ, ಪುಟ ವಿನ್ಯಾಸ ಮಾಡಿದ ವಿಕ್ರಮ ವಿಜಯ, ಮುಖಪುಟ ವಿನ್ಯಾಸಕರಾದ ಅರುಣ್ ಕುಮಾರ್.ಜಿ, ಪ್ರಚಾರದ ಎಲ್ಲಾ ಪೋಸ್ಟರ್ ಗಳ ವಿನ್ಯಾಸ ಮಾಡಿದ ಮತ್ತು ನನ್ನ ಛಾಯಾಚಿತ್ರ ತೆಗೆದ ಮನುಕುಮಾರ್ ಕೆ.ಜಿ., ನಮ್ಮ ಕುಟಬದ ಎಲ್ಲಾ ಸದಸ್ಯರು ಹಾಗೂ ಸದಾ ಬೆಂಬಲವಾಗಿ ನಿಲ್ಲುವ ಹೊಂಗಿರಣ ಶಿವಮೊಗ್ಗದ ಎಲ್ಲಾ ಗೆಳೆಯರಿಗೆ ನನ್ನ ಕೃತಜ್ಞತೆಗಳು ಸಲ್ಲಲೇಬೇಕು.
0 ಪ್ರತಿಕ್ರಿಯೆಗಳು