ವಿಠಲ್ ಜೊತೆ ಸಹಯಾನ…

ಉದಯ ಗಾಂವಕರ್

ಈ ಬಾರಿಯ ಸಹಯಾನ ಸಾಹಿತ್ಯೋತ್ಸವ ನಿರೀಕ್ಷೆಯಂತೆ ಭಿನ್ನವಾಗಿತ್ತು. ಭಿನ್ನವಾಗಿರಲು ಸಾಹಿತ್ಯ ಚರ್ಚೆಗಳು ಕಾರಣವಾಗಿರಲಿಲ್ಲ. ತುಂಬ ತುರ್ತಿನಲ್ಲಿರುವವನಂತೆ ನಾಡೆಲ್ಲ ಓಡಾಡಿಕೊಂಡಿದ್ದ ವಿಠಲ ಭಂಡಾರಿ ಈಗ ಶಾಂತವಾಗಿ ಮಲಗಿರುವ ಕೆರೆಕೋಣ ತೇವಗೊಂಡಿತ್ತು. ನನ್ನಂತೆ ಅಲ್ಲಿರುವ ಎಲ್ಲರಿಗೂ ಸಾಹಿತ್ಯ ಚರ್ಚೆಗಳಿಗಿಂತ ಆತನ ಕುಟುಂಬಸ್ಥರನ್ನು ನೋಡಿ ಮಾತಾಡಿಸಬೇಕಿತ್ತು. ಹೊಸ ತಲೆಮಾರು ಎಂಬುದು ಸಹಯಾನವು ಆರಂಭದಿಂದಲೇ ಎತ್ತಿಕೊಂಡ ಚರ್ಚೆ.

ಪ್ರತಿವರ್ಷವೂ ಭರವಸೆಯಿಂದ ಹೊಸ ತಲೆಮಾರಿನ ಯೋಚನೆಗಳಿಗೆ ಕನೆಕ್ಟ್‌ ಆಗಲು ಸಹಯಾನವು ಪ್ರಯತ್ನಿಸುತ್ತಾ ಬಂದಿದೆ. ಈ ಬಾರಿ ಉತ್ತರ ಕನ್ನಡದ ಹೊಸ ತಲೆಮಾರಿನ ಸಾಹಿತ್ಯದ ಕುರಿತು ಚರ್ಚೆ ನಡೆಯಿತು.ಮೂರುವರೆ ವರ್ಷಗಳ ಹಿಂದೆ ವಿಠಲ್‌ ಸಮುದಾಯದ ʻತಿಂಗಳ ಕತಾಓದುʼ ಕಾರ್ಯಕ್ರಮಕ್ಕಾಗಿ ಕುಂದಾಪುರಕ್ಕೆ ಬಂದಿದ್ದರು. ನಾವಲ್ಲಿ ಪ್ರತಿತಿಂಗಳು ಒಂದು ಕತೆಯೊಂದಿಗೆ ಸಾಹಿತ್ಯ ಚರ್ಚೆ ಮಾಡುತ್ತೇವೆ. ವಿಠಲ್‌ ಬಂದಿದ್ದ ಆ ತಿಂಗಳ ಕತಾ ಓದಿನಲ್ಲಿ ಸುನಂದಾ ಕಡಮೆಯವರ ʻಪತ್ರೊಡೆʼ ಕತೆಯನ್ನು ಓದಿದ್ದೆವು.

ಸುನಂದಾರವರೂ ಭಾಗವಹಿಸಿದ್ದರು. ಓದಿದ ನಂತರ ಉತ್ತರ ಕನ್ನಡದವರೇ ಆದ ಸುಧಾ ಆಡುಕಳ ಸುನಂದರವರ ಕತೆಗಳ ಕುರಿತು ಚೆನ್ನಾಗಿ ಮಾತನಾಡಿದರು. ವಿಠಲನ ಸರದಿ ಬಂದಾಗ, ಬಹಳ ಖುಷಿಯಿಂದ ಉತ್ತರ ಕನ್ನಡದ ಸುನಂದಾ ಕಡಮೆ, ಸುಧಾ ಆಡುಕಳ ಮತ್ತು ನನ್ನನ್ನೂ ಮೆಚ್ಚಿ ಮಾತನಾಡಿ ಉತ್ತರ ಕನ್ನಡದವರೆಂಬ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಇನ್ನೊಂದು ಊರಿನಲ್ಲಿ ಇದೆಲ್ಲ ಒಂದು ಗುಂಪುತನದಂತೆ ಭಾಸವಾಗುತ್ತದೆ. ವಿಠಲ್‌ ಮನೆ ತಲುಪಿದ ಮೇಲೆ ಫೋನ್‌ ಮಾಡಿ “ನೀನು ನಮ್ಮನ್ನೆಲ್ಲ ಹೊಗಳಿ ಮಾತನಾಡಿದ್ದು ನನಗೆ ಇಷ್ಟವಾಗಿಲ್ಲ” ಅಂದೆ. ಆತ ನಕ್ಕುಬಿಟ್ಟ ಅಷ್ಟೇ. ವಾಸ್ತವವಾಗಿ, ನನಗೆ ಆತ ಮಾತನಾಡಿದ್ದು ಇಷ್ಟವೇ ಆಗಿತ್ತು.

ವಿಠಲ್‌ ತನ್ನ ಪದಗಳಲ್ಲಿ ಅಷ್ಟು ಪ್ರಾಮಾಣಿಕನಾಗಿದ್ದ. ಸಹಯಾನಸಾಹಿತ್ಯೋತ್ಸವದ ಸರ್ವಾಧ್ಯಕ್ಷರಾಗಿದ್ದ ಪ್ರೊ. ಎಮ್‌ ಜಿ ಹೆಗಡೆಯವರು ಉತ್ತರ ಕನ್ನಡಕ್ಕಿಲ್ಲದ ಭೌಗೋಳಿಕ ಗಡಿರೇಖೆಗಳನ್ನು ತುಂಡರಿಸಿ ” ಉತ್ತರ ಕನ್ನಡ: ಹೊಸತಲೆಮಾರು” ಎಂಬ ಶೀರ್ಷಿಕೆಯೇ ಸಮಸ್ಯಾತ್ಮಕ ಎಂದರು. ಉತ್ತರ ಕನ್ನಡವೆಂಬುದು ಬನವಾಸಿ ದೇಶವೂ ಅಲ್ಲ, ಕೆನರಾವೂ ಅಲ್ಲ, ಇದರ ಭೌಗೋಲಿಕ ಅಂಚುಗಳು ಮತ್ತೆ ಮತ್ತೆ ಬದಲಾಗಿರುವುದು ರಾಜಕೀಯ ಕಾರಣಗಳಿಗೇ ಹೊರತು ಸಾಂಸ್ಕೃತಿಕ ಏಕತ್ವವನ್ನು ಇಲ್ಲಿ ಕಾಣಲಾರೆವು ಎನ್ನುತ್ತಾ ಉತ್ತರ ಕನ್ನಡದ ಭಾಷೆ, ಭೌಗೋಳಿಕತೆ, ಕಸುಬುಗಳಂತೆ ಇಲ್ಲಿಯ ಜನರ ಜಾಯಮಾನವೂ ಈ ಅಂಚುಗಳನ್ನು ಮೀರುವುದೇ ಆಗಿದೆ ಎಂಬುದಕ್ಕೆ ಹಲವು ಉದಾಹರಣೆಗಳನ್ನು ಕೊಟ್ಟರು.

ಊರಿಂದ ಹೊರಟು ಹೋದ ಚಿತ್ತಾಲರು ಸ್ಕೈ ಸ್ಕ್ರೇಪರುಗಳೆದುರು ಕೋಳಿ ಗಿರಿಯಣ್ಣನ ಮನೆಯನ್ನಿಟ್ಟು ನೋಡುವಾಗ ಉತ್ತರ ಕನ್ನಡವು ಮುಂಬೈವರೆಗೂ ಚಾಚಿದರೆ, ಉತ್ತರ ಕನ್ನಡದದಾಚೆಯ ಡಾ. ಎಚ್‌ ಎಸ್‌ ಅನುಪಮಾರವರ ‘ಕೋವಿಡ್‌ ಡಾಕ್ಟರ್ ಡೈರಿ’ಯಲ್ಲಿ ಉತ್ತರ ಕನ್ನಡದವರ ಗ್ರಹಿಕೆಗೂ ದಕ್ಕದ ಉತ್ತರ ಕನ್ನಡವಿದೆ ಎಂದರು. ಗೋಷ್ಟಿಯನ್ನು ಉದ್ಘಾಟಿಸಿದ ಕವಿ ಚಿಂತಾಮಣಿ ಕೊಡ್ಲಕೆರೆಯವರ ಪದಗಳಲ್ಲೇ ಹೇಳುವುದಾದರೆ, “ವಿಶ್ವ ಕುಟುಂಬಕೆ ಗೋಡೆಗಳೆಲ್ಲಿವೆ? ಚಾವಣಿ ಆಗಸವೇ!”ವಿಠಲ ಇಂತಹ ತರ್ಕವಿಲ್ಲದೆ, ಅನುಪಮಾರವರನ್ನೂ ಸೇರಿಸಿ ಯಾರನ್ನೂ ಉತ್ತರ ಕನ್ನಡದ ಬುಟ್ಟಿಗೆ ಹಾಕಬಲ್ಲವನಾಗಿದ್ದ. ಹಾಗೆ, ಆತನ ಬುಟ್ಟಿಯಲ್ಲಿ ಬೀಳುವುದು ಎಲ್ಲರಿಗೂ ಇಷ್ಟವಾಗಿತ್ತು. ಇದನ್ನು ಸ್ವಲ್ಪ ವಿವರಿಸುತ್ತೇನೆ: ಕುವೆಂಪುರವರ ಉದಯರವಿ ಪ್ರಕಾಶನದ ಪುಸ್ತಕಗಳಲ್ಲಿ ಇಷ್ಟುದ್ದ ಬಾಲದ ಕಾಜಾಣದ ಚಿತ್ರವಿರುತ್ತದೆ.

ಈ ಉದ್ದ ಬಾಲದ ಕಾಜಾಣಕ್ಕೆ ರಾಕೆಟ್‌ ಟೇಲ್ಡ್‌ ಡ್ರೊಂಗೋ ಎನ್ನುತ್ತಾರೆ. ಈ ಹಕ್ಕಿ ಅನೇಕ ಇತರ ಹಕ್ಕಿಗಳ ಧ್ವನಿಯನ್ನು ಅನುಕರಿಸುತ್ತದೆ. ಹಕ್ಕಿಗಳದ್ದಷ್ಟೇ ಅಲ್ಲ, ಕೆಲವು ಸ್ತನಿಗಳು, ಕೀಟಗಳ ಧ್ವನಿಯನ್ನೂ ಅನುಕರಿಸುತ್ತದೆ. ನಾನಿದನ್ನು ಅನುಕರಿಸುವುದು ಎನ್ನುವುದಕ್ಕಿಂತ ಬೇರೆ ಬೇರೆ ಜೀವಿಗಳ ಭಾಷೆಯಲ್ಲಿ ಮಾತನಾಡುತ್ತದೆ ಎನ್ನುತ್ತೇನೆ.ತನ್ನ ವೈರಿಯ ಧ್ವನಿಯಲ್ಲಿ, ಇನ್ಯಾರದೋ ವೈರಿಯ ಧ್ವನಿಯಲ್ಲಿ, ತನ್ನ ವೈರಿಯ ವೈರಿಯ ಧ್ವನಿಯಲ್ಲಿ ಹೀಗೆ. ಕಾರಣ ಏನೇ ಇದ್ದರೂ ಕಾಜಾಣವು ಅಷ್ಟೆಲ್ಲ ಭಾಷೆಗಳ ಮೂಲಕ ಸಹಜೀವಿಗಳನ್ನು ಮೋಡಿ ಮಾಡುತ್ತದೆ. ಇಷ್ಟೆಲ್ಲ ಭಾಷೆಗಳ ಸೌಕರ್ಯವಿಲ್ಲದೆ ನಾವಾಡುವ ಒಂದೇ ಭಾಷೆಯಲ್ಲೂ ಇನ್ನೊಬ್ಬರ ಯೋಚನೆಗಳ ಮೇಲೆ ನಮ್ಮ ಪ್ರಭಾವವನ್ನು ಬೀರುತ್ತೇವೆ, ಮನವರಿಕೆ ಮಾಡುತ್ತೇವೆ, ನಾವು ಕತೆ ಹೇಳುತ್ತೇವೆ. ಹೇಗೆ ಕರೆದರೂ ಇಲ್ಲೆಲ್ಲ ಭಾಷೆಯನ್ನು ಬಳಸಿ ಮೋಡಿ ಮಾಡುವುದಿರುತ್ತದೆ.

ಬಿಳಿಗಿರಿ ರಂಗನ ಬೆಟ್ಟದಲ್ಲಿ ಸೋಲಿಗರ ಪಾರಿಸಾರಿಕ ಜ್ಞಾನದ ಕುರಿತು ಅಧ್ಯಯನ ಮಾಡುತ್ತಿರುವ ಡಾ. ಸಮೀರಾ ಅಗ್ನಿಹೋತ್ರಿ ಕಾಜಾಣಗಳ ಕುರಿತು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ. ಸೋಲಿಗರು ಈ ಕಾಜಾಣವನ್ನು ʻಕೋಲುಕಾರʼನೆಂದು ಕರೆಯುತ್ತಾರಂತೆ. ಕಟ್ಟಿಗೆದಾರ, ಗಾಂವಕಾರ, ಗುರಿಕಾರರಂತೆ ಕೋಲುಕಾರರೆಂಬವರು ಊರನ್ನು ಎಚ್ಚರಿಸುವವರ ಪದನಾಮ. ಕಾಜಾಣಗಳು ಬೇರೆ ಜೀವಿಗಳ ವೈರಿಯ ಭಾಷೆಯಲ್ಲಿ ಮಾತನಾಡಿ ಎಚ್ಚರಿಸುತ್ತವಂತೆ. ಕೆಲವು ಸಲ ನಿರ್ದಿಷ್ಟ ಹಕ್ಕಿಗಳ ಭಾಷೆಯಲ್ಲೇ ಮಾತನಾಡಿಯೂ ಅವುಗಳಿಗೆ ವೈರಿಯ ಕುರಿತು ಎಚ್ಚರಿಕೆ ನೀಡುತ್ತವಂತೆ.

ಸಮೀರಾರವರು ಸಾಕಷ್ಟು ವಿವರಗಳನ್ನು ಹಂಚಿಕೊಂಡರೂ ನನಗೆ ಅಸಕ್ತಿ ಹುಟ್ಟಿಸಿದ ಒಂದಂಶವು ನಾನು ಆರಂಭ ಮಾಡಿದ ಪ್ರಮೇಯಕ್ಕೆ ಪೂರಕವಾಗಿದೆ. ಕಾಜಾಣಗಳು ಮರಕುಟಿಗನ ಭಾಷೆಯಲ್ಲೂ ಮಾತನಾಡುತ್ತವೆ. ಮರಕುಟಿಗ ಹಕ್ಕಿಯು ಮರವನ್ನು ಕುಟ್ಟಿ ಕುಟ್ಟಿ ತನ್ನ ಆಹಾರವನ್ನು ಸಂಗ್ರಹಿಸುವಾಗ ಕಾಜಾಣಗಳು ಆ ಆಹಾರದಲ್ಲಿ ಪಾಲು ಪಡೆಯಲು ಬಯಸುತ್ತವೆ. ಮರಕುಟಿಗ ತಾನು ಶ್ರಮಪಟ್ಟು ಸಂಗ್ರಹಿಸುವ ಆಹಾರವನ್ನು ಹಂಚಿಕೊಳ್ಳಲು ಬಯಸುವುದಿಲ್ಲ. ಆಗ, ಕಾಜಾಣಗಳು ಮರಕುಟಿಗ ಹಕ್ಕಿಯ ಭಾಷೆಯಲ್ಲಿ ಮಾತನಾಡುತ್ತದೆ. ಮರಕುಟ್ಟಿಗವು ತನ್ನ ನಿಲುವು ಬದಲಿಸಿ ತನ್ನ ಭಾಷೆಯಲ್ಲಿ ಮಾತನಾಡುವ ಕಾಜಾಣದ ಜೊತೆ ತನ್ನ ಆಹಾರವನ್ನು ಹಂಚಿಕೊಳ್ಳುತ್ತದೆ. ತನ್ನವನಲ್ಲವೆಂದು ತಿಳಿದೂ ತನ್ನ ಭಾಷೆಯನ್ನು ಮಾತನಾಡುತ್ತಿದೆ ಎಂಬ ಕಾರಣಕ್ಕಾಗೇ ಅದು ಮೋಸಹೋಗಲು ಇಷ್ಟ ಪಡುತ್ತದೆ.ಕತೆ-ಕವಿತೆಗಳನ್ನು ಹೇಳುವ ಜನರೆಲ್ಲ ಹೀಗೆ ನಮ್ಮ ಜನರಾಗುತ್ತಾರೆ.

ಸಹಯಾನದ ಕವಿಗೋಷ್ಟಿಯ ಆರಂಭದಲ್ಲಿ ಮಾತನಾಡಿದ ಡಾ. ಎಚ್‌ ಎಸ್‌ ಅನುಪಮಾರವರು ಯುವಾಲ್ ನೋವಾ ಹರಾರೆಯ ಮಾತುಗಳನ್ನು ಎತ್ತಿಕೊಂಡು ʼಮನುಷ್ಯನ ಹಿರಿಮೆಯಿರುವುದು ಸಾವಿರಾರು ಜನರ ನಡುವೆ ಸಮನ್ವಯದಲ್ಲಿ ಕೆಲಸ ಮಾಡಬಲ್ಲ ಆತನ ಮೆದುಳಿನಲ್ಲಿ” ಎಂದರು. ಅದೇ ಯುವಾಲ ಹರಾರೆ ” ಮನುಷ್ಯನು ಜೀವ ಪ್ರಪಂಚದಲ್ಲೇ ಅತ್ಯಂತ ಬುದ್ಧಿವಂತನಾಗಿರುವುದು ಅತನ ಕತೆ ಹೇಳುವ ಗುಣದಿಂದ” ಎನ್ನುತ್ತಾರೆ. ಮನುಷ್ಯ ಕತೆಯ ಮೂಲಕ ಮನವೊಲಿಸಬಲ್ಲ. ಕತೆ ಹೇಳುವುದೆಂದರೆ, ಭಾಷೆಯ ಮೂಲಕ ಮಾಡುವ ಚೆಂದದ ಮಾಯೆ. ಇಂತಹ ಮೋಡಿಯನ್ನು ಭಾಷೆಯ ಮೂಲಕ ಮೋಹಕವಾಗಿಸುವ ಮನುಷ್ಯರೆಲ್ಲರೂ ಚೆಂದದ ಕತೆಗಾರರು.

ಮತ್ತೆ ಮತ್ತೆ ಹೀಗೆ ಮೋಸಹೋಗಲು ನಂಗಂತೂ ಇಷ್ಟ.

  • ಈ ಬರಹ ಈ ಮೊದಲು ‘ಕರಾವಳಿ ಮುಂಜಾವು’ನಲ್ಲಿ ಪ್ರಕಟವಾಗಿತ್ತು

‍ಲೇಖಕರು Admin

May 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: