ಪ್ರೀತಿ ಕೆ ಎ ಕವಿತೆ- ಕನಸುಗಳನ್ನು ಕೊಲ್ಲುವವರು…

ಡಾ ಪ್ರೀತಿ ಕೆ ಎ 

ಅವಳು ಈ ಲೋಕಕ್ಕೆ ಬಂದು
ಎರಡು ದಿನ ಕಳೆದಿತ್ತಷ್ಟೆ
ಸದ್ಯ ಮಗುವಿನ ಬಣ್ಣ ಅಮ್ಮನಂತಲ್ಲ
ಅಪ್ಪನಂತೆ ಬೆಣ್ಣೆಮುದ್ದೆ ಎಂದರು
ಬೆಳ್ಳಗಿರುವುದೆಲ್ಲ ಹಾಲು ಎಂದು
ನಂಬಿದ ಮುಗ್ಧರು ಇವರು

ಅವಳನ್ನೀಗ ಶಾಲೆಗೆ
ಸೇರಿಸುವ ಹೊತ್ತು
ಶಾಲೆ ಹತ್ತಿರವೇ ಇರಬೇಕು
ಅಪ್ಪ ಅಮ್ಮನೇ ಮಗುವನ್ನು ಕರಕೊಂಡು
ಬಿಟ್ಟು ಬರಬೇಕು ಎಂದರು
ಜಗತ್ತು ನಡೆಯುವುದು ಹೇಗೆಂದು
ಬಲ್ಲವರು ಇವರು

ಅವಳೀಗ ಹೈಸ್ಕೂಲು ಪಾಸಾಗಿದ್ದಳು
ಕೈ ತುಂಬ ಅಂಕ ಹೊತ್ತು
ಅಯ್ಯೋ ಇಡೀ ದಿನ ಪುಸ್ತಕದ ಹುಳು
ಅಂಕಗಳಿಂದ ಬುದ್ದಿವಂತಿಕೆ
ಅಳೆಯಲಾಗುವುದಿಲ್ಲ ಎಂದರು
ಐನ್ ಸ್ಟೀನ್ ವಂಶದ
ಕುಡಿಗಳು ಇವರು

ಅವಳು ಕಾಲೇಜು
ಮೆಟ್ಟಿಲು ಹತ್ತಿದ್ದಳು
ಆಟ, ಪಾಠ, ಭಾಷಣ, ನೃತ್ಯ
ಎಲ್ಲದರಲ್ಲೂ ಮುಂದು
ಮಗಳ ಮೇಲೊಂದು ಕಣ್ಣಿಟ್ಟಿರಿ
ಕಾಲೇಜು ತುಂಬಾ ಅವಳ ಬಗ್ಗೇ
ಗುಸುಗುಸು ಎಂದರು
ಸುದ್ದಿಯನ್ನು ಮನೆಮನೆಗೆ
ತಲುಪಿಸುವ ನ್ಯೂಸ್ ಚಾನೆಲ್ಲುಗಳು ಇವರು

ಅವಳೀಗ ಕಾಲೇಜು ಮುಗಿಸಿದ್ದಳು
ಚಿನ್ನದ ಪದಕ
ಮುಡಿಗೇರಿಸಿಕೊಂಡು
ಎಷ್ಟೇ ಬುದ್ದಿವಂತಿಕೆ ಇದ್ದರೂ
ಹುಡುಗಿಗೆ ಸೌಂದರ್ಯ
ಎಲ್ಲಕ್ಕಿಂತಲೂ ಮುಖ್ಯ ಎಂದರು
ಸೌಂದರ್ಯ ಸ್ಪರ್ಧೆಯಲ್ಲಿ
ಪ್ರಶಸ್ತಿಗಳನ್ನು ಬಾಚಿಕೊಂಡವರು ಇವರು

ಅವಳು ಹೊರಟಿದ್ದಳು
ಕನಸುಗಳ ಬೆನ್ನೇರಿ
ಆಗೇ ಬಿಟ್ಟಳು ಜಿಲ್ಲಾಧಿಕಾರಿ
ಹೀಗಾದರೆ ಇನ್ನು ವಿವಾಹ,
ಸಂಸಾರದ ಕಥೆಯೇನು ಎಂದರು
ಕನಸುಗಳನ್ನು ವಿಷವಿಕ್ಕದೆಯೇ
ಕೊಲ್ಲುವವರು ಇವರು

ಅವಳಾದಳು ಪ್ರೇಮವಿವಾಹ
ತನ್ನದೇ ವೃತ್ತಿಯಲ್ಲಿದ್ದವನನ್ನು
ಮೊದಲೇ ಗೊತ್ತಿತ್ತು ಹೀಗಾಗುತ್ತದೆಂದು
ಕಾಲೇಜಿನಲ್ಲಿದ್ದಾಗಲೇ ಹುಡುಗಿ ಹಾಗೇ ಎಂದರು
ಅಂಗೈ ನೋಡದೇ ಭವಿಷ್ಯ ನುಡಿಯುವ
ಜ್ಯೋತಿಷ್ಯರು ಇವರು

ಅರೇ ಇವರು ಮೆಚ್ಚುವ
ಹುಡುಗಿ ಜಗದೊಳಿಲ್ಲ
ಗುಲಾಬ್ ಜಾಮೂನಲ್ಲೂ ಕಹಿ
ಹುಡುಕುತ್ತಾರಲ್ಲ ಎನ್ನದಿರಿ
ತಪ್ಪು ಇವರದಲ್ಲ ಬಿಡಿ
ಮೊದಲಿಂದಲೂ ಇವರ
ಮನಸ್ಸಿಗೆ ಸಕ್ಕರೆ ಖಾಯಿಲೆ
ಸಿಹಿಯ ಮೇಲೆ ಆಸೆಯೇನೋ ಇದೆ
ಆದರೆ ತಿಂದರಾಗುವುದಿಲ್ಲ !

‍ಲೇಖಕರು Admin

August 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: