
ಆಶಾ ಜಗದೀಶ್
ಪ್ರೀತಿಯ ತಮ್ಮನಿಗೆ…
ಬಹುಶಃ ನೀನು ಮರೆತಿರಬಹುದು ಬಾಲ್ಯದಲ್ಲಿ ನಾವು ಅದೆಷ್ಟು ಆಟ ಆಡಿದ್ದೇವೆ, ಜಗಳ ಮಾಡಿದ್ದೇವೆ, ಹುಸಿ ಮುನಿಸು, ಕೋಪ ಮಾಡಿಕೊಂಡು ಮಾತುಬಿಟ್ಟಿದ್ದೇವೆ. ಒಬ್ಬರಿಗೊಬ್ಬರು ಕಣ್ಣು ಮಿಲಾಯಿಸಲಾರದಷ್ಟು ದ್ವೇಷ ಸಾಧಿಸಿದ್ದೇವೆ. ಮತ್ತೆ ಅರೆಕ್ಷಣದಲ್ಲಿಯೇ ಅದನ್ನೆಲ್ಲ ಮರೆತು ಒಂದಾಗಿಯೂ ಇದ್ದೇವೆ. ನನ್ನ ಸ್ಕೂಲ್ ಡೇಗಳಿಗೆ ನೀನು ಬಂದು ಬಣ್ಣ ಹಚ್ಚಿದ್ದು, ನನ್ನ ಖಡ್ಗ ಕಿರೀಟಗಳಿಗಾಗಿ ಹಟ ಹಿಡಿದದ್ದು, ಮತ್ತದನ್ನು ತೊಟ್ಟು ಫೋಟೋ ತೆಗೆಸಿಕೊಂಡದ್ದು ಎಷ್ಟೆಲ್ಲ ನೆನಪುಗಳು. ಎಷ್ಟು ಮುದ್ದಾಗಿದ್ದೆ ನೀನು ಮಗುವಾಗಿದ್ದಾಗ. ಎಲ್ಲರೂ ನಿನ್ನನ್ನು ಎತ್ತಿ ತಿರುಗುವವರೇ… ಎಂಥ ವಿಪರ್ಯಾಸ ಅಲಾ… ಪ್ರೀತಿ ಇದ್ದೂ ಅದನ್ನು ತೋರಿಸಿಕೊಳ್ಳಲಾಗದೆ ಹೋಗುವಂಥದ್ದು. ಈ ಹಿರಿಯ ಮಕ್ಕಳಾಗಿ ಹುಟ್ಟಬಾರ್ದು ಅಂತ ಒಮ್ಮೊಮ್ಮೆ ಅನ್ಸುತ್ತೆ ನೋಡು. ಎಲ್ಲಿ ನಮಗೆ ಪ್ರೀತಿ ಕಡಿಮೆಯಾಗುತ್ತೋ ಎನ್ನುವ ಅಭದ್ರತಾ ಭಾವದಲ್ಲೇ ತೊಳಲುತ್ತಾ, ಒಳಗೊಳಗೇ ನೋಯುತ್ತಾ ಯಾರಿಗೂ ಅರ್ಥವಾಗದ ಕಗ್ಗಂಟಿನಂತೆ ಉಳಿದುಬಿಡುತ್ತೇವೆ. ಮತ್ತೆ ಆ ಪುಟ್ಟ ಮನಸ್ಸಿನ ದ್ವಂದ್ವವನ್ನು ಎಲ್ಲರೂ ಕಡೆಗಣಿಸಿಯೂ ಬಿಡುತ್ತಾರೆ. ಆದರೂ ನನಗೆ ನಿನ್ನ ಪುಟ್ಟ ಪಾದಗಳು, ಮುದ್ದಾದ ಕೈಗಳು ಈಗಲೂ ನೆನಪಿವೆ. ಅದು ನನ್ನ ತಮ್ಮ ಎಂದು ಹೆಮ್ಮೆ ಪಟ್ಟ ಕ್ಷಣಗಳೂ ಹಸಿರಾಗಿವೆ.
ನೀನು ನಮ್ಮ ಮನೆಯ ರಾಜಕುಮಾರ ಎನ್ನುವಂತೆ ಬೆಳೆದವನು. ತುಂಟತನ, ಮಾತಿನಲ್ಲಿರುತ್ತಿದ್ದ ಗತ್ತು, ಯಾರಿಗೂ ಹೆದರದ ಸ್ವಭಾವ, ನೇರ ನಿಷ್ಠುರ ಮಾತು… ಆದರೆ ನಾಲ್ಕೈದನೇ ತರಗತಿಗೆ ಬಂದರೂ ಉಪ್ಪಿಟ್ಟನ್ನ ಇಪ್ಪಿಟ್ಟು ಎನ್ನುತ್ತಿದ್ದವನು, ಉಪ್ಪಿನಕಾಯಿಯನ್ನ ಇಪ್ಪಿನಕಾಯಿ ಎನ್ನುತ್ತಿದ್ದವನು. ನಿನ್ನ ತೊದಲು ಮಾತುಗಳಿಗೆ ನಕ್ಕು ನಿನ್ನ ಕೋಪಕ್ಕೆ ಗುರಿಯಾಗಿ ಗುದ್ದಿಸಿಕೊಂಡ ನೆನಪುಗಳೂ ಇವೆ. ಆದರೆ ಚಿಕ್ಕವನಿದ್ದಾಗ ಎಷ್ಟೊಂದು ಧೈರ್ಯವಿದ್ದ ನೀನು ‘ಅಲ್ಲಾ ಹು ಅಕ್ಬರ್’ ಎನ್ನು ಅಜಾ಼ನ್ ಕೇಳಿದ ಕೂಡಲೆ, ಹೆದರಿ ಅಮ್ಮನ ಸೆರಗಿನಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದೆಯಲ್ಲ ಎಂಥ ಆಶ್ಚರ್ಯವಲ್ಲವಾ…
ಒಮ್ಮೆ ನೀನು ಆಟಕ್ಕೆ ಹೋದಾಗ ಎಷ್ಟು ಹೊತ್ತಾದರೂ ಮನೆಗೆ ಬಂದಿರಲಿಲ್ಲ. ನಾನು ಅಪ್ಪನೊಟ್ಟಿಗೆ ಅದೆಷ್ಟು ಬೀದಿಗಳು, ಅವೆಷ್ಟು ಮನೆಗಳು… ತಡಕಾಡಿದರೂ ನೀನು ಸಿಕ್ಕಿರಲಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರೆ ಎಲ್ಲಿ ಇಬ್ಬರೂ ಅತ್ತುಬಿಡುತ್ತಿದ್ದೆವೋ, ಹಾಗಾಗಿಯೇ ಬಹುಶಃ ನಾವಿಬ್ಬರೂ ಮುಖ ನೋಡಿಕೊಳ್ಳದೇ ಹುಡುಕುತ್ತಿದ್ದೆವೋ. ಕೊನೆಗೂ ನೀನು ಸಿಕ್ಕಿರಲಿಲ್ಲ. ಎಲ್ಲೆಲ್ಲೋ ಹುಡುಕಿ ಸೋತು ಮನೆಗೆ ಬಂದಾಗ ನಿನ್ನ ಮುಖ ಕಾಣುತ್ತಲೇ ನನಗಾದ ಸಂತೋಷ ಅದೆಷ್ಟೋ. ಅಪ್ಪ ಮಾತ್ರ ಸಂತೋಷವನ್ನ ಅಡಗಿಸಿಕೊಂಡು ನಿನ್ನ ಬೆನ್ನಿಗೊಂದು ಬಾರಿಸಿದ್ದರು. ಅವರ ಕೋಪದ ಹಿಂದಿದ್ದ ಪ್ರೀತಿಯ ತೀವ್ರತೆ ಕಂಡು ಮಾತೇ ಹೊರಟಿರಲಿಲ್ಲ.

ಚಿಕ್ಕವನಿದ್ದಾಗ ನಿನಗೆ ಪೆನಿಸಿಲಿನ್ ಇಂಜೆಕ್ಷನ್ ಆಗುತ್ತಿರಲಿಲ್ಲ. ಅದು ನಮಗೂ ತಿಳಿದಿರಲಿಲ್ಲ. ಒಮ್ಮೆ ನಿನಗೆ ಹುಷಾರಿಲ್ಲದಾಗ ಸಣ್ಣ ವಯಸ್ಸಿನ ವೈದ್ಯರೊಬ್ಬರು ನಿನಗೆ ಪೆನಿಸಿಲಿನ್ ಇಂಜೆಕ್ಷನ್ ಮಾಡಿಬಿಟ್ಟಿದ್ದರು. ಇಂಜೆಕ್ಷನ್ ಮಾಡಿದ ಕಾಲುಗಂಟೆಯೊಳಗೆ ಅದು ರಿಯಾಕ್ಷನ್ ಆಗಿ ನಿನ್ನವಪಲ್ಸ್ ಸಿಗದಂತೆ ಆಗಿಬಿಟ್ಟಿತ್ತು. ಪಾಪ ಆ ವೈದ್ಯರೂ ಅದೆಷ್ಟು ಹೆದರಿಬಿಟ್ಟಿದ್ದರೆಂದರೆ, ಅದೇ ಸಮಯಕ್ಕೆ ಅವರ ಗೆಳೆಯರಾಗಿದ್ದ ಮತ್ತೊಬ್ಬ ವೈದ್ಯರು ಅವರ ಜೊತೆ ಇರದೇ ಹೋಗಿದ್ದಿದ್ದರೆ ಅಂದು ಏನಾಗಿರುತ್ತಿತ್ತೋ… ಅವತ್ತೂ ಸಹ ನಾವೆಲ್ಲಾ ಮನೆ ಮಂದಿ ಅದೆಷ್ಟು ಹೆದರಿದ್ದೆವು ಎಂದರೆ ಬಣ್ಣಿಸಲಸಾಧ್ಯ.
ಚಿಕ್ಕವನಿದ್ದಾಗ ಮಹಾ ತುಂಟನಿದ್ದ ನಿನಗೆ ಆಗಲೇ ಹತ್ತಾರು ಬಿರುದು ಬಾವಲಿಗಳು. ಕಟಾರಿವೀರ, ಮೋರಿಹಾರಿದ ವೀರ… ನಗು ಬರುತ್ತದೆ. ಆದರೆ ನನ್ನ ಗೆಳತಿಯರೂ, ಅವರ ಅಮ್ಮಂದಿರೂ ಆ ಬಿರುದುಗಳನ್ನು ನೆನೆಯುತ್ತಾ ನನ್ನನ್ನು ಗೇಲಿ ಮಾಡಿದರೆ ಮಾತ್ರ ನಾನು ಕೋಪಿಸಿಕೊಂಡು ಅವರಿಗೆ ಮಾರುತ್ತರ ಕೊಟ್ಟೇ ಬರುತ್ತಿದ್ದೆ. ಎದುರಿಗಿದ್ದಾಗ ಸದಾ ನಿನ್ನೊಂದಿಗೆ ಜಗಳ ಆಡುತ್ತಿದ್ದ ನನಗೆ, ನಿನಗೆ ತೊಂದರೆಯಾದಾಗ ಕರುಳಿನೊಂದು ಚೂರಿಗೆ ಚುಚ್ಚಿಸಿಕೊಂಡಂತೆ ನೋವಾಗುತ್ತಿದ್ದುದು ಆಶ್ಚರ್ಯದ ಸಂಗತಿ. ನಮ್ಮ ಬಾಲ್ಯದ ಪುಟಗಳನ್ನು ತಿರುವಿದಾಗ ಕಾಣುವುದೆಲ್ಲಾ ನಮ್ಮ ಏರು ಜಗಳಗಳೇ. ನಾವು ಯಾವ ವಿಷಯಕ್ಕೆ ಜಗಳ ಆಡಿಲ್ಲ ಹೇಳು… ಅಯ್ಯಬ್ಬಾ ನಮ್ಮ ಅಕ್ಕಪಕ್ಕದ ಮನೆಯವರೆಲ್ಲಾ ‘ಏನ್ರೀ ಆಶಾ, ಅರುಣ ಅದೆಷ್ಟು ಜಗಳ ಆಡ್ತಾರ್ರೀ ನಿಮ್ಮನೇಲಿ! ಸಾಲಿಗ್ ಹಾದಾಗ್ಲೇ ತುಸು ತಣ್ಣಗಾಗ್ತತಿ ನೋಡ್ರಿ ಮನಿ…’ ಅನ್ನೋರು. ಅಷ್ಟು ಜಗಳ. ಬಹುಶಃ ಅಳೆದರೆ ಮುಂದಿನ ಜನುಮಕ್ಕೂ ಆಗುವಷ್ಟು.
ಹೈಯರ್ ಎಜುಕೇಶನ್ ಅಂತ ನಾನು ಮನೆ ತೊರೆದದ್ದು, ತಿಂಗಳಿಗೊಮ್ಮ ಮನೆಗೆ ಬಂದಾಗ ನೀನು ಸುಮ್ಮನಿರುತ್ತಿದ್ದದು ನಮ್ಮ ಸಂಬಂಧಕ್ಕೊಂದು ನಿರಾಳತೆಯಿರಬಹುದಾ…?! ಆದರೆ ತೋರಿಸಿಕೊಳ್ಳದ ಪ್ರೀತಿಯೊಂದು ಸದಾ ನಮ್ಮ ನಡುವೆ ಎಚ್ಚರವಾಗಿರುತ್ತಿತ್ತು. ಒಬ್ಬರನ್ನೊಬ್ಬರು ಗೌರವಿಸುವಷ್ಟು ಬಾಂಧವ್ಯವೂ ಇತ್ತು. ಬೆಳೆಯುತ್ತಾ ಬೆಳೆಯುತ್ತಾ ಕೆಲವು ವಿಷಯಗಳಲ್ಲಿ ನೀನೆ ಅಣ್ಣನಂತಾದೆ. ಅದು ನನಗೂ ಖುಷಿಯೇ. ನಿನ್ನ ಅಗ್ರೆಸೀವ್ನೆಸ್ ಮಾತ್ರ ಭಯಹುಟ್ಟಿಸುತ್ತಿತ್ತು. ಆದರೆ ಅಥದ್ದೇನೋ ಆಗಲಿಲ್ಲ. ಈಗಿನ ಈ ಹೊತ್ತಿಗೆಲ್ಲ ನೀನು ನಾವು ಊಹಿಸಿರದ ಎತ್ತರಕ್ಕೆ ಏರಿದ್ದೀಯಾ. ನಿನ್ನ ವೃತ್ತಿ ಮತ್ತು ಬದುಕಿನಲ್ಲಿ ಯಶಸ್ಸು ಪಡೆದಿದ್ದೀಯಾ. ಅದು ಯಾವ ಅಕ್ಕನಿಗಾದರೂ ಸಂತಸದ ಸಂಗತಿಯೇ.
ನಿನಗೆ ಗೊತ್ತಾ… ಎಷ್ಟೋ ಸಾರಿ ನೀನು ಮನೆಯಲ್ಲಿ ಏನೋ ಒಂದು ಕಿತಾಪತಿ ಮಾಡಿ, ಅಮ್ಮ ದಾಸವಾಳದ ಚುಳುಕಿ ಕೋಲು ಕಿತ್ತು ತರುವ ಹೊತ್ತಿಗೆಲ್ಲಾ, ಅವರ ಕೋಪದ ಕೈಗೆ ಸಿಗದೆ ಓಡಿ ಹೋಗಿಬಿಟ್ಟಿರುತ್ತಿದ್ದೆ. ಕೊನೆಗೆ ಅವರ ಕೈಗೆ ಸಿಗುತ್ತಿದ್ದವಳು ನಾನು. ಅವರ ಕೋಪ ನನ್ನ ಕಡೆ ತಿರುಗುತ್ತಿತ್ತು. ಅದೆಷ್ಟೋ ನಿನ್ನ ಪಾಲಿನ ಪೆಟ್ಟುಗಳನ್ನು ನಾನು ತಿನ್ನಬೇಕಾಗಿ ಬರುತ್ತಿತ್ತು. ಈಗ ನೆನೆಸಿಕೊಂಡರೆ ನಗು ಬರುತ್ತದೆ. History repeats ಅಂತಾರಲ್ಲ ಹಾಗೆ ನನ್ನ ಮಕ್ಕಳೂ ನಮ್ಮ ಹಾಗೇ ಜಗಳವಾಡುತ್ತಾರೆ. ಆಗೆಲ್ಲಾ ನನಗೆ ನೀನು ನೆನಪಾಗುತ್ತೀಯ.
ಆಗ ನಾವು ಅಷ್ಟೆಲ್ಲಾ ಜಗಳ ಆಡಬಾರದಿತ್ತು ಅನಿಸುತ್ತದೆ. ಒಂದಷ್ಟು ತಾಳ್ಮೆ,, ಸೋಲುವ ಗುಣ ಇಬ್ಬರಲ್ಲಿಯೂ ಇರಬೇಕಿತ್ತು ಅಂತಲೂ ಅನಿಸುತ್ತದೆ. ಬಹುಶಃ ಆಗ ನಮ್ಮ ಜಗಳಗಳ ಹೊರತಾಗಿಯೂ ಇನ್ನಷ್ಟು ಹೆಚ್ಚಿನ ಮಧುರ ಭಾವಗಳು ನಮ್ಮ ಸಂಬಂಧದಲ್ಲಿ ಇರುತ್ತಿತ್ತು ಅಂತ ತೀವ್ರವಾಗಿ ಅನಿಸುತ್ತದೆ. ಜಗತ್ತಿನಲ್ಲಿ ಅಪ್ಪ ಅಮ್ಮನನ್ನು ಹೊರತುಪಡಿಸಿ ಮತ್ಯಾರಾದರೂ ಕಣ್ಮುಚ್ಚಿ ನಂಬಲು ಸಾಧ್ಯವಾಗುವಂತಹ ವ್ಯಕ್ತಿ ಇದ್ದಾರೆ ಎಂದರೆ ಅದು ಒಡಹುಟ್ಟಿದವರು ಮಾತ್ರ. ನಮ್ಮ ತಿಳುವಳಿಕೆ ಮಾಗಿ ಒಂದಷ್ಟು ಬುದ್ಧಿ ಬರುವ ಹೊತ್ತಿಗೆ ಓದು, ನೌಕರಿ, ಮದುವೆ ಅಂತ ದೂರವಾಗಿ ಆ ಕ್ಷಣಗಳನ್ನು ಮತ್ತೆ ಸರಿಪಡಿಸೊಕೊಳ್ಳುವ ಅವಕಾಶ ವಂಚಿತರಾಗಿ ಹಾಗೇ ಬದುಕು ನಮ್ಮನ್ನೆಳೆದುಕೊಂಡು ಮುಂದಕ್ಕೋಡಿಯೇ ಹೋಗಿಬಿಡುತ್ತದೆ. ನೀನೀಗ ಸಪ್ತಸಾಗರಗಳಾಚೆ ವ್ಯಸ್ತ, ನಾನು ನನ್ನ ಸಂಸಾರ ಸಾಗರದೊಳಗೆ… ಬದುಕು ಮತ್ತೊಂದೇ ಒಂದು ಅವಕಾಶ ಕೊಡಲಾರದ ಮಹಾ ಕಟುಕ…
ಇಂದಿನ ತಂತ್ರಜ್ಞಾನ ಭೂಮಿಯನ್ನು ಚಿಕ್ಕದಾಗಿಸುತ್ತಿದೆ. ಜೊತೆಗೆ ವ್ಯಕ್ತಿ ವ್ಯಕ್ತಿಯ ನಡುವೆ ಗೋಡೆ ನಿರ್ಮಿಸುತ್ತಿದೆ. ನಾವೆಲ್ಲರೂ ಈಗ ಏಕಾಂಗಿಗಳು. ಒಂಟಿತನ, ಆತಂಕ, ಖಿನ್ನತೆ, ಹತಾಶೆಗಳೇ ನಮ್ಮ ಜೊತೆಗಾರರು. ನಮ್ಮ ಗೋಡೆಗಳು ಬಲಿಷ್ಟವಾಗುತ್ತಿವೆ. ಗೋಡೆಗಳ ಕೆಡವುವ ಭೂಮಿ ತಾಳ್ಮೆ ಕಳೆದುಕೊಂಡಿದೆ. ನಮ್ಮ ಬಾಹುಗಳು ಇಲ್ಲವಾಗಿವೆ. ತಬ್ಬುವ ಎದೆ ಬಂಜರು. ನಮ್ಮ ಹೃದಯಗಳು ಯಾಂತ್ರಿಕವಾಗಿ ಚಲನೆಯಲ್ಲಿವೆಯೇ ಹೊರತು ಮಿಡಿಯುತ್ತಿಲ್ಲ. ನಮಗೆ ನಮ್ಮ ಹೊರತಾಗಿ ಏನೂ ಕಾಣುತ್ತಿಲ್ಲ. ಮನುಷ್ಯ ಸಂಘ ಜೀವಿ. ಸಂಘ ತೊರೆದ ಮನುಷ್ಯ, ನೀರ ತೊರೆದ ಮೀನು. ಯಾಕೋ ನಾವು ದೂರವಾಗುತ್ತಿದ್ದೇವೆ ಎನ್ನುವುದನ್ನು ಒಪ್ಪುವುದಕ್ಕೆ ಮನಸ್ಸು ತಯಾರಿಲ್ಲ ನೋಡು…
ಇನ್ನಾದರೂ ಇಟ್ಟಿಗೆಗಳಿಗೆ ಪ್ರೀತಿಯ ಅಂಟು ಸುರಿದು ಜೋಡಿಸಬೇಕು. ಬಾಂಧವ್ಯದ ಪುಟ್ಟ ಗೂಡನ್ನಾದರೂ ಜೊತೆಯಾಗಿ ನಿರ್ಮಿಸಬೇಕು. ಯಾರು ಎಷ್ಟು ತಾನೆ ಶಾಶ್ವತ!? ನೀರಮೇಲಣ ಗುಳ್ಳೆಯಷ್ಟೆ ಬದುಕು. ಒಂದು ಮನವಿ, ಸಪ್ತಸಾಗರ ದಾಟಿ ಬರುವ ಮನಸು ಮಾಡು. ಸಂಸಾರ ಸಾಗರ ದಾಟುವ ಸರದಿ ನನ್ನದು. ನಮ್ಮನ್ನು ನಾವು ಹುಡುಕುವ ಪ್ರಯತ್ನ ನಡೆಸೋಣ. ಮುಂದಿನದ್ದು ಕಾಲದ ಇಚ್ಛೆ.
ಹ್ಯಾಪಿ ರಕ್ಷಾ ಬಂಧನ….
ಇಂತಿ
ನಿನ್ನ
ಅಕ್ಕ
0 ಪ್ರತಿಕ್ರಿಯೆಗಳು