ಶ್ರೀ ಡಿ ಎನ್
**
ಮುಚ್ಚಿದ ಶಟರಿನ ಮೇಲೆ
ಬಿಲ್ಲೆತ್ತಿ ನಿಂತಿದ್ದೀ ಯಾಕೆ
ತೆರೆಗಳ ಮೇಲೂ ಬೆಂಕಿ ಚೆಲ್ಲುತ್ತೀ ಯಾಕೆ
ಕಾಯುವವ ತಾನೆ ನೀ,
ಕೊಲುವ ದ್ವೇಷ ಯಾಕೆ
ಬಡಪಾಯಿ ಹನುಮರ ಎದೆಗಳ ಕಲಕುವೆ
ಯಾಕೆ
ಹಸಿದ ಹೊಟ್ಟೆಗೆ ನಿನ್ನ ಹೆಸರಲಿ ಹಚ್ಚುತ್ತಾನೆ
ಬೆಂಕಿ,
ಕನಲುತ್ತಾನೆ, ಕಲಕುತ್ತಾನೆ ನಮ್ಮ ಆ
ರಾಮ, ನಿನ್ನ ಅಮಲಲ್ಲಿವ ಕುರುಡ
ರಹೀಮನ ಕಷ್ಟಕ್ಕೆ ಇವ ಬಂಡೆಕಲ್ಲು
ಹುಡುಕುತ್ತಾನೆ ಕಾಣದ ಅಶೋಕವನಕ್ಕೆ,
ಇಲ್ಲದ ರಾವಣಗೆ, ಅಳು ಮರೆತ ಸೀತೆಗೆ
ಪರದೆಯೊಳಗೆ ಬಿಕ್ಕುವ ಬೇಟಿಯರ
ಬಚಾವ್ ಕರೆಗಿವ ಕಿವುಡು
ನಿನ್ನ ಹೆಸರಲಿ ಕಾಣದ ಕೈ
ಆಡಿಸಿದಂತಾಡುತ್ತಾನೆ ಕಾಲಾಳು ಹನುಮ
ಓಟು ನಾಟಕ ಎರಡೂ ಮುಗಿದಾಗ
ನೀನು ಅವನು ಇಬ್ಬರಿಗೂ ರೆಸ್ಟು
ನೀನು ಹೀಗೆ ಬಿಲ್ಲೇರಿಸಿ ಸದ್ದಿಲ್ಲದೆ ನಿಲ್ಲುತ್ತಿ,
ಇಲ್ಲ ಸಿನಿಮಾಗಳಲಿ ಬಿಲ್ಲೆತ್ತಿ ಕೊಲ್ಲುತ್ತಲೇ
ಇರುತ್ತಿ
ಊಟ ನಿದ್ರೆ ನಿನಗೆ ಒಂದೂ ಬೇಡ
ಹನುಮ ಹಾಗಲ್ಲ..
ಮತ್ತೆ ಕಿಷ್ಕಿಂದೆಯಲಿ
ಬಂದಿ,
ಚಡಪಡಿಸುವ, ಬಾನು ಸಿಕ್ಕದ ಹಕ್ಕಿಯ ಹಾಗೆ
ಬಣ್ಣ ಮೆತ್ತಿ ಸಿಗ್ನಲಲಿ ಬೇಡಿದರೇ ಒಪ್ಪೊತ್ತು
ಊಟ
ಕೂಡುವ ಕಳೆಯುವ ಬುದ್ಧಿ ಇವನಿಗಿಲ್ಲ
ಆಟದ ಗೊಂಬೆ ಇವನು ಗುರಿಯೇ ಇಲ್ಲ..
ನೀನು ದೇವರೇ ಹೌದಾ?
ನಂಬೋತರ ಪ್ರೂಫ್ ಕೊಡು
ಬಡವರ ಬದುಕಿನ ಶಟರು ಮುಚ್ಚುವ
ಹನುಮಗೆ ಬದುಕು ಕೊಡು
ಕನಸು ಕಾಮನಬಿಲ್ಲು ಕಟ್ಟಿಕೊಡು
ಎದೆಬಿಚ್ಚಿ ಹಾರಲು ಬಾನು ಕೊಡು
ಕಾಯುವವ ತಾನೆ ನೀ,
ಕಾಯವನ ಚಾಣಕ್ಯರ ಸಂಚಿನಿಂದ
ಒಡೆಯುವ ಕೆಲಸದಿಂದ
ಹೊಟ್ಟೆಗೆ ಹಿಟ್ಟುಬಟ್ಟೆ ಕೊಟ್ಟು
ಕಟ್ಟೋದು ಹೇಳಿಕೊಡು
ಸರಿತಪ್ಪು ಕಾಣುವ ಕಣ್ಣು ಕೊಡು
ನೀನೊಲುಮೆಯ ಚಿಲುಮೆ ತಾನೇ,
ಒಂಚೂರು ಪ್ರೀತಿ ಇವನೆದೆಯಲಿ ಬಿತ್ತು,
ಗಿಡವಾಗಿ ಮರವಾಗಿ ಬೆಳೆಯಬಿಡು..
ಆ ಮರವೇ ರಾಮನಾಗಲಿ ಒಂದು ದಿನ
ಪ್ರೀತಿಯೇ ದೇವರಾಗಲಿ ಒಂದು ದಿನ..
0 Comments