ಪ್ರೀತಿಯನ್ನು ತನ್ನಷ್ಟಕ್ಕೆ ಚಿಗುರಲು ಬಿಡಬೇಕು..

ಕಾವ್ಯಕ್ಕೆ ಮತ್ತು ಅದರಷ್ಟೇ ಗಾಢವಾದ ಪ್ರೀತಿಗೆ

ಸಂದೀಪ್ ಈಶಾನ್ಯ

But a coarse old man am I
I chose the second best
I forgot it all awhile
Upon a women’s breast

ನನ್ನ ಪುಸ್ತಕದ ಕಪಾಟಿನ ನಡುವೆ ತಣ್ಣಗೆ ಧೂಳಿಡಿಯುತ್ತಾ ಹರಿದು ರದ್ದಿಯಾಗಿದ್ದ ಸಣ್ಣ ಪುಸ್ತಕದಲ್ಲಿ ಈ ಮೇಲಿನ ಕಾವ್ಯದ ಸಾಲುಗಳು ಕಣ್ಣಿಗೆ ಬಿದ್ದಾಗ ಒಂದು ಕ್ಷಣ ಬೆಚ್ಚಿ ಬಿದ್ದೆ. ಈ ಸಾಲುಗಳು ಕೇವಲ ಕಾವ್ಯವಷ್ಟೇ ಅಲ್ಲ ಎನ್ನುವುದು ಕ್ರಮೇಣವಾಗಿ ಸ್ಪಷ್ಟವಾಗುತ್ತಿತ್ತು. ಕವಿ, ಚಿಂತಕ, ವಿನೋದಿ ಡಬ್ಲ್ಯು  ಬಿ ಏಟ್ಸ್ ತನ್ನ ೭೨ನೇ ವಯಸ್ಸಿನಲ್ಲಿ ಬರೆದ ಪದ್ಯದ ಸಾಲುಗಳಿವು.

ಏಟ್ಸ್ ನ ಕಾವ್ಯವನ್ನು ಗಂಭೀರವಾಗಿ ಅಭ್ಯಸಿಸದ ಸಾಹಿತ್ಯ ವಿಧ್ಯಾರ್ಥಿಗಳಿಗೂ ಏಟ್ಸ್ ಹೆಸರು ಅಷ್ಟೇನೂ ಅಪರಿಚಿತವಲ್ಲ. ಗಯಾಟೆ, ಭೋದಿಲೇರ್, ಟಾಲ್ಸ್ಟಾಯ್, ಕಾಮೂ, ಕಾಫ್ಕಾ, ಟಿ.ಎಸ್ ಎಲಿಯೇಟ್ ರೀತಿಯಲ್ಲೇ ಏಟ್ಸ್ ಕೂಡ ವಿಶ್ವಸಾಹಿತ್ಯವನ್ನು ಪ್ರಭಾವಿಸಿದವನು. ಕಾವ್ಯ ಪ್ರಿಯರಿಗೆ ವಾಸ್ತವ ಹಾಗೂ ಸತ್ಯದ ಸೂಜಿಮೊನೆ ತಾಕಿಸಿದವನು. ಆದರೆ ಆಳದಲ್ಲಿ ಮಾತ್ರ ಉಳಿದ ಎಲ್ಲರಿಗಿಂತಲೂ ಭಿನ್ನವಾಗಿದ್ದವನು. ಅತ್ಯಂತ ಸಂಕೋಚದ ವ್ಯಕ್ತಿಯಾಗಿದ್ದ ಏಟ್ಸ್ ಮೊದಲಿನಿಂದಲೂ ಒಂಟಿತನವನ್ನು ಗಾಢವಾಗಿ ನಂಬಿಕೊಂಡು ಬಂದವನು.

ನನಗೆ ಏಟ್ಸ್ ಇಷ್ಟವಾಗುವುದಕ್ಕೆ ಕಾರಣ ಇಷ್ಟೇ. ಅವನ ಮುಗ್ದತೆ ಹಾಗೂ ಒಂಟಿತನದ ಆಕಾರವಾದ ಸರಳ ಪದ್ಯಗಳು. ಐರ್ಲೆಂಡ್ ನ ಮಧ್ಯಭಾಗದ ಸಣ್ಣ ಪ್ರಾಂತ್ಯದಲ್ಲಿ ಜನಿಸಿದ ಏಟ್ಸ್ ಮೊದಲು ಕಾವ್ಯವನ್ನು ಬರೆಯಲು ಶುರು ಮಾಡಿದ್ದು ಅವನ ಅಮ್ಮನ ಅಸಹಾಯಕತೆ ಕಂಡಂತೆ ಅವನ ಅಪ್ಪ ಅವನನ್ನು ನಿರಾಕರಿಸಿಲು ಶುರುಮಾಡಿದ ಮೊದಲ ದಿನಗಳಲ್ಲಿ. ಹೀಗೆ ಒಬ್ಬನೇ ಕೂತು ತನ್ನನ್ನೇ ತಾನು ಛೇಡಿಸಿಕೊಳ್ಳುತ್ತಿದ್ದ ಅಪರೂಪದ ಘಳಿಗೆಯಲ್ಲೇ ಅಭೂತಪೂರ್ವ ಕಾವ್ಯದ ತುಣುಕುಗಳು ಏಟ್ಸ್ ಎದೆಯ ಒಳಗಿನಿಂದ ಸೀದಾ ಎದುರಿದ್ದ ಹಾಳೆಯ ಮೇಲೆ ಬಂದು ಕೂತುಬಿಡುತ್ತಿದ್ದವು.

ಶಾಲೆಯಲ್ಲಿದ್ದಾಗಲೇ ಹತ್ತಾರು ಪದ್ಯಗಳನ್ನು ಬರೆದ ಏಟ್ಸ್ ಆರಂಭದಲ್ಲೇ ಅಪಾರ ಜನಪ್ರಿಯತೆ ಪಡೆದವನು. ಯಾರಾದರೂ ಏಟ್ಸ್ ಗೆ ನೀನು ಕಾವ್ಯಗಳನ್ನು ಚೆನ್ನಾಗಿ ಬರೆಯುತ್ತೀಯಾ ಎಂದು ಹೇಳಿದರೆ ಶಾಂತ ಸ್ವಭಾವದ ಏಟ್ಸ್ ಗಟ್ಟಿಯಾಗಿ ಅದು ಬರೀ ಕಾವ್ಯವಲ್ಲ, ನನ್ನದೇ ಸ್ವಂತ ಮಾತುಗಳು ಎಂದು ಗಟ್ಟಿಯಾಗಿ ಚೀರಿಬಿಡುತ್ತಿದ್ದನಂತೆ.

ಹೀಗೆ ಹುಟ್ಟಿನಿಂದಲೂ ಒಂಟಿಯಾಗಿ, ಸಿಟ್ಟಿನಿಂದ, ನೇರ ನಿಷ್ಟೂರನಂತೆ ಬದುಕುತ್ತಿದ್ದ ಏಟ್ಸ್ ತನ್ನ ಜೀವನದ ಪಥವನ್ನು ಬದಲಿಸಿಕೊಂಡಿದ್ದು ಐರ್ಲೆಂಡ್ ಸ್ವಾತಂತ್ರ್ಯ ಕ್ಕಾಗಿ ಇಂಗ್ಲೆಂಡ್ ವಿರುದ್ದ ಬಂಡೆದ್ದು ನಿಂತಾಗ. ಅತೀ ಚಿಕ್ಕ ವಯಸ್ಸಿಗೆ ಕಾವ್ಯದಲ್ಲಿ ಎಲ್ಲರನ್ನೂ ಆಕರ್ಷಿಸಿದ ಏಟ್ಸ್ ಗೆ ಮೊದಲ ಭಾರಿ ಹುಡುಗಿಯೊಬ್ಬಳ ಮೇಲೆ ಪ್ರೀತಿಯಾಗಿತ್ತು. ಸ್ವಾತಂತ್ರ್ಯ  ಚಳುವಳಿಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಾಡ್ಗಾನ್ ಎಂಬ ಸ್ನಿಗ್ಧ ತರುಣಿಯನ್ನು ಏಟ್ಸ್ ಗಾಢವಾಗಿ ಪ್ರೀತಿಸಲು ಆರಂಭಿಸಿದ.

ಏಟ್ಸ್ ನ ಕಾವ್ಯಗಳನ್ನು ಒಂದು ಹುಚ್ಚಿನಂತೆ ಮಾಡ್ಗಾನ್ ಓದುತ್ತಿದ್ದಳು. ಈಗಾಗೇ ಅವಳು ನನ್ನನ್ನು ಒಪ್ಪಬಹುದು ಎಂದು ಏಟ್ಸ್ ನಂಬಿಕೊಂಡಿದ್ದ.  ಆದರೆ ಮಾಡ್ಗಾನ್ ಮಾತ್ರ ಸಾರಾಸಗಟಾಗಿ ಏಟ್ಸ್ ಪ್ರೀತಿಯನ್ನು ಒಂದೇ ಸಾರಿಗೆ ನಿರಾಕರಿಸಿದಳು. ಅತ್ಯಂತ ಸಿಟ್ಟಿನ, ಗಂಭೀರ ಸ್ವಭಾವದ ಏಟ್ಸ್ ಅವಳೆದುರು ನನ್ನನ್ನು ನಿರಾಕರಿಸಬೇಡ ಎಂದ. ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಅಮ್ಮನೆದೆರು ಸಣ್ಣ ಮಗು ಅಂಗಲಾಚುವಂತೆ ಕೇಳಿಕೊಂಡ.

ಅವಳ ಪ್ರೀತಿಯ ಮಾತಿಗಾಗಿ ವರ್ಷಾನುಗಟ್ಟಲೆ ಕಾದು ಕೂತ, ಮಾಡ್ಗಾನ್ ಮಾತ್ರ ಕದಲಿಲ್ಲ, ಮಾತನಾಡಲಿಲ್ಲ. ನನಗೆ ಈ ಕವಿಗಳೆಂದರೇ ತೀರಾ ಬಾಲಿಶ ಜನಗಳಂತೆ ತೋರುತ್ತಾರೆ, ನಾನು ನಿನ್ನನ್ನು ಒಪ್ಪಲಾಗುವುದಿಲ್ಲ, ಆದರೂ ನೀನು ಖುಷಿಯಾಗಿರು ಎಂದಷ್ಟೇ ಹೇಳಿ ಹೊರಟುಬಿಟ್ಟಳು. ಏಟ್ಸ್ ಅಳುತ್ತಾ ನಿಂತುಬಿಟ್ಟ. ಮೌನವಾದ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡ. ಕಡೆಗೆ ಒಬ್ಬನೇ ಬದುಕಲು ನಿರ್ಧರಿಸಿದ. ಬೇಕೆಂದಾಗ ಶಾಂಪೇನ್ ಕುಡಿಯುತ್ತ, ಊರೂರು ತಿರುಗುತ್ತ, ಕಾವ್ಯಗಳನ್ನಷ್ಟೇ  ಧ್ಯಾನಿಸಲು ತೀರ್ಮಾನಿಸಿದ. ಅವಳ ನೆನಪುಗಳಿಂದ ತಪ್ಪಿಸಿಕೊಳ್ಳಲು ತನ್ನ ಮನೆ ಹಾಗೂ ಊರನ್ನು ತೊರೆದು ಬೇರೆ ಊರಿಗೆ ಹೊರಟು ನಿಂತು ಎಲ್ಲರಿಂದಲೂ ಕಣ್ಮರೆಯಾದ.

ದಿನಗಳು ಕಳೆದಂತೆ ಅವನು ಒಪ್ಪದ, ಇಷ್ಟವಿಲ್ಲದ ಬದುಕು ಅವನನ್ನು ಹಿಂಬಾಲಿಸಿತು. ಸಿಂಡಿಕೇಟ್ ಅಧ್ಯಕ್ಷನಾದ, ಪಾರ್ಲಿಮೆಂಟ್ ಸದಸ್ಯನಾದ, ಐರ್ಲೆಂಡ್ ರಂಗಭೂಮಿಯಲ್ಲಿ ಹೊಸ ಪ್ರಯೋಗ ಮಾಡಿದ, ವಿಶ್ವಖ್ಯಾತಿ ಗಳಿಸಿದ, ವಿಶ್ವವಿದ್ಯಾನಿಲಯಗಳಲ್ಲಿ ಕಾವ್ಯದ ಕುರಿತು ಭೋದಿಸಿದ, ಅವನ ಪದ್ಯಗಳಿಗೆ ನೊಬೆಲ್ ಪುರಸ್ಕಾರವೂ ಸಂದಿತು. ಹಣ, ಕೀರ್ತಿ, ಪ್ರಶಸ್ತಿಗಳು ಮನೆಯನ್ನು ಆವರಿಸಿಕೊಂಡವು. ಏಟ್ಸ್ ಗೆ ಯಾಕೋ ಈಗ ಮುಜುಗರವಾಗತೊಡಗಿತು‌.

ಒಬ್ಬನೇ ಓಡಾಡುವುದಕ್ಕೆ ಆರಂಭಿಸಿದ. ಯಾರಾದರೂ ರಸ್ತೆಯಲ್ಲಿ ಎದುರಾಗಿ ಮಾತನಾಡಿಸಿದರೆ ಅಥವಾ ಹೊಗಳಿದರೆ ಅವರ ಮೇಲೆ ಸಿಟ್ಟಾಗುತ್ತಿದ್ದ. ಮರುಕ್ಷಣವೇ ಇಷ್ಟೊಂದು ಸಿಟ್ಟು ತೋರುವ ನಾನು ಆ ಎಳೆಯ ಹುಡುಗಿ ಮಾಡ್ಗಾನ್ ಎದುರು ಮಾತ್ರ ತೀರಾ ಅಸಹಾಯಕತೆಯ ಮಗುವಿನಂತೆ ಪ್ರೀತಿಸು ಎಂದು ಕೇಳಿಕೊಂಡಿದ್ದು ಏಕೆ ಎನ್ನುವುದನ್ನು ಆಗಾಗ ಪ್ರಶ್ನಿಸಿಕೊಳ್ಳುತ್ತಿದ್ದ. ಆದರೆ ಉತ್ತರ ಮಾತ್ರ ಒಂದೇ, ” ನೀನು ಅವಳನ್ನು ಪ್ರಾಮಾಣಿಕವಾಗಿ ಪ್ರೀತಿಸಿದವನು” ಎನ್ನುವುದಷ್ಟೇ.

ಏಟ್ಸ್ ಗೆ ನೊಬೆಲ್ ಪುರಸ್ಕಾರ ಬಂದ ವರ್ಷವೇ ಅವನ ಹುಟ್ಟೂರಿನ ಕಾಲೇಜೊಂದರಿಂದ  ಒಂದು ತಾಸು ಆಧುನಿಕ ಕಾವ್ಯದ ಬಗ್ಗೆ ಮಾತನಾಡುವಂತೆ ಪತ್ರ ಬರೆಯಲಾಗಿತ್ತು. ಅಸಂಖ್ಯಾ ಕಹಿ ನೆನಪುಗಳನ್ನು ಉಳಿಸಿದ್ದ ಆ ಊರಿಗೆ ಮತ್ತೆ ಕಾಲಿಡಲು ಏಟ್ಸ್ ಗೆ  ಮನಸ್ಸಾಗಲಿಲ್ಲ ಆದರೆ  ತನ್ನ ಕಾವ್ಯದ ಮೂಲಸೆಲೆಯಾದ ತನ್ನ ಊರಿಗೆ ಮತ್ತೊಮ್ಮೆ ಹೋಗಿ ಬರಬೇಕು ಎಂದೂ ಅನಿಸಿತು. ಕಡೆಗೆ ಹೊರಡಲು ನಿರ್ಧರಿಸಿದ ಏಟ್ಸ್.

ಏಟ್ಸ್ ಈಗ ಮೊದಲಿನಂತಿಲ್ಲ, ಚರ್ಮವೆಲ್ಲಾ ಸುಕ್ಕುಗಟ್ಟಿತ್ತು, ದಿನಗಳು ಕಳೆದು ಮುದಿಯನಾಗಿದ್ದ. ಏಟ್ಸ್ ಬರುವ ದಿನ ಇಡೀ ಊರು ಅವನ ಮಾತಿಗಾಗಿ ಕಾದು ಕುಳಿತಿತ್ತು. ತನ್ನ ಊರಿಗೆ ಬಂದ ಏಟ್ಸ್ ತನ್ನನ್ನೇ ತಾನು ನೋಡಿಕೊಳ್ಳುವಂತೆ ತಾನಿದ್ದ ಹಳೆಯ ಜಾಗಗಳಲ್ಲಿ ಅಲೆದು ಬಂದ, ನಿರಾಕರಿಸಿದ ಅಪ್ಪ ಹಾಗೂ ಅಸಹಾಯಕತೆಯ ಅಮ್ಮನಿದ್ದ ಮನೆಯಲ್ಲಿ ವಿಶ್ರಮಿಸಿದ. ಹಳೆಯ ಗೆಳೆಯರನ್ನು ಮಾತನಾಡಿಸಿದ. ಈಗ ಎಲ್ಲರಿಗೂ ಅವನೊಳಗಿದ್ದ ಮಗು ಆಗಾಗ ಕಾಣಿಸಿಕೊಳ್ಳತೊಡಗಿತು. ಒಳಗೇ ಹಿಗ್ಗಿದ. ಸೆಮಿನಾರಿನಲ್ಲಿ ಆಧುನಿಕ ಕಾವ್ಯದ ಕುರಿತು ಉಪಯುಕ್ತ ಮಾತುಗಳನ್ನು ಹೇಳಿದ. ಎಲ್ಲರೂ ಅಭಿನಂದಿಸಿದರು. ಇದೆಲ್ಲದರ ನಡುವೆ ಇಡೀ ಸಭೆಯಲ್ಲಿ ಏಟ್ಸ್ ಗೆ ಸೆಳೆತ ಎಂಬಂತೆ ಜನಗಳ ನಡುವೆ ಮುದುರಿ ಕೂತಿದ್ದ ಎಳೆಯ ಹುಡುಗಿಯೊಬ್ಬಳು ಕಾಣಿಸಿದಳು.

ಏಟ್ಸ್ ಏನನ್ನೂ ಯೋಚಿಸದೆ ಸೀದಾ ಆ ಹುಡುಗಿಯ ಎದುರು ನಿಂತು ತನ್ನನ್ನು ಗೆಳೆಯ ಎನ್ನುವಂತೆ, ಹಲೋ,  ಐ ಆಮ್ ಡಬ್ಲ್ಯೂ  ಬಿ ಏಟ್ಸ್ ಎಂದು ಪರಿಚಯಿಸಿಕೊಂಡ. ಹುಡುಗಿ ಗಾಭರಿಯಾದಳು, ತನ್ನ ಇಷ್ಟದ ಕವಿ ಎದುರು ನಿಂತು ತನಗೆ  ಪರಿಚಯಿಸಿಕೊಂಡಿದ್ದು ಅವಳಿಗೆ ಅಚ್ಚರಿಯಾಯ್ತು. ಮಾತು ಹೊರಡದೆ ತಬ್ಬಿಬಾದಳು. ಆಗ ಸ್ವತಃ ಏಟ್ಸ್ ಮಾತು ಮುಂದುವರೆಸಿದ ನಂತರ ಹುಡುಗಿಯೂ ಮಾತನಾಡಿದಳು. ಇಬ್ಬರ ಮಾತುಗಳ ಬತ್ತಳಿಕೆ ಖಾಲಿಯಾಗುವ ಸಮಯಕ್ಕೆ ತಬ್ಬಿಬ್ಬಾಗುವ ಸರದಿಯಲ್ಲಿ ಏಟ್ಸ್ ನಿಂತಿದ್ದ. ಈಗ ಅವನ ಎದುರು ನಿಂತಿರುವ ಹುಡುಗಿ ಅವನು ಅತ್ಯಂತ ಆಳವಾಗಿ ಪ್ರೀತಿಸಿದ ಹುಡುಗಿ ಮಡ್ಗಾನ್ ನ ಮಗಳು ಎಂದು ತಿಳಿದು ಏನೂ ಹೇಳಲಾರದೆ ನಿಂತುಬಿಟ್ಟ.

ಏಟ್ಸ್ ಅಚಾನಕ್ ಮೌನವಾಗಿದ್ದಕ್ಕೆ ಎದುರಿದ್ದ ಹುಡುಗಿ ಆಶ್ವರ್ಯವಾದಳು. ಏಟ್ಸ್  ಅವಳನ್ನು ತಣ್ಣಗಿನ ದನಿಯಲ್ಲಿ ನನಗೆ ನಿನ್ನ ಅಮ್ಮನ್ನನ್ನು ನೋಡಬೇಕು ಎನಿಸುತ್ತಿದೆ ಸಾಧ್ಯವಾದರೆ ಅವಳನ್ನು ಒಮ್ಮೆ ಕರೆದುಕೊಂಡುಬರುವಂತೆ ಕೇಳಿದ. ಹುಡುಗಿ ಖುಷಿಯಲ್ಲೇ ಒಪ್ಪಿದಳು. ನಾಳೆ ಕರೆದುಕೊಂಡು ಬರುವುದಾಗಿ ಹೇಳಿದಳು. ಏಟ್ಸ್ ಗೆ ಮುರುಟಿಹೋಗಿದ್ದ  ಕನಸುಗಳು ಚಿಗುರುತೊಡಗಿದಂತೆ ಭಾಸವಾಗಹತ್ತಿತು. ನಾಳೆಗಾಗಿ ಹಂಬಲಿಸುತ್ತ ಎಷ್ಟೋ ವರ್ಷಗಳ ನಂತರ ನಗುವಿನೊಂದಿಗೆ ಶಾಂಪೇನ್ ಹಿರತೊಡಗಿದ.

ಸೂರ್ಯ ಉದಯಿಸಿದ. ಏಟ್ಸ್ ಅವನದೇ ಹಳೆಯ ಮನೆಯಲ್ಲಿ ತನ್ನ ಪ್ರೇಯಸಿ ಮಾಡ್ಗಾನ್ ಗಾಗಿ ಹೊಸ ಸೂಟ್ ತೊಟ್ಟು ಹಳೆದ ಕುರ್ಚಿಯ ಮೇಲೆ ಕಾದು ಕೂತಿದ್ದ‌.  ಮಧ್ಯಾಹ್ನದ ಸಮಯಕ್ಕೆ ಮಾಡ್ಗಾನ್ ಕೋಲನೂರುತ್ತ ನಿಧಾನವಾಗಿ ಒಂದೊಂದೇ ಹೆಜ್ಜೆಗಳನ್ನಿಡುತ್ತ ನಡೆದುಬಂದಳು.  ಅವಳ ಉಡುಪು ಮಾಸಿತ್ತು, ಮುಖದಲ್ಲಿ ನಗುವಿನ ಗೆರೆಗಳು ಮಾಯಾವಾಗಿದ್ದವು. ಈ ಮೊದಲಿನ ಸಿಟ್ಟು, ಸೆಡವು, ಹಠಮಾರಿತನ ಎಲ್ಲವೂ ನಿರ್ಲಿಪ್ತವಾಗಿದ್ದವು. ಏಟ್ಸ್  ತಾನು ಹುಡುಗನಾಗಿದ್ದಾಗ  ಮೊದಲ ಬಾರಿ ಪ್ರೀತಿ ಹೇಳಿಕೊಂಡಂತೆ ಈಗಲೂ ಅದೇ ದಾಟಿಯಲ್ಲಿ  ಮಾತನಾಡಿಸಿದ.

ಮಾಡ್ಗಾನ್ ನಿನಗೆ ಗೊತ್ತಾ ನಾವಿಬ್ಬರು ಈ ಜಗತ್ತಿನ ಅತ್ಯಂತ ಹಳೆಯ ಹಾಗೂ ಕ್ಷುದ್ರ ಪ್ರೇಮಿಗಳು ಎಂದು ಗಹಗಹಿಸಿ ನಗೆಯಾಡಿದ. ಮಾಡ್ಗಾನ್ ಮಾತ್ರ ಮೌನವಾಗೇ ಇದ್ದಳು. ಸ್ಪಲ್ಪ ಹೊತ್ತಿನ ನಂತರ ಅವನ ಕೈಹಿಡಿದುಕೊಂಡು ಏಟ್ಸ್ ನಿನ್ನನ್ನು ನಾನು ತಿರಸ್ಕರಿಸಿದ್ದು ನೀನು ಅತ್ಯಂತ ಗಂಭೀರ ಸ್ವಭಾವದ ಹುಡುಗನೆಂದಲ್ಲಾ ಅಥವಾ ಕವಿ ಎಂದಲ್ಲಾ. ನನ್ನೊಳಗಿನ ನಿರಾಕರಣೆಯ ಗುಣ, ಸಣ್ಣ ಅಹಂಕಾರ ಹಾಗೂ  ಹಠಮಾರಿತನದಿಂದ. ನಿನ್ನನ್ನು ನಾನೂ ಪ್ರೀತಿಸುತ್ತೇನೆ. ಈಗಲೂ ನಿನ್ನನ್ನು ನಿರಾಕರಿಸಿದಕ್ಕೆ ಬೇಸರವಿದೆ ಎಂದಳು. ದಯಮಾಡಿ ಸಾಧ್ಯವಾದರೆ ನಿನ್ನಷ್ಟು ಒಬ್ಬರನ್ನು ಮುಕ್ತವಾಗಿ ಪ್ರೀತಿಸಲು ಹೇಳಿಕೊಡು ಎಂದಳು. ಏಟ್ಸ್ ಮಾತ್ರ ಸುಮ್ಮನೇ ಎಂದರೆ ಸುಮ್ಮನೇ, ಮಾಡ್ಗಾನ್ ಒಂದು ಗಂಡು ಹೆಚ್ಚು ಆಲೋಚಿಸುವುದು ತನಗೆ ಒಲಿಯದ ಹೆಣ್ಣಿನ ಕುರಿತೋ ಅಥವಾ ಒಲಿವ ಹೆಣ್ಣಿನ ಕುರಿತೋ ಎಂದು ಈಟಿಮೊನೆಯಂತೆ ಪ್ರಶ್ನೆ ಕೇಳಿದ. ಮಾಡ್ಗಾನ್ ಉತ್ತರಿಸಲಾಗದೆ ಗೊಂದಲವಾದಳು. ಏಟ್ಸ್ ಕಿರುನಗೆಯಾಡಿದ. ಉಸಿರನ್ನು ನಿಧಾನವಾಗಿ ಹೊರಜಾರಿಸಿ ನನಗೆ ಕೇಳಲು ಏನೋ ಇದೆ ಮಾಡ್ಗಾನ್ ಅದಕ್ಕಾಗೇ ನಿನ್ನನ್ನ ಬರಲು ಹೇಳಿದ್ದು ಎಂದ.

ಕೇಳಲು ಏನಿದೆ ಎಂಬಂತೆ ಮಾಡ್ಗಾನ್ ಅವನನ್ನೇ ದಿಟ್ಟಿಸಿ ನೋಡಿದಳು. ಏಟ್ಸ್ ಮಾತ್ರ ಚಡಪಡಿಸುತ್ತಾ, ಅವಳ ಕೈ  ಹಿಡಿದುಕೊಂಡು ದನಿ ನಡುಗಿಸುತ್ತಾ ಕೇಳಿದ. ಮಾಡ್ಗಾನ್ ನೀನು ಒಪ್ಪುವುದಾದರೆ ನಾನು ನಿನ್ನ ಮಗಳನ್ನು ಮದುವೆಯಾಗುತ್ತೇನೆ ಒಪ್ಪಿಕೊಳ್ಳುವೆಯಾ ಎಂದನು ದಯಾನಿಯಾವಾಗಿ. ಮಾಡ್ಗಾನ್ ಗೆ ಎಷ್ಟೋ ವರ್ಷಗಳ ನಂತರ ಏಟ್ಸ್ ನ ಎಳೆತನ ಮರಳಿ ಎದುರು ಬಂದಂತೆ ಭಾಸವಾಯ್ತು. ಕೈ ಕೊಡವಿಕೊಂಡಳು. ನನ್ನ ಮಗಳನ್ನು ನಿನಗೆ ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಇದ್ದ ಅಷ್ಟೂ ದನಿಯನ್ನು ಬಳಸಿ ಕಿರುಚಿದಳು.

ಏಟ್ಸ್ ಮತ್ತೆ ತಿರಸ್ಕೃತನಾಗಿದ್ದಕ್ಕೆ ನೊಂದುಕೊಂಡ‌. ಈ ಮೊದಲಿನಂತೆ ಈಗಲೂ ಮಾಡ್ಗಾನ್ ಎದುರು ಅಂಗಲಾಚಿದ. ನನಗೆ ಪ್ರೀತಿಯ ಅಗತ್ಯವಿದೆ ಮಾಡ್ಗಾನ್ ಮತ್ತೇನೂ ಬೇಡ. ಈ ಕೀರ್ತಿ, ಹೆಸರು, ಪ್ರಶಸ್ತಿಗಳಿಗೆ ಬೆಂಕಿ ತಗುಲಲಿ. ನನಗೆ ಬೇಕಿರುವುದು ಪ್ರೀತಿಯಷ್ಟೇ ಎಂದು ಬೇಡಿಕೊಳ್ಳಲು ಶುರುಮಾಡಿದ.  ಮಾಡ್ಗಾನ್ ಕಣ್ಣೀರಾದಳು. ಏಟ್ಸ್ ನ ಸುಕ್ಕುಬಿದ್ದಿದ್ದ  ಕೆನ್ನೆಗಳನ್ನು ಆತ್ಮೀಯವಾಗಿ ನೇವರಿಸುತ್ತ ನಿನ್ನೊಳಗಿನ ಮಗುವನ್ನು ಕೊಂದ ಪಾಪ ನನಗಿದೆ ಏಟ್ಸ್. ನೋಡು ನಾನು ನಿರಾಕರಿಸಿದ ಪ್ರೀತಿಗಾಗಿ ಹಂಬಲಿಸುತ್ತಿದ್ದೇನೆ ಎಂದಳು.

ನಾನು ಈಗ ಬದುಕಿನಲ್ಲಿ ನಗುವನ್ನೇ ಮರೆತಿದ್ದೇನೆ. ಎಲ್ಲವನ್ನೂ, ಎಲ್ಲರನ್ನೂ ಕಳೆದುಕೊಂಡಿದ್ದೇನೆ. ನನಗೂ ಕೇಳಲು ಒಂದು ಬೇಡಿಕೆ ಇದೆ.  ಸಾಧ್ಯವಾದರೆ “ನಾವಿಬ್ಬರೂ ಮೊದಲಿನಂತೆ ಮಕ್ಕಳಾಗಿಬಿಡುವ  ಏಟ್ಸ್”.  ನಾನು ನಿನ್ನನ್ನು ಈಗಲಾದರೂ ಪಡೆದುಕೊಂಡು ಬಿಡುತ್ತೇನೆ ಎಂದಳು ಮುಗ್ದವಾಗಿ ಮಾಡ್ಗಾನ್. ಏಟ್ಸ್ ಅವನ ಅಶಕ್ತ ಕೈಗಳಿಂದ ಅವಳನ್ನು ತಡವುತ್ತಾ ತಬ್ಬಿಕೂತು ಅವಳ ಹೆಗಲಿನ ಮೇಲೆ ಮುಖವಿಟ್ಟು ಸಾಕು ಎನ್ನುವಷ್ಟು ಕಣ್ಣೀರಿಟ್ಟ. ಪ್ರೀತಿಯನ್ನು ತನ್ನಷ್ಟಕ್ಕೆ ಚಿಗುರಲು ಬಿಡಬೇಕು ಎಂದು ಮುಗ್ದವಾಗಿ ಹೇಳಿದ. ಮಾಡ್ಗಾನ್ ಮೌನವಾಗೇ ಇದ್ದಳು. ಏಟ್ಸ್ ಮಾತ್ರ ತಾನು ಬದುಕಿನಲ್ಲಿ ಈವರೆಗೂ ಗಳಿಸಿದ್ದು ಹಾಗೂ ಕಳೆದುಕೊಂಡದರ ಲೆಕ್ಕಚಾರ ಹಾಕತೊಡಗಿದ.

‍ಲೇಖಕರು avadhi

December 26, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

6 ಪ್ರತಿಕ್ರಿಯೆಗಳು

  1. Shama Nandibetta

    Eshu, This is one of your Best ! Hats off kano.

    I love W.B. Yeats madly!

    ಪ್ರತಿಕ್ರಿಯೆ
  2. ಭಾರತಿ ಬಿ ವಿ

    ಸಕತ್ ಇಷ್ಟವಾಯ್ತು
    ತುಂಬ intense ಬರಹ

    ಪ್ರತಿಕ್ರಿಯೆ
  3. Pravara

    ಕಣ್ಣುಗಳ ಒದ್ದೆಯಾಗಿಸಿದಿ ಸಂದೀಪ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: