ಪ್ರೀತಿಯನು ಕೊಲ್ಲುವರಿಹರು…

ಪ್ರದೀಪ ಟಿ ಕೆ

ಹೇಳದೇ ಎದೆಯಲ್ಲೇ ಉಳಿದು, ಹೆಪ್ಪುಗಟ್ಟಿದ ಪ್ರೀತಿಗಳ ನೋವಿನಂತೆಯೇ ಹೇಳಿ ತಿರಸ್ಕೃತಗೊಂಡ ಪ್ರೀತಿಗಳ ಪಾಡು ಸದಾ ಎದೆಯಲ್ಲಾಡುವ ಕತ್ತರಿಯ ಮೊನೆ. ಪ್ರೇಮದ ಬಗ್ಗೆ ಇಷ್ಟುದ್ದಾ ವ್ಯಾಖ್ಯೆ ಬರೆದು, ಅಷ್ಟೆಲ್ಲ ಅಬ್ಬರಿಸಿ, ಬೊಬ್ಬಿರಿದವರೇ ಮರೆಯಲ್ಲಿ ಅದೇ ಪ್ರೇಮದ ಕತ್ತುಹಿಚುಕಿದರಲ್ಲ ಎಂಬುದನ್ನ ನೆನೆದಾಗಲೆಲ್ಲ ಮನಸ್ಸು ಖಿನ್ನವಾಗುತ್ತದೆ. ಎಲ್ಲಾ ನದಿಗಳು ಸಮುದ್ರ ಸೇರಲೆಂದೇ ಓಡುತ್ತವೆ. ಕೆಲವು ನದಿಗಳಿಗೆ ಅಣೆಕಟ್ಟೆ ಕಟ್ಟಿ ತಡೆಯಲಾಗುತ್ತದೆ.

ಎಷ್ಟೋ ಪ್ರೇಮಗಳೂ ಹಾಗೇ, ಯಾರದೋ ಭಯ, ನಿರಾಕರಣೆಗೆ ಸಿಕ್ಕು ಅರ್ಧದಲ್ಲೇ ನಿಂತುಬಿಡುತ್ತವೆ ಎಂದು ನಾವು ನೂರೊಂದು ಬಾರಿ ಹೇಳಿಕೊಂಡಿದ್ದು ನಿಜವೇ ಆಗಿಹೋಯಿತಲ್ಲ. ಬದುಕಿ ಬಾಳಬೇಕಿದ್ದ, ರಂಗಿನ ಕನಸುಗಳನ್ನೇ ಉಸಿರಾಡಿದ ಗೆಳೆಯ, ಅಸಹಾಯಕತೆಯ ನೆಪವೊಡ್ಡಿ ತೊರೆದು ಹೋದವರ ಪ್ರೀತಿಗಾಗಿ ಹಂಬಲಿಸಿ ಕುಣಿಕೆಗೆ ಕೊರಳೊಡ್ಡಿ ಅರ್ಧದಲ್ಲೇ ಬದುಕು ಬಿಸುಟು ಹೊರಟಿದ್ದು ಯಾವ ಕಾಲಕ್ಕೂ ಮಾಯದ ಹೃದಯದ ನೋವು.

ಒಲವು, ಪ್ರೀತಿಯನ್ನ ಇಂತಿಂತವರಿಗೆಂದೇ ಗುತ್ತಿಗೆ ಕೊಡಲಾಗಿದೆಯೆ? ಹಾಗಿಲ್ಲದಿದ್ದ ಮೇಲೆ ಹುಡುಗರಿಬ್ಬರು ಹೀಗೆ ಪ್ರೇಮಿಸುತ್ತಾರೆಂದರೆ ಈ ವ್ಯಂಗ್ಯ, ಕೊಂಕು, ತಿರಸ್ಕಾರ, ಅರಚಾಟವೇಕೆ. ಸ್ವತಃ ಪ್ರೀತಿಸಿದವರೇ ನೆಪಗಳನ್ನೊಡ್ಡಿ ಪ್ರೀತಿಯನ್ನ ಮರಣಶಯ್ಯೆಯಲ್ಲಿ ಮಲಗಿಸಿ ಓಡುವುದನ್ನು ಪ್ರೇರೇಪಿಸುವ ವ್ಯವಸ್ಥೆಯಾದರೂ ಎಂತಹುದು. ನೂರೈವತ್ತು ಮೈಲಿ ದೂರದಿಂದ ಓಡೋಡಿ ಬಂದು ಹರಸಿ, ಹಾರೈಸಿ, ಪ್ರೇಮದ ಉತ್ಕಟತೆಯಲ್ಲಿ ಬಿಗಿದಪ್ಪಿ ಮುತ್ತಿಕ್ಕಿ, ಎಲ್ಲ ಗಡಿಗಳನ್ನು ದಾಟಿ ಪ್ರೀತಿಯ ತಂಪನ್ನೆರೆದು, ಜಗತ್ತಿನ ಅಂಚಿನವರೆಗೂ ಕೈ ಹಿಡಿದು ನಡೆವೆನೆಂದು ಪ್ರಮಾಣಿಸಿದ ಸಖನನ್ನು ಲಿಂಗದ ಹಂಗು ಬಂಧಿಸಿತ್ತೆ.

ನಾಲ್ಕು ಜನರ ನಾಲ್ಕು ನುಡಿಗಳಿಗೆ ಹೆದರಿ ಸಂಜೀವಿನಿಯಾಗಬೇಕಿದ್ದ ಪ್ರೀತಿಯನ್ನ ತೊರೆದು ಹೋದವನ ನೆನೆದು ಇವನು ನವೆಯುತ್ತಿದ್ದುದನ್ನು ನೋಡುವಾಗಲೆಲ್ಲ ಹೊಟ್ಟೆಯ ಸಂಕಟ ಹೆಚ್ಚುತ್ತಿತ್ತು. ಒಂದು ಕಾಲದ ಪ್ರೀತಿ ಮತ್ತೊಂದು ಕಾಲದ ನೋವಾಗಿ ರೆಪ್ಪೆ ಕೂಡಲು ಬಿಡದೆ ನೋಯುವಂತೆ ಮಾಡಿತಲ್ಲ ಎಂದು ನಟ್ಟಿರುಳಿನಲ್ಲಿ ಉರಿಯುತ್ತಿದ್ದ ಇವನ ಮುಖದ ತುಂಬಾ ಸಾವಿರ ನೋವಿನ ಗೆರೆಗಳು.

ಪ್ರೀತಿಸಲು ಅವಕಾಶಗಳಿರುತ್ತವೆ, ಪ್ರೀತಿಯೇ ಅವಕಾಶವಾಗಬಾರದಲ್ಲ. ಗೆಲುವಿನ ಸಂಭ್ರಮದಲ್ಲೋ, ಯಶಸ್ಸಿನ ತುದಿಯಲ್ಲೋ ನಿಂತು ಪ್ರಮಾಣಿಸಿ ಬಳಿಕ ‘ಇದೇಕೋ ಬೇಡವೆನಿಸುತ್ತಿದೆ’ ಎಂದು ಎದ್ದು ನಡೆಯುವುದು ಸಾಧುವಲ್ಲ. ಯಾತರದೋ ಸಾಧನೆಗೆ, ಯಾರದೋ ಪ್ರೇಮವನ್ನ ಬಂಡವಾಳವಾಗಿಸಿ, ಬಳಸಿ ಬಿಸಾಕಿದವನ ಹೇಯಕೃತ್ಯದೆಡೆಯಲ್ಲೂ ಪ್ರೀತಿಯ ಸೆಲೆ ಹುಡುಕಿ ಹೊರಟ ಇವನು ಹುಡುಕುತ್ತಲೇ ಕಳೆದು ಹೋದ.

‘ಗಂಡು-ಗಂಡಿನ ನಡುವಿನ ಪ್ರೇಮವನ್ನ ವ್ಯವಸ್ಥೆ ಒಪ್ಪದು ಎಂಬುದು ಹುಚ್ಚಾಟವೇ ಹೊರತು ಪ್ರೀತಿ ಹುಚ್ಚುತನವಲ್ಲ.  ನಿನ್ನ ಮೇಲಿನ ನನ್ನ ಭಾವನೆಗಳು ಅಷ್ಟೇ ದಿಟ. ಆಗ ಒಪ್ಪಿ, ಈಗ ಒಲ್ಲೆ ಎನ್ನುವ, ಸುಪ್ತ ಭಾವನೆಗಳನ್ನ ಕೆಣಕಿ ಎಬ್ಬಿಸಿ ಆಗಿತ್ತು, ಈಗಿಲ್ಲ ಎನ್ನುವುದಕ್ಕೆ ಪ್ರೀತಿಯೇನು ಆಡಿ ಅತ್ತ ಎಸೆಯುವ ಆಟದ ವಸ್ತುವಲ್ಲ. ಒಲವಿನ ಹಪಾಹಪಿಯನ್ನ ಕಾಮವೆಂದೇ ಬಗೆದು, ನಿನ್ನ ಮೂಗಿನ ನೇರಕ್ಕೆ ನನ್ನನ್ನ ವ್ಯಾಖ್ಯಾನಿಸಿ, ಧಿಕ್ಕರಿಸಿ ನಡೆದೆಯಲ್ಲ’ ಎಂಬುದನ್ನ ಕೂಗಿ ಹೇಳುವ ಕಿಚ್ಚನ್ನು ಹೊತ್ತು ಹೊರಟ ಇವನ ಯಾವೊಂದಕ್ಕೂ ಪ್ರತಿಕ್ರಿಯಿಸದೆ ತಣ್ಣಗೆ ಉಳಿದ ಅವನ ದಿವ್ಯಮೌನ, ನಿರ್ಲಕ್ಷ್ಯಗಳು ಇವನೆದೆಯಲ್ಲಿ ಆಳಗಾಯಗಳನ್ನು ಮಾಡಿತ್ತು. ‘ವ್ಯಕ್ತಿಗಳನ್ನ ಪ್ರೀತಿಸಬೇಕು, ಏನನ್ನೂ ಅಪೇಕ್ಷಿಸಬಾರದು’ ನಿಜ. ಕನಿಷ್ಠ ಪ್ರೀತಿಸಲಿ ಎಂದು ಬಯಸುವುದು, ಒಂದು ಮಾತು, ಒಂದು ಸ್ಪರ್ಶಕ್ಕೆ ಹಾತೊರೆಯುವುದನ್ನು ಕೇವಲ ಅಪೇಕ್ಷೆ ಎನ್ನಲಾಗದು. ಹಾಗೂ ಯಾರ ಪ್ರೀತಿಯ ನಿರಾಕರಣೆಯೂ ಮನುಷ್ಯತ್ವದ ನಿರಾಕರಣೆಯೆ ಆಗಿರುತ್ತದೆ.

ಸಾಯುವ ಮುನ್ನಾ ದಿನ ನಮ್ಮೂರಿನ‌ ಸುಟ್ಟ ಕಾಡಿನ ನಟ್ಟನಡುವಿನ ಕೆರೆಯಗುಂಟ ಹೆಜ್ಜೆ ಹಾಕುವಾಗ ಬೋರೆಂದು ಅತ್ತ ಅವನ ಕಣ್ಣುಗಳಲ್ಲಿ ರಕ್ತವೇ ಹರಿಯಿತು. ‘ಎಷ್ಟೆಲ್ಲ ಮಾತಾಡಿ, ನಗಿಸಿ, ಕೂಡಿ ಸುಖಿಸಿದವನು ಸಮಾಜ ಏನೆನ್ನುತ್ತದೆ ಎಂದು ನನ್ನನ್ನ ಏಕಾಂತಕ್ಕೆ ಎಸೆದ. ಪ್ರೀತಿ ಹೆದರಿಕೆಯನ್ನೂ ಹುಟ್ಟಿಸುತ್ತದೆಯೆ. ಹಾಗಾದರೆ ನಮ್ಮಿಬ್ಬರ ಪ್ರೀತಿಗೆ ರಹದಾರಿ ಬೇಕೆ. ಬರೆದ ಬರಹಗಳು, ಪ್ರಕಟಗೊಂಡ ಸಂಕಲನ, ಕೃತಿಗಳು, ಅವನ ವೈಚಾರಿಕತೆ ಎಲ್ಲವೂ ಸಮಾಜದೆದುರು ತೊಟ್ಟ ಬರೀ ಮುಖವಾಡಗಳೆ. ಎಲ್ಲ ಎಲ್ಲೆ ಮೀರಿ ಒಮ್ಮೆ ಪ್ರೀತಿಸುವುದೆಷ್ಟು ಕಷ್ಟ ಈ ಜನಕ್ಕೆ’ ಎಂದು ಎದೆಬಿರಿಯೆ ನರಳಾಡಿದವನ ಮುಂದೆ ನಾನು ಹಾಗೂ ಕಾಡು ಒಣಗಿ ನಿಂತಿದ್ದೆವು. 

ಅಗಾಧ ಜೀವನಪ್ರೀತಿಯ ನಡುವೆಯೂ ಒಮ್ಮೊಮ್ಮೆ ದುರ್ಬಲ ಘಳಿಗೆಗಳು ಜೀವವನ್ನು ಹೊತ್ತೊಯ್ದುಬಿಡುತ್ತವಲ್ಲ. ಗೋಧೂಳಿಯಲ್ಲಿ ಜೊತೆಗಿದ್ದ ಗೆಳೆಯ ಮುಂಜಾನೆಯೊತ್ತಿಗೆ ಪಡಸಾಲೆಯಲ್ಲಿ ಹೆಣವಾದದ್ದಕ್ಕೆ ಹೊಣೆ ಯಾರು? ಗೊಡ್ಡು ಸಂಪ್ರದಾಯಗಳೇ, ವ್ಯವಸ್ಥೆಯೇ, ಸಲ್ಲದ ಕಾನೂನುಗಳನ್ನ ರೂಪಿಸಿದ ಜನರೇ, ಯಾರಿಗೋ ಯಾವುದಕ್ಕೋ ಹೆದರಿ ಓಡಿಹೋದ ಅವನೇ. ಬರೀ ಪ್ರಶ್ನೆಗಳು, ಉತ್ತರವಿಲ್ಲದ ಪ್ರಶ್ನೆಗಳು. ನನ್ನ ಗೆಳೆಯ ಹುಡುಗನೊಬ್ಬನನ್ನು ಪ್ರೀತಿಸಿದ್ದ, ಅವನು ಬಿಟ್ಟು ಹೋದದ್ದಕ್ಕೆ ಇವನು ಸತ್ತುಹೋದ ಎಂದರೆ ನಂಬುವವರಾರು.

ನಂಬಿದರೂ ‘ಉಂಟೇ!, ಮಾಡಬಾರದ್ದನ್ನೇ ಮಾಡಿದ್ದಾನೆ’ ಎಂದೇ ಅರ್ಥೈಸಿ ಗಂಡಸತನಕ್ಕೆ ಸರ್ಟಿಫಿಕೇಟು ನೀಡಲೇ ಮುಂದಾಗುವುದು ಎಷ್ಟರ ಮಾತು. ಅವನು ಒಮ್ಮೆ ಭೇಟಿಗೆ ಬಂದಿದ್ದರೆ ಇವನು ಹೀಗಾಗುತ್ತಿರಲಿಲ್ಲವೇನೊ. ಹೊರ ಜಗತ್ತಿಗಿದು ಬಾಲಿಷವೆನಿಸಬಹುದು. ರಮ್ಯ ಭಾವುಕತೆಗೆ ಬಲಿಯಾಗಲೇನಿತ್ತೆಂದು ಸಣ್ಣ ಸವಕಲು ವಾಕ್ಯವೊಂದನ್ನು ಚಿಮ್ಮಬಹುದು. ಬರೀ ಭಾವನೆಗಳಿಂದ ಬದುಕು ನಡೆಯುವುದಿಲ್ಲ ಎಂದಾದರೆ ಬರೀ ಬುದ್ದಿವಂತಿಕೆಯ ಬದುಕು ಅತ್ಯಂತ ಅಪಾಯದ್ದು.

ಎಷ್ಟು ಸುಟ್ಟರೂ ಮತ್ತೆ ಚಿಗುರುವ ಕಲ್ಲ ನಡುವಿನ ನಾಲೆಯ ಹುಲ್ಲಿನಂತೆ, ಒಣಗಿ ಕಗ್ಗಲಾದರೂ ಮತ್ತೆ ಮೈ ಕೊಡವಿ ಹಸಿರುಟ್ಟು ನಲಿಯುವ ಕಾಡಿನಂತೆ ಮನದ ನೋವುಗಳನ್ನೆಲ್ಲ ಒಮ್ಮೆ ಝಾಡಿಸಿ ಎದ್ದು ಬಾರೋ.‌ ಜೊತೆಯಾಗಿ ಕಂಡ ನಮ್ಮ ಆಸೆ, ಕನಸುಗಳನೆಲ್ಲ ಗುಡ್ಡೆಹಾಕಿಕೊಂಡು ಕೂತಿರುವೆ. ಜಾಲಿಮರದ ಮರೆಯಿಂದಲೋ, ಸಿಹಿನೀರಿನ ಹಳ್ಳದ ಬಿದಿರುಮೆಳೆ ಎಡೆಯಿಂದಲೋ ಒಮ್ಮೆ ಬಂದು ನಿಂತು ನಕ್ಕು ನುಡಿಯೋ. ನಮ್ಮ ಕನಸುಗಳ ಮೂಟೆ ಹೊತ್ತು ಜನಗಳಿಲ್ಲದ, ಕಾನೂನಿಲ್ಲದ, ಚೌಕಟ್ಟು ಗೋಡೆಗಳಿಲ್ಲದ  ಅದೊಂದು ಜಾಗಕ್ಕೆ ಹೋಗುವ, ಗಾಢ ಸ್ನೇಹವೊಂದನ್ನ ನಂಬಿ.

‍ಲೇಖಕರು Avadhi

May 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: