ಪ್ರಿಯ ಯುವಜನರೆ, ಏಳಿ.. ಎದ್ದೇಳಿ

ಕಾರ್ಗಿಲ್‌ನ ಕದನವಾಣಿ

**

ಸಿ ಯು ಬೆಳ್ಳಕ್ಕಿ

**

ಕಾರ್ಗಿಲ್ ಯುದ್ಧ ಹಲವಾರು ಕಾರಣಗಳಿಂದ ವಿಶ್ವದ ಸಮರ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ವಿಶ್ವದ ಅತಿ ಎತ್ತರದ ಹಾಗೂ ಕಠಿಣ ಯುದ್ಧ ಭೂಮಿ ಅದಾಗಿತ್ತು. ಸಾವಿರಾರು ಫೂಟು ಎತ್ತರದ ಪರ್ವತ ಶ್ರೇಣಿಯಲ್ಲಿ ತಳವೂರಿ ಕುಳಿತ ಸಾವಿರಾರು ವೈರಿ ಸೈನಿಕರನ್ನು ಗುರುತಿಸಿ ಅಲ್ಲಿಂದ ಹೊಡೆದುರುಳಿಸಿದ ಅಪ್ರತಿಮ ಸಾಹಸ ಕಾರ್ಯಾಚರಣೆಯಲ್ಲಿ ಭಾರತೀಯ ಸೈನ್ಯಕ್ಕೆ ಎದುರಾದ ಸಮಸ್ಯೆಗಳು ವಿಭಿನ್ನ-ವಿಪರೀತ. 

ಕಾರ್ಗಿಲ್ ಪರ್ವತ ಶ್ರೇಣಿಯಲ್ಲಿ ಮೈನಸ್ ೪೦ ಡಿಗ್ರಿ ತಾಪಮಾನ, ವಿರಳ ಆಕ್ಷಿಜನ್, ದುರ್ಗಮ ಹಾದಿಗಳ ಮೂಲಕ ಸಾಗಿ ಉನ್ನತ ಶಿಖರಗಳಲ್ಲಿ ಯುದ್ಧ ನಿರತರಾದ ಸೈನಿಕರಿಗೆ ಅವಶ್ಯವಾದ ಯುದ್ಧ ಸಾಮಗ್ರಿ ಮತ್ತು ಆಹಾರ ಕೆಳಗಿನಿಂದ ಮೇಲೆ ತಲುಪಿಸುವುದು ಒಂದು ದೊಡ್ಡ ಸಾವಾಲಾಗಿತ್ತು. ಸೈನ್ಯದಲ್ಲಿ ವಿಶೇಷವಾಗಿ ಅ ವಿಷಮ ಹವಾಮಾನದಲ್ಲಿ ಕೆಲಸ ಮಾಡುವ ಜನರ ತೀವೃ ಕೊರತೆ ಇತ್ತು. ಅಲ್ಲಿನ ಪ್ರದೇಶ ಮತ್ತು ಹವಾಮಾನಕ್ಕೆ ಹೊಂದಿಕೊAಡ ಸ್ಥಳೀಯ ಯುವ ಜನರ ಸಹಾಯ ಸೈನ್ಯಕ್ಕೆ ಅತಿ ಅವಶ್ಯವಾಗಿತ್ತು. ಅಂದು ಆ ಪ್ರದೇಶದ ಎಲ್ಲ ಜನರನ್ನು ಕ್ಷಣಾರ್ಧದಲ್ಲಿ ತಲುಪಬಲ್ಲ ಏಕೈಕ ಸಮೂಹ ಮಾಧ್ಯಮ ಆಕಾಶವಾಣಿಯಾಗಿತ್ತು. ತಮಗೆ ಬೇಕಾದ ಯುವ ಜನರನ್ನು ಕಲೆಹಾಕಲು ಸೈನ್ಯಾಧಿಕಾರಿಗಳು ಲೇಹ ಹಾಗೂ ಕಾರ್ಗಿಲ್ ಆಕಾಶವಾಣಿ ಕೇಂದ್ರಗಳನ್ನು ಸಂಪರ್ಕಿಸಿದರು.

‘ಪ್ರಿಯ ಯುವಜನರೆ, ಕಾರ್ಗಿಲ್ ಯುದ್ಧದಲ್ಲಿ ನಿರತವಾಗಿರುವ ಭಾರತೀಯ ಸೈನ್ಯಕ್ಕೆ ಬೆಟ್ಟದ ಮೇಲೆ ಯುದ್ಧ ಸಾಮಗ್ರಿಗಳನ್ನು ಸಾಗಿಸಲು ನಿಮ್ಮ ಸಹಾಯ ಸಹಕಾರ ಕೂಡಲೇ ಬೇಕಾಗಿದೆ. ಲೇಹ್ ದ ಪೋಲೋ ಗ್ರೌಂಡಿನಲ್ಲಿ ನಡೆಯುವ ಆಯ್ಕೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ದೇಶ ರಕ್ಷಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸದವಕಾಶ ನಿಮಗೆ ಒದಗಿ ಬಂದಿದೆ. ಏಳಿ, ಎದ್ದೇಳಿ’ ಈ ಕರೆ ಕಾರ್ಗಿಲ್ ಲೇಹ ಎರಡೂ ಆಕಾಶವಾಣಿ ಕೇಂದ್ರಗಳ ನಿರ್ದೇಶಕಿಯಾಗಿದ್ದ ಶ್ರೀಮತಿ ಟಿ, ಅಂಗಮೊ ಶೌನೊ ಅವರ ಧ್ವನಿಯಲ್ಲಿ ಲೇಹ್ ಹಾಗೂ ಕಾರ್ಗಿಲ್ ಎರಡೂ ಕೇಂದ್ರಗಳಿAದ ಮೇಲಿಂದ ಮೇಲೆ ಬಿತ್ತರವಾಯಿತು. ‘ನನ್ನ ಮಗನನ್ನು ಕೆಲಸಕ್ಕೆ ಕಳುಹಿಸದೆ ಬೇರೆಯವರನ್ನು ಮಕ್ಕಳನ್ನು ಯುದ್ಧ ಭೂಮಿಗೆ ಕಳುಹಿಸಿ ಎಂದು ಹೇಳಲು  ಹೇಗೆ ಸಾಧ್ಯ’ ಎಂದು ಯೋಚಿಸಿದ ಶ್ರೀಮತಿ ಅಂಗಮೊ ತಮ್ಮ ಹದಿನೆಂಟು ವರ್ಷದ ಏಕೈಕ ವರ್ಷದ ಮಗ ರಿಕಿಯನ್ನು ಹುರಿದುಂಬಿಸಿ ಆಯ್ಕೆಗಾಗಿ ಕಳುಹಿಸಿ ಆದರ್ಶಪ್ರಾಯರಾದರು. ಆತ ಆಯ್ಕೆಯಲ್ಲಿ ಯಶ ಗಳಿಸಿ ಯುದ್ಧದಲ್ಲಿ ಸಕ್ರಿಯವಾಗಿ ಭಾಗಿಯಾದ. ಆಷ್ಚರ್ಯಕರ ರೀತಿಯಲ್ಲಿ ಅನೌನ್ಸಮೆಂಟ್ ಕೇಳಿ ನೂರಾರು ಜನ ಆಯ್ಕೆಗಾಗಿ ಬಂದರು. ಅಲ್ಲಿ ೬೦೦ ಯುವಕರನ್ನು ಆಯ್ಕೆ ಮಾಡಿ ಯುದ್ಧ ಪ್ರದೇಶಕ್ಕೆ ಕಳುಹಿಸಲಾಯಿತು. ಆಯ್ಕೆಯಾದ ಈ ಸಾಹಸಿ, ಉತ್ಸಾಹಿ ಲಡಾಕಿ ಯುವಜನ ಭಾರದ ಸಾಮಗ್ರಿಗಳನ್ನು ಸುಲಭವಾಗಿ ಮೇಲೆ ಸಾಗಿಸಿದರು. ಜೊತೆಗೆ ಗಾಯಗೊಂಡ ಹಾಗೂ ಮರಣಹೊಂದಿದ ಸೈನಿಕರ ಶವಗಳನ್ನು ತೆರವುಗೊಳಿಸುವಲ್ಲಿ ಗಮನಾರ್ಹ ಸೇವೆ ಸಲ್ಲಿಸಿದರು. 

ಪಾಕಿಸ್ತಾನೀ ಸೇನೆ ತನ್ನ ಭೂಭಾಗದಿಂದ ನಿರಂತರವಾಗಿ ಕಾರ್ಗಿಲ್ ಮೇಲೆ ಸೆಲ್ ದಾಳಿ ನಡೆಸುತ್ತಿತ್ತು. ಪ್ರತಿದಿನ ಮೂರುನೂರಕ್ಕೂ ಹೆಚ್ಚು ಸೆಲ್‌ಗಳನ್ನು ಹಾಕಲಾಗುತ್ತಿತ್ತು. ಅದರಿಂದ ಅಪಾರ ಕಷ್ಟನಷ್ಟಗಳು ಸಂಭವಿಸಿದವು. ಜನ ಭಯಭೀತರಾದರು. ಸಂಪರ್ಕಕೊAಡಿಯಾಗಿದ್ದ ಕಾರ್ಗಿಲ್ ಆಕಾಶವಾಣಿ ಕೇಂದ್ರ ಸಹ ವೈರಿ ರಾಡಾರ್‌ನಲ್ಲಿದ್ದ ಸೂಕ್ಷ್ಮ ಪ್ರದೇಶವಾಗಿತ್ತು. ಸೆಲ್ ದಾಳಿಯಿಂದ ರಕ್ಷಣೆ ಪಡೆಯಲು ಆಕಾಶವಾಣಿ ಸಿಬ್ಬಂದಿಗೆ ಬಂಕರ್ ಸಹ ಲಭ್ಯವಿರಲಿಲ್ಲ. ಇಂತಹ ಭಯಾನಕ ಸಂದರ್ಭದಲ್ಲೂ ಒಂದು ದಿನವೂ ನಿಲ್ಲದೆ ಆಕಾಶವಾಣಿ ಕಾರ್ಯಕ್ರಮಗಳು ನಿರಂತರವಾಗಿ ಪ್ರಸಾರವಾದವು. ವೈರಿಪಡೆಯ ಸೆಲ್ಲಿಂಗ್ ಝೋನಿನಿಂದ ಆಚೆಗಿದ್ದ ಮಿನಗಿ ಎಂಬ ಗ್ರಾಮದಲ್ಲಿ ಒಂದು ಮನೆಯನ್ನು ಬಾಡಿಗೆ ಪಡೆದು ತಮ್ಮ ಸಿಬ್ಬಂದಿಯೊಂದಿಗೆ ಅಲ್ಲಿ ವಾಸವಾಗಿದ್ದನ್ನು, ಸೆಲ್ ದಾಳಿಯ ನಡುವೆಯೇ ಅಲ್ಲಿಂದ ಬರಲು ಹೋಗಲು ಪಡುತ್ತಿದ್ದ ಹರಸಾಹಸವನ್ನು ಕಣ್ಣಿಗೆ ಕಟ್ಟುವಂತೆ ಶ್ರೀಮತಿ ಅಂಗಮೊ ವಿವರಿಸುತ್ತಾರೆ. ಸದಾ ತಮ್ಮ ಬೆಂಗಾವಲಿಗಿರುತ್ತಿದ್ದ ಕಾರ್ ಡ್ರೈವರ್ ಹುಸೇನ್ ಪಾತ್ರವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. 

ಯುದ್ಧ ನಡೆದಾಗ ಒಂದು  ಸಾಯಂಕಾಲ ಭಾರೀ ಪ್ರಮಾಣದಲ್ಲಿ ಸೆಲ್ ದಾಳಿ ನಡೆಯಿತು. ಅಗ ಕೇಂದ್ರದ ಇಂಜಿನಿಯರ್‌ಗಳು ಭಯಭೀತರಾಗಿ ಪಲಾಯನಮಾಡಿದರು. ಆಗ ತಾವು ಧೃತಿಗೆಡದೆ ಸೈನ್ಯದ ಬ್ರಿಗೇಡ್ ಕಮಾಂಡರರನ್ನು ಸಮಪರ್ಕಿಸಿ ಸೈನ್ಯದ ಇಂಜಿನಿಯರ್‌ಗಳ ಸೇವೆ ಪಡೆದು ಸಮಯದಕ್ಕೆ ಸರಿಯಾಗಿ ಟ್ರಾನ್ಸಮಿಷನ್ ಪ್ರಾರಂಭಿಸಿ ಕಾರ್ಯಕ್ರಮಗಳನ್ನು ಪ್ರಸಾರಮಾಡಿದ್ದನ್ನು ಶ್ರಿಮತಿ ಅಂಗಮೊ ಹೆಮ್ಮೆಯಿಂದ ನೆನೆಯುತ್ತಾರೆ. ತಮಗೂ ಪಲಾಯನ ಮಾಡಲು ಹೇಳಿದ ಒಳಗಿನವರ ಹಾಗೂ ಹೊರಗಿನವರ ಸಲಹೆಗಳನ್ನು ಲೆಕ್ಕಿಸದೆ ಧೈರ್ಯ, ದೃಢ ಸಂಕಲ್ಪದಿAದ ಮುನ್ನಡೆದದ್ದನ್ನು ಅಂಗಮೊ ಸ್ಮರಿಸುತ್ತಾರೆ.

ಯುದ್ಧದ ಬಗ್ಗೆ ಒದಂತಿಗಳನ್ನು ಹರಡಿ ಸುಳ್ಳು ಸುದ್ದಿ ಪ್ರಸಾರ ಮಾಡಿ ಗಡಿಯಲ್ಲಿದ್ದ ಭಾರತೀಯರನ್ನು ದಿಕ್ಕುತಪ್ಪಿಸುವ ಕಾರ್ಯದಲ್ಲಿ ಪಾಕಿಸ್ತಾನ ರೇಡಿಯೊ ನಿರತವಾಗಿತ್ತು. ದೊಡ್ಡ ಪ್ರಮಾಣದಲ್ಲಿ ಕೊಲ್ಲಲ್ಪಟ್ಟ ಭಾರತಿಯ ಸೈನಿಕರ ಶವಗಳ ದುರ್ನಾತದಿಂದ ಹತ್ತಿರದಿಂದ ಹಳ್ಳಿಗಳಿಂದ ಜನ ದೂರ ಸಾಗುತ್ತಿದ್ದಾರೆ, ಭಾರತೀಯ ವಾಯುಸೇನೆಯ ಹಲವಾರು ಹೆಲಿಕಾಪ್ಟರುಗಳನ್ನು ಹೊಡೆದು ಉರುಳಿಸಲಾಗಿದೆ, ಹೀಗೆ ಇಂತಹ ಕಲ್ಪಿತ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದರು. ಉರ್ದು, ಕಾಶ್ಮೀರಿ ಹಾಗೂ ಗಡಿ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಸೀನಾ ಉಪಬಾಷೆಯಲ್ಲೂ ಇಂತಹ ಅಪಪ್ರಚಾರ ಪಾಕಿಸ್ತಾನೀ ರೇಡಿಯೋದಿಂದ ನಡೆಯುತ್ತಿತ್ತು. ಇದನ್ನು ಎದುರಿಸಲು ವಸ್ತುಸ್ಥಿತಿಯನ್ನು ಆಕಾಶವಾಣಿ ಕಾರ್ಗಿಲ್;ಲೇಹ್ ತಕ್ಷಣ ಪರಿಣಾಮಕಾರಿಯಾಗಿ ಪ್ರಸಾರಮಾಡಿ ವೈರಿಬಾನುಲಿ ಅಪಪ್ರಚಾರಕ್ಕೆ ತಕ್ಕ ಎದುರೇಟು ನೀಡುವಲ್ಲಿ ಸಫಲವಾಯಿತು. 

ಆಗ ಕಾರ್ಗಿಲ್ ಕೇಂದ್ರದಿಂದ ಸೀನಾ ಉಪಭಾಷೆಯಲ್ಲಿ ಪ್ರಸಾರ ನಡೆಯುತ್ತಿರಲಿಲ್ಲ. ಸಂದರ್ಭದ ಗಂಭೀರತೆ ಹಾಗೂ ತ್ವರಿತ ಅಗತ್ಯತೆಯನ್ನು ಗಮನಿಸಿ ಶ್ರೀಮತಿ ಅಂಗಮೊ ಮೇಲಿನವರ ಅನುಮತಿಗೆ ಕಾಯದೆ ದಿಟ್ಟ ಸಮಯೋಚಿತ ನಿರ್ಧಾರ ಕೈಕೊಂಡು ಸೀನಾ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಆರಂಭಿಸಿದರು. ಅಂಗಮೊ ಲಡಾಕಿನವರೇ ಆಗಿದ್ದರಿಂದ ಅವರಿಗೆ ಅಲ್ಲಿನ ಪರಿಸರ, ಸಂಸ್ಕೃತಿ ಹಾಗೂ ಭಾಷೆಗಳ ಪರಿಚಯವಿತ್ತು. ಇದು ಪ್ರಯೋಜನಕಾರಿಯಾಗಿ ಪರಿಣಮಿಸಿತು. 
ಉತ್ತೇಜನಕಾರಿ ಹಾಗೂ ಉಪಯುಕ್ತ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಲ್ಲದೆ ಸೈನಿಕರ ಮನೆಗಳಿಂದ ಬಂದ ಪತ್ರ ಸಂದೇಶಗಳನ್ನು ಓದಿಹೇಳಿ ಯುದ್ಧದಲ್ಲಿ ನಿರತರಾದ ಯೋಧರಿಗೆ ಪ್ರಸಾರ ಬೆಂಬಲ ನೀಡುವಲ್ಲಿ ಆಕಾಶವಾಣಿ ಕಾರ್ಗಿಲ್ ಮಹತ್ತರ ಪಾತ್ರ ವಹಿಸಿತು. 

ಗಡಿ ಪ್ರದೇಶದ ಜನರ ಹಾಗೂ ಸೈನ್ಯದ ನಡುವಿನ ಸಂಪರ್ಕ ಕೊಂಡಿಯಾಗಿ ಸೈನ್ಯ ಪಡೆಯ ಕಾರ್ಯಾಚರಣೆಗಳಿಗೆ ಸಮರ್ಪಕೆ ಬೆಂಬಲ ನೀಡುವಲ್ಲಿ ಸಫಲವಾಯಿತು. ಸೈನ್ಯ ಆಕಾಶವಾಣಿಗಳ ಮಧ್ಯೆ ಏರ್ಪಟ್ಟ ಸಮನ್ವಯ ಅನುಕರಣೀಯವಾಗಿತ್ತು. ಸೈನ್ಯಾಧಿಕಾರಿಗಳು ತಮ್ಮನ್ನು ಗೌರವಪೂರ್ವಕವಾಗಿ ‘ಮಾತಾಜಿ’ ಎಂದು ಸಂಬೋಧಿಸುತ್ತಿದ್ದನ್ನು, ಆಕಾಶವಾಣಿಯ ಎಲ್ಲ ಸಹಾಯ ಸಹಕಾರಕ್ಕೆ ಸೈನ್ಯದ ಅಧಿಕಾರಿಗಳು ಕೃತಜ್ಞತೆ ಮೆಚ್ಚುಗೆ ವ್ಯಕ್ತಪಡಿಸಿ ತಮಗೆ ಪ್ರಶಂಸಾ ಪತ್ರ ನೀಡಿದ್ದನ್ನು ಶ್ರೀಮತಿ ಅಂಗಮೊ ಹೆಮ್ಮೆಯಿಂದ ಸ್ಮರಿಸುತ್ತಾರೆ. 

ಕಾರ್ಗಿಲ್ ಯುದ್ಧದ ಧ್ವನಿಯಾದ ಆಕಾಶವಾಣಿಯ ಸಾಹಸಗಾಥೆಯ ಪ್ರೇರಕ ಶಕ್ತಿ ಶ್ರೀಮತಿ ಶ್ರೀಮತಿ ಟಿ ಅಂಗಮೊ ಸ್ವತಃ ಮುಂಚೂಣಿಯಲ್ಲಿನಿAತು ಜೀವದ ಹಂಗುದೊರೆದು ತಮ್ಮ ಸಹೋದ್ಯೋಗಿಗಳಲ್ಲಿ ಧೈರ್ಯ ತುಂಬಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೆಲ್ಲರ ಸಹಕಾರದಿಂದ ಆಕಾಶವಾಣಿಯನ್ನು ಮುನ್ನಡೆಸಿ ಸಮರದಲ್ಲಿ ಸಕ್ರಿಯ ಸಾಥ್ ನೀಡಿದರು. ಈ ಮೊದಲು ಉಗ್ರರ ಚಟುವಟಿಕೆಯ ಮಧ್ಯೆ ೧೯೮೭ರಿಂದ ೬ ವರ್ಷ ಶ್ರೀನಗರದ ರೇಡಿಯೊ ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದು ಇಲ್ಲಿ ತಮಗೆ ಪ್ರಯೋಜನಕಾರಿಯಾಯಿತು ಎನ್ನುವುದು ಅಂಗಮೊ ಅವರ ಅನಿಸಿಕೆ. ಆಕಾಶವಾಣಿಯಲ್ಲಿ ನಮ್ಮ ಹಿರಿಯ  ಸಹೋದ್ಯೋಗಿಯಾಗಿದ್ದ ನಿವೃತ್ತಿಯ ನಂತರ ಲೇಹ್ ದಲ್ಲಿ ನೆಲೆಸಿದ್ದಾರೆ. ಈ ಲೇಖನಕ್ಕಾಗಿ ಅವರನ್ನು ದೂರವಾಣಿಯಲ್ಲಿ ಮಾತನಾಡಿಸಿದಾಗ ಅವರ ಮಾತಿನಲ್ಲಿ ಅವರ ಹೋರಾಟದ ಅದೇ ಕಿಚ್ಚು, ಅದೇ ಉತ್ಸಾಹ, ಬದ್ಧತೆ ಕಂಡು ಆಶ್ಚರ್ಯ ಚಕಿತನಾದೆ.

ನಾವು ಹೇಳುವ ಎಲ್ಲ ಮಿತಿಗಳ ನಡುವೆಯೂ ಸರಕಾರಿ ಸಂಸ್ಥೆಗಳು, ವಿಶೇಷವಾಗಿ ಚುಕ್ಕಾಣಿ ಹಿಡಿದವರು ಮನಸ್ಸು ಮಾಡಿದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಆಕಾಶವಾಣಿ ಕಾರ್ಗಿಲ್ ಹಾಗೂ ಅದರ ಚುಕ್ಕಾಣಿ ಹಿಡಿದ ಶ್ರೀಮತಿ ಟಿ ಅಂಗಮೊ ಒಂದು ನಿದರ್ಶನವಾಗಿದ್ದಾರೆ.

‍ಲೇಖಕರು avadhi

October 18, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಇದು ವಾಲ್ಮೀಕಿ ಜಯಂತಿ ವಿಶೇಷ

ಇದು ವಾಲ್ಮೀಕಿ ಜಯಂತಿ ವಿಶೇಷ

ನಾಯಕ ಅರಸು ಮನೆತನಗಳ ಇತಿಹಾಸ ತಿಳಿಯಬನ್ನಿ . . . ಚಿತ್ರ, ಲೇಖನ - ನಾಗರಾಜ ನಾಯಕ ಡಿ.ಡೊಳ್ಳಿನ ** ಪ್ರತಿಯೊಂದು ಜನಾಂಗಕ್ಕೂ ತನ್ನದೇ ಆದ...

‘ವೀರಲೋಕ ಪುಸ್ತಕ ಸಂತೆ’ 2.0

‘ವೀರಲೋಕ ಪುಸ್ತಕ ಸಂತೆ’ 2.0

ವೀರಲೋಕ ಸಂಸ್ಥೆಯ ಅತ್ಯಂತ ಮಹತ್ವದ ಯೋಜನೆಯಾದ ಪುಸ್ತಕ ಸಂತೆಯ ಸರಣಿ ಮುಂದುವರೆದಿದೆ. ಮೊದಲ ಸಂತೆಯ ಯಶಸ್ಸಿನ ನಂತರ ಇದೀಗ ಅದರ ಎರಡನೇ ಸಂತೆ ಇದೇ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This