ಪ್ರಿಯದರ್ಶಿನಿ ಶೆಟ್ಟರ ಓದಿದ ಪುಸ್ತಕ- ತುಸುವೆ ಕುಡಿವ ಗಂಡನ್ನ ಕೊಡು ತಾಯಿ…’

ಪ್ರಿಯದರ್ಶಿನಿ ಶೆಟ್ಟರ

ಅನಿರೀಕ್ಷಿತವಾದ ಕೋವಿಡ್-೧೯ ಸಂದರ್ಭದ ಸುದೀರ್ಘ ರಜೆಯ ಸಮಯವನ್ನು ಕ್ರಿಯಾತ್ಮಕ ಚಟುವಟಿಕೆಗಳಿಗೆ, ಹೊಸ ವಿಷಯಗಳ ಕಲಿಕೆಗೆ, ಮನೆಯ ಸ್ವಚ್ಛತೆ, ಅಡುಗೆ, ಕೈತೋಟದ ಕೆಲಸ, ಸಣ್ಣಪುಟ್ಟ ದುರಸ್ತಿ, ಹಳೆಯ ಸ್ನೇಹಿತರೊಡನೆ ಮಾತುಕತೆ, ಆರೋಗ್ಯದೆಡೆಗೆ ಗಮನ, ಇತ್ಯಾದಿಗಳಿಗೆ ವಿನಿಯೋಗಿಸುವುದು ಒಂದೆಡೆಯಾದರೆ, ಅನೇಕರಿಗೆ ಓದು, ಬರಹ, ಪ್ರತಿಕ್ರಿಯೆ ನೀಡುವಿಕೆ (ಆನ್‌ಲೈನ್‌ ಅಥವಾ ಆಫ್‌ಲೈನ್) – ಇಂತಹ ಸಾಹಿತ್ಯಿಕ ಚಟುವಟಿಕೆಗಳು ನೀಡುವ ತೃಪ್ತಿ ವರ್ಣನಾತೀತ.

ಬಹಳ ವರ್ಷಗಳಿಂದ ಓದಬೇಕೆಂದು ಎತ್ತಿಟ್ಟ ಪುಸ್ತಕಗಳು ಮತ್ತು ಲೇಖನಗಳೆಡೆಗೆ ಕಣ್ಣು ಹಾಯಿಸಲು ಇದು ಸದಾವಕಾಶ ಒದಗಿಸಿ ಕೊಟ್ಟಿತು. ಜೊತೆಗೆ, ಹೊಸ ಪುಸ್ತಕಗಳ ಓದು ಹಾಗೂ ನಮಗಿಷ್ಟವಾದ ಕೆಲವು ಕೃತಿಗಳ ಮರು ಓದಿನ ಹುರುಪು ಇಂತಹ ದಿನಗಳಲ್ಲಿ ನಮ್ಮನ್ನು ಸಕಾರಾತ್ಮಕವಾಗಿಡಲು ಸಹಕಾರಿಯಾಯಿತು.

ಇನ್ನು ಮನೆಯಲ್ಲಿ ಎಲ್ಲರೂ ಹೊರ ಹೋಗುವವರಾಗಿದ್ದರೆ, ಅಂಥವರಿಗೆ ಈ ಲಾಕ್‌ಡೌನ್‌ ಧಾವಂತವನ್ನು ತಪ್ಪಿಸಿ ಸ್ವಲ್ಪ ವಿಶ್ರಾಂತಿಯ ಜತೆಗೆ ಕೊಂಚ ಅಶಿಸ್ತನ್ನೂ ಕೊಟ್ಟಿತು. ಆದರೆ ಸೃಜನಶೀಲತೆಗೆ ಇಂಥದೇ ಸಮಯ ಆಗಬೇಕೆಂದೇನೂ ಇಲ್ಲವಲ್ಲ. ಪುಸ್ತಕವನ್ನೋ, ಬಣ್ಣ-ಬ್ರಷ್‌ಇಲ್ಲವೇ ಲೇಖನಿಯನ್ನೋ ಹಿಡಿದರೆ, ಅಥವಾ ತಮಗಿಷ್ಟವಾದ ಹವ್ಯಾಸದಲ್ಲಿ ತೊಡಗಿದರೆ ಹಗಲು-ರಾತ್ರಿ ಎಲ್ಲ ಒಂದೇ! ಹೀಗೆ ನಾನು ಓದುತ್ತಾ ಕಾಲ ಕಳೆಯುವಾಗ ಕೈಗೆ ಸಿಕ್ಕ ಪುಸ್ತಕ ಶ್ರೀ ಗಣೇಶ ಅಮೀನಗಡ ಅವರ ‘ತುಸುವೆ ಕುಡಿವ ಗಂಡನ್ನ ಕೊಡು ತಾಯಿ…’ ಪತ್ರಕರ್ತರಾದ ಅಮೀನಗಡ ಅವರ ಈ ಕೃತಿ ಪ್ರಕಟವಾದ ಎರಡೇ ತಿಂಗಳಲ್ಲಿ ಎರಡನೇ ಮುದ್ರಣ ಕಂಡಿದೆ ಎಂಬುದು ವಿಶೇಷ. ಇದು ೨೮ ಲಲಿತ ಪ್ರಬಂಧಗಳ ಸಂಗ್ರಹ.

ಖ್ಯಾತ ಸರೋದ್ ವಾದಕರೂ ಹಾಗೂ ಸಾಹಿತ್ಯ ವಿಮರ್ಶಕರೂ ಆದ ಪಂ.ರಾಜೀವ್‌ ತಾರಾನಾಥ ಅವರು ಈ ಪುಸ್ತಕದ ಬಗ್ಗೆ ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾ– ‘ಈ ಸಂಕಲನ ನಮ್ಮೆಲ್ಲರಿಗೂ ತುಸು ನಿಂತು ಅನುಭವಿಸು, ಸಂಪೂರ್ಣ ನೋಡು ಎಂದು ಒತ್ತಾಯಿಸುತ್ತದೆ. ಬೇಜಾರು, ದುಃಖ, ಗಡಿಬಿಡಿ ಇವೆಲ್ಲದರ ಹಿಂದೆ ಇರತಕ್ಕಂತಹ ಒಂದು ಜಾಗೃತವಾದ ಹಾಗೂ ಸ್ಥಿರವಾದ ಅನುಭವ ಕೇಂದ್ರವನ್ನು ಗಮನಿಸು ಅಂತ ಹೇಳುವ ಹಾಗಿದೆ. ಓಡಬೇಡ, ಗೊಂದಲ ಬೇಡ, ಸ್ವಲ್ಪ ನಿಲ್ಲು, ನೋಡು, ಅನುಭವ ಪಡು… ಇದೇ ಈ ಸಂಕಲನದ ಕೇಂದ್ರ.’ ಎಂದು ತಮ್ಮ ಓದಿನ ಅನುಭವವನ್ನು ದಾಖಲಿಸಿದ್ದಾರೆ.

ಈ ಪುಸ್ತಕ ಓದಿದವರಿಗೆ ಹಾಗೆನಿಸುವುದೂ ನಿಜ. ಏಕೆಂದರೆ ನಮ್ಮ ದಿನನಿತ್ಯದ ಬದುಕಿನಲ್ಲಿ ಚಿಕ್ಕಚಿಕ್ಕ ವಿಷಯಗಳಿಗೆ, ನವಿರು ಹಾಸ್ಯಕ್ಕೆ ಹಾಗೂ ಸೂಕ್ಷ್ಮ ಸಂಗತಿಗಳಿಗೆ ಜಾಗವೇ ಇಲ್ಲವಾಗಿದೆ. ಎಲ್ಲರೂ ತಮ್ಮದೇ ಓಟದಲ್ಲಿರುವಂತೆ ಭಾಸವಾಗುತ್ತಿದೆ. ಅಂತಹದರಲ್ಲಿ ಅನೇಕರ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ವಿಷಯಗಳೇ ಪ್ರಸ್ತುತ ಪುಸ್ತಕದಲ್ಲಿ ಲಲಿತ ಪ್ರಬಂಧಗಳ ರೂಪದಲ್ಲಿ ಓದುಗರ ಮುಂದಿವೆ. ಇಲ್ಲಿರುವ ಕೆಲ ವಿಚಾರಗಳು ಓದಿ ಮುಗಿಸಿದ ನಂತರವೂ ನಾವು ಮೆಲುಕು ಹಾಕುವಂತಿವೆ.

ಲೇಖಕರ ಆಸಕ್ತಿಯ ವ್ಯಾಪ್ತಿ ವಿಶಾಲವಾದುದು ಎಂಬುದನ್ನು ಈ ಕೃತಿಯ ಓದಿನ ಮುಖಾಂತರ ತಿಳಿಯಬಹುದು. ಗ್ರಾಮೀಣ ಜನತೆಯ ಬದುಕು- ಬವಣೆ, ವಾಚ್‌ರಿಪೇರಿ ಮಾಡುವವರು, ಗಾದಿ ಹಾಕುವವರು, ಗಾಣದ ಎಣ್ಣೆ ಉತ್ಪಾದಿಸುವವರು, ಬಾಸಿಂಗ ತಯಾರಿಸುವವರು, ಹೂವು ಮಾರುವವರು, ಕೌದಿ ಹೊಲೆಯುವ ಮಹಿಳೆಯರು, ಲೋಕೋಪೈಲೆಟ್‌ಗಳು, ಊದಿನ ಕಡ್ಡಿ ಉದ್ಯಮದವರು, ನಗಾರಿ ಬಾರಿಸುವ ಕಲಾವಿದರು, ರೊಟ್ಟಿ ತಟ್ಟಿ ಜನರ ಹಸಿವು ನೀಗಿಸುತ್ತಾ ತಮ್ಮ ಹೊಟ್ಟೆ ಹೊರೆಯುವವರ ಕುರಿತ ಬರಹಗಳು ಲೇಖಕರ ಸೂಕ್ಷ್ಮ ಸಂವೇದನೆಗೆ ಸಾಕ್ಷಿಯಾಗಿವೆ.

ಸಾಮಾನ್ಯವಾಗಿ ನಾವೆಲ್ಲ ಇಲ್ಲಿ ಪಟ್ಟಿ ಮಾಡಿದ ಕಾಯಕಗಳಲ್ಲಿ ತೊಡಗಿದವರ ಕುರಿತು ಯೋಚಿಸುವುದೇ ಅಪರೂಪ. ಇವರೆಲ್ಲ ನೆನಪಾಗುವುದು ನಮಗೆ ಅವಶ್ಯಕತೆ ಇದ್ದಾಗ ಮಾತ್ರ. ಉಳಿದ ಸಮಯದಲ್ಲಿಇಂತಹವರು ಬದುಕು ಕಟ್ಟಿಕೊಳ್ಳಲು ಎಷ್ಟು ಪರದಾಡುತ್ತಾರೆಂಬ ಯೋಚನೆಗಳು ಈ ಪುಸ್ತಕ ಓದುತ್ತಾ ಹೋದಂತೆ ನಮ್ಮನ್ನುಕಾಡತೊಡಗುವವು.

‘ತುಸುವೆ ಕುಡಿವ ಗಂಡನ್ನ ಕೊಡು ತಾಯಿ…’ ಶೀರ್ಷಿಕೆಯುಳ್ಳ ಪ್ರಬಂಧದಲ್ಲಿ ಪಬ್ ಸಂಸ್ಕೃತಿ, ಮದ್ಯಪ್ರಿಯರ ಪತ್ರಿಕಾಗೋಷ್ಠಿ, ಮದ್ಯಪಾನದಿಂದಾಗುವ ಅವಾಂತರಗಳು, ಪಾನಗೋಷ್ಠಿಯ‘ರಸ’ವತ್ತಾದ ಪ್ರಸಂಗಗಳು, ವೈಯಕ್ತಿಕ ಅನುಭವಗಳು, ಮನೆಯಲ್ಲಿ ದಂಪತಿಗಳಿಬ್ಬರೂ ಒಟ್ಟಿಗೇ ಕುಳಿತು ಕುಡಿಯುವ ಘಟನೆಗಳು, ಲಾಕ್‌ಡೌನ್ ಸಮಯದಲ್ಲಿ ಮದ್ಯದಂಗಡಿಯ ಕಳುವು ಪ್ರಕರಣ – ಹೀಗೆ ಅನೇಕ ಬಿಡಿಬಿಡಿ ಪ್ರಸಂಗಗಳನ್ನು ಸೇರಿಸಿ ಬರೆದ ಪ್ರಬಂಧದ ಕೊನೆಗೆ ‘ಕೊಡುತಾಯಿ ವರವ ಕುಡುಕನಲ್ಲದ ಗಂಡನ್ನ’ ಎಂದು ಕೇಳುವ ಬದಲು‘ಹೆಚ್ಚು ಕುಡಿಯದ, ಕುಡಿದರೂ ಸೀದಾ ಮನೆಗೇ ಬರುವ ಗಂಡನ ಕೊಡು ತಾಯಿ’ ಎಂದು ಪ್ರಾರ್ಥಿಸುವ ದಿನಗಳಿವು ಎನ್ನುವಲ್ಲಿ ತಮ್ಮ ಗ್ರಹಿಕೆಯನ್ನು ಹಾಸ್ಯಪೂರ್ಣವಾಗಿ ಹರಿಬಿಟ್ಟಿದ್ದಾರೆ.

ಸೀಕರಣೆ, ಮೈಸೂರು ಪಾಕ್‌ಗಳ ಕುರಿತಾದ ಬರಹಗಳು ಓದುಗರ ಬಾಯಲ್ಲಿ ನೀರೂರಿಸುತ್ತವೆ. ಇಡ್ಲಿಯ ಬಗ್ಗೆ ಓದುವಾಗಲಂತೂ ಇಡ್ಲಿಯ ಮೃದುತ್ವ, ಸಾಂಬಾರ್ ಮತ್ತು ಚಟ್ನಿಯ ಪರಿಮಳ ನೆನಪಾಗುತ್ತವೆ. ರೊಟ್ಟಿಯ ಕುರಿತ ಬರಹದಲ್ಲಿ ಅದರ ತಯಾರಿಕೆ, ಮಾರಾಟ, ರೊಟ್ಟಿ ಜಾತ್ರೆಯ ಕುರಿತ ಮಾಹಿತಿಗಳು ಕುತೂಹಲಕರವಾಗಿರುವುದರ ಜೊತೆಗೆ ಓದುಗರ ಹಸಿವನ್ನು ಕೆರಳಿಸುತ್ತವೆ. ‘ವರವಾಗಿದ್ದ ವರಾಹಗಳು ಇಲ್ಲದೆ’ ಹಾಗೂ ‘ಶೌಚಾಲಯ ಪ್ರಸಂಗ’ ಎರಡನ್ನೂ ಸೇರಿಸಿ ಒಂದೇ ಬರಹವಾಗಿಸಬಹುದಿತ್ತು. ಕೆಲವು ಕಡೆ ‘ಉತ್ತರ ಕರ್ನಾಟಕ’ ಪದದ ಬಳಕೆ ಅನವಶ್ಯಕ ಅನಿಸುತ್ತದೆ. ಅಗರಬತ್ತಿ ತಯಾರಿಕೆ ಮತ್ತು ಮಾರಾಟ, ರಿಪೇರಿ ಮಾಡುವವರು, ಗಾಣಿಗರು, ಶುಭಾಶಯ ಪತ್ರಗಳು, ಚಾಳ, ವಾಡೆ, ನಗಾರಿ ಕಲೆ, ಲೋಕೋಪೈಲೆಟ್‌ಗಳ ಕುರಿತ ಪ್ರಬಂಧಗಳ ಬರವಣಿಗೆಯ ಹಿಂದೆ ಲೇಖಕರು ಆಳವಾದ ಅಧ್ಯಯನ ಕೈಗೊಂಡಿದ್ದು ಕಂಡುಬರುತ್ತದೆ.

ಲೇಖಕರು ಸುದೀರ್ಘ ಎರಡು ದಶಕಕ್ಕೂ ಮೀರಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ಇಲ್ಲಿನ ಕೆಲವು ಪ್ರಬಂಧಗಳಲ್ಲಿ ಪತ್ರಿಕಾ ವರದಿಗಳ ಬರಹದ ಛಾಯೆಯೂ ಕಂಡುಬರುತ್ತದೆ. ಆದಾಗ್ಯೂ ವಿಷಯ ವೈವಿಧ್ಯ ಹಾಗೂ ಓದುಗರನ್ನು ಹಿಡಿದಿಡುವ ಲೇಖಕರ ಬರವಣಿಗೆಯ ಶೈಲಿ ಈ ಕೃತಿಯ ವಿಶೇಷ. ಲೇಖಕರು ದೀರ್ಘಕಾಲದಿಂದ ಪಡೆದ ವಿಭಿನ್ನ ಅನುಭವಗಳನ್ನು ಒಟ್ಟುಗೂಡಿಸಿ ಈ ಸಂಕಲನವನ್ನು ಓದುಗರ ಮುಂದಿಟ್ಟಿದ್ದಾರೆ.

‍ಲೇಖಕರು Avadhi

June 20, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: