ಪ್ರಿಯದರ್ಶಿನಿ ಶೆಟ್ಟರ್ ಕಂಡಂತೆ- ಕವಿಶೈಲದಲ್ಲಿ ಹಳಗನ್ನಡ ಚರ್ಚೆ…

ಪ್ರಿಯದರ್ಶಿನಿ ಶೆಟ್ಟರ್

ಬೆಳಿಗ್ಗೆ 6.30ಕ್ಕೆ, ಶಿಬಿರಾರ್ಥಿಗಳಲ್ಲೊಬ್ಬರಾದ ಶ್ರೀ ಸಂತೋಷ ಎಕ್ಕುಂಡಿಯವರ ಮಾರ್ಗದರ್ಶನದಲ್ಲಿ ಎಲ್ಲರೂ‘ಹೇಮಾಂಗಣ’ ಸಭಾಗೃಹದಲ್ಲಿ ಯೋಗಾಸನ ಮಾಡಿದೆವು. ನಂತರ ನಾವೆಲ್ಲ ಶಾಂತ ವಾತಾವರಣದಲ್ಲಿ ಸಾಗುತ್ತಾ ಫೋಟೊ, ಸೆಲ್ಫಿ ತೆಗೆಸಿಕೊಳ್ಳುತ್ತಾ ಕವಿಶೈಲದತ್ತ ಹೆಜ್ಜೆ ಹಾಕಿದೆವು. ಕುವೆಂಪುರವರು ಇಲ್ಲಿ ಕುಳಿತು ಅನೇಕ ಪದ್ಯಗಳನ್ನು ರಚಿಸಿದ್ದಾರೆ. ಕಲ್ಲಿನ ಫಲಕದಲ್ಲಿ ಬರೆಸಿದ ‘ಕವಿಶೈಲ’ ಎನ್ನುವ ಪದ್ಯ ಕಣ್ಸೆಳೆಯಿತು.

ಅನೇಕ ವರ್ಷಗಳಿಂದ ಈ ಜಾಗ ನೋಡಲು ಕಾತರದಿಂದ ಕಾಯುತ್ತಿದ್ದ ನನ್ನ ಸಂತೋಷಕ್ಕೆ ಪಾರವೇಇರಲಿಲ್ಲ. ಸುತ್ತಲೂ ಎತ್ತರಕ್ಕೆ ಜೋಡಿಸಲ್ಪಟ್ಟ ಕಲ್ಲು ಕಂಬಗಳ ನಡುವೆ ಕುವೆಂಪುರವರ ಸಮಾಧಿ ಸ್ಥಳವಿದೆ. ಇಡೀ ವಾತಾವರಣಕ್ಕೆಗಾಂಭೀರ್ಯದ ಹೊದಿಕೆಯಿದೆ. ಅಲ್ಲಿರುವ ದೊಡ್ಡ ಹಾಸುಕಲ್ಲು, ದೂರದಲ್ಲಿ ಕಾಣುವ ಬೆಟ್ಟಗಳು, ಚಿಕ್ಕಚಿಕ್ಕ ಹೂಗಳನ್ನು ಬಿಡುವ ಸುಂದರವಾದ ಸಸ್ಯಗಳು, ಹಕ್ಕಿಗಳ ಕಲರವ, ಅಲ್ಲಿನ ಪ್ರಶಾಂತತೆ – ಇವೆಲ್ಲವುಗಳಿಂದಾಗಿ ಅಲ್ಲಿ ಹೊತ್ತು ಕಳೆದದ್ದೇ ತಿಳಿಯದಾಯಿತು. ಅಲ್ಲಿಂದ ಮುಂದೆ ಕವಿಮನೆಯತ್ತ ಸಾಗಿದೆವು. ಆ ದೊಡ್ಡತೊಟ್ಟಿಮನೆ, ಮನಸೂರೆಗೊಳ್ಳುವ ಹುಲ್ಲುಹಾಸು, ಆ ಪ್ರಕೃತಿ ಮಡಿಲಲ್ಲಿ ಇದ್ದಷ್ಟೂ ಹೊತ್ತು ಒಂದು ಕ್ಷಣವೂ ವ್ಯರ್ಥಮಾಡದಂತೆ ಅನುಭವಿಸಿಬಿಡಬೇಕೆನಿಸಿತು!

ಮನೇ ಮನೇ ಮುದ್ದು ಮನೆ
ತಾಯಿ ಮುತ್ತುಕೊಟ್ಟ ಮನೆ
ತಂದೆಎತ್ತಿಕೊಂಡ ಮನೆ
ನಾನು ನುಡಿಯಕಲಿತ ಮನೆ
ಮೊದಲು ಬೆಳಕ ಕಂಡ ಮನೆ

ಮನೆಯಕುರಿತ ಈ ಪದ್ಯ ನಮ್ಮಕಣ್ಣಿಗೆ ಬಿತ್ತು. ಮರಳಿ ಪ್ರತಿಷ್ಠಾನದಕಡೆ ಹೊರಟೆವು.

ಮುಂಜಾನೆಯ ಗೋಷ್ಠಿಯಲ್ಲಿ ಪ್ರೊ. ಬಸವರಾಜ ಕಲ್ಗುಡಿಯವರು ‘ತತ್ವಚಿಂತನೆ ಮತ್ತು ಕನ್ನಡ ವಿಮರ್ಶೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ರಂ. ಶ್ರೀ. ಮುಗಳಿಯವರ ‘ಕನ್ನಡ ಸಾಹಿತ್ಯ ಚರಿತ್ರೆ’ಯಿಂದ ಆರಂಭವಾದ ಉಪನ್ಯಾಸ ತತ್ವ ಚಿಂತನೆಯ ವ್ಯಾಪ್ತಿ, ಸಂಸ್ಕೃತಿ ವಿಮರ್ಶೆ, ಸಾಮುದಾಯಿಕ ಚಿಂತನೆ, ದಲಿತ ಸಂವೇದನೆ, ತಾತ್ವಿಕಚೌಕಟ್ಟು, ಜೊತೆಗೆ ಅನೇಕ ಕೃತಿಗಳು, ಸಾಹಿತಿಗಳ ದೃಷ್ಟಿಕೋನ, ಇತ್ಯಾದಿ ವಿಷಯಗಳ ವಿವರಗಳನ್ನೊಳಗೊಂಡಿತ್ತು.

ತದನಂತರಡಾ. ವಿಕ್ರಮ ವಿಸಾಜಿಯವರು‘ಜನಪ್ರಿಯ ಸಾಹಿತ್ಯ: ವಿಮರ್ಶಾ ಮಾನದಂಡಗಳು’ ಎನ್ನುವ ವಿಷಯದ ಕುರಿತು ಮಾತನಾಡುತ್ತಾ ಜನಪದ, ಜನಪರ ಹಾಗೂ ಜನಪ್ರಿಯ ಸಾಹಿತ್ಯಗಳ ಅರ್ಥ ಹಾಗೂ ವ್ಯಾಪ್ತಿ, ಜನಪ್ರಿಯ ಸಾಹಿತ್ಯದಕುರಿತ ಕಿ. ರಂ. ನಾಗರಾಜ ಅವರ ವ್ಯಾಖ್ಯಾನ, ಈ ಸಾಹಿತ್ಯ ಪ್ರಕಾರದ ಓದುಗರ ಅಭಿರುಚಿ, ಜನಪ್ರಿಯತೆಯಿಂದಾಗಿ ಮರೆಮಾಚಲ್ಪಡುವ ಮೌಲ್ಯಗಳು, ಇಂತಹ ಅನೇಕ ವಿಚಾರ ಪ್ರಚೋದಕ ಅಂಶಗಳನ್ನು ಮಂಡಿಸಿದರು. ಊಟದ ಬಳಿಕ ಎಲ್ಲರೂ ಕವಿಶೈಲಕ್ಕೆ ಹೋದೆವು.

ಪ್ರಾಯೋಗಿಕ ಗೋಷ್ಠಿಯಲ್ಲಿ ಗುಂಪುಗಳಲ್ಲಿ ಚರ್ಚೆಸಬೇಕಿದ್ದ ಲೇಖನ ಎಚ್. ಎಸ್. ಶ್ರೀಮತಿಯವರ ‘ಹಳಗನ್ನಡ ಸಾಹಿತ್ಯಾಧ್ಯಯನದ ಹಿಂದಿನ ತಾತ್ವಿಕತೆಯ ವಿವೇಚನೆ’. ಪ್ರಕೃತಿ ಮಡಿಲಲ್ಲಿ, ಇತರ ಪ್ರವಾಸಿಗರ ನಡುವೆ, ಹಿತವೆನಿಸುವ ಬಿಸಿಲಿನಲ್ಲಿ ಕಲ್ಲುಬಂಡೆಯ ಮೇಲೆ ಕುಳಿತು ಚರ್ಚಿಸಿದ ಅನುಭವ ವಿಶೇಷವಾಗಿತ್ತು. ಪ್ರತಿ ಗುಂಪಿನಿಂದ ಒಬ್ಬೊಬ್ಬ ಶಿಬಿರಾರ್ಥಿಯು ಈ ಲೇಖನದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಸುದೀರ್ಘಚರ್ಚೆಗೆ ನಾಂದಿಯಾಯಿತು.

ಪ್ರೊ. ಕಲ್ಗುಡಿಯವರು ಹಾಗೂ ಡಾ. ಗುರುಪಾದ ಮರಿಗುದ್ದಿಯವರು ಕಾಲೇಜುಗಳಲ್ಲಿ ಹಳಗನ್ನಡ ಪಠ್ಯ ಕಲಿಸುವಿಕೆ ಮತ್ತು ಕಲಿಯುವಿಕೆಗೆ ಸಂಬಂಧಿಸಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿರುವ ನಿರಾಸಕ್ತಿ, ಬರೀ ಹಳಗನ್ನಡ ಕಾವ್ಯದ ಗದ್ಯಾನುವಾದವನ್ನು ಮಾತ್ರ ಪಾಠ ಮಾಡಬೇಕೆನ್ನುವವರ ಧೋರಣೆ, ಇದರಿಂದ ಹಳಗನ್ನಡದ ಓದಿನ ಆಸ್ವಾದನೆ/ರುಚಿಯಿಂದ ವಂಚಿತರಾಗುವ ಅಪಾಯ- ಮುಂತಾದ ಆತಂಕಕಾರಿ ಹಾಗೂ ವಿಚಾರಯೋಗ್ಯ ಅಂಶಗಳನ್ನು ಹಂಚಿಕೊಂಡರು. ಈ ಸಾಹಿತ್ಯಿಕ ಚರ್ಚೆ ಬೌದ್ಧಿಕ ಪ್ರಚೋದನೆ ನೀಡಿದರೆ, ಸಂಜೆಯ ಸೊಬಗು ಮನಸ್ಸಿಗೆ ಮುದ ನೀಡಿತು.

ಸಂಜೆ ಪರೇಶ ಮೊಕಾಶಿಯವರ ನಿರ್ದೇಶನದ ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಎಂಬ ಮರಾಠಿ ಸಿನಿಮಾ ವೀಕ್ಷಿಸಿದೆವು. ಶ್ರೀ ಅರವಿಂದ ನಾವಡ ಅವರು ಕಲಾತ್ಮಕ ಚಲನಚಿತ್ರಗಳ ಕುರಿತು ಮಾತನಾಡಿದರು. ಸಿನಿಮಾಕ್ಕೆ ಮುಂಚೆ ‘ಡೂಡಲ್ ಬಗ್’ ಎನ್ನುವ ಒಂದೂವರೆ ನಿಮಿಷದ ವಿಡಿಯೋ ತೋರಿಸಿದರು. ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಸಿನಿಮಾ ಚಲನಚಿತ್ರ ರಂಗದ ದಿಗ್ಗಜ ದುಂಡಿರಾಜ್‌ ಗೋವಿಂದ ಫಾಲ್ಕೆಉರ್ಫ್ದಾದಾ ಸಾಹೇಬ ಫಾಲ್ಕೆಅವರ ಜೀವನವನ್ನಾಧರಿಸಿದೆ. ಫಾಲ್ಕೆಅವರು ನಿರ್ಮಿಸಿದ ೧೯೧೩ರಲ್ಲಿ ತೆರೆಕಂಡ ‘ರಾಜಾ ಹರಿಶ್ಚಂದ್ರ’ ಚಿತ್ರ ತಯಾರಿಕೆಯ ಪೂರ್ವದಲ್ಲಿ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ಜರ್ಮನಿಗೆ ಹೋಗಿ ಅಲ್ಲಿನ ತಂತ್ರಜ್ಞಾನ ಕಲಿತು, ಅದನ್ನು ಇಲ್ಲಿಗೆ ತಂದು ಸಣ್ಣ ಪುಟ್ಟ ಪ್ರಯೋಗಗಳ ನಂತರ ಮನೆಯವರೆಲ್ಲರ ಸಹಕಾರದಿಂದ ತನ್ನದೇ ಒಂದು ತಂಡ ಕಟ್ಟಿಕೊಂಡು ಸಿನಿಮಾತಯಾರಿಕೆಯ ಸಾಹಸಕ್ಕೆ ಕೈಹಾಕಿದಂತಹ ಅನೇಕ ಸನ್ನಿವೇಶಗಳನ್ನು ‘ಹರಿಶ್ಚಂದ್ರಾಚಿ ಫ್ಯಾಕ್ಟರಿ’ ಕಥೆಯೊಳಗೊಂಡಿದೆ. ‘ರಾಜಾ ಹರಿಶ್ಚಂದ್ರ’ ಚಲನಚಿತ್ರ ಭಾರತದಲ್ಲಿ ಚಿತ್ರೋದ್ಯಮ ಬೆಳೆಯಲು ನಾಂದಿಯಾಯಿತು.

ಸಿನಿಮಾ ವೀಕ್ಷಣೆಯ ನಂತರ ಶಿಬಿರಾರ್ಥಿಗಳೆಲ್ಲರೂ ನಮ್ಮ ನಮ್ಮ ಅನಿಸಿಕೆಗಳನ್ನು ಹಂಚಿಕೊಂಡೆವು. ಇಡೀ ದಿನ ಅತ್ಯಂತ ಲವಲವಿಕೆಯಿಂದ ಕೂಡಿತ್ತು. ಮರುದಿನ ಚರ್ಚಿಸಬೇಕಿದ್ದ ‘ಭೂತ’ ಕವನವನ್ನೊಮ್ಮೆ ಓದಿ ಮಲಗಿದೆವು.

| ಇನ್ನು ನಾಳೆಗೆ |

‍ಲೇಖಕರು Admin

November 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: