ಪ್ರಾರ್ಥನೆ ಮತ್ತು ಕಾಮ ಪಿಶಾಚಿ..

ಡಾ ಡಿ ಸಿ ರಾಜಪ್ಪ ಐಪಿಎಸ್, ಡಿಐಜಿಪಿ( ನಿವೃತ್ತ ) ಬೆಂಗಳೂರು

**

ಅದೊಂದು ಕುಗ್ರಾಮ, ಆಗ ತಾನೇ ನಾಗರೀಕತೆಯ ಮೆಟ್ಟಿಲುಗಳನ್ನು ಏರುತ್ತಿರುವ ಒಂದು ಪುಟ್ಟ ಗ್ರಾಮ, ಅದೊಂದು ಕುಗ್ರಾಮವಾದರೂ ಜಾತಿ, ಮತ, ಭೇದಗಳಿಲ್ಲದೆ, ಹಳ್ಳಿಯ ಸೊಗಡಿನಿಂದ ಬಲು ಸೊಬಗಿನಿಂದಿತ್ತು ಆ ಹಳ್ಳಿ, ಆದರೆ ಅದಕ್ಕೊಂದು ಅಪವಾದವೆಂಬಂತೆ ಈ ಗ್ರಾಮದಲ್ಲಿ ಆಡಳಿತವು, ಗ್ರಾಮದ ಆಗುಗೋಗುಗಳು, ಏಳು ಬೀಳುಗಳೆಲ್ಲವೂ ಸಹ ಆ ಕೆಟ್ಟ ಜಮೀನ್ದಾರಿ ವ್ಯವಸ್ಥೆಯ ಮೇಲೆಯೇ ನಿಂತಿದ್ದವು. ಈ ಹಳ್ಳಿಯ ಅಧಿಕಾರವು ಜಮೀನ್ದಾರಿ ಪದ್ದತಿಯ ಮನಸ್ಥಿತಿ ಹೊಂದಿರುವ ಕೆಲವೇ ಕೆಲವು ಕುಟುಂಬದ ಸದಸ್ಯರ ಹಿಡಿತದಲ್ಲಿತ್ತು. ಆ ಗ್ರಾಮದಲ್ಲಿ ಒಂದು ಹುಲ್ಲು ಕಡ್ಡಿಯು ಜರುಗುವುದರಿಂದ ಹಿಡಿದು, ದೊಡ್ಡ ಜಾತ್ರೆ ವಗೈರೆಗಳ ತನಕ ಈ ಜಮೀನ್ದಾರರ ಆಣತಿ ಇಲ್ಲದೆ ಅವುಗಳೇನೂ ಜರುಗುವಂತಿರಲಿಲ್ಲ. ಈ ಗ್ರಾಮದಲ್ಲಿ ಒಂದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹಲವು ಕುಟುಂಬಗಳು ವಾಸವಾಗಿದ್ದವು. ಅಲ್ಲದೇ ಇತರೇ ಉಪ ಕಸುಬು ಮಾಡುವ ಹಲವು ಕುಟುಂಬಗಳು ತಮ್ಮ ಕುಲಕಸುಬುಗಳಾದ ಕುಂಬಾರಿಕೆ, ಪಂಚವಾಳಿಕೆ, ನೇಕಾರಿಕೆ, ಕಮ್ಮಾರಿಕೆ, ಚಮ್ಮಾರಿಕೆ, ಗುಡಿಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮುಂತಾದ ಕೆಲಸಗಳನ್ನು ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದರು. ( ಇಲ್ಲಿ ಅಲ್ಪಸಂಖ್ಯಾತ ಸಮುದಾಯ ವೆಂದರೆ, ಅದು ಒಂದು ಜಾತಿ, ಮತ, ಧರ್ಮಕ್ಕೆ ಸಂಬಂಧಿಸಿದ್ದವರು ಎಂದು ಭಾವಿಸಬಾರದು. ಆ ಗ್ರಾಮದಲ್ಲಿ ಕೇವಲ ಸಂಖ್ಯೆಯಲ್ಲಿ ಮಾತ್ರವೇ ಕಡಿಮೆ ಇರುವ ಕುಟುಂಬಗಳ ಒಂದು ಸಮುದಾಯವೆಂದು ಭಾವಿಸತಕ್ಕದ್ದು ) ಅಲ್ಲಿ ಅವರ ಮುಖ್ಯವಾದ ಉದ್ಯೋಗ ಎಂದರೆ, ಹತ್ತಿರದ ಕಾಡಿನಲ್ಲಿ ಕಟ್ಟಿಗೆ ಕಡಿದು ಸಂಗ್ರಹ ಮಾಡಿ, ಕಡಿದ ಕಟ್ಟಿಗೆಯನ್ನು ಮಾರಿಕೊಂಡು ಜೀವನ ಸಾಗಿಸುತ್ತಿದ್ದದ್ದಾಗಿರುತ್ತದೆ.

ಈ ಗ್ರಾಮದ ಉತ್ತರ ದಿಕ್ಕಿನಲ್ಲಿ ಸಣ್ಣ ಗುಡ್ಡವೊಂದಿತ್ತು. ಈ ಗುಡ್ಡದ ಸುತ್ತಲೂ ಕುರುಚಲು ಕಾಡಿನಿಂದಾವೃತವಾಗಿತ್ತು. ಈ ಕುರುಚಲು ಕಾಡಿನಲ್ಲಿಯೇ ಈ ಗ್ರಾಮದಲ್ಲಿಯ ಈ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರೂ ಹಾಗೂ ಪುರುಷರು ಕಟ್ಟಿಗೆ ತರಲು ಹೋಗುತ್ತಿದ್ದರು. ಈ ಸಮುದಾಯದ ಜನರಿಗೆ ಅವರದೇ ಆದ ಪ್ರಾರ್ಥನಾ ಮಂದಿರವೊಂದು ಈ ಗ್ರಾಮದಲ್ಲಿ ಅವರಿಗಾಗಿ ಇರಲಿಲ್ಲ. ಪ್ರತಿದಿನ ಕಟ್ಟಿಗೆ ತರಲು ಹತ್ತಿರದ ಗುಡ್ಡಕ್ಕೆ ಹೋಗುತ್ತಿದ್ದ ಪುರುಷ ಹಾಗೂ ಮಹಿಳೆಯರು ಸೇರಿ ಗುಡ್ಡದ ಮೇಲಿರುವ ಸಮತಟ್ಟಾದ ನೆಲದಲ್ಲಿಯೇ ಇದ್ದ ಕಲ್ಲು ಕಂಟಿಗಳನ್ನ ತೆರವುಗೊಳಿಸಿ ಸ್ವಚ್ಚತೆ ಮಾಡಿ ಅಲ್ಲಿಯೇ ಕಟ್ಟಿಗೆ ಸಂಗ್ರಹವಾದ ಮೇಲೆ ಪ್ರಾರ್ಥನೆ ಮಾಡಿ, ಆ ಭಗವಂತನಲ್ಲಿ ತಮ್ಮ ಅಭೀಷ್ಠೆಗಳನ್ನು ಪ್ರಾರ್ಥಿಸಿಕೊಂಡು ಅಲ್ಲಿಂದ ಮನೆಗೆ ಬರುತ್ತಿದ್ದರು. ಇದು ಆ ಸಮುದಾಯದ ಜನರ ದೈನಂದಿನ ಕೆಲಸವೂ ಸಹ ಆಗಿತ್ತು. ಈ ವಲಸಿತ ಸಮುದಾಯದ ಜನರ ದೈನಂದಿನ ಚಟುವಟಿಕೆಗಳನ್ನ ಗ್ರಾಮದ ಆಡಳಿತ ಮಂಡಳಿ ಅಧ್ಯಕ್ಷ ಗಂಗರಾಜು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಈ ಸಮುದಾಯದ ಕೆಲವು ಪ್ರಮುಖರು ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ಗಂಗರಾಜುವನ್ನು ಭೇಟಿ ಮಾಡಿ, “ನಮ್ಮ ಸಮುದಾಯದ ಜನರಿಗೆ ಪ್ರಾರ್ಥನೆ ಮಾಡಿ ಆ ಭಗವಂತನಿಗೆ ನಮಿಸಲು ನಮಗೆ ಇಲ್ಲಿ ಯಾವ ಪ್ರಾರ್ಥನಾ ಮಂದಿರವೂ ಇಲ್ಲ, ಹಾಗಾಗಿ ನಾವು ಆ ಗುಡ್ಡದಲ್ಲಿಯೇ ಪ್ರಾರ್ಥನೆ ಮಾಡುತ್ತಿದ್ದೇವೆ. ತಾವು ದಯಮಾಡಿ, ಈ ಊರಿಂದ ಹೊರಗಿರುವ ಗುಡ್ಡದ ಮೇಲಿರುವ ಸ್ವಲ್ಪ ಜಾಗದಲ್ಲಿ ಪ್ರಾರ್ಥನಾ ಮಂದಿರವನ್ನು ಕಟ್ಟಿಕೊಳ್ಳಲು ಸದರಿ ಜಾಗವನ್ನು ಗ್ರಾಮ ಪಂಚಾಯಿತಿ ವತಿಯಿಂದ ಮುಂಜೂರು ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದರು”.

ಆ ಗ್ರಾಮದ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಹಲವು ಸದಸ್ಯರುಗಳು ಈ ಬಗ್ಗೆ ಚರ್ಚಿಸಿ, ಆ ಜಾಗ ಊರಿಂದಲೂ ಹೊರಗೆ ಬಲು ದೂರದಲ್ಲಿ, ಅದೂ ಗುಡ್ಡದ ಮೇಲೆ ಇರುವ ಕಾರಣ ಅಲ್ಲಿಗೆ ನಮ್ಮ ಜನರ ದನಗಳೂ ಸಹ ಮೇಯಲು ಹೋಗದಿರುವುದಿಲ್ಲ. ಆ ಜಾಗವು ನಮಗೆ ಅನುಪಯುಕ್ತವಾಗಿದೆ. ಪಾಪ ಅವರಿಗೆ ಅದೂ ಪ್ರಾರ್ಥನೆಗೆ ಅವರಿಗೆ ಕೊಡುವುದರಲ್ಲಿ ನಮಗ್ಯಾವ ಸಮಸ್ಯೆಯೂ ಇಲ್ಲ, ಹಾಗಾಗಿ ಅವರ ಅರ್ಜಿಯನ್ನು ಪರಿಗಣಿಸಿ, ಆ ಸಮುದಾಯದ ಜನರಿಗೆ ಅಲ್ಲಿ ಪ್ರಾರ್ಥನಾ ಮಂದಿರವನ್ನು ನಿರ್ಮಿಸಿಕೊಂಡು, ಅಲ್ಲಿ ಪ್ರಾರ್ಥನೆ ಮಾಡಲು ಖುಷಿಯಿಂದಲೇ ಜಾಗವನ್ನು ಮುಂಜೂರು ಮಾಡಿದರು. ಈ ಸಮುದಾಯದ ಜನರೆಲ್ಲಾ ಸೇರಿ ಪಂಚಾಯಿತಿಯಿಂದ ಮುಂಜೂರಾದ ಜಾಗದಲ್ಲಿ ಪ್ರಾರ್ಥನಾ ಮಂದಿರವನ್ನು ಕಟ್ಟಿಕೊಂಡು, ಅಲ್ಲಿ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಸಣ್ಣ ಪುಟ್ಟ ಧಾರ್ಮಿಕ ಸಭೆಗಳು ನಡೆದವು ಹಾಗೂ ನಡೆಯುತ್ತಿದ್ದವು. ಹೀಗೆ ಒಂದು ಪ್ರಾರ್ಥನಾ ಮಂದಿರವಾಯ್ತು. ಈ ಪ್ರಾರ್ಥನಾ ಮಂದಿರವನ್ನು ಹಾಗೆಯೇ ಬಿಟ್ಟರೆ ಹೇಗೆ? ಅದರ ನಿರ್ವಹಣೆ, ಅಲ್ಲಿ ಪ್ರಾರ್ಥನೆ, ಮಾರ್ಗದರ್ಶನ, ಧರ್ಮದ ಬಗ್ಗೆ ಪ್ರವಚನ ನೀಡುವಂತ ವ್ಯವಸ್ಥೆಯನ್ನು ಇಡಬೇಕು ಎಂದುಕೊಂಡ ಆ ಸಮುದಾಯದ ಜನರು, ಒಮ್ಮೆ ಎಲ್ಲರೂ ಸೇರಿ ಅವರು ಕಟ್ಟಿರುವ ಪ್ರಾರ್ಥನಾ ಮಂದಿರಕ್ಕೆ ಒಬ್ಬ ಧರ್ಮ ಗುರುಗಳನ್ನು ನೇಮಿಸಲು ತೀರ್ಮಾನ ಮಾಡಿದರು. ಅಂತೆಯೇ ಉತ್ತರದ ದೂರದ ಊರಿನಿಂದ ಧರ್ಮ ಪ್ರವಚನದಲ್ಲಿ ಪರಿಣಿತಿ ಪಡೆದಂತಹ ಒಬ್ಬ ಧರ್ಮಗುರುವನ್ನು ಅವರೆಲ್ಲಾ ಸೇರಿ ಕರೆತಂದರು.

ಅಲ್ಲಿಗೆ ಧರ್ಮವನ್ನು ಬೋಧಿಸಲು, ಮಂದಿರವನ್ನು ನಿರ್ವಹಿಸಲು ಬಂದಂತಹ ಧರ್ಮ ಗುರುವಿಗೆ ಈಗಾಗಲೇ ಅವರಿಗೆ ಮದುವೆಯಾಗಿತ್ತು, ಅವರಿಗೆ ಲೆಕ್ಕಕ್ಕೆ ಮೂರು ಜನ ಹೆಂಡತಿಯರು ಹಾಗೂ ಆರು ಮಕ್ಕಳಿದ್ದರು. ಆತನು ಮಧ್ಯವಯಸ್ಕನಾಗಿದ್ದರೂ ಸ್ಫುರದ್ರೂಫಿಯಾಗಿದ್ದವನು. ಕಣ್ಣೋಟದಲ್ಲಿಯೇ, ಆಳ್ತನದಲ್ಲಿಯೇ ಯಾರನ್ನು ಬೇಕಾದರೂ ಆಕರ್ಷಿಸುವ ಮೈಕಟ್ಟನ್ನು ಹೊಂದಿರುವ ಸುರಸುಂದರಾಂಗನೇ ಆಗಿದ್ದನವನು. ಕಣ್ಣಿನ ನೋಟದ ಬಾಣದಲ್ಲಿಯೇ‌ ಎಂಥವರನ್ನಾದರೂ ಮರಳು ಮಾಡುವಂಥಹ ತೀಕ್ಷ್ಣತೆ ಇತ್ತು. ದೇಹದಲ್ಲಿ ಗಟ್ಟಿಗ ಎಂಬುದರ ಜೊತೆಗೆ ಧರ್ಮವನ್ನು ಬೋಧಿಸುವ ಗುರುವಾಗಿದ್ದರಿಂದ ಆತನ ಮೇಲೆ ಭಯ, ಭಕ್ತಿ, ನಯ, ವಿನಯಗಳು ಆ ಮುಗ್ದ ಜನರಲ್ಲಿ ತುಂಬಿತ್ತು. ಧರ್ಮಗುರುವು ಆ ಗ್ರಾಮಕ್ಕೆ ಬಂದಾಗಿತ್ತು. ಧರ್ಮಗುರು ಎಂದರೆ ಅದೇನು ಕಡಿಮೆಯೇ? ಆತನಲ್ಲಿ ಆ ಮುಗ್ದರು ಗೌರವಾಧರಗಳಿಂದ ಆತನಿಗೆ ಆ ಊರಿನಲ್ಲಿಯೇ ಉಳಿದುಕೊಳ್ಳಲು ಆತನಿಗೊಂದು ಮನೆಯನ್ನು ಸಹ ಮಾಡಿ ಕೊಟ್ಟರು. ಪ್ರತಿದಿನವೂ ಪ್ರಾರ್ಥನೆ ಮಾಡಲು ಈ ಪ್ರರ್ಥನಾ ಮಂದಿರಕ್ಕೆ ಊರಿನಿಂದ ಬರುತ್ತಿದ್ದಂತಹ ಆ ಸಮುದಾಯದ ಜನರಿಗೆ ಧರ್ಮದ ಬಗ್ಗೆ ನೀತಿ, ನಿಯಮಗಳೊಂದಿಗೆ ಅವರಿಗೆ ಶಿಸ್ತು ಪಾಲಿಸಿ ಪ್ರಾರ್ಥನೆಯಲ್ಲಿ ಭಾಗವಹಿಸಲು ಈ ಧರ್ಮಗುರುವು ಮಾರ್ಗದರ್ಶನ ಮಾಡುತ್ತಿದ್ದ. ದಿನಕ್ಕೆ ಐದು ಬಾರಿ ಆ ಸಮುದಾಯದ ಜನರು ಪ್ರಾರ್ಥನಾ ಮಂದಿರವನ್ನು ಪ್ರವೇಶಿಸಿ ಅದರೊಳಗೆ ಪ್ರಾರ್ಥನೆ ಮಾಡುತ್ತಿದ್ದರು.

ಸಾಲು ಸಾಲಿನಲ್ಲಿ ಕುಳಿತು ಪ್ರಾರ್ಥನೆ ಸಲ್ಲಿಸುತ್ತಿದ್ದರು ಆ ಜನರು. ಮೊದಲ ಸಾಲಿನಲ್ಲಿ ಕೂರಬೇಕಾದರೆ ಒಂದು ದಿನವೂ ತಪ್ಪದೆ ಐದೂ ಬಾರಿ ಪ್ರಾರ್ಥನೆಗೆ ಬರಬೇಕು. ಎರಡನೇ ಸಾಲಿನಲ್ಲಿ ಕೂರಬೇಕಾದರೆ ಕನಿಷ್ಠ ನಾಲ್ಕು ಬಾರಿ ಪ್ರಾರ್ಥನೆಗೆ ಬರಬೇಕು. ಮೂರನೇ ಸಾಲಿನಲ್ಲಿ ಕೂರಬೇಕಾದರೆ ಕನಿಷ್ಠ ಮೂರು ಬಾರಿ ಪ್ರಾರ್ಥನೆಗೆ ಬರಬೇಕು. ಹೀಗೆ ಆ ಗುರುವಿನ ಮಾರ್ಗ ದರ್ಶನದಲ್ಲಿ ಸಾಗುತ್ತದೆ. ಜೊತೆಗೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಆ ಜನಗಳು ಪ್ರಾರ್ಥನಾ ಮಂದಿರವನ್ನು ಪ್ರವೇಶಿಸಿದಾಗ ಪಾಲಿಸಬೇಕಾಗಿತ್ತು, ಇದು ನಿಯಮವೂ ಆಗಿತ್ತು. ಹೀಗಿರುವಾಗ ಒಂದು ದಿನ ಧರ್ಮಗುರುಗಳು ಮೊದಲನೇ ಸಾಲಿನಲ್ಲಿ ಪ್ರಾರ್ಥನೆಗೆ ಕುಳಿತ ವ್ಯಕ್ತಿಯೊಬ್ಬರ ಬದಲಿಗೆ ಮೂರನೇ ಸಾಲಿನಲ್ಲಿ ಕುಳಿತುಕೊಳ್ಳಬೇಕಾದ ವ್ಯಕ್ತಿಯೊಬ್ಬನನ್ನು ಕುಳಿತು ಕೊಳ್ಳಲು ಧರ್ಮ ಗುರು ಅನುವು ಮಾಡಿ ಕೊಟ್ಟಿದ್ದ. ಅದು ಆ ಧರ್ಮದಲ್ಲಿ ಆ ಧರ್ಮ ಗುರುವಿಗೆ ಇರುವಂತಹ ಅಧಿಕಾರವೂ ಆಗಿತ್ತು. ಇದನ್ನು ಯಾರೂ ಸಹ ಪ್ರಶ್ನೆ ಮಾಡದಂತಹ ಒಂದು ಅಲಿಖಿತ ನಿಯಮವೂ ಆಗಿತ್ತು. ಆ ಮೊದಲ ಸಾಲಿಗೆ ಬಡ್ತಿ ಪಡೆದಂತಹ ವ್ಯಕ್ತಿಯು ಆಗ ತಾನೇ ಹೊಸದಾಗಿ ಮದುವೆಯಾಗಿದ್ದಂತಹ ವ್ಯಕ್ತಿಯಾಗಿದ್ದ. ಅವನಿಗೆ ಅಪ್ಸರೆಯಂಥಹ ಹುಡುಗಿಯು ಹೆಂಡತಿಯಾಗಿದ್ದಳು. ಈ ಧರ್ಮಗುರುವಿಗೆ ಮೊದಲ ಸಾಲಿಗೆ ಭಡ್ತಿ ಪಡೆದ ವ್ಯಕ್ತಿಯ ಆ ಅಪ್ಸರೆಯಂಥ, ಚಂದ್ರ ಚಕೋರಿಯಂತ ಆತನ ಹೆಂಡತಿಯ ಮೇಲೆ ಕಣ್ಣುಬಿತ್ತು. ಈಗಾಗಲೇ ಈ ಧರ್ಮ ಗುರುವು ಮೂರು ಜನ ಹೆಂಡತಿಯರ ಗಂಡನಾಗಿದ್ದರೂ, ಎಲ್ಲಾ ಕಾಮಾಧಿ ಬಯಕೆಗಳನ್ನು ಸಂಪೂರ್ಣ ಅನುಭವಿಸಿದ್ದರೂ ಸಹ, ಆತನಿಗೆ ಅದೇನೋ ಒಂದು ರೀತಿಯ ಚಪಲ. ಅವಳನ್ನು ಅನುಭವಿಸಲೇಬೇಕೆಂಬ ಉತ್ಕಟತೆ. ಆಗ ಧರ್ಮಗುರುವು ಆ ಚೆಲುವಿನ ಚಿತ್ತರಾದ ಗೊಂಬೆಯಂಥ ಆ ಮದುವೆಯಾದ ಹುಡುಗಿಯ ಮೇಲೆ ಕಣ್ಣು ಹಾಕಿದ್ದ.

ತನ್ನ ಚಿತ್ತದ ವಾಂಛೆಯನ್ನು ಹೇಗಾದರೂ ಪೂರೈಸಿಕೊಳ್ಳಲೇ ಬೇಕೆಂಬ ಕುತ್ಸಿತದಲ್ಲಿ, ಪ್ರಾರ್ಥನೆ ಸಲ್ಲಿಸುವಾಗಿನ ಆ ಮೊದಲ ಸಾಲಿಗೆ ಭಡ್ತಿ ಪಡೆದ ವ್ಯಕ್ತಿಗೆ ಧರ್ಮದ ನಶೆಯನ್ನು ತುಂಬಲು ಪ್ರಾರಂಭಿಸಿ, ಆ ಧರ್ಮಗುರುವು ಈ ಪಾಮರನಿಗೆ, “ನೋಡು ದೇವರಿಗೆ ಹತ್ತಿರವಾದ ಆ ದೇವರ ಪ್ರತಿನಿಧಿಗಳ ಜೊತೆಗೆ ಹೆಣ್ಣು ಒಮ್ಮೆ ದೈಹಿಕವಾಗಿ ಸಂಪರ್ಕ ಬೆಳೆಸಿದರೆ, ಅವಳಿಗೆ ಹುಟ್ಟುವ ಮಗು ದೈವಾಂಶ ಸಂಭೂತನಾಗುತ್ತಾನೆ, ಆದ್ದರಿಂದ ನಿನ್ನ ಹೆಂಡತಿ ಒಮ್ಮೆ ದೈಹಿಕವಾಗಿ ನನ್ನ ಸಂಪರ್ಕ ಬರಲು ಒಪ್ಪಿಸು” ಎಂದು ಆ ದೇವರು ಹಾಗೂ ಧರ್ಮವನ್ನು ಆಯುಧವನ್ನಾಗಿ ಉಪಯೋಗಿಸಿಕೊಂಡು ಅವನ ಕಾರ್ಯಸಾಧನೆ ಮಾಡಲು ಮುಂದಾಗಿದ್ದ. ಧರ್ಮ ಗುರುಗಳು ತಿಳಿಸಿದ ಮಾತು ಮೊದಲ ಸಾಲಿನಲ್ಲಿ ಕುಳಿತ ವ್ಯಕ್ತಿಗೆ ಹಿತವಾದ ಬುದ್ದಿ ಹೇಳಿದಂತಿತ್ತು. ಧರ್ಮದ ಹೆಸರಲ್ಲಿ ವಿಷವನ್ನೂ ಕೊಟ್ಟರೂ ಸಹ ಕುಡಿಯುವ ಮನಸ್ಥಿತಿ ಆತನಲ್ಲಿತ್ತು. ಆಗ ಆತನಿಗೆ ಆ ಧರ್ಮಗುರುವು ಹೇಳುತ್ತಿರುವುದು ಸರಿ ಎಂದೆನಿಸಿತ್ತು. ಅವನಿಗೆ ಅರಿವಿಗೆ ಬಾರದಂತೆ ಧರ್ಮದ ನಶೆಯು ಅಡರಿತ್ತು. ಆಗ ಅವನು ಕೂಡಲೇ ಮನೆಗೆ ಬಂದು ಬಲು ಆತ್ಮ ವಿಶ್ವಾಸದಿಂದ, ತನ್ನ ಹೆಂಡತಿಯ ಜೊತೆಗೆ ಈ ನಡೆದ ವಿಷಯದ ಬಗ್ಗೆ ಮಾತನಾಡಿದ್ದ. “ನೋಡೇ ನನ್ನ ಧರ್ಮ ಗುರುಗಳು ತಿಳಿಸಿದ್ದಾರೆ, ಅವರು ದೇವರ ಪ್ರತಿನಿಧಿಯಂತೆ, ಅವರ ಜೊತೆ ನೀನು ಒಮ್ಮೆ ದೈಹಿಕವಾಗಿ ಸಂಪರ್ಕ ಬೆಳೆಸಿದರೆ ಮುಂದೆ ನಮಗೆ ಹುಟ್ಟುವ ಮಗುವು ದೈವಾಂಶ ಸಂಭೂತ ನಾಗಿರುತ್ತಾನಂತೆ, ಒಮ್ಮೆ ದೈಹಿಕವಾಗಿ ಸಂಪರ್ಕ ಬೆಳೆಸಿದರೆ ನಿನಗೆ ಏನಾಗುವುದಿಲ್ಲ. ನಮಗೆ ಹುಟ್ಟುವ ಮಗು ಚೆಂದವಾದರೆ ನಮ್ಮಿಬ್ಬರಿಗೂ ಬಲು ಒಳ್ಳೆಯದೇ ಅಲ್ಲವೇ? ಹಾಗಾಗಿ ನೀನು ದಯಮಾಡಿ ಒಪ್ಪಿಕೊ ನಮ್ಮ ಮಗು‌ ದೈವಾಂಶ ಸಂಭೂತನಾಗಲಿ” ಎಂದು ಹೆಂಡತಿಯ ಮುಂದೆ ಗೋಗರೆದು ಶಿಕ್ಷಣವಿಲ್ಲದ ಮುಗ್ಧ ಹೆಣ್ಣು ಪತಿಯೇ ಪರದೈವವೆಂದು ಭಾವಿಸಿದ್ದವಳಾದ್ದರಿಂದ, ತನ್ನ ಗಂಡನ ಮಾತಿಗೆ ಮರು ಮಾತಾಡದೆ ಸುಮ್ಮನೆ ಒಪ್ಪಿಗೆ ಸೂಚಿಸಿ, ಧರ್ಮ ಗುರುಗಳ ಜೊತೆ ತನ್ನ ಗಂಡನ ಪಹರೆಯಲ್ಲಿಯೇ ದೈಹಿಕ ಸಂಪರ್ಕ ಬೆಳೆಸಿದಳು.

ಧರ್ಮ ಗುರುಗಳ ಬಾಹು ಬಂಧನದಲ್ಲಿ, ಬಂಧಿಯಾದ ಆ ಹೆಣ್ಣು ಮಗಳಿಗೆ ತನ್ನ ಗಂಡ ನೀಡುವ ದೈಹಿಕ ಸುಖಕ್ಕಿಂತ, ಧರ್ಮ ಗುರುಗಳು ನೀಡುವ ದೈಹಿಕ ಸುಖವೇ ಬಲು ಹಿತವೆನಿಸಿತ್ತು. ನಂತರದೆ ಈ ಧರ್ಮಗುರುವಿನ ಬಾಹುಬಂಧನದ ಬಿಗಿ ಹಿಡಿತವು ಅವಳನ್ನು ಉದ್ರೇಕಿಸಿತ್ತು. ಅವಳಿಗೆ ಆ ಧರ್ಮಗುರುವಿನ ಶೌರ್ಯ, ಪೌರುಷದ ಮುಂದೆ ತನ್ನ ಗಂಡ ಪೇಲವ ಎಂದೆನಿಸಿತ್ತು. ಮನಸ್ಸು ಧರ್ಮ ಗುರುವುನ ಬಾಹು ಬಂಧನಕ್ಕೆ ಹಾತೊರೆಯುತ್ತಿತ್ತು. ಇದರ ಪರಿಣಾಮ ತನ್ನ ಗಂಡನ ಜೊತೆ ದೈಹಿಕ ಸಂಪರ್ಕವನ್ನು ಆಕೆಯು ಕ್ರಮೇಣ ಕಡಿಮೆ ಮಾಡಿಕೊಳ್ಳತೊಡಗಿದಳು. ಧರ್ಮ ಗುರುಗಳ ಸಾಂಗತ್ಯವೇ ಅವಳಿಗೆ ಖುಷಿಯಾಗಿತ್ತು. ಹೆಚ್ಚು ಹೆಚ್ಚು ಕಾಲ ಧರ್ಮ ಗುರುವಿನ ಬಾಹು ಬಂಧನದಲ್ಲಿ ಅವಳು ಬಂಧಿಯಾಗಿ ಅವರಿಬ್ಬರ ಬಿಸಿಯುಸಿರಿನ ಉದ್ವೇಗ ಬೆವರಾಗಿ ಹರಿಯುತ್ತಿತ್ತು. ಸಮಯವೆಂಬುದು ಜಾರುತ್ತಾ ಹೋಯಿತು. ಆ ಧರ್ಮಗುರುವಿನ ಸಾಂಗತ್ಯದ ಫಲವಾಗಿ ಆರು ವರ್ಷಗಳಲ್ಲಿ ಮೂರು ಮಕ್ಕಳನ್ನ ಪಡೆದಳು. ಮೊದಲೆರಡು ಮಕ್ಕಳಾಗುವವರೆಗೆ ತನ್ನ ಹೆಂಡತಿಯ ಮೇಲೆ ಸಂಶಯ ಪಡೆದ ಆ ಪಾಮರ ಗಂಡ, ಆ ನಂತರವಷ್ಟೇ ತನ್ನ ಹೆಂಡತಿಯ ಮೇಲೆ ಅನುಮಾನ ಪಡಲಾರಂಭಿಸಿದ, ನನ್ನ ಹೆಂಡತಿ ಅಗತ್ಯಕ್ಕಿಂತ ಹೆಚ್ಚಿನ ಸಲುಗೆಯಿಂದ ಧರ್ಮ ಗುರುಗಳ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾಳೆ, ಆದ್ದರಿಂದಲೇ, ನನ್ನ ಮೂರು ಮಕ್ಕಳು, ಧರ್ಮ ಗುರುಗಳ ರೂಪವನ್ನು ಹೋಲುತ್ತಿದ್ದಾರೆ, ಎಂದು ಅನಿಸುತ್ತದೆ ಎಂದು ತನ್ನ ಹೆಂಡತಿಯ ಮುಂದೆ ನಿಂತು ಬೇಸರದಲ್ಲಿಯೇ ಕೋಪೋದ್ರಿಕ್ತನಾಗಿ ಅವಳನ್ನು “ನೀನು ನನಗೆ ಮೋಸ ಮಾಡಿದೆ, ನಾನು ಒಮ್ಮೆ ಮಾತ್ರ ಧರ್ಮ ಗುರುಗಳ ಜೊತೆ ದೈಹಿಕವಾಗಿ ಸಂಪರ್ಕ ಬೆಳೆಸಿದರೆ ಸಾಕೆಂದು ಹೇಳಿದೆ. ಆದರೆ ನೀನು ಮಾಡಿದ್ದೇನು? ನೀನು ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ಆ ಮುಠ್ಠಾಳಾಧಮನಾದ ಆ ಧರ್ಮಗುರುವಿನ ಜೊತೆ ದೈಹಿಕ ಸಂಪರ್ಕ ಬೆಳೆಸಿ ಮೂರು ಮಕ್ಕಳು ಹೆತ್ತು ನನ್ನ ಕೈಗಿಟ್ಟೆಯಾ, ಹೇಳು ಈ ಮಕ್ಕಳ ತಂದೆ ಯಾರು ಎಂದು?” ಎಂದು ಅವಳ ಮುಂದೆ ಬಡಬಡಿಸಿದ.

ಆಗ ಆ ಹೆಂಡತಿಯ ಉತ್ತರ ಅತ್ಯಂತ ಮಾರ್ಮಿಕವಾಗಿಯೇ ಇತ್ತು. “ನೋಡಿ ನಾನು ಬಯಸಿ ಧರ್ಮ ಗುರುಗಳ ಜೊತೆ ದೈಹಿಕ ಸಂಪರ್ಕ ಬೆಳೆಸಿದವಳಲ್ಲ, ನಿಮ್ಮಯ ಆಶಯದಂತೆಯೇ ನಾನು, ನಿನ್ನ ಪಹರೆಯಲ್ಲೇ ಅವರ ಜೊತೆ ಮಲಗಿದೆ, ನೀನು ಕೊಟ್ಟ ಸುಖಕ್ಕಿಂತ ಅವನು ನೀಡಿದ್ದು ಭಿನ್ನವಾಗಿ ಹಿತವಾಗಿಸಿತು, ಅಷ್ಟಾಗಿಯೂ ಒಬ್ಬ ಮಗನೇಕೆ ದೈವಾಂಶ ಸಂಭೂತ ನಾಗಿರಬೇಕು, ಹುಟ್ಟಿದರೆ ಎಲ್ಲಾ ಮಕ್ಕಳು ದೈವಾಂಶ ಸಂಭೂತನಾಗಿರಬೇಕು, ಎಂದು ಧರ್ಮ ಗುರುಗಳ ಜೊತೆ ಮಲಗಿದೆ, ಇಷ್ಟು ದಿನ ಇಲ್ಲದ ಸಂಶಯಈಗೇಕೆ? ನಿನ್ನ ಹಠಕ್ಕೆ ಹಾಗೂ ಹೆಸರಿಗೆ ಆ ಮಕ್ಕಳ ತಂದೆ ನೀನೇ. ಆದರೆ ಚಟಕ್ಕೆ ಹಾಗೂ ವಾಸ್ತವದಲ್ಲಿ ಧರ್ಮ ಗುರುಗಳೇ ಆ ಮಕ್ಕಳ ತಂದೆ ಏನೀಗ?” ಎಂದ ಆ ಹೆಂಡತಿಯ ಉತ್ತರದಿಂದ ಆತ ಬಡಬಡಿಸಿ ಹೋದ, ಆದರೆ ಕಾಲ ಮಿಂಚಿ ಹೋಗಿತ್ತು. ಅಂದಿನಿಂದ ಬಚ್ಚಿಟ್ಟ ಸತ್ಯ, ಇಂದು ಬಿಚ್ಚಿಡಲಾಗದ ಸತ್ಯವಾಗಿ ಪರಿಣಮಿಸಿ, ಮುಚ್ಚಿಟ್ಟು ಮಲಿನ ಮಾಡಿದನೇನೋ ಎಂದು ಆ ಹೆಣ್ಣು ಅಬ್ಬರಿಸಿ ಬಿಟ್ಟಿತ್ತು. ಧರ್ಮ ಗುರುಗಳಿಗೆ ಮೊದಲ ಸಾಲಿನಲ್ಲಿ ಕುಳಿತ ವ್ಯಕ್ತಿಯ ಹೆಂಡತಿಯ ಮೇಲಿನ ಪ್ರೀತಿ ಹಾಗೂ ವ್ಯಾಮೋಹ ಮೂರು ಮಕ್ಕಳಾದ ನಂತರ ಕಡಿಮೆಯಾಗುತ್ತಾ ಹೋಯಿತು. ಎಷ್ಠಾದರೂ ಅವನು ಚಪಲಿಗನಲ್ಲವೇ? ಅದೇ ಸಮಯಕ್ಕೆ ಈ ಪ್ರಾರ್ಥನಾ ಮಂದಿರಕ್ಕೆ ಬರುವ ಮತ್ತೊಬ್ಬ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡ ಈ ಧರ್ಮ ಗುರುವು, ಅವನಿಗೂ ಸಹ ಮೊದಲ ಸಾಲಿನಲ್ಲಿ ಪ್ರಾರ್ಥನೆಗೆ ಕೂರಲು ಅವಕಾಶ ನೀಡಿ, ಅವನಿಗೂ ಸಹ ಧರ್ಮದ ನಶೆ ಏರಿಸಿ, ಮತ್ತೊಮ್ನೆ ಆ ಎರಡನೇ ವ್ಯಕ್ತಿಯ ಹೆಂಡತಿಯನ್ನು ಅನುಭವಿಸುವುದರ ಮುಖಾಂತರ ತನ್ನ ಮನದಾಸೆ ಈಡೇರಿಸಿಕೊಳ್ಳಲು ಅವನ ಹೆಂಡತಿ ಜೊತೆಗೆ ದೈಹಿಕವಾಗಿ ಸಂಪರ್ಕ ಬೆಳೆಸಿ ಐದು ವರ್ಷಗಳ ಅವಧಿಯಲ್ಲಿ ಮತ್ತೊಮ್ಮೆ ಬರೋಬ್ಬರಿ ಮೂರು ಮಕ್ಕಳನ್ನು ಹುಟ್ಟಿಸಿದ. ಮೊದಲ ಸಾಲಿಗೆ ಭಡ್ತಿ ಪಡೆದ ಎರಡನೇ ವ್ಯಕ್ತಿಯ ಹೆಂಡತಿಯ ಮೇಲೆಯೂ ಆ ಧರ್ಮ ಗುರುಗಳ ಆಕರ್ಷಣೆ ಹಾಗೂ ವ್ಯಾಮೋಹ ಕ್ರಮೇಣ ಕಡಿಮೆಯಾಗಿ, ಮೊದಲ ಸಾಲಿನಲ್ಲಿ ಪ್ರಾರ್ಥನೆಗೆ ಕೂರಲು ಮೂರನೇ ವ್ಯಕ್ತಿಗೆ ಬಡ್ತಿ ನೀಡಲು ಧರ್ಮ ಗುರು ಉತ್ಸುಕನಾಗಿದ್ದ. ಅದಕ್ಕಾಗಿ ಪ್ರಾರ್ಥನೆಗೆ ಬರುವ ಹೊಸದಾಗಿ ಮದುವೆಯಾದ ವ್ಯಕ್ತಿಯನ್ನ ಹುಡುಕುತ್ತಿದ್ದ.

ಹೀಗಿರುವಾಗ ಧರ್ಮ ಗುರುಗಳಿಂದ ಸುಖ ಸಂತೋಷ ಪಡೆದು, ನಂತರ ಅವನ ತಿರಸ್ಕಾರ ಭಾವದಿಂದ ಕ್ಷುದ್ರಗೊಂಡ, ಮೊದಲ ಸಾಲಿನಲ್ಲಿ ಪ್ರಾರ್ಥನೆ ಮಾಡಲು ಮೊದಲು ಬಡ್ತಿ ಪಡೆದ ವ್ಯಕ್ತಿಯ ಹೆಂಡತಿಯು, ಧರ್ಮ ಗುರುಗಳಿಂದ ತನಗಾದ ಅನ್ಯಾಯದ ವಿರುದ್ಧ ಒಳಗೊಳಗೇ ಸಿಡಿದೆದ್ದು, ಮೊದಲ ಸಾಲಿನಲ್ಲಿ ಪ್ರಾರ್ಥನೆ ಸಲ್ಲಿಸಿಲು ಬಡ್ತಿ ಪಡೆದ ಎರಡನೇ ವ್ಯಕ್ತಿಯ ಹೆಂಡತಿಯ ಜೊತೆ ಸಂಪರ್ಕ ಬೆಳೆಸಿ, ಧರ್ಮ ಗುರು, ಹೇಗೆ ಈ ಅಮಾಯಕ ಮುಗ್ಧ ಹೆಣ್ಣುಗಳನ್ನ, ಧರ್ಮದ ನಶೆಯೇರಿಸಿ, ತಪ್ಪುದಾರಿಗೆಳೆದು, ಧರ್ಮದ ಹೆಸರಿನಲ್ಲಿ ತನ್ನ ಕಾಮದ ಹಸಿವನ್ನು ಹಿಂಗಿಸಿಕೊಳ್ಳಲು ಬಳಸಿಕೊಂಡು, ನಂತರ ಊಟದ ಎಲೆ ಬದಲಾಯಿಸಿದಂತೆ ಹೆಣ್ಣುಗಳನ್ನ ಬದಲಾಯಿಸುತ್ತಿದ್ದಾನೆ ಎಂದು ಅವಳಿಗೆ ಮನವರಿಕೆ ಮಾಡಿಕೊಟ್ಟಳು. ಮೊದಲ ಆರು ವರ್ಷಗಳ ಕಾಲ ನನ್ನ ಜೊತೆ, ನಂತರ ಐದು ವರ್ಷಗಳ ಕಾಲ ನಿನ್ನ ಜೊತೆ, ಸುಖ ಪಡೆದು, ಈಗ ಮೂರನೇ ಹೆಣ್ಣಿನ ತಲಾಶೆಯಲ್ಲಿದ್ದಾನೆ. ಇವನನ್ನ ಹೀಗೆಯೇ ಬಿಟ್ಟರೆ ಇನ್ನೂ ಎಷ್ಟು ದಿನ ಹೀಗೆ ನಮ್ಮಂತಹ ಮುಗ್ಧ ಹೆಣ್ಣು ಮಕ್ಕಳ ಜೊತೆ ಚೆಲ್ಲಾಟವಾಡುತ್ತಾನೆ ಇದಕ್ಕೆ ಅವಕಾಶ ನೀಡಬಾರದು ಎಂದು ನಿರ್ಧರಿಸಿ ಈ ಇಬ್ಬರೂ ಹೆಂಗಸರು ಸೇರಿ ಧರ್ಮ ಗುರುಗಳನ್ನ ಯಾರಿಗೂ ಅನುಮಾನ ಬಾರದಂತೆ ಸಾಯಿಸಲು ನಿರ್ಧರಿಸಿದರು. ಮೂವರು ಹೆಂಡಿರ ಮುದ್ದಿನ ಗಂಡ, ಮತ್ತಿಬ್ಬರು ಹೆಂಗಸರ ಜೊತೆ ಹತ್ತು ವರ್ಷಗಳ ಕಾಲ ಚೆಲ್ಲಾಟವಾಡಿ ಐದು ಮಕ್ಕಳ ದಯಪಾಲಿಸಿ, ಮತ್ತೊಬ್ಬ ಹೆಣ್ಣಿನ ಮೇಲೆ ಕಣ್ಣು ಹಾಕಿರುವುದನ್ನ ಯಾವ ಹೆಣ್ಣು ತಾನೆ ಸಹಿಸುತ್ತಾಳೆ, ಆ ಧರ್ಮ ಗುರುವಿನ ಪಾಪದಕೊಡ ತುಂಬಿತ್ತು.

ಒಂದು ಮುಂಜಾನೆ ಪ್ರಾರ್ಥನೆಗಾಗಿ ಧರ್ಮ ಗುರುಗಳು ಮುಂಚೆಯೇ ಬಂದಿದ್ದರು. ಆ ದಿನ ಪ್ರಾರ್ಥನೆಗೆ ಹೆಚ್ಚಿನ ಜನರೂ ಬಂದಿರಲಿಲ್ಲ. ಬೇಗ ಪ್ರಾರ್ಥನೆ ಸಲ್ಲಿಸಿ ಪ್ರಾರ್ಥನಾ ಮಂದಿರಕ್ಕೆ ಬೀಗ ಹಾಕಲು ಅಣಿಯಾಗುತ್ತಿದ್ದ, ಧರ್ಮ ಗುರುಗಳಿಗೆ ಆಶ್ಚರ್ಯ ಕಾದಿತ್ತು. ಮೊದಲ ಸಾಲಿನಲ್ಲಿ ಪ್ರಾರ್ಥನೆ ಸಲ್ಲಿಸಿಲು ಎರಡನೇ ಬಾರಿ ಬಡ್ತಿ ಪಡೆದ ವ್ಯಕ್ತಿ ಯ ಹೆಂಡತಿಯು ಧರ್ಮ ಗುರುಗಳ ಮುಂದೆ ನಿಂತಿದ್ದಳು. ನೋಡಿ ನಾನು ನಿಮ್ಮ ಜೊತೆ ಮಾತನಾಡಬೇಕು ಎಂದು ಧರ್ಮ ಗುರುಗಳ ಕೈ ಹಿಡಿದು ಪ್ರಾರ್ಥನಾ ಮಂದಿರದ ಒಳಗೆ ಕರೆದುಕೊಂಡು ಹೋದಳು. ಅವರಿಬ್ಬರ ಹಿಂದೆಯೇ ಧರ್ಮ ಗುರುಗಳಿಗೆ ಮೊದಲಾರು ವರ್ಷಗಳ ಕಾಲ ಸುಖಕೊಟ್ಟು ಸುಖವುಂಡಿದ್ದ ಹೆಂಗಸೂ ಅಹ ಆ ಪ್ರಾರ್ಥನಾ ಮಂದಿರದ ಒಳಹೊಕ್ಕಿದ್ದಳು. ಐದತ್ತು ನಿಮಿಷಗಳ ಕಾಲ ಹೆಂಗಸರಿಬ್ಬರ ಹಾಗೂ ಆ ಧರ್ಮಗುರುವಿನ ನಡುವೆ ಜಟಾಪಟಿ ನಡೆಯಿತು, ನಂತರ ಸದ್ದಡಗಿ ಹೆಂಗಸರಿಬ್ಬರೂ ಹೊರಗೆ ಬಂದು ಪ್ರಾರ್ಥನಾ ಮಂದಿರದ ಎಡ ಭಾಗದಲ್ಲಿ ಗುಂಡಿ ತೋಡಿ, ಆಗಲೇ ಇವರಿಬ್ಬರು ಕೂಡಿ ಸದ್ದಡಗಿಸಿದ್ದ ಧರ್ಮಗುರುಗಳ ಪಾರ್ಥೀವ ಶರೀರವನ್ನು ಗುಂಡಿಯೊಳಗಿಟ್ಟು ಮುಚ್ಚಿ, ಅದರ ಮೇಲೊಂದು ತೆಂಗಿನ ಸಸಿ ನೆಟ್ಟು ನೀರು ಹಾಕಿ ಮನೆಗೆ ಹೋದರು. ಬೆಳಿಗ್ಗೆ ಹನ್ನೊಂದು ಗಂಟೆಗೆಯ ಪ್ರಾರ್ಥನೆ ಮುಗಿಸಿ ಮನೆಗೆ ಬರಬೇಕಾದ ಧರ್ಮ ಗುರು ಮನೆಗೆ ಬಾರದಿದ್ದಾಗ, ಧರ್ಮ ಗುರುಗಳ ಮೊದಲ ಮೂರು ಜನ ಹೆಂಡತಿಯರು ಪ್ರಾರ್ಥನಾ ಮಂದಿರದ ಬಳಿ ಬಂದು ಹುಡುಕಾಡಿ ನಂತರ ಸಿಗದಿದ್ದಾಗ ಧರ್ಮ ಗುರುಗಳು ಕಾಣೆಯಾದ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೋಲೀಸರ ತೀವ್ರ ಸ್ವರೂಪದ ಹುಡುಕಾಟ, ತನಿಖೆಯ ನಂತರವೂ ಧರ್ಮ ಗುರುಗಳ ಪತ್ತೆ ಹಚ್ಚಲು, ಪೋಲೀಸ್ ಇಲಾಖೆ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಇದೊಂದು ಸದ್ಯಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದ ಪ್ರಕರಣವೆಂದು ನ್ಯಾಯಾಲಯಕ್ಕೆ ‘ಸಿ ಅಂತಿಮ ವರದಿ’ ಸಲ್ಲಿಸಿ ಕೈ ತೊಳೆದುಕೊಂಡರು.

ಹೀಗೆ ಈ ಘಟನೆ ಜರುಗಿ ಅದಾಗಲೆ ಹತ್ತು ವರ್ಷಗಳು ಕಳೆದಾಗಿವೆ, ಪ್ರಾರ್ಥನಾ ಮಂದಿರದ ಎಡ ಭಾಗದಲ್ಲಿ ಆ ಕಾಮುಕ ಧರ್ಮಗರುವಿನ ಹೂತಂತಹ ಜಾಗದಲ್ಲಿ ನೆಟ್ಟಿದ್ದಂತಹ ತೆಂಗಿನ ಮರವಿಂದು ಫಲ ಬಿಟ್ಟಿದೆ, ಧರ್ಮ ಗುರುಗಳಿಂದ ಮೊದಲಾರು, ವರ್ಷಗಳ ಕಾಲ ಸುಖ ಪಡೆದು ಸುಖವುಂಡ ಮಹಿಳೆ ತನ್ನ ಮೂರು ವರ್ಷದ ಮೊಮ್ಮಗನಿಗೆ, ತೆಂಗಿನ ಮರದಿಂದ ಎಳನೀರು ಕೆಡವಿ ಕುಡಿಸುತ್ತಾಳೆ. ಆಗ ಆ ಎಳನೀರು ನೀರು ಕುಡಿದ ಮಗುವು ಏನಿದು ಈ ಎಳನೀರು ಉಪ್ಪಾಗಿದೆ? ಅಮ್ಮಾ ಈ ತೆಂಗಿನ ಮರದ ಎಳನೀರು ಸಿಹಿ ಇರಬೇಕಲ್ಲವೇ? ಆದರೆ ಇದು ಏಕೆ ಉಪ್ಪಾಗಿದೆ? ಎಂದು ಪ್ರಶ್ನೆ ಕೇಳುತ್ತಾನೆ. ಆಗ ಆ ಮಹಿಳೆಯು ತನ್ನ ಮೊಮ್ಮಗನಿಗೆ ಹೇಳುತ್ತಾಳೆ. ಮಗು ಬಹಳ ವರ್ಷಗಳ ಹಿಂದೆ ದುಷ್ಟ ವ್ಯಕ್ತಿಯೊಬ್ಬನ ಮರಣದ ನಂತರ ಅವರ ಸಮಾಧಿಯ ಮೇಲೆ ನೆಟ್ಟ ತೆಂಗಿನ ಮರವಿದು ಕಂದಾ! ಆ ವ್ಯಕ್ತಿಯ ದುರ್ಗುಣಗಳೆಲ್ಲವೂ ಈ ಮರದಲ್ಲಿ ಹರಡಿ, ಈ ಸಿಹಿಯಾದ ಎಳನೀರೂ ಸಹ ಉಪ್ಪುಪ್ಪಾಗಿಯೇ ಇದೆ ಎಂದು ಸಮಜಾಯಿಸಿಕೆ ಹೇಳಿದ ಅವಳು, ನಂತರ ಇನ್ನು ಮುಂದೆ ಈ ತೆಂಗಿನ ಮರ ಇರಬಾರದು, ಈ ಮರಕ್ಕೂ ದುಷ್ಟ ಶಕ್ತಿಯು ಆವರಿಸಿದೆಯೆಂದು ನಿರ್ಧರಿಸಿ ಮರುದಿನವೇ ಆ ಮಹಿಳೆಯು ಆ ಮರಕ್ಕೆ ಒಂದೆರಡು ತೂತು ಕೊರೆದು ಸೀಸವನ್ನು ಬಿಟ್ಟು ಬಿಡುತ್ತಾಳೆ, ನಂತರದೆ ಕ್ರಮೇಣವಾಗಿ ಆ ತೆಂಗಿನ ಮರ ಒಣಗಿ ಹೋಯ್ತು, ನಂತರ ಆ ಮರವನ್ನು ಕಡಿದು ಹಾಕುತ್ತಾರೆ. ಧರ್ಮದ ನಶೆ ತುಂಬಿ ಮುಗ್ಧರನ್ನು ಆಡಿಸುತ್ತಿದ್ದ ಕಿಡಿಗೇಡಿಯೊಬ್ಬನ ಅಂತ್ಯವಾಗುತ್ತದೆ. ಅಮಾಯಕರಿಗೆ ಧರ್ಮದ ನಶೆಯನ್ನೇರಿಸಬೇಡಿ, ಅದರಿಂದ ಇಂದಲ್ಲ ನಾಳೆ ಏರಿಸಿದವನಿಗೇ ಆಪತ್ತು.

‍ಲೇಖಕರು Admin MM

September 12, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: