ಹದ್ನಿ ಮಾಡಿದ ಚಿನ್ನದ ತೇಪೆ
ಮೂಲ ಇಂಗ್ಲಿಷ್: ಎನ್ ರವಿ ಶಂಕರ್ (ರ ಶ )
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ನನ್ನ ಹೃದಯ ಭಂಗುರ, ಇಲ್ಲ ಎನ್ನಲಾಗುವುದಿಲ್ಲ –
ದುರ್ಬಲ, ಸೂಕ್ಷ್ಮ, ಮಂಜಿನಂತೆ ತೆಳು
ಅತ್ತಿಂದಿತ್ತ
ತಳ್ಳಾಡಿದ ಹೃದಯಗಳಿಗಾಗುವಂತೆ
ನನ್ನದೂ ಬೀಳುತ್ತದೆ ಮತ್ತು ಮುರಿಯುತ್ತದೆ
ಚಿಪ್ಸಿನ ಪ್ಯಾಕೇಟಿನಂತೆ ನುಗ್ಗಾಗುತ್ತದೆ.
ನಿಮಗೆ ಗೊತ್ತು, ಹುಡುಗಿಯರು ಅತ್ಯುತ್ತಮ ಹೃದಯ ತಜ್ಞರು
ಅವರ ಮಾಧ್ಯಮವೇ ಹೃದಯ – ಅವರ ಸ್ಫಟಿಕ ಗೋಳ
ಅದನ್ನು ದೃಷ್ಟಿಸಿ ನೋಡಿಯೇ ಅವರು
ಬಿರುಗಾಳಿಯನ್ನು ಉಂಟುಮಾಡಬಲ್ಲರು.
ಹಾಗಾಗಿ, ಪ್ರತಿಸಲ ನನ್ನ ಹೃದಯ ಮುರಿದಾಗಲೆಲ್ಲ
ನಾನದನ್ನು ಮತ್ತೊಂದು ಹುಡುಗಿಯ ಬಳಿಗೆ ಒಯ್ಯುತ್ತೇನೆ.
ಒಬ್ಬಳು ಅದರ ರಕ್ತವನ್ನೆಲ್ಲ ಹಿಂಡಿ ತೆಗೆದು
ಪೆರಾಕ್ಸೈಡ್ ನಿಂದ ತೊಳೆದು
ಒಣಗಿಸಿ ಸೇಫ್ಟಿ ಪಿನ್ನುಗಳಿಂದ
ಹಿಡಿದಿಟ್ಟಳು.
ಮತ್ತೊಬ್ಬಳು, ಡಿಸ್ಟಿಲ್ ನೀರು ಪಂಪು ಮಾಡಿ
ಪ್ರಿಲ್ ನಿಂದ ಸ್ಪಿರಿಟ್ ನಿಂದ ಜಾಲಿಸಿ
ಎಲ್ಲವನ್ನೂ ಮತ್ತೆ ಜೋಡಿಸಲು
ದಪ್ಪ ಸ್ಟೇಪ್ಲರ್ ನಿಂದ ಅಮುಕಿದಳು.
ಮೂರನೆಯವಳು, ಅದನ್ನು ತೂಕ ಮಾಡಿ
ಅಳೆದಳು – ಬಿಸಿ ಗಾಳಿ ಊದಿ ತೂತುಗಳಿವೆಯೇ
ಎಂದು ಪರೀಕ್ಷಿಸಿದಳು.
ನಂತರ ಅವಳು ಕುಶಲತೆಯಿಂದ
ಗೋಣಿ ಚೀಲ ಹೊಲಿಯುವ ಯಂತ್ರದಿಂದ
ಹೊಲಿದಳು.
ಕೊನೆಯವಳು ನಿಖರವಾಗಿ, ಅಚ್ಚುಕಟ್ಟಾಗಿ
ನನ್ನ ವೀರ್ಯವನ್ನೆಲ್ಲ ಹೊರತೆಗೆದು
ಚಿನ್ನ ಮತ್ತು ರಕ್ತದಲ್ಲಿ
ಮಿಶ್ರ ಮಾಡಿ ಗಿಲಾವು ಮಾಡಿದಳು.
ಆದರೆ, ನನ್ನ ಹೃದಯ ಮತ್ತೆ ಬಿರಿಯುತ್ತದೆ
ಅದರ ನಾಡಿಯಿಂದಲೇ ನನಗೆ ತಿಳಿಯುತ್ತದೆ.
ಆಗ ನನಗೆ ಹದ್ನಿ ಎನ್ನುವ ಆದಿವಾಸಿ ಹುಡುಗಿಯ ಬಗ್ಗೆ ತಿಳಿಯಿತು
ಬಜನೂಕಿನ ಕಣಿವೆಗಳಲ್ಲಿ
ಯಾವುದೇ ಒಡೆದ ಹೃದಯದ ತೇಪೆ ಹಾಕುತ್ತಾಳವಳು
ಮೂರನೇ ಹುಣ್ಣಿಮೆಯ ಋತುಸ್ರಾವವೆನ್ನುವ
ಮೆರ್ಜಾಲಿನಾ ಹೂವಿನ ರಸದ ಜೊತೆ
ಗ್ರಿಜ್ತೆರುಮ್ಬ್ ಹೂವಿನ ಪರಾಗ ಮತ್ತು
ನೆಟಝಕ್ಕಪ್ಪುವಿನ ಹಿಮಾಚ್ಛಾದಿತ ಪರ್ವತದ
ಅಗ್ನಿಪರ್ವತದ ಬೂದಿ
ಹಾಗೂ ಬಹ್ಮಬಾದ ರಸವನ್ನು ಮಿಶ್ರಮಾಡಿ.
ಅವಳಿಗೊಂದು ಟೋಲ್ ಫ್ರಿ
ಗ್ರಾಹಕರ ಸೇವೆಯ ನಂಬರ್ ಇದೆಯೇ
ಎಂದು ಆಲೋಚಿಸುತ್ತಿದ್ದೇನೆ.
***
(ಜಪಾನಿಯರಲ್ಲಿ ಇರುವ ಕಿಂತ್ಸುಗೀ, ಒಡೆದ ಪದಾರ್ಥಗಳನ್ನು ಚಿನ್ನದ ಲೇಪದಿಂದ ಗಿಲಾವು ಮಾಡುವ ಕಲೆ. ಜಗತ್ತಿನಲ್ಲಿ ಯಾವುದೂ ನಿಜವಾಗಿ ಒಡೆಯುವುದಿಲ್ಲ ಎನ್ನುವ ಸಿದ್ಧಾಂತ. )
0 ಪ್ರತಿಕ್ರಿಯೆಗಳು