ಪ್ರತಿಭಾ ನಂದಕುಮಾರ್
ಬನ್ನಿ, ಗೇಟಿನ ಚಿಲಕ ತೆಗೆದೇ ಇದೆ
ಗೋಡೆ ಹಾರಬೇಕಾಗಿಲ್ಲ
ಕದ ತೆರೆದೇ ಇದೆ
ಕರೆಗಂಟೆ ಒತ್ತಬೇಕಿಲ್ಲ
ಹಾಗೇ ಮಲಗಿದ್ದೇನೆ ತುಂಬು ಬಸಿರಿ
ಮಧ್ಯಾಹ್ನದ ಊಟ ಮಾಡಿ ತೂಕಡಿಸುತ್ತ
ಆಗಲೇ ತಡವಾಯಿತೇನೋ ಆರು ತಿಂಗಳಾಯಿತು
ಬಿಟ್ಟ ಪಾಠಗಳನ್ನು ಪಾಪ ಪಿಕ್ ಅಪ್ ಮಾಡುತ್ತದೋ
ಇಲ್ಲವೋ ಮಗು ಎಷ್ಟು ನಲುಗುವುದೋ
ಇನ್ನು ಅದಕ್ಕೂ ಟೆಸ್ಟು ಪರೀಕ್ಷೆಗಳಿವೆಯೇನೋ

ಅದಿರಲಿ ಸರಿಯಾಗಿ ಹೇಳದಿದ್ದರೆ ಪಾಠ
ನಾವು ಕಂಪ್ಲೇಂಟ್ ಕೊಡುವುದೇ ಸರಿ ಮತ್ತೆ
ಹೇಗೆ ಬಿಡಕ್ಕಾಗುತ್ತದೆ ತಪ್ಪು ಶಿಕ್ಷಕರನ್ನು ಶಿಕ್ಷಿಸದೇ?
ಕೂಸಿರುವುದು ನನ್ನ ಗರ್ಭದಲ್ಲಿ
ಆ ಡಾಕ್ಟರ್ ತನ್ನ ಸಂಸ್ಕಾರ ಹೇಳಿಕೊಟ್ಟು
ಹೊರಟುಬಿಟ್ಟರೆ ನಾಳೆ ಗತಿಯೇನು?
ದೇವಾ ಗರ್ಭಮ್ ಸಮೈರ ಯಂತಾಂ ವ್ಯೋರ್ಣವಂತೂ ಸೂತಾವೆ
ಸೂಸಾ ವ್ಯೋರ್ಣೋತು ವಿ ಯೋನಿಂ ಹಾಪಯಾಮಾಸಿ
0 ಪ್ರತಿಕ್ರಿಯೆಗಳು