ಪ್ರತಿಭಾ ನಂದಕುಮಾರ್ ಅನುವಾದಿತ ಕವಿತೆ- ಒಂದು ಹೆಣ್ಣು ಒಂಟೆಯ ಹತ್ಯೆ…

ಮೂಲ : ಮಹಮ್ಮದ್ ಇಬ್ರಾಹಿಂ ವರ್ಸಾಮೆ

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ಮಹಮದ್ ಇಬ್ರಾಹಿಂ ವರ್ಸಾಮೆ ‘ಹದ್ರಾವಿ’ ಸೋಮಾಲಿಯದ ಅತ್ಯಂತ ಜನಪ್ರಿಯ ಕವಿ. ಹದ್ರಾವಿ ಎಂದರೆ ‘ಮಾತಿನ ಪಿತಾಮಹ’. ಸೊಮಾಲಿಯಾದ ಶೇಕ್ಸ್ ಪಿಯರ್ ಎಂದೂ ಆತನನ್ನು ಕರೆಯುತ್ತಿದ್ದರು. ಸೊಮಾಲಿ ಸಂಸ್ಕೃತಿಯ ಜೊತೆಗೆ ಸಾರ್ವತ್ರಿಕ ಸತ್ಯಗಳನ್ನು ರೂಪಕ ಉಪಮೆಗಳಲ್ಲಿ ಅದ್ಭುತವಾಗಿ ಕಟ್ಟಿಕೊಡುವ  ಪ್ರತಿಭೆಯಿಂದಾಗಿ ವರ್ಸಾಮೆ ಅತ್ಯಂತ ಜನಪ್ರಿಯನಾಗಿ ರಾಜಕೀಯ ಕುರಿತು ಜನಾಭಿಪ್ರಾಯ ರೂಪಿಸುತ್ತಿದ್ದುದರಿಂದ ಆತನನ್ನು 1973ರಲ್ಲಿ ಬಂಧಿಸಿ ಐದು ವರ್ಷಗಳ ಕಾಲ ಜೈಲಿನಟ್ಟರು.

ಬಿಡುಗಡೆಯಾದ ಮೇಲೆ ವರ್ಸಾಮೆ ‘ಸರಪಳಿ ಕವನಗಳು” (ಚೈನ್ ಪೋಯಮ್ಸ್) ಮೂಲಕ ಮತ್ತಷ್ಟು ಕ್ರಾಂತಿ ಕಾರಣನಾದ. ಸೊಮಾಲಿಯ ರಾಷ್ಟ್ರೀಯ ಆಂದೋಲನದ ಮುಂಚೂಣಿಯಲ್ಲಿದ್ದರೂ,  ವರ್ಸಾಮೆ ಆಫ್ಘಾನಿಸ್ತಾನದಲ್ಲಿ ಅಲ್ ಖೈದಾ ಜೊತೆ ಕೆಲಸ ಮಾಡುತ್ತಿದುದರಿಂದ ದೇಶಭ್ರಷ್ಟನಾಗಬೇಕಾಯಿತು. ಆದರೆ ಆತನ ಕಾವ್ಯ ಹೋರಾಟ ಮುಂದುವರಿಯಿತು.  ಆಗಸ್ಟ್ 22, 2022 ರಂದು ವರ್ಸಾಮ್ ತೀರಿಕೊಂಡ.

ಹೇಗೆ ಓಡೋಡಿ ಬಂದರು ಅವರು ಒಂದು ಹೆಣ್ಣು ಒಂಟೆಯ
ಶವ ಬಿದ್ದ ಸ್ಥಳಕ್ಕೆ, ಎಂಥಾ ಗದ್ದಲ ಪ್ರತಿಯೊಬ್ಬರೂ ಅದರ
ಮಾಂಸಕ್ಕೆ ತಮ್ಮ ಇಕ್ಕಳದ ಕೈ ಹಾಕಿ ದೋಚಿಕೊಂಡರು
ಆ ಬಿಸಿಲಲ್ಲಿ ಬೇಯುತ್ತಾ ಅದರ ಗರಿಗರಿ ಚರ್ಮ ಮುದುಡುತ್ತಾ
ಅದರ ಮೂಳೆ ಮುರಿಯುತ್ತಾ.
ಆ ಹಿಂಬಾಲಕರು ಇನ್ನೂ ಇನ್ನೂ ದುರಾಸೆಯಿಂದ
ಆ ಪರ್ವತದ ಮೇಲಿಂದ ಹೊಗೆ ಇಳಿಯುತ್ತಿರುವುದನ್ನು
ಆಸೆ ಕಣ್ಣುಗಳಿಂದ ನೋಡುತ್ತಾ ಆ ಪ್ರಪಾತ ಆ ಕಣಿವೆಗಳಲ್ಲಿ
ಧಾವಿಸುತ್ತಿರುವುದನ್ನು ನೋಡಿದರೆ ನೀವೂ ಹಲ್ಲು ಕಿರಿಯುತ್ತೀರಿ.

ಕೋಟಿಯೊಳಗೊಂದು ಹಾವು ನುಸುಳುತ್ತದೆ:
ಮುಳ್ಳುಗಳು ಹಾಸಿದ್ದರೂ ಆ ಹೇಡಿ ಶಾಪಗಳನ್ನು
ತೂರಿಬಿಟ್ಟು ಧೈರ್ಯವಂತರು ಕೊರಳು ತೂರಿಸುವಂತೆ;
ಚೆಂದದ ನೋಟಕ್ಕಾಗಿ ಆ ಜಾತಿ ಕುದುರೆ ತನ್ನ
ನೈತಿಕತೆಯನ್ನು ಮಾರಿಕೊಳ್ಳುತ್ತಾನೆ.
ಆ ಮಂದಗೇಡಿ ಪುಟಿಯುತ್ತ ಸಾಗಿದಾಗ
ನಗೆ ಕೂಡಾ ಅಪರಾಧವೆನ್ನಿಸಿ
ನಮ್ಮ ದೇಶದಲ್ಲಿ ಎಷ್ಟೊಂದು ಅಪೂರ್ಣ ಕೆಲಸಗಳಿವೆ.

ಆ ಗುಳ್ಳೆನರಿ ಸಿಂಹಕ್ಕೆ ಅಪ್ಪಣೆ ಮಾಡುತ್ತದೆ
“ಹೋಗು ಆ ಎಳೇ ಒಂಟೆಯನ್ನು ಹಿಡಿ, ಮತ್ತೆ ಆ ಜಿಂಕೆಯನ್ನೂ”
ಆಮೇಲೆ ಅದು ತನ್ನ ಪಾಲಿನದಕ್ಕಿಂತ ಐದುಪಟ್ಟು
ಹೆಚ್ಚು ಬಾಚಿಕೊಳ್ಳುತ್ತದೆ. ಮತ್ತದನ್ನು ಪಕ್ಕಕ್ಕಿಟ್ಟು
ಸಿಂಹದ ಪಾಲಿನ ಕಚಡಪಚಡಗಳನ್ನು ನೀಡುತ್ತಾ
“ಸುಮ್ಮನೇ ಕೊಸರಬೇಡಾ” ಎಂದು ಗದರುತ್ತಾ
ಸಿಂಹ ಪಾಪ ಸುಮ್ಮನಿರಲೂ ಆಗದೇ
ತನ್ನ ಬೇಸರ ಅವಿತಿಡಲೂ ಆಗದೇ
ಆಗೊಮ್ಮೆ ಈಗೊಮ್ಮೆ ತನ್ನ ಕಳೆದುಕೊಂಡ ಪ್ರತಿಷ್ಠೆ
ನೆನಪಿಸಿಕೊಂಡು ಮನಸ್ಸು ಕಹಿಯಾಗಿ ತುಟಿ ಕಚ್ಚಿಕೊಳ್ಳುತ್ತದೆ.

ಆ ದೋಚುವ ಕಮಿಷನರುಗಳಿಂದ
ಒಂದೇ ಒಂದು ಅವಮಾನಕಾರೀ ತುಂಡನ್ನು
ನಾನು ಎಂದಿಗೂ ಸ್ವೀಕರಿಸುವುದಿಲ್ಲ. ಅಲ್ಲದೇ
ಅವರ ಜೊತೆ ಏನನ್ನೂ ಹಂಚಿಕೊಳ್ಳುವುದಿಲ್ಲ.
ಗೋರಿ ತನ್ನ ಪಾಲಿನ ಮೂರು ಮೊಳದ ಶವವಸ್ತ್ರವನ್ನು
ಅಥವಾ ಕೊರಳಿನ ಕಾಲರನ್ನು ಬಿಟ್ಟು ಕೊಡದ ಹೊರತು-
ಸತ್ತ ನಗ್ನ ದೇಹ ಮುಚ್ಚಲು ಅದು ಬೇಕಾಗುತ್ತದೆ –
ಮಹಾತೀರ್ಪಿನ ದಿನದವರೆಗೆ
ನಾನು ಹೋರಾಡುತ್ತಲೇ, ಕೂಗುತ್ತಲೇ ಇರುತ್ತೇನೆ.
ನನ್ನ ಕೂಗು ಸತ್ತವರಿಗೆ ಸಾಂತ್ವನ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಈ ಕೆಲಸಕ್ಕೆ ನನ್ನನ್ನು ಕಟ್ಟಿ ಹಾಕು ಮತ್ತು
ಆ ಜೀನಿನಿಂದ ನನಗೆ ಮುಕ್ತಿ ನೀಡದಿರು.

ಕೋಟಿಯೊಳಗೊಂದು ಹಾವು ನುಸುಳುತ್ತದೆ:
ಮುಳ್ಳುಗಳು ಹಾಸಿದ್ದರೂ ಆ ಹೇಡಿ ಶಾಪಗಳನ್ನು
ತೂರಿಬಿಟ್ಟು ಧೈರ್ಯವಂತರು ಕೊರಳು ತೂರಿಸುವಂತೆ;
ಚೆಂದದ ನೋಟಕ್ಕಾಗಿ ಆ ಜಾತಿ ಕುದುರೆ ತನ್ನ
ನೈತಿಕತೆಯನ್ನು ಮಾರಿಕೊಳ್ಳುತ್ತಾನೆ.
ಆ ಮಂದಗೇಡಿ ಪುಟಿಯುತ್ತ ಸಾಗಿದಾಗ
ನಗೆ ಕೂಡಾ ಅಪರಾಧವೆನ್ನಿಸಿ
ನಮ್ಮ ದೇಶದಲ್ಲಿ ಎಷ್ಟೊಂದು ಅಪೂರ್ಣ ಕೆಲಸಗಳಿವೆ.

‍ಲೇಖಕರು Admin

September 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: