
ಮೂಲ ಅಸಾಮಿ ಭಾಷೆ: ಡಾ ಪ್ರಾಂಜಿತ್ ಬೋರಾ
ಇಂಗ್ಲಿಷಿಗೆ : ಡಾ ಕೌಸ್ತುಬ್ ದೇಕ
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ಡಾ ಪ್ರಾಂಜಿತ್ ಬೋರಾ, ಪ್ರೊಫೆಸರ್, ಕೃಷ್ಣಾ ಕಾಂತಾ ಹಂಡಿಕಿ ಮುಕ್ತ ವಿಶ್ವವಿದ್ಯಾಲಯ, ಗುವಾಹಟಿ, ಅಸ್ಸಾಂ ಮಾಜಿ ಚೇರ್ಮನ್, ಭೂಪೆನ್ ಹಜಾರಿಕಾ ಸೆಂಟರ್ ಫಾರ್ ಸ್ಟಡಿಸ್ ಇನ್ ಫಾರ್ಮಿನ್ಗ್ ಆರ್ಟ್ಸ್ ಒಟ್ಟು 45 ಪ್ರಕಟಣೆಗಳು ಅದರಲ್ಲಿ 17 ಕವನ ಸಂಕಲನಗಳು, ಆನಾ ಆಹ್ಮತೋವಾ ಬಗ್ಗೆ ಪಿ ಎಚ್ ಡಿ ಮಾಡಿದ್ದಾರೆ.
ರಿಕ್ಷಾದಿಂದ ಇಳಿಯುವಾಗ
ಮುದುಕ ಕೆಳಗೆ ಬಿದ್ದ
ವಾಕಿಂಗ್ ಸ್ಟಿಕ್ ಅವನ ಕೈಯಿಂದ ಬಿತ್ತು
ಬಟ್ಟೆ ಹರಿದು, ಮೊಣಕಾಲುಗಳಿಗೆ ಮೂಗೇಟಾಗಿ ರಕ್ತ ಹರಿಯಿತು
ಹರಿಯಲಿ
ಅದರಿಂದ ನನಗೇನು?
ಹೆಣ್ಣೊಬ್ಬಳು ಜೋರಾಗಿ ಕಿರುಚುತ್ತಿದ್ದಾಳೆ
ಗಾಭರಿಯಾಗಿ ಕಾರಿನ ಒಳಗಿನಿಂದ
ಅವಳ ಚೀರಾಟ ಬೀದಿಯಲ್ಲೆಲ್ಲಾ ಮಾರ್ದನಿಸುತ್ತಿದೆ
ಮಾರ್ದನಿಸಲಿ
ಅದರಿಂದ ನನಗೇನು?
ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಮುರಿದು
ಮುನ್ನುಗ್ಗುತ್ತಿರುವ ಮೆರವಣಿಗೆಯ ಮೇಲೆ
ಗುಂಡು ಹಾರಿಸಲಾಗುತ್ತಿದೆ.
ಒಬ್ಬ ಯುವಕ ಕೆಳಗೆ ಬಿದ್ದ,
ಬೀಳಲಿ,
ಅದರಿಂದ ನನಗೇನು?

ಯಾರೋ ಅನಾಮಿಕ ದಾಳಿಕೋರ ಇಟ್ಟುಹೋದ ಗ್ರೆನೇಡ್
ಮಾರುಕಟ್ಟೆಯ ದಟ್ಟ ಗುಂಪಿನ ನಡುವೆ ಸ್ಫೋಟಗೊಳ್ಳುತ್ತದೆ
ಆರನೇ ತರಗತಿಯ ಟ್ಯೂಷನ್ಗೆ ಹೋಗುತ್ತಿದ್ದ ಬಾಲಕಿ ಸಾವನ್ನಪ್ಪಿದ್ದಾಳೆ
ಸಾಯಲಿ ಅವಳು,
ಅದರಿಂದ ನನಗೇನು?
ನಡುರಸ್ತೆಯಲ್ಲಿ ಹುಡುಗಿಯೊಬ್ಬಳ ಬಟ್ಟೆ ಇಲ್ಲವಾಗಿದೆ
ಬಿಡಿ, ನನ್ನ ಬಟ್ಟೆಗಳು ಚೆನ್ನಾಗಿವೆ.
ಹಾಡಹಗಲೇ ಅರೆಬೆತ್ತಲೆ ಹುಡುಗಿಯನ್ನು ನಡುರಸ್ತೆಯಲ್ಲಿ ಬಿಸಾಡಿ
ಕಾರು ಭರ್ರನೆ ಹೋಗಿಬಿಟ್ಟಿದೆ
ಅದಕ್ಕೇನು, ನನ್ನ ಮನೆಯಲ್ಲಿ ನನ್ನವಳು ಚೆನ್ನಾಗೇ ಇದ್ದಾಳೆನ್ನಿಸುತ್ತಿದೆ.
ಮುಸ್ಸಂಜೆಯಲ್ಲಿ ತನ್ನದೇ ವರಾಂಡದಲ್ಲಿ ಕುಳಿತಿರುವಾಗ
ಯಾರೋ ಕೊಲೆಯಾಗಿದ್ದಾರೆ
ತನ್ನ ಮಗನ ವಯಸ್ಸಿನ ಹಂತಕರಿಂದ,
ಅದಿರಲಿ ಬಿಡಿ, ನನಗೇನು?
ವೃದ್ಧಾಶ್ರಮದಲ್ಲಿ,
ಅರಳುಮರುಳು ಮುದುಕಿ
ಪದೇ ಪದೇ ಕೇಳುತ್ತಾಳೆ
ಕೂಗುತ್ತಿದ್ದಾಳೆ
ಅವಳ ಪುಟ್ಟ ಮಗನ ಹೆಸರು,
ಅವಳು ಬೇಡಿಕೊಳ್ಳಲಿ, ಅದರಿಂದ ನನಗೇನು?
ತನ್ನ ಕಣ್ಮಣಿ ಮಗುವಿನ ಹಸಿವು ತಣಿಸಲಾಗದೇ
ತಾಯಿ ಅದನ್ನು ದೋಣಿಯಿಂದ ನದಿಯ ಮಧ್ಯಕ್ಕೆ ಎಸೆದಿದ್ದಾಳೆ
ಎಸೆಯಲಿ ಬಿಡಿ, ಅದರಿಂದ ನನಗೇನು ಲಾಭ ನಷ್ಠ?
ಮಧ್ಯರಾತ್ರಿಯ ಗಂಟೆ ಹೊಡೆದಾಗ
ರಸ್ತೆಯ ಮಧ್ಯದಲ್ಲಿ
ಹುಚ್ಚು ಹೆಂಗಸೊಬ್ಬಳು ಪ್ಲಾಸ್ಟಿಕ್ ಚೀಲದಿಂದ ತನ್ನ ಪಾಲನ್ನು ಕಸಿದುಕೊಳ್ಳುತ್ತಿದ್ದಾಳೆ
ಇರಲಿ ಬಿಡಿ, ಪ್ರಜ್ಞೆಯ ಆದಿಕಾಲದಿಂದಲೂ ಇದೇ
ಸಮಾಜ ಮತ್ತು ಇತಿಹಾಸದ ರೂಢಿಯಾಗಿದೆ.
ಯಾರೋ ರಾತ್ರಿಯಲ್ಲಿ ಹಳ್ಳಿ ಹಳ್ಳಿಗಳಿಗೆ ಬೆಂಕಿ ಹಚ್ಚುತ್ತಾರೆ
ದೇವಾಲಯಗಳು ಮತ್ತು ಮಸೀದಿಗಳು ಜ್ವಾಲೆಯ ಸಮುದ್ರದಲ್ಲಿ ಉರಿಯುತ್ತವೆ
ನಾಯಿಗಳ ಬೊಗಳಾಟ, ಮಕ್ಕಳ ಗೋಳಾಟ ದಿಗಂತವನ್ನು ಆವರಿಸುತ್ತದೆ
ನಾನಿನ್ನೂ ಚೆನ್ನಾಗಿಯೇ ಇದ್ದೇನೆ.

ಸವೆದ ಕಂಬಳಿಯನ್ನು ತಲೆಯಿಂದ ಕಾಲಿನವರೆಗೆ ಸುತ್ತಿ
ನನ್ನ ತಾಯಿಯ ವಯಸ್ಸಿನ ಹೆಂಗಸೊಬ್ಬಳು
ಚಳಿಗಾಲದ ರಾತ್ರಿಯಲ್ಲಿ ಆಸ್ಪತ್ರೆಯ ವರಾಂಡದಲ್ಲಿ ಮಲಗಿದ್ದಾಳೆ
ನಿಲ್ಲದ ಕೆಮ್ಮಿನಲ್ಲಿ.
ನನ್ನ ತಂದೆಯ ವಯಸ್ಸಿನ ಗುರು
ದಿನದಿಂದ ದಿನಕ್ಕೆ ಹಣ್ಣಾಗುತ್ತಿದ್ದಾರೆ
ಪಿಂಚಣಿ ಕಚೇರಿಗೆ ಅಲೆದಲೆದು
ನಾನಿನ್ನೂ ಚೆನ್ನಾಗಿಯೇ ಇದ್ದೇನೆ
ನಾನು ಒಂದು ಶಾಶ್ವತ ಚಿತ್ರ
ನನ್ನ ದೃಷ್ಟಿಯಲ್ಲಿ, ಅದೇನು ಮಹಾ ಅವಮಾನ?
0 ಪ್ರತಿಕ್ರಿಯೆಗಳು