
ಇಂಗ್ಲಿಷ್ ಮೂಲ: ಮಣಿ ರಾವ್
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ನಮ್ಮ ಸಣ್ಣೂರಿನಲ್ಲೊಂದು ದೊಡ್ಡ ಲೈಬ್ರರಿ. ಎಷ್ಟೊಂದು ಮಹಡಿಗಳು, ವಿಸ್ತಾರಗಳು.
ಮೂರು ಎಲಿವೇಟರ್ ಗಳು ಐದು ಮೆಟ್ಟಿಲ ಸಾಲುಗಳು.
ವಿಷಯಕ್ಕನುಸಾರವಾಗಿ ಪುಸ್ತಕಗಳನ್ನು ಜೋಡಿಸಲಾಗಿವೆ.
ಯಾವುದನ್ನು ಎಲ್ಲಿಡಬೇಕು ಎಂದು ನಿರ್ಧರಿಸುವವನು ನಾನು.
ಕಲೆಯೋ ವಾಸ್ತುಶಾಸ್ತ್ರವೋ ಶಾಸ್ತ್ರೀಯವೋ ಚರಿತ್ರೆಯೋ
ಧಾರ್ಮಿಕವೋ ಆಧ್ಯಾತ್ಮ ಅಧ್ಯಯನವೋ ನನ್ನನ್ನು ಕೇಳಿ.
ಒಂದು ಸಾಮಾನ್ಯ ದಿನ ಒಂದು ಹೊಸ ಪುಸ್ತಕ ಬಂದು ಬಿದ್ದಿತು ನನ್ನ ಮೇಜಿನ ಮೇಲೆ.
ಅದರ ಶೀರ್ಷಿಕೆ “ಹೆಣ್ಣು” ಕೆಳಗೆ ಬರೆದಿತ್ತು “ಸೃಜನೇತರ”.
ನಾನದನ್ನು ‘ಸ್ತ್ರೀರೋಗಶಾಸ್ತ್ರ’ ದ ಅಡಿಯಲ್ಲಿಟ್ಟೆ.
ಆ ರಾತ್ರಿ ನಿದ್ದೆ ಸುಳಿಯಲಿಲ್ಲ ನನ್ನ ಬಳಿ.
ಮರುದಿನ ನಾನದನ್ನು ‘ಮಾನವಶಾಸ್ತ್ರ’ ಕ್ಕೆ ಬದಲಿಸಿದೆ.
ಒಂದು ತಾಸಿನ ಬಳಿಕ ಜಿನೋಮಿಕ್ಸ್ ವಿಭಾಗವೆಂದು ನಿರ್ಧರಿಸಿದೆ.

ಇದು ಹೀಗೇ ನಡೆಯಿತು. ಮತ್ತೆ ಮತ್ತೆ ಮತ್ತೆ.
ಸಮಾಜಶಾಸ್ತ್ರ. ಮನೋವಿಜ್ಞಾನ. ಭೂವಿಜ್ಞಾನ.
ಕೊನೆಗೆ ಹೊಳೆಯಿತು,
ಸ್ಫೂರ್ತಿ ಯಾವಾಗಲೂ ಹಾಗೆಯೇ
ಥಟ್ಟನೆ ಸ್ಪುರಿಸುತ್ತದೆ, ಹಲ್ಲುಜ್ಜುವಾಗ.
ಜೋರಾಗಿ ಕೂಗಿಯೇ ಬಿಟ್ಟೆ – “ಪ್ರದರ್ಶನ ಕಲೆ”
ಬೆಳಗಿನ ತಿಂಡಿಯ ಸಮಯ ಹೆಂಡತಿಗೆ ಹೇಳಿದೆ ನನ್ನ ಚಿಂತನೆ.
ಅವಳಿಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ಸಣ್ಣಗೆ ಚಮಕುತ್ತಾ ಹೇಳಿದಳು
‘ಬಹುಶಃ ನೀವು ರಿಯಲ್ ಎಸ್ಟೇಟ್ ಅಂದುಕೊಂಡಿರಬೇಕು’.
ಇದು ಹೇಗೆ ಅಂತ್ಯ ಕಂಡಿತು ಎನ್ನುವುದರ ಬಗ್ಗೆ ನಿಮಗೆ ಕುತೂಹಲವಿದೆ ಎಂದು ಗೊತ್ತು.
ಬಿಡಿ, ಅದನ್ನು ರಾಜಕೀಯದ ಅಡಿಯಲ್ಲಿ ಹಾಕಿ, ಅಲ್ಲಿಗೆ ಬಿಟ್ಟೆ.
0 ಪ್ರತಿಕ್ರಿಯೆಗಳು