ಪ್ರತಿಭಾ ನಂದಕುಮಾರ್ ಅಂಕಣ- ಹೈದರಾಲಿ ಹೀರೋನೋ ವಿಲನ್ನೋ…

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಇಲಿಯ ಬಾಧೆಯನ್ನು ತಪ್ಪಿಸಿಕೊಳ್ಳಲು ಹೋಗಿ ಹುಲಿಯ ಬಾಯಿಗೆ ಬಿದ್ದಂತೆ

ಹೈದರಾಲಿಯನ್ನು ಹೀರೋನೋ ವಿಲನ್ನೋ ಎಂದು ನಿಶ್ಚಿತವಾಗಿ ಹೇಳಲಾಗದಂತಹ ಸಂದಿಗ್ಧತೆ ಇದೆ ಎಂದು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇನೆ.  ಕೆಲವರು ನಾನು ಫ್ರೆಂಚ್, ಬ್ರಿಟಿಷ್, ಪೋರ್ಚುಗೀಸ್ ಮತ್ತಿತರ ಮೂಲಗಳನ್ನು ಆಧರಿಸಿ ‘ಅವರ’ ದೃಷ್ಟಿಕೋನದಿಂದ ನೋಡಿ ಹೈದರನ ಬಗ್ಗೆ ಪಕ್ಷಪಾತಿ ಆಗಿದ್ದೇನೆ ಎಂದು ಹೇಳಿದರು. ಅದಕ್ಕೇ ಈ ಸಲ ಕನ್ನಡದ ಮೂಲಗಳನ್ನು ಆಧರಿಸಿ ಬರೆಯುತ್ತಿದ್ದೇನೆ. ನನ್ನ ವೈಯಕ್ತಿಕ ಅಭಿಪ್ರಾಯಗಳನ್ನು ತೂರಿಸದೇ ಮೂಲದಲ್ಲಿ ಇದ್ದದ್ದನ್ನು ಇದ್ದ ಹಾಗೆ ಕೊಡುತ್ತೇನೆ. ಇದನ್ನು ಓದಿ ಯಾರಾದರೂ ಸ್ವಂತ ಅಭಿಪ್ರಾಯ ಮೂಡಿಸಿಕೊಳ್ಳಬಹುದು. 

ಇದು ಯಂ ರಾಮರಾಯರು 1929 ರಲ್ಲಿ ಸುಬೋಧ ಕುಸುಮಾಂಜಲಿ ಗ್ರಂಥಮಾಲೆಯಲ್ಲಿ ಬರೆದ ‘ಹೈದರಲ್ಲೀ ಖಾನ್’ ಎನ್ನುವ ಗ್ರಂಥ. ಇದು ಹೈದರಾಲಿಯನ್ನು ನೋಡಿ ವ್ಯವಹರಿಸಿ ತಿಳಿದವರು ಬರೆದ ಮೂಲ ಗ್ರಂಥವಲ್ಲ. ಆದರೆ ರಾಮರಾಯರು ಸಾಕಷ್ಟು ಸಂಶೋಧನೆ ಮಾಡಿ ಬರೆದದ್ದು. ಆದರೆ ಹೈದರಾಲಿ ಪ್ರವರ್ಧಮಾನಕ್ಕೆ ಬಂದ ರೀತಿಯ ಬಗ್ಗೆ ಅವರಿಗಿದ್ದ ಸ್ಪಷ್ಟತೆಯನ್ನು ಸರಿಯಾಗಿ ದಾಖಲಿಸಿದ್ದಾರೆ. ಅವರಿಗೆ ಹೈದರಾಲಿಯ ಬಗ್ಗೆ ನಿಷ್ಪಕ್ಷಪಾತ ನೋಟ ಇತ್ತು.

‘…ನಮ್ಮ ಕಥಾನಾಯಕನಾದ ಹೈದರಲ್ಲೀ ಖಾನ್ ಬಹದ್ದೂರನು ಈ ಸಂಸ್ಥಾನವನ್ನು ಸಂಪಾದಿಸಿ ರಾಜ್ಯಅಧಿಪತಿಯಾಗಬೇಕೆಂಬ ಮಹತ್ವಾಕಾಂಕ್ಷೆಯನ್ನುಂಟಾಗಿ ಇಲ್ಲಿ ನೌಕರಿಯನ್ನು ಪ್ರಾರಂಭಿಸಿದವನಲ್ಲ. ಆದರೆ ಆ ಕಾಲದಲ್ಲಿ ಈ ಸಂಸ್ಥಾನದಲ್ಲಿ ಮೇಲೆಮೇಲೆ ಪ್ರಾಪ್ತವಾದ ಹಲವು ಸಂದರ್ಭಗಳು, ಅದೃಷ್ಟಶಾಲಿಯಾದ ಆತನ ಅಭಿವೃದ್ಧಿಗೆ ಸಾಧಕವಾಗಿ ಪರಿಣಮಿಸಿದವು. ಹದಿನೇಳನೆಯ ಶತಮಾನದ ಅಂತ್ಯಭಾಗದಲ್ಲಿ ಬಹು ದಕ್ಷತೆಯಿಂದ ರಾಜ್ಯಭಾರ ಮಾಡಿ ಹಲವು ಮುಖಗಳಿಂದ ಸಂಸ್ಥಾನದ ಕೀರ್ತಿಯನ್ನು ವಿಸ್ತಾರಗೊಳಿಸಿದ ಚಿಕ್ಕದೇವರಾಜ ಒಡೆಯರ ನಂತರ ಸಿಂಹಾಸನವನ್ನೇರಿದ ಪ್ರಭುಗಳಲ್ಲಿ ಒಬ್ಬರೂ ಶಕ್ತರಿಲ್ಲದೆ, ರಾಜ್ಯಾಧಿಪತ್ಯವು ಕ್ರಮಕ್ರಮವಾಗಿ ಸರ್ವಾಧಿಪತಿಗಳ ವಶವಾಯಿತು. ದೇಹಕ್ಕೆ ಪ್ರಧಾನಾಂಗವಾದ ತಲೆಯೇ ಇಲ್ಲದೆ, ಕೈಕಾಲು ಮುಂತಾದ ಅಂಗಗಳಿಗೇ ಸ್ವಾತಂತ್ರ್ಯವುಂಟಾಗಿ ಅವು ಕುಣಿಯತೊಡಗಿದರೆ ಆಗ ದೇಹದ ಸ್ಥಿತಿ ಹೇಗಿರುವುದೋ ಈ ರಾಜ್ಯದ ಸ್ಥಿತಿಯೂ ಅಂದು ಹಾಗಾಯಿತು. ಸರ್ವಾಧಿಕಾರಿಗಳಾದ ದೇವರಾಜಯ್ಯ ನಂಜರಾಜಯ್ಯ ಎಂಬಿಬ್ಬರು ಸ್ವಾರ್ಥ ಸಾಧಕರು, ರಾಜನಿರ್ಮಾಪಕರೋ ಎಂಬಂತೆ ಸ್ವಾತಂತ್ರ್ಯವಹಿಸಿ, ದೇಶದಲ್ಲಿ ಮನಬಂದಂತೆ ಆಧಿಪತ್ಯ ಮಾಡತೊಡಗಿದರು. ಆ ಅವಿವೇಕವು ಆಧಿಪತ್ಯ ಮಾಡತೊಡಗಿದಾಗಲೇ ಸಂಸ್ಥಾನದ ಸೈನ್ಯದಲ್ಲಿ ಅಧಿಕಾರಿಯಾಗಿದ್ದ ಹೈದರಲ್ಲೀ ಖಾನನು ತನ್ನಲ್ಲಿ ಮೂರ್ತಿಮತ್ತಾಗಿದ್ದ ಪ್ರಭುಶಕ್ತಿ, ಧೈರ್ಯಸಾಹಸಾದಿಗಳು, ದೂರದೃಷ್ಟಿ, ಕಾರ್ಯ ದಕ್ಷತೆ, ಆಜ್ಞಾಸಾಮರ್ಥ್ಯ ಮುಂತಾದ ಕೆಲವು ಅಸಾಮಾನ್ಯ ಗುಣಗಳ ಪ್ರಭಾವದಿಂದ ಕ್ರಮಕ್ರಮವಾಗಿ ಪ್ರಸಿದ್ಧಿಗೆ ಬಂದು ಕೊನೆಗೆ ಸಿಂಹಾಸನವನ್ನೂ ಆಕ್ರಮಿಸಿ ತಾನೇ ನವಾಬನಾದನು.’

ಹೈದರಾಬಾದ್ ಮುಜಾಫರ್ ಜಂಗ್ ಮತ್ತು ನಾಸಿರ್ ಜಂಗ್ ನಡುವಿನ ಯುದ್ಧದಲ್ಲಿ ನಾಸಿರ್ ಜಂಗ್ ಮೈಸೂರಿನ ಸೈನ್ಯದ ಸಹಾಯ ಕೋರಿದಾಗ ದೇವರಾಜನು ಕಳಿಸಿದ ಬೆರಕಿ ವೆಂಕಟರಾಯಣ ಮುಂದಾಳತ್ವದ ಪಡೆಯಲ್ಲಿ ಅಣ್ಣ ತಮ್ಮ ಶಾಬಾಜ್ ಮತ್ತು ಹೈದರಾಲಿ ಇದ್ದರೆಂದು ಹಿಂದೆಯೇ ಹೇಳಿದೆ. ಮೈಸೂರು ಸೈನ್ಯ  ಆಗ ಬಹಳ ಧೈರ್ಯದಿಂದ ಕಾದಿತೆಂದು ಕೀರ್ತಿ ಸಂಪಾದಿಸಿತು. ರಾಮರಾಯರು ಬರೆಯುತ್ತಾರೆ.

‘ಹೈದರನಾದರೋ ಹೈದರಾಬಾದಲಿನ ಆಧಿಪತ್ಯಕ್ಕಾಗಿ ಅವರವರಲ್ಲಿ ನಡೆದ ಈ ಗಲಭೆಯಲ್ಲಿ ಆ ಪ್ರಾಂತದಲ್ಲಿ ಉಂಟಾಗಿದ್ದ ಅವ್ಯವಸ್ಥೆಯನ್ನು ಗಮನಿಸಿ, ತನ್ನೊಂದಿಗೆ ಬಂದಿದ್ದ ಬೇಡರ ಪಡೆಗೆ ಕೊಳ್ಳೆಗೆ ಅಪ್ಪಣೆ ಕೊಟ್ಟನು. ಪೀಡನೆ ಮುನ್ನೂರು ಮಂದಿ ಬೇಡರು ಆ ದಂಡಿನವರ ಮೇಲೆ ಬಿದ್ದು ಲೂಟಿ ಮಾಡಿ ಹದಿನೈದು ಒಂಟೆಗಳ ಮೇಲಿದ್ದ ಅಕ್ಬರ್ ಮೊಹರಿಯ ಹೇರುಗಳನ್ನು ಹೊತ್ತು ತಂದು ಹೈದರನಿಗೆ ಒಪ್ಪಿಸಿದರು. ಅಲ್ಲದೆ ಅವನಿಗೆ ಅನೇಕ ಕುದುರೆಗಳೂ ಬಂದೂಕುಗಳೂ ಲಭ್ಯವಾದವು. ಹೈದರನು ಎಲ್ಲವನ್ನೂ ತೆಗೆದುಕೊಂಡು ಶ್ರೀರಂಗಪಟ್ಟಣಕ್ಕೆ ಬರಲು, ಈ ಸಂಗತಿಯನ್ನು ತಿಳಿದ ದಳವಾಯಿ ದೇವರಾಜಯ್ಯನು ಅದನ್ನೆಲ್ಲ ದ್ರವ್ಯವನ್ನು ತನಗೆ ಕೊಡಬೇಕೆಂದು ಹೈದರನನ್ನು ಕೇಳಿದನು. ಆದರೆ ಹೈದರ್ ಅದಕ್ಕೆ ಒಪ್ಪದೇ ಆ ಹೈದಿನೈದು ಒಂಟೆಯ ಹೇರುಗಳನ್ನು ದೊರೆಗಳಿಗೆ ನಜರು ಮಾಡಲು ದೊರೆಗಳು ಹೈದರಲ್ಲಿಯ ರಾಜಭಕ್ತಿಯನ್ನು ಮೆಚ್ಚಿಕೊಂಡು ಆ ಪೈಕಿ ಹನ್ನೆರಡು ಹೇರುಗಳನ್ನು ಬೊಕ್ಕಸಕ್ಕೆ ಸೇರಿಸಿಕೊಂಡು ಮಿಕ್ಕ ಮೂರು ಹೇರುಗಳನ್ನು ಹೈದರನಿಗೇ ಬಹುಮಾನವಾಗಿ ಕೊಟ್ಟುಬಿಟ್ಟರು.’

ಇದು ಹೈದರನ ಪ್ರಗತಿಯ ಮೊದಲ ಹೆಜ್ಜೆ. ಒಡೆಯರ ಇಬ್ಬರು ರಾಜರನ್ನು ವಿಷ ಇಟ್ಟು ಕೊಂದ ದಳವಾಯಿಯ ಬಗ್ಗೆ ಇಲ್ಲದ ದ್ವೇಷ ಹೈದರಾಲಿಯ  ಬಗ್ಗೆ ಏಕೆ?

ರಾಮರಾಯರು ಇದಕ್ಕೂ ಮೊದಲು ಇದೇ ಗ್ರಂಥಮಾಲೆಯಲ್ಲಿ ಬರೆದ ‘ಮಹಾರಾಣಿ ಲಕ್ಷ್ಮಮ್ಮಣ್ಣಿಯವರು’ ಎನ್ನುವ ಗ್ರಂಥದಲ್ಲಿಯೂ ಹೈದರಾಲಿಯ ಬಗ್ಗೆ ವಿವರವಾಗಿ ವಿಶ್ಲೇಷಣೆ ಮಾಡಿದ್ದಾರೆ.  ಅದರ ಒಂದೆರಡು ಪ್ಯಾರಾ ಕೊಟ್ಟು ನಂತರ ‘ಹೈದರಲ್ಲೀ ಖಾನ್’ ನ ಉದ್ಧ್ರುತವನ್ನು ಕೊಡುತ್ತೇನೆ. 

‘ತರುವಾಯ ದೊರೆಗಳು (ಇಮ್ಮಡಿ ಕೃಷ್ಣರಾಜ ಒಡೆಯರು) ಸರ್ವಾಧಿಕಾರಿಯಾದ ಹೈದರಲ್ಲೀ ಖಾನನ ಸಹಾಯದಿಂದ ರಾಜ್ಯಭಾರ ಮಾಡುತ್ತಾ, ದೇಶವನ್ನು ಸರ್ವವಿಧದಲ್ಲೂ ಉತ್ತಮ ಸ್ಥಿತಿಗೆ ತರುವುದರಲ್ಲೇ ಅಹರ್ನಿಶಿ ನಿರತರಾಗಿದ್ದರು. ಹೈದರಲ್ಲೀಯಾದರೂ ದ್ರೋಹ ಚಿಂತನೆಯಿಲ್ಲದೆ, ಪ್ರತಿಯೊಂದು ಕಾರ್ಯವನ್ನು ನೆರವೇರಿಸುವ ವಿಷಯದಲ್ಲೂ ಮಹಾರಾಜರ ಅಪ್ಪಣೆಯನ್ನು ಕೇಳಿ ಅದರಂತೆ ನಡೆಯುತ್ತಾ ಅಚ್ಚುಮೆಚ್ಚಿನವನಾಗಿದ್ದನು. ಸರ್ವಾಧಿಕಾರವನ್ನು ವಹಿಸಿಕೊಂಡು ಹೈದರಲ್ಲೀಯು ಸೈನ್ಯವನ್ನು ಸ್ವಾಧೀನಕ್ಕೆ ತಂದುಕೊಂಡು ಆಗಾಗ ದಂಡೆತ್ತಿ ಬರುತ್ತಿದ್ದ ಮರಾಠೆಯವರು ಮಹಮ್ಮದೀಯ ರಾಜರು ಮುಂತಾದವರ ಹಾವಳಿಗಳಿಗೆ ಎದುರಾಗಿ ಧೈರ್ಯದಿಂದ ದೇಶವನ್ನು ಕಾಪಾಡಿಕೊಂಡುಬಂದ ಸಾಹಸಕ್ಕೆ ದೊರೆಗಳವರು ಪರಮ ಸುಪ್ರೀತರಾಗಿ ಆತನಿಗೆ ಸಕಲ ಸರದಾರರೂ ಪ್ರಜೆಪರಿವಾರಗಳವರೂ ನೆರೆದಿದ್ದ ಸಭೆಯಲ್ಲಿ “ನವಾಬ ಹೈದರಲ್ಲೀ ಖಾನ್ ಬಹಾದ್ದೂರ್’ ಎಂಬ ಬಿರುದನ್ನು ಕೊಟ್ಟು ಗೌರವಿಸಿದರು. 

‘ಹೀಗೆ ಮಹಾರಾಜರ ಸಂಪೂರ್ಣ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾದ ಹೈದರಲ್ಲೀ ಖಾನನು ಶ್ರೀರಂಗಪಟ್ಟಣವೇ ಸೈನ್ಯದ ಠಾಣೆಯಾದುದರಿಂದ ಅಲ್ಲೇ ನೆಲೆಸಿ, ಆ ಪಟ್ಟಣದ ಕೋಟೆಯನ್ನು ವಿಸ್ತಾರಗೊಳಿಸಿ ಬಂದೋಬಸ್ತಾಗಿ ಕಟ್ಟಿಸಿ ತರುವಾಯ ಸೋದೆ, ಸವಣೂರು, ಘಟ್ಟದ ಕೆಳಗಿನ ಪ್ರಾಂತಗಳು, ಕಲ್ಲೀಕೋಟೆ ಮುಂತಾದ ಹಲವು ಪ್ರಾಂತಗಳನ್ನು ಜಯಿಸಿ ಸ್ವಾಧೀನಗೊಂಡುದಲ್ಲದೆ, ಒಳನಾಡಿನ ಅನೇಕ ಪಾಳೆಯಗಾರರನ್ನೂ ಗೆದ್ದು ದೊರೆಗಳವರ ದೇಶವನ್ನು ಹಲವು ವಿಧಗಳಿಂದ ಅಭಿವೃದ್ಧಿಗೊಳಿಸಿದನು.

“ನವಾಬನು ಕಲ್ಲೀಕೋಟೆಯ ಮೇಲೆ ದಂಡೆತ್ತಿ ನಡೆದಿದ್ದಾಗ್ಗೆ ಎಂದರೆ ಕ್ರಿ ಶ 1966ನೆಯ ಸಂವತ್ಸರದಲ್ಲಿ ಇಮ್ಮಡಿ ಕೃಷ್ಣರಾಜ ಒಡೆಯರು ದಿವಂಗತರಾದರು. ಈ ಸಮಾಚಾರವು ತಿಳಿದೊಡನೆಯೇ ನವಾಬನು ಶ್ರೀರಂಗಪಟ್ಟಣದ ಕಿಲ್ಲೇದಾರನಾಗಿದ್ದ ಮೊಖದುಂ ಸಾಬಿಗೆ ‘ಒಡನೆ ರಾಜಧಾನಿಗೆ ಹೋಗಿ ಮಹಾಮಾತೃಶ್ರೀಯವರಿಗೆ ತಾನಂ ಪರವಾಗಿ ಸಮಾಧಾನೊಕ್ತಿಗಳನ್ನು ಹೇಳುವುದಲ್ಲದೆ ಅರಮನೆಯ ಶಾಸ್ತ್ರ ಸಂಪ್ರದಾಯವನ್ನು ಅನುಸರಿಸಿ, ದೊರೆಗಳವರಿಗೆ ಪರಲೋಕ ಕ್ರಿಯೆಗಳನ್ನೆಲ್ಲ ನಡೆಸಿ ತರುವಾಯ ಮಹಾಮಾತೃಶ್ರಿ ಚೆಲುವಾಜಮ್ಮಣ್ಣಿಯವರ ಅಪ್ಪಣೆಯ ಮೇರೆಗೆ ಚಿಕ್ಕದೊರೆಗಳವರಿಗೆ ಪಟ್ಟಾಭಿಷೇಕ ಮಾಡಿಸುವವನಾಗು’ ಎಂದು ಬರೆಸಿ ಕಳುಹಿಸಿದನು.

ಅದೇ ರೀತಿ ನಡೆಯಿತು. ದುರದೃಷ್ಟವಶಾತ್ ಚಿಕ್ಕದೊರೆ ಅಂದರೆ ಬಾಲಕ ನಂಜರಾಜ ಒಡೆಯರು ಮುಂದೆ ನಾಲ್ಕು ವರ್ಷ ಮಾತ್ರ ಬದುಕಿದ್ದು ತೀರಿಕೊಂಡರು. ಮತ್ತೆ ಹೈದರಾಲಿ ಲಕ್ಷ್ಮಮ್ಮಣ್ಣಿಯವರ ಅಪ್ಪಣೆಯ ಮೇರೆಗೆ ಹತ್ತು ವರ್ಷದ ಬೆಟ್ಟದ ಚಾಮರಾಜ ಒಡೆಯರಿಗೆ ಪಟ್ಟಾಭಿಷೇಕ ಮಾಡಿಸಿದ. ಆದರೆ ಆತನೂ ಸಹ ಆರು ವರ್ಷ ಕಾಲ ಮಾತ್ರ ಬದುಕಿದ್ದು ತೀರಿಕೊಂಡ.  ಆಗ ಲಕ್ಷ್ಮಮ್ಮಣ್ಣಿಯವರು ತಮ್ಮ ಸಂಬಂಧಿಕರಲ್ಲಿ ಇಬ್ಬರು ಹುಡುಗರನ್ನು ಆರಿಸಿ ಅವರಲ್ಲಿ ಒಬ್ಬನನ್ನು ದತ್ತು ತೆಗೆದುಕೊಳ್ಳಬೇಕೆಂದು ನಿರ್ಧರಿಸಿದಾಗ ಹೈದರಾಲಿ ಅವರಿಗೆ ಹೇಳಿದ ಮಾತುಗಳು ಯಥಾವತ್ತಾಗಿ ದಾಖಲೆಯಾಗಿದೆ. 

” ತಾಯೇ, ಸರ್ವೋತ್ತಮವಾದ ತಮ್ಮ ವಂಶವು ಯೋಗ್ಯರಾದ ಪುತ್ರರಿಂದ ಪ್ರಕಾಶ ಪಡೆಯಬೇಕೆ ಹೊರತು ಬೇರೆಯಲ್ಲ. ತಮ್ಮ ವಂಶದವರು ಆಸೇತು ಹಿಮಾಚಲವಾಗಿ ಪ್ರಸಿದ್ಧರಾಗಿಯೂ ಮಹಾ ಪರಾಕ್ರಮಶಾಲಿಗಳಾಗಿಯೂ, ಮಹಾ ದಾತೃಗಳಾಗಿಯೂ ಧರ್ಮದಲ್ಲಿಯೇ ಆಸಕ್ತರಾಗಿಯೂ ಇದ್ದುದಲ್ಲದೆ ಸೌಂದರ್ಯಾದಿ ಗುಣಗಳಿಂದಲೂ ಯುಕ್ತರಾಗಿ ಇದ್ದ ಕಾರಣ ತಾವು ಅವೇ ಸದ್ಗುಣಗಳುಳ್ಳ ಪುತ್ರರುಗಳನ್ನು ಪರೀಕ್ಷಿಸಿ ಸ್ವೀಕಾರಮಾಡಿಕೊಂಡು ಪಟ್ಟವನ್ನು ಕಟ್ಟಬೇಕು. ಈಗ ತಾವು ಸ್ವೀಕಾರ ಮಾಡಿಕೊಳ್ಳಬೇಕೆಂದು ನಿಶ್ಚಯಮಾಡಿಕೊಂಡಿರುವ ಪುತ್ರರುಗಳಲ್ಲಿ ಒಬ್ಬರು ವಕ್ರವಾದ ಕುಂಟುಕಾಲುಳ್ಳವರಾಗಿಯೂ ಮತ್ತೊಬ್ಬರು ಶ್ವೇತ ಕುಷ್ಠ ರೋಗವುಳ್ಳವರಾಗಿಯೂ ಮಂಕಾದ ಬುದ್ಧಿಯುಳ್ಳವರಾಗಿಯೂ ಇರುವರು. ಆದ ಕಾರಣ ಇವರಿಬ್ಬರನ್ನೂ ಬಿಟ್ಟು ಇವರಿಗಿಂತ ಸೌಂದರ್ಯಾದಿ ಅನೇಕ ಗುಣಗಳುಳ್ಳ ಬಾಲಕರುಗಳನ್ನು ಕರೆಸಿ ಅವರುಗಳ ಪರೀಕ್ಷೆಯನ್ನು ಮಾಡುವ ಕಾಲದಲ್ಲಿ ಈ ಸಂಸ್ಥಾನಕ್ಕೆ ಮುಖ್ಯಅಭಿಮಾನಿಯಾದ ಶ್ರೀ ಚಾಮುಂಡೇಶ್ವರಿ ಅಮ್ಮನವರು ಪೂರ್ವಪುಣ್ಯ ಪ್ರಭಾವದಿಂದ ಯಾರಲ್ಲಿ ಕಟಾಕ್ಷವನ್ನಿಡುವರೋ ಅವರೇ ರಾಜ್ಯಪಾದವಿಗೆ ಯೋಗ್ಯರಾಗಿರುವರು. ಅವರ ಬುದ್ಧಿಯನ್ನು ಪರೀಕ್ಷೆ ಮಾಡಿ ಅವರನ್ನು ಸ್ವೀಕಾರಮಾಡಿಕೊಂಡು ಪಟ್ಟ ಕಟ್ಟಬೇಕು” ಎಂದು ಬಿನ್ನವಿಸಿದನು. ಹೈದರಲ್ಲಿಯ ಯುಕ್ತಿಯುಕ್ತವಾದ ಈ ಮಾತುಗಳಿಗೆ ವಿರೋಧ ಹೇಳುವುದು ಸಾಧ್ಯವಿರಲಿಲ್ಲ. ಆದರೂ ಮಾತೃಶ್ರೀಯವರು ತಮ್ಮ ಉದ್ದೇಶವು ನೆರವೇರಲಿಲ್ಲವಲ್ಲಾ, ತಮ್ಮ ಮನಸ್ಸಿನಂತೆ ತಮ್ಮ ಸಂಬಂಧಿಕರಲ್ಲೇ ದತ್ತು ತೆಗೆದುಕೊಳ್ಳಲು ಅವಕಾಶವಿಲ್ಲವಲ್ಲಾ ಎಂದು ಮರುಗಿ ಉಪಾಯವಿಲ್ಲದೆ “ರಾಜವಂಶ ಕ್ಷೇಮ ಚಿಂತನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಗೆ ಸೂಕ್ತವೋ ಹಾಗೆ ಮಾಡಿ ಉತ್ತಮ ರಾಜಪುತ್ರನನ್ನು ರಾಜವಂಶಕ್ಕೆ ದತ್ತು ಮಾಡಿಸಬೇಕು” ಎಂದು ಸಮಯೋಚಿತವಾಗಿ ನುಡಿದು ಅಪ್ಪಣೆಯನ್ನಿತ್ತು ಕಳುಹಿಸಿದರು.” 

ಆಗಲೇ ಹೈದರಾಲಿ ರಾಜವಂಶದ ಸಂಬಂಧಿಕರ ಮಕ್ಕಳನ್ನೆಲ್ಲಾ ಕರೆಸಿ ಒಂದು ಕೊಠಡಿಯಲ್ಲಿ ಹಲವಾರು ಸಾಮಗ್ರಿಗಳನ್ನು ಇರಿಸಿ ಯಾವ ಮಗು ಏನನ್ನು ಎತ್ತಿಕೊಳ್ಳುತ್ತದೋ ಅದರ ಮೇಲೆ ನಿರ್ಧರಿಸೋಣಾ ಎಂದು ಹೇಳಿ,  ಉಳಿದ ಮಕ್ಕಳೆಲ್ಲ ಸಿಹಿತಿಂಡಿ ಆಟದ ಸಾಮಾನುಗಳನ್ನು ಎತ್ತಿಕೊಂಡರೆ, ಅರಿಕುಠಾರದ ದೇವರಾಜೇ ಅರಸು ಮತ್ತು ಹೊನ್ನಾಜಮ್ಮಣ್ಣಿಯವರ ಮಗ ಮೂರುವರ್ಷದ ಚಾಮರಾಜನು ಕಠಾರಿಯನ್ನು ಮತ್ತು ಕನ್ನಡಿಯನ್ನು ಎತ್ತಿಕೊಂಡಾಗ ಅವನನ್ನೇ ಪಟ್ಟಕ್ಕೆ ಆಯ್ಕೆ ಮಾಡಿದ. ಆದರೂ ಮಹಾರಾಣಿಗೆ ಈ ದತ್ತು ಇಷ್ಟವಿರಲಿಲ್ಲವಾದ ಕಾರಣ ಅವರಿಂದ ಮಗುವಿಗೆ ಅಪಾಯವಿದೆ ಎಂದು ಅವನಿಗೆ ರಕ್ಷಣೆಯನ್ನು ಒದಗಿಸಿದ.  ಮುಂದೆ ಲಕ್ಷ್ಮಮ್ಮಣ್ಣಿಯವರು ಹೈದರಾಲಿಯನ್ನು ಓಡಿಸಲು ಬ್ರಿಟಿಷರ ಜೊತೆ ಕುತಂತ್ರ ಮಾಡಿದರೂ ಅದು ಸಾಧ್ಯವಾಗದೇ ಹೋಯಿತು. ಈ ಕಥೆ ಹಿಂದೆಯೇ ಹೇಳಿದೆ. ಇರಲಿ.

ತಿರುಚನಾಪಳ್ಳಿ ಯುದ್ಧ ಸಂದರ್ಭವನ್ನು ಕುರಿತು ಯಂ ರಾಮರಾಯರು ಹೀಗೆ ಬರೆಯುತ್ತಾರೆ. 

” …ತರುವಾಯ ದೊರೆಗಳವರಿಗೆ ಸೇರಿದ್ದ ತಿರುಚನಾಪಳ್ಳಿಯನ್ನು ಚಂದಾ ಸಾಹೇಬನೆಂಬುವನು ಆಕ್ರಮಿಸಿದನು. ಈ ಸಮಾಚಾರವು ಶ್ರೀರಂಗಪಟ್ಟಣಕ್ಕೆ ತಿಳಿಯಲು ಕರಚೂರಿ ನಂಜರಾಜಯ್ಯನೂ ಜಮಾದಾರ್ ಹೈದರ್ ನಾಯಕನೂ ಸೈನ್ಯದೊಂದಿಗೆ ಕಳುಹಿಸಲ್ಪಟ್ಟರು. ಅವರು ಅತ್ತ ತಿರುಚಿನಾಪಳ್ಳಿಗೆ ಹೋಗಿ ಮುತ್ತಿಗೆ ಹಾಕಿ ಯುದ್ಧ ಮಾಡುತ್ತಿರಲು ಚನ್ನಪಟ್ಟಣದ ಮಹಮದಲ್ಲೀ ಖಾನನೆಂಬುವನು ತಾನು ದೊರೆಗಳ ಕಟಾಕ್ಷಕ್ಕೆ ಪಾತ್ರನಾಗಬೇಕೆಂದು ಅಪೇಕ್ಷಿಸಿ, ಆರ್ಕಾಡು ಚಂದಾ ಸಾಹೇಬನನ್ನೂ ಆತನ ದಿವಾನನಾದ ಶೇಷಗಿರಿರಾಯನನ್ನೂ ತನ್ನ ಡೇರೆಗೆ ಕರೆಯಿಸಿಕೊಂಡು, ಘಾತುಕತನದಿಂದ ಅವರ ಕೊರಳನ್ನು ಕೋಯಿಸಿ ಅವರ ತಲೆಗಳನ್ನು ಶ್ರೀರಂಗಪಟ್ಟಣಕ್ಕೆ ಕಳುಹಿಸಿದನು. ಅಲ್ಲಿ ಆ ಎರಡು ತಲೆಗಳನ್ನೂ ಕೋಟೆಯ ಬಾಗಿಲಿಗೆ ಕಟ್ಟಿಸಿದರು. 

“ ಚಂದಾಸಾಹೇಬ ಮುಂತಾದವರನ್ನು ಕೊಲೆಮಾಡಿಸಿದ ಮಹಮದಲ್ಲಿಯು ತಿರುಚಿನಾಪಳ್ಳಿಯನ್ನು ತಾನು ಸ್ವಾಧೀನಪಡಿಸಿಕೊಂಡನು. ಅಷ್ಟು ಮಾತ್ರವೇ ಅಲ್ಲ – ಆ ವಿಚಾರವೇನೆಂದೂ, ಮೈಸೂರು ದೊರೆಗಳಿಗೆ ಸೇರಿದ ಆ ಊರನ್ನು ತಮ್ಮ ಸ್ವಾಧೀನಕ್ಕೆ ಕೊಡೆಂದೂ ಕೇಳಲು ಹೋಗಿದ್ದ ಕರಚೂರಿಯ ನಂಜರಾಜಯ್ಯನನ್ನು ಉಪಾಯದಿಂದ ಕೋಟೆಯೊಳಗೆ ಹೊಗಿಸಿಕೊಂಡು ಮೋಸಗೊಳಿಸುವುದರಲ್ಲಿದ್ದನು. ಆಗ ಜಮಾದಾರ ಹೈದರಲ್ಲೀ ನಾಯಕನು ಧೈರ್ಯದಿಂದ ಒಳಕ್ಕೆ ನುಗ್ಗಿ ಶತ್ರುಗಳೊಂದಿಗೆ ಕಾದಿ ನಂಜರಾಜಯ್ಯನನ್ನು ಬಿಡಿಸಿಕೊಂಡು ಹೊರಕ್ಕೆ ತಂದನು.  ಆಗ ಮಹಮದಲ್ಲಿಯು ಮೈಸೂರು ಸೈನ್ಯದೊಂದಿಗೆ ತಾನೊಬ್ಬನೇ ಯುದ್ಧ ಮಾಡುವುದು ಸಾಧ್ಯವಿಲ್ಲವೆಂದು ತಿಳಿದು, ಇಂಗ್ಲಿಷರ ಸಹಾಯ ಪಡೆದು ಎಂಟು ಹತ್ತು ಸಾರಿ ಯುದ್ಧ ಮಾಡಿದನು. ಆಗಲೆಲ್ಲಾ ಹೈದರಲ್ಲಿಯು ಬಹು ಧೈರ್ಯ ಪರಾಕ್ರಮಗಳಿಂದ ಶತ್ರು ಸೈನ್ಯವನ್ನು ಎದುರಿಸಿದನಲ್ಲದೆ, ಫೌಜು ಸಾಲದೇ ಬಂದ  ಸಂದರ್ಭದಲ್ಲಿ ತನಗೆ ದೊರೆಗಳವರು ಇನಾಮಾಗಿ ದಯಪಾಲಿಸಿದ್ದ ಹಣವನ್ನು ತರಿಸಿಕೊಂಡು ಫೌಜು ಕಟ್ಟಿ, ಹೀಗೆ ಮೂರೂ ವರ್ಷಗಳವರೆಗೂ ಯುದ್ಧ ಮಾಡಿ ಕೊನೆಗೆ 1755 ರಲ್ಲಿ ತಿರುಚಿನಾಪಳ್ಳಿಯನ್ನು ಸ್ವಾಧೀನಮಾಡಿಕೊಂಡು ಶ್ರೀರಂಗಪಟ್ಟಣಕ್ಕೆ ಹಿಂದಿರುಗಿದನು. ಮಾರ್ಗದಲ್ಲಿ ನಂಜರಾಜಯ್ಯನ ದಂಡಿನ ಸಿಪಾಯಿಗಳು ತಮಮ್ ಬಾಬತ್ತು ಬಾಕಿ ಇರುವ ಸಂಬಳವನ್ನೆಲ್ಲಾ ಅಲ್ಲೇ ಕೊಟ್ಟುಬಿಡಬೇಕೆಂದು ತೊಂದರೆಪಡಿಸಲಾರಂಭಿಸಿದರು. ನಂಜರಾಜಯ್ಯನು ಮುಂದೇನು ಮಾಡಬೇಕೆಂದು ಉಪಾಯ ತೋರದವನಾಗಿ ಶಕ್ತನಾದ ಹೈದರಲ್ಲಿಯನ್ನು ಕರೆಸಿ ಅವರನ್ನು ಹೇಗಾದರೂ ಸಮಾಧಾನಪಡಿಸೆಂದು ಕೇಳಿದನು. ಹೈದರಾಲಿಯು ಉಪಾಯವನ್ನು ಯೋಚಿಸಿ, ಕಣಿವೆಯ ಕೆಳಗೆ ಪ್ರಸಿದ್ಧರಾದ ನಾಮಕಲ್ಲಿನ ರಾಮಾರೆಡ್ಡಿ ಮುಂತಾದ ಪ್ರಮುಖರನ್ನು ಕರೆಯಿಸಿಕೊಂಡು ಅವರಿಗೆ ಯೋಗ್ಯ ಸನ್ಮಾನ ಮಾಡಿಸಿ ಆ ಸೀಮೆಯಿಂದ ಸರ್ಕಾರಕ್ಕೆ ಬರಬೇಕಾಗಿದ್ದ ಹಣವು ಬಹುದಿನಗಳಿಂದ ನಿಲ್ಲಲು ಕಾರಣವೇನೆಂದು ಪ್ರಶ್ನಿಸಲು ಅವರು ದಿಗ್ಭ್ರಾಂತರಾಗಿ ಎಲ್ಲವನ್ನೂ ಒಪ್ಪಿಸುತ್ತೇವೆಂದು ವಚನ ಕೊಟ್ಟರು. ಕೆಲವು ದಿನಗಳೊಳಗಾಗಿ ಅವರಿಂದ ಐದಾರು ಲಕ್ಷ ವರಹಗಳನ್ನು ವಸೂಲು ಮಾಡಿ ದಂಡಿನವರಿಗೆ ಬಟವಾಡೆ ಮಾಡಿಸಿ ನಂಜರಾಜಯ್ಯನೊಂದಿಗೆ ಶ್ರೀರಂಗಪಟ್ಟಣವನ್ನು ಬಂದು ಸೇರಿದನು.

“ ನಂಜರಾಜಯ್ಯನು ತಿರುಚಿನಾಪಳ್ಳಿಯನ್ನು ಸ್ವಾಧೀನಪಡಿಸಿಕೊಳ್ಳುವುದರಲ್ಲಿ ಹೈದರಲ್ಲಿಯು ಪ್ರಕಟಿಸಿದ ಸಾಹಸವನ್ನೂ ಸೈನ್ಯದವರ ದಂಗೆಯನ್ನು ಅಡಗಿಸುವುದರಲ್ಲೂ, ಆ ಪರದೇಶದಲ್ಲಿ ಹಣವನ್ನು ಜೊತೆಗೂಡಿಸುವುದರಲ್ಲೂ ಆತನು ಕೈಕೊಂಡ ಯುಕ್ತಿಯನ್ನೂ ವರ್ಣಿಸಿ ದೊರೆಗಳ ಮನಸ್ಸು ಆತನ ವಿಷಯದಲ್ಲಿ ಪ್ರಸನ್ನವಾಗುವಂತೆ ಮಾಡಿದನು. ಸುಪ್ರೀತರಾದ ದೊರೆಗಳು ನೆರೆದ ಸಭೆಯಲ್ಲಿ ಹೈದರಲ್ಲಿಗೆ “ಬಹದ್ದೂರ್” ಎಂಬ ಘನತರವಾದ ಬಿರುದನ್ನೂ ಕೊಟ್ಟು ಗೌರವಿಸಿದರು. ದಂಡಿಯಾನ್ ಖರ್ಚಿಗಾಗಿ ಆತನು (ಹೈದರಾಲಿ) ಕೊಟ್ಟಿದ್ದ ತನ್ನ ಸ್ವಂತ ಹಣಕ್ಕಾಗಿ ಮೂರು ಲಕ್ಷ ಗೋಪಾಲಿ ವರಹಗಳನ್ನು ಕೊಡುವಂತೆ ಈರೋಡು, ಧಾರಾಪುರ, ಸತ್ಯಮಂಗಲ ಮುಂತಾದ ಪ್ರಾಂತಗಳಿಗೆ ನಿರೂಪವನ್ನು ಬರೆಸಿಕೊಟ್ಟರು. ಅಲ್ಲದೆ ದಿಂಡಿಗಲ್ಲು ಮುಂತಾದ ಎರಡು ಲಕ್ಷ ವರಹಗಳ ಸೀಮೆಯನ್ನು ವಿಂಗಡಿಸಿ ಆ ಪ್ರಾಂತಕ್ಕೆ ಹೈದರಲ್ಲಿಯನ್ನು ಫೌಜುದಾರನಾಗಿರುವಂತೆ ನಿಯಮಿಸಿ ಕಳುಹಿಸಿದರು. ಹೈದರಲ್ಲಿಯು 1755ನೇ ಕೊನೆಯ ಭಾಗದಲ್ಲಿ ತನ್ನ ನೂತನ ಉದ್ಯೋಗವನ್ನು ಕೈಗೊಳ್ಳಲು ದಿಂಡಿಗಲ್ಲಿಗೆ ಪ್ರಯಾಣ ಮಾಡಿದನು. ಹೀಗೆ ಸಾಮಾನ್ಯ ಜಮಾದಾರನಾಗಿ ಸೈನ್ಯವನ್ನು ಸೇರಿದ ಹೈದರಲ್ಲಿಯು ಸ್ವಾಮಿಕಾರ್ಯ ಸ್ವಕಾರ್ಯಗಳೆರಡನ್ನೂ ಸಾಧಿಸಿಕೊಂಡು ನಾಲ್ಕಾರು ವರ್ಷಗಳ ಕಾಲದಲ್ಲೇ ಫೌಜುದಾರಿಯ ಅಧಿಕಾರಕ್ಕೆ ಏರಿ ಗಣ್ಯನಾಗಿ ಪರಿಣಮಿಸಿದನು.”

ಇದಾದ ಮೇಲೂ ದೇವರಾಜಯ್ಯ ಮತ್ತು ನಂಜರಾಜಯ್ಯ ತಮ್ಮ ಕುಟಿಲತೆಯನ್ನು ಕಡಿಮೆ ಮಾಡದೇ ಸಿಕ್ಕಾಪಟ್ಟೆ ದುಷ್ಟತನವನ್ನು ಮಾಡಿದರು. ಕೊನೆಗೆ ಅರಮನೆಗೇ  ನುಗ್ಗಿ ಮಹಾರಾಜರನ್ನು ಹಿಡಿದು ಕೂರಿಸಿ, ಅವರೆದುರಿಗೆ ಅವರ ಆಪ್ತರ ಕಿವಿ ಮೂಗುಗಳನ್ನು ಕೊಯ್ಯಿಸಿ ಕಣ್ಣು ಕೀಳಿಸಿ ಅರಮನೆಯಿಂದ ಅವರನ್ನು ಓಡಿಸಿದರು.  ಈ ಇಬ್ಬರು ದುಷ್ಟದಳವಾಯಿಗಳನ್ನು ದಮನಿಸುವ ಯತ್ನದಲ್ಲೇ ಹೈದರಾಲಿ ಪ್ರವರ್ಧಮಾನಕ್ಕೆ ಬಂದಿದ್ದು.

ಆದರೆ ಅದನ್ನು ರಾಮರಾಯರು ವರ್ಣಿಸುವುದು ಹೀಗೆ “ದಳವಾಯಿಗಳನ್ನು ಓಡಿಸಿ ಹೈದರಲ್ಲಿ ನವಾಬನ ಸರ್ವಾಧಿಕಾರಕ್ಕೆ ಒಳಪಟ್ಟುದರಿಂದ ಮೈಸೂರು ರಾಜಮನೆತನದವರ ಸ್ಥಿತಿಯು ಯಾವ ಭಾಗದಲ್ಲೂ ಸುಖವಾಗಲಿಲ್ಲ. ಇಲಿಯ ಬಾಧೆಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿ ಹುಲಿಯ ಬಾಯಿಗೆ ಬಿದ್ದಂತೆ ಆಯಿತು. ಕಪ್ಪೆಯು ಸುರಕ್ಷಣೆಯನ್ನು ಅಪೇಕ್ಷಿಸಿ ಹಾವಿನ ಹೆಡೆಯ ನೆಳಲನ್ನು ಆಶ್ರಯಿಸಿದಂತಾಯಿತು.” 

‍ಲೇಖಕರು Admin

September 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. mukund gajendragad

    kindly correct this statement “ನವಾಬನು ಕಲ್ಲೀಕೋಟೆಯ ಮೇಲೆ ದಂಡೆತ್ತಿ ನಡೆದಿದ್ದಾಗ್ಗೆ ಎಂದರೆ ಕ್ರಿ ಶ 1966ನೆಯ ಸಂವತ್ಸರದಲ್ಲಿ ಇಮ್ಮಡಿ ಕೃಷ್ಣರಾಜ ಒಡೆಯರು ದಿವಂಗತರಾದರು.

    ಪ್ರತಿಕ್ರಿಯೆ
  2. prathibha nandakumar

    ವಂದನೆಗಳು. ಹಾಗಾದಲ್ಲಿ ಸಂತೋಷ. ಆದರೆ ತಾವು ಇದನ್ನು ಸರಿಯಾಗಿ ಓದಿಲ್ಲ ಎಂದು ತೋರುತ್ತದೆ. ಇದು ಯಂ ರಾಮರಾಯರು ಬರೆದ ಪುಸ್ತಕದ ಉಧೃತ ಅಂತ ಮೊದಲೇ ಹೇಳಿದ್ದೇನೆ. ನಾನು ಈ ಅಂಕಣದಲ್ಲಿ ಹಲವು ಬಾರಿ ಅತ್ಯಂತ ಸ್ಪಷ್ಟವಾಗಿ ಪ್ರಸ್ತಾಪಿಸಿರುವುದು – ಹೈದರಾಲಿಯ ಬಗ್ಗೆ ಕನ್ನಡ ಇತಿಹಾಸಕಾರರು, ಬ್ರಿಟಿಷರು, ಫ್ರೆಂಚರು, ಪೋರ್ಚುಗೀಸರು ಮತ್ತು ಅಮೆರಿಕನ್ನರು ಬೇರೆ ಬೇರೆ ದೃಷ್ಟಿಕೋನದಿಂದ ಗ್ರಹಿಸಿದ್ದಾರೆ. ಅವರ ದಾಖಲೆಗಳು ಅದಕ್ಕೆ ತಕ್ಕಂತೆ ತದ್ವಿರುದ್ಧ ಇವೆ ಅಂತ. ಅವುಗಳನ್ನು ನಾನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ ಅಂತ. ಹೈದರನನ್ನು ನಾನು ಖುದ್ದು ನೋಡಿಲ್ಲದಿರುವಾಗ ನನ್ನ ದೃಷ್ಟಿಕೋನ ಕೊಡಲು ಹೇಗೆ ಸಾಧ್ಯ? ನಾನು ಮಾಡುತ್ತಿರುವ ಕೆಲಸ ಆ ಕಾಲದ ಚಾರಿತ್ರಿಕ ದಾಖಲೆಗಳ ಅಧ್ಯಯನ ಅಷ್ಟೇ. ಅದರಲ್ಲೂ ಹೈದರಾಲಿಯನ್ನು ಸ್ವತಃ ಕಂಡು ವ್ಯವಹರಿಸಿದವರ ದಾಖಲೆಗಳಿಗೆ ವಿಶೇಷ ಗಮನ ಕೊಟ್ಟು ಮಾಡುತ್ತಿರುವ ಅಧ್ಯಯನ. ಇದುವರೆಗಿನ ಅಂಕಣದಲ್ಲಿ ನಾನು ಎಲ್ಲಿಯೂ ಇದಮಿತ್ತಂ ಅಂತ ಖಡಾಖಂಡಿತವಾಗಿ ತೀರ್ಪು ಕೊಟ್ಟಿಲ್ಲ. ನನ್ನ ಸಂದೇಹಗಳನ್ನು ಪ್ರಾಮಾಣಿಕವಾಗಿ ದಾಖಲಿಸಿದ್ದೇನೆ. ದಳವಾಯಿಗಳು ಮಾಡಿರುವ ಅನ್ಯಾಯಗಳ ಬಗ್ಗೆ ಕನ್ನಡದ ಎಲ್ಲಾ ಚಾರಿತ್ರಿಕ ದಾಖಲೆಗಳ ಸಾಕ್ಷಿ ಇದೆ. ನಾನು ಬರೆದಿರುವುದರಲ್ಲಿ ಯಾವುದು ಏಕದೃಷ್ಟಿಕೋನ? ನಿಮ್ಮ ಆಪಾದನೆಗೆ ಏನು ಪುರಾವೆ? ನನ್ನ ಹತ್ತು ವರ್ಷದ ಅಧ್ಯಯನವನ್ನು ನೀವು ಒಂದೇ ಮಾತಿನಿಂದ ತೆಗೆದುಹಾಕುವುದು ಸರಿಯೇ? ಸ್ವತಃ ಇತಿಹಾಸ ತಜ್ಞ ಸಿ ಹಯವದನ ರಾವ್ ಅವರೇ ದಾಖಲಿಸಿದಂತೆ “1774ರ ಮೇ ತಿಂಗಳಲ್ಲಿ ಶ್ರೀರಂಗಪಟ್ಟಣದ ದೊಡ್ಡ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿದ್ದ ಮದ್ದು ಗುಂಡುಗಳಿಗೆ ಬೆಂಕಿ ಬಿದ್ದು ಅಪಾರ ಹಾನಿ ಉಂಟಾಯಿತು. ಜೊತೆಗೆ ಪಕ್ಕದ ಶ್ರೀರಂಗನಾಥನ ದೇವಸ್ಥಾನಕ್ಕೂ ಹರಡಿ ದೇವಸ್ಥಾನದ ಒಂದು ಭಾಗ ಸುಟ್ಟುಹೋಯಿತು. ಅದರಿಂದ ತುಂಬಾ ಬೇಸರಪಟ್ಟುಕೊಂಡ ಹೈದರ್ ಒಂದೇ ತಿಂಗಳಲ್ಲಿ ದೇವಸ್ಥಾನದ ಬಹುಮುಖ್ಯವಾದ ಭಾಗವನ್ನು ಪುನರ್ ನಿರ್ಮಾಣ ಮಾಡಿದನು.” ಇದನ್ನ ನಾನು ಬರೆದರೆ ನಿಮ್ಮಂತವರು ಪಕ್ಷಪಾತಿ ಅನ್ನುತ್ತೀರಿ. ಯಾಕೆಂದರೆ ಹೈದರಾಲಿ ಒಳ್ಳೆಯ ಕೆಲಸಗಳನ್ನೂ ಮಾಡಿದ್ದಾನೆ ಎಂದು ಒಪ್ಪಲು ನೀವು ಸಿದ್ಧರಿಲ್ಲ. ಅವನ ತಪ್ಪು ಕೆಲಸಗಳನ್ನು ಬರೆದರೆ ಆಗ ನನ್ನನ್ನು ಮೆಚ್ಚಿಕೊಳ್ಳುತ್ತೀರಿ. ಆದರೆ ಹೈದರ್ ಒಳಿತುಕೆಡುಕುಗಳ ಮಿಶ್ರಣದ ಒಬ್ಬ ಸಂಕೀರ್ಣ ವ್ಯಕ್ತಿತ್ವದ ಐತಿಹಾಸಿಕ ದಾಖಲೆಗಳುಳ್ಳ ವ್ಯಕ್ತಿ. ಈ ಸ್ಪಷ್ಟತೆ ಕೊಡುವ ಕಾರಣ ವೇನೆಂದರೆ ಇತಿಹಾಸ ವ್ಯಕ್ತಿಗಳ ಬಗ್ಗೆ ಮಾತಾಡುವಾಗ ಒಂದೇ ದೃಷ್ಟಿಕೋನ ಇಟ್ಟುಕೊಳ್ಳುವುದು ಬೇಕೆಂದರೂ ಸಾಧ್ಯವಿಲ್ಲ ಎನ್ನುವುದನ್ನು ನಿಮಗೆ ಸ್ಪಷ್ಟಪಡಿಸುವುದಕ್ಕಾಗಿ. ಯಾರನ್ನಾದರೂ ಒಂದೋ ತೆಗಳುವುದು ಅಥವಾ ಹೊಗಳುವುದು ಇವತ್ತಿನ ಸಾಮಾನ್ಯರ ಪರಿಪಾಠ. ನಾನು ಹಾಗಲ್ಲ. ನನ್ನದು ಅಧ್ಯಯನ ದೃಷ್ಟಿಕೋನ. ನಿಮ್ಮ ಟೀಕೆ ಇತರರನ್ನು ದಾರಿ ತಪ್ಪಿಸದಿರಲಿ ಎಂದು ಈ ವಿವರವಾದ ಉತ್ತರ. ನಮಸ್ಕಾರ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: