ಪ್ರತಿಭಾ ನಂದಕುಮಾರ್ ಅಂಕಣ- ಜೀವದ ಗೆಳೆಯರು ಪರಮ ಶತ್ರುಗಳಾಗಿದ್ದು

ಕನ್ನಡದ ಬಹು ಮುಖ್ಯ ಸಾಹಿತಿ. ಕಾವ್ಯವನ್ನು ಇನ್ನಿಲ್ಲದಷ್ಟು ಪ್ರೀತಿಸುವ ಪ್ರತಿಭಾ ಕಾವ್ಯ ಸಂಬಂಧಿಯಾಗಿ ಅನೇಕ ಪ್ರಯೋಗಗಳನ್ನು ಮಾಡಿ ಕವಿತೆಯ ಸಾಧ್ಯತೆಯನ್ನು ವಿಸ್ತರಿಸಿದ್ದಾರೆ. ಈ ನಿಟ್ಟಿನಲ್ಲಿ ಅನೇಕ ಸಾಹಿತ್ಯ ಸಂಬಂಧಿ ಫೆಲೋಶಿಪ್ ಗಳು ಇವರಿಗೆ ಸಂದಿವೆ.

ಇವರ ಇಲ್ಲಿಯವರೆಗಿನ ಸಮಗ್ರ ಕವಿತೆಗಳ ಗುಚ್ಛ ‘ಪ್ರತಿಭಾ ಕಾವ್ಯ’ ಇವರ ದಶಕಗಳ ಕಾಲದ ಉಸಿರಾಟದ ಗುರುತು. ‘ಇನ್ನು ಹತ್ತು ವರ್ಷದ ನಂತರ ಮತ್ತಿನ್ನೊಂದು ಸಮಗ್ರ ಸಂಗ್ರಹದೊಂದಿಗೆ ಬರುತ್ತೇನೆ’ ಎಂದು ಖಚಿತವಾಗಿ ಹೇಳುವ ಉತ್ಸಾಹಿ. ‘ನಾವು ಹುಡುಗಿಯರೇ ಹೀಗೆ’ಯಿಂದ ಆರಂಭಿಸಿ ‘ಕೌಬಾಯ್ಸ್ ಮತ್ತು ಕಾಮಪುರಾಣ’ವರೆಗೆ ಕನ್ನಡ ಸಾಹಿತ್ಯವನ್ನು ಆವರಿಸಿ ನಿಂತಿರುವ ಪ್ರತಿಭಾ ಪರಿ ಮಾದರಿ.

ಸಂಶೋಧನೆ ಇವರ ಇನ್ನೊಂದು ಮೋಹ. ಸಂಶೋಧನೆಯನ್ನು ಕೈಗೆತ್ತಿಕೊಂಡರೆ ಅದರ ಆಳಕ್ಕೆ ಡೈವ್ ಹೊಡೆಯುವ ಉತ್ಸಾಹ.

ಅಂತಹ ಒಂದು ಅಧ್ಯಯನವನ್ನು ‘ಅವಧಿ’ ನಿಮ್ಮ ಮುಂದಿಡುತ್ತಿದೆ. ಈ ಅಧ್ಯಯನ ಬರಹಗಳ ಈ ಅಂಕಣದಲ್ಲಿ ಬರುವ ಎಲ್ಲಾ ಅಭಿಪ್ರಾಯಕ್ಕೂ ಲೇಖಕರೇ ಜವಾಬುದಾರರು ಎಂದು ಕಾಣಿಸುತ್ತಾ ಈ ಅಂಕಣದ ಎಲ್ಲಾ ಬರಹಕ್ಕೂ ನಿಮ್ಮ ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.

ಹಿಂದೆಯೇ ಹೇಳಿದಂತೆ ಅಂಕಣ ಬರೆಯುವ ಉದ್ದೇಶ ಸಾಮಾನ್ಯವಾಗಿ ಜನರಿಗೆ ತಿಳಿದಿಲ್ಲದ ಸಂಗತಿಗಳನ್ನು ತಿಳಿಸುವುದು ಮತ್ತು ಜನಜನಿತ ಕಥೆಗಳನ್ನು ಬಿಟ್ಟು ಹೆಚ್ಚು ಪ್ರಚಲಿತದಲ್ಲಿ ಇಲ್ಲದ ವಿಷಯಗಳನ್ನು ಕುರಿತು ಚರ್ಚಿಸುವುದು. ಅದರಲ್ಲೂ ನಾನು ಪದೇ ಪದೇ ಹೇಳಿದಂತೆ ಹೈದರಾಲಿಯನ್ನು ಸ್ವತಃ ಕಂಡು ಮಾತನಾಡಿಸಿ ವ್ಯವಹರಿಸಿದವರ ದಾಖಲೆಗಳನ್ನು ಪರಿಗಣಿಸಿ ಅದನ್ನು ಪರಿಶೀಲಿಸುವುದು. ಪ್ರವೀಣ್ ಎನ್ನುವವರು ಇದನ್ನು ‘ಒಂದೇ ದೃಷ್ಟಿಕೋನದಿಂದ ಬರೆದದ್ದು’ ಎಂದು ಆಕ್ಷೇಪಿಸಿದ್ದಾರೆ. ಹೀರೋನೋ ವಿಲನ್ನೋ ಎಂದು ಪ್ರಶ್ನಾರ್ಥವಾಗಿ ಬರೆದಾಗಲೇ ಅವರಿಗೆ ಹೈದರ್ ಹಲವು ಆಯಾಮಗಳ ಸಂಕೀರ್ಣ ವ್ಯಕ್ತಿ ಎಂದು ಗೊತ್ತಾಗಬೇಕಿತ್ತು. ಇರಲಿ. 

ನಮ್ಮ ಇತಿಹಾಸವನ್ನು ಸರಿಯಾದ ನೆಲೆಯಲ್ಲಿ ಅಧ್ಯಯನ ಮಾಡದೆ ಇರುವುದಕ್ಕೆ ಹಲವಾರು ಅಡೆತಡೆಗಳಿವೆ. ಅದರಲ್ಲಿ ಪ್ರಮುಖವಾದುದು ಪೂರ್ವಗ್ರಹ ದೃಷ್ಟಿಕೋನ. ಬ್ರಿಟಿಷ್ ಅಧಿಪತ್ಯಕ್ಕೆ ನಾವು ಒಳಗಾದ ಕಾರಣಗಳನ್ನು ಕುರಿತು ವಿಶ್ಲೇಷಣೆ ಮಾಡುವಾಗಲಂತೂ ಸಿಕ್ಕಾಪಟ್ಟೆ ಅಂತೇ ಕಂತೆಗಳು ಧಾಳಿ ಮಾಡುತ್ತವೆ. ನಮ್ಮ ರಾಜರುಗಳ ಅಸಹಾಯಕತೆ ಮತ್ತು ಬ್ರಿಟಿಷರ ದಬ್ಬಾಳಿಕೆಯ ನಡುವೆ ಚರಿತ್ರೆಯ ವಾಸ್ತವತೆ ನಲುಗಿ ಹೋಗಿದೆ. ರಾಜರುಗಳು ದಾಖಲಿಸಿದ ಸಂಗತಿಗಳು ಕಾವ್ಯಾತ್ಮಕವಾಗಿದ್ದು ಅತಿ ರಂಜಕತೆಯಿಂದ ಕೂಡಿವೆ.

ಬ್ರಿಟಿಷರ ದಾಖಲೆಗಳು ಅವರ ದೃಷ್ಟಿಕೋನದಿಂದ ಮಾಡಿದ್ದಾಗಿವೆ. ಫ್ರೆಂಚರ ದಾಖಲೆಗಳು ಬ್ರಿಟಿಷರನ್ನು ಬೈದಾಗ ನಮಗೆ ಪ್ರಿಯವಾಗುತ್ತವೆ, ನಮ್ಮ ರಾಜರುಗಳನ್ನು ಬೈದಾಗ ಅಪ್ರಿಯವಾಗುತ್ತವೆ. ಇನ್ನು ಆಡುಮಾತಿನ – ಓರಲ್ ಟ್ರಡಿಶನ್ – ಚರಿತ್ರೆಯನ್ನು ಏಕಾಏಕಿ ತೆಗೆದುಕೊಳ್ಳುವ ಹಾಗೆ ಇಲ್ಲ ಏಕೆಂದರೆ ಅದರಲ್ಲಿ ಪ್ರಕ್ಷಿಪ್ತಗಳು ಸಿಕ್ಕಾಪಟ್ಟೆ ಇರುತ್ತವೆ. ಶಾಸನಗಳು ಸ್ವಲ್ಪ ಮಟ್ಟಿಗೆ ವಾಸ್ತವ ಸಂಗತಿಗಳನ್ನು ದಾಖಲಿಸಿದರೂ ಅವುಗಳಲ್ಲಿ ಸಮಗ್ರ ಚಿತ್ರಣ ಸಿಗುವುದಿಲ್ಲ. ಹಾಗಾಗಿ ಈ ಎಲ್ಲ ತಾಕಲಾಟಗಳು ಎಲ್ಲಾ ಚರಿತ್ರೆ ಸಂಶೋಧನಾಕಾರರಿಗೂ ಇರುತ್ತವೆ. ಇರಲಿ. ಇನ್ನು ಎರಡು ಕಂತುಗಳನ್ನು ಬರೆದು ಮುಗಿಸುವುದರಿಂದ ಇದನ್ನು ನನ್ನ ಬೃಹತ್ ಗ್ರಂಥದ ಟೀಸರ್ ಎಂದು ಅಂದುಕೊಳ್ಳಬಹುದು.

ಸಾಮಾನ್ಯವಾಗಿ ಹೈದರಾಲಿ ಬಗ್ಗೆ ಎಲ್ಲರಿಗು ತಿಳಿದಿರುವ ಸಂಗತಿಯೆಂದರೆ ಖಂಡೆ ರಾವ್ ಮತ್ತು ಹೈದರಾಲಿಯ ಸ್ನೇಹ ಮತ್ತು ಹಗೆತನ.  ಅತ್ಯಂತ ಗಾಢ ನಂಬಿಕೆಯ ಸ್ನೇಹ ಕದಡಿ ಅತ್ಯಂತ ದುರಂತ ಕೊನೆಯಾಗಿದ್ದು ಮೈಸೂರಿನ ಚರಿತ್ರೆಯಲ್ಲಿ ಮಹತ್ವದ ಘಟ್ಟ. ಇದು ಮೈಸೂರಿನ ರಾಜಕೀಯ ಸಂಘರ್ಷಗಳಿಗೆ ಹಲವಾರು ಆಯಾಮಗಳನ್ನು ತಂದುಕೊಟ್ಟಿತು. ‘ಹೈದರಾಲಿಯ ಹೆಸರನ್ನು ಮೈಸೂರಿನ ಚರಿತ್ರೆಯಲ್ಲಿ ಮೆಚ್ಚುಗೆಯಿಂದ ಅಲ್ಲದಿದ್ದರೂ ಸದಾ ಗೌರವದಿಂದ ಉಲ್ಲೇಖಿಸಲಾಗುತ್ತದೆ’ ಎಂದು ಬ್ರಿಟಿಷ್ ಅಧಿಕಾರಿಯೇ ಬರೆದಿದ್ದಾನೆ.

ಹೈದರ್ ಸರ್ವಾಧಿಕಾರಿಯಾಗಿ ಶಕ್ತಿಶಾಲಿಯಾಗಲು ಕಾರಣಗಳನ್ನು ಹುಡುಕಿದರೆ ಅಂದಿನ ರಾಜಕೀಯ ವಿದ್ಯಮಾನಗಳು ಎಲ್ಲವೂ ಅದಕ್ಕೆ ಪೂರಕವಾಗಿದ್ದವು ಎನ್ನುವುದು ಗೊತ್ತಾಗುತ್ತದೆ. ಅಂದಿನ ಎಲ್ಲಾ ರಾಜರೂ ಪರಸ್ಪರರ ರಾಜ್ಯವನ್ನು ಕಿತ್ತುಕೊಳ್ಳುವುದರಲ್ಲೇ ಜೀವನ ಕಳೆಯುತ್ತಿದ್ದರು. ಶ್ರೀರಂಗಪಟ್ಟಣವನ್ನು ರಾಜ ಒಡೆಯರು ಕಿತ್ತುಕೊಂಡಿದ್ದೂ ಕೂಡಾ ವಿಜಯನಗರದ ಕೊನೆಯ ಸಾಮಂತ ರಾಜರಲ್ಲೊಬ್ಬನಾದ ಶ್ರೀರಂಗರಾಯನನ್ನು ಓದಿಸಿ. ಅವನ ಹೆಂಡತಿ ಅಲಮೇಲಮ್ಮನ ಶಾಪದ ಬಗ್ಗೆ ಎಲ್ಲರಿಗೂ ಗೊತ್ತು. ರಟ್ಟೆ ಬಲ ಇದ್ದವನದೇ ರಾಜ್ಯ ಎನ್ನುವುದು ಅಂದಿನ ಕಾಲದ ಚಾಲ್ತಿಯಾಗಿರುವಾಗ ಹೈದರನದೇನೂ ವಿಶೇಷವಿಲ್ಲ. ಅವನು ಮಾಡಿದ್ದೂ ಅದೇ.  

ಹೈದರಾಲಿ ಮತ್ತು ಖಂಡೆ ರಾವ್ ಅವರ ಪರಿಚಯವಾಗಿದ್ದು ಇಬ್ಬರೂ ತಮ್ಮ ವೃತ್ತಿ ಜೀವನದ ಪ್ರಾರಂಭದ ಹಂತದಲ್ಲಿದ್ದಾಗ. ಸ್ವಲ್ಪ ಹೆಚ್ಚುಕಡಿಮೆ ಒಂದೇ ವಯಸ್ಸಿನವರು. ಓದು ಬರಹ ತಿಳಿಯದ ಪ್ರಖಂಡ ಬುದ್ಧಿಮತ್ತೆಯ ಹೈದರ್ ಹಾಗೂ ಅದ್ಭುತ ವಿದ್ಯಾವಂತನಾದ ಚಾಣಾಕ್ಷಮತಿ ಖಂಡೇರಾವ್. ಹೈದರನನ್ನು ದಿಂಡಿಗಲ್ಲಿನ ಅಧಿಪತಿಯನ್ನಾಗಿ ಮಾಡಿದಾಗ ಅವನಿಗೆ ಲೆಕ್ಕಪತ್ರಗಳಲ್ಲಿ ನೆರವಾಗಲು ಅರಸರು ಖಂಡೆ ರಾವ್ ನನ್ನು ಮುಖ್ಯ ಲೆಕ್ಕಾಧಿಕಾರಿಯಾಗಿ ಅರಸರು ನೇಮಿಸಿದರು.

ಯುದ್ಧಗಳಲ್ಲಿ ಗೆದ್ದು ವಸೂಲಿ ಮಾಡಿದ ಕಪ್ಪಾ ಜೊತೆಗೆ ಲೂಟಿ ಮಾಡಿಬಂದ ಹಣವನ್ನು ಅರಸರಿಗೆ ಒಪ್ಪಿಸುವಲ್ಲಿ ಹಾಗು ಸೈನಿಕರಿಗೆ ಸಂಬಳ ಕೊಡುವುದರಲ್ಲಿ ಜೊತೆಗೆ ತನ್ನ ಪಾಲು ಎತ್ತಿಟ್ಟುಕೊಳ್ಳುವಲ್ಲಿ ಹೈದರಾಲಿ ಖಡಕ್ ಆಗಿದ್ದ.  ಅಷ್ಟು ಸಾವಿರ ಸೈನಿಕರಿದ್ದರೂ ಒಂದೇ ಒಂದು ದಮಡಿ ಆಚೆ ಈಚೆ ಹೋಗದಂತೆ ಸಿಕ್ಕಾಪಟ್ಟೆ ಸ್ಟ್ರಿಕ್ಟ್ ಆಗಿದ್ದ. ಅದರ ಲೆಕ್ಕವನ್ನು ಖಂಡೆ ರಾವ್ ಬರೆಯುತ್ತಿದ್ದ. ಇವರಿಬ್ಬರ ಅದ್ಭುತ ವ್ಯವಸ್ಥೆಯಲ್ಲಿ ರಾಜ್ಯದ ಬೊಕ್ಕಸಕ್ಕೆ ಯಾರಿಗೂ ಮೋಸಮಾಡುವುದು ಸಾಧ್ಯವೇ ಇರಲಿಲ್ಲ. ಖಂಡೆ ರಾವ್ ನ ಈ ಅಚ್ಚುಕಟ್ಟುತನದಿಂದ ಅರಸರಿಗೂ ಹೈದರನಿಗೂ ಲಾಭವಾಯಿತು.

ಆದರೆ ದಳವಾಯಿಗಳ ಹೊಟ್ಟೆಬಾಕತನಕ್ಕೆ ಕಲ್ಲು ಬಿತ್ತು!  ಹೈದರ್ ಮತ್ತು ಖಂಡೆ ರಾವ್ ಅವರ ಕಣ್ಣುತಪ್ಪಿಸಿ ತಿನ್ನುವುದು ಅವರಿಗೆ ಸಾಧ್ಯವಾಗದೇ ತಲೆನೋವಾಯಿತು. ಹಾಗಾಗಿ ಮೆಲ್ಲಮೆಲ್ಲನೆ ಒಳಗೊಳಗೇ ಅವರು ಕತ್ತಿಮಸೆಯತೊಡಗಿದರು. 

ಜೊತೆಗೆ ಹೈದರಾಲಿಯ ಯುದ್ಧವಿಜಯ, ರಾಜ್ಯ ವಿಸ್ತಾರ ಜೊತೆಗೆ ರಾಜ್ಯದ ಬೊಕ್ಕಸವನ್ನೂ ತುಂಬಿಸುತ್ತಿದ್ದ ವೇಗವನ್ನು ನೋಡಿ ರಾಜಮಾತೆ ಗಾಭರಿಯಾದಳು. ಸರ್ವಾಧಿಕಾರಿ ಹೈದರ್ ಎಷ್ಟೇ ಅರಸರಿಗೆ ಸಲಾಮು ಮಾಡಿಕೊಂಡು ಅಧೀನದಲ್ಲಿದ್ದರೂ ಅವನು ತಿರುಗಿಬಿದ್ದರೆ ಅವನನ್ನು ಎದುರಿಸಲು ಅರಸರಿಗೆ ಸಾಮರ್ಥ್ಯವಿಲ್ಲ ಎನ್ನುವ ಸತ್ಯ ಸಂಗತಿ ಆಕೆಗೆ ನಿಚ್ಚಳವಾಗಿ ಗೊತ್ತಿತ್ತು. ಹಾಗಾಗಿ ಆಕೆ ಒಂದು ಷಡ್ಯಂತ್ರ ಹೂಡಿದಳು. ಶ್ರೀರಂಗಪಟ್ಟಣದ ಗರ್ಭಗುಡಿಯಲ್ಲಿ ಖಂಡೇರಾವ್ ನನ್ನ ಕರೆಸಿ ಹೈದರಾಲಿಯ ವಿರುದ್ಧ ವಿಷ ತುಂಬಿ ಆತನನ್ನು ಅಟ್ಟಿದರೆ ನಿನಗೆ ಮಂತ್ರಿಪದವಿ ಎಂದು ಆಮಿಷ ಒಡ್ಡಿದಳು. 

ವಿಚಿತ್ರ ಅಂದರೆ ದಳವಾಯಿ ನಂಜರಾಜನ ಅತಿಯಾಸೆ ಮತ್ತು ದುಷ್ಟತನವನ್ನು ಕಂಡು ಹೇಸಿದ್ದ ರಾಜಮಾತೆ – ಬುದ್ದಿ ರಾಣಿ – ಪ್ರಧಾನಮಂತ್ರಿ ವೆಂಕಟಪತಿ, ಖಂಡೆ ರಾವ್ ಮತ್ತು ಹೈದರಾಲಿ ಜೊತೆಗೂಡಿ ನಂಜರಾಜನನ್ನು ಮೈಸೂರಿನಿಂದ ಓಡಿಸಿದ್ದಳು. ನಂಜರಾಜ ಶ್ರೀರಂಗಪಟ್ಟಣ ಬಿಟ್ಟು ಆಗಿನ್ನೂ ಚಿಕ್ಕದಾಗಿದ್ದ ಮೈಸೂರಿಗೆ ಹೋಗಿ ನೆಲೆಸಿದ ಮತ್ತು ತನ್ನ  ಜೊತೆಗೆ ಬೆಂಕಿ ವೆಂಕಟರಾವನನ್ನು ಕರೆದುಕೊಂಡು ಹೋದ. ಆಗ ಹೈದರ್ ಇಚ್ಛೆಯಂತೆ ಅರಸರು ಖಂಡೆ ರಾವ್ ನನ್ನು ಶ್ರೀರಂಗಪಟ್ಟಣದ ಪ್ರಧಾನಿಯನ್ನಾಗಿ ನೇಮಿಸಿದ್ದರು. 

ಈಗ ಅದೇ ರಾಜಮಾತೆ ಖಂಡೆ ರಾವ್ ನ ಜೊತೆಗೂಡಿ ಹೈದರನನ್ನು ಓಡಿಸುವ ಹುನ್ನಾರ ಮಾಡಿದ್ದಳು.

ಹೈದರಾಲಿ ಮೈಸೂರಿನ ಸೈನ್ಯ ತೆಗೆದುಕೊಂಡು ಹೋಗಿ ಪಾಂಡಿಚೇರಿಯಲ್ಲಿ ಬ್ರಿಟಿಷರ ವಿರುದ್ಧ ಸೆಣೆಸುತ್ತಿದ್ದ. ಇತ್ತ ನಂಜರಾಜ ಮೈಸೂರಿನಲ್ಲಿಯೂ ವಿಪರೀತ ಕಿರುಕುಳ ಕೊಡುತ್ತಿದ್ದ. ಆಗ ಅರಸರು ಹೈದರನಿಗೆ ಹೇಳಿ ಕಳಿಸಿದರು. ಅವನು ಚಿಕ್ಕ ತುಕಡಿಯೊಂದಿಗೆ ಬಂದು ನಂಜರಾಜನ ಮೇಲೆ ಧಾಳಿ ಮಾಡಿ ಅವನನ್ನು ಮಣಿಸಿದ.  ಅದೇ ಸಮಯದಲ್ಲಿ ಮರಾಠರ ಪೇಶ್ವಾ ವಿಸಾಜಿ ಪಂತ್ ಇಪ್ಪತ್ತು ಸಾವಿರ ಅಶ್ವಪಡೆಯೊಂದಿಗೆ ದಂಡೆತ್ತಿ ಬಂದು ದೇವನಹಳ್ಳಿ ಮತ್ತು ಬಳ್ಳಾಪುರದ ಗಡಿಯಲ್ಲಿ ನಿಂತ. ಹೈದರನ ಬಳಿ ಕೇವಲ ಎರಡು ಸಾವಿರ ಕಾಲಾಳು ಮತ್ತು ಇನ್ನೂರು ಅಶ್ವಾರೋಹಿಗಳು ಮಾತ್ರ ಇದ್ದರು.

ಹೈದರನನ್ನು ಸುಲಭವಾಗಿ ಸೋಲಿಸುವ ಇಂತಹ ಅವಕಾಶ ಮತ್ತೆ ಸಿಗದು ಎಂದುಕೊಂಡು ರಾಜಮಾತೆ – ಬುದ್ದಿ ರಾಣಿ- ಖಂಡೇರಾವ್ ಮತ್ತು ಪ್ರಧಾನಿ ವೆಂಕಟಪತಿಯನ್ನು ಕರೆಸಿ ಶ್ರೀರಂಗಪಟ್ಟಣದ ಗರ್ಭಗುಡಿಯಲ್ಲಿ ಕಾರಸ್ಥಾನದ ಯೋಜನೆ ಮಾಡಿದರು. ಕೋಟೆಯ ಮೇಲಿದ್ದ  ಫಿರಂಗಿಯನ್ನು ಹೈದರಾಲಿಯ ಮನೆಯ ಕಡೆಗೆ ತಿರುಗಿಸಿದರು. ಅಂದು ಶ್ರೀರಂಗಪಟ್ಟಣದ ಕಡೆಗೆ ಬಂಡ ಹೈದರಾಲಿಯ ಮೇಲೆ ಇದ್ದಕ್ಕಿದ್ದಂತೆ ಗುಂಡಿನ ದಾಳಿ ಆಯಿತು. ಆಶ್ಚರ್ಯದಿಂದ ಅವನು ನೋಡಿದಾಗ ಬಂದೂಕು ಅವನ ಕಡೆಗೆ ತಿರುಗಿತ್ತು ಮತ್ತು ಅದರ ಹಿಂದೆ ಖಂಡೆ ರಾವ್ ನಿಂತಿದ್ದ. ತಕ್ಷಣ ಅವನು ಹಿಂದಿರುಗಿ ತನ್ನ ಆಪ್ತರಲ್ಲಿ ಕೆಲವರ ಕೈಯಲ್ಲಿ ಹಣ ಒಡವೆ ಇತ್ಯಾದಿಗಳನ್ನು ಕೊಟ್ಟು ತನ್ನ ಚಿಕ್ಕಪ್ಪ ಇಬ್ರಾಹಿಂ ಸಾಹೇಬನ ಬಳಿಗೆ ಕಳಿಸಿ ನಂತರ ತಾನು ಕುದುರೆ ಏರಿ ಒಂದೇ ರಾತ್ರಿಯಲ್ಲಿ ಬೆಂಗಳೂರು ತಲುಪಿದ.

ಮಾರನೆಯ ದಿನ ಬೆಳಿಗ್ಗೆ ಖಂಡೆ ರಾವ್ ಹೈದರನ ಮನೆಗೆ ಹೋಗಿ ಕೂಟ. ಅವನ ಮಕ್ಕಳು ಹೆಂಡತಿ ಎಲ್ಲರನ್ನೂ ಕರೆದುಕೊಂಡು ಬಂದು ಕೋಟೆಯೊಳಗೆ ಒಂದು ಮನೆಯಲ್ಲಿ ಇರಿಸಿದ. ಆಗ ಟಿಪ್ಪುಗೆ ಎಂಟು ವರ್ಷ ವಯಸ್ಸು. ಅಲ್ಲಿ ಅವರಿಗೆ ದಿನಂಪ್ರತಿ ನೀಡಬೇಕಾದ ಆಹಾರ ಎಲ್ಲವನ್ನೂ ಕಟ್ಟುನಿಟ್ಟುಗೊಳಿಸಿ ಸುತ್ತ ಪಹರೆ ಹಾಕಿಸಿದ. ಅರಸರಿಗೆ ಹೇಳಿ ಹೈದರನ ಕುದುರೆ, ಆನೆಗಳು, ಒಂಟೆಗಳು, ಶಸ್ತ್ರಾಸ್ತ್ರಗಳು ಎಲ್ಲವನ್ನು ಎತ್ತಿಕೊಂಡು ಬಂದು ಕೋಟೆಯೊಳಗೆ ಇಟ್ಟುಕೊಂಡ. 

ಈ ಸಮಯದಲ್ಲೇ ಟಿಪ್ಪು ಸುಲ್ತಾನ್ ಕೋಟೆಯೊಳಗಿನ ಬಾಲಕೃಷ್ಣನ ದೇವಸ್ಥಾನದ ಬಳಿ ಆಡುತ್ತಿದ್ದುದು. ಆ ದೇವಸ್ಥಾನವನ್ನು ಟಿಪ್ಪು ಕೊನೆಯವರೆಗೆ ರಕ್ಷಿಸಿದ. ಅತ್ತ ಬೆಂಗಳೂರಿನಲ್ಲಿ ಹೈದರಾಲಿ ತನ್ನ ನಂಬಿಕಸ್ಥರನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿದ್ದಾಗ ಪಾಂಡಿಚೇರಿಯಿಂದ ಸೈನ್ಯ ಹಿಂದಿರುಗಿತು. ಮರಾಠರು ದೇವನಹಳ್ಳಿ ಮತ್ತು ಬಳ್ಳಾಪುರದ ಗಡಿಯಲ್ಲಿ ಬಂದು ನಿಂತಿತ್ತಲ್ಲಾ ಅವರನ್ನು ಬೆಂಗಳೂರಿನೊಳಗೆ ಬರಲು ಬಿಡಬಾರದೆಂದು ಹೈದರ್ ಒಂದು ಸಾವಿರ ಅಶ್ವಾರೋಹಿ ಪಡೆ ಎರಡು ಸಾವಿರ ಕಾಲಾಳುಗಳನ್ನು ನೆಲಮಂಗಲದ ಬಳಿಗೆ ಮರಾಠರನ್ನು ಎದುರಿಸಲು ಕಳಿಸಿದ. 

ಮರಾಠರ ಭಾರಿ ಸೈನ್ಯವನ್ನು ಎದುರಿಸಲು ಅವರು ಹೆಣಗಾಡುತ್ತಿದ್ದಾಗ ಅದೃಷ್ಟವಶಾತ್ ವಿಸಾಜಿ ಪಂತ್ ಗೆ ಪೂನಾಗೆ ಹಿಂದಿರುಗಲು ಆಜ್ಞೆ ಬಂದಿತು. ಅವನು ತಕ್ಷಣ ಹೈದರಾಲಿ ಜೊತೆಗೆ ಒಪ್ಪಂದ ಮಾಡಿಕೊಂಡ. ಅದರ ಪ್ರಕಾರ ಹೈದರ್ ಮರಾಠರಿಗೆ ಮೂರು ಲಕ್ಷ ವರಹಗಳನ್ನು ಕೃಷ್ಣಗಿರಿ ಮತ್ತು ಬಾರಾಮಹಲ್ ಪ್ರಾಂತ್ಯವನ್ನು ಬಿಟ್ಟುಕೊಟ್ಟರೆ ಹಿಂದಿರುಗುವುದಾಗಿ ಹೇಳಿದ್ದರಿಂದ ಹೈದರ್ ತನ್ನ ಹಣವನ್ನೇ ಕೊಟ್ಟು ಒಪ್ಪಂದ ಮಾಡಿಕೊಂಡ. 

ಅಲ್ಲಿಂದ ಮುಂದೆ ಒಂದು ಯುದ್ಧಪ್ರಸಂಗ ಬರುತ್ತದೆ. ಚಿಕ್ಕದಾಗಿ ಹೇಳಬೇಕೆಂದರೆ  ಮೈಸೂರು ಅರಸರು ಖಂಡೆ ರಾವ್ ನೇತೃತ್ವದಲ್ಲಿ ಹರಪನಹಳ್ಳಿಯಲ್ಲಿ ಹೈದರನನ್ನು ಸೋಲಿಸಲು ಸೈನ್ಯ ಕಳಿಸುತ್ತಾರೆ. ಹೈದರಾಲಿ ಬಳಿ ಸೈನ್ಯ ಇಲ್ಲದ್ದರಿಂದ ಅವನೊಂದು ಕುತಂತ್ರ ಮಾಡಿ ನಂಜರಾಜನ ಬಳಿಗೆ ಹೋಗಿ ಅವನ ಹತ್ತಿರ ಸೈನ್ಯದ ನೆರವು ಪಡೆಯುತ್ತಾನೆ.

ನಂತರ ಎರಡು ಪತ್ರಗಳನ್ನು ಬರೆಸಿ ಅವು ಖಂಡೇರಾವ್ ಮತ್ತು ವೆಂಕಟಪತಿ ಕೈಗೆ ಸಿಗುವಂತೆ ತಂತ್ರ ಹೂಡುತ್ತಾನೆ. ಅದರಲ್ಲಿ ಅರಸರ ಹೆಸರಿನಲ್ಲಿ ತಕ್ಷಣ ಖಂಡೇ ರಾವ್ ನನ್ನೂ ವೆಂಕಟಪತಿಯನ್ನೂ ಬಂಧಿಸುವ ಆಜ್ಞೆ ಇರುತ್ತದೆ. ಅದನ್ನು ನಿಜ ಎಂದು ತಿಳಿದ ಅವರಿಬ್ಬರೂ ತಕ್ಷಣ ಸೈನ್ಯವನ್ನು ಕೈಬಿಟ್ಟು ಜಾಗ ಖಾಲಿ ಮಾಡುತ್ತಾರೆ. ಅವರ ಪಲಾಯನದ ಸುದ್ದಿ ತಿಳಿದ ಕೂಡಲೇ ಹೈದರ್ ಅವರ ಸೈನ್ಯ ಮತ್ತು ಶಸ್ತ್ರಾಸ್ತ್ರಗಳನ್ನು ತನ್ನ ವಶಕ್ಕೆ ಪಡೆದುಕೊಂಡು ಅರಸರಲ್ಲಿಗೆ ಬರುತ್ತಾನೆ.

ಎಲ್ಲವನ್ನೂ ಅರಸರಿಗೆ ಒಪ್ಪಿಸಿ ಮರಾಠರ ಜೊತೆ ಒಪ್ಪಂದ ಮಾಡಿಕೊಂಡು ಸ್ವಂತ ಹಣ ಕೊಟ್ಟುದನ್ನೂ ತಿಳಿಸಿ ಸಲಾಮು ಮಾಡುತ್ತಾನೆ. 

ತಾವು ಅಂದುಕೊಂಡಿದ್ದೆ ಬೇರೆ ನಡೆದಿದ್ದೇ ಬೇರೆ ಎಂದು ಗಾಭರಿಯಾದ ಅರಸರು ಮತ್ತು ರಾಜಮಾತೆ ಹೈದರನನ್ನು ಮೆಚ್ಚಿ ಏನು ಇನಾಮು ಬೇಕೆಂದು ಕೇಳುತ್ತಾರೆ. ಅವನು ಖಂಡೇರಾವ್ ನನ್ನು ನನಗೆ ಕೊಡಿ ಎಂದು ಕೇಳುತ್ತಾನೆ. ಸರಿ ಎಂದು ಅವನನ್ನು ಹಿಡಿದು ತರಿಸಿ ಹೈದರನಿಗೆ ಒಪ್ಪಿಸುವಾಗ ರಾಜಮಾತೆ, ಹೈದರ್ ಅವನನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಿಳಿದು ಖಂಡೇರಾವ್ ಗೆ ಏನೂ  ಮಾಡಬೇಡಾ ಎಂದು ಕೇಳಿಕೊಳ್ಳುತ್ತಾಳೆ. ಅದಕ್ಕೆ ಹೈದರ್ “ಅವನನ್ನು ಗಿಣಿ ಸಾಕಿದ ಹಾಗೆ ಸಾಕುತ್ತೀನಿ ನೀವು ಚಿಂತಿಸಬೇಡಿ” ಎಂದು ವಚನ ಕೊಡುತ್ತಾನೆ. 

ಆದರೆ ಹೈದರ್ ತನ್ನ ಮಾತನ್ನು ಉಳಿಸಿಕೊಂಡಿದ್ದು ಹೀಗೆ: ಒಂದು ದೊಡ್ಡ ಪಂಜರ ಮಾಡಿಸಿ ಅದರಲ್ಲಿ ಖಂಡೆ ರಾವ್ ನನ್ನು ಇಟ್ಟು ಅವನಿಗೆ ಬರಿ ಅಣ್ಣ ಮತ್ತು ಮೆಣಸಿನಕಾಯಿ ಕೊಡಬೇಕೆಂದು ಆಜ್ಞೆ ಮಾಡಿ ಪಂಜರವನ್ನು ಮಾರುಕಟ್ಟೆಯ ನಡುವಲ್ಲಿ ಇರಿಸಿ ಹೋಗಬರುವವರೆಲ್ಲ ಅವನನ್ನು ಬೈದು ಉಗಿಯಬೇಕೆಂದು ಡಂಗುರ ಸಾರಿಸುತ್ತಾನೆ. 

ಹಾಗೆ ಪಂಜರದಲ್ಲಿ ಬಂದಿಯಾದ ಖಂಡೆ ರಾವ್ ಸತ್ತ ಮೇಲೂ ಒಂದು ವರ್ಷದವರೆಗೆ ಅವನ ಅಸ್ತಿಪಂಜರ ಅಲ್ಲೇ ನೇತಾಡುತ್ತಿತ್ತು.

‍ಲೇಖಕರು Admin

September 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: