ಪ್ರಕಾಶ್ ಕೊಡಗನೂರ್
೧
ಹಲೋ ನಿಲ್ಲಿ…
ಹಾಗೆಲ್ಲ ಅಪ್ಪಣೆಯಿಲ್ಲದೆ
ಸಾಹೇಬರ ಚೇಂಬರಿಗೆ
ಹೋಗುವ ಹಾಗಿಲ್ಲ
ಯಾರು ನೀವು?
ಏನಾಗಬೇಕಿತ್ತು?
ಐಡೆಂಟಿಟಿ ಕಾರ್ಡ್ ಇದೆಯಾ?
ಮೊದಲು ಅವರ
ಆಪ್ತ ಸಹಾಯಕರನ್ನು ಕಾಣಿ
ಪ್ರಮುಖ ಗಂಭೀರ
ವಿಷಯವಿದ್ದರಷ್ಟೆ
ಭೇಟಿಯ ದಿನಾಂಕ ಸಮಯವನ್ನು
ಅವರು ನಿರ್ಧರಿಸುತ್ತಾರೆ;
ಇಲ್ಲದಿದ್ದರೆ ಇಲ್ಲ
ಇಲ್ಲೇನಿದ್ದರೂ
ಸಾಹೇಬರ ಸಂಬಂಧಿಕರು
ಪರಿಚಿತರು ವಿಐಪಿಗಳಿಗಷ್ಟೆ
ನೇರ ಪ್ರವೇಶದ ಅವಕಾಶ!

೨
ನೋಡ್ರಯ್ಯಾ…
ಇವತ್ತಿಗೆಂಟು ದಿನಕ್ಕೆ
ಸರಿಯಾಗಿ ಎರಡು ದಿವ್ಸ
ಕಮಿಷನರ್ ಸಾಹೇಬ್ರು
ನಮ್ಮಾಫೀಸಿನ
ಇನ್ಸ್ಪೆಕ್ಷನ್ ಇಟ್ಕೊಂಡಿದ್ದಾರೆ
ಅಂತ್ಹೇಳೊದಕ್ಕೆ ನಿಮ್ಮನ್ನಷ್ಟೆ
ಗುಪ್ತವಾಗಿ ಇಲ್ಲಿ ಕರೆದಿರೋದು
ಮೆಮೋ ಗಿಮೋ ಅಂತೆಲ್ಲ
ಎಲ್ಲರನ್ನು ಸೇರಿಸಿ
ಎಲ್ಲ ಹೇಳೋಕಾಗಲ್ಲ
ಅದೇನಿದ್ರು ಅಧಿಕೃತವಾಗಿ
ನಾಳೆಯೋ ನಾಡಿದ್ದೋ
ಒಟ್ಟಿಗೆ ಇಟ್ಕಳನ
ಅಂದ್ಹಾಗೆ…
ಸಾಹೇಬ್ರು ಸಕಲ ಕಲಾವಲ್ಲಭರು
ತುಂಬ ನಾಜೂಕಾಗಿ ಅವರನ್ನ
ಅವ್ರ ಜೊತೆ ಬರೋರನ್ನ
ನಾವಷ್ಟೆ ಹ್ಯಾಂಡಲ್ ಮಾಡ್ಬೇಕಾಗಿರೋದು
ಯಾಕಂತ ನಿಮಗೆಲ್ಲ ಗೊತ್ತೇ ಇದೆ
ಇಲ್ಲಾಂದ್ರೆ ನಮ್ಮೆಲ್ಲ
ಹಗರಣಗಳು ಹೊರಬಿದ್ದು
ನಾವು ಜೈಲು ಪಾಲಾಗೋದು ಗ್ಯಾರಂಟಿ
ಗುಂಡು ತುಂಡು ಕಾಸೇನೋ
ಸಲೀಸಾಗಿ ಹೊಂದಿಸ್ಬಹುದು
ಆದ್ರೆ ಮೂಗ್ಬಟ್ಟಿನದ್ದೇ ಸಮಸ್ಯೆ
ಕಮಿಷನರ್ ಸಾಹೇಬ್ರಿಗೆ
ಫ್ರೆಶ್ ಇರೋರೆ ಆಗ್ಬೇಕಂತೆ
ನಮ್ಮಾಫೀಸ್ನಲ್ಲಿ ರೀಸೆಂಟಾಗಿ
ಜಾಯಿನ್ ಆಗಿರೋರಿಗೇನು ಬರವಿಲ್ಲ
ಹಿಂದು-ಮುಂದಿಲ್ಲದ ಗಿಣಿಮರಿಯೊಂದನ್ನ
ಹುಡುಕಿ ಹೇಗಾದ್ರು ಸರಿ
ಅವರಿಗೆ ಅಡ್ಜಸ್ಟ್ ಮಾಡ್ಬಿಡಿ
ಆಮೇಲೆ… ಯ್ನೋರೆ
ಪ್ಲಸ್ಪಾಯಿಂಟ್ ಏನಂದ್ರೆ
ಸಾಹೇಬ್ರು ನಿಮ್ಮ ಕುಲಬಾಂಧವರು
ತಪ್ ತಿಳ್ಕಬೇಡಿ
ಎಲ್ಲದ್ರಲ್ಲಿ ನೀವೇ ಮುಂದರಿಬೇಕು
ಆಗ ಮಾತ್ರ ಅವ್ರಿಗೆ
ನಮ್ಮೇಲೆ ನಂಬ್ಕೆ ಬರತ್ತೆ;
ಎಲ್ಲ ಸುಲಭವಾಗತ್ತೆ!

೩
ಸ್ಟ್ಯಾಂಡಪ್ ಫಸ್ಟ್…
ನೀನೇನು ನನ್ನ
ಸರೀಕನೇನಯ್ಯಾ ಕೂತ್ಕಳಕೆ?
ದೊಡ್ಡವರ ಹತ್ರ
ಹೇಗಿರಬೇಕು ಅನ್ನೋ
ಕಾಮನ್ಸೆನ್ಸ್ ಕೂಡ
ಇಲ್ದೇ ಇರೋನು
ಅದೆಷ್ಟರಮಟ್ಟಿಗೆ ಅಲ್ಲಿ
ಡ್ಯೂಟಿ ಮಾಡ್ತಿದೀಯ ಅಂತ
ಇಲ್ಲೇ ಗೊತ್ತಾಯ್ತು
ನೀನೊಬ್ಬ ಕೆಳದರ್ಜೆಯ
ನೌಕರನೆಂಬುದನು ಮರೆತು
ಸಹೋದ್ಯೋಗಿಗಳ ಸಹಿತ
ನಿನ್ನ ಮೇಲಧಿಕಾರಿಯೊಂದಿಗೂ
ಕಿರಿಕಿರಿ ಮಾಡ್ಕೊಂಡಿದೀಯ
ʻಕೆಟ್ಟದ್ದನ್ನ ಕೇಳ್ಬೇಡ
ನೋಡ್ಬೇಡ ಮಾತಾಡ್ಬೇಡʼವೆಂದು
ಮಹಾತ್ಮಾ ಗಾಂಧಿಯವರೇ ಹೇಳಿರುವಾಗ
ನೀನು ಅವರಿಗಿಂತ ದೊಡ್ಡವನೋ?
ಇನ್ಮುಂದೆ ಸಲ್ಲದ ವಿಚಾರದಲ್ಲಿ
ಮೂಗು ತೂರಿಸಿದರೆ
ಸಸ್ಪೆಂಡ್ ಅಷ್ಟೇ ಅಲ್ಲ;
ಕೆಲಸ ನಿರ್ವಹಿಸಲು
ಮಾನಸಿಕವಾಗಿ ಅಸ್ಥಿರನಾಗಿದ್ದೀಯೆಂದು
ವರದಿ ತರಿಸಿಕೊಂಡು
ಇಲಾಖೆಯಿಂದಲೇ ಗೇಟ್ಪಾಸ್
ಕೊಟ್ಬಿಡ್ತೇನೆ ಹುಷಾರ್!
0 ಪ್ರತಿಕ್ರಿಯೆಗಳು