ಪ್ರಕಾಶ್ ಕೊಡಗನೂರ್
1. ಸಾವು ಮತ್ತು ನಾವು
ಹೊತ್ತಲ್ಲದ
ಹೊತ್ತಿನಲಿ ಎದ್ದು
ಸದ್ದಿಲ್ಲದೆ
ನಿರಾಕಾರವ ಹೊದ್ದು
ಯಾರಿಗೂ ಅರಿವಾಗದೆ
ಮುಲಾಜಿಗೂ ಒಳಪಡದೆ
ಎಲ್ಲೆಂದರಲ್ಲಿ ಎರಗಿ
ಬೇಕಾದವರನ್ನು ಬೇಕಾಬಿಟ್ಟಿ
ಬಲಿಪಡೆವ ದಗಾಕೋರ
ಅವರಿವರೆಂದು
ಭೇದ ತೋರದೆ
ಅಕಾಲ ಸಕಾಲವೆಂದು
ಸಮಯ ಗುಣ ಸದೆ
‘ಜೀವ ಎತ್ತಾಕು’ವ
ನಿರ್ಲಜ್ಜ ನಿಷ್ಠುರ
ನಿರ್ಭಾವುಕ ತೀರ್ಪನ್ನೀಡುವ
ಸರ್ವಾಧಿಕಾರಿ ನ್ಯಾಯಾಧೀಶ
ಕನಸೂ ಬೇಡದ
ಮನಸೂ ಒಪ್ಪದ
ಅಂಧಾದರ್ಬಾರಿನ ದಿವಾನ;
ಸರ್ವರೊಳು ಸದಾ
ಭಯಾತಂಕ ಸೃಷ್ಟಿಸುವ
ನಿಷ್ಕರುಣ ಸೈತಾನ
ಆದರೆ…
ತಾನು ಮಾತ್ರ
ಕೊನೆ ಮೊದಲಿಲ್ಲದ
ಮಹಾಚೇತನ!
2. ಸ್ವಗತ
ಭಾವದ ಅಲೆಯಲಿ ತೇಲುತ
ಮೋಹದ ಬಲೆಯಲಿ ಬಿಕ್ಕುತ
ದಾಹದ ಕಡಲಲಿ ಉಕ್ಕುವ
ಪ್ರೀತಿಗೆ ತೃಪ್ತಿ ಕಾಣೆ
ವೃತ್ತಿಪರತೆಯಲಿ ಉರುಳುತ
ಚಿರಬೇನೆಯಲಿ ನರಳುತ
ಏಕತಾನತೆಯಲಿ ಕೊಳೆವ
ಬದುಕಿಗೆ ದಿಕ್ಕು ಕಾಣೆ
ಭೂತಾರಾಧನೆಯಲಿ ಬೇಯುತ
ಭವಿಷ್ಯತ್ತಿನಾತಂಕದಲಿ ಕೊರಗುತ
ವರ್ತಮಾನದಲಿ ಹಳಸುವ
ಮನಸಿಗೆ ಕನಸು ಕಾಣೆ
ಸಹನೆಯಲಿ ಸಾಯುತ
ಕ್ಷೋಭೆಯಲಿ ಸಿಡಿಯುತ
ಸಮತೆಯಲಿ ಎಡವುವ
ಬುದ್ಧಿಗೆ ಬೆಳಕು ಕಾಣೆ
ಇದೆಲ್ಲದರ ನಡುವೆ
ಪವಾಡವೆಂಬ೦ತೆ ಬೆಸೆದ
ಭರವಸೆಯೊಂದು ಉಳಿದಿದೆ
ಎಂಬುದಷ್ಟೇ ಸದ್ಯದ ಆಣೆ
0 ಪ್ರತಿಕ್ರಿಯೆಗಳು