ದೇಶದ ಎಲ್ಲೆಡೆ ಚರ್ಚೆ ಹುಟ್ಟು ಹಾಕಿರುವ, ಪ್ರತಿಭಟನೆಯ ಅಲೆ ಏಳುವಂತೆ ಮಾಡಿರುವ ಪೌರತ್ವ (ತಿದ್ದುಪಡಿ) ಕಾಯಿದೆ ೨೦೧೯ ಕುರಿತು ‘ಬಹುರೂಪಿ’ ಕೃತಿಯೊಂದನ್ನು ಹೊರತಂದಿದೆ.
ನೀವು ತಿಳಿಯಲೇಬೇಕಾದ ವಿಷಯಗಳನ್ನು ನೇರವಾಗಿ, ಸರಳವಾಗಿ ಪ್ರಶ್ನೋತ್ತರ ರೂಪದಲ್ಲಿ ಮುಂದಿರಿಸಿದೆ.
ನಾಡಿನ ಖ್ಯಾತ ವಿಶ್ಲೇಷಕ ರಾಜಾರಾಂ ತಲ್ಲೂರು ಅವರು ಈ ಕೃತಿಯನ್ನು ರಚಿಸಿದ್ದಾರೆ.
ಈ ಕೃತಿಯ ಬೆಲೆ ೫೦ ರೂ
ಇದನ್ನು ಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
ಈ ಕೃತಿ ಏಕೆ ಬರೆದೆ ಎಂದು ರಾಜಾರಾಮ್ ಬರೆದಿರುವ ಮಾತುಗಳು ಇಲ್ಲಿವೆ-
ರಾಜಾರಾಂ ತಲ್ಲೂರು
ಜನರಿಂದ ಜನರಿಗಾಗಿ ಇರಬೇಕಾದ ಜನರ ಸರ್ಕಾರಗಳು ತಮ್ಮ ಕರ್ತವ್ಯ ನಿರ್ವಹಿಸುವುದಕ್ಕೆ ಇರುವ ಏಕೈಕ ದಿಕ್ಸೂಚಿ-ಮಾರ್ಗದರ್ಶಿ-ಮಾನದಂಡ ಎಂದರೆ “ಸಂವಿಧಾನ.”
ಆದರೆ ಯಾವ ಸಂವಿಧಾನದ ಹೆಸರಿನಲ್ಲಿ ಅಧಿಕಾರದ ಪ್ರಮಾಣವಚನ ಸ್ವೀಕರಿಸಿದ್ದಾರೋ ಅದೇ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಸ್ವಹಿತಾಸಕ್ತಿಗಳನ್ನು ಸಾಧಿಸಲು ಹೊರಟಾಗ ಪೌರತ್ವ (ತಿದ್ದುಪಡಿ) ಕಾಯಿದೆ 2019ರಂತಹ ಕಾಯಿದೆಗಳು ಶಾಸನಸಭೆಯಲ್ಲಿ ಸಿದ್ಧಗೊಳ್ಳುತ್ತವೆ.
ಈಗ ವಿವಾದಕ್ಕೀಡಾಗಿರುವ ಪೌರತ್ವ (ತಿದ್ದುಪಡಿ) ಕಾಯಿದೆ 2019ಯ ವಿಷಯದಲ್ಲಿ ಇದೇನೂ ಹೊಸದಲ್ಲ. ಈಗಾಗಲೇ ಹತ್ತು ಬಾರಿ ತಿದ್ದುಪಡಿ ಕಂಡಿರುವ ಈ ಕಾಯಿದೆ ಈ ಹಿಂದೆ ಕನಿಷ್ಠ ಎರಡು ಬಾರಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಬದಲಾಗಿದೆ. ಆಯಾಯ ಕಾಲದ ರಾಜಕೀಯ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ತೆಗೆದುಕೊಂಡ ಈ ದೂರದ್ರಷ್ಟಿ ಇಲ್ಲದ ನಿರ್ಧಾರಗಳು ನಾವು ಭಾರತೀಯರು ನಮ್ಮ ಶಾಸಕಾಂಗವನ್ನು ಲಘುವಾಗಿ ಪರಿಗಣಿಸಿರುವುದರ ಫಲ ಎಂದೇ ಅನ್ನಿಸುತ್ತದೆ.
ನಮ್ಮ ಶಾಸಕರು – ಸಂಸದರು ನಮಗೆ ರಸ್ತೆ, ಕೈಗಾರಿಕೆ, ಸವಲತ್ತು, ಪರಿಹಾರದ ಗಂಟುಗಳನ್ನು ತರಲು ಇರುವ ನೆಂಟರು ಎಂಬ ಜನಪ್ರಿಯ ಅಪಕಲ್ಪನೆಯ ಕಾರಣದಿಂದಾಗಿ ಅವರ “ಶಾಸನಸಭೆಯ ಜವಾಬ್ದಾರಿಗಳು ಮತ್ತು ಶಾಸನ ರಚನೆಯ ಕೌಶಲಗಳು” ಅಡಿಬಿದ್ದಿವೆ. ಸಂವಿಧಾನದ ಚೌಕಟ್ಟಿನೊಳಗೆ ಜನರ ಆಶೋತ್ತರಗಳನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಇಂದು ಶಾಸನಸಭೆಗಳಲ್ಲಿ ಕಾಣಿಸುತ್ತಿಲ್ಲ. ಶಾಸನಸಭೆಗಳುದುಡಿಮೆಯ,ಗಳಿಕೆಯ ಹಾದಿಗಳಾಗಿಬಿಟ್ಟಿವೆ.
ಇಂತಹದೊಂದು ವಿಪರೀತ ಸ್ಥಿತಿಯಲ್ಲಿ, ಸಂವಿಧಾನದ ರಕ್ಷಣೆಯನ್ನು ಗಣತಂತ್ರದ ಉಳಿದೆರಡು ಆಧಾರ ಸ್ಥಂಭಗಳಾದ ನ್ಯಾಯಾಂಗ ಮತ್ತು ಕಾರ್ಯಾಂಗಗಳು ಹೊರುತ್ತವೆ ಎಂಬ ನಿರೀಕ್ಷೆಯೂ ಅತಿಯೆನ್ನಿಸುವ ಹಂತವನ್ನು ನಾವು ತಲುಪಿದ್ದೇವೆ. ಇನ್ನು ಸ್ವಘೋಷಿತ ಮಾಧ್ಯಮಗಳ ನಾಲ್ಕನೆಯ ಸ್ಥಂಭವಂತೂ ಸಂಪೂರ್ಣ ಮಾರಿಕೊಂಡು ನಾರುತ್ತಿದೆ. ಪರಿಸ್ಥಿತಿ ಹೀಗಿರುವಾಗ, ಸಂವಿಧಾನದ ರಕ್ಷಣೆಯ ಜವಾಬ್ದಾರಿಯೀಗ ಅದರ ಆಸಲು ಫಲಾನುಭವಿಗಳಾದ ಪ್ರಜೆಗಳ -ಅಂದರೆ ನಮ್ಮ ಕೈಗೇ ಬಂದಂತಾಗಿದೆ. ಇಂತಹದೊಂದು ಎಚ್ಚರ ಮೂಡತೊಡಗಿರುವುದು ಆಶಾದಾಯಕ ಬೆಳವಣಿಗೆ.
ಪೌರತ್ವ (ತಿದ್ದುಪಡಿ) ಕಾಯಿದೆ 2019 ರ ಹಿನ್ನೆಲೆ ಏನು? ಅದಕ್ಕೆ ಆಕ್ಷೇಪಗಳು ಏಕೆ ವ್ಯಕ್ತವಾಗುತ್ತಿವೆ ಎಂಬ ವಿವರಗಳನ್ನು ಒಂದೆಡೆ ಕಲೆಹಾಕಿ ಸರಳವಾಗಿ ವಿವರಿಸುವ ಪ್ರಯತ್ನ ಇದು. ಓದು ಸರಳವಾಗಬೇಕು ಎಂಬ ಉದ್ದೇಶದಿಂದ ಇಡಿಯ ವಿವಾದವನ್ನು ಪ್ರಶ್ನೋತ್ತರ ರೂಪದಲ್ಲಿ ಇಲ್ಲಿ ವಿವರಿಸಲಾಗಿದೆ.
0 ಪ್ರತಿಕ್ರಿಯೆಗಳು