ಪುಸ್ತಕ ಪ್ರೀತಿಯ ಗುರು ಪ್ರೊ ಚಂದ್ರಶೇಖರ ಪಾಟೀಲ…

ಡಾ ಪ್ರಕಾಶ ಗ ಖಾಡೆ

ಪ್ರೊ.ಚಂದ್ರಶೇಖರ ಪಾಟೀಲ ಅವರದು ಅಪರೂಪದ ಸಮಾಜಮುಖಿ ವ್ಯಕ್ತಿತ್ವ. ಎಲ್ಲರೊಂದಿಗೆ ನಗುಮೊಗದಿಂದ ಬೆರೆವ ಅವರ ಗುಣ ಮತ್ತು ಸ್ವಭಾವ ಮೆಗ್ನೆಟ್ ರೀತಿಯಲ್ಲಿ ಆಕರ್ಷಿಸುವಂಥದು. ಅವರಲ್ಲಿ ಹಮ್ಮು ಬಿಮ್ಮುಗಳಿಗೆ ಆಸ್ಪದವಿರಲಿಲ್ಲ. ಆದರೆ ಕಪಟತನದ ರಾಜಕಾರಣ, ವಿದ್ವಾಂಸರು, ಸ್ವಾಮಿಜಿಗಳು ಹಾಗೂ ಸಾಹಿತಿಗಳನ್ನು ಅವರೆಂದು ಹತ್ತಿರ ಸುಳಿವಗೊಡುತ್ತಿರಲಿಲ್ಲ.

ಜಗಳಕ್ಕೆ ನಿಲ್ಲುವ ಸ್ವಭಾವ ಅವರದ್ದಾದರೂ ಒಂದು ಅರ್ಥಪೂರ್ಣವಾದ ಹಾಗೂ ಭವಿಷ್ಯತ್ತಿನಲ್ಲಿ ನಾಲ್ಕು ಜನಕ್ಕೆ ಪ್ರಯೋಜನಕಾರಿಯಾದ ವಾಗ್ವಾದ ಅವರದ್ದಾಗಿರುತ್ತಿತ್ತು.

ನಾನು ಈಗ ಮೂವತ್ತು ವರುಷಗಳ ಹಿಂದೆ ೧೯೮೮ – ೯೦ ರ ಅವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಎಂ.ಎ. ತರಗತಿ ಓದುತ್ತಿರುವಾಗ ಮಾನ್ಯ ಪ್ರೊ.ಚಂಪಾ ಅವರೊಂದಿಗೆ ಹೆಚ್ಚು ಒಡನಾಟದ ಅವಕಾಶ ದೊರೆಯಿತು. ನಾನು ಓದುತ್ತಿರುವಾಗ ವಿ.ವಿ.ಯಲ್ಲಿ ಒಂದು ವಿದ್ವಾಂಸರ ಪಡೆಯೇ ಇತ್ತು, ಆ ಹೊತ್ತಿಗೆ ಬಂಡಾಯದ ಕಾವು ರಾಜ್ಯದಲ್ಲಿ ತುಂಬಾ ಪ್ರಖರವಾಗಿತ್ತು.

ಮೈಸೂರು ಕರ್ನಾಟಕ ಭಾಗದಲ್ಲಿ ಬರಗೂರು ರಾಮಚಂದ್ರಪ್ಪನವರು, ಹೈದರಾಬಾದ ಕರ್ನಾಟಕ ಭಾಗದಲ್ಲಿ ಚೆನ್ನಣ್ಣ ವಾಲೀಕಾರ ಅವರು, ನಮ್ಮ ಧಾರವಾಡ ಭಾಗದಲ್ಲಿ ಉತ್ತರ ಕರ್ನಾಟಕದ ಲೇಖಕರಿಗೆ ಪ್ರೊ.ಚಂಪಾ ಅವರು ಒಂದು ಮಾಡೆಲ್ ಆಗಿದ್ದರು. ಮುಂಚೂಣ ಯಲ್ಲಿ ನಿಂತು ಅವರು ಸಂಘಟಿಸುತ್ತಿದ್ದ ಸಭೆ, ಸಮಾರಂಭ, ಸಮ್ಮೇಳನಗಳಲ್ಲಿ ನಾನೂ ಭಾಗಿಯಾಗುವ ಅವಕಾಶ ಸಿಕ್ಕಿದ್ದು ಈ ಹೊತ್ತಿಗೂ ನನ್ನೊಳಗೆ ಧರ‍್ಯ ಮತ್ತ ಆತ್ಮಾಭಿಮಾನದ ಮನೋಭಾವವನ್ನು ಗಟ್ಟಿಗೊಳಿಸಿದೆ.

ನಾವು ವಿ.ವಿ.ಯಲ್ಲಿ ಓದುತ್ತಿರುವಾಗ ಪ್ರೊ.ಚಂಪಾ ಅವರ ಹಿರಿತನದಲ್ಲಿ ರಾಣ ಬೆನ್ನೂರಿನಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯಮಟ್ಟದ ಸಮ್ಮೇಳನ ಜರುಗಿತು. ಈ ಸಮ್ಮೇಳನಕ್ಕಾಗಿ ವಿ.ವಿ. ಹಾಗೂ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದಲ್ಲಿ ‘ಸಾಹಿತ್ಯ ಮತ್ತು ಸಾಮಾಜಿಕ ಬದಲಾವಣೆ’ ಕುರಿತು ಪ್ರಬಂಧ ರಚಿಸಿಕೊಡುವ ಸ್ಪರ್ಧೆ ಏರ್ಪಡಿಸಲಾಗಿತ್ತು.

ನಾನೂ ಈ ಪ್ರಬಂಧವನ್ನು ಬರೆದುಕೊಟ್ಟೆ, ಆಶ್ರ‍್ಯದ ಸಂಗತಿ ಎಂದರೆ ನಾನು ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೆ, ಮುಂದೆ ಈ ಲೇಖನವನ್ನು ಪ್ರೊ.ಚಂಪಾ ಅವರು ತಮ್ಮ ‘ಸಂಕ್ರಮಣ’ದಲ್ಲೂ ಪ್ರಕಟಿಸಿದರು. ರಾಣ ಬೆನ್ನೂರಿನಲ್ಲಿ ನಡೆದ ಸಮ್ಮೇಳನದ ಸಂದರ್ಭದಲ್ಲಿ ರವಿ ಬೆಳೆಗೆರೆ ಅವರು (ಆಗಿನ್ನು ಹಾಯ್ ಬೆಂಗಳೂರು ಚಾಲೂ ಆಗಿರಲಿಲ್ಲ.) ಪ್ರಶಸ್ತಿ ಪ್ರದಾನ ಮಾಡಿ ಪ್ರೊತ್ಸಾಹದ ಮಾತನಾಡಿದರು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಏನು ಬಹುಮಾನ ಕೊಟ್ಟರು, ಎಷ್ಟು ಮೊತ್ತ ಕೊಟ್ಟರು, ಈಗ ನೆನಪಿಲ್ಲ, ಆದರೆ ಈಗಲೂ ನೆನಪಿರುವ ಒಂದು ಸಂದರ್ಭ ಹೇಳಲೇಬೇಕು,
ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿರುವ ಅಂಚೆ ಕಛೇರಿಗೆ ನನ್ನ ಮನಿಯಾರ್ಡರ್ ಪಡೆಯಲು ಹೋಗಿದ್ದೆ. ಅಲ್ಲಿ ಚಂಪಾ ಅವರೂ ಬಂದಿದ್ದರು.

ವಿ.ವಿ.ಯಲ್ಲಿ ನಾನು ಕಂಡಂತೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಿದ್ದ ಪ್ರಾಧ್ಯಾಪಕರಲ್ಲಿ ಪ್ರೊ.ಚಂಪಾ ಹಾಗೂ ಡಾ.ಎಂ.ಎಂ.ಕಲಬುರ್ಗಿ ಅವರು ಮೇಲಸ್ತರದವರು. ಆಗಿನ್ನೂ ಪತ್ರ ವ್ಯವಹಾರವೇ ಪ್ರಧಾನವಾಗಿದ್ದ ಕಾಲ. ಸ್ವತಃ ಅಂಚೆ ಕಛೇರಿಗೆ ಬಂದು ಪೋಸ್ಟ್ ಮಾಡುವ ತಮ್ಮ ಕೆಲಸ ತಾವೇ ಮಾಡುವ ದೊಡ್ಡತನ ಅವರದ್ದಾಗಿತ್ತು. ಇನ್ನೊಬ್ಬರಿಗಾಗಿ ಕಾಯದೇ ಸ್ವತಃ ನಡೆದು ಬಂದು ಡಾ.ಕಲಬುರ್ಗಿಯವರು ಪೋಸ್ಟ ಬಾಕ್ಸಿನಲ್ಲಿ ಪತ್ರ ಹಾಕಿ ಮತ್ತೆ ತಮ್ಮ ಕೋಣೆಗೆ ತೆರಳುತ್ತಿದ್ದುದನ್ನು ನಾನು ಹಲವಾರು ಬಾರಿ ಕಂಡಿದ್ದೇನೆ. ಅವರಂತೆ ಪ್ರೊ.ಚಂಪಾ ಅವರು ಕೂಡ.
ಒಮ್ಮೆ ಹೀಗೆ ಪೋಸ್ಟ್ ಆಫೀಸಿನಲ್ಲಿ ಸಿಕ್ಕಾಗ ‘ಪ್ರಕಾಶ್, ಡಿಪಾರ್ಟಮೆಂಟ್ ಕಡೆಗೆ ಬನ್ನಿ,’ ಎಂದು ಹೇಳಿ ಹೋದರು.

ನಾನು ಕ್ಲಾಸು ಮುಗಿಸಿ ‘ವಿಶ್ವ ಚೇತನದಲ್ಲಿದ್ದ ಅವರ ಕೋಣೆಗೆ ಹೋದೆ. ಪ್ರೀತಿಯಿಂದ ಬರಮಾಡಿಕೊಂಡರು. ಅಲ್ಲಿ ತುಂಬಾ ಪುಸ್ತಕಗಳನ್ನು ಜೋಡಿಸಿ ಇಟ್ಟಿದ್ದರು. ನಾನು ಹೋದಾಗ ತುಂಬಾ ಆತ್ಮೀಯತೆಯಿಂದ ಕಂಡು ‘ಪ್ರಕಾಶ್, ನೀವು ಎರಡು ಪ್ರಶಸ್ತಿಗಳಿಗೆ ಭಾಜನರಾಗಿದ್ದೀರಿ. ಬಂಡಾಯ ಸಂಘಟನೆಯ ರಾಜ್ಯ ಮಟ್ಟದ ಪ್ರಶಸ್ತಿ, ಇದನ್ನು ಈಗಾಗಲೇ ಪ್ರದಾನ ಮಾಡಿದ್ದೇವೆ, ಜೊತೆಗೆ ‘ಸಂಕ್ರಮಣ ಕಾವ್ಯ ಪ್ರಶಸ್ತಿ’ಯಲ್ಲಿ ‘ನಿಮ್ಮ ನಸುಕಿನ ಚಿತ್ರಗಳು’ ಕವಿತೆಗೆ ಪ್ರಶಸ್ತಿ ಬಂದಿದೆ. ಕಾರಣ ಇಲ್ಲಿ ಒಳ್ಳೊಳ್ಳೆಯ ಪುಸ್ತಕಗಳಿವೆ, ಇದರಲ್ಲಿ ನಿಮಗೆ ಯಾವ ಪುಸ್ತಕ ಬೇಕೊ ಒಟ್ಟು ಐದು ನೂರು ಮೊತ್ತ ಆಗುವಷ್ಟು ಪುಸ್ತಕಗಳನ್ನು ತೆಗೆದುಕೊಳ್ಳಿ, ಎಂದರು.

ಕಾವ್ಯ, ಕಥೆ, ವೈಚಾರಿಕ ಚಿಂತನೆ, ಈ ಬಗೆಯಲ್ಲಿದ್ದ ಸುಮಾರು ಹತ್ತರಷ್ಟು ಪುಸ್ತಕಗಳನ್ನು ಆಯ್ಕೆಮಾಡಿಕೊಂಡಾಗ ಅವೆಲ್ಲವನ್ನೂ ತುಂಬಾ ಪ್ರೀತಿಯಿಂದ ಕೊಟ್ಟು ಬೆನ್ನು ತಟ್ಟಿದರು. ಅವರು ಅಂದು ಕೊಟ್ಟ ಪುಸ್ತಕಗಳು, ಅವುಗಳ ಓದಿನ ಜ್ಞಾನ ಇಂದೂ ನನ್ನೊಂದಿಗೆ ಇವೆ, ಜೊತೆಗೆ ಅವರ ಪುಸ್ತಕ ಪ್ರೀತಿಯ ಅಮೂಲ್ಯವಾದ ನೆನಪೂ ಮರೆಯಲಾದೀತೇ.? ಪ್ರಖರ ಚಿಂತನೆಗೆ ನಾಡಿನ ಬರಹಗಾರರನ್ನು ಸಜ್ಜುಗೊಳಿಸಿದ ಪ್ರೊ.ಚಂಪಾ ಜನವರಿ ೧೦ ರಂದು ನಮ್ಮನ್ನು ಅಗಲುವ ಮೂಲಕ ಕನ್ನಡ ವೈಚಾರಿಕ ಸಾಹಿತ್ಯಕ್ಕೆ ಬಹುದೊಡ್ಡ ಶೂನ್ಯ ತುಂಬಿದ್ದಾರೆ.

‍ಲೇಖಕರು Admin

January 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: