ವಸಂತ ಪ್ರಕಾಶನದಿಂದ ಮಕ್ಕಳ ಸಾಹಿತ್ಯ ಸುಗ್ಗಿ..

ಡಾ ಎಚ್ ಎಸ್ ವೆಂಕಟೇಶ ಮೂರ್ತಿ

ಕನ್ನಡ ಪುಸ್ತಕ ಪ್ರಕಾಶನ ಲೋಕದಲ್ಲಿ ವಸಂತ ಪ್ರಕಾಶನವು ಬಹಳ ಮುಖ್ಯವಾದದ್ದು. ಹಲವು ಸದಭಿರುಚಿಯ ಪುಸ್ತಕಗಳನ್ನು ಈ ಸಂಸ್ಥೆ ಪ್ರಕಟಿಸಿದೆ. ಹಿರಿಯ ಸಾಹಿತಿಗಳ ಬರಹಗಳ ಜೊತೆಗೆ ʼವ್ಯಕ್ತಿ ಚಿತ್ರ ಮಾಲೆʼ, ʼಆರೋಗ್ಯ ಚಿಂತನ ಮಾಲಿಕೆʼಯಂತಹ ಪುಸ್ತಕ ಮಾಲಿಕೆಗಳನ್ನು ಪ್ರಕಟಿಸಿದ ಹೆಮ್ಮೆ ವಸಂತ ಪ್ರಕಾಶನದ್ದು. ಈಗ ಅವರು ʼವಸಂತ ಬಾಲಸಾಹಿತ್ಯ ಮಾಲೆʼಯ ಅಡಿಯಲ್ಲಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಹಿರಿಯ ಕವಿಗಳಾದ ಶ್ರೀ ಎಚ್‌.ಎಸ್‌. ವೆಂಕಟೇಶಮೂರ್ತಿ ಅವರು ಈ ಮಾಲಿಕೆಯ ಸಂಪಾದಕರು. ಹನ್ನೆರೆಡು ಮಂದಿ ಲೇಖಕರ ಕೃತಿಗಳನ್ನು ಈ ಮಾಲಿಕೆಯಡಿಯಲ್ಲಿ ಪ್ರಕಟಿಸಲಾಗಿದೆ. ಈ ಮಾಲಿಕೆಯು ಇದೇ ತಿಂಗಳ ೨೪ರಂದು ಲೋಕಾರ್ಪಣೆಗೊಳ್ಳಲಿದೆ. ಈ ಮಾಲಿಕೆಗಾಗಿ ಎಚ್‌.ಎಸ್.‌ ವೆಂಕಟೇಶಮೂರ್ತಿ ಅವರು ಬರೆದಿರುವ ಪ್ರಸ್ತಾವನೆ ಇಲ್ಲಿದೆ.

| ನಿನ್ನೆಯ ಸಂಚಿಕೆಯಿಂದ ಮುಂದುವರೆದ ಭಾಗ |

ಪಂಜೆಯ ನಂತರ ನಾವು ನೆನೆಯಬೇಕಾದದ್ದು ಮಕ್ಕಳ ಸಾಹಿತ್ಯದ ರಾಜ ಮತ್ತು ರತ್ನ ಎಂದು ಖ್ಯಾತರಾಗಿರುವ ಜಿ.ಪಿ. ರಾಜರತ್ನಂ ಅವರನ್ನು. ಮಕ್ಕಳ ಕವಿತೆ, ಕಥೆಗಳನ್ನು ಸಮೃದ್ಧವಾಗಿ ಬರೆದು, ಬಾಲಸಾಹಿತ್ಯವನ್ನು ಶ್ರೀಮಂತಗೊಳಿಸಿದವರು ಜಿ.ಪಿ. ರಾಜರತ್ನಂ. ಅವರ ʼತುತ್ತೂರಿʼ ಹಾಡನ್ನು ಕೇಳಿ ಯಾವ ಮಗುವಿನ ಕಣ್ಣಲ್ಲಿ ನೀರೂರುವುದಿಲ್ಲ?!

ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಸರಿಗಮ ಪದನಿಸ ಊದಿದನು
ಸನಿದಪ ಮಗರಿಸ ಊದಿದನು

ತನಗೇ ತುತ್ತೂರಿ ಇದೆಯೆಂದ
ಬೇರಾರಿಗು ಅದು ಇಲ್ಲೆಂದ
ಕಸ್ತೂರಿ ನಡೆದನು ಬೀದಿಯಲಿ
ಜಂಬದ ಕೋಳಿಯ ರೀತಿಯಲಿ

ತುತ್ತೂರಿಯೂದುತ ಕೊಳದ ಬಳಿ
ನಡೆದನು ಕಸ್ತೂರಿ ಸಂಜೆಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲುಕಟ್ಟಿತು ನೀರೂರಿ

ಸರಿಗಮ ಊದಲು ನೋಡಿದನು
ಗಗಗಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯ್ತು
ಬಣ್ಣದ ತುತ್ತೂರಿ ಬೋಳಾಯ್ತು

ಬಣ್ಣದ ತುತ್ತೂರಿ ಹಾಳಾಯ್ತು
ಜಂಬದ ಕೋಳಿಗೆ ಗೋಳಾಯ್ತು

ತಮ್ಮ ಆಟಿಕೆಯೊಂದು ನಷ್ಟವಾದಾಗ ಮಕ್ಕಳಿಗಾಗುವ ನೋವು ಎಂಥದೆಂಬುದನ್ನು ಈ ಕವಿತೆ ನವುರಾಗಿ ವರ್ಣಿಸುತ್ತಾ ಇದೆ. ʼತುತ್ತೂರಿʼ ಪದ್ಯ ಓದಿದಾಗ ಮಕ್ಕಳ ಕಣ್ಣಲ್ಲಿ ನೀರು ಉಕ್ಕುವುದನ್ನು ನಾನು ನೋಡಿದ್ದೇನೆ. ನೋವಿನ ನವುರಾದ ಅನುಭವವನ್ನು ಮಕ್ಕಳಿಗೆ ಈ ಕವಿತೆ ನೀಡುತ್ತಾ ಇದೆ. ಭವಿಷ್ಯದ ಜೀವನ ಸಂಗ್ರಾಮಕ್ಕೆ ಮಕ್ಕಳನ್ನು ಸಿದ್ಧಪಡಿಸುವ ಕ್ರಮವಿದು. ಜೊತೆಗೆ ಮಕ್ಕಳು ತಮ್ಮ ಆಟಿಕೆಗಳನ್ನು ಇತರ ಮಕ್ಕಳೊಂದಿಗೆ ಹಂಚಿಕೊಂಡು ಸಂತೋಷಪಡಬೇಕೆಂಬ ಮರೆಮಾತೂ ಪದ್ಯದಲ್ಲಿದೆ. ಮಕ್ಕಳಿಗೆ ಸಹಜವಾದ ಎಲ್ಲವೂ ತನಗೇ ಬೇಕೆಂಬ ದೋಚುಬಾಕುತನದಿಂದ ನವುರಾದ ನೋವಿನ ಶಾಕ್ ಕೊಟ್ಟು ಅವರನ್ನು ಸಾಮೂಹಿಕ ಬದುಕಿಗೆ ಅಣಿಗೊಳಿಸುವ ಹುನ್ನಾರವೂ ಕವಿತೆಗೆ ಇದೆ. ಅದರೊಂದಿಗೆ ಕಾವ್ಯಭಾಷೆಯ ರಿಯಾಯ್ತಿಯ ಕಲ್ಪನೆಗಳನ್ನೂ ಮಕ್ಕಳಿಗೆ ಕಲಿಸುವಂತಿದೆ.

ಕುವೆಂಪು ಕಿಂದರಿಜೋಗಿ ಪದ್ಯದ ರೂಪಾಂತರದಿಂದ ಮಕ್ಕಳ ಸಾಹಿತ್ಯಕ್ಕೆ ಘನವಾದ ಅರಳುವಿಕೆಯನ್ನು ದೊರಕಿಸಿದವರು. ಅವರ ಸ್ವಾರಸ್ಯಪೂರ್ಣವಾದ ಪುಟ್ಟ ಕವಿತೆಯೊಂದನ್ನು ಈಗ ನೋಡೋಣ.

“ದೇವರ ಪೆಪ್ಪರಮೆಂಟೇನಮ್ಮ
ಗಗನದೊಳಲೆಯುವ ಚಂದಿರನು?
ಎಷ್ಟೇ ತಿಂದರು ಖರ್ಚೇ ಆಗದ
ಬೆಳೆಯುವ ಪೆಪ್ಪರಮೆಂಟೇನಮ್ಮಾ?

“ದಿನ ದಿನ ನೋಡುವೆ, ದಿನವೂ ಕರಗುತ
ಎರಡೇ ವಾರದೊಳಳಿಯುವುದು!
ಮತ್ತದು ದಿನ ದಿನ ಹೆಚ್ಚುತ ಬಂದು
ಎರಡೇ ವಾರದಿ ಬೆಳೆಯುವುದು!”

“ಅಕ್ಷಯವಾಗಿಹ ಪೆಪ್ಪರಮೆಂಟದು
ನನಗೂ ದೊರಕುವುದೇನಮ್ಮಾ?”
“ನೀನೂ ದೇವರ ಬಾಲಕನಾಗಲು
ನಿನಗೂ ಕೊಡುವನು ಕಂದಯ್ಯ!”

“ದೇವರ ಬಾಲಕನಾಗಲು ಒಲ್ಲೆ
ಆತನ ಮೀರಿಹೆ ನೀನಮ್ಮಾ!
ತಾಯಿಯನಗಲಿಸಿ ದೇವರ ಹಿಡಿಸುವ
ಪೆಪ್ಪರಮೆಂಟೂ ಬೇಡಮ್ಮಾ!”

ಕುವೆಂಪು ಅವರ ಈ ಕವಿತೆ ಕಟ್ಟಿಕೊಳ್ಳುವ ಭಾಷಾ ಶರೀರವನ್ನು ಗಮನಿಸಿ. ಮಕ್ಕಳ ನುಡಿ ಸಂಪತ್ತನ್ನು ನಿರ್ಭಿಡೆಯಿಂದ ಹೆಚ್ಚಿಸುವಂತಿದೆ ಈ ಪದ್ಯ. ಪೆಪ್ಪರಮೆಂಟು ಎಂಬ ಅನ್ಯಭಾಷೆಯ ಪದವನ್ನು ಬಳಸಿಕೊಳ್ಳುವಲ್ಲಿ ಕವಿಗೆ ಮುಜುಗರವಿಲ್ಲ. ಯಾಕೆಂದರೆ ಪೆಪ್ಪರಮೆಂಟು ಈಗಾಗಲೇ ಕನ್ನಡವಾಗಿಬಿಟ್ಟಿದೆ ಎಂಬುದನ್ನು ಅವರು ಬಲ್ಲರು. ಕಾವ್ಯದಲ್ಲಿ ಆ ಪದವನ್ನು ಬಳಸುವ ಮೂಲಕ ಪದ್ಯಭಾಷೆ ದೊರಕಿಸುವ ಒಂದು ಮರ್ಯಾದಾ ಸೀಮೆ ಈಗ ಅದಕ್ಕೆ ಪ್ರಾಪ್ತವಾಗಿದೆ! ದಿನ ದಿನಕ್ಕೆ ಕರಗುವ ಚಂದ್ರನನ್ನು ದೇವರ ಪೆಪ್ಪರಮೆಂಟೆಂದು ಗ್ರಹಿಸುವಲ್ಲಿ ಮಕ್ಕಳ ಕಲ್ಪಕತೆಯನ್ನು ನಿರಾಯಾಸವಾಗಿ ಹಿಗ್ಗಿಸುವ ಚೋದ್ಯವಿದೆ.

ಭಾಷೆ ಮತ್ತು ಕಲ್ಪಕತೆಗೆ ಜಿಗಿಯುವ ರೆಕ್ಕೆ ಹಚ್ಚದೆ ಅದು ಹೇಗೆ ಒಂದು ಮಕ್ಕಳ ಕವಿತೆ ಆದೀತು? ಅದು ಹೇಗೆ ತಾನೆ ಮಕ್ಕಳ ಕಲ್ಪನಾಶೀಲತೆಯನ್ನು ಹಿಗ್ಗಿಸಬಲ್ಲುದು? ಸಹಜ ಕವಿಯೊಬ್ಬ ಮಕ್ಕಳ ಕವಿತೆ ಬರೆದಾಗ ಮಾತ್ರ ಇಂತಹ ಅದ್ಭುತ ಕಾಲ್ಪನಿಕ ಜಿಗಿತಗಳು ಸಾಧ್ಯ. ಒಳ್ಳೆಯ ಕವಿ ಮಾತ್ರ ಒಳ್ಳೆಯ ಗೀತೆಯನ್ನು ಬರೆಯಬಲ್ಲ ಎಂದು ಕೆ.ಎಸ್.ನ. ಹೇಳುತ್ತಿದ್ದರು. ಒಳ್ಳೆಯ ಕವಿ ಮಾತ್ರ ಒಳ್ಳೆಯ ಮಕ್ಕಳ ಕವಿತೆ ಬರೆಯಬಲ್ಲ ಎಂದು ನಾವು ಆ ಸೂಕ್ತಿಯನ್ನು ವಿಸ್ತರಿಸಿದರೆ ತಪ್ಪಾಗಲಿಕ್ಕಿಲ್ಲ.

ಗಂಟೆಯ ನೆಂಟನೆ ಓ ಗಡಿಯಾರ
ಬೆಳ್ಳಿಯ ಬಣ್ಣದ ಗೋಳಾಕಾರ
ವೇಳೆಯ ತಿಳಿಯಲು ನೀನಾಧಾರ
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್

ಹಗಲೂ ಇರುಳೂ ಒಂದೇ ಬಾಳು
ನೀನಾವಾಗಲು ದುಡಿಯುವ ಆಳು
ಕಿವಿಯನು ಹಿಂಡಲು ನಿನಗದು ಕೂಳು
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್

ಮುಖ ಒಂದಾದರು ದ್ವಾದಶ ನೇತ್ರ!
ಎರಡೇ ಕೈಗಳು ಏನು ವಿಚಿತ್ರ!
ಯಂತ್ರ ಪುರಾಣದ ರಕ್ಕಸ ಪುತ್ರ!
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್

ಟಿಕ್ ಟಿಕ್ ಎನ್ನುತ ಹೇಳುವೆಯೇನು?
ನಿನ್ನೀ ಮಾತಿನ ಒಳಗುಟ್ಟೇನು?
“ಕಾಲವು ನಿಲ್ಲದು”ಎನ್ನುವೆಯೇನು?
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್

ದುಡಿಯುವುದೊಂದೇ ನಿನ್ನಯ ಕರ್ಮ
ದುಡಿಸುವುದೊಂದೇ ನಮ್ಮಯ ಧರ್ಮ
ಇಂತಿರುವುದು ಕಲಿಯುಗದೀ ಧರ್ಮ
ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್

ಕೊನೆಯಲ್ಲಿ ಮಹತ್ವದ ಸಾಮಾಜಿಕ ಹೇಳಿಕೆಯನ್ನೂ ಮಾಡುವ ದಿನಕರ ದೇಸಾಯಿಯವರ ಈ ಪದ್ಯ ನನಗೆ ಪ್ರಿಯವಾಗಿರುವುದು ಅದರ ಅದ್ಭುತವಾದ ಕಲ್ಪನಾಶೀಲತೆಯಿಂದ. ಗಡಿಯಾರವನ್ನು ಗೆಳೆಯಾ ಎಂದು ಕವಿತೆ ಪರಿಭಾವಿಸುತ್ತದೆ. ದ್ವಾದಶ(ಹನ್ನೆರಡು) ನೇತ್ರ! ಆದರೆ ಅದಕ್ಕೆ ಎರಡೇ ಕೈಗಳು ಎಂಬ ವಿಸ್ಮಯ ಭಾವ ಮಕ್ಕಳ ಕಲ್ಪಕತೆಗೆ ಕಚಗುಳಿಯಿಡಬಲ್ಲುದು. ಕಾಲವು ನಿಲ್ಲದು ಎನ್ನುವೆಯೇನು-ಎಂಬ ಪ್ರಶ್ನೆ ಸಹಜವಾಗಿಯೇ ಗಡಿಯಾರವನ್ನು ಗಮನಿಸುತ್ತಾ ಗಮನಿಸುತ್ತಾ ಮನಸ್ಸಲ್ಲಿ ಮೂಡುವಂಥದ್ದು!

ಹೂವನು ಮಾರುತ
ಹೂವಾಡಗಿತ್ತಿ
ಹಾಡುತ ಬರುತಿಹಳು;
ಘಮ ಘಮ ಹೂಗಳು
ಬೇಕೇ ಎನ್ನುತ
ಹಾಡುತ ಬರುತಿಹಳು

ಎಂ.ವಿ.ಸೀ. ಅವರ ಈ ಕವಿತೆಯನ್ನು ಮಕ್ಕಳು ರಾಗವಾಗಿ ಹಾಡಿದಲ್ಲಿ ಕವನ ಮತ್ತಷ್ಟು ಮೋಹಕವಾಗಬಲ್ಲುದು.
ಮಕ್ಕಳ ಸಾಹಿತ್ಯಕ್ಕಾಗಿಯೇ ತಮ್ಮ ಜೀವಿತವನ್ನು ಮುಡುಪಾಗಿಟ್ಟ ಹಿರಿಯ ಲೇಖಕರನ್ನು ನಾವು ಇಲ್ಲಿ ಸ್ಮರಿಸಲೇ ಬೇಕು. ಪಳಕಳ ಸೀತಾರಾಮಭಟ್ಟರು ಅವರಲ್ಲಿ ಮುಖ್ಯರು. ನಾನು ಯಾರು?, ಯಾಕೋ ಗೊತ್ತಿಲ್ಲ ನನಗೆ ತಕ್ಷಣ ನೆನಪಾಗುತ್ತಿರುವ ಪಳಕಳೆಯವರ ಕವಿತೆಗಳು. ಶಂ.ಗು. ಬಿರಾದಾರ, ಎ.ಕೆ.ರಾಮೇಶ್ವರ, ಸಿಸು ಸಂಗಮೇಶ, ಕಾಂಚ್ಯಾಣಿ ಶರಣಪ್ಪ ಮುಖ್ಯರಾದ ಉಳಿದ ಹಿರಿಯ ಲೇಖಕರು. ಮಕ್ಕಳ ಸಾಹಿತ್ಯದ ಬೀಳುಗಾಲದಲ್ಲಿ ಮಕ್ಕಳ ಸಾಹಿತ್ಯ ನಿರ್ಝರಿ ಬತ್ತಿಹೋಗದ ಹಾಗೆ ನೋಡಿಕೊಂಡವರು ಇಂಥ ಲೇಖಕರು.

೧೯೫೦ರ ನಂತರ ಮಕ್ಕಳ ಸಾಹಿತ್ಯದ ಬೆಳಸು ಕ್ಷೀಣಗೊಂಡಾಗ ಮಕ್ಕಳಿಗಾಗಿ ಅನೇಕ ಸೊಗಸಾದ ಪದ್ಯಗಳನ್ನು ಬರೆದವರು ಹಿರಿಯ ಕವಿ ಚೆನ್ನವೀರ ಕಣವಿ. ಅವರ ಜೊತೆ ಜೊತೆಯಲ್ಲೇ ಸಮೃದ್ಧವಾಗಿ ಮಕ್ಕಳ ಕವಿತೆಗಳನ್ನು ಬರೆದವರು, ಅವನ್ನು ಕೆಸೆಟ್ ಮೂಲಕವಾಗಿ ನಾಡಿನಾದ್ಯಂತ ಪ್ರಚುರ ಪಡಿಸಿದವರು ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು. ಭಾಳ ಒಳ್ಳೆವರು ನಮ್ಮಿಸ್ಸು; ಏನ್ ಹೇಳಿದ್ರೂ ಎಸ್ಸೆಸ್ಸು! ಎಂಬ, ಮಕ್ಕಳಿಗೆ (ಹಾಗೇ ಅವರ ಮಿಸ್ಸುಗಳಿಗೂ) ಬಹಳ ಪ್ರಿಯವಾದ ಲಕ್ಷ್ಮೀನಾರಾಯಣಭಟ್ಟರ ಪದ್ಯವನ್ನು ಮರೆಯಲಿಕ್ಕುಂಟೇ? ಹಾಗೇ ಸುಮತೀಂದ್ರ ನಾಡಿಗರು ಭಟ್ಟರ ಜೊತೆಜೊತೆಯಲ್ಲೇ ಅನೇಕ ಸೊಗಸಾದ ಮಕ್ಕಳ ಕವಿತೆಗಳನ್ನು ಬರೆದು ಪ್ರಕಟಿಸಿದ್ದಾರೆ.

ʼಆಕಾಶಕ್ಕೆ ಏಣಿಯಿಟ್ಟು ಚಂದ್ರನ್ ಹತ್ರ ಹೋಗ್ತೀನಿ; ಹಲ್ಲೋ ಮಿಸ್ಟರ್ ಚಂದ್ರ ಅಂತ ಷೇಕ್ ಹ್ಯಾಂಡ್ ಮಾಡ್ತೀನಿ!ʼ- ಇದು ನಾಡಿಗರ ಬಹಳ ಜನಪ್ರಿಯವಾದ ಮಕ್ಕಳ ಕವಿತೆ. ಪ್ರಸಿದ್ಧ ಕವಿಗಳಾದ ಮತ್ತು ಲೇಖಕರಾದ ಕೆ.ವಿ. ತಿರುಮಲೇಶ್, ವೈದೇಹಿ, ಚಿಂತಾಮಣಿ ಕೊಡ್ಲೆಕೆರೆ, ಭಾಗೀರಥಿ ಹೆಗಡೆ, ಜೀನಹಳ್ಳಿ ಸಿದ್ಧಲಿಂಗಪ್ಪ, ಬಿಳಿಗೆರೆ ಕೃಷ್ಣಮೂರ್ತಿ, ಕುರುವ ಬಸವರಾಜ, ಸಿ.ಎಂ.ಗೋವಿಂದರೆಡ್ಡಿ, ರಾಧೇಶ ತೋಳ್ಪಾಡಿ, ತಮ್ಮಣ್ಣ ಬೀಗಾರ, ಆನಂದ ಪಾಟೀಲ, ಶ್ರೀನಿವಾಸ ಉಡುಪ(ಇವರ ಕುಂಭಕರ್ಣ ನಿದ್ದೆ ಅದ್ಭುತವೆನಿಸುವ ಮಕ್ಕಳ ಕಥನಕವನ), ಪ್ರಸಿದ್ಧ ಕತೆಗಾರ ಈಶ್ವರಚಂದ್ರ, ಅಮೆರಿಕೆಯಲ್ಲಿ ನೆಲೆಸಿರುವ ಮೀರ, ರಾಜಶೇಖರ ಕುಕ್ಕುಂದ, ಟಿ.ಎಸ್. ನಾಗರಾಜಶೆಟ್ಟಿ, ಗಿರೀಶ ಜಕಾಪುರೆ, ನಿರ್ಮಲಾ ಸುರತ್ಕಲ್, ನೀಲಾಂಬರಿ, ಗಣೇಶ ಪಿ ನಾಡೋರ, ಸ. ರಘುನಾಥ, ಚಂದ್ರಕಾಂತ ಕರದಳ್ಳಿ, ಚಂದ್ರಗೌಡ ಕುಲಕರ್ಣಿ ನಿರಂತರವಾಗಿ ಮಕ್ಕಳಿಗಾಗಿ ಬರೆಯುತ್ತಾ ಇದ್ದಾರೆ. ಮೇಲೆ ಉಲ್ಲೇಖಿಸಿದ ಹೆಸರುಗಳಲ್ಲಿ ಆನಂದ ಪಾಟೀಲರು ಸ್ವತಃ ಮಕ್ಕಳ ಕಥೆ, ಕವಿತೆ ಬರೆಯುವುದರೊಂದಿಗೆ ಮಕ್ಕಳ ಸಾಹಿತ್ಯದ ಮೀಮಾಂಸೆಯನ್ನೂ ಬೆಳೆಸುತ್ತಿರುವವರಾಗಿ ಬಹಳ ಮುಖ್ಯರಾಗಿದ್ದಾರೆ. ಮಕ್ಕಳ ಕಾವ್ಯದ ಬಹು ಮುಖ್ಯ ಸಂಕಲನ ಪ್ರಕಟಿಸಿದವರಲ್ಲಿ ಬೊಳುವಾರು ಪ್ರಥಮ ಪಂಕ್ತಿಯಲ್ಲಿ ನಿಲ್ಲುತ್ತಾರೆ. ಆ ಮಹತ್ವದ ಕಾವ್ಯ ಸಂಪುಟದಲ್ಲಿ ಸ್ವತಃ ಬೊಳುವಾರರೇ ೧೯೭೫ ರಿಂದೀಚೆಗೆ ಎರಡನೆಯ ಸಂಪುಟಕ್ಕೆ ಆಗಬಹುದಾದಷ್ಟು ಒಳ್ಳೆಯ ಮಕ್ಕಳ ಪದ್ಯಗಳು “ಹಕ್ಕಿಸಾಲು”ಗಳಂತೆ ಕಾದು ಕುಳಿತಿರುವುದರಿಂದಾಗಿ ಅವುಗಳನ್ನು ಈ ಸಂಪುಟದಲ್ಲಿ ಸೇರಿಸಿಕೊಳ್ಳದೆ ಇರುವುದನ್ನು ಸೂಚಿಸಿದ್ದಾರೆ. ೧೯೭೫ರಿಂದ ಈಚೆಗೆ ಕನ್ನಡದಲ್ಲಿ ಅನೇಕ ಬಹು ಮುಖ್ಯವಾದ ಕವಿತಾ ಸಂಗ್ರಹಗಳು, ಕತೆ ಕಾದಂಬರಿಗಳು ಬಂದಿವೆ. ಬೊಳುವಾರರ ಕೃತಿಗೆ ಪೂರಕವಾಗುವಂಥ ಎರಡನೇ ಕಾವ್ಯ ಸಂಪುಟ ಪ್ರಕಟವಾಗುವುದು ಅಪೇಕ್ಷಣೀಯವಾಗಿದೆ. ಅಂಥ ಸಾಹಸವನ್ನು ಯಾರು ಕೈಗೊಳ್ಳುವರೋ ಕಾದು ನೋಡಬೇಕಾಗಿದೆ. ಹಾಗೇ ನಾಟಕ-ಕತೆ-ಕಾದಂಬರಿಗಳ ಸಂಕಲನವೂ ಹೊರಬರಬೇಕಾಗಿದೆ.

ಮಕ್ಕಳ ನಾಟಕಗಳಲ್ಲಿ ಒಳ್ಳೆಯ ಕೃತಿಗಳು ಹೊರಬಂದಿವೆ. ಕುವೆಂಪು, ಕಾರಂತರಿಂದ ಮೊದಲ್ಗೊಂಡು, ಬಿ.ವಿ. ಕಾರಂತ, ಚಂದ್ರಶೇಖರ ಕಂಬಾರ, ಕೆ.ವಿ. ಸುಬ್ಬಣ್ಣ, ಆರ್.ವಿ. ಭಂಡಾರಿ, ವೈದೇಹಿ, ಅನೇಕ ಸೊಗಸಾದ ಮಕ್ಕಳ ನಾಟಕಗಳನ್ನು ಬರೆದಿದ್ದಾರೆ. ಮಕ್ಕಳ ನಾಟಕಗಳ ರಂಗ ಪ್ರಯೋಗದಲ್ಲಿ ಬಿ.ವಿ. ಕಾರಂತ, ಪ್ರೇಮಾ ಕಾರಂತ, ಶ್ರೀಪಾದಭಟ್ಟ, ಕೃಷ್ಣಮೂರ್ತಿ ಕವತಾರ, ಬಿ. ಜಯಶ್ರೀ, ಸುಷ್ಮಾ ಮತ್ತು ಕಶ್ಯಪ್, ಹೊನ್ನಾವರದ ಕಿರಣ್ ಭಟ್, ಸುಳ್ಯದ ಮೂರ್ತಿ ದೇರಾಜೆ, ಮೋಹನ್ ಸೋನ, ಐ.ಕೆ. ಬೊಳುವಾರು (ಪುತ್ತೂರು), ದಾಕ್ಷಾಯಿಣಿ ಭಟ್, ಎನ್. ಮಂಗಳಾ, ಕೆ.ಜಿ. ಕೃಷ್ಣಮೂರ್ತಿ, ಮುಂತಾದವರು ದಶಕಗಳಿಂದ ತೊಡಗಿಕೊಂಡಿದ್ದಾರೆ. ತುಮರಿಯಲ್ಲಿ ಕಿನ್ನರಮೇಳ ಸ್ಥಾಪಿಸಿ ಮಕ್ಕಳ ರಂಗಭೂಮಿಗೆ ಅವಿರತವಾಗಿ ಶ್ರಮಿಸುತ್ತಿರುವ ಕೆ.ಜಿ. ಕೃಷ್ಣಮೂರ್ತಿಯವರಂತೂ ವಿಶೇಷ ಉಲ್ಲೇಖಕ್ಕೆ ಪಾತ್ರರಾಗಿದ್ದಾರೆ. ಮಕ್ಕಳಿಗಾಗಿ ಕಾದಂಬರಿಗಳನ್ನು ರಚಿಸುತ್ತಿರುವ ಹಿರಿಯ ಕಾದಂಬರಿಕಾರರಾದ ನಾ. ಡಿಸೋಜ, ಸುಮತೀಂದ್ರ ನಾಡಿಗ, ರಾಜಶೇಖರ ಭೂಸನೂರುಮಠ, ಶಶಿಧರ ವಿಶ್ವಾಮಿತ್ರ, ಬಸು ಬೇವಿನಗಿಡದ ಮೊದಲಾದವರನ್ನು ಮರೆಯುವಂತಿಲ್ಲ.

ಬೊಳುವಾರು, ತಮ್ಮ “ತಟ್ಟು ಚಪ್ಪಾಳೆ ಪುಟ್ಟ ಮಗು” ಎಂಬ ಮಕ್ಕಳ ಕಾವ್ಯದ ಆಂಥಾಲಜಿಯಲ್ಲಿ ಮಕ್ಕಳ ಕಾವ್ಯವನ್ನು ಪರಿಚಯಿಸುವಾಗ ಒಂದು ಮುಖ್ಯವಾದ ಮಾತು ಉಲ್ಲೇಖಿಸುತ್ತಾರೆ. “ಶಿಶುಗೀತೆಗಳು ಅನಾಥ ಮಗುವಿನ ರೋದನ” ಎಂಬುದು ಆ ಉಲ್ಲೇಖ. ಚಾರಿತ್ರಿಕವಾಗಿ ಆ ಮಾತು ಮುಖ್ಯವಾದುದು. ಔದ್ಯೋಗಿಕ ಕ್ರಾಂತಿಯ ಪರಿಣಾಮವಾಗಿ ಗಂಡನ ಜತೆ ಹೆಂಡತಿಯೂ ದುಡಿಯಲು ಹೋದಾಗ ನಿರ್ಮಾಣಗೊಂಡ ಅನಾಥ ಮಕ್ಕಳ ಸಂಸ್ಥೆಗಳಲ್ಲಿ ಮಕ್ಕಳ ಸಾಹಿತ್ಯ ಎಂಬ ಪ್ರಕಾರವು ಅಂಬೆಗಾಲಿಟ್ಟಿತೆ! ಬೇರೆ ಬೇರೆ ಸಾಹಿತ್ಯ ಪ್ರಕಾರಗಳಂತೆ ಮಕ್ಕಳ ಸಾಹಿತ್ಯವೂ ಇಂಗ್ಲಿಷ್ ಮಂದಿಯೊಂದಿಗೆ ಭಾರತಕ್ಕೆ ವಲಸೆ ಬಂದಿರುವಂಥದ್ದು. (ನಮ್ಮ ಹಳಗನ್ನಡ, ನಡುಗನ್ನಡ ಕಾವ್ಯದಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಕವಿತೆ ರಚಿಸುವ ಸಂಪ್ರದಾಯ ಕಾಣದು. ಹಾಗೆ ನೋಡಿದರೆ ಜಾನಪದ ಕಾವ್ಯದಲ್ಲಿ ಈ ಅರಕೆಯನ್ನು ತುಂಬುವಂಥ ಸೊಗಸಾದ ಕೆಲವು ಮಕ್ಕಳ ಕವಿತೆಗಳಿವೆ. ಅನಾಮಿಕ ಕವಿಯ ʼಗೋವಿನ ಹಾಡುʼ ಅಪರೂಪಕ್ಕೆ ನಮ್ಮ ಕಾವ್ಯದಲ್ಲಿ ಕಾಣಿಸಿಕೊಂಡ ಅಪೂರ್ವ ಕೃತಿ). ನಮ್ಮ ದೇಶದಲ್ಲಿ ಬೊಳುವಾರರು ಗುರುತಿಸಿರುವಂತೆ ಶಿಶು ಗೀತೆಗಳ ಮೊದಲ ಕೂಗು ಕೇಳಿದ್ದು ಪಾಠಶಾಲೆಗಳಲ್ಲಿ. ಶಿಶುಗೀತೆಗಳ ರಚನೆಯಲ್ಲಿ ವಿಶೇಷವಾಗಿ ತೊಡಗಿದವರು ಕೂಡಾ ಅಧ್ಯಾಪಕರುಗಳು.

ಪಠ್ಯ ಪುಸ್ತಕಗಳೇ ಶಿಶು ಸಾಹಿತ್ಯದ ಮೊದಲ ಆಶ್ರಯ ಸ್ಥಾನಗಳು. ಮೊದಲು ಇಂಗ್ಲಿಷ್ ಪದ್ಯಗಳ ಅನುವಾದಗಳೇ ಹೆಚ್ಚಾಗಿ ಕಾಣಿಸಿಕೊಂಡರೂ ಕ್ರಮೇಣ ಸ್ವತಂತ್ರ ರಚನೆಗೂ ನಮ್ಮ ಸಾಹಿತಿಗಳು ತೊಡಗಿಕೊಂಡರು. ಪಂಜೆ ಮಂಗೇಶರಾವ್, ಹೊಯಿಸಳ, ಶಿವರಾಮ ಕಾರಂತ, ಜಿ.ಪಿ. ರಾಜರತ್ನಂ, ಸಿದ್ಧಯ್ಯ ಪುರಾಣಿಕ, ಸ್ವತಃ ಕುವೆಂಪು ಅವರಂಥ ಮಹತ್ವದ ಲೇಖಕರು ಮಕ್ಕಳ ಸಾಹಿತ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ನನ್ನ ದೃಷ್ಟಿಯಲ್ಲಿ ಕುವೆಂಪು ಅವರ ಕಿಂದರ ಜೋಗಿ ಪದ್ಯ ನಿಜಕ್ಕೂ ಒಂದು ಕ್ಲಾಸಿಕ್. ಶ್ರೀನಿವಾಸ ಉಡುಪರ ʼಕುಂಭಕರ್ಣನ ನಿದ್ದೆʼ ಗಮನಿಸಿದಾಗ ವರ್ತಮಾನದಲ್ಲಿ ಹಿಂದಿನ ಪರಂಪರೆಯನ್ನು ಸದೃಢವಾಗಿ ಮುಂದುವರೆಸಬಲ್ಲ ಅನೇಕ ಸಮರ್ಥ ಲೇಖಕರಿದ್ದಾರೆ ಎಂಬುದು ಅನುಭವಕ್ಕೆ ಬರುವುದು. ಕನ್ನಡ ಮಕ್ಕಳು ಕನ್ನಡ ಮಕ್ಕಳಾಗಿ ಉಳಿಯಬೇಕಷ್ಟೆ! ಇಂಗ್ಲಿಷ್ ಮೋಹ, ಮಕ್ಕಳನ್ನು ಕನ್ನಡದಿಂದ ದೂರಮಾಡುತ್ತಿರುವುದು ಕರುಳು ಕೊರೆಯುವ ಸಂಗತಿ.

ಬೊಳುವಾರರ ಸಂಕಲನದ ನಂತರ ಮಕ್ಕಳ ಸಾಹಿತ್ಯದಲ್ಲಿ ಮತ್ತೊಂದು ಮಹತ್ವ ಆದರೆ ವಿಭಿನ್ನವಾದ ಪ್ರಯೋಗವನ್ನು ವಸಂತ ಪ್ರಕಾಶನದ ಮುರಳಿ ಅವರು ಕಾರ್ಯಗತಗೊಳಿಸುತ್ತಿದ್ದಾರೆ. ಕನ್ನಡದ ಹನ್ನೆರಡು ಮಂದಿ ಲೇಖಕರ ಹನ್ನೆರಡು ಮಕ್ಕಳ ಕೃತಿಗಳನ್ನು ಒಂದು ಮಾಲೆಯಾಗಿ ಪ್ರಕಟಿಸುವ ಸಾಹಸ ಅಸಾಮಾನ್ಯವಾದುದು. ಆ ಪುಸ್ತಕಗಳ ಸಂಪಾದನೆಯ ಜವಾಬುದಾರಿಯನ್ನು ಮುರಳಿ ನನಗೆ ವಹಿಸಿದ್ದಾರೆ. ನನ್ನ ಕೋರಿಕೆಯ ಮೇರೆಗೆ ಹನ್ನೊಂದು ಮಂದಿ ಲೇಖಕ ಮಿತ್ರರು ಕವಿತೆ, ಕತೆ, ನಾಟಕ, ಪ್ರಬಂಧ, ಅನುವಾದ-ಹೀಗೆ ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ತಾವು ರಚಿಸಿರುವ ಕೃತಿಗಳನ್ನು ನೀಡಿದ್ದಾರೆ. ಕೆಲವಂತೂ ಈ ಸರಣಿಗಾಗಿಯೇ ಬರೆದ ಬರಹಗಳು.

ಕೆ.ವಿ. ತಿರುಮಲೇಶ್, ವೈದೇಹಿ, ನಾಗರಾಜ ಶೆಟ್ಟಿ, ಚಿಂತಾಮಣಿ ಕೊಡ್ಲೆಕೆರೆ, ಡುಂಡಿರಾಜ್, ರಮಾನಂದ, ವಿಜಯಶ್ರೀ ಹಾಲಾಡಿ, ಬಸು ಬೇವಿನಗಿಡದ, ರಾಧೇಶ ತೋಳ್ಪಾಡಿ, ಶ್ರೀನಿವಾಸ ಉಡುಪ, ಜಿ.ಎನ್. ರಂಗನಾಥರಾವ್ ಕನ್ನಡದ ಬಹು ಮುಖ್ಯ ಲೇಖಕರು ಮತ್ತು ಈಗಾಗಲೇ ಮಕ್ಕಳ ಸಾಹಿತ್ಯಕ್ಕೆ ಬೆಲೆಯುಳ್ಳ ಕೊಡುಗೆ ನೀಡಿದವರು. ಶ್ರೀನಿವಾಸ ಉಡುಪರದ್ದು ಮರಣೋತ್ತರ ಪ್ರಕಟಣೆ. ಅವರ ಅಪ್ರಕಟಿತ ನಾಟಕವನ್ನು ಪ್ರಕಟಿಸಲು ಉಡುಪರ ಪುತ್ರ ಶ್ರೀಕಾಂತ ಉಡುಪರು ಅನುಮತಿ ನೀಡಿದ್ದಾರೆ.

ನಾಟಕದೊಂದಿಗೆ ಶ್ರೀನಿವಾಸ ಉಡುಪರ ಅನೇಕ ಮನೋಹರ ಮಕ್ಕಳ ಕವಿತೆಗಳನ್ನು ಪ್ರಕಟಿಸಲು ಅಂಕಿತದ ಪ್ರಕಾಶ ಕಂಬತ್ತಳ್ಳಿ ಅನುಮತಿ ನೀಡಿದ್ದಾರೆ. ಅದೇ ರೀತಿ ವೈದೇಹಿಯವರ ಕೆಲವು ನಾಟಕಗಳನ್ನು ಪ್ರಕಟಿಸಲು ವೈದೇಹಿ ಮತ್ತು ಹೆಗ್ಗೋಡಿನ ಅಕ್ಷರ ಅವರು ಅನುಮತಿ ನೀಡಿದ್ದಾರೆ. ಹಿರಿಯ ಲೇಖಕರಾದ ತಿರುಮಲೇಶರು ನನ್ನ ಮೇಲಿನ ಅಭಿಮಾನದಿಂದ ಈ ಸರಣಿಗಾಗಿಯೇ ಹೊಸ ಕವಿತೆಗಳನ್ನು ರಚಿಸಿ ಕೊಟ್ಟಿದ್ದಾರೆ. ಡಾ| ಬಸು ಬೇವಿನಗಿಡದ, ರಾಧೇಶ ತೋಳ್ಪಾಡಿ, ರಮಾನಂದ, ಡುಂಡಿರಾಜ್, ಪ್ರಸ್ತುತ ಸರಣಿಗಾಗಿಯೇ ಕಾವ್ಯ ಕಾದಂಬರಿ ನಾಟಕಗಳನ್ನು ಬರೆದಿರುವರು. ಈ ನುಡಿ ಸೋದರರ ಸೋದರಿಯರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ.

ವಿಜಯಶ್ರೀ ಹಾಲಾಡಿ ಈಚೆಗೆ ಮಕ್ಕಳ ಸಾಹಿತ್ಯದಲ್ಲಿ ಸೊಗಸಾದ ಕೃತಿಗಳನ್ನು ರಚಿಸುತ್ತಿರುವ ಲೇಖಕಿ. ನಾನು ಕೋರಿದಾಗ ಮುದ್ರಣಕ್ಕೆ ಅಣಿಯಾಗುತ್ತಿದ್ದ ತಮ್ಮ ಹೊಸಕೃತಿಯನ್ನು ನನಗೆ ನೀಡಿ ಮಹದುಪಕಾರ ಮಾಡಿದ್ದಾರೆ. ಇದೇ ಮಾದರಿಯಲ್ಲಿ ಮತ್ತೊಂದು ಸಂಪುಟವನ್ನು ಪ್ರಕಟಿಸಿ ಮತ್ತಷ್ಟು ಲೇಖಕರನ್ನು ಸರಣಿಯಲ್ಲಿ ಒಳಗೊಳ್ಳುವ ಆಸೆ ನನಗೂ ಮತ್ತು ಪ್ರಕಾಶಕ ಮುರಳಿ ಅವರಿಗೂ ಉಂಟು. ಮಕ್ಕಳ ಸಾಹಿತ್ಯದಲ್ಲಿ ಆಸಕ್ತಿ ಉಳ್ಳವರ ಒತ್ತಾಸೆಯಿಂದ ಅದು ಕ್ಷಿಪ್ರವಾಗಿ ನೆರವೇರುವುದು ಎಂಬ ವಿಶ್ವಾಸ ನನ್ನದು.

ಈ ಪ್ರಕಟಣ ಮಾಲಿಕೆಯ ನಿರ್ಮಿತಿಯಲ್ಲಿ ಮಿತ್ರರಾದ ಮುರಳಿ ಅವರು ತೋರಿದ ಆಸ್ಥೆಯನ್ನು ಎಷ್ಟು ಶ್ಲಾಘಿಸಿದರೂ ಕಮ್ಮಿಯೇ. ಚಿತ್ರಗಳ ರಚನೆ ಹಿರಿಯ ಕಲಾವಿದರಾದ ಪ.ಸ. ಕುಮಾರ್ ಮತ್ತು ಸಂತೋಷ ಸಸಿಹಿತ್ಲು ಅವರದ್ದು. ಮಾಲಿಕೆ ಪುಸ್ತಕಗಳ ಮುಖಚಿತ್ರಗಳ ವಿನ್ಯಾಸ ಸೌಮ್ಯ ಕಲ್ಯಾಣಕರ್ ಅವರದ್ದು. ಅಂದವಾಗಿ ಚಿತ್ರ ಹಾಗೂ ವಿನ್ಯಾಸವನ್ನು ರಚಿಸಿಕೊಟ್ಟಿರುವ ಇವರೆಲ್ಲರಿಗೂ ನನ್ನ ಶುಭಕಾಮನೆಗಳು. ಹನ್ನೆರಡು ಬಿಡಿಪುಸ್ತಕಗಳ ಈ ಸಂಪುಟವು ಮಕ್ಕಳಿಗೆ ಒಂದು ಸಂತೋಷದ ಉಡುಗರೆಯಾದೀತೆಂದು ನಾನು ಮನಸಾ ಆಶಿಸುತ್ತೇನೆ. ಈ ಸಾಹಿತ್ಯ ಮಾಲೆ ನನ್ನ ಜೀವನದ ಬಹು ಮುಖ್ಯ ಸಂಪಾದನೆ- ಬುದ್ಧಚರಣ ಮತ್ತು ಕುಮಾರವ್ಯಾಸ ಕಥಾಂತರ ಮಾಲೆಯಷ್ಟೇ ಮುಖ್ಯವಾದುದು. ಅದಕ್ಕಾಗಿ ವಸಂತ ಪ್ರಕಾಶನದ ಮುರಳಿ ಅವರಿಗೆ ನನ್ನ ಹಾರ್ದಿಕ ಶುಭಾಶಯಗಳು.

‍ಲೇಖಕರು Admin

September 18, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: