ಪುರುಷೋತ್ತಮ ಬಿಳಿಮಲೆ ಕಂಡಂತೆ ‘ನಾ ಅಲೆಯ ಉಬ್ಬರವಾದೆ’

ಗಂಭೀರ ರಾಜಕೀಯ ಕಥನ

ಪುರುಷೋತ್ತಮ ಬಿಳಿಮಲೆ

ವರ್ತಮಾನ ಕಾಲದ ಭಾರತದಲ್ಲಿ ಅನೇಕ ಅನಪೇಕ್ಷಿತ ಮತ್ತು ಅನಿರೀಕ್ಷಿತ ಘಟನೆಗಳು ಪ್ರತಿದಿನವೂ ನಡೆಯುತ್ತಿವೆ. ದಿನದಿಂದ ದಿನಕ್ಕೆ ಹಿಂಸೆ ಹೆಚ್ಚುತ್ತಿದೆ. ಆಳುವ ಸರಕಾರದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರನ್ನು ನಿರ್ದಯವಾಗಿ ಹತ್ತಿಕ್ಕಲಾಗುತ್ತಿದೆ. ಮಾನವಿಕಗಳು ಮತ್ತು ಸಮಾಜ ವಿಜ್ಞಾನಗಳನ್ನು ಗೌಣಗೊಳಿಸಲಾಗುತ್ತಿದೆ. ಪ್ರಶ್ನಿಸುವುದನ್ನು ಕಲಿಸುವ, ಇತಿಹಾಸವನ್ನು ಶೋಧಿಸುವ, ರಾಜಕೀಯ ವಿನ್ಯಾಸಗಳನ್ನು ವಿಶ್ಲೇಷಿಸುವ, ಮಾನವೀಯ ಸಂಬಂಧಗಳನ್ನು ಪರಿಶೋಧಿಸುವ ಕೆಲಸಗಳಿಗೆ ಮಹತ್ವ ಕಡಿಮೆಯಾಗುತ್ತಿದೆ.

ಈ ನಡುವೆ, ಇಂಥ ವಿಷಯಗಳ ಕುರಿತು ತಿಳಿವಳಿಕೆಗಳನ್ನು ಹೆಚ್ಚಿಸಿ, ಮುಕ್ತಚಿಂತನೆಗೆ ಮತ್ತು ವಿಮರ್ಶೆಗೆ ಪೂರ್ಣ ಅವಕಾಶ ಮಾಡಿಕೊಡುವುದು ಪ್ರಜಾಪ್ರಭುತ್ವವಾದೀ ಸರಕಾರಗಳ ಅತಿ ದೊಡ್ಡ ಜವಾಬ್ದಾರಿ ಎಂಬುದನ್ನು ಸರಕಾರಗಳೇ ಮರೆತಿವೆ. ಜನರ ನೈತಿಕತೆಯನ್ನು ಹೆಚ್ಚಿಸಲು, ಸಮಾಜದ ಸ್ವಾಸ್ತ್ಯವನ್ನು ಕಾಪಾಡಲು, ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮತ್ತು ಜೊತೆಗಿರುವ ಜನರ ಯೋಚನಾ ಶಕ್ತಿಯನ್ನು ತೀಕ್ಷ್ಣ ಗೊಳಿಸಲು ಸರಕಾರಗಳು ಬೌದ್ಧಿಕ ಸಂವಾದಗಳನ್ನು ಪ್ರೋತ್ಸಾಹಿಸುತ್ತಿರಬೇಕು. ಆದರೆ ವರ್ತಮಾನ ಕಾಲದಲ್ಲಿ ಸರಕಾರಗಳೇ ಅಂಥ ಪ್ರಕ್ರಿಯೆಗಳಿಗೆ ವಿರೋಧವಾಗಿವೆ.

ಶಿಕ್ಷಣ ಕ್ಷೇತ್ರದಲ್ಲಿ ಬೌದ್ಧಿಕತೆಯನ್ನು ಅವರು ಅಪಮೌಲ್ಯಗೊಳಿಸಲಾಗುತ್ತಿದೆ. ಇಂಥ ಬೆಳವಣಿಗೆಗಳ ನೇರ ಪರಿಣಾಮವೇ ಹೈದರಾಬಾದಿನಲ್ಲಿ ನಡೆದ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಮತ್ತು ಧಾರವಾಡದಲ್ಲಿ ನಡೆದ ಪ್ರೊ. ಎಂ. ಎಂ. ಕಲಬುರ್ಗಿ ಕೊಲೆ. ಇವುಗಳ ಜೊತೆಗೆ ದಲಿತರ ಮೇಲಣ ದೌರ್ಜನ್ಯ ನಿರಂತರವಾಗಿ ಮುಂದುವರೆದಿದೆ, ಮಹಿಳೆಯರ ಮೇಲಿನ ಅತ್ಯಾಚಾರಗಳು ಕಡಿಮೆಯಾಗಿಲ್ಲ. ಇಂಥ ಹಲವು ಘಟನೆಗಳ ಹಿನ್ನೆಲೆಯಲ್ಲಿ ಪ್ರಸ್ತುತ ಕಾದಂಬರಿ ರೂಪುಗೊಂಡಿದೆ. ಇದೊಂದು ಗಂಭೀರವಾದ ರಾಜಕೀಯ ಕಥನವೂ ಹೌದು. ಈ ಕಾದಂಬರಿಯನ್ನು ಇಂಗ್ಲಿಷಿನಲ್ಲಿ I Have Become the Tide' (೨೦೧೯) ಎಂಬ ಶೀರ್ಷಿಕೆಯಲ್ಲಿ ಬರೆದವರು ದೆಹಲಿಯಲ್ಲಿ ನೆಲೆಸಿರುವ ಪ್ರಸಿದ್ಧ ಲೇಖಕಿ ಹಾಗೂ ಹೋರಾಟಗಾರ್ತಿ ಗೀತಾ ಹರಿಹರನ್. ಇದನ್ನುನಾ ಅಲೆಯ ಉಬ್ಬರವಾದೆ’ ಹೆಸರಿನಲ್ಲಿ ಕನ್ನಡಕ್ಕೆ ತಂದವರು ವಿಶಿಷ್ಟ ಲೇಖಕಿಯೂ ಮಹಿಳಾಪರ ಕಾರ್ಯಕರ್ತೆಯೂ ಆಗಿರುವ ಡಾ. ಎನ್. ಗಾಯತ್ರಿ ಅವರು.

ಗದ್ಯ ಮತ್ತು ಪದ್ಯಗಳನ್ನು ಒಟ್ಟು ಸೇರಿಸಿಕೊಂಡು ಚಂಪೂ ಸಾಹಿತ್ಯದ ರೀತಿಯಲ್ಲಿ ಬೆಳೆಯುವ ಪ್ರಸ್ತುತ ಕಾದಂಬರಿಯು, ಕೆಳಗಿನ ಎರಡು ಸಾಲುಗಳ ಕವಿತೆಯನ್ನು ಕೇಂದ್ರದಲ್ಲಿರಿಸಿಕೊಂಡು ಬೆಳೆಯುತ್ತದೆ.
ಎಲ್ಲಿದೆ ಆ ನೆಲ
ಅಂಕೆಯಿಲ್ಲದೆ ನೀರು ಹರಿವ ನೆಲ
(ಮೂಲ: Where is that land where water flows free?)
ಕೃತಿಯ ಉದ್ದಕ್ಕೂ ಇದೊಂದು ಎಂದೂ ಮುಗಿಯದ ಆರ್ತನಾದದ ಹಾಗೆ ಪುನರಾವರ್ತನೆಗೊಳ್ಳುತ್ತಾ ಹೋಗುತ್ತದೆ. ಈ ಕೂಗು ಇನ್ನಷ್ಟು ಸಾಂದ್ರವಾಗಲು ಕಾದಂಬರಿಯು ಮಧ್ಯಕಾಲೀನ ಭಾರತದ ಸಂತನೊಬ್ಬನ ಇತಿಹಾಸ, ಅವನ ಬಗ್ಗೆ ಸಂಶೋಧನೆ ನಡೆಸುವ ಆಧುನಿಕ ಪ್ರಾಧ್ಯಾಪಕ ಮತ್ತು ಕನಸುಗಳನ್ನು ಹೊತ್ತುಕೊಂಡು ಶಿಕ್ಷಣ ಕ್ಷೇತ್ರಕ್ಕೆ ಪ್ರವೇಶಿಸಿದ ಮೂವರು ದಲಿತ ವಿದ್ಯಾರ್ಥಿಗಳ ಅನುಭವಗಳನ್ನು ಒಳಗೊಳ್ಳುತ್ತದೆ. ಇವೆಲ್ಲವೂ ಪ್ರಣಾಳಿಕೆಯಂಥ ಹಾಡೊಂದನ್ನು ಸಾಧ್ಯಮಾಡುವುದರಲ್ಲಿ ಕಾದಂಬರಿಯ ನಿಜವಾದ ಯಶಸ್ಸು ಅಡಗಿದೆ-
ಅಮ್ಮಾ ಇದು ನಿನ್ನ ನೆಲ
ಇದು ಸದಾ ಹರಿವ ನೀರಿನ ನೆಲ
ನದಿಗಳು ದಂಡೆಗಳ ಇಲ್ಲವಾಗಿಸಿವೆ
ಕೆರೆಗಳು ತುಂಬಿವೆ ನೀನು
ಮಾನವ ಕುಲದ ಭಾಗವಾದ ನೀನು
ರಕ್ತ ಹರಿಸಬೇಕಾಗಿದೆ
ಆಂದೋಲನ ಮಾಡಬೇಕಾಗಿದೆ
ಒಂದು ಬೊಗಸೆ ನೀರಿಗಾಗಿ
ಈ ಮಹಾನ್ ನಾಗರಿಕತೆಯ
ಮುಖಕ್ಕೆ ಉಗಿಯಬೇಕೆನಿಸಿದೆ
ನಿಜಕ್ಕೂ ಈ ನೆಲ ನಿನ್ನದೇನಮ್ಮಾ
ನೀನಿಲ್ಲಿ ಹುಟ್ಟಿದೆ ಎಂಬುದಕ್ಕೆ
ಈ ನೆಲ ನನ್ನದೇ ನಾನು ನಿನಗೆ ಹುಟ್ಟಿದಕ್ಕೆ
ಈ ನೆಲ ನನ್ನದೆಂದುಕೊಳ್ಳಲೇ
ಪ್ರೀತಿಸಲೇ ಇದನು?
ಇದರ ಉಜ್ವಲತೆಯನು ಹಾಡಿ ಹೊಗಳಲೇ
ಕ್ಷಮಿಸು ತಾಯೇ
ನಿಜ ಹೇಳುವೆನು ನಾನಿಲ್ಲಿ
ಹುಟ್ಟಿದ್ದಕ್ಕೆ ಪಶ್ಚಾತ್ತಾಪ ಅಚ್ಚರಿ
ನಿಜಕ್ಕೂ ನಾನಿಲ್ಲಿ ಹುಟ್ಟಬೇಕಾಗಿತ್ತೇ?
ಇಷ್ಟು ಹೇಳಿದ ಮೇಲೆ, ಬಹುಶಃ ನಾನಿಲ್ಲಿ ಕಾದಂಬರಿಯ ವಸ್ತುವಿನ ಬಗ್ಗೆ ಹೆಚ್ಚು ವಿವರಣೆ ನೀಡಬೇಕಾಗಿಲ್ಲ. ಸುಮಾರು ಸಾವಿರ ವರ್ಷಗಳ ಹಿಂದೆ ಆನಂದಗ್ರಾಮ ಎಂಬ ಸಾಂಕೇತಿಕ ಹೆಸರಿನ ಊರಿನಲ್ಲಿದ್ದ ದಲಿತ ಚಿಕ್ಕನಿಗೆ ಸಮಾನತೆಯ ಕನಸಿತ್ತು. ಹುಟ್ಟಿನಿಂದ ಅವನು ದನದ ಚರ್ಮ ಸುಲಿಯುವವನ ಮಗ. ಆದರೆ ಅವನಿಗೆ ವಿಸ್ತಾರವಾದ ಆಕಾಶದ ಅದ್ಭುತ ವಿನ್ಯಾಸಗಳನ್ನು ದೃಷ್ಟಿಸಿ ನೋಡುವ ಉತ್ಸಾಹವೂ ಇತ್ತು, ಸ್ವಾತಂತ್ರ್ಯವೂ ಇತ್ತು.

ನಾವೆಲ್ಲ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು- ಅನ್ನುವ ಸಂದೇಶ ಅವನ ಕಿವಿಗೆ ಬೀಳುತ್ತಿತ್ತು. ಹಾಡು, ಕೆಲಸ, ನದಿ, ಭೂಮಿ, ಗೆಳೆತನ ಎಲ್ಲವೂ ಅವನಿಗೆ ಸಮಾನವೇ ಆಗಿತ್ತು. ಆ ಊರಿನಲ್ಲಿ ಬೆಸ್ತರು, ಹಸುವಿನ ಚರ್ಮ ಸುಲಿಯುವವರು, ಇಲಿ ಹಿಡಿಯುವವರು, ಮಲ ಹೊರುವವರು, ಹೀಗೆ ಕೆಳಗೆ, ಇನ್ನೂ ಕೆಳಗೆ ಮತ್ತೂ ಕೆಳಗೆ ಮತ್ತೂ ಕೆಳಗಿನವರೆನಿಸಿಕೊಂಡವರು ಒಟ್ಟಾಗಿ ಕೂಡಿಕೊಳ್ಳಬೇಕಾಗಿತ್ತು. ಆದರೆ ಅವನ ಬಡ ತಂದೆಗೆ, ಕಾರಂತರ ಚೋಮನ ದುಡಿಯ ಚೋಮನ ಹಾಗೆ, ದುಡಿ ಮತ್ತು ಹೆಂಡವೇ ಆಸ್ತಿ.' ಸೂಳೆಮಗನೇ, ನಾನು ಕುಡೀಬೇಕೋ? ಎಂಬುದೇ ಅವನ ತಂದೆಯ ಕೊನೆಯ ಮಾತು. ಮುಂದೆ ಚಿಕ್ಕನು ಸತ್ತ ಪ್ರಾಣಿಗಳ ಚರ್ಮ ಸುಲಿಯುವವನಾಗಿ ಉಳಿಯುವುದಿಲ್ಲ. ಬದಲು ಮಡಿವಾಳ ಚಿಕ್ಕಯ್ಯನಾಗುತ್ತಾನೆ. ದನದ ಚರ್ಮ ತೆಗೆಯುತ್ತಿದ್ದವನ ಮಗ ಬಟ್ಟೆ ಒಗೆಯುವ ಅಗಸನಾಗುತ್ತಾನೆ. ಚರಿತ್ರೆಯಲ್ಲಿ ಸಮುದಾಯಗಳು ಬದುಕಿದ ಕ್ರಮವೇ ಅದು ಎಂಬುದರ ಕಡೆಗೆ ಕಾದಂಬರಿ ಓದುಗರನ್ನು ಕೊಂಡೊಯ್ಯುತ್ತದೆ. ಆದರೆ ಮುಂದೆ ಆನಂದಗ್ರಾಮದಲ್ಲಿ ಸಂಭವಿಸಿದ ಕೆಲವು ಘಟನೆಗಳು ಸಮಾನತೆಯ ಲೋಕವನ್ನು ನಾಶ ಮಾಡುತ್ತವೆ.

ಕಾದಂಬರಿಯು ಈ ಕುರಿತು ಕೂಡಾ ಬೆಳಕು ಚೆಲ್ಲುತ್ತದೆ-ದೇವರ ಆರಾಧನೆಗೆ ಹಲವಾರು ದಾರಿಗಳನ್ನು ಹುಡುಕಿಕೊಳ್ಳುವ ಅಥವಾ ಅತ್ಯಂತ ಶ್ರೇಣೀಕೃತ ಸಮಾಜಕ್ಕೆ ಸವಾಲೆಸೆಯುವಂತಹ ಎಲ್ಲ ಗುಂಪುಗಳಲ್ಲಿಯೂ ಆಗುವಂತೆಯೇ ಈ ಗುಂಪಿನಲ್ಲಿಯೂ ಒಡಕು ಮೂಡಿರಬೇಕು. ಅವರು ರಾಜ ಮತ್ತು ಅವನ ಅಧಿಕಾರಿಗಳು, ಶಕ್ತಿಶಾಲಿ ದೇವಾಲಯಗಳ ಪುರೋಹಿತರು ಮತ್ತು ಉಳಿದ ಪ್ರಭಾವೀ ಬ್ರಾಹ್ಮಣರು ಒಟ್ಟಾದ್ದರಿಂದ ಉಂಟಾದ ಶಕ್ತಿಯನ್ನು ಎದುರಿಸಲಾರದೆ ಹೋಗಿರ ಬಹುದಾದ ಸಾಧ್ಯತೆಗಳೇ ಹೆಚ್ಚಿವೆ’. ಕಲ್ಯಾಣದ ಕ್ರಾಂತಿಯ ಬಗ್ಗೆ ಗೊತ್ತಿರುವ ಕನ್ನಡದ ಓದುಗರಿಗೆ ಈ ಕುರಿತು ಹೆಚ್ಚು ಹೇಳಬೇಕಾಗಿಲ್ಲ.

ಈ ಘಟನೆಗಳು ನಡೆದ ಹಲವು ಶತಮಾನಗಳ ಆನಂತರ ಪ್ರಾಧ್ಯಾಪಕ ಕೃಷ್ಣ ಅವರ ಚರಿತ್ರೆಯ ಹುಡುಕಾಟ ಆರಂಭವಾಗುತ್ತದೆ. ಪ್ರೊ. ಕೃಷ್ಣನಿಗೆ ಸಂತ ಕಣ್ಣದೇವನ ಬಗ್ಗೆ ತಣಿಯದ ಕುತೂಹಲ. ಅವನ ಸಂಶೋಧನೆಯ ಪ್ರಕಾರ, ಕಣ್ಣದೇವನು ಆನಂದ ಗ್ರಾಮದ ಚಿಕ್ಕಯ್ಯನ ಮಗನೇ ಹೌದು. ಬಹುತೇಕ ಎಲ್ಲ ಸಂತರ ಹಾಗೆಯೇ ಕಣ್ಣನೂ ಜನಭಾಷೆಯ ಕವಿ. ಆತ ತನ್ನ ಸುತ್ತಲಿನ ಸರಳ ದೃಶ್ಯಗಳನ್ನು, ಪ್ರಕೃತಿಯ ಬೆರಗನ್ನು ನದಿ ದೋಣಿಗಳು, ಮರಗಳು, ಹೂವುಗಳು ಮತ್ತು ತನ್ನ ಸುತ್ತಲಿರುವ ಸರಳ ಜನರಾದ ಅಂಬಿಗರು ಹಾಗೂ ರೈತರ ಕುರಿತು ಪದ್ಯ ಬರೆಯುತ್ತಿದ್ದ.

ಒಂದು ದಿನ ಎಲ್ಲರ ಹಾಗೆ ಕಣ್ಣದೇವನೂ ತನ್ನ ಪ್ರೀತಿಯ ನದಿಯ ಅಲೆಯಲ್ಲಿ ಕೊಚ್ಚಿಕೊಂಡು ಹೋಗುತ್ತಾನೆ. ನದಿ ದಂಡೆಯಲ್ಲಿ ಅವನಿಗೊಂದು ಪುಟ್ಟ ಸಮಾಧಿಯಿರುತ್ತದೆ. ಆದರೆ, ಮಧ್ಯಕಾಲೀನ ಭಾರತದಲ್ಲಿ ನಡೆದ ಸಂತರ ಹೋರಾಟಗಳನ್ನು, ಅವರು ಕೊಟ್ಟ ಸಂದೇಶಗಳನ್ನು ವರ್ತಮಾನದ ಸಮಾಜಕ್ಕೆ ಅರ್ಥಮಾಡಿಕೊಳ್ಳಲು ಆಗುತ್ತಿಲ್ಲ. ಸಂತರ ಹಾದಿಯನ್ನು ಅದು ಮರೆತಿದೆ. ಹೀಗಾಗಿ ಕಣ್ಣದೇವನ ಕೆಲಸಗಳ ಮಹತ್ವ ಜನರಿಗೆ ಅರ್ಥವಾಗುವುದಿಲ್ಲ. ಅವನು ಬಹಳ ವೇಗವಾಗಿ ಹಿಂದೂ ಸಂತ' ನಾಗಿ ಪರಿವರ್ತನೆ ಹೊಂದುತ್ತಾನೆ. ಈ ಕೆಲಸವನ್ನು ಹಿಂದೂ ರಾಷ್ಟ್ರ ಮಂಡಲಕ್ಕೆ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ, ಏಕೆಂದರೆ ಅದರ ಕೆಲಸವೇ ಅದು.

ಹಿಂದೂ ಸಂತರನ್ನು ಮತ್ತು ದೇವತೆಗಳನ್ನು ಅಪಮಾನಿಸುವವರು, ನಿಂದಿಸುವವರು ಇಲ್ಲವೇ ಧಾಳಿ ಮಾಡುವವರಿಂದ ಹಿಂದೂ ನಾಗರಿಕತೆಯನ್ನು ರಕ್ಷಿಸುವುದು ಅದರ ಕೆಲಸ. ಪ್ರೊ. ಕೃಷ್ಣನು ಈ ಆಧುನಿಕ ಹಿಂದುತ್ವದ ಕಲ್ಪಿತ ಕಥನಗಳ ಪೊಳ್ಳುತನವನ್ನು ಬಯಲು ಮಾಡುವ ಕೆಲಸವನ್ನು ಆರಂಭಿಸುತ್ತಾನೆ. ತಾಳೆಗರಿಯೊಂದರಲ್ಲಿ ಲಭಿಸಿದ ಮಾಹಿತಿಗಳ ಮೂಲಕ ಆನಂದಗ್ರಾಮದ ಹೋರಾಟದ ಕತೆಯನ್ನು ಮರು ರೂಪಿಸುತ್ತಾನೆ. ತನ್ನ ಕೆಲಸಗಳ ಬಗ್ಗೆ ಸೆಮಿನಾರುಗಳಲ್ಲಿ & nbsp;, ಸಮಾವೇಶಗಳಲ್ಲಿ & nbsp;, ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಮಾತಾಡುತ್ತಾನೆ. ಜಂಗಮರೂಪೀ ಕಣ್ಣದೇವನು ಸ್ಥಾವರವಾಗುವುದು ಅವನಿಗೆ ಇಷ್ಟವಿಲ್ಲ. ಆದರೆ ಹಿಂದೂ ರಾಷ್ಟ್ರ ಸಭಾದವರು ಅದನ್ನು ಆಗಲೇ ಮಾಡಿಬಿಟ್ಟಿದ್ದಾರೆ.

ಇತಿಹಾಸ ತಿಳಿಯದವರಿಗೆ ಸ್ಥಾವರ ರೂಪೀ ವಿಗ್ರಹಗಳೇ ಬೇಕು. ಅದಕ್ಕೆ ಅನುಕೂಲಕರವಾದ ಕತೆಗಳನ್ನು ನೇಯಲು ಅನೇಕರು ಸಿದ್ಧವಾಗಿರುತ್ತಾರೆ. ತಿರುಚಿದ ಚರಿತ್ರೆಗೆ ಜನರು ಒಲಿದಷ್ಟು ಸಂಶೋಧಕನು ತನ್ನ ಸಂಶೋಧನೆಯ ಮೂಲಕ ಕಂಡುಕೊಂಡ ನಿಜಗಳಿಗೆ ಜನರು ಒಲಿಯುವುದಿಲ್ಲ. ಸುಳ್ಳು, ಅಜ್ಞಾನ ಮತ್ತು ದ್ವೇಷಗಳು ಅಪರಿಮಿತವಾಗಿ ಹಬ್ಬಿಕೊಳ್ಳುತ್ತವೆ. ಈ ಹಂತದಲ್ಲಿ ಸತ್ಯಶೋಧಕ ಕೃಷ್ಣನುಹಿಂದೂ ದ್ವೇಷಿ’ಯಾಗಿ ಕಾಣಿಸುತ್ತಾನೆ. ಕಣ್ಣದೇವನ ತಂದೆ ಅಗಸರವನು, ಅವನು ಹಸುವಿನ ಚರ್ಮ ಸುಲಿಯುವ ಕೆಲಸ ಮಾಡುತ್ತಿದ್ದ ಎಂದು ಹೇಳಿ ವಾಗ್ವಾದವನ್ನು ಸೃಷ್ಟಿಸಲಿಕ್ಕೆ ನಾಚಿಕೆ ಆಗಲ್ವಾ.' ಕಣ್ಣದೇವನ ವಿಕಾಸಗೊಂಡ ಆತ್ಮವನ್ನು ಪವಿತ್ರ ಗೋವಿನ ಮೇಲೆ ಕ್ರೌರ್ಯವನ್ನು ಎಸಗುವುದಕ್ಕೆ ಜೋಡಿಸುವುದು ಕಿತಾಪತಿಯ ಕೆಲಸ - ಎಂದು ಕೃಷ್ಣನ ವಿರೋಧಿಗಳು ತಮ್ಮದೇ ಆದ ಕಥನವನ್ನು ಹರಿಯಬಿಡುತ್ತಾರೆ. ಕಾದಂಬರಿ ಕೊನೆಯಾಗುವಾಗ ಕೃಷ್ಣನ ಕೊಲೆಯಾಗಿರುತ್ತದೆ.

ಸಾವಿರ ವರ್ಷಗಳ ಹಿಂದೆ ಸಮಾನತೆಯ ಕನಸು ಕಂಡ ಚಿಕ್ಕಯ್ಯ - ಕಣ್ಣದೇವರ ಸಾವು, ಮತ್ತು ಈಗ ಅವುಗಳ ಬಗ್ಗೆ ಮಾತಾಡುವ ಕೃಷ್ಣನ ಸಾವು ಸಮಾನಾಂತರವಾಗಿಯೇ ನಡೆಯುತ್ತದೆ. ಆದರೆ ನದಿ ಹರಿಯುತ್ತಲೇ ಇರುತ್ತದೆ, ಚರಿತ್ರೆಯ ಗಾಲಿಗಳು ಸುತ್ತುತ್ತಲೇ ಇರುತ್ತವೆ. ಈ ನಡುವೆ ಕಾದಂಬರಿಯು ದಲಿತರ ಶಿಕ್ಷಣದ ಸಮಸ್ಯೆಯನ್ನು ಪರಿಶೀಲನೆಗೆ ಎತ್ತಿಕೊಳ್ಳುತ್ತದೆ. ಆಶಾ, ಸತ್ಯ ಮತ್ತು ರವಿ ಎಂಬ ದಲಿತರು ಕಾಲೇಜು ಓದಬಯಸುತ್ತಾರೆ. ಕಾದಂಬರಿಯಲ್ಲಿ ನಿರೂಪಿಸಲಾದಂತೆ, ಕಾಲೇಜು ಶಿಕ್ಷಣ, ಅದರಲ್ಲೂ ವೃತ್ತಿಪರ ಶಿಕ್ಷಣವು ಈ ಮೂವರಿಗೆ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಕೀಲಿ ಕೈಯಾಗಿತ್ತು.

ಹೊಸ ಜಗತ್ತಿನ ಬಾಗಿಲುಗಳನ್ನು ತೆರೆಯಬಲ್ಲ, ಮಗು ಮತ್ತು ಕುಟುಂಬ, ಕುಟುಂಬ ಮತ್ತು ಸಮುದಾಯ’ ಒಟ್ಟಾರೆಯಾಗಿ ಒಂದು ದೊಡ್ಡ ಜಗತ್ತಿನ ಭಾಗವಾಗುವ ಅವಕಾಶ, ಓದುವ, ಕೆಲಸ ಮಾಡುವ, ಸಂಪಾದಿಸುವ, ಪ್ರೀತಿಸುವ, ಮದುವೆಯಾಗುವ ಕುಟುಂಬಗಳನ್ನು ಬೆಳೆಸುವ, ಎಲ್ಲರಂತೆ ಘನತೆಯಿಂದ ಬದುಕುವ ಕನಸು ಕಾಣುತ್ತಾರೆ. ಆದರೆ ಇದನ್ನು ಸಹಿಸದ ಶಕ್ತಿಗಳು ಅನೇಕ. ಈ ದುಷ್ಟ ಶಕ್ತಿಗಳು ಸಂತ ಕಣ್ಣದೇವನ ಕಾಲದಲ್ಲಿಯೂ ಇದ್ದುವು, ಪ್ರೊ. ಕೃಷ್ಣನ ಕಾಲದಲ್ಲಿಯೂ ಇವೆ. ಅವು ದಲಿತ ವಿದ್ಯಾವಂತರ ಬಗ್ಗೆ ಅನುಮಾನದ ಮತ್ತು ಅವಮಾನದ ಮಾತುಗಳನ್ನೇ ಆಡುತ್ತಿರುತ್ತವೆ. ಅವರ ನೋಟದಲ್ಲಿ ಸೋಮಾರಿ ಜನರು ಕೋಟಾದಲ್ಲಿ ಬದುಕುತ್ತಾರೆ, ಅದು ಅವರ ರಕ್ತದಲ್ಲಿಯೇ ಇದೆ, ಪ್ರತಿಭೆಯಿಲ್ಲ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಸೀಟುಗಳನ್ನು ಕಸಿಯುತ್ತಾರೆ' ಎಂಬಂಥ ಮಾತುಗಳು ಮಡುಗಟ್ಟಿರುತ್ತವೆ. ಇಂಥ ಸಂದರ್ಭಗಳಲ್ಲಿ ವಿದ್ಯೆ ಕಲಿಯಲು ಬಂದ ದಲಿತರೂ ಏಕಾಂಗಿಗಳಾಗಿಬಿಡುತ್ತಾರೆ. ತನ್ನ ಗೆಳತಿಯಾದ ಪ್ರಿಯಾನ ಜೊತೆಗೆ ಆಶಾ ಊಟಕ್ಕೆ ಹೋದಾಗ ಅಲ್ಲಿ ಪ್ರಸ್ತಾಪಿತವಾಗುವ ಜಾತಿಯ ಉಲ್ಲೇಖ ಬಹಳ ಅಮಾನುಷವಾದುದು ಮತ್ತು ತೀವ್ರವಾದ ಕ್ರೌರ್ಯದಿಂದ ಕೂಡಿದ್ದು. ಇದೇ ರೀತಿ ತರಗತಿಯಲ್ಲಿ ಸತ್ಯ ಎತ್ತಿದ ಕೈ ಯಾರಿಗೂ ಕಾಣುವುದಿಲ್ಲ. ಆಗ ಪ್ರತಿಯೊಬ್ಬ ದಲಿತನೂ ಕೂಡಾ- ನಿಜವಾಗಿಯೂ ನಾನು ಹುಟ್ಟಬೇಕಿತ್ತೇ ಈ ನೆಲದಲ್ಲಿ ದಿಗಂತದೆಡೆಯ ಎಲ್ಲ ಹಾದಿಗಳೂ ನನಗೆ ಮುಚ್ಚಿರುವಾಗ’ ಎಂದು ಹಾಡಿಕೊಳ್ಳುವುದು ಅನಿವಾರ್ಯವಾಗುತ್ತದೆ. ಇಂಥ ಅವಮಾನಗಳನ್ನು ಕೆಲವು ಬಾರಿ ಗಂಭೀರವಾಗಿಯೂ ಮತ್ತೆ ಕೆಲವು ಬಾರಿ ಹಾಸ್ಯ ತಮಾಷೆಗಳ ಮೂಲಕವೂ ದಲಿತರು ಮೀರುತ್ತಾರೆ. ಕಾದಂಬರಿಯು ಈ ಅಂಶಗಳನ್ನು ಬಹಳ ಮನೋಜ್ಞವಾಗಿ ವಿವರಿಸುತ್ತದೆ.

ಹೀಗಿರುತ್ತಲೇ ಒಂದು ಪ್ರಶ್ನೆ ಧುತ್ತೆಂದು ಎದುರಾಗುತ್ತದೆ. ಅದೆಂದರೆ, ಚಿಕ್ಕಯ್ಯ ಬದುಕಿದ ಆನಂದ ಗ್ರಾಮದ ಕಾಲಘಟ್ಟಕ್ಕೂ ಆಶಾ, ಸತ್ಯ ಮತ್ತು ರವಿ ಬದುಕುವ ವರ್ತಮಾನದ ಕಾಲಘಟ್ಟಕ್ಕೂ ಏನೂ ಬದಲಾವಣೆಯೇ ಆಗಿಲ್ಲವೇ ಎಂಬುದು. ಸ್ವಲ್ಪ ಬದಲಾವಣೆ ಆಗಿರುವುದು ಹೌದಾದರೂ ಅವೇನೂ ಮೂಲಭೂತ ಬದಲಾವಣೆಗಳಲ್ಲ ಎಂದು ಕಾದಂಬರಿ ಸಾರುತ್ತದೆ. ಈಗ ನ್ಯಾಯಕೊಡಲು ಒಂದು ಸಂವಿಧಾನವಿದೆ. ಎಲ್ಲ ಪ್ರಜೆಗಳಿಗೂ ಸಮಾನತೆ, ಹಕ್ಕುಗಳ ವಾಗ್ದಾನವಿದೆ. ಹೋರಾಡಲು ಭೀಮ ಶಕ್ತಿಯಿದೆ, ಆದರೆ ಎಷ್ಟೋ ಬಾರಿ ಹಸುವಿನ ಚರ್ಮ ತೆಗೆಯುವವರು ಜಾಡಮಾಲಿಗಳು, ಮಲ ಹೊರುವವರು, ತಮ್ಮ ಕೆಲಸವನ್ನು ಬಲವಂತವಾಗಿ ಮಾಡಬೇಕಿದೆ. ಕಾದಂಬರಿಯಲ್ಲಿ ಹೇಳುವಂತೆ, `ಇವರೆಲ್ಲ ಈ ನೆಲದಲ್ಲಿ ಇನ್ನೂ ಬೀಜ ಬಿತ್ತಿ ಬೆಳೆಸಬೇಕಾದಂಥ ಗಿಡಗಳು. ಈ ಮಣ್ಣಿನಲ್ಲಿ ಬೆಳೆಯಲು ಅವುಗಳಿಗೆ ವರ್ಷ, ವರ್ಷಗಳೇ ಬೇಕಾಗಬಹುದು. ಬಹುಶಃ ಅವರ ಮಗಳು ಮತ್ತು ಮಗನ ಕಾಲಕ್ಕೆ ಅದು ಸಾಧ್ಯವಾಗುವುದೋ ಏನೋ!’
ಹೀಗೆ ಈ ಕಾದಂಬರಿಯು ಇತಿಹಾಸ ಮತ್ತು ವರ್ತಮಾನವನ್ನು ಸೂಕ್ಷ್ಮವಾಗಿ ಬೆಸೆಯುತ್ತದೆ.

ಒಂದೆಡೆ ಆನಂದಗ್ರಾಮದ ಚಿಕ್ಕಯ್ಯ-ಕಣ್ಣ ದೇವರು, ಇನ್ನೊಂದೆಡೆ ಸಮಾನತೆಯ ಕನಸು ಕಾಣುತ್ತಿರುವ ಸತ್ಯ, ರವಿ, ಮತ್ತು ಆಶಾ, ಮಗದೊಂದೆಡೆ, ಈ ಎರಡೂ ಲೋಕಗಳ ನಡುವೆ ಬಂಧ ಬೆಸೆಯುವ ಪ್ರೊ. ಕೃಷ್ಣ ಮತ್ತು ಶಾಂತಾ. ಕಾದಂಬರಿಯು ಈ ಮೂರು ಲೋಕಗಳನ್ನು ಒಂದರೊಳಗೆ ಇನ್ನೊಂದನ್ನು ಬೆರೆಸುವುದರ ಮೂಲಕ ಇತಿಹಾಸ ಮತ್ತು ವರ್ತಮಾನಕ್ಕೆ ಭಾಷ್ಯ ಬರೆಯುತ್ತದೆ. ಈ ನಿಟ್ಟಿನಲ್ಲಿ ಕಾದಂಬರಿಯು ಸಾಧಿಸಿದ ತಾಂತ್ರಿಕ ಯಶಸ್ಸು ಬಹಳ ವಿಶೇಷವಾದುದು.

ಈ ಮುನ್ನುಡಿಯನ್ನು ಮುಗಿಸುವ ಮುನ್ನ ಮತ್ತೆರಡು ಸಂಗತಿಗಳನ್ನು ಗಮನಿಸ ಬಯಸುತ್ತೇನೆ. ಕನ್ನಡದಲ್ಲಿ ದಲಿತರ ಕುರಿತು ಪ್ರಕಟವಾದ ಸಾಹಿತ್ಯದಲ್ಲಿ ಮುಖ್ಯವಾಗಿ ಎರಡು ಧಾರೆಗಳಿವೆ. ಮೊದಲನೆಯ ಧಾರೆಯು ದಲಿತರ ಸಮಸ್ಯೆಯನ್ನು ಬಹಳ ಗಂಭೀರವಾದ ಭಾಷೆಯಲ್ಲಿ ಮುಂದಿಡುತ್ತದೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಶಿವರಾಮ ಕಾರಂತರು ಬರೆದ ಕಾದಂಬರಿ – ಚೋಮನ ದುಡಿ. ಈ ಕಾದಂಬರಿಯನ್ನು ಓದುವವರು ನಗಲು ಸಾಧ್ಯವೇ ಇಲ್ಲ. ಎರಡನೆಯದು, ದಲಿತರ ಸಮಸ್ಯೆಯನ್ನು ಮೃದು ಹಾಸ್ಯದಲ್ಲಿ ನವಿರಾಗಿ ಹಿಡಿದಿಡುವುದು. ದೇವನೂರ ಮಹಾದೇವ ಒಡಲಾಳ ಕಾದಂಬರಿಯಲ್ಲಿ ಹಾಗೆ ಮಾಡುತ್ತಾರೆ. ಇವನ್ನು ಮುಖ ಸಡಿಲಿಸಿಕೊಂಡು ಓದಬಹುದು. ಎರಡೂ ರೀತಿಯ ಬರವಣಿಗೆಗಳು ಗೌರವಕ್ಕೆ ಅರ್ಹವಾದುವೇ ಆಗಿವೆ. ಮುಖ್ಯವಾದ ವಿಷಯವೆಂದರೆ, ಗೀತಾ ಹರಿಹರನ್ ಈ ಕಾದಂಬರಿಯಲ್ಲಿ ಆ ಎರಡೂ ಧಾರೆಗಳನ್ನು ಬೆಸೆಯುವ ಪ್ರಯತ್ನ ಮಾಡಿ ಯಶಸ್ವಿಯಾಗಿರುವುದು.

ಎರಡನೆಯದಾಗಿ ಮತ್ತು ಕೊನೆಯದಾಗಿ, ಆಧುನಿಕ ಕತೆಯೊಂದನ್ನು ನಿರೂಪಿಸಲು ಕಾದಂಬರಿಕಾರರು ಗದ್ಯ ಮತ್ತು ಪದ್ಯವನ್ನು ಸಮ್ಮಿಶ್ರಗೊಳಿಸುವ ಹೊಸ ಹಾದಿಯೊಂದನ್ನು ಕಂಡುಕೊಂಡಿರುವುದು. ಹೀಗೆ ಮಾಡುವುದರ ಮೂಲಕ ನಿರೂಪಣೆಯ ಏಕತಾನತೆಯನ್ನೂ ಮೀರಲು ಅವರಿಗೆ ಸಾಧ್ಯವಾಗಿದೆ. ಗದ್ಯ ಹಾಗೂ ಪದ್ಯ ಎರಡೂ ಪ್ರಕಾರಗಳಲ್ಲಿಯೂ ತನ್ನ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಕ್ಕಿದೆ. ವಸ್ತುವಿನ ಅಗತ್ಯಕ್ಕೆ ತಕ್ಕ ಹಾಗೆ, ವಿವರಣೆ, ಚಿಂತನೆ ಮತ್ತು ಭಾವನೆಗಳನ್ನು ಕಟ್ಟಿಕೊಡಲು, ಗದ್ಯವನ್ನಾದರೂ ಬಳಸಬಹುದು, ಪದ್ಯವನ್ನಾದರೂ ಬಳಸಬಹುದು. ಈ ಹಾದಿಯು ಕನ್ನಡದಲ್ಲಿ ಚಂಪೂ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಚಂಪೂ ಪ್ರಕಾರವು ವೈವಿಧ್ಯ ಮತ್ತು ಪ್ರಯೋಗಶೀಲತೆಗಳಿಗೆ ಹೆಚ್ಚಿನ ಆಸ್ಪದ ಕೊಟ್ಟಿದೆ. ಪದ್ಯ ಮತ್ತು ಗದ್ಯಗಳೆರಡನ್ನೂ ಬಳಸುವುದರಿಂದ ಅದು ಸಹಜವಾಗಿ ಕಾವ್ಯ ಮೀಮಾಂಸೆಯ ಮತ್ತು ವಿಮರ್ಶೆಯ ಕೃತಕ ಗಡಿ ರೇಖೆಗಳನ್ನು ಮೀರಿದೆ.

ಈ ಎಲ್ಲಾ ಕಾರಣಗಳಿಂದ ಪ್ರಸ್ತುತ ಕಾದಂಬರಿಯು ಬಹಳ ಮಹತ್ವದ್ದಾಗಿದೆ. ಗಾಯತ್ರಿಯವರ ಅನುವಾದವೂ ಸೊಗಸಾಗಿದೆ. ಲೇಖಕರಿಗೂ ಅನುವಾದಕರಿಗೂ ಅಭಿನಂದನೆಗಳು.

‍ಲೇಖಕರು Admin

June 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: