ಪುರುಷೋತ್ತಮ ಬಿಳಿಮಲೆ ಓದಿದ- ಏಸೂರು ಕೊಟ್ಟರೂ ಈಸೂರು ಕೊಡೆವು

ಇತಿಹಾಸದ ಸೂಕ್ಷ್ಮ, ವರ್ತಮಾನದ ಅಗತ್ಯ ಅರಿತು ಕಟ್ಟಿದ ನಾಟಕ – ಏಸೂರು ಕೊಟ್ಟರೂ ಈಸೂರು ಕೊಡೆವು

ಪುರುಷೋತ್ತಮ ಬಿಳಿಮಲೆ
————————————————–

ಕೃತಿಗಾಗಿ ಸಂಪರ್ಕಿಸಿ: ಮಾವಲಿ ಪಬ್ಲಿಕೇಷನ್ಸ್ – 91641 49495


ಗೆಳೆಯ ಸಾಸ್ವೇಹಳ್ಳಿ ಸತೀಶರನ್ನು ನಾನು ನನ್ನ ಕನ್ನಡ ವಿಶ್ವವಿದ್ಯಾಲಯದ ದಿನಗಳಿಂದಲೂ ಬಲ್ಲೆ. ಅಧ್ಯಾಪಕ ವೃತ್ತಿಯೊಂದಿಗೆ ನಾಟಕ ರಚನೆ, ದಣಿವರಿಯದೆ ನಡೆಸುವ ರಂಗ ಪ್ರಯೋಗಗಳು, ನಿರಂತರ ಓದು, ಚರ್ಚೆ, ನಟನೆ, ಮತ್ತಿತರ ಚಟುವಟಿಕೆಗಳಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡಿರುವ ಅವರು ನನ್ನಂಥ ಹಲವರ ಸ್ಪೂರ್ತಿಯ ಕೇಂದ್ರವೂ ಹೌದು.

1996ರಿಂದ ಸಕ್ರಿಯವಾಗಿರುವ ಅವರ ‘ಹೊಂಗಿರಣ’ ತಂಡವು ಈಗಾಗಲೇ ಕರ್ನಾಟಕ ರಂಗಭೂಮಿಯಲ್ಲಿ ಮರೆಯಲಾಗದ ಗುರುತು ಮೂಡಿಸಿದೆ. ಸಾಸ್ವೇಹಳ್ಳಿ ನಿರ್ದೇಶಿಸಿದ ಏಕಲವ್ಯ, ಕನಸಿನವರು, ಧನ್ವಂತರಿ ಚಿಕಿತ್ಸೆ, ದೇವರ ಹೆಣ, ಮದಗದ ಕೆಂಚವ್ವ, ಭಳಾರೆ ವಿಚಿತ್ರಂ! ಮೊದಲಾದ ನಾಟಕಗಳು ಕರ್ನಾಟಕದಾದ್ಯಂತ ಹೆಸರು ಮಾಡಿವೆ. ಮಕ್ಕಳ ನಾಟಕಗಳಿಗೆ ಹೊಸ ಆಯಾಮ ನೀಡಿದ ಶ್ರೇಯಸ್ಸೂ ಅವರಿಗಿದೆ.

ಸಾಹಿತ್ಯದ ವಿದ್ಯಾರ್ಥಿಯಾಗಿರುವ ಅವರು ತಮ್ಮ ನಾಟಕಗಳಲ್ಲಿ ಭಾಷೆಯನ್ನು ಬಹಳ ಎಚ್ಚರದಿಂದ ಬಳಸುವುದನ್ನು ನಾನೇ ಕಂಡಿದ್ದೇನೆ. ಅವರೀಗ `ಏಸೂರ ಕೊಟ್ಟರೂ ಈಸೂರ ಕೊಡೆವು’ ಎಂಬ ಐತಿಹಾಸಿಕ ನಾಟಕವನ್ನು ಪ್ರಕಟಿಸುತ್ತಿದ್ದಾರೆ. ಭಾರತ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಸಂಭ್ರಮದ ಸಂದರ್ಭದಲ್ಲಿ (2022-23) ಸಿದ್ಧಗೊಂಡ ಈ ನಾಟಕವು ದೆಹಲಿಯೂ ಸೇರಿದಂತೆ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ಪ್ರಯೋಗಗೊಂಡಿದೆ. ವಸ್ತು ಮತ್ತು ತಂತ್ರದ ದೃಷ್ಟಿಯಿಂದ ವಿನೂತನವಾಗಿರುವ ಈ ನಾಟಕವು ಇತಿಹಾಸದ ವರ್ಣರಂಜಿತ ಪುಟವೊಂದನ್ನು ನಮ್ಮೆದುರು ಬಿಚ್ಚಿಡುವಲ್ಲಿ ಗೆಲುವು ಸಾಧಿಸಿದೆ.

ಸಾಮಾನ್ಯವಾಗಿ ನಾವು ಸ್ವಾತಂತ್ರ್ಯ ಹೋರಾಟಗಾರರೆಂದು ಮಹಾತ್ಮಾ ಗಾಂಧಿ, ಜವಾಹರಲಾಲ ನೆಹರೂ, ಬಾಲಗಂಗಾಧರ ತಿಲಕ್, ಸುಭಾಷ್ ಚಂದ್ರ ಬೋಸ್ ಮೊದಲಾದ ಮುಖ್ಯ ವಾಹಿನಿಯಲ್ಲಿರುವ ಮಹನೀಯರ ಹೆಸರನ್ನು ಹೇಳುತ್ತಲೇ ಇರುತ್ತೇವೆ. ಇದು ಸಹಜವೂ ಹೌದು, ಸರಿಯೂ ಹೌದು. ಅಹಿಂಸಾತ್ಮಕವಾದ ಆ ಹೋರಾಟವು ವಿಶ್ವಕ್ಕೇ ಒಂದು ಮಾದರಿಯಾಯಿತು. ಆದರೆ ಈ ಮಹನೀಯರ ಮಹಾನ್ ಸಾಧನೆಯ ಹಿಂದೆ ಅನೇಕ ಹೋರಾಟ ಮತ್ತು ಬಲಿದಾನಗಳ ರಕ್ತ ಸಿಕ್ತ ಚರಿತ್ರೆಯೂ ಇದೆ ಎಂಬುದನ್ನು ಮರೆಯಬಾರದು.

1857ರ ಮೊದಲ ಸ್ವಾತಂತ್ರ್ಯ ಹೋರಾಟಕ್ಕೂ ಮುನ್ನ ಭಾರತದಲ್ಲಿ ಪ್ರಾಂತೀಯ ಹೋರಾಟಗಳು ನಡೆಯುತ್ತಿದ್ದು ಅವುಗಳ ಸಂಖ್ಯೆ ನೂರಕ್ಕೂ ಹೆಚ್ಚು ಎಂದು ಈ ಕುರಿತು ಸಂಶೋಧನೆ ನಡೆಸಿರುವ ಡಾ. ಕ್ಯಾಥಲೀನ್ ಗಾಫ್ ಎಂಬವರು ಹೇಳಿದ್ದಾರೆ. 1770ರಿಂದ 1820ರವರೆಗೆ ಬಂಗಾಳದಲ್ಲಿ ನಡೆದ `ಸನ್ಯಾಸಿ ದಂಗೆ’, ಈಗಿನ ಜಾರ್ಖಂಡ ಪ್ರದೇಶದಲ್ಲಿರುವ ಛೋಟಾ ನಾಗಪುರದ ಪರಿಸರದಲ್ಲಿ ಸಂತಾಲೀ ಬುಡಕಟ್ಟಿನ ಜನರು ತಮ್ಮ ನೆಲದ ಮೇಲಿನ ಹಕ್ಕನ್ನು ಕಸಿದುಕೊಂಡ ಬ್ರಿಟಿಷರ ವಿರುದ್ಧ ತಿಲ್ಕಾ ಮಂಜಿಯ ನೇತೃತ್ವದಲ್ಲಿ ಸಾರಿದ ಯುದ್ಧ, 1780-81ರಲ್ಲಿ ನಡೆದ ಕಾಶಿಯ ಅರಸ ಚೈತ್ ಸಿಂಗನ ಸೈನಿಕರ ದಂಗೆ, 1781-82ರಲ್ಲಿ ಬಿಹಾರದ ಸುಮಾರು 20,000 ಜನರು ಜಮೀನ್ದಾರ್ ಫತೆ ಬಹದ್ದೂರ್ ಸಾಹಿಯ ನೇತೃತ್ವದಲ್ಲಿ ಬ್ರಿಟಿಷರ ವಿರುದ್ಧ ಸಂಘಟಿಸಿದ ಗೆರಿಲ್ಲಾ ಮಾದರಿಯ ಹೋರಾಟ, ಮೈಸೂರು ಪ್ರಾಂತ್ಯದ ಆದಾಯವನ್ನು ಗರಿಷ್ಠ ಮಟ್ಟಕ್ಕೇರಿಸಿದ ಟಿಪ್ಪೂ ಸುಲ್ತಾನ್ ನಡೆಸಿದ ಹೋರಾಟಗಳು, 1760ರಲ್ಲಿ ತಮಿಳುನಾಡಿನ ತೂತುಕುಡಿಯಲ್ಲಿ ವೀರ ಪಾಂಡ್ಯ ಕಟ್ಟಬೊಮ್ಮನ್ ಬ್ರಿಟಿಷರ ವಿಸ್ತರಣಾವಾದ, ಆಕ್ರಮಣ ಮತ್ತು ದಬ್ಬಾಳಿಕೆಯ ವಿರುದ್ಧ ನಡೆಸಿದ ನಿರ್ಣಾಯಕ ಹೋರಾಟ, ತಮಿಳುನಾಡಿನ ಶಿವಗಂಗೆಯ ಪೆರಿಯ ಮರುದು ಮತ್ತು ಚಿಣ್ಣ ಮರುದು ಎಂಬ ಹೆಸರಿನ ಸಹೋದರರ ಹೋರಾಟ, 1780ರಲ್ಲಿ ಹೈದರನ ಸೇನೆಯಲ್ಲಿದ್ದ ಧೋಂಡಿಯಾ ವಾಘ್ ಸಿಡಿದೆದ್ದ ರೀತಿ, ಕೇರಳದ ಕಣ್ಣೂರಿನ ಪಳಸ್ಸಿ ರಾಜಾ ಅಥವಾ ರಾಜಾ ಕೇರಳವರ್ಮನು 1793ರಿಂದ 1806ರವರೆಗೆ ಒಟ್ಟು 13 ವರ್ಷಗಳ ಕಾಲ ಬ್ರಿಟಿಷರೊಡನೆ ಕಾದಾಡಿದ್ದು, ಜಾಟರ ದಂಗೆ, ಬರೇಲಿ ಬಂಡಾಯ, ಅಮರ ಸುಳ್ಯದ ರೈತರ ದಂಗೆ, ಇತ್ಯಾದಿ ಹೋರಾಟಗಳು ನಮ್ಮ ಸ್ವಾತಂತ್ರ್ಯ ಚಳುವಳಿಗೆ ಹಿನ್ನೆಲೆಯಾಗಿ ಸಹಕರಿಸಿದ ಘಟನೆಗಳು. ಈ ಪ್ರಾಂತೀಯ ಹೋರಾಟಗಳ ಮುಂಚೂಣಿಯಲ್ಲಿದ್ದ ಅನೇಕರು ಸಾವನ್ನಪ್ಪಿದರು, ಗಲ್ಲಿಗೇರಿದರು, ಜೈಲು ಸೇರಿ ಅಲ್ಲಿಯೇ ಕೊನೆ ಉಸಿರೆಳೆದರು, ಹಲವರು ಗಡೀಪಾರಾದರು.

ಇಂಥವರಲ್ಲಿ ಹಲವರು ಈಗ ಮೌಖಿಕ ರೂಪದಲ್ಲಿ ನೆನಪಾಗಿ ಉಳಿದಿದ್ದಾರೆ. ಬ್ರಿಟಿಷರ ವಿರುದ್ಧ ಪ್ರಾದೇಶಿಕವಾದ ಮತ್ತು ಮೌಲಿಕವಾದ ಹೋರಾಟದ ಪರಂಪರೆಯೊಂದನ್ನು ನಿರ್ಮಿಸುವಲ್ಲಿ ಇವರೆಲ್ಲರೂ ಯಶಸ್ವಿಯಾಗಿದ್ದಾರೆ ಎಂಬುದನ್ನು ನಾವೆಂದೂ ಮರೆಯಕೂಡದು. ನಾಟಕಕಾರರು ಮೇಲಿನ ಘಟನೆಗಳನ್ನು ಆಳವಾಗಿ ಅಧ್ಯಯನ ಮಾಡಿ ರಂಗಭೂಮಿಯಲ್ಲಿ ಅವುಗಳನ್ನು ಪ್ರಸ್ತುತಗೊಳಿಸುವ ಅವಶ್ಯಕತೆ ಇದೆ.

ಕರ್ನಾಟಕದ ಈಸೂರಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟವು ಮೇಲೆ ಪಟ್ಟಿ ಮಾಡಿದ ಅನೇಕ ಹೋರಾಟಗಳಿಗಿಂತ ಭಿನ್ನವಾಗಿದೆ. ಈಸೂರು ಘಟನೆಯ ಕೇಂದ್ರದಲ್ಲಿ ಗಾಂಧೀಜಿ ಇದ್ದಾರೆ. 1942 ಆಗಸ್ಟ್ ಎಂಟರಂದು ಮುಂಬೈನಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿಯವರು `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಕರೆ ಕೊಟ್ಟದ್ದೇ ಈಸೂರು ಘಟನೆಗೆ ಮೂಲ ಪ್ರೇರಣೆ. 1942ರ ಹೊತ್ತಿಗೆ ನಮ್ಮಲ್ಲಿ ರಾಷ್ಟ್ರೀಯ ಪ್ರಜ್ಞೆಯೂ ಜಾಗೃತವಾಗಿತ್ತಾದ್ದರಿಂದ ಈಸೂರು ಹೋರಾಟವನ್ನು ನಾವು ಪ್ರಾದೇಶಿಕ ಹೋರಾಟಗಳಿಗಿಂತ ಭಿನ್ನವಾಗಿಯೇ ನೋಡಬೇಕಾಗಿದೆ.

ಚರಿತ್ರೆಯಲ್ಲಿ ನಡೆದ ಘಟನೆಯೊಂದಕ್ಕೆ ಅಪಚಾರವಾಗದ ರೀತಿಯಲ್ಲಿ ಸಾಸ್ವೇಹಳ್ಳಿಯವರು ಈ ನಾಟಕವನ್ನು ಬಹಳ ಎಚ್ಚರಿಕೆಯಿಂದ ಬರೆದಿದ್ದಾರೆ. 1942ರಲ್ಲಿ ಘೋಷಿತವಾದ `ಭಾರತ ಬಿಟ್ಟು ತೊಲಗಿ’ ಚಳವಳಿಯ ಪ್ರೇರಣೆಯಿಂದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕುಮದ್ವತಿ ನದಿಯ ದಂಡೆಯ ಮೇಲಿರುವ ಪುಟ್ಟ ಗ್ರಾಮವಾದ ಈಸೂರಿನ ಜನರು ತಮ್ಮ ಸ್ವಾತಂತ್ರ್ಯವನ್ನು ತಾವೇ ಘೋಷಿಸಿಕೊಳ್ಳುವ ಅಪೂರ್ವ ದಿಟ್ಟತನವನ್ನು ತೋರುತ್ತಾರೆ. ಈ ಗ್ರಾಮದ ಯುವಕರು ಗಾಂಧಿ ಟೋಪಿ ಧರಿಸುತ್ತಾರೆ. ರಾಷ್ಟ್ರಧ್ವಜ ಹಿಡಿಯುತ್ತಾರೆ. ಬ್ರಿಟಿಷ್ ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಅತೀವ ಧೈರ್ಯ ತೋರಿಸಿ ಸಭೆಗಳನ್ನು ಆಯೋಜಿಸುತ್ತಾರೆ. ಬ್ರಿಟಿಷರಿಗೆ ಬಹಳ ಅಗತ್ಯವಾಗಿದ್ದ ಕಂದಾಯವನ್ನೇ ನಿರಾಕರಿಸುತ್ತಾರೆ. 1942ರ ಸೆಪ್ಟೆಂಬರ್ 28ರಂದು ಊರಿನ ವೀರಭದ್ರನ ದೇವಾಲಯದ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ ಸ್ವಾತಂತ್ರ್ಯವನ್ನು ಘೋಷಿಸುತ್ತಾರೆ. ಬ್ರಿಟಿಷರ ಪರವಾಗಿದ್ದ ಪಟೇಲ ಮತ್ತು ಶಾನುಭೋಗರ ದಫ್ತರುಗಳನ್ನು ಕಿತ್ತುಕೊಂಡು ಬೆಂಕಿ ಹಚ್ಚುತ್ತಾರೆ.

ಈ ಘಟನೆ ಘಟಿಸಿದ ಮೂರು ದಿನಗಳ ಅನಂತರ, ಮೈಸೂರು ಸರ್ಕಾರ ಅಮಲ್ದಾರ್ ಚನ್ನಕೃಷ್ಣಪ್ಪ ಮತ್ತು ಸಬ್ ಇನ್ಸ್ಪೆಕ್ಟರ್ ಕೆಂಚೆಗೌಡನನ್ನು ಈಸೂರಿಗೆ ಕಳುಹಿಸುತ್ತದೆ. ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳಿಗೆ ಖಾದಿ ಟೋಪಿ ಕೊಟ್ಟು, ಅದನ್ನು ಧರಿಸಲು ಜನರು ಒತ್ತಾಯ ಮಾಡುತ್ತಾರೆ. ಆದರೆ ಪ್ರಜೆಗಳು ಹಾರಿಸಿದ ಸ್ವಾತಂತ್ರ್ಯ ಧ್ವಜವನ್ನು ಅಧಿಕಾರಿಗಳು ಅವಮಾನಿಸುತ್ತಾರೆ. ಕೋಪಗೊಂಡ ಜನರು ಗಲಭೆ ಆರಂಭಿಸುತ್ತಾರೆ. ಈ ಗೊಂದಲದಲ್ಲಿ ಕೆಂಚೇಗೌಡ ಗುಂಡು ಹಾರಿಸುತ್ತಾನೆ. ಚಳವಳಿಗಾರರಲ್ಲಿ ಕೆಲವರಿಗೆ ಗುಂಡು ತಗಲುತ್ತದೆ. ಉದ್ರಿಕ್ತಗೊಂಡ ಜನರು ಅಮಾಲ್ದಾರ್ ಚನ್ನಕೃಷ್ಣಯ್ಯ ಹಾಗೂ ಕೆಂಚೇಗೌಡರನ್ನು ಕೊಂದುಹಾಕುತ್ತಾರೆ..

ಈ ಸುದ್ದಿ ತಿಳಿದ ತಕ್ಷಣ ಸರಕಾರವು ಈಸೂರಿಗೆ ಸೈನ್ಯ ಮತ್ತು ಪೊಲೀಸ್ ಪಡೆಯನ್ನು ಕಳುಹಿಸುತ್ತದೆ. ಊರಿನ ಜನ ಕಾಡು ಸೇರುತ್ತಾರೆ. ಸೈನ್ಯವು ಅತಿಕ್ರಮಣ ನಡೆಸಿ, ಕ್ರೌರ್ಯ ಪ್ರದರ್ಶಿಸಿ, ಗುಂಡು ಹಾರಿಸಿ 41 ಜನರನ್ನು ಬಂಧಿಸುತ್ತದೆ. ದಂಗೆಗೆ ಕಾರಣರಾದವರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ಹೂಡಲಾಗುತ್ತದೆ. ಮುಂದೆ, ಬಹುಮಟ್ಟಿಗೆ ಏಕಪಕ್ಷೀಯವಾಗಿ ನಡೆದ ವಿಚಾರಣೆಯಲ್ಲಿ, 1943ರ ಜನವರಿ ಒಂಬತ್ತರಂದು ಮೈಸೂರಿನ ಉಚ್ಛ ನ್ಯಾಯಾಲಯವು ಹೋರಾಟಗಾರರಾದ ಗುರಪ್ಪ, ಮಲ್ಲಪ್ಪ, ಹಾಲಪ್ಪ, ಸೂರ್ಯನಾರಾಯಣಾಚಾರ್ಯ ಮತ್ತು ಶಂಕರಪ್ಪ ಎಂಬ ಹೆಸರಿನ ಐವರಿಗೆ ಮರಣದಂಡನೆ ವಿಧಿಸುತ್ತದೆ. ಅದೇ ವರ್ಷ ಮಾರ್ಚ್ ತಿಂಗಳಲ್ಲಿ ಅವರನ್ನು ಗಲ್ಲಿಗೇರಿಸಲಾಯಿತು. ಕೆ. ಗುರುಪ್ಪ, ಮತ್ತು ಮಲ್ಲಪ್ಪ 1943ರ ಮಾರ್ಚ್ ಎಂಟರಂದು ಗಲ್ಲಿಗೇರಿದರೆ, ಸೂರ್ಯನಾರಾಯಣಾಚಾರ್, ಮತ್ತು ಹಾಲಪ್ಪರನ್ನು ಮಾರ್ಚ್ ಒಂಬತ್ತರಂದು ಹಾಗೂ ಶಂಕರಪ್ಪ ಅವರನ್ನು ಮಾರ್ಚ್ 10ರಂದು ಗಲ್ಲಿಗೇರಿಸಲಾಗುತ್ತದೆ. ಸಿದ್ಧಮ್ಮ, ಹಾಲಮ್ಮ ಮತ್ತು ಪಾರ್ವತಮ್ಮ ಎಂಬ ಹೋರಾಟಗಾರ್ತಿಯರಿಗೆ ಜೀವಾವಧಿ ಗಡಿಪಾರು ಶಿಕ್ಷೆ ನೀಡಲಾಯಿತು. 1946ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮೂವರು ಮಹಿಳೆಯರನ್ನು ಬಿಡುಗಡೆಗೊಳಿಸಲಾಯಿತು.

ಹೀಗೆ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಈಸೂರು ದುರಂತವು ಚಿರಂತನ ನೆನಪಾಗಿ ಉಳಿಯಿತು. ಗಾಂಧೀಜಿಯ ಅಹಿಂಸಾತ್ಮಕ ಕರೆಗೆ ಓಗೊಟ್ಟ ಯುವಕರು ಅಂತಿಮವಾಗಿ ಉಗ್ರ ಹೋರಾಟಕ್ಕಿಳಿದು ಸಾವನ್ನಪ್ಪಬೇಕಾಯಿತು. ವಿಶ್ವದ ಎಲ್ಲೆಡೆಗಳಲ್ಲಿಯೂ ತಮ್ಮ ವಸಾಹತುಗಳನ್ನು ಸ್ಥಾಪಿಸಿ, ಅತ್ಯಂತ ಬಲಿಷ್ಠವಾದ ಸೈನ್ಯ ಮತ್ತು ಅತ್ಯಾಧುನಿಕ ಹೋರಾಟದ ಯೋಜನೆಗಳನ್ನು ಹೊಂದಿದ್ದ ಬ್ರಿಟಿಷ್ ಸೈನ್ಯದೆದುರು ಈಸೂರಿನ ಪುಟ್ಟ ಹೋರಾಟ ಸೋತದ್ದರಲ್ಲಿ ಅಚ್ಚರಿಯೇನೂ ಇಲ್ಲ. ಆದರೆ ಈಸೂರು ಘಟನೆ ಮುಂದಿನ ಹೋರಾಟಗಳಿಗೆ ದೊಡ್ಡ ಸ್ಫೂರ್ತಿಯಾಯಿತು. `ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂಬ ಘೋಷಣೆಯು ಒಂದು ಗಾದೆಯ ಮಾತಾಗಿ ಜನರ ನಡುವೆ ಉಳಿದುಹೋಯಿತು.

ದೆಹಲಿಯಲ್ಲಿ ಈ ನಾಟಕದ ಪ್ರದರ್ಶನವನ್ನು ನಾನು ಉಸಿರು ಬಿಗಿ ಹಿಡಿದು ನೋಡಿದ್ದೆ. ನಾಟಕವು ಸ್ವಾತಂತ್ರ್ಯ ಪೂರ್ವ ಕಾಲಘಟ್ಟದಲ್ಲಿ ನಡೆದ ಹೋರಾಟವೊಂದನ್ನು ಕುರಿತಾಗಿದ್ದರೂ ಅದು ಸಮಕಾಲೀನವೇ ಆಗಿದೆ ಎಂಬ ಭಾವವನ್ನು ನನ್ನಲ್ಲಿ ಅದು ಮೂಡಿಸಿತ್ತು. 40 ಜನ ಕಲಾವಿದರಿದ್ದ ‘ಹೊಂಗಿರಣ’ ತಂಡವು ಇತಿಹಾಸದ ಘಟನೆಗಳನ್ನು ರಂಗದಲ್ಲಿ ಅನಾವರಣ ಮಾಡುವಾಗ ಇಡೀ ಊರನ್ನೇ ನಾಯಕ ಸ್ಥಾನದಲ್ಲಿರಿಸಿ, ಯಾವುದೇ ಒಂದು ಪಾತ್ರ ಹೆಚ್ಚು ಬೆಳೆಯದ ಹಾಗೆ ನೋಡಿಕೊಂಡಿತ್ತು. ಹಾಗಾಗಿಯೇ ನಾಟಕ ಮುಗಿಯುವ ಹೊತ್ತಿಗೆ ಪ್ರೇಕ್ಷಕರೆಲ್ಲ `ಏಸೂರು ಕೊಟ್ಟರೂ ಈಸೂರು ಬಿಡೆವು’ ಅಂತ ಘೋಷಣೆ ಕೂಗುವಂತಾಯಿತು.

ಇಂಥ ಚಾರಿತ್ರಿಕ ನಾಟಕಗಳು ಮತ್ತಷ್ಟು ಬರಲಿ ಎಂದಾಶಿಸುತ್ತೇನೆ. ಗಿರೀಶ್ ಕಾರ್ನಾಡರ ನಾಟಕಗಳನ್ನು ಆಳವಾಗಿ ಅಭ್ಯಸಿಸಿರುವ ಸಾಸ್ವೇಹಳ್ಳಿ ಸತೀಶರಿಗೆ ಇತಿಹಾಸದ ಸೂಕ್ಷ್ಮಗಳೂ ಗೊತ್ತು, ವರ್ತಮಾನದ ಅಗತ್ಯಗಳೂ ಗೊತ್ತು. ಹೀಗಾಗಿಯೇ ಅವರು ಇಂಥ ಇನ್ನಷ್ಟು ನಾಟಕಗಳನ್ನು ಬರೆಯಬಲ್ಲರು.

‍ಲೇಖಕರು avadhi

August 28, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: