ಮಧುಬಾಲ
**
ಇಂದು
ಬದುಕು ಯಾವುದೋ ನಶೆಯಲ್ಲಿ
ಓಡುವ ಗಡಿಯಾರದ ಮುಳ್ಳು
ಯಾವ ಪಂದ್ಯವ ಗೆಲ್ಲುವ ಆತುರ
ಯಾವ ತುದಿಯ ಮುಟ್ಟುವ ಕಾತುರ
ಏನು ಅರಿವಿಲ್ಲದೆ ಆಂತರ್ಯದ ಪರಿವಿಲ್ಲದೆ
ಓಡುತ್ತಿದ್ದೇವೆ ನಾವು ಹಗಲು ಇರುಳು
ಮೂಲೆಯಲ್ಲಿ ಅರಳುವ ಹಳದಿ ಹೂ
ಮರೆಯಲ್ಲಿ ಹಾಡುವ ಕೋಗಿಲೆಯ ಕೂಹೂ
ತಂಗಾಳಿಯ ಜೊತೆ ಎಲೆಗಳ ಮರ್ಮರ
ನೀಲಿ ನಭದಲಿ ಬಿಳಿ ಮೋಡಗಳ ಚಿತ್ತಾರ
ಸಮಯವೆಲ್ಲಿದೆ ಜಗಕೆ ಇದನ್ನೆಲ್ಲ ಆಸ್ವಾದಿಸಲು?
ಪಾರ್ಕಿನಲ್ಲಿ ಆಡುವ ಮಕ್ಕಳ ಕಿಲಕಿಲ ನಗು
ಆಗಾಗ ಪ್ರೀತಿಗಾಗಿ ಬೇಡುವ ಒಳಗಿನ ಮಗು
ಪುಟ್ಟ ನಾಲೆಯಲಿ ಯಾರೋ ಬಿಟ್ಟ ದೋಣಿ
ಮಣ್ಣಲ್ಲಿ ಬಿದ್ದ ತುಕ್ಕು ಹಿಡಿದ ಹಳೆಯ ಆಣಿ
ಸಮಯವೆಲ್ಲಿದೆ ಜಗಕೆ ಇದನ್ನೆಲ್ಲ ಗಮನಿಸಲು?
ಸೋಲು-ಗೆಲುವು ಓಟದಲ್ಲಿ ನಿರತರು ಎಲ್ಲರು
ನಿಲ್ಲುವುದು ಯಾವಾಗ ಯಾರು ಬಲ್ಲರು
ಸಾವು ಕರೆದಾಗ ಆಗಿರಬೇಕು ತಯಾರು
ಅಲ್ಲಿಯವರೆಗೆ ಕರ್ಮದಿಂದ ಆಗಬೇಕು ಪಾರು
ಸಮಯವೆಲ್ಲಿದೆ ಜಗಕೆ ಇದನ್ನೆಲ್ಲ ಅರಿಯಲು?
ಜಗವ ಸುತ್ತುತ್ತಿದೆ ಮನಸು ಕಾಣದ ಗುರಿಯ ತಲುಪಲು
0 Comments