‘ಪುಟ್ಟ ಝಲಕ್ಕುಗಳಲ್ಲಿ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ನೀವು ಕಂಡ ದಿಲ್ಲಿಯ ಮೊದಲ ಝಲಕ್ಕಿನ ಬಗ್ಗೆ ಹೇಳಿ ಎಂದು ನಾನು ಸಾಮಾನ್ಯವಾಗಿ ಎಲ್ಲರ ಬಳಿ ಕೇಳುತ್ತಿರುತ್ತೇನೆ. 

ಏಕೆಂದರೆ ವ್ಯಕ್ತಿಯಾಗಲಿ, ಶಹರವಾಗಲಿ; ʼಫಸ್ಟ್ ಇಂಪ್ರೆಷನ್ʼಗಳೆಂದು ಕರೆಯಲಾಗುವ ಸಂಗತಿಯು ನಮ್ಮಲ್ಲಿ ವಿವಿಧ ತರಹದ ತಲ್ಲಣಗಳನ್ನು ಹುಟ್ಟುಹಾಕುತ್ತವೆ. ಇದು ಸಹಜವೂ ಹೌದು. ಇಂದು ದಿಲ್ಲಿಯನ್ನು ಮನದನ್ನೆಯಂತೆ ಪ್ರೀತಿಸುವವರಿದ್ದಾರೆ.

ದಿಲ್ಲಿಯನ್ನು ನಖಶಿಖಾಂತ ದ್ವೇಷಿಸುವವರೂ ಇದ್ದಾರೆ. ದಿಲ್ಲಿಗೆ ಒಮ್ಮೆಯೂ ಕಾಲಿರಿಸದಿದ್ದ ಹಲವರ ಬಳಿಯೂ ದಿಲ್ಲಿಯ ಬಗ್ಗೆ ಅವರದ್ದೇ ಆದ ಅಭಿಪ್ರಾಯಗಳಿರಬಹುದು. ಅದು ಪೂರ್ವಾಗ್ರಹದ್ದೋ, ಗಾಳಿಸುದ್ದಿಗಳಿಂದ ಕೇಳಿ ತಿಳಿದುಕೊಂಡಿದ್ದೋ, ಮತ್ತೊಂದೋ ಆಗಿರಬಹುದು. ಒಟ್ಟಿನಲ್ಲಿ ಎಲ್ಲವೂ ಅವರವರ ಭಾವಕ್ಕೆ. 

ಹಿಂದೆ ನಾನು ಅಂಗೋಲಾದ ಬಗ್ಗೆ ಬರೆಯುತ್ತಿದ್ದಾಗ ಅದನ್ನು ಪ್ರವಾಸಕಥನದ ರೂಪದಲ್ಲೇ ಹಲವಾರು ಓದುಗರು ಅಪ್ಪಿಕೊಂಡಿದ್ದರು. ಇದು ಪ್ರವಾಸಕಥನವಲ್ಲ, ಬದಲಾಗಿ ವಾಸ ಕಥನ ಎಂಬ ಮಾತುಗಳು ಮುಂದೆ ಕೇಳಿಬಂದಾಗ ಸ್ವತಃ ನನಗೇ ಅಚ್ಚರಿಯಾಗಿತ್ತು. ಅಸಲಿಗೆ ಇಂಥದ್ದೊಂದು ಹೆಸರಿನ ಬಗ್ಗೆ ನಾನು ಯಾವತ್ತೂ ಯೋಚಿಸಿಯೇ ಇರಲಿಲ್ಲ.

ಕೆಲವೇ ದಿನಗಳ ಕಾಲ ಸ್ಥಳವೊಂದರಲ್ಲಿ ಇದ್ದು ಅಲ್ಲಿಯ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳುವುದಕ್ಕೂ, ಅಲ್ಲೇ ಕೆಲ ವರ್ಷಗಳ ಕಾಲ ಇದ್ದು ಅಲ್ಲಿಯ ತಲ್ಲಣಗಳನ್ನು ಅರ್ಥೈಸಿಕೊಳ್ಳುವುದಕ್ಕೂ ಇರುವ ವ್ಯತ್ಯಾಸಗಳು ಹಲವು. ಹೀಗಾಗಿ ಶಹರದ ಕಥನಗಳಲ್ಲಿ ಅಲ್ಲಿ ನೆಲೆಸಿರುವ ಜನರ, ಜನಜೀವನದ ಕಥನಗಳೂ ನನಗೆ ಮುಖ್ಯವಾಗುವುದು ಈ ದೃಷ್ಟಿಯಲ್ಲಿ. 

ವಿವಿಧ ಹಿನ್ನೆಲೆಯ ಮಂದಿಗಳಲ್ಲಿ ದಿಲ್ಲಿಯು ಎಂತೆಂಥಾ ಫಸ್ಟ್ ಇಂಪ್ರೆಷನ್ ಗಳನ್ನು ಹುಟ್ಟಿಸಿರಬಹುದು ಎಂದು ನನ್ನಲ್ಲಿದ್ದ ಕುತೂಹಲವು ಇದೇ ಕಾರಣದಿಂದಾಗಿ ಮೊಳೆತಿದ್ದು. ಮೊದಲ ಬಾರಿ ನಾನು ಅಪ್ಪನೊಂದಿಗೆ ದಿಲ್ಲಿಯ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ನಿಗೆ ಬಂದಿಳಿದಾಗ ಏನನ್ನು ನಿರೀಕ್ಷಿಸಬೇಕೆಂಬ ಕನಿಷ್ಠ ಅಂದಾಜೂ ನನ್ನಲ್ಲಿರಲಿಲ್ಲ. ಅದ್ಯಾವ ಭಂಡಧೈರ್ಯವೋ ಗೊತ್ತಿಲ್ಲ. ಸರಿಯಾಗಿ ನನ್ನ ಜಿಲ್ಲೆಯನ್ನೇ ನೋಡಿರದಿದ್ದ ನಾನು ನೇರವಾಗಿ ದಿಲ್ಲಿಯಲ್ಲಿ ಬಂದಿಳಿದಿದ್ದೆ. ಥೇಟು ಅಕ್ವೇರಿಯಮ್ಮಿನ ಮೀನೊಂದು ಏಕಾಏಕಿ ಸಮುದ್ರಕ್ಕೆ ಬಂದು ಬಿದ್ದಂತೆ. 

ಸರಿಯಾಗಿ ಒಂದು ದಶಕದ ಹಿಂದೆ, ನಿಜಾಮುದ್ದೀನ್ ರೈಲ್ವೇ ಸ್ಟೇಷನ್ನುಗಳಲ್ಲಿ ಓಡಾಡುತ್ತಿದ್ದ ಕೆಲ ಸೈಕಲ್ ರಿಕ್ಷಾಗಳನ್ನು ಹೊರತುಪಡಿಸಿದರೆ ಬೇರೇನೂ ನನ್ನನ್ನು ಅಷ್ಟಾಗಿ ಆಕರ್ಷಿಸಿರಲಿಲ್ಲ. ಜೂನ್ ತಿಂಗಳ ರಣಬಿಸಿಲಿನಲ್ಲಿ ತಕ್ಷಣಕ್ಕೆ ಕಂಡಿದ್ದೇ ಅದು. ಮುಂದೆ ಅಲ್ಲಿಂದ ಟ್ಯಾಕ್ಸಿಯಂತಿದ್ದ ವಿಚಿತ್ರ ವ್ಯಾನೊಂದರಲ್ಲಿ ನಾವು ಹರಿಯಾಣಾದವರೆಗೆ ಬಂದಿದ್ದೆವು. ಹೀಗೆ ನಾವು ಬಂದಿಳಿದಿದ್ದ ಹರಿಯಾಣಾದ ಭಾಗವು ವಿಲಕ್ಷಣ ಗೊಂದಲದಲ್ಲಿ ಕಂಗಾಲಾಗಿದ್ದ ಜನನಿಬಿಡ ಹಳ್ಳಿಯಂತಿತ್ತು. ನಾವಂದು ಅಲೆದಾಡುತ್ತಿದ್ದಿದ್ದು ಅಸಲಿಗೆ ಅತ್ತ ಪೂರ್ಣಪ್ರಮಾಣದ ಹಳ್ಳಿಯೂ ಅಲ್ಲದ, ಇತ್ತ ಸಂಪೂರ್ಣ ನಗರವೂ ಅಲ್ಲದ ಹಳೇ ಗುರ್ಗಾಂವ್ ನಲ್ಲಿ. ಗುರ್ಗಾಂವ್/ಗುಡ್ಗಾಂವ್ ಆಗಿನ್ನೂ ಗುರುಗ್ರಾಮ ಆಗಿರಲಿಲ್ಲ. ವಿಚಿತ್ರವೆಂದರೆ ಹಳೇ ಗುರುಗ್ರಾಮದ ಈ ಭಾಗವು ಅಂದಿನಿಂದ ಇಂದಿನವರೆಗೆ ಕಿಂಚಿತ್ತೂ ಬದಲಾಗದೆ ಉಳಿದಿದೆ.  

ತದನಂತರ ಕಂಡ ದಿಲ್ಲಿಯು ನನ್ನನ್ನು ಬಹುವಾಗಿ ಆಕರ್ಷಿಸಿದ್ದು ಸತ್ಯ. ವಿಶಾಲವಾದ ರಸ್ತೆಗಳು, ರಸ್ತೆಗಳನ್ನು ಆವರಿಸಿದ್ದ ಹಚ್ಚಹಸಿರಿನ ನೈಸರ್ಗಿಕ ಕೊಡೆಗಳು, ಆಕರ್ಷಕವಾದ ಸಾಂಪ್ರದಾಯಿಕ ಶೈಲಿಯ ಕಟ್ಟಡಗಳು, ಇತಿಹಾಸವನ್ನು ಸಾರುವ ಕೋಟೆಗಳು, ಹುಡುಕಿದರೆ ಕತೆಗಳ ಕೊಪ್ಪರಿಗೆಯೇ ದಕ್ಕಬಹುದೇನೋ ಎಂದನ್ನಿಸುವ ಇಕ್ಕಟ್ಟು ಗಲ್ಲಿಗಳು, ಆಯ್ದ ಪ್ರದೇಶಗಳ ವೈಭವ, ಶಕ್ತಿಕೇಂದ್ರಗಳ ಗತ್ತು…

ಹೀಗೆ ದಿಲ್ಲಿಯ ಮೋಡಿಯು ನನ್ನನ್ನು ನಿಧಾನವಾಗಿ ತನ್ನತ್ತ ಸೆಳೆಯುತ್ತಲಿತ್ತು. ಮುಂದೆ ಇದು ಯಾವ ಮಟ್ಟಿಗೆ ಹೋಗಿತ್ತೆಂದರೆ ಸಿಗುತ್ತಿದ್ದ ಒಂದು ಭಾನುವಾರವನ್ನು ನಾನು ದಿಲ್ಲಿಯಲ್ಲೇ ಕಳೆಯುತ್ತಿದ್ದೆ. ದಿಲ್ಲಿಯ ಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಏಕಾಂಗಿಯಾಗಿ ಅಲೆದಾಡುತ್ತಿದ್ದೆ. 

ನನ್ನ ಮಿತ್ರರೊಬ್ಬರು ಹಿಂದೊಮ್ಮೆ ಜೈಪುರಕ್ಕೆ ಬಂದುಹೋಗಿದ್ದಾಗ ತನಗಾದ ವಿಚಿತ್ರ ಅನುಭವವೊಂದನ್ನು ಹೇಳಿಕೊಂಡಿದ್ದರು. ಜೈಪುರದ ಐತಿಹಾಸಿಕ ತಾಣಗಳನ್ನು ತೋರಿಸುತ್ತಿದ್ದ ಗೈಡ್ ಒಬ್ಬ ಅಲ್ಲಿಯ ರಾಜಮಹಾರಾಜರ ಲೈಂಗಿಕ ಸಾಹಸಗಳನ್ನೇ ಹೆಚ್ಚಾಗಿ ರೋಚಕವಾಗಿ ವರ್ಣಿಸುತ್ತಿದ್ದನಂತೆ. ಕೆಲವೊಮ್ಮೆ ಜನರು ಕೇಳಬಯಸುವ ಥ್ರಿಲ್ಲಿಂಗ್ ಸಂಗತಿಗಳನ್ನೇ ಗೈಡ್ ಗಳು ಸೃಷ್ಟಿಸಿ, ಇತಿಹಾಸದ ಹೆಸರಿನಲ್ಲಿ ಹರಿಯಬಿಡುತ್ತಿರುತ್ತಾರೆ.

ಹಲವು ಬಾರಿ ಇಂತಹ ಕತೆಗಳು ಅದೆಷ್ಟು ಹಾಸ್ಯಮಯವಾಗಿರುತ್ತದೆ ಎಂದರೆ ಕತೆಯನ್ನು ಕೇಳುವ ವ್ಯಕ್ತಿಯು ಇದು ಕಟ್ಟುಕತೆಯೆಂದು ಒಳಗೊಳಗೇ ಅರಿತಿರುತ್ತಾನೆ. ಹೀಗೆ ಎರಡು ಕಪ್ ಇತಿಹಾಸಕ್ಕೆ ಒಂದಿಷ್ಟು ಸ್ಥಳೀಯ ಸೊಗಡು, ಒಂದು ಚಮಚ ಕಲ್ಪನೆ ಮತ್ತು ರುಚಿಗೆ ತಕ್ಕಷ್ಟು ರೋಚಕತೆಗಳನ್ನು ಸೇರಿಸಿಬಿಟ್ಟರೆ ಅಲ್ಲೊಂದು ಭರ್ಜರಿ ಖಾಸ್ ಖಾದ್ಯವು ತಯಾರಾಗಿರುತ್ತದೆ.  

ಜೈಪುರದಲ್ಲಿ ಈ ಬಗೆಯ ಅನುಭವವು ನನಗೂ ಒಂದಷ್ಟು ಆಗಿದ್ದ ಪರಿಣಾಮವಾಗಿ, ಇದನ್ನು ಗ್ರಹಿಸಿಕೊಳ್ಳುವುದು ನನಗೆ ಸುಲಭವಾಗಿತ್ತು. ಆದರೆ ಶಹರವೊಂದರ ಬಗೆಗಿನ ಇಂತಹ ಫಸ್ಟ್ ಇಂಪ್ರೆಷನ್ ಗಳು ಸಾಮಾನ್ಯವಾಗಿ ಅಮಾಯಕರ ದಾರಿ ತಪ್ಪಿಸುತ್ತವೆ. ಕೆಲಸಕ್ಕೆ ಬಾರದ ಪೂರ್ವಾಗ್ರಹದ ಅಭಿಪ್ರಾಯಗಳನ್ನು ಹುಟ್ಟುಹಾಕುತ್ತವೆ. ದಿಲ್ಲಿಗೆ ಅಂಟಿಕೊಂಡಿದ್ದ ‘ರೇಪ್ ರಾಜಧಾನಿ’ ಎಂಬ ಹಣೆಪಟ್ಟಿಯು ಇದಕ್ಕೊಂದು ಉತ್ತಮ ಉದಾಹರಣೆ. 

ಬರ್ಬರ ಅತ್ಯಾಚಾರಗಳು ಭಾರತದ ಇತರ ಭಾಗಗಳಲ್ಲಿ ನಡೆಯುವುದಿಲ್ಲ ಅಂತೇನಿಲ್ಲ. ಆದರೆ ದಿಲ್ಲಿಯಲ್ಲಿ ನಡೆಯುವ ಪ್ರಕರಣಗಳು ದೊಡ್ಡ ಮಟ್ಟಿನ ಸುದ್ದಿಯಾಗುತ್ತವೆ. ಮುಖ್ಯವಾಹಿನಿಯ ವೇದಿಕೆಗಳಲ್ಲಿ ಚರ್ಚೆಯ ವಸ್ತುಗಳಾಗುತ್ತವೆ. ಹೀಗಿರುವಾಗ ದಿಲ್ಲಿಯ ಸುರಕ್ಷತೆಯ ಬಗ್ಗೆ ಹುಟ್ಟಿಕೊಂಡಿರುವ ಈ ಬಗೆಯ ದೃಷ್ಟಿಕೋನವು ಹೊಸಬರ ಪಾಲಿಗಂತೂ ಸುಲಭವಾಗಿ ದಾರಿತಪ್ಪಿಸುವಂಥದ್ದು. 

ಇದೇ ರೀತಿ ನಮ್ಮ ಭಕ್ತಿಗೀತೆಗಳಲ್ಲಿ ಯಥೇಚ್ಛವಾಗಿ ಕೇಳಿದ್ದ ಯಮುನಾ ನದಿಯನ್ನು ಮೊದಲ ಬಾರಿ ಕಣ್ಣಾರೆ ಕಂಡ ನಾನು ಭ್ರಮನಿರಸನಕ್ಕೊಳಗಾಗಿದ್ದೆ. ಜಮುನೆಯು ಇಲ್ಲಿ ಇನ್ನಿಲ್ಲದಂತೆ ಕಲುಷಿತಳಾಗಿದ್ದಾಳೆ. ಇಂದು ದಿಲ್ಲಿಯಲ್ಲಿರುವ ಜಮುನೆಯ ಹಲವು ನದೀತಟಗಳು ಮಲಮೂತ್ರ, ಪ್ಲಾಸ್ಟಿಕ್ ತ್ಯಾಜ್ಯಗಳು, ಕಸ-ಕಡ್ಡಿ, ಕಾರ್ಖಾನೆಗಳ ತ್ಯಾಜ್ಯಗಳಿಂದ ಗಬ್ಬೆದ್ದುಹೋಗಿದೆ. ಇಂತಹ ದೃಶ್ಯಗಳನ್ನು ನೋಡಿದಾಕ್ಷಣ ಪವಿತ್ರ ನದಿಯ ಹಿಂದಿರುವ ಅಷ್ಟೂ ಪುರಾಣ-ಪುಣ್ಯಕತೆಗಳು, ಇತಿಹಾಸ-ದಂತಕತೆಗಳು ನೆಲಕಚ್ಚಿ ಕಣ್ಣೆದುರಿಗಿರುವ ದುರಂತವಷ್ಟೇ ಎದ್ದುಕಾಣುತ್ತದೆ. ಬಹುಷಃ ಇದಕ್ಕಿಂತ ನಿರಾಶಾದಾಯಕ ಸಂಗತಿಯು ಬೇರೊಂದಿರಲಿಕ್ಕಿಲ್ಲ. ಕಲ್ಪನೆ ಮತ್ತು ನೈಜಸ್ಥಿತಿಗಳ ಅಸಲಿ ಮುಖಾಮುಖಿಯಲ್ಲಿ ಇವೆಲ್ಲವೂ ಸಹಜವೇನೋ! 

ಇದೊಂಥರಾ ಆರಾಧ್ಯದೈವದಂತೆ ಭಾವಿಸಿಕೊಂಡಿರುವ ಚಿತ್ರನಟನನ್ನೋ, ನಟಿಯನ್ನೋ, ಲೇಖಕ-ಲೇಖಕಿಯನ್ನೋ ಮೊದಲ ಬಾರಿ ಮುಖತಃ ಭೇಟಿಯಾಗಿ ನಿರಾಸೆಗೀಡಾದಂತೆ. ಅಷ್ಟು ದಿನ ನಮ್ಮ ಕಲ್ಪನೆಯಲ್ಲಿದ್ದ ಅಂದಚಂದಗಳ ಗಾಳಿಗೋಪುರವು ಏಕಾಏಕಿ ಧರಾಶಾಯಿಯಾದಂತೆ. ಕೆಲವು ಸಂಗತಿಗಳು ಕಲ್ಪನೆಗಳಲ್ಲಿ ಉಳಿದುಬಿಟ್ಟರೇನೇ ಸೊಗಸು. ಆಗಲೇ ಅವುಗಳು ನಮ್ಮದೇ ಸೃಷ್ಟಿಯ ಚಂದದ ಅನುಭೂತಿಗಳಾಗಿ ಮನದಲ್ಲಿ ಶಾಶ್ವತವಾಗಿ ಅಚ್ಚೊತ್ತಿಬಿಡುತ್ತವೆ. ನನ್ನೊಳಗಿದ್ದ ಜಮುನೆಯ ರಮ್ಯ ಕಲ್ಪನೆಯೊಂದು ಧೂಳೀಪಟವಾಗಿದ್ದು ಹೀಗೆ.   

ಕೆಲವೊಮ್ಮೆ ಅನುಭವಗಳಲ್ಲಿ ವಿನೋದದ ಎಳೆಗಳು ಕಾಣುವುದೂ ಇದೆ. ಒಮ್ಮೆ ದಿಲ್ಲಿಯ ಇಂದರ್ಲೋಕ್ ಪ್ರದೇಶದಲ್ಲಿ ಅಲೆದಾಡುತ್ತಿದ್ದ ನಾವುಗಳು ಆಸುಪಾಸುನಲ್ಲಿದ್ದ ಕೊಳಚೆಪ್ರದೇಶಗಳಲ್ಲಿ ಸರ್ವೇ ಮಾಡುತ್ತಿದ್ದೆವು. ಆ ಭಾಗವು ದಿಲ್ಲಿ ಮೆಟ್ರೋ ವಿಭಾಗದ ಕಾರ್ಯಾಲಯವೊಂದರ ಕ್ಯಾಂಪಸ್ಸಿಗೆ ಹೊಂದಿಕೊಂಡಿತ್ತು. ಹೆಸರಿಗೆ ಇಂದ್ರಲೋಕವಾಗಿದ್ದರೂ ಅಕ್ಷರಶಃ ನರಕದಂತಿತ್ತು ಅಲ್ಲಿನ ಪರಿಸರ. ಇಲ್ಲಿ ಕಳ್ಳತನವು ಯಾವ ಮಟ್ಟಿಗಿದೆಯೆಂದರೆ ಮೆಟ್ರೋ ಕಾರ್ಯಾಲಯದ ಆವರಣಕ್ಕೆ ಹೊಂದಿಕೊಂಡಿರುವ ತಾತ್ಕಾಲಿಕ ತಡೆಗೋಡೆಯ ಬೀಗವನ್ನೇ ಕಿಡಿಗೇಡಿಗಳು ಕದ್ದಿದ್ದರು. ಸರ್ಕಾರಿ ಬೀಗಗಳಿಗೆ ಇಲ್ಲಿ ಹೆಚ್ಚಿನ ಆಯಸ್ಸಿಲ್ಲದ ಪರಿಣಾಮವಾಗಿ, ದೊಡ್ಡದಾದ ಗೇಟಿನ ಬಾಗಿಲುಗಳನ್ನು ಲೋಹದ ತೆಳುವಾದ ತಂತಿಯೊಂದರಿಂದ ಬಿಗಿದು, ಒಂದಕ್ಕೊಂದು ಬೆಸೆಯಲಾಗಿತ್ತು. 

ಕಳೆದ ಕೆಲ ವರ್ಷಗಳಿಂದ ಈ ಭಾಗದಲ್ಲಿ ಯಾವ ನಿರ್ಮಾಣ ಕಾಮಗಾರಿಗಳೂ ಆಗಿಲ್ಲ. ಸರಕಾರಿ ಏಜೆನ್ಸಿಯೊಂದು ತನ್ನ ಸ್ವಂತ ನೆಲದಲ್ಲಿ, ತನ್ನದೇ ವಸ್ತುಗಳ ಸುರಕ್ಷತೆಯನ್ನು ಕಾದಿರಿಸಿಕೊಳ್ಳಲು ವಿಫಲವಾಗುತ್ತಿರುವುದು ತಮಾಷೆಯ ವಿರೋಧಾಭಾಸವೇ ಸರಿ. ಹೀಗೆ ಶಹರದ ಹಲವು ಸ್ವಾರಸ್ಯಕರ ಝಲಕ್ ಗಳನ್ನು ನೋಡಬೇಕೆಂದಿದ್ದರೆ ಎಲ್ಲಾ ರೀತಿಯಲ್ಲೂ ನಾವು ಶಹರದೊಂದಿಗೆ ಒಂದಾಗಬೇಕಾಗುತ್ತದೆ. ಅದೊಂದು ಮುಗಿಯದ ಪ್ರಕ್ರಿಯೆ. ಓರ್ವ ವ್ಯಕ್ತಿಯಾಗಿ ನನಗೂ, ಒಂದು ಶಹರವಾಗಿ ದಿಲ್ಲಿಯ ಮಟ್ಟಿಗೂ ಇದು ಸತ್ಯ.

ಐ.ಎ.ಎಸ್ ಪ್ರವೇಶ ಪರೀಕ್ಷೆಗಳ ತರಬೇತಿಗಾಗಿ ದೇಶದ ವಿವಿಧ ಭಾಗಗಳಿಂದ ದಿಲ್ಲಿಗೆ ಬರುವ ಅದೆಷ್ಟೋ ವಿದ್ಯಾರ್ಥಿಗಳನ್ನು ನಾನು ಮಾತನಾಡಿಸಿದ್ದೇನೆ. ಕೋಚಿಂಗ್ ಸಂಸ್ಥೆಗಳಿಂದ ತುಂಬಿಹೋಗಿರುವ ಕರೋಲ್ ಬಾಗ್ ನಂತಹ ಪ್ರದೇಶಗಳಲ್ಲಿ ಉತ್ಸಾಹದಿಂದ ಅಲೆದಾಡಿದ್ದೇನೆ. ಇಲ್ಲಿ ನನಗೆ ಕಂಡು ಬಂದ ಪ್ರಮುಖ ಸಂಗತಿಯೇನೆಂದರೆ ಪ್ರತೀವರ್ಷವೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಆಗಮಿಸುವ ವಿದ್ಯಾರ್ಥಿಗಳ ದೊಡ್ಡ ಸಂಖ್ಯೆಯಲ್ಲಿ, ಬೆರಳೆಣಿಕೆಯ ಮಂದಿಯಷ್ಟೇ ತಮ್ಮ ಗುರಿಯನ್ನು ತಲುಪಲು ಸಫಲರಾಗುತ್ತಾರೆ. ಉಳಿದವರದ್ದು ಎಂದಿನಂತೆ ಮರಳಿ ಯತ್ನವ ಮಾಡೆಂಬ ಮಂತ್ರ. ಮರಳಿ ಯತ್ನದ ಭರದಲ್ಲಿ ಕೆಲ ವಿದ್ಯಾರ್ಥಿಗಳು ಇಲ್ಲಿ ನಾಲ್ಕೈದು ವರ್ಷಗಳನ್ನು ಕಳೆಯುವುದೂ ಇದೆ. 

ಐ.ಎ.ಎಸ್ ಕನಸು ಹೊತ್ತು ದಿಲ್ಲಿಗೆ ಮೊದಲಬಾರಿ ಬರುವ ಸಾವಿರಾರು ವಿದ್ಯಾರ್ಥಿಗಳು ಸಹಜವಾಗಿ ದಿಲ್ಲಿಯ ಯಾವುದಾದರೊಂದು ಮೋಡಿಗೆ ಖಂಡಿತ ಬಿದ್ದಿರುತ್ತಾರೆ. ಬಾಹ್ಯ ಆಕರ್ಷಣೆಗಳು ಹೆಚ್ಚಿದಂತೆ ಕಲಿಕೆಯ ಬಗೆಗಿನ ಏಕಾಗ್ರತೆಯು ನಿಧಾನವಾಗಿ ಹಾದಿ ತಪ್ಪುತ್ತಿರುತ್ತದೆ. ಗುರಿಯು ಮರೆತುಹೋಗಿ ಶಹರದ ಚಮಕ್-ಧಮಕ್, ಸುಖದ ಆಮಿಷಗಳನ್ನು ತೋರಿಸುವ ಹತ್ತಾರು ಮಾರ್ಗಗಳಲ್ಲಿ ಕಳೆದುಹೋಗುವ ಸಾಧ್ಯತೆಗಳಿಗೆ ಹಂತಹಂತವಾಗಿ ಗೆಲುವಾಗತೊಡಗುತ್ತದೆ. ಇನ್ನು ಪರೀಕ್ಷೆಯ ತರಬೇತಿಗೆಂದೇ ದಿಲ್ಲಿಗೆ ಬರುವ ಸಾವಿರಾರು ವಿದ್ಯಾರ್ಥಿಗಳ ಕೃಪೆಯಿಂದಾಗಿ ಇಲ್ಲಿ ಹಲವು ಬಗೆಯ ಬ್ಯುಸಿನೆಸ್ಸುಗಳು ಇಂದು ಹುಲುಸಾಗಿ ಬೆಳೆದಿವೆ. 

ಇನ್ನು ಧಾರ್ಮಿಕ ನೆಲೆಗಟ್ಟಿನಲ್ಲಿ ಸಿಖ್ ಧರ್ಮದ ಗುರುದ್ವಾರಗಳಲ್ಲಿ ಕಾಣಸಿಗುವ ಸೇವೆಗಳು ಅಸಾಮಾನ್ಯವಾದದ್ದು. ದಿಲ್ಲಿಯಲ್ಲಿರುವ ಕೆಲ ಗುರುದ್ವಾರಗಳು ಐತಿಹಾಸಿಕ ನೆಲೆಯಲ್ಲೂ ಬಹುಮುಖ್ಯವಾದವುಗಳು. ಇಲ್ಲಿ ಭಕ್ತರು ಹರಕೆಯ ರೂಪದಲ್ಲಿ ಗುರುದ್ವಾರದ ಸೇವೆಗಳನ್ನು ಮಾಡುವ ರೂಢಿಗಳೂ ಇವೆ. ಅದು ಆಗಮಿಸಿದ ಭಕ್ತರ ಚಪ್ಪಲಿಗಳನ್ನು ಎತ್ತಿಡುವುದರಿಂದ ಹಿಡಿದು, ಲಂಗರ್ ಗಳಲ್ಲಿ ಅಡುಗೆಯನ್ನು ಸಿದ್ಧಪಡಿಸುವುದೂ ಇರಬಹುದು. ವಾಹೇ ಗುರುವಿನ ಮುಂದೆ ಬಡವ-ಸಿರಿವಂತರೆಂಬ ಭೇದವಿಲ್ಲ ಎಂಬುದನ್ನು ಮಾತಿನಲ್ಲಷ್ಟೇ ಅಲ್ಲದೆ, ಕೃತಿಯಲ್ಲೂ ತೋರಿಸುವ ಇವರ ಮಾನವೀಯ ಕಳಕಳಿಯು ಪ್ರಶಂಸಾರ್ಹವಾದದ್ದು.   

ದಿಲ್ಲಿಯ ಮೆಹರೋಲಿಯಲ್ಲಿರುವ ಪ್ರಖ್ಯಾತ ಹಝರತ್ ಖ್ವಾಜಾ ಕುತುಬುದ್ದೀನ್ ಬಖ್ತಿಯಾರ್ ಕಾಕಿ ದರ್ಗಾದ ಮೌಲ್ವಿಯೊಬ್ಬರು ನನ್ನ ಊರಿನ ಬಗ್ಗೆ ವಿಚಾರಿಸುತ್ತಾ, ದೇವೇಗೌಡರನ್ನು ನೆನಪಿಸಿಕೊಂಡಿದ್ದರು. ಸಲ್ಮಾನ್ ಖಾನ್ ಸೇರಿದಂತೆ ಹಲವು ಸೂಪರ್ ಸ್ಟಾರ್ ಚಿತ್ರನಟರ ಚಿತ್ರಗಳು ದರ್ಗಾದಲ್ಲಿ ಚಿತ್ರೀಕರಣಗೊಂಡಿವೆ. ಗಣ್ಯಾತಿಗಣ್ಯ ರಾಜಕಾರಣಿಗಳೂ ಚಾದರ್ ಹೊದಿಸಲು ಹೋಗಿಬರುತ್ತಿರುತ್ತಾರೆ. ಹೀಗೆ ಬಂದುಹೋದ ಗಣ್ಯರ ಚಿತ್ರಗಳಲ್ಲಿ ಮಾಜಿಪ್ರಧಾನಿಗಳಾದ ದೇವಗೌಡರು ಮತ್ತು ತೊಂಭತ್ತರ ದಶಕದಲ್ಲಿ ಕೇಂದ್ರ ರೈಲ್ವೇ ಸಚಿವರಾಗಿದ್ದ ಜಾಫರ್ ಶರೀಫರ ಚಿತ್ರವೂ ಅಲ್ಲಿತ್ತು. ದರ್ಗಾದ ಸಂಜೆಗಳಲ್ಲಿ ನಡೆಸಲಾಗುವ ಕವ್ವಾಲಿ ಕಾರ್ಯಕ್ರಮಗಳೂ ಕೂಡ ನೋಡುವಂಥದ್ದು.    

ಹೀಗೆ ಒಂದಕ್ಕೊಂದು ಸಂಪೂರ್ಣವಾಗಿ ಭಿನ್ನವಾಗಿರುವ ಹತ್ತಾರು ಝಲಕ್ ಗಳನ್ನು ನಾನು ದಿಲ್ಲಿಯಲ್ಲಿ ಕಂಡಿದ್ದೇನೆ. ಅದು ದಿಲ್ಲಿಯೆಂಬ ವಿಶ್ವರೂಪವೊಂದರ ವಿವಿಧ ಮುಖಗಳು. ಕೆಲವರಿಗೆ ದಿಲ್ಲಿ ಕೋಮಲೆ. ಇನ್ನು ಕೆಲವರಿಗೆ ಚಂಚಲೆ. ಈ ಬಗೆಯ ನೋಟಗಳು ಶಹರವೊಂದರ ಬೆಳವಣಿಗೆಯ ಅಪರಿಮಿತ ಸಾಧ್ಯತೆಗಳನ್ನು ಕೂಡ ತೋರಿಸಲು ಶಕ್ತವಾಗಿರುವಂಥವುಗಳು. ಒಂದೊಂದು ಝಲಕ್ಕಿನ ಹಿಂದೆಯೂ ಒಂದೊಂದು ಹಿನ್ನೆಲೆ, ಒಂದೊಂದು ಕತೆಗಳು. ಚಿಕ್ಕ-ಚಿಕ್ಕ ಪಿಕ್ಸೆಲ್ ಗಳನ್ನು ತನ್ನಲ್ಲಿ ಹುದುಗಿಸಿಕೊಂಡು, ದೊಡ್ಡದೊಂದು ಚಿತ್ರಪಟವು ಕಂಗೊಳಿಸಿದಂತೆ. 

ಈ ಲೇಖನದ ಮೊದಲ ಸಾಲಿಗೆ ನಾನು ಮತ್ತೆ ಮತ್ತೆ ಹಿಂದಿರುಗುವುದು ಹೀಗೆ! 

‍ಲೇಖಕರು Admin

July 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: