ಪುಟ್ಟರಾಧ್ಯ ಎಸ್ ನೆನಪಿನ – ಹುಡುಕಾಟ…!

ಪುಟ್ಟರಾಧ್ಯ ಎಸ್

ಅವಳು ಹೋದ ಶುರುವಿನಲ್ಲಿ ಅಮ್ಮ ಸರ್ವಾಣಿಯನ್ನು ಹುಡುಕಿದ ಜಾಗಗಳು ನೂರಾರು. ಎಲ್ಲೋ ಹೋಗುತ್ತಿದ್ದವನಿಗೆ ರಸ್ತೆಯ ಮೂಲೆಯಲ್ಲಿ ಯಾರೋ ಒಂಟಿ ಹೆಂಗಸೊಬ್ಬಳು ನಿಂತಿದ್ದರೆ ಅವಳಲ್ಲವೆಂದು ನನ್ಮನ ಗಟ್ಟಿಯಾಗಿ ಹೇಳಿದರೂ ನಿಧಾನಿಸಿ ಒಮ್ಮೆ ಅವರ ಮುಖ ನೋಡಿ ಅವಳಲ್ಲವೆಂದು ಖಚಿತ ಪಡಿಸಿಕೊಂಡ ಮೇಲೆಯೇ ಮುಂದೋಗುತ್ತಿದ್ದುದು. ರಾತ್ರಿ ಇನ್ನೇನು ಮಲಗಬೇಕು, ಹೆಂಡತಿ ಭದ್ರ ಪಡಿಸಿದ ಬಾಗಿಲನ್ನು ಸಡಿಲಿಸಿ ಬಾಗಿಲು ತೆರೆದು ಅಮ್ಮ ಕೊನೆಯ ದಿನಗಳಲ್ಲಿ ಬಿಸಿಲಿಗೆ ಕೂರುತ್ತಿದ್ದ ಕುರ್ಚಿಯನ್ನೊಮ್ಮೆ ದಿಟ್ಟಿಸಿ ಅವಳೇನಾದರೂ ಮತ್ತೆ ಬಂದು ಕುಳಿತಿದ್ದಾಳೆಯೇ ಎಂದೊಮ್ಮೆ ನೋಡಿ ಕಾಣದೆ ಮತ್ತೆ ಬಾಗಿಲನ್ನು ಭದ್ರ ಪಡಿಸಿ ಮಲಗುತ್ತಿದ್ದೆ.

ಮೊದಲ ಮೂರ್ ತಿಂಗಳು ಅವಳ ಫೋನಿಗೆ ರೀಚಾರ್ಜ್ ಮಾಡಿಸಿ ಸುಮ್ಮನೆ ಆಗಾಗ ಫೋನಾಯಿಸಿ ಅಪ್ಪಿ ತಪ್ಪಿ ಒಮ್ಮೆಯಾದರೂ ಫೋನ್ ತೆಗೆದು ಆರಾಧ್ಯ ಎಂದು ಬಿಡುವಳೆನೋ ಅನಿಸಿದ್ದಿದೆ. ಅವಳೋಗಿ ವಾರವಾಗಿರಬೇಕು, ಹೊಲದಲ್ಲಿ ಯಾರಿಗೂ ಹೇಳದೆ ಬೆಳ್ಳಂಬೆಳಗ್ಗೆ ಎದ್ದವನೇ ಅವಳ ಗುಡ್ಡೆಯ ಬಳಿ ಹೋಗಿ ಸುತ್ತಲೂ ಒಮ್ಮೆ ನೋಡಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿ ಅಮ್ಮ ನಾನ್ಯಾರಿಗು ಹೇಳುವುದಿಲ್ಲ ಒಮ್ಮೆ ಬಂದು ಹೋಗಿ ಬಿಡು ಎಂದು ಕೂಗಿ ಕರೆದುಬಿಟ್ಟಿದ್ದೆ. ಇದೆಲ್ಲ ಭಾವೋದ್ವೇಗ ಹೆಚ್ಚಿ ಹಿಡಿತ ಮೀರಿದಾಗ ನಾ ಮಾಡುತ್ತಿದ್ದ ಕೆಲಸಗಳು. ಆದರವಳು ಬರಲು ಸಾಧ್ಯವೇ, ಹೀಗೆ ಮೂರ್ನಾಲ್ಕು ತಿಂಗಳಾದ ಮೇಲೆ ಮನಸ್ಸು ಹತೋಟಿಗೆ ಬಂದಿತ್ತು.

ಯಾವುದೋ ದೂರದೂರಿನಿಂದ ಬೆಂಗಳೂರಿಗೆ ವಾಪಸಾದವನೆ ಸಾಕಷ್ಟು ಬಳಲಿದ್ದರಿಂದ ರಾತ್ರಿ ಮಲಗಿದವನಿಗೆ ಧಿಮ್ಮನೆ ನಿದ್ರೆ ಹತ್ತಿತ್ತು. ಬೆಳಿಗ್ಗೆ ಎಂಟಾಗಿದ್ದು ತಲೆಗೋಗಿರಲಿಲ್ಲ ಆದರೆ ನಿದ್ರೆ ಇಳಿಯ ಹತ್ತಿತ್ತು. ಮನೆಯನ್ನಾವಾರಿಸಿದ್ದ ಅಡುಗೆ ಮನೆಯ ಒಗ್ಗರಣೆ ಘಮಲು ನನ್ನ ಹಾಸಿಗೆವರೆಗು ನುಗ್ಗಿ ನನ್ನ ನಾಕೇಂದ್ರಿಯವನ್ನ ಎಚ್ಚರಗೊಳಿಸಿತ್ತು. ಆ ಕ್ಷಣಕ್ಕೆ ಅಮ್ಮನನ್ನು ಜೀವಂತಗೊಳಿಸಲು ಮೆದುಳು ನನ್ನ ದೇಹದ ತುಂಬಾ ವಿದ್ಯುತ್ ಹರಿಸುತ್ತಾ ಹಳೇ ನೆನಪುಗಳನ್ನು ಹೆಕ್ಕಿ ತೆಗೆದು ಬೆರೆಸಿ ಕಲಸಲು ಪ್ರಯತ್ನಿಸುತ್ತಿತ್ತು.

ನಿಧಾನವಾಗಿ ಎದ್ದವನು ಅಡುಗೆ ಮನೆಗೆ ಹೋಗಿ ತಪ್ಪಲೆಯ ಬಾಯ್ತೆಗೆದು ನೋಡಿದಾಗ ಅದು ನಿಜವಾಗಿತ್ತು. ಹೆಂಡತಿ ರಾತ್ರಿ ಉಳಿದಿರುವ ತಂಗಳನ್ನವನ್ನ ಒಗ್ಗರಣೆ ಹಾಕಿ ಇಟ್ಟಿದ್ದಾಳೆ. ಉಳಿದ ತಂಗಳವನ್ನ ತನ್ನೂರಿನ ಮನೆಯಲ್ಲಿದ್ದಾಗ ಅಮ್ಮ ಎಂದಿಗೂ ಚೆಲ್ಲುತ್ತಿರಲಿಲ್ಲ, ಒಗ್ಗರಣೆ ಅನ್ನವಾಗಿ ತಯಾರಾಗಿ ಬಿಡುತ್ತಿತ್ತು. ಈಗಲೂ ಮನೆಯಲ್ಲಿ ತಂಗಳನ್ನವನ್ನೇನು ಚೆಲ್ಲದೇ ಒಗ್ಗರಣೆ ಆಗುತ್ತದೆ. ಆದರೆ ಇಂದೇಕೋ ಮಾಡಿಟ್ಟಿದ್ದ ಒಗ್ಗರಣೆ ತಂಗಳನ್ನದ ಘಮಲು ಅಮ್ಮಳನ್ನ ನೆನಪಿಸಿಕೊಟ್ಟಿತ್ತು. ಹೀಗೆ ಇದು ಅಮ್ಮನದೇ ಅಡುಗೆಯಂತೆ ಅವಳೇ ಬಂದು ಮಾಡಿದಂತನಿಸಿ ಹೆಂಡತಿಯನ್ನೊಮ್ಮೆ ಧನ್ಯತಾ ಭಾವದಿಂದ ನೋಡಿದೆ.

ಹಾಗೆ ಫೇಸ್ಬುಕ್ನಲ್ಲಿ ಕಮಲ ಮೇಡಂ ಅವರ ಬಾಲ್ಯದ ಹಲವು ಬರಹಗಳು ನನ್ನ ಅಮ್ಮನನ್ನು ಮತ್ತೆ ಮತ್ತೆ ನೆನಪಿಸಿಕೊಟ್ಟಿವೆ. ಅಮ್ಮಂದು ತಿಪಟೂರು, ಅರಸೀಕೆರೆಯ ಆಸುಪಾಸು ಅಂದಮೇಲೆ ಹತ್ತಿರತ್ತಿರ ಒಂದೇ ಸೀಮೆಯ ಜನ. ಹಾಗೆ ಅಮ್ಮನೂ ಪ್ರಚಂಡ ಓದುಗಾರ್ತಿ, ಮೇಡಂ ಕಮಲರಂತೆಯೇ ಅಮ್ಮನದು ಸುಂದರ ಗ್ರಾಮ್ಯ ಬಾಲ್ಯ (ಮೇಡಂ ರವರ ಬರಹಗಳಲ್ಲಿ ಓದಿದಂತೆ). ಅಮ್ಮ ಸುಮಾರು ಹದಿನೈದರ ವಯಸ್ಸಿಗೆ ಆಗಲೇ ನಾನ್ನೂರು ಪುಸ್ತಕಗಳನ್ನ ಓದಿ ಹದಿನಾರನೇ ವರ್ಷದಲ್ಲಿ ಒಂದು ಪುಸ್ತಕವನ್ನು ಬರೆದು ಮುಗಿಸಿ ತನ್ನ ಹೆಡ್ ಮಾಸ್ಟರ್ ಗೆ ಓದಲು ಕೊಟ್ಟು ಅದನ್ನು ಅವರು ಇವಳಿಗೆ ಮರು ತಿರುಗಿಸದೆ ಅದು ಇವಳ ಕೈಗೆ ಸಿಗದೆ ಹೋದದ್ದು ದುರಂತ. ಸಿಕ್ಕಿದ್ದರೂ ಅದನ್ನು ಪ್ರಕಟಗೊಳಿಸುವ ಯೋಚನೆ ಇರಲೇ ಇಲ್ಲವೆನಿಸುತ್ತದೆ ಕಾರಣ ಅವಳ ಮನೆಯಲ್ಲಿದ್ದವರಿಗೆ ಒಂದೊತ್ತು ಊಟ ಮಾಡಿದರೆ ಸಾಕೆನುವಷ್ಟು ಬಡತನ.

ಹತ್ತನೇ ತರಗತಿಯವರೆಗೆ ಓದಿ ಮುಂದೆ ಕಾರಣಾಂತರಗಳಿಂದ ಓದದೆ ಅಲ್ಲಿಗೆ ಮುಗಿಸಬೇಕಾಯಿತಂತೆ. ಹಾಗೆ ಮುಂದೆ ಸಿಕ್ಕ ಅಂಗನವಾಡಿ ಟೀಚರ್ ಕೆಲಸವನ್ನ ಅತೀ ಪ್ರಾಮಾಣಿಕತೆಯಿಂದ, ಪ್ರೀತಿಯಿಂದ ಮಾಡಿದ್ದು ನೆನಪಿದೆ. ಇವಳಿಗೆ ದೂರು ನೀಡಬೇಕು ಎನಿಸಿದಾಗ ನೇರವಾಗಿ ರಾಷ್ಟ್ರಪತಿಗೆ, ಪ್ರಧಾನ ಮಂತ್ರಿ, ಮುಖ್ಯಮಂತ್ರಿಗೆ ಪತ್ರ ಬರೆದು ಹಾಗೆ ಸಾಮಾನ್ಯ ಪ್ರಜೆಯಾದ ಇವಳಿಗೆ, ಸಾವಿರಾರು ಮೈಲಿ ದೂರದಲ್ಲಿದ್ದ ಇವಳ ಹಳ್ಳಿಗೆ ಇವಳ ಹೆಸರನ್ನು ಉದ್ದೇಶಿಸಿ ಬರುತ್ತಿದ್ದ ರಾಷ್ಟ್ರಪತಿಗಳ, ಪ್ರಧಾನ ಮಂತ್ರಿಗಳ ಪತ್ರಗಳನ್ನು ಓದಿಕೊಂಡು ಭಾರತದ ಪ್ರಜಾ ಪ್ರಭುತ್ವವನ್ನು ಹೊಗಳಿ ತನ್ನ ಸಮಸ್ಯೆ ನೀಗಿದಷ್ಟೇ ಖುಷಿ ಪಡುತ್ತಿದ್ದುದು ನನಗೆ ಅಚ್ಚರಿಯುಂಟು ಮಾಡುತ್ತಿದ್ದುದು ನಿಜ.

ಆಕಾಸ್ಮಾತ್ ಇವಳೇನಾದರೂ ಮುಂದೆ ಓದಿದ್ದರೆ ಮೇಡಂ ಎಂ ಆರ್ ಕಮಲರವರಂತೆ ಸಾಹಿತಿ ಆಗ್ತಿದ್ದರೇನೋ, ಯಾವುದೋ ಕಾಲೇಜಿಗೆ ಪ್ರಿನಿ ಪಾಲ್ ಆಗ್ತಿದ್ರೇನೋ ಅಂತ ಬಹಳ ಸಲ ಅನಿಸಿದ್ದಿದೆ. ಅಮ್ಮನ ಮಾತುಗಳಲ್ಲಿ ಮತ್ತು ಕಮಲಾ ಮೇಡಂ ರವರ ಫೇಸ್ಬುಕ್ ಬರಹಗಳಲ್ಲಿ ಬಹಳಷ್ಟು ಸಾಮ್ಯತೆ ಕಂಡಿದ್ದೆ. ಇದೊಂಥರಾ ಅತಿಶಯೋಕ್ತಿ ಅನಿಸಿದರೆ ಕ್ಷಮೆಯಿರಲಿ ಆದರೆ ಮನದಲ್ಲಿ ಹುಟ್ಟುವ ಸುಂದರ ಸಾಮ್ಯತೆಗಳಿಗೆ ಕಡಿವಾಣವೇಕೆ? ಅಂದ್ಹಾಗೆ ಅವರಿಗೆ ನಾನ್ಯಾರೆಂದು ಕೊಂಚವೂ ತಿಳಿಯದು, ಇದು ನನ್ನಲ್ಲಿ ಮೂಡಿದ ಯೋಚನೆಗಳಷ್ಟೇ.

ಬಹಳ ದಿನಗಳಾದ ಮೇಲೆ ಕಾರಿನ ಸ್ಟಿರಿಯೋದಲ್ಲಿ ಧ್ವನಿಯನ್ನು ಏರಿಸಿದಾಗ ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ ಎಂದಾಕ್ಷಣ ಎದೆಯಲ್ಲಿ ಒಮ್ಮೆಗೆ ಭಾವಗಳು ನರ್ತಿಸಿದಂತೆ, ಧಡ್ ಧಡ್ ಎಂದು ಬಡಿತ ಏರಿಳಿದಂತಾಗಿ ಹೃದಯ ಟಾಪ್ ಗೇರ್ ಗೆ ಹೋದ ಅನುಭವ. ಅಮ್ಮ ಮೂವಿ ಫ್ರೀಕ್, ಬಂಧನ ಸಿನಿಮಾವನ್ನ ಒಟ್ಟು ೧೧ ಬಾರಿ ನೋಡಿದ್ದು ಅದೂ ತಿಪಟೂರಿನ ಒಂದೇ ಟಾಕೀಸ್ ನಲ್ಲಿ. ವಿಷ್ಣುವರ್ಧನ್ ರವರ ಅಂದಿನ ಚಿತ್ರಗಳ ಬಲು ದೊಡ್ಡ ಅಭಿಮಾನಿ, ಅವರು ತೀರಿ ಕೊಂಡಿದ್ದಾಗ ಹಳೆಯ ನೆನಪುಗಳ ಭಾರ ಇಳಿಸಲಾಗದೆ ಸಣ್ಣ ಮಗುವಿನಂತೆ ಗಳ ಗಳ ಅತ್ತಿದ್ದು ನಂಗಿನ್ನು ನೆನಪಿದೆ. ಅಜ್ಜಿ ಹಾಲು ವ್ಯಾಪಾರಿ, ಹಳ್ಳಿ ಮನೆಗಳ ಹಾಲನ್ನು ಕೊಂಡು ಪಟ್ಟಣಗಳ ಮನೆಗಳಿಗೆ ಸ್ವಲ್ಪ ಲಾಭದಲ್ಲಿ ಹಾಲು ಮಾರಿ ಮನೆ ಮಂದಿಯನ್ನು ಸಾಕಿದ ಗಟ್ಟಿಗಿತ್ತಿ.

ಅಮ್ಮ ಪುಸ್ತಕದ ಹುಳು, ರಜಾ ದಿನಗಳಲ್ಲಿ ಮೂವತ್ತು ಎಮ್ಮೆ ಹಸುಗಳನ್ನು ರಸ್ತೆ ಬದಿಗಳಲ್ಲಿ, ಕೆರೆ ಏರಿಗಳಲ್ಲಿ, ಒಬ್ಬಳೇ ಮೇಯಿಸಿಕೊಂಡು ಜೊತೆಗೆ ಮೂರ್ನಾಲ್ಕು ಪುಸ್ತಕಗಳನ್ನು ಓದಿಬಿಡುತ್ತಿದ್ದ ನಿಪುಣೆ ಇವಳು. ನಂತರ ಮರುದಿನ ತಿಪಟೂರು ಪಟ್ಟಣಕ್ಕೆ ಹಾಲು ಮಾರಲು ಇವಳೇ ಹೋಗಿ ಶಾರದಾ ದೇವಸ್ತಾನದ ಬಳಿಯ (ದೇವಸ್ತಾನದ ಹೆಸ್ರು ಮರೆತಿದೆ) ನಲ್ಲಿಯಡಿ ಇಡೀ ಹಾಲಿನ ಕ್ಯಾನನ್ನೆ ಇಟ್ಟು ಮಾರಿ ಹಣ ಉಳಿಸಿಕೊಂಡು ಸಿನಿಮಾ ನೋಡುತ್ತಿದ್ದ ತುಂಟ ಹುಡುಗಿ ಇವಳು. ಹತ್ತಾರು ವರ್ಷದ ಹಿಂದೆ ನೂರೊಂದು ನೆನಪು ಎದೆಯಾಳದಿಂದ ಹಾಡನ್ನು ಹಾಡುತ್ತಾ ನನಗೆ ಈ ಕಥೆಗಳನ್ನು ಒಮ್ಮೆ ಹೇಳಿದ್ದಳು ಆ ನೆನಪುಗಳು ನನಗಿನ್ನೂ ಹಸಿ ಹಸಿ.

ಆಗ ಅರ್ಥವಾಗಿದ್ದು ಅಮ್ಮ ಜೀವನದ ಎಷ್ಟೊಂದು ಭಾವಗಳಲ್ಲಿ ಉಳಿದುಹೋಗಿದ್ದಾಳೆ. ಹೀಗೆ ಹೇಳುತ್ತಾ ಹೋದರೆ ಅವಳ ಜೀವ ಎಷ್ಟೊಂದು ವಸ್ತುಗಳಲ್ಲಿ, ಅಡಿಗೆಯ ಘಮಲುಗಳಲ್ಲಿ, ಕಮಲ ಮೇಡಂ ರಂತಹ ಬಾಲ್ಯದ ಬರಹಗಳಲ್ಲಿ, ವಿಷ್ಣು ಸರ್ ರವರ ಹಾಡುಗಳಲ್ಲಿ , ಸಾಹಿತಿಗಳಲ್ಲಿ, ಪ್ರಬುದ್ದರಲ್ಲಿ, ಅಂಗನವಾಡಿ ಅವ್ವಂದಿರಲ್ಲಿ ಹೀಗೆ ಕೊನೆಯೇ ಇರದಷ್ಟು ಭಾವಗಳಲ್ಲಿ ಅಮ್ಮ ಇಂದಿಗೂ ಜೀವಂತವಾಗಿದ್ದಾಳೆ. ಅಂತಹುದರಲ್ಲಿ ನಾನು ಮೂಡನಂತೆ , ಅಪಕ್ವನಂತೆ ಸಮಾಧಿಯ ಮುಂದೆ ನಿಂತು ಅವಳನ್ನು ಮೇಲೇಳಲು ಕೇಳಿ ಕೊಳ್ಳುತ್ತಿದ್ದೆ.

ಮೊನ್ನೆ ಎಲ್ಲೋ ಓದಿದೆ, ‘Its not the years in your life that count but the life in the years you lived.’ ಬರೀ ಐವತ್ತು ವಯಸ್ಸಿಗೆ ಅಮ್ಮ ನೂರಕ್ಕಾಗುವಷ್ಟು ಬದುಕಿ ಹೋಗಿದ್ದಾಳೆ, ಇತ್ತೀಚೆಗೆ ಅವಳು ಬದುಕಿದ್ದ ಜಾಡು ಹಿಡಿದು ಅವಳ ಜೀವಂತಿಕೆಯನ್ನು ಅನುಭವಿಸುತ್ತಾ ಬಹಳ ನೆಮ್ಮದಿಯಿಂದ ಖುಷಿಯಿಂದ ಬದುಕುತ್ತಿದ್ದೇನೆ. ಅಮ್ಮನಿಗಿಂತ ಬಲು ದೊಡ್ಡ ಸ್ಟಾರ್ ಯಾರಿಲ್ಲ ನೋಡಿ. ಹೀಗೆ ಎಲ್ಲ ಅಮ್ಮಂದಿರ ಕಥೆಯೂ ಹೀಗೆ, ಅಮ್ಮಂದಿರೆಲ್ಲರೂ ಬಲು ದೊಡ್ಡ ಸ್ಟಾರ್ ಗಳೇ.

‍ಲೇಖಕರು Admin

December 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: