‘ಪುಟ್ಟಬಾವ’ ಇನ್ನಿಲ್ಲ..

ಮೂರ್ತಿ ದೇರಾಜೆ

‘ಪುಟ್ಟಬಾವ’ ಇನ್ನಿಲ್ಲ ಎನ್ನುವುದು ನನ್ನನ್ನು ಯಾಕೆ ಹೀಗೆ ಕಾಡುತ್ತಾ ಇದೆ ಅಂತ ಗೊತ್ತಾಗುವುದಿಲ್ಲ. ಪ್ರಸಿದ್ಧ ಸಾಹಿತಿ, ಜನಪ್ರಿಯ ದಂತವೈದ್ಯ ಡಾಕ್ಟರ್ ನಾರಾಯಣ ಭಟ್ಟರು, ಮನೆಯ ಹಿರಿಯರ ಪ್ರೀತಿಯ ‘ಪುಟ್ಟ’ ಆದ್ದರಿಂದ ಅವರು ನನಗೆ ಪುಟ್ಟಬಾವ. ಅವರು ನನ್ನ ಅಪ್ಪಯ್ಯನಿಗೆ ತುಂಬಾ ಆಪ್ತರು. ಅವರು ಬೆಳೆದಮನೆ ಕೈಂತಜೆಯಾದುದರಿಂದ… ಕೈಂತಜೆಯವರಂತೆ ಪುಟ್ಟಬಾವನಿಗೂ ನನ್ನ ಅಪ್ಪಯ್ಯ ಪ್ರೀತಿಯ ದೇರಜ್ಜೆ ಅಪ್ಪಚ್ಚಿ…ಅವರೆಂದರೆ ಇನ್ನಿಲ್ಲದ ಗೌರವ. ‘ಸಣ್ಣಾಗಿಪ್ಪಾಗಲೇ ದೇರಜ್ಜೆ ಅಪ್ಪಚ್ಚಿಯ ನಾಟಕಲ್ಲಿ ಪಾರ್ಟು ಮಾಡಿದ್ದೆ…’ ಎನ್ನುವ ಹೆಮ್ಮೆ.

ದೇರಜ್ಜೆ ಅಪ್ಪಚ್ಚಿಯ ಮಗನಾದ ನನ್ನ ಮೇಲೂ ಉಳಕೊಂಡು ಬಂದಿರುವ ಪ್ರೀತಿ, ವಾತ್ಸಲ್ಯ ಅಪರಿಮಿತವಾದದ್ದು. ಅವರಂತೆಯೇ ಅವರ ಪತ್ನಿ ವಸಂತಕ್ಕನಿಗೂ ಅಷ್ಟೇ ಮಮತೆ. ನಾರಾಯಣ ಭಟ್ಟರನ್ನು ಸರಿಯಾಗಿ ಗೊತ್ತಿರುವ ಯಾರಿಗಾದರೂ ಅವರ ಇಂತಾ ಸ್ವಭಾವ ಆಶ್ಚರ್ಯದ್ದೇನೂ ಅಲ್ಲ. ಅವರ ಗೆಳೆತನದ ಭಾಗ್ಯ ಪಡೆದವರೆಲ್ಲರೂ ಅವರ ಪ್ರೀತಿಯ ಮೃಷ್ಟಾನ್ನ ಉಂಡವರೇ… ೭೦ ರ ದಶಕದಲ್ಲಿ ನಾನು ಪದವಿ ಓದುತ್ತಿದ್ದಾಗ ಒಮ್ಮೆ ಹಲ್ಲುನೋವು ಉಂಟಾಯ್ತು.

‘ಪುತ್ತೂರಿನಲ್ಲಿ ಪುಟ್ಟ ಇದ್ದಾನೆ ಅಲ್ಲಿಗೆ ಹೋಗು…’ ಅಂತ ಅಪ್ಪಯ್ಯ ಹೇಳಿದ ಕಾರಣ, ಅವರಲ್ಲಿಗೆ ಹೋಗಿ ಹಲ್ಲು ತೆಗೆಸಿದ ಮೇಲೆ, ಅವರು ನನಗೆ ಪುಟ್ಟಬಾವನಾದದ್ದು…ಮತ್ತು ಅದು ಹಾಗೇ ಉಳಕೊಂಡು ಬಂದದ್ದು. ಅಡ್ಡವಾಗಿ ಬೆಳೆದು, ಮೇಲೆ ಕಾಣದೇ, ಒಸಡಿನೊಳಗೆ ಮುಚ್ಚಿಹೋಗಿದ್ದ ಹಲ್ಲನ್ನು ನಾಜೂಕಾಗಿ ಆಪರೇಶನ್ ಮಾಡಿ ಹಲ್ಲು ತೆಗೆದಿದ್ದರು. ಆ ಹಲ್ಲು ಈಗಲೂ ನನ್ನ ಬಳಿಯಲ್ಲಿದೆ.
ಆ ಮೇಲೂ ಒಂದೆರಡು ಹಲ್ಲಿನ ಹುಳುಕು ಮುಚ್ಚಿ, ಸಿಮೆಂಟ್ ಹಾಕಿದ್ದರು.

ಎಷ್ಟೋ ವರ್ಷಗಳ ವರೆಗೆ ಅದು ಭದ್ರವಾಗಿ ಉಳಿದಿತ್ತು. ದಂತ ವೈದ್ಯರಾಗಿ ಅವರ ನೈಪುಣ್ಯ ಬಹಳ ದೊಡ್ಡಮಟ್ಟದ್ದು. ಪುತ್ತೂರಿನಲ್ಲಿ ದಂತವೈದ್ಯರಾಗಿ ಮಾತ್ರವಲ್ಲ ರೋಟರಿಯಂತಾ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಅನೇಕ ಜನಹಿತ ಕಾರ್ಯಕ್ರಮಗಳನ್ನು ನಡೆಸಿಯೂ ಅವರು ಜನರಿಗೆ ಪ್ರಿಯರಾಗಿದ್ದರು. ಆದರೆ ಯಾಕೋ ಏನೋ…!! ಅವರು ಪುತ್ತೂರನ್ನು ಬಿಟ್ಟು, ಧಾರವಾಡಕ್ಕೆ ಹೋಗಿ, ಕೆಲವೇ ಸಮಯದಲ್ಲಿ ಅಲ್ಲಿಂದಲೂ ಹೊರಟು, ಶಿವಮೊಗ್ಗಕ್ಕೆ ಬಂದು ನೆಲೆಸಿದರು. ಅಲ್ಲಿ ಬಹಳ ಬೇಗನೆ ಜನರಿಗೆಲ್ಲಾ ಪ್ರಿಯರಾಗಿ, ದೊಡ್ಡ ಹೆಸರು ಗಳಿಸಿದರು.

ಈ ಸಮಯದಲ್ಲೆಲ್ಲಾ ಅವರನ್ನು ನಾನು ಕಂಡದ್ದೇ ಇಲ್ಲ. ಅವರ ಒಂದು ಕವನ ‘ಯಾತಕೆ ಮನಸ್ಸಿಗೆ ಯಾತನೆ ಹೀಗೆ ಜೀವನ ನನ್ನದು ನೂರು ಬಗೆ…’ ಗರ್ತಿಕೆರೆ ರಾಘಣ್ಣ, ನಮ್ಮ ಮನೆಯಲ್ಲಿ ಹಾಡಿದ್ದರು. ‘ಓ…! ಪುಟ್ಟಬಾವ ಬರೆದದ್ದು…’ ಅಂತ ತುಂಬಾ ಖುಶಿಯಾಗಿತ್ತು. ಅಲ್ಲದೇ ’ಗೀತಭಾರತಿ’ಎನ್ನುವ ದೇಶಭಕ್ತಿಗೀತೆಗಳ ಹಾಡಿನ ಕ್ಯಾಸೆಟ್ ದಿನಾ ಕೇಳುತ್ತಿದ್ದರೂ ಅದರಲ್ಲಿ ಬರೆದವರ ಹೆಸರು ಇಲ್ಲದ ಕಾರಣ ಪುಟ್ಟಬಾವ ಬರೆದದ್ದೆಂದು ಗೊತ್ತಾಗಿರಲಿಲ್ಲ. ಅದನ್ನೂ ಗರ್ತಿಕೆರೆ ರಾಘಣ್ಣನೇ ಹೇಳಿ ಗೊತ್ತಾದದ್ದು. ಆ ಮೇಲೆ ಎಷ್ಟೋ ವರ್ಷಗಳ ನಂತರ ಶಿವಮೊಗ್ಗದಲ್ಲಿ,
ಅವರೇ ನಮ್ಮ ಗಿಲಿಗಿಲಿ ಮ್ಯಾಜಿಕ್ ಕಾರ್ಯಕ್ರಮ ಏರ್ಪಡಿಸಿದಾಗ ತುಂಬಾ ಪ್ರೀತಿಯಿಂದ ಮನೆಗೆ ಕರಕೊಂಡು ಹೋಗಿದ್ದರು.

ಆಗ ಅವರು ಬರೆದ ಎರಡು ಪುಸ್ತಕ ಸಹಿಮಾಡಿ ಕೊಟ್ಟರು. ನನಗೆ ಆಗಲೇ ಗೊತ್ತಾದದ್ದು…. ಪುಟ್ಟ ಬಾವ ಸಾಹಿತ್ಯಕೃಷಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆಂದು. ಕೇವಲ ಕೆಲವು ಗೀತೆಗಳನ್ನಷ್ಟೇ ಬರೆದಿದ್ದಾರೆಂದು ತಿಳಿದುಕೊಂಡಿದ್ದೆ. ಆ ನಂತರವೂ ತುಂಬಾ ಸಮಯ ಅವರ ಸಂಪರ್ಕ ಇರಲಿಲ್ಲ. ಅವರು ಕ್ಯಾನ್ಸರ್ ಪೀಡಿತರಾದದ್ದೂ, ತಮ್ಮ ಮನೋಬಲದಿಂದಲೇ ಅದನ್ನು ಜಯಿಸಿದ್ದೂ, ಸಾಹಿತ್ಯಕ್ಕಾಗಿಯೋ ಎಂಬಂತೆ ತನ್ನ ವೃತ್ತಿಯಿಂದ ನಿವೃತ್ತರಾದದ್ದೂ, ಅವರಿಗೆ ಹೃದಯ ಸಂಬಂದಿತ ತೊಂದರೆ ಕಾಡಿದ್ದೂ… ಇದೆಲ್ಲದರ ನಡುವೆಯೂ ಅನೇಕ ಕೃತಿಗಳನ್ನು ರಚಿಸಿ, ಅವು ಪ್ರಕಟವಾದದ್ದೂ… ಇದು ಯಾವುದೂ ನನಗೆ ಗೊತ್ತಾಗಿರಲೇ ಇಲ್ಲ.

ಸಂಪರ್ಕ ಇಲ್ಲದಿದ್ದರೂ ಆತ್ಮೀಯತೆ ಉಳಿದುಕೊಂಡದ್ದರಿಂದ, 2014 ರಲ್ಲಿ ಅಪ್ಪಯ್ಯನ ಬಗ್ಗೆ ಲೋಕಾರ್ಪಣಗೊಂಡ ಎರಡು ಪುಸ್ತಕಗಳನ್ನು
ಅವರಿಗೆ ಕಳುಹಿಸಲೇ ಬೇಕು ಅಂತ ಯಾರಲ್ಲೋ ಫೋನ್ ನಂಬರ್ ಪಡೆದು ಅವರಿಗೆ ಫೋನ್ ಮಾಡಿದ್ದೆ…… ಪುಸ್ತಕಗಳನ್ನೂ ಕಳಿಸಿದ್ದೆ.
ಆ ನಂತರ ಅವರೊಂದಿಗೆ ಫೋನ್ ಮಾತುಕತೆ ನಿರಂತರವಾಗಿತ್ತು. ಅವರು ಬರೆದ ಪುಸ್ತಕಗಳನ್ನೆಲ್ಲ ನನಗೆ ಕಳುಹಿಸಿಕೊಟ್ಟರು. ನಿಜಕ್ಕೂ ದಿಗ್ಭ್ರಮೆಯಾಗುವಂತಾ ಸಂಗತಿ ….!! ಹದಿನೆಂಟು ಪುಸ್ತಕಗಳು….!! ಅದರಲ್ಲಿ ಮಕ್ಕಳಿಗಾಗಿಯೇ ಹನ್ನೊಂದು ಪುಸ್ತಕಗಳು….!! ಅವೆಲ್ಲಾ ಎಷ್ಟು ಚೆನ್ನಾಗಿವೆ ಅಂದರೆ, ದೊಡ್ಡವರಿಗೂ ಇಷ್ಟವಾಗುವಂತಾದ್ದು.

ನನಗೆ ಇಷ್ಟವಾದದ್ದು ಯಾಕೆ ಎಂದರೆ ಅವರು ಅಪ್ ಟು ಡೇಟ್ ಇದ್ದಾರಲ್ಲ ಅಂತ. ಮಕ್ಕಳಗೀತೆ ಅಂತ ಇನ್ನೂ ಅದೇ ಹಳೇ ಜಾಡಿನ ಕವನಗಳಂತಿಲ್ಲ. ಕನ್ನಡದ ಮಕ್ಕಳ ಜೊತೆಗೆ ಇಂಗ್ಲಿಷ್ ಮೀಡಿಯಂ ಮಕ್ಕಳನ್ನೂ ಸೆಳೆಯುವಂತಾದ್ದು. ಚುಟುಕು ಪದ್ಯದ ಒಂದು ಸ್ಯಾಂಪಲ್ –
ದೇವರು ಕೂಡಾ ಕಲಿಯಲು ದಡ್ಡನೇ
ಸಣ್ಣವನಾಗಿರಲು ಅದಕೇ ಕೃಷ್ಣನ ಕಳಿಸುತಲಿದ್ದರೇ
ದನಗಳ ಮೇಯಿಸಲು?
ಇಂತಾದ್ದೂ ಅನೇಕ, ಅಲ್ಲದೇ ದೊಡ್ದ ಕವನಗಳೂ ತುಂಬಾ ಇವೆ. ಶಂಕರಾಚಾರ್ಯರ ’ಸೌಂದರ್ಯಲಹರಿ’, ’ಶಿವಾನಂದಲಹರಿ’ಯಂತಾ
ಪುಸ್ತಕದ ಕನ್ನಡ ಭಾವಾನುವಾದ ಮಾಡಿದ್ದಾರೆ ಎಂದರೆ ಅವರ ಜ್ಞಾನ ಎಷ್ಟು ದೊಡ್ಡದು. ಅದು ಕೂಡಾ ಸುಂದರವಾದ ಭಾವಾನುವಾದ….. ಓದಿಸಿಕೊಂಡು ಹೋಗುವಂತಾದ್ದು.

ಅವರ ಕೃತಿಗಳ ಲಿಸ್ಟ್ ಹೀಗಿದೆ –
ಮಕ್ಕಳಿಗಾಗಿ
1-ಚಿನಕುರುಳಿ (ಕವಿತೆಗಳು)
2-ಚಿನ್ನದ ಚೆಂಡು (ಕವಿತೆಗಳು)
3-ಪುಟ್ಟ ಗಣೇಶ ಶಾಲೆಗೆ ಹೊರಟ (ಕವಿತೆಗಳು)
4-ಬಣ್ಣದ ಬಲೂನು (ಕವಿತೆಗಳು)
5-ಚಿಲಿಪಿಲಿಗುಟ್ಟುವ ಚಿಣ್ಣರಿಗೆ (ಕವಿತೆಗಳು)
6-ಪುಟಾಣಿ ಕವಿತೆಗಳು (ಕವನ ಸಂಗ್ರಹ)
7-ಪುಟ್ ಪುಟ್ ಪುಟಾಣಿ (ಚುಟುಕುಗಳು)
8-ಚಟಪಟ (ಚುಟುಕುಗಳು)
9-ಕೋಳಿ ಅಜ್ಜಿಯ ಕತೆಗಳು (ಕಥಾ ಸಂಕಲನ)
10-ನಾಣಿಭಟ್ಟನ ನೀತಿಕತೆಗಳು (ಕಥಾ ಸಂಕಲನ)
11-ಧೀರ ಹನುಮಪ್ಪ ಮತ್ತು ಬೆಟ್ಟದ ಭೂತ (ಕಥಾ ಸಂಕಲನ)

ಹಿರಿಯರಿಗೆ
1-ಭಾರತಿಗೆ ಆರತಿ (ದೇಶಭಕ್ತಿ ಗೀತೆಗಳು)
2-ತಿಳಿಗವನಗಳು (ಕವನ ಸಂಕಲನ)
3-ಭಾವಬಿಂದು (ಕವನ ಸಂಕಲನ)
4-ವಿಶ್ವರೂಪಿಯ ಲಹರಿಗಳು (ಕವಿತೆಗಳು)
5-ಸೌಂದರ್ಯಲಹರಿ (ಕನ್ನಡ ಭಾವಾನುವಾದ)
6-ಶಿವಾನಂದ ಲಹರಿ (ಕನ್ನದ ಭಾವಾನುವಾದ)
7-ಹನುಮಾನ್ ಚಾಲೀಸ (ಕನ್ನದ ಭಾವಾನುವಾದ)

ಇವಲ್ಲದೇ ಪ್ರಕಟವಾಗದ ಕವನಗಳು, ಲಹರಿಗಳು ತುಂಬಾ ಇವೆ. ಇವು ನನ್ನ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, ಇವರ ಕೃತಿಗಳ ಬಗ್ಗೆ ಇಡೀ ದಿವಸದ ವಿಚಾರ ಗೋಷ್ಠಿಯೊಂದನ್ನು … ಅದೂ ಪುತ್ತೂರಿನಲ್ಲೇ ಏರ್ಪಡಿಸಿ, ಅವರಿಗೆ ಸಾರ್ವಜನಿಕ ಸಂಮಾನ ಮಾಡಿ, ಸಂಭ್ರಮ ಪಡಬೇಕೆಂದು ತೀರ್ಮಾನಿಸಿದೆ. ಅವರಲ್ಲಿ ಸಂಮಾನದ ವಿಚಾರ ಹೇಳದೇ ಕೇವಲ ಕೃತಿ ಸಮೀಕ್ಷೆ ಎಂದಷ್ಟೇ ಹೇಳಿದೆ. ಅಷ್ಟಕ್ಕೇ ಬಾವ ತುಂಬಾ ಸಂಕೋಚಪಟ್ಟರು. ಗೋಷ್ಠಿ ಎಲ್ಲಾ ಮಾಡಲು ನಾನೇನು ಅಂತ ದೊಡ್ಡ ಕೆಲಸ ಮಾಡ್ಲಿಲ್ಲ….! ಬೇಡಪ್ಪ ಅದೆಲ್ಲ…!! ಅಂತ ಹೇಳಿದಾಗ ನನ್ನ ನಿರ್ಧಾರ ಇನ್ನೂ ಗಟ್ಟಿಯಾಯಿತು…. ಹೇಗೋ ಅವರನ್ನು ಒಪ್ಪಿಸಿದ್ದೆ.

2018ರ ದಶಂಬರ ಅಂತ ತೀರ್ಮಾನ ಆಗಿತ್ತು, ಏನೋ ಅನಾರೋಗ್ಯದ ನೆಪ ಹೇಳಿ ಒಂದೆರಡು ತಿಂಗಳು ಮುಂದೆ ಹಾಕುವ ಅಂತ ಹೇಳಿದ್ದರು…. ಸರಿ ಎಂದು ಒಪ್ಪಿ, ನಾನು…. ಶಿವಮೊಗ್ಗದವರೇ ಆದ ಮಂಕುತಿಮ್ಮನ ಕಗ್ಗ ಖ್ಯಾತಿಯ ಮಾನ್ಯ ಜಿ.ಎಸ್.ನಟೇಶ್ ಅವರನ್ನು ನಾರಾಯಣ ಭಟ್ಟರ ಬಗ್ಗೆ ಮಾತಾಡಲು, ಮಾನ್ಯ ರಾಧೇಶ್ ತೋಳ್ಪಾಡಿಯವರನ್ನು ಅವರ ಮಕ್ಕಳ ಕೃತಿಗಳ ಬಗ್ಗೆ ಮಾತಾಡಲು, ಮಾನ್ಯ ಲಕ್ಷ್ಮೀಶ ತೋಳ್ಪಾಡಿಯವರನ್ನೂ ಅಧ್ಯಕ್ಷರಾಗಿ ನಡೆಸಿಕೊಡಬಹುದೇ ಎಂದು ವಿನಂತಿಸಿಯೂ ಆಗಿತ್ತು.

ಅಷ್ಟರಲ್ಲಿ ಕೋವಿಡ್ ಬಂದು, ಹಾಗೇ ಮುಂದುವರೆದಿತ್ತು… ಈ ನಡುವೆ ಅವರು ಬೆಂಗಳೂರಿಗೆ ವಾಸ್ತವ್ಯ ಬದಲಾಯಿಸಿದ್ದರು. ಅಕ್ಟೋಬರ 22 ರಂದು ಸಾಯಂಕಾಲ ಫೋನ್ ಮಾಡಿದ್ದೆ. ಸಾಮಾನ್ಯವಾಗಿ ಕೆಲವು ತಿಂಗಳಿಂದ ಬಾವನಿಗೆ ಫೋನ್‌ನಲ್ಲಿ ಮಾತು ಸರೀ ಸ್ಪಷ್ಟವಾಗುವುದಿಲ್ಲ ಅಂತ ಅಕ್ಕನೇ ಮಾತಾಡುವ ಕ್ರಮ. ಅಂದೂ ಅಕ್ಕನೇ ಮಾತಾಡಿದ್ದರು.

ಆರೋಗ್ಯ ಏನೂ ಒಳ್ಳೆಯದಿಲ್ಲ ಮೂರ್ತಿ, ನಡಿವಾಗ ಕೈ ಹಿಡ್ಕೊಳ್ಬೇಕಾಗ್ತದೆ. ಶಿವಮೊಗ್ಗಕ್ಕೆ ಒಮ್ಮೆ ಹೋಗಿ ಬರಬೇಕು ಅಂತ ಹೇಳ್ತಾ ಇದ್ದಾರೆ.
ಮಕ್ಕಳ ಕಥಾ ಸಂಕಲನ ಹೊಸತೊಂದು ಬಿಡುಗಡೆ ಆಗಿದೆ, ಅಲ್ಲಿಯ ಗೆಳೆಯರಿಗೆಲ್ಲಾ ಕೊಟ್ಟು ಬರಬೇಕಂತೆ… ಅಂತ ಹೇಳಿದರು. ನಮ್ಮ ಪುತ್ತೂರಿನ ಕಾರ್ಯಕ್ರಮ ಮುಂದೆ ಹೋಗಲಿ ತೊಂದರೆ ಇಲ್ಲಾ, ಅವರು ಸರೀ ಹುಶಾರಾಗಲಿ, ಊರಿಗೆ ಬರುವ ಯೋಚನೆ ಇದ್ದರೆ ಹೇಳಿ
ಆಗಲೇ ಕಾರ್ಯಕ್ರಮ ಇಟ್ಟುಕೊಳ್ಳುವ … ಅಂತ ಹೇಳಿದೆ.

ಮಾರ್ಚ್ ತಿಂಗಳಲ್ಲಿ ಬರುವ ಸಂಭವ ಇರಬಹುದು ಆಗ ನೋಡುವ… ಎಂದಿದ್ದರು ಅಕ್ಕ. ಆದೀತು ಬಾವನಿಗೆ ಹೇಳಿ, ಫೋನ್‌ನಲ್ಲಿ ಅವರಿಗೆ ಸ್ಪಷ್ಟ ಆಗುವುದಿಲ್ಲವಲ್ಲಾ… ಅವರಲ್ಲಿ ಇನ್ನು ಮಾರ್ಚಿನಲ್ಲಿ ಸಿಕ್ಕಿದಾಗಲೇ ಮುಖತಾ ಮಾತಾಡುವುದು… ನೀವು ಶಿವಮೊಗ್ಗಕ್ಕೆ ಹೋಗಿ ಬಂದಮೇಲೆ ಫೋನ್ ಮಾಡ್ತೇನೆ ಎಂದು ಹೇಳಿದ್ದೆ. ಮರುದಿನ ಬೆಳಿಗ್ಗೆ ಫೇಸ್ ಬುಕ್ ನಲ್ಲಿ ಯಾರೋ ಹಾಕಿದ್ದನ್ನು ನೋಡಿದಾಗಲೇ ಗೊತ್ತಾದದ್ದು. ಅವರಿಗೆ ಶಿವಮೊಗ್ಗಕ್ಕೆ ಹೋಗಲು ಆಗಲೇ ಇಲ್ಲ. ಇನ್ನು ಪುಟ್ಟಬಾವನಲ್ಲಿ ಮುಖತಾ ಮಾತಾಡಲು ಸಾದ್ಯವೂ ಇಲ್ಲ.

‍ಲೇಖಕರು Admin

November 30, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: