ಪುಕ್ಕ ಕತ್ತರಿಸಿದ ಹಕ್ಕಿಯ ನಿರ್ಬಂಧಿತ ಚಲನೆ

ಪ್ರಿಯದರ್ಶಿನಿ ಶೆಟ್ಟರ

**

“ಕಣ್ಣಾ ಮುಚ್ಚೆ ಕಾಡೆಗೂಡೆ
ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ
ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ

ಈ ಪದ್ಯ ಚಿಕ್ಕವರಿದ್ದಾಗ ರಾಗವಾಗಿ ಹಾಡೋಕೆ ಚೆಂದ. ಆದರೆ ಇತ್ತೀಚಿನ ದಿನಗಳಲ್ಲಿ ‘ಹೀಗೆ ಮನೆ ಮಕ್ಕಳನ್ನು ಆಟ ಆಡೋಕೆ, ಹೊರಗೆ ಓಡಾಡೋಕೆ ಬಿಟ್ಟು ನಿಶ್ಚಿಂತೆಯಿಂದ ಇರಲು ಆಗುತ್ತಾ?ʼ ಎನ್ನುವ ಸ್ಥಿತಿ ಬಹಳಷ್ಟು ಜನರದ್ದು. ಅದರಲ್ಲೂ ದಿನಾಲೂ ನೂರಾರು ಜನ ಓಡಾಡುವ ಸ್ಥಳಗಳಲ್ಲಿ ಹಾಡ ಹಗಲೇ ಯುವತಿಯೊಬ್ಬಳನ್ನು ಕೊಚ್ಚಿ ಕೊಲೆ ಮಾಡಿದ್ದು, ನೂರಾರು ಹೆಣ್ಣು ಮಕ್ಕಳ ಸಾವಿರಾರು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಬಾಲಕಿಯೊಬ್ಬಳ ಭೀಕರ ಹತ್ಯೆ, ವ್ಯವಸ್ಥೆಯ ನಿರ್ಲ ಕ್ಷ್ಯದಿಂದಾದ ಮತ್ತೊಂದು ಹತ್ಯೆ. ಇವನ್ನೆಲ್ಲ ಕಂಡು ಕೇಳಿದ ಮೇಲಂತೂ ನಿಶ್ಚಿಂತೆಯಿಂದ ಇರಲು ಸಾಧ್ಯವೇ ಇಲ್ಲ. ನಿನ್ನೆ ಮೊನ್ನೆ ನಡೆದ ಪಾತಕಗಳಿವು. ಸೋತವರ, ಸತ್ತವರ, ಸಂತ್ರಸ್ತರ ದುಃ ಖ ಅವರವರ ಕುಟುಂಬಕ್ಕಷ್ಟೇ ; ಉಳಿದವರಿಗೆ ಇವೆಲ್ಲ ಆರೋಪ, ಪ್ರತ್ಯಾರೋಪ, ರಾಜಕೀಯ, ಬ್ರೇಕಿಂಗ್ ನ್ಯೂಸ್, ಕಾಲಹರಣ ಜೊತೆಗೆ ‘ಮುಂದೇನು?’ ಅನ್ನುವ ತಣಿಯದ ಕುತೂಹಲ.

ಮೊನ್ನೆ ಹೀಗೆ ಮಾತಾಡುತ್ತಾ ಇದ್ದೆವು. ಅವರು ಹೇಳಿದರು, ‘ಇನ್ನೇನು ಎಲ್ಲಾ ಹೊರಬೀಳಲಿದೆʼ ನಾನೆಂದೆ, ‘ಹೊರಬಿದ್ದದ್ದು ಜಾಸ್ತಿಯಾಯಿತು, ಇನ್ನೇನಿದ್ದರೂ ಯಾರು ಒಳ ಹೋಗುವರು ಅನ್ನೋದು ಮಾತ್ರʼ ಎಂದು! ಹೌದಲ್ಲವೇ? ಈ ಒಳ ಹೊರ ಬಿಟ್ಟೂ ನೋಡುವುದಾದರೆ, ಮತ್ತೆ ಬಚ್ಚಿಟ್ಟು ಕೊಳ್ಳಬೇಕಾದವರು ಹೆಣ್ಣು ಮಕ್ಕಳೇ ಎನ್ನುವುದು ಕಠೋರ ಸತ್ಯ. ಹೊರ ಬರಲೂ ಸಾಧ್ಯವಾಗದ, ಒಳಗೆ ಇರಲೂ ಆಗದ, ಮೂಕ ರೋದನೆ ಅದೆಷ್ಟು ಮಂದಿಯದ್ದೋ? ‘ಪ್ರಗತಿಪರರು ಎಷ್ಟು ಮಾತಾಡಿದರೇನು? ಜೀವ, ಶೀಲ, ಮಾನ, ಮರ್ಯಾದೆ ಇದ್ದರೆ ತಾನೇ ಬದುಕು, ಪ್ರತಿಭಟನೆ, ಚಳುವಳಿ, ಪ್ರಗತಿ ಎಲ್ಲ’ ಅಂತ ಅನಿಸುವುದರಲ್ಲಿ ಸಂದೇಹವೇ ಇಲ್ಲ. ಅವರ ಹಕ್ಕಿ, ಅದು ರಣಹದ್ದು, ಗಿಡುಗವೋ, ಗರುಡವೋ ಯಾವುದಾದರೇನು? ದಾಳಿಗೊಳಗಾಗುವುದು ನಮ್ಮ ಗುಬ್ಬಿ ಅಥವಾ ಗಿಳಿ ತಾನೇ?! ಕಾರಣವೇನೇ ಇರಲಿ, ಪ್ರಾಣಪಕ್ಷಿ ಹಾರಿ ಹೋಗುವುದೆಂದರೆ? ಅದೂ ಶಾಂತತೆಗೆ ಹೆಸರಾದ, ಸಾಂಸ್ಕೃತಿಕವಾಗಿ ಮುಂದುವರೆದ ಊರುಗಳಲ್ಲಿ.

ಸಾಕ್ಷರತಾ ಪ್ರಮಾಣ, ತಿಳುವಳಿಕೆ, ಜಾಗರೂಕತೆ ಹೆಚ್ಚಾದಂತೆ ಕೊಲೆ-ಸುಲಿಗೆ, ಅತ್ಯಚಾರ ಹಾಗೂ ಇನ್ನಿತರ ಪ್ರಕರಣಗಳು ಹೆಚ್ಚುತ್ತಿರುವದು ಕಳವಳಕಾರಿ ವಿಷಯ. ಅಷ್ಟೇ ಅಲ್ಲ, ಒಂದು ಸಮಾಜವಾಗಿ ನಮ್ಮ ಶೈ ಕ್ಷಣಿಕ, ಸಾಮಾಜಿಕ, ಆರ್ಥಿಕ, ಬೌದ್ಧಿಕ ಆಯಾಮಗಳು ಎಲ್ಲಿ ಸೋಲುತ್ತಿವೆ ಎಂಬುದನ್ನು ಅರಿಯುವುದು ಅತ್ಯಗತ್ಯ. ಈ ಪಂಗಡದವರು ಆ ಪಂಗಡದವರನ್ನು ಕೊಂದರೆ ಒಂದು ಹೆಸರು, ತಮ್ಮ ವರನ್ನೇ ತಾವು ಕೊಂದರೆ ಮತ್ತೊಂದು ಹೆಸರು, ತಾಯ್ತಂದೆ ಮಕ್ಕಳನ್ನು ಕೊಂದರೆ ಅದಕ್ಕೂ ಒಂದು ಹೆಸರು! ಹೇಗಿದೆ ನೋಡಿ ವಿಪರ್ಯಾಸ. ಒಟ್ಟಿನಲ್ಲಿ ಹೋಗುವುದು ಒಂದು ಅಮೂಲ್ಯ ಜೀವ, ಆಗುವುದು ಒಂದು ಅಕ್ಷಮ್ಯ ಅಪರಾಧ. ಕಿರಾತಕರು ಕಂಬಿಯ ಹಿಂದೆ ಹೋಗುತ್ತಾರೋ ಇಲ್ಲವೋ ಗೊತ್ತಿಲ್ಲ; ಆದರೆ ಪಂಜರ ಸೇರುವುದು ಹೆಣ್ಣು ಮಕ್ಕಳೇ. ನಮ್ಮ ಹಕ್ಕಿಯನ್ನು ಪಂಜರದಲ್ಲಿ ಕೂಡಿಹಾಕಿದರೂ ಚಿಂತೆಯಿಲ್ಲ, ಅದನ್ನು ಸೇಫ್ ಆಗಿ ಬಚ್ಚಿಡಬೇಕು ಎನ್ನುವವರು ಒಂದೆಡೆಯಾದರೆ, ಪಂಜರದಿಂದ ಯಾವಾಗ ಹೊರಬರುವೆವೋ ಎನ್ನುವ ರೆಕ್ಕೆ ಬಲಿಯುತ್ತಿರುವ ಹಕ್ಕಿಗಳ ತವಕ
ಇನ್ನೊಂದೆಡೆ.

ಅನವಶ್ಯಕ ಆಕರ್ಷಣೆ, ಆದ್ಯತೆ ಇಲ್ಲದ ಓದು, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಆಸಕ್ತಿ ಇಲ್ಲದ ಪಾಲಕರು, ಗೊಂದಲದ ಗೂಡಾದ ವ್ಯವಸ್ಥೆ, ಪಾಠ-ಪ್ರವಚನ ಬಿಟ್ಟು ಬೇರೆ ಯಾವುದಕ್ಕೂ, ಕೊನೆಗೆ ನೀತಿ ಶಿಕ್ಷಣಕ್ಕೂ ಸಮಯವಿಲ್ಲದ ಶಿಕ್ಷಕರು, ಯಾರು ಹೊಣೆ ಹೊತ್ತಾರು ಇಂತಹ ಸಂದರ್ಭಗಳಲ್ಲಿ? ಹೀಗೆ ದಿನ ಬೆಳಗಾದರೆ ಒಬ್ಬರ ಮೇ ಲೆ ಇನ್ನೊಬ್ಬರು, ಒಂದು ಪಕ್ಷದ ಮೇಲೆ ಇನ್ನೊಂದು ಪಕ್ಷ, ಒಂದು ಜಾತಿ, ಧರ್ಮದವರ ಮೇಲೆ ಗೂಬೆ ಕೂರಿಸುವುದು, ಕಾಗೆ ಹಾರಿಸುವುದು, ವ್ಯವಸ್ಥೆಯನ್ನು ದೂರುವುದು, ಒಟ್ಟಾರೆಯಾಗಿ ಜವಾಬ್ದಾರಿಯಿಂದ ಹಾರಿ ಹೋಗುವ, ಜಿಗಿದು ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಕೊನೆ ಇಲ್ಲ! ಸರ್ಕಾರ ಬದಲಾದರೆ, ಚುನಾವಣಾ ಫಲಿತಾಂಶ ಬಂದು ಬಿಟ್ಟರೆ ಎಲ್ಲವೂ ಬದಲಾಗುತ್ತದೆ ಎಂದು ಬೀಗುವವರ ಹಾರಾಟವೇನೂ ಕಡಿಮೆ ಇಲ್ಲ.

ಮಾಯಾ ಏಂಜೆಲೊ ಅವರ ಕವಿತೆಯಲ್ಲಿನ ಪಂಜರದ ಪುಕ್ಕ ಕತ್ತರಿಸಿದ ಹಕ್ಕಿಯ ನಿರ್ಬಂಧಿತ ಚಲನೆ ಹಾಗೂ ಸ್ವಚ್ಛಂದವಾಗಿ ಹಾರಾಡುವ ಪಕ್ಷಿಯ ಸ್ವಾತಂತ್ರ್ಯಇಂತಹ ಪ್ರಸ್ತುತ ಸಂದರ್ಭದಲ್ಲಿ ಯಾಕೋ ನೆನಪಾಗುತ್ತಿದೆ. ಇದೆಲ್ಲದರ ನಡುವೆ ಚಾಲೆಂಜ್ ಮಾಡುತ್ತಾ ಕ್ರಿಕೆಟ್, ಕ್ರೈಮ್, ಪೊಲಿಟಿಕ್ಸ್, ಅಪ್ಡೇಟ್ಸ್ ಅಂತ ಸುತ್ತಲಿನ ವಿದ್ಯಮಾನಗಳನ್ನೆಲ್ಲ ಅವಲೋಕಿಸುವ ಕೆಲವರಿರುತ್ತಾರೆ. ತಮ್ಮ ಸುತ್ತ ಏನೇ ನಡೆದರೂ “ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಈಗ ಜನ ಬದಲಾಗಿದ್ದಾರೆ, ಕಾಲ ಕೆಟ್ಟು ಹೋಗಿದೆ.” ಹೀಗೆ ಏನೇನೋ ಬಡಬಡಿಕೆ ಅವರದು. ಒಂದು ‘ಕಾಲ ನೌಕೆ’ ಅಂತ ಏನಾದರೂ ಸಿಕ್ಕರೆ ʼಅವರ ಕಾಲʼಕ್ಕೆ ಹೋಗಿ ಒಂದು ರೌಂಡ್ ಸುತ್ತಾಡಿ ಬರುವ ಆಸೆ, ಕುತೂಹಲ ನನ್ನದು!

‍ಲೇಖಕರು Admin MM

May 24, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಗೋಪಾಲ ತ್ರಾಸಿ

    ವಾಹ್ !!! ಹೆಣ್ಮಕ್ಕಳ ವಿಷಯದಲ್ಲಿ ಈ ವಿಷಮ ಗಳಿಗೆ ಕುರಿತಾದ ವಿವೇಚನಾಯುಕ್ತ ,ಅರ್ಥಪೂರ್ಣ ವಿಶ್ಲೇಷಣೆ, ” ಹೊರಬಿದ್ದದ್ದು ಜಾಸ್ತಿ ಆಯಿತು, ಇನ್ನೇನಿದ್ದರೂ ಒಳ ಹೋಗುವವರು ಎನ್ನುವುದು ಮಾತ್ರ !! ” ಹೌದೌದೂ… ಇದು ತುರ್ತಾಗಿ ಆಗಲೇ ಬೇಕಾದುದು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: