ಪಿ ಪಿ ಉಪಾಧ್ಯ
ಚಡಪಡಿಕೆ.. ಚಡಪಡಿಕೆ…
ದಿನ ಬೆಳಗಾದರೆ ಚಡಪಡಿಕೆ
ತೀರದ… ಇಳಿಯದ… ಚಡಪಡಿಕೆ
ಅದಕೆಂದಾದರೂ ಕೊನೆಯಿದೆಯೇ
ಅದಕೇನಾದರೂ ಮಿತಿಯಿದೆಯೇ…..
ಉದ್ದಕ್ಕೂ ಚಡಪಡಿಸುವ ಬದುಕಿಗೆ
ಸಮಯದ ಲೆಕ್ಕ ಇಲ್ಲವೇ ಇಲ್ಲ
ಅದೆಲ್ಲ ಹೋಗಲಿ……
ಅಂತ್ಯವೇನಾದರೂ ಇದೆಯೇ ಅದಕೆ…
ಖಂಡಿತ ಇದೆ… ಆದರೆ… ಆದರೆ…
ಅದುವೇ ಬದುಕಿನ ಕೊನೆಯ ದಿನ!
ಹುಟ್ಟಿನಿಂದ ಸಾಯುವವರೆಗೆ ಖಾಯಂ ಇರುವುದು
ಅದೊಂದೇ… ಅದು ಚಡಪಡಿಕೆ…
*
ಬೆಳಿಗ್ಗೆ ಏಳೋದು ತಡವಾಯ್ತೆಂದರೆ
ಚಡಪಡಿಕೆ…… ಹಾಗೆಯೇ
ಹಲ್ಲನು ಉಜ್ಜಲು ಹೊರಟವಗೆ
ಬ್ರಷ್ಷೊ ಪೇಸ್ಟೋ ಸಿಗದಿದ್ದಾಗ….
ಕುಡಿಯಲು ಕಾಫಿ ಲೇಟಾದಾಗ
ಬೆಳಗಿನ ತಿಂಡಿ ಸಿಗದಾಗಂತೂ.
ಚಡಪಡಿಕೆಯೊ ಚಡಪಡಿಕೆ…
ಅದಕೇನಾದರೂ ಮಿತಿಯಿದೆಯೇ…..
ದೈನಂದಿನ ಕೆಲಸಕೆ ಗಡಿಬಿಡಿಯಿಂದ
ಮನೆಯಿಂದಾಚೆಗೆ ಹೊರಟಾಗಂತೂ
ದಾರಿಯುದ್ದಕ್ಕೂ ಚಡಪಡಿಕೆಯೇ
ಬಸ್ಸಿನಲ್ಲೋ ಜಾಗವೇ ಇಲ್ಲ..
ಆಟೋದವನೋ ಹೇಳಿದ ಜಾಗಕೆ ಬರಬೇಕಲ್ಲ!
ನಡೆದೇ ಹೋಗುವ ಎಂದರೆ ದೂರ … ಸುಸ್ತೋ ಸುಸ್ತು
ಹಾಗೆಂದು…
ಕೆಲಸಕೆ ಹೋಗದೆ ಮನೆಯಲಿ ಉಳಿದರೆ
ಹೆಚ್ಚುವುದಲ್ಲವೇ ಚಡಪಡಿಕೆ
ಅದಕೆಂದೇ….
ಕಾದು ಕಾದು ಬಸ್ಸನು ಹತ್ತಿ
ಕಚೇರಿಗೆ ಹೋದರೆ ಅಲ್ಲಿಯೂ ಕೂಡ
ಚಡಪಡಿಕೆಯ ಮೇಲೆ ಚಡಪಡಿಕೆ
ತಡವಾದ್ದಕ್ಕೆ ಬಾಸಿನ ಬಯ್ಗಳು
ಸಹೋದ್ಯೋಗಿಗಳ ಟೀಕೆಯು ಬೇರೆ
ಮಿತಿಯುಂಟೇ ಆಗೆಲ್ಲ ಹುಟ್ಟುವ ಚಡಪಡಿಕೆಗೆ…
*
ಒಟ್ಟಿನಲ್ಲಿ ಚಡಪಡಿಕೆಯದೇ ಬದುಕು
ಹೊಟ್ಟೆ ತುಂಬ ಊಟ ಮಾಡಿದರೆ
ತಿಂದದ್ದೇ ಹೆಚ್ಚಾಯ್ತೆನ್ನುವ ಚಡಪಡಿಕೆ
ಹಸಿದ ಹೊಟ್ಟೆಯಲಿ ಮಲಗಿದರಂತೂ
ನಿದ್ದೆಯೇ ಬಾರದೆ ಚಡಪಡಿಕೆ
ಮಿತಿಯೇ ಇಲ್ಲದ ಹಿಡಿತವೂ ಇಲ್ಲದ
ಈ ಚಡಪಡಿಕೆಗೆ ಯಾರು ಹೊಣೆ?
ಯಾರು ಹೇರುವರು ಮಿತಿಯನ್ನು?
ಗಂಡನೇ.. ಹೆಂಡತಿಯೇ.. ಮಕ್ಕಳೇ..
ತಮ್ಮ ತಮ್ಮ ಚಡಪಡಿಕೆಯಲಿರುವ ಮಂದಿಗೆ
ಎಲ್ಲಿದೆ ಸಮಯ … ಎಲ್ಲಿದೆ ಮನಸು….
*
ಹಾಗಾದರೆ ಚಡಪಡಿಕೆಯ ಬದುಕಿಗೆ
ಇಲ್ಲವೇ ಪರಿಹಾರ?
ಬದುಕಿನ ಅಂತ್ಯವೇ ಇದರದೂ ಅಂತ್ಯವೇ?
ಅಲ್ಲ… ಅಲ್ಲ …
ಹೀಗೊಂದಿಷ್ಟು ಪ್ರಯತ್ನಿಸಿ ನೋಡಿ…
ಮನದೊಳಗಿನ ಚಿಂತೆಯ ಬಿಟ್ಟು ಬಿಡಿ
ಬದುಕಲಿ ನಿರಾಳತೆ ಬರಲು ಬಿಡಿ
ನಿಶ್ಚಿಂತೆಯ ಬದುಕನು ಬದುಕಲು ಕಲಿಯಿರಿ
ಆಸೆ ನಿರಾಸೆಯ ಮರೆತುಬಿಡಿ
ಅದುವೇ ಸುಗಮದ ಬದುಕಿನ ದಾರಿ
ಚಡಪಡಿಕೆಯು ಇಲ್ಲದೆ ಬಾಳುವ ಹಾದಿ
ಹಾಗೆಯೇ….
ಚಡಪಡಿಕೆಯ ಸರಿಸಿ ಸರಳತೆಯಲಿ ನಡೆಯಿರಿ
ಆ ಜೀವನವಾಗಲಿ ಶಾಂತಿಯುತ
nammellara nithyada horatavannu barahada moolaka moodisiddiri, dhanyavadagalu.