ಪಿ ಪಿ ಉಪಾಧ್ಯ ಸರಣಿ ಕಥೆ 9 – ಶಾಮಣ್ಣನವರ ಸ್ಪೆಶಲ್ ಖುರ್ಚಿ…

ಪಿ ಪಿ ಉಪಾಧ್ಯ

9

ಶಾಮಣ್ಣನವರ ಸ್ಪೆಶಲ್ ಖುರ್ಚಿ

ಶಾಮಣ್ಣನವರು ಸ್ವಂತಕ್ಕೆ ಮಾಡುವ ಖರ್ಚಿನ ವಿವರವೂ ಹಾಗೆಯೇ. ವರ್ಷಕ್ಕೆರಡು ಅಂಗಿ, ಪಂಚೆ. ಮನೆಯಲ್ಲಿ ಕೆಲಸದವರು ಒಗೆದು ಮಡಿ ಮಾಡುವ ವೈಖರಿಗೆ ತಿಂಗಳೊಳಗೇ ಅದರ ಹೊಸ ಹೊಳಪು ಹೋದರೂ ಅವರಿಗೆ ಅದರ ಚಿಂತೆಯಿಲ್ಲ. ಮುಂದಿನ ವರ್ಷ ಇನ್ನೆರಡು ಜೊತೆ ಹೊಸತು ತೆಗೆದುಕೊಳ್ಳುವವರೆಗೆ ಅದೇ. ಹಳೇ ರೇಷ್ಮೆ ಶಾಲಿನ ರುಮಾಲು. ಅದು ಅವರ ಸ್ಥಾನದ ಕುರುಹು. ಆ ರುಮಾಲಿನ ತುದಿಯನ್ನು ಕಂಡರೇ ಸಾಕು ಜನ ಹೋ ನಮ್ಮ ದೊಡ್ಡಮನೆ ಶಾಮಣ್ಣನವರು ಬಂದರು' ಎಂದು ಸರಿದು ದಾರಿ ಬಿಡಬೇಕು.

ವಿಶೇಷದ ಮನೆಗಳಲ್ಲಂತೂ ಇವರಿಗೆ ಮೇಲ್ಪಂಕ್ತಿ. ಇವರು ಆ ಮನೆಗೆ ಕಾಲಿಟ್ಟ ಹೊತ್ತಿನಿಂದ ಅಲ್ಲಿಂದ ಹೊರಡುವ ವರೆಗೆ ಒಬ್ಬರಲ್ಲ ಒಬ್ಬರು ಇವರನ್ನು ವಿಚಾರಿಸಿಕೊಳ್ಳುತ್ತಲೇ ಇರಬೇಕು. ಅದು ಊರಿನಲ್ಲಿ ಅವರಪ್ಪನ ಕಾಲದಿಂದಲೂ ಬಂದ ಅಲಿಖಿತ ನಿಯಮ. ಹಾಗೆಯೇ ಕೋಟದ ಪೇಟೆಗೆ ಹೋದರೆ ಕಾರಂತರ ಹೋಟೆಲಿಗೆ ಅವರದ್ದು ಖಾಯಂ ಭೇಟಿ. ಅಲ್ಲಿ ಶಾಮಣ್ಣನವರಿಗೆ ಸ್ಪೆಶಲ್ ಖುರ್ಚಿಯೇ ಇದೆ. ಅದರ ಮೇಲೆ ಅಪ್ಪಿ ತಪ್ಪಿ ಯಾರಾದರೂ ಕುಳಿತಿದ್ದರೆ ಶಾಮಣ್ಣನವರು ಬಂದರೆ೦ದಾಕ್ಷಣ ಖಾಲಿ ಮಾಡಿಸುತ್ತಾರೆ. ಅಷ್ಟೇ ಅಲ್ಲ ಅಡಿಗೆ ಮನೆಯನ್ನೂ ಗಲ್ಲೆಯನ್ನೂ ಒಟ್ಟೊಟ್ಟಿಗೇ ನೋಡಿಕೊಳ್ಳುತ್ತಿದ್ದ ಕಾರಂತರೇ ಇವರಿದ್ದಲ್ಲಿಗೆ ಓಡಿ ಬರಬೇಕು. ಬಂದವರು ಅವರೆದುರಿಗೆ ವಿನೀತರಾಗಿ ಕೈ ಕಟ್ಟಿ ನಿಲ್ಲಬೇಕು. ಅವರಿಗೆ ಏನು ಬೇಕೆಂಬುದೂ ಕಾರಂತರಿಗೆ ಗೊತ್ತು. ಅದನ್ನೇನೂ ಕೇಳಬೇಕೆಂದಿಲ್ಲ.

ಎದುರಿಗೆ ಬಂದು ನಿಲ್ಲುವುದು ಅವರಿಗೆ ಗೌರವ ತೋರಿಸುವ ಸಲುವಾಗಿ ಅಷ್ಟೆ.ಹೂಂ….’ ಎಂದು ಅವರೊಮ್ಮೆ ಹೂಂಕರಿಸಿದರೆ೦ದರೆ ತಿಂಡಿ ಬರಲಿ ಎನ್ನುವ ಅರ್ಥ. ಮಾಮೂಲಿ. ಸ್ಪೆಷಲ್ ಸ್ವೀಟ್ ಏನೆಂದು ಕಾರಂತರು ಹೇಳಬೇಕು. ಅನಂತರವೇ ಅದು ಎಷ್ಟು ಪ್ಲೇಟೆಂದು ಶಾಮಣ್ಣನವರು ಹೇಳಬೇಕು. ಅದಾದನಂತರ ದೋಸೆ. ಸ್ಪೆಷಲ್ ಬೆಣ್ಣೆ ದೋಸೆ. ಒಂದೋ ಎರಡೋ ಮೂರೋ. ಒಂದಾದ ಮೇಲೊಂದರ೦ತೆ ಹೇಳಬೇಕು.

ಮನೆಯಲ್ಲಿ ಯಾವುದನ್ನು ಹೆಂಡತಿ ತಿನ್ನಬಾರದು ಎನ್ನುತ್ತಿದ್ದಳೋ ಅದನ್ನೇ ಜಿದ್ದಿನಿಂದೆ೦ಬ೦ತೆ ತಿನ್ನುತ್ತಿದ್ದರು. ಪ್ರಾಯದ ಕಾಲದಲ್ಲಿ ಹೆಂಡತಿಯೂ ಇವರಿಗೆ ಮಾಡಿ ತಿನ್ನಿಸಿದವಳೇ. ದಿನಕ್ಕೊಂದು ಸಿಹಿ ಅದೂ ಮನೆಯಲ್ಲೇ ಕಾಯಿಸಿದ ಶುದ್ಧ ತುಪ್ಪದಲ್ಲೇ ಮಾಡಿದ್ದು. ಇಡ್ಲಿ ದೋಸೆಗಳೂ ಅಷ್ಟೆ. ಇಡ್ಲಿಯಷ್ಟೇ ಗಾತ್ರದ ಬೆಣ್ಣೆ. ದೋಸೆ ಮುಳುಗುವಷ್ಟು ತುಪ್ಪ. ಅದಕ್ಕೆಲ್ಲ ವಿರಾಮ ಹಾಕಿದ್ದು ಒಮ್ಮೆ ಯಾವುದೋ ಕೆಲಸಕ್ಕೆ ಉಡುಪಿಗೆ ಹೋದಾಗ ಅಲ್ಲಿ ತಲೆ ತಿರುಗಿತೆಂದು ಡಾಕ್ಟರ ಹತ್ತಿರ ಹೋದರೆ ಅವರು ಚೆಕ್ ಮಾಡಿದವರು ಮೂತ್ರದಲ್ಲಿ ಅದೆಷ್ಟೋ ಸಕ್ಕರೆ ಇದೆಯೆಂದೂ ಇನ್ನು ಮೇಲಿಂದ ಕಂಟ್ರೋಲು ಮಾಡದಿದ್ದರೆ ಹೆಚ್ಚು ದಿನ ಬದುಕುವ ಆಸೆ ಬಿಡಬೇಕು ಎಂದು ಖಡಾ ಖಂಡಿತವಾಗಿ ಹೇಳಿದ್ದು ಗೊತ್ತಾದ ಮೇಲೆ ಮನೆಯಲ್ಲಿ ಎಲ್ಲ ಕಟ್ಟಾಗಿತ್ತು.

ಅಪರೂಪಕ್ಕೊಮ್ಮೆ ಇವತ್ತೊಂದು ದಿನ ಎಂದು ಬಾಯಿ ಚಪಲ ತಡೆಯಲಾರದೆ ಸಿಹಿಯನ್ನು ತಿಂದರೋ ಇಲ್ಲ ದೋಸೆಯ ಮೇಲೊಂದು ಚಮಚ ತುಪ್ಪ ಸುರಿದುಕೊಂಡರೋ ಕಮಲಮ್ಮನ ಕೆಂಗಣ್ಣಿಗೆ ಗುರಿಯಾಗಬೇಕಿತ್ತು. ಮೊದಲಿನಂದಲೂ ಯಜಮಾನಿಕೆಯ ಗತ್ತನ್ನು ಗಂಡನೆ೦ದು ಪರಿಗಣಿಸದೆ ತೋರಿಸುತ್ತಿದ್ದ ಕಮಲಮ್ಮನಿಗೆ ಈಗ ಡಾಕ್ಟರರ ಸಲಹೆ ಇನ್ನಷ್ಟು ತಾಕತ್ತನ್ನು ತಂದು ಕೊಟ್ಟಿತ್ತು.

ಮನೆಯಲ್ಲಿ ಬಿಗಿ ಹೆಚ್ಚಾದಂದಿನಿ೦ದಲೇ ಮೊದಲು ಅಪರೂಪಕ್ಕೊಮ್ಮೆ ಕಾರಂತರ ಹೋಟೆಲಿನಲ್ಲಿ ಬೆಣ್ಣೆ ದೋಸೆಯ ರುಚಿ ನೋಡುತ್ತಿದ್ದ ಶಾಮಣ್ಣನವರು ತಮ್ಮ ಬೆಣ್ಣೆ ದೋಸೆಯ ಚಪಲವನ್ನು ಹೆಚ್ಚಿಸಿಕೊಂಡದ್ದು. ಜೊತೆಗೇ ಹಿಂದೆ ಯಾವಾಗಲೋ-ಬಹುಶಃ ಅವರಪ್ಪನ ಕಾಲದಲ್ಲಿ- ಪ್ರಾರಂಭವಾಗಿದ್ದ ಆ ಹೋಟೆಲಿನ ಕಾರಂತರಿಗೆ ಕೊಡುತ್ತಿದ್ದ ವರ್ಷಕ್ಕೊಂದು ನಾಲ್ಕು ಮುಡಿ ಅಕ್ಕಿ ಮತ್ತು ಒಂದು ನೂರಿನ್ನೂರು ತೆಂಗಿನ ಕಾಯಿಗಳ ಪರಿಮಾಣವನ್ನು ದುಪ್ಪಟ್ಟುಗೊಳಿಸಿದ್ದು.

ಹಾಗಾಗಿ ಯಾವತ್ತೂ ಕಾರಂತರು ಶಾಮಣ್ಣನವರಿಂದ ಅವರು ತಿಂದ ತಿಂಡಿಗೆ, ಕುಡಿದ ಕಾಫಿಗೆ ದುಡ್ಡು ತೆಗೆದುಕೊಂಡದ್ದೆ೦ದಿಲ್ಲ. ಶಾಮಣ್ಣನವರ ಹತ್ತಿರ ಮಾತ್ರವಲ್ಲ ಆಗಾಗ್ಗೆ ಅವರೊಂದಿಗೆ ಬರುತ್ತಿದ್ದ ಅವರ ಚೇಲಾಗಳೊಂದಿಗೂ. ಆದರೆ ಶಾಮಣ್ಣನವರೂ ಆ ಮಟ್ಟಿಗೆ ಸ್ಟ್ರಿಕ್ಟೇ. ಹಾಗೆ ಎಲ್ಲರನ್ನೂ ಎಲ್ಲ ಹೊತ್ತಿಗೂ ಕರೆದುಕೊಂಡು ಬರುವವರಲ್ಲ. ಆ ಪಾಟಿ ದೋಸೆ ಹೊಡೆದು ತಾನು ತಿರುಗಿ ಮನೆಗೆ ಹೋಗುವಾಗ ರಾತ್ರಿಯಾದೀತು ಎಂದೆನಿಸಿ ಆ ಒಂದೂವರೆ ಮೈಲಿ ದಾರಿಯನ್ನು ಒಬ್ಬರೇ ಸವೆಸುವುದು ಅಷ್ಟು ಕ್ಷೇಮವಲ್ಲ ಎನ್ನುವ ಹೆದರಿಕೆ ಹುಟ್ಟಿದರೆ ಆ ದಿನ ಒಂದಿಬ್ಬರನ್ನು ಜೊತೆಗೇ ಹೋಟೆಲಿನ ಒಳಕ್ಕೆ ಕರೆದುಕೊಂಡು ಹೋದಾರು. ಅವರು ಯಾರೇ ಇರಲಿ ಹಾಗೆ ಒಳ ಬಂದವರು ಶಾಮಣ್ಣನವರ ಜೊತೆಯಲ್ಲಿ ಕೂರುವ ಹಾಗಿಲ್ಲ.

ಎಲ್ಲೋ ಒಂದು ಮೂಲೆಯಲ್ಲಿ ಕೂರಬೇಕು. ಕಾರಂತರಿಗೆ ಅವರನ್ನು ಬೆರಳಿನಲ್ಲಿಯೇ ತೋರಿಸಿ ಅದೇನಾದರು ಕೊಡು' ಅವರೇ ಹೇಳಬೇಕು. ಏನಾದರೂ ಎಂದರೆ ತಿನ್ನುವವ ಕೇಳಿದ್ದಲ್ಲ. ಕಾರಂತರೇ ನಿರ್ಧರಿಸಬೇಕು. ಏನೇನು ಕೊಟ್ಟರೆ ತನಗೆ ನಷ್ಟವಾಗಲಾರದು ಎನ್ನುವ ಲೆಕ್ಕ ಹಾಕಿ ಖಾಲಿ ದೋಸೆಗಳನ್ನೋ ಉಪ್ಪಿಟ್ಟನ್ನೋ ಕೊಟ್ಟು ಅವರ ಹೊಟ್ಟೆ ತುಂಬಿಸಿ ಮೇಲಿಂದ ನೀರು ಹಾಲಿನ ಕಾಫಿ ಕೊಟ್ಟು ಮುಗಿಸಬೇಕು. ಅಷ್ಟರಲ್ಲಿ ಶಾಮಣ್ಣನವರದ್ದು ಮುಗಿದಿದ್ದರೆ ಒಟ್ಟಿಗೆ ಹೊರ ಬರಬೇಕು. ಇಲ್ಲದಿದ್ದರೆ ಅವರು ಮುಂದಾಗಿ ಹೊರಬಂದು ಹೋಟೆಲಿನ ಹೊರಗೆ ಕಾಯುತ್ತ ನಿಲ್ಲಬೇಕು. ಇದೆಲ್ಲವನ್ನೂ ದಿನ ದಿನ ಹೇಳಬೇಕೆಂದಿಲ್ಲ. ಯಾವತ್ತೋ ಒಂದು ದಿನ ಕಾರಂತರ ಮೂಲಕ ಅವರಿಗೆ ಹೇಳಿಸಿದ್ದಾರೆ. ಅದೇ ಇಂದಿಗೂ ಚಾಚೂ ತಪ್ಪದೆ ನಡೆದುಕೊಂಡು ಬಂದಿದೆ.

ಹಾಗೆಲ್ಲ ಖರ್ಚಿನಲ್ಲಿ ಹಿಡಿತ ಸಾಧಿಸಿ ಅಪ್ಪನ ಆಸ್ತಿಯನ್ನು ಉಳಿಸಿಕೊಂಡು ಬಂದ ಶಾಮಣ್ಣನವರಿಗೆ ತಾವು ಅಷ್ಟು ಭರವಸೆಯಿಟ್ಟಿದ್ದ ಮಗ ಒಂದೇ ವ್ಯವಹಾರದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚು ಕಳೆದದ್ದು ಜೀರ್ಣ ಮಾಡಿಕೊಳ್ಳುವುದು ಕಷ್ಟವಾಗಿತ್ತು. ವ್ಯವಹಾರ ಮಾಡುತ್ತೇನೆಂದು ಮಗ ಹೊರಟಾಗ ಇದ್ದ ಭರವಸೆ ದಿನ ಕಳೆದಂತೆ ಕಡಿಮೆಯಾಗುತ್ತ ಬಂದಿದ್ದರೂ ಒಂದೇ ಸಲಕ್ಕೆ ಈ ತೆರ ಹಳ್ಳಕ್ಕೆ ತಳ್ಳುತ್ತಾನೆಂದು ಮಾತ್ರ ನಿರೀಕ್ಷಿಸಿರಲಿಲ್ಲ. ಆದರೆ ಮಗನೊಂದಿಗೆ ಆ ಬಗ್ಗೆ ಮಾತನಾಡುವ ಮನಸ್ಸೂ ಆಗಲಿಲ್ಲ. ಅದು ಅವರೇ ಮಗನ ಬಗ್ಗೆ ಬೆಳೆಸಿಕೊಂಡು ಬಂದ ಒಂದು ತೆರನ ಆರಾಧನಾ ಭಾವದಿಂದಾಗಿ. ಅವನ ಮಾತುಕತೆ, ವ್ಯವಹಾರ ನೋಡುತ್ತಿದ್ದ ಹಾಗೆ ತನ್ನಲ್ಲಿ ಒಳಗೊಳಗೇ ಹುಟ್ಟಿಕೊಂಡ ಕೀಳರಿಮೆಯಿಂದಾಗಿ ಉಂಟಾದ ಭಯವೂ ಇರಬಹುದು.

ಹಾಗಾಗಿ ಹೆಚ್ಚೆಂದರೆ ಹೆಂಡತಿಯೆದುರಿಗೆ ಛೆ.. ಮಾಣಿ ಹೀಗೆ ಮಾಡಿದನಲ್ಲ.. ‘ ಎಂದಾರು. ಅದಕ್ಕಿಂತ ಹೆಚ್ಚು ಮಗನ ಬಗ್ಗೆ ಹೇಳಲು ಮನಸ್ಸಾಗುವುದೂ ಇಲ್ಲ. ಅಷ್ಟೇ ಅಲ್ಲ ಆ ಹೆಂಡತಿಯೊಡನೆ ಹೇಳುವ ಧೈರ್ಯವೂ ಇಲ್ಲ. ಅದು ಮದುವೆಯಾಗಿ ಬಂದ೦ದಿನಿ೦ದ ಕಮಲಮ್ಮ ಇವರನ್ನು ಇಟ್ಟುಕೊಂಡ ರೀತಿ.

ಈಗ ಮಗ ಸಾವಿರಗಟ್ಟಲೆ ನಷ್ಟ ಮಾಡಿಕೊಂಡಿದ್ದಾನೆ೦ದಾದಾಗ ಅವರಿಗೆ ಹೆಚ್ಚು ಹೆದರಿಕೆಯಾಗಿದ್ದು ಹೆಂಡತಿ ಏನು ಹೇಳುತ್ತಾಳೋ ಎಂದು. ನೀವು ಅಪ್ಪ ಮಗನ ಕೈಗೆ ಯಜಮಾನಿಕೆ ಕೊಟ್ಟರೆ ಇಷ್ಟೇ.. ಅಲ್ಲ ಅವ ಕೇಳಿದ ಅಂತ ಸಾವಿರಗಟ್ಟಲೆ ಹಾಗೆ ಕೊಟ್ಟು ಬಿಡುವುದೇ.. ಈಗ ಆದ ನಷ್ಟವನ್ನು ತುಂಬಿಕೊಡುವವರು ಯಾರು..' ಎಂದೆಲ್ಲ ಆಕೆ ಕೇಳಿದರೆ ಏನು ಉತ್ತರ ಕೊಡುವುದು? ಮನಸ್ಸಿನಲ್ಲಿಯೇ ಸುತ್ತುತ್ತ ಹೆದರಿಸುತ್ತಿತ್ತು ಸಮಸ್ಯೆ. ಆದರೆ ಆ ಮಾಹಾತಾಯಿಗೆ ಅದೇನು ಒಳ್ಳೆಯ ಬುದ್ಧಿ ಬಂದಿತ್ತೋಅಲ್ಲ ಕೇಳಿ ಮಾಡಿ ಕೊಡುವುದಲ್ಲವೇ’ ಎಂದು ಕೇಳಿ ಸುಮ್ಮನಾಗಿದ್ದಳು. ಅವಳ ತೀರಾ ಔದಾರ್ಯದ ಆ ಮಾತನ್ನು ಅರಗಿಸಿಕೊಳ್ಳಲು ಆಗದ ಶಾಮಣ್ಣನೇ ಮುಂದುವರಿಸಿದ್ದರು ಅಲ್ಲ ಒಂದೆರಡು ಸಾವಿರವಾದರೆ ಸುಮ್ಮನಿರಬಹುದಿತ್ತು.... ಇಡೀ ಮೂವತ್ತು ಸಾವಿರ...' ಎಂದು ರಾಗವೆಳೆದರೆ ಕಮಲಮ್ಮನೇ ಅದೇನು ಮಹಾ.. ನಮ್ಮಪ್ಪನ ಮನೆಯಲ್ಲಿ ದಿನವೊಂದರ ಖರ್ಚೇ ಅದಕ್ಕಿಂತ ನಾಲ್ಕಾರು ಸಾವಿರ ಹೆಚ್ಚಾಗಬಹುದು’ ಎಂದು ಗಂಡನ ಧ್ವನಿಯನ್ನು ಅಡಗಿಸಿದ್ದಳು.

ಒಮ್ಮೆಗೆ ಮದುವೆಯಾಗಿ ಇಷ್ಟು ವರ್ಷವಾದರೂ ತನ್ನಪ್ಪನ ಮನೆಯ ಹೆಗ್ಗಳಿಕೆ ಹೇಳಿಕೊಳ್ಳುವುದು ಬಿಡಲಿಲ್ಲ. ಅಷ್ಟೇ ಅಲ್ಲ ಇವಳದ್ದು ಯಾವಾಗಲೂ ನನ್ನ ಮೇಲೆ ದಬ್ಬಾಳಿಕೆ ನಡೆಸುವುದೇ ಆಯ್ತು' ಎಂದು ಅಲವತ್ತುಕೊಳ್ಳುವಂತಾದರೂಎಷ್ಟು ಬೈಗುಳಗಳನ್ನು ಕೇಳಬೇಕಾಗುತ್ತದೇನೋ ಎಂದು ಕೊಂಡಿದ್ದು ಇಷ್ಟಕ್ಕೇ ಮುಗಿಯಿತಲ್ಲ ಸದ್ಯ’ ಎಂದುಕೊ೦ಡು ನಿಟ್ಟುಸಿರಿಟ್ಟಿದ್ದರು.

। ಇನ್ನು ನಾಳೆಗೆ ।

‍ಲೇಖಕರು Admin

May 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: