ಪಿ ಪಿ ಉಪಾಧ್ಯ ಸರಣಿ ಕಥೆ 8 – ಶಾಮಣ್ಣನವರು ಮೈ ಕೈ ಪರಚಿಕೊಳ್ಳುವುದೊಂದೇ ಬಾಕಿ…

ಪಿ ಪಿ ಉಪಾಧ್ಯ

8

ಶಾಮಣ್ಣನವರು ಮೈ ಕೈ ಪರಚಿಕೊಳ್ಳುವುದೊಂದೇ ಬಾಕಿ

ಎಂಟು ದಿನ ಕಳೆದುವು. ಹತ್ತು ದಿನಗಳೂ. ಯಾರೂ ಗಿರಾಕಿಗಳೇ ಬರಲಿಲ್ಲ. ಶಾಮಣ್ಣನವರ ಮನೆಯ ಹುಲ್ಲು ಕುತ್ತರಿ ಖಾಲಿಯಾದದ್ದೇ ಬಂತು. ಮನೆ ಕೆಲಸದವರು ಗದ್ದೆಯಂಚಿನ ಹುಲ್ಲು ಕೊಯ್ದು ಹೊರೆ ಹೊರೆ ಹೊತ್ತುಕೊಂಡು ಬಂದದ್ದೇ ಬಂತು. ಎಮ್ಮೆಗಳು ತಿಂದವು ಸೆಗಣಿ ಹಾಕಿದುವು. ಆ ಲೆಕ್ಕದಲ್ಲಿ ದಿನಕ್ಕೆ ಎಮ್ಮೆಯೊಂದಕ್ಕೆ ಹೊಟ್ಟೆಗೆ ಹಾಕಲಿಕ್ಕೇ ಇಪ್ಪತ್ತು ಮೂವತ್ತು ರೂಪಾಯಿ ತಗಲುತ್ತಿತ್ತು. ಆಗಲೇ ಕೊಂಡು ಕೊಂಡ ಎಮ್ಮೆಗಳಲ್ಲಿ ಅರೆವಾಸಿ ಈ ಊರನ್ನೇ ತಲುಪಲಿಲ್ಲ ಎನ್ನುವುದು ತಿಳಿದ ಶಾಮಣ್ಣನವರು ಗೊಣಗಲು ಪ್ರಾರಂಭಿಸಿದರು.

ಅದೇ ಈಗ ಅವು ರಾವು ಬಡಿದವರಂತೆ ತಿನ್ನುವುದನ್ನು ನೋಡಿದ ಮೇಲಂತೂ ಅವರ ಗೊಣಗಾಟ ಇನ್ನೊಬ್ಬರಿಗೆ ಅದೂ ಮಗ ಆದಿನಾರಾಯಣನಿಗೆ ಕೇಳಿಸುವಷ್ಟು ಗಟ್ಟಿಯಾಗಿತ್ತು. ಅವು ಕೊಡುತ್ತಿದ್ದ ಹಾಲೇನೋ ಗಟ್ಟಿಯಾಗಿರುತ್ತಿತ್ತು ನಿಜ. ಕನಿಷ್ಟ ಆ ಹಾಲಿನಿಂದಲಾದರೂ ಖರ್ಚಿನ ಸ್ವಲ್ಪಾಂಶವನ್ನು ಪಡೆದುಕೊಳ್ಳುವ ಎಂದರೆ ಮನೆ ಕೆಲಸದ ಹೆಂಗಸು ಅಯ್ಯೋ ಆ ಎಮ್ಮೆಯ ಹಾಲನ್ನು ಕರೆಯಲು ನನ್ನಿಂದಾಗದು' ಎಂದು ಹಿಂಜರಿದವಳನ್ನು ಒತ್ತಾಯ ಮಾಡಿದರೆ ಎರಡು ದಿನ ಕೆಲಸಕ್ಕೇ ಬಂದಿರಲಿಲ್ಲ. ಈಗ ಆದಿಗೂ ತನ್ನ ಪ್ರಯತ್ನದ ಯಶಸ್ಸಿನ ಬಗ್ಗೆ ಸಂಶಯ ಬರಲು ಪ್ರಾರಂಭವಾಯ್ತು.

ಪುನಃ ಎಮ್ಮೆ ಶೀನನ ಮೊರೆ ಹೊಕ್ಕಿದ್ದ. ಅವನೋ ಮಹಾ ಪ್ರಚಂಡ. ಏನು ಮಾಡಿದರೂ ಸಿರಸಿ ಸಂತೆಯಲ್ಲಿ ಖರೀದಿ ಮಾಡುವಾಗ ಎಮ್ಮೆಗಳಿಗೆ ಖರ್ಚುಮಾಡಿದ ಹಣವಂತೂ ಖಂಡಿತ ಹುಟ್ಟುವುದಿಲ್ಲ ಎಂದು ಖಾತ್ರಿಯಾಗಿದ್ದ ಅವ ಆರು ಮೂರು ಕಾಸಿಗಾದರೂ ಅವುಗಳನ್ನು ಮಾರಾಟ ಮಾಡಿ ಒಮ್ಮೆ ಅವರ ಕೈಯ್ಯಿಂದ ತಪ್ಪಿಸಿಕೊಳ್ಳುವ ಪ್ಲಾನು ಹಾಕಿದ. ಮಾರನೇ ದಿನವೇ ಯಾವುದೋ ಮೂಡಿನ ಊರಿನಿಂದ ಒಬ್ಬ ಟೊಣಪನನ್ನು ಕರೆದು ತಂದ. ಅವನು ದೊಡ್ಡ ಜಮೀನ್ದಾರನೆಂದೂ ನೂರಿನ್ನೂರು ಮುಡಿ ಹುಟ್ಟುವಳಿಯಿದ್ದವರೆಂತಲೂ ಈ ಎಂಟು ಎಮ್ಮೆಗಳನ್ನೂ ಅವರೇ ಸಾಕಿಕೊಳ್ಳುವವರೆಂತಲೂ, ಐವತ್ತು ಅರುವತ್ತು ಜನರಿರುವ ಅವರ ಮನೆಯಲ್ಲಿ ಅಷ್ಟೂ ಎಮ್ಮೆಗಳ ಹಾಲು ದಿನದ ಖರ್ಚಿಗೇ ಬೇಕಾಗತ್ತದೆಂತಲೂ ಹೇಳಿದ.

ಆ ಟೊಣಪ ಹಾಕಿದ್ದ ಬಟ್ಟೆ, ಬಾಯಿಂದ ಸುರಿಯುತ್ತಿದ್ದ ಎಲೆ ಅಡಿಕೆಯ ಕೆಂಪು ರಸ ನೋಡಿ ಈ ಶೀನ ಹೇಳುವುದರಲ್ಲಿ ಸತ್ಯವೆಷ್ಟೋ ಸುಳ್ಳೆಷ್ಟೋ ಎನ್ನುವ ಸಂಶಯ ಬಂದರೂಅದನ್ನೆಲ್ಲ ಕಟ್ಟಿಕೊಂಡು ನನಗೇನಾಗಬೇಕು. ನನಗೆ ಎಮ್ಮೆ ತೆಗೆದುಕೊಂಡು ಬರಬೇಕಾದ ದುಡ್ಡು ಕೊಟ್ಟರಾಯ್ತು ಅಷ್ಟೆ’ ಎಂದುಕೊ೦ಡ ಆದಿ ವ್ಯವಹಾರದ ಮಾತಿಗಿಳಿದ. ಅಲ್ಲೂ ನಡುವೆ ಬಾಯಿ ತೂರಿಸಿದ ಶೀನ ಅಲ್ಲ ಅಯ್ಯ ಎಲ್ಲ ಎಮ್ಮೆಗಳನ್ನೂ ಒಬ್ಬರೇ ತೆಗೆದುಕೊಳ್ಳುತ್ತಾರೆ. ಏನೋ ಹೆಚ್ಚು ಕಡಿಮೆ ಮಾಡಿಕೊಂಡು ಕೊಟ್ಟು ಬಿಡಿ. ಇಲ್ಲಿ ಇಟ್ಟುಕೊಳ್ಳುವುದು ನಮಗೂ ಕಷ್ಟ' ಎಂದಿದ್ದ. ಇವ ನಮ್ಮ ಕಡೆಯವನೋ ಅಲ್ಲ ಅವರ ಕಡೆಯವನೋ ಎನ್ನುವ ಸಂಶಯ ಆದಿಗೆ ಬಂದದ್ದತೂ ಸುಳ್ಳಲ್ಲ. ಅಳೆದೂ ಸುರಿದೂ ಶೀನನತ್ತ ತಿರುಗಿ ತಿರುಗಿ ನೋಡಿ ಆ ದೊಡ್ಡವರು ಎಂದು ಶೀನನೇ ಹೇಳಿದ ಆ ವ್ಯಕ್ತಿ ಹೇಳಿದ ದರ ಕೇಳಿ ಆದಿ ಭೂಮಿಗೇ ಇಳಿದಿದ್ದ.ಏನೋ ಇದೆಲ್ಲ’ ಎನ್ನುವಂತೆ ಶೀನನತ್ತ ನೋಡಿದರೆ ಅವ ಮುಖ ತಪ್ಪಿಸಿದ.

ಎಲ್ಲ ಸೇರಿ ಹತ್ತು ಸಾವಿರ ಕೊಡ್ತೀನಿ.. ಒಳ್ಳೆ ಮನಸ್ಸು ಮಾಡಿ ಕೊಟ್ಟು ಬಿಡಿ' ಆದಿಗೆ ಹಾರ್ಟ್ಫೆಯಿಲ್ ಆಗುವುದೊಂದೇ ಬಾಕಿ. ಈಗ ಶೀನ ಪುನಃ ಬಾಯಿ ಹಾಕಿದ.ಹೌದು ಅಯ್ಯ.. ಕೊಟ್ಟು ಬಿಡೋಣ’ ಎಂದ
ಶಿರ್ಸಿಗೆ ಎಮ್ಮೆ ತರಲು ಹೋಗಬೇಕೆಂದು ಐಡಿಯಾ ಹಾಕಿದ ಆ ದಿನದಿಂದ ಇವತ್ತಿನವರೆಗೆ ಆದ ಖರ್ಚನ್ನು ಮನದಲ್ಲೇ ಲೆಕ್ಕ ಹಾಕಿದ ಆದಿಗೆ ತಲೆ ಸುತ್ತಲು ತೊಡಗಿತ್ತು. ದಾರಿಯ ಮೇಲಿನ ಇವರಿಬ್ಬರ ಊಟ ತಿಂಡಿಯ ಖರ್ಚು ಬಿಟ್ಟೇ ಹತ್ತಿರ ಹತ್ತಿರ ನಲವತ್ತು ಸಾವಿರವಾಗಿತ್ತು. ಅದೂ ಶೀನ ಪದೇ ಪದೇ ಹೇಳುತ್ತಿದ್ದ ಒಂದಕ್ಕೆರಡು ಲಾಭ ಗ್ಯಾರಂಟಿ ಅಯ್ಯ' ಎಂದುದನ್ನು ಕೇಳಿ ಹುಟ್ಟಿದ ಉತ್ಸಾಹ. ಕೈ ಬಿಚ್ಚಿ ಖರ್ಚು ಮಾಡಿದ್ದ.

ಈಗ ಇವರು ಆಡುವ ಮಾತು ನೋಡಿದರೆ ಲಾಭದ ಮಾತು ಹೋಗಲಿ ಮೂವತ್ತು ಸಾವಿರ ನಷ್ಟ.. ಅಪ್ಪ ಕೇಳಿದರೆ ಎದೆ ಒಡೆದುಕೊಂಡಾರು. ಆದರೆ ಬೇರೆ ದಾರಿ? ಈ ಅವಕಾಶ ಬಿಟ್ಟು ಇದ್ದದ್ದೂ ನಷ್ಟವಾದರೆ. ಈಗಿದ್ದ ಎಮ್ಮೆಗಳೂ ಸತ್ತು ಗಿತ್ತು ಹೋದರೆ. ಅಷ್ಟರಲ್ಲಿ, ಈ ವ್ಯವಹಾರದಲ್ಲಿ ತನಗೆ ಅಂತಹ ಆಸಕ್ತಿಯೇನೂ ಇಲ್ಲ ಎನ್ನುವಂತೆ ತನ್ನ ರೇಟನ್ನು ಹೇಳಿದ ಆ ಮನುಷ್ಯ ಎತ್ತಲೋ ನೋಡುತ್ತ ನಿಂತಿದ್ದ. ಶೀನನೂ ಇದರಿಂದ ತನಗೇನೂ ಲಾಭವಿಲ್ಲ. ನಿಮ್ಮನ್ನು ಆಪತ್ತಿನಿಂದ ಪಾರು ಮಾಡಲೆಂದೇ ತನ್ನ ಎಲ್ಲ ಕೆಲಸವನ್ನೂ ಬಿಟ್ಟು ಇಲ್ಲಿಗೆ ಬಂದ್ದು ಎನ್ನುವ ಅಭಿಪ್ರಾಯದ ಮಾತುಗಳನ್ನು ಆಗೀಗ್ಗೆ ಆಡುತ್ತ ಎಮ್ಮೆಗಳ ಮತ್ತು ಆದಿನಾರಾಯಣನ ಹಿಂದೆ ಮುಂದೆ ಸುತ್ತುತ್ತಿದ್ದ.

ಈ ರಗಳೆ ಮುಗಿದರೆ ಸಾಕು ಎನ್ನುವ ಭಾವನೆ ಮನಸ್ಸಿಗೆ ಬಂದದ್ದೇ ಆದಿ ಒಪ್ಪಿಯೇ ಬಿಟ್ಟ. ಇಷ್ಟು ಹೊತ್ತೂ ಏನೂ ಆಸಕ್ತಿಯಿಲ್ಲದವನಂತೆ ನಟಿಸುತ್ತಿದ್ದ ಆ ಮನುಷ್ಯಆಯ್ತು’ ಎನ್ನುವ ಮಾತು ಆದಿಯ ಬಾಯಿಯಿಂದ ಬಂದದ್ದೇ ಜೇಬಿನಿಂದ ನೂರರ ನೋಟುಗಳ ಕಂತೆಯನ್ನೇ ತೆಗೆದು ಇವನೆದುರಿಗಿಟ್ಟ ಮತ್ತು ಎಮ್ಮೆಗಳ ಹಗ್ಗಕ್ಕೇ ಕೈ ಹಾಕಿದ. ಆಚೀಚೆ ಸುಳಿದಾಡುತ್ತಿದ್ದ ಶೀನ ಇವನ ಕೈಯ್ಯಲ್ಲಿದ್ದ ನೋಟುಗಳನ್ನೇ ನೋಡುತ್ತ ಅಯ್ಯ.. ಆವತ್ತಿನಿಂದ ನಿಮ್ಮ ಜೊತೆಯಲ್ಲಿಯೇ ಇದ್ದೇನೆ. ಬೇರೆ ಕೆಲಸಕ್ಕೂ ಹೋಗಲಿಲ್ಲ. ಇವತ್ತೂ ಅಷ್ಟೆ.

ಬೆಳಿಗ್ಗೆಯಿಂದ ಇಲ್ಲೇ ಇದ್ದೇನೆ' ಎನ್ನುತ್ತ ತಲೆ ತುರಿಸಲು ತೊಡಗಿದ. ಆದಿನಾರಾಯಣನಿಗೆ ಅಸಹ್ಯವೆನಿಸಿತು. ಅಲ್ಲ ಇವನ ಕಣ್ಣೆದುರಿಗೇ ತಾನು ಸಾವಿರಗಟ್ಟಲೆ ಕಳೆದುಕೊಂಡದ್ದನ್ನು ನೋಡಿಯೂ ಇದ್ದಾನೆ. ಅದು ಬೇರೆ ಎಂಟು ಹತ್ತು ದಿನಗಳಿಂದ ಅವನ ಖರ್ಚೆಲ್ಲವನ್ನೂ ತಾನೇ ನೋಡಿಕೊಳ್ಳುತ್ತಿದ್ದೇನೆ. ಆದರೂ ರಾವು ಬಡಿದವರ ಹಾಗೆ ಮಾಡುತ್ತಿದ್ದಾನಲ್ಲ ಎಂದು. ನೋಟಿನ ಕಟ್ಟಿನಿಂದ ಒಂದು ನೋಟನ್ನು ತೆಗೆದು ಕೊಟ್ಟರೆ ಮತ್ತೂ ತಲೆ ತುರಿಸುತ್ತಲೇ ನಿಂತವಅಯ್ಯ… ಎಂಟು ದಿನದಿಂದ ಮನೆಗೂ ಏನೂ ತೆಗೆದುಕೊಂಡು ಹೋಗಲಿಲ್ಲ..’ ಎಂದರೆ ಅವನಿಗೆ ಎಷ್ಟೊಂದು ಹೇಳುವುದಕ್ಕಿದ್ದಿದ್ದರೂ ಎಮ್ಮೆ ಬಿಡಿಸಿ ಕೊಡುವ ಗಡಿಬಿಡಿಯ ಜೊತೆಗೆ ಹೊರಗಿನವರೆದುರಿಗೆ ಇದೆಲ್ಲ ಬೇಡ ಎಂದುಕೊ೦ಡವ ಜೇಬಿನಿಂದ ಇನ್ನೊಂದು ಐವತ್ತರ ನೋಟನ್ನು ತೆಗೆದು ಕೈ ಮೇಲೆ ಹಾಕಿದ.

ಹಣ ಕೈಗೆ ಬಂದದ್ದೇ ಇಷ್ಟರವರೆಗೆ ನಿಮಗಾಗಿಯೇ ಬಂದದ್ದೆ೦ದು ಆದಿನಾರಾಯಣನೊಂದಿಗೆ ಹೇಳುತ್ತ ಬಂದಿದ್ದ ಶೀನನ ನಿಷ್ಠೆ ಕೂಡಲೇ ಬದಲಾಗಿತ್ತು. ಆ ಎಮ್ಮೆ ಕೊಂಡವನ ಬಳಿಗೆ ಸಾರಿದ ಮತ್ತು ಅವನಿಗೆ ಸಹಾಯ ಮಾಡುವವನಂತೆ ನಟಿಸತೊಡಗಿದ. ಹಾದರದವರಿಗೂ ಈ ಬ್ರೋಕರುಗಳಿಗೂ ವ್ಯತ್ಯಾಸವೇ ಇಲ್ಲ ಎಂದು ಗಟ್ಟಿಯಾಗಿಯೇ ಬೈದುಕೊಳ್ಳುತ್ತ ಅಲ್ಲಿಂದ ಜಾಗ ಖಾಲಿ ಮಾಡಿದ ಆದಿ. ಅಂದೇ ಕೊನೆ ಮತ್ತೆಂದೂ ಎಮ್ಮೆ ವ್ಯಾಪಾರದ ಮಾತೆತ್ತುವುದಿರಲಿ ಕನಸಿನಲ್ಲಿಯೂ ಅದರ ಬಗ್ಗೆ ಆಲೋಚನೆ ಮಾಡಲಿಲ್ಲ.

ಶಾಮಣ್ಣನವರು ಮೈ ಕೈ ಪರಚಿಕೊಳ್ಳುವುದೊಂದೇ ಬಾಕಿ. ಮಗನ ಜಟಾಪಟಿ ಮಾತು ದೊಗಲೆ ಅಂಗಿಯನ್ನು ಅಷ್ಟೇ ದೊಗಲೆಯಾಗಿದ್ದ ಪ್ಯಾಂಟಿನೊಳಗೆ ಹೊಗಿಸಿಕೊಳ್ಳುವ ವೈಖರಿ ಮತ್ತೆ ಅವನ ಹಿಂದೆ ಮುಂದೆ ಸುತ್ತುತ್ತಿದ್ದ ಚೇಲಾಗಳ ಪಡೆ ನೋಡಿ ದಂಗಾಗಿದ್ದ ಅವರು ಮಗ ಕಡಿದು ಗುಡ್ಡೆ ಹಾಕುತ್ತಾನೆಂದೇ ಬಗೆದಿದ್ದರು. ಒಬ್ಬನೇ ಮಗನಾದ ತನ್ನ ಕೈಗೆ ಬಂದ ತನ್ನಪ್ಪನ ಆಸ್ತಿಯನ್ನು ಹಾಳು ಮಾಡದೇ ಉಳಿಸಿಕೊಂಡು ಬಂದ ಅವರು ತೀರ ಆಧುನಿಕ ಬದುಕಿಗೆ ಮನವೊಡ್ಡಿದವರೇ ಅಲ್ಲ. ಕೆಲವೊಂದು ಆಸೆಗಳು ಆಗಾಗ್ಗೆ ಮೂಡಿ ಬರುತ್ತಿದ್ದರೂ ಅವುಗಳನ್ನು ಅಲ್ಲಿಯೇ ಹೂತು ಹಾಕುತ್ತಿದ್ದರು.

ಖರ್ಚು ಜಾಸ್ತಿ ಮಾಡಬಾರದೆನ್ನುವ ಅನಿಸಿಕೆ ಒಂದು ಕಡೆಯಾದರೆ ಹೆಂಡತಿಯ ಹೆದರಿಕೆ ಇನ್ನೊಂದು ಕಡೆ. ಎರಡೂ ಸೇರಿ ಅವರನ್ನು ಮೂರು ಹೊತ್ತು ಪೊಗದಸ್ತಾದ ಊಟ, ರಾತ್ರಿ ಗಡದ್ದಾದ ನಿದ್ದೆ ಇಷ್ಟಕ್ಕೇ ತೃಪ್ತಿಪಟ್ಟುಕೊಳ್ಳುವಂತೆ ಮಾಡಿದ್ದುವು. ಅಪ್ಪ ಮಾಡಿಟ್ಟ ಆಸ್ತಿಯನ್ನು ಹಾಳು ಮಾಡದ್ದರಿಂದ ಅವೆರಡಕ್ಕೂ ತೊಂದರೆಯಾಗುತ್ತಿರಲಿಲ್ಲ ಎನ್ನುವುದೂ ನಿಜ. ಜೊತೆಗೆ ಹೊರ ಹೋದರೆ `ಓ ಶಾಮಣ್ಣನವರು ಬನ್ನಿ ಬನ್ನಿ’ ಎಂದು ಕರೆದು ಮಣೆ ಹಾಕುವಷ್ಟು ಗೌರವ. ಬದುಕಿನಲ್ಲಿ ಇವಿಷ್ಟಕ್ಕಿಂತ ಹೆಚ್ಚಿನದೇನಾದರೂ ಬೇಕೆಂದೆನಿಸಿರಲಿಲ್ಲ ಅವರಿಗೆ. ತೀರಾ ಬೇಜಾರಾದಾಗ ಅಥವಾ ಅತೀ ಹುಮ್ಮಸ್ಸು ಬಂದಾಗ ಸುತ್ತ ಮುತ್ತ ನಾಲ್ಕೂರಿನ ಯಕ್ಷಗಾನದ ಕಲಾವಿದರನ್ನು ಕರೆಸಿ ಒಂದೇ ಬಾರಿಗೆ ಇನ್ನೂರು ಜನ ಊಟಕ್ಕೆ ಕೂರುವಷ್ಟು ದೊಡ್ಡದಾಗಿದ್ದ ತಮ್ಮಪ್ಪನೇ ಕಟ್ಟಿಸಿದ್ದ ಆ ಮನೆಯ ಚಾವಡಿಯಲ್ಲಿ ಒಂದು ತಾಳ ಮದ್ದಲೆಯನ್ನು ಇಡಿಸಿಯಾರು.

ಮಧ್ಯಾಹ್ನ ಊಟ ಮುಗಿಸಿದ ಊರ ಮಂದಿ ತಾಳ ಮದ್ದಲೆಯ ಸುದ್ದಿ ಕಿವಿಗೆ ಬಿದ್ದದ್ದೇ ಒಬ್ಬೊಬ್ಬರಾಗಿ ಬಂದು ಆ ಚಾವಡಿಯಲ್ಲಿ ಕೂರಲು ಪ್ರಾರಂಭಿಸಿದರೆ ಘಂಟೆಯೆರಡು ಘಂಟೆ ಕಳೆದು ಕಾರ್ಯಕ್ರಮ ಮುಗಿದು ಕಮಲಮ್ಮ ಮನೆಯ ಅಡಿಗೆಯವಳು ಮತ್ತು ಬಂದವರಲ್ಲಿ ತನಗೆ ಆಪ್ತರೆನಿಸಿದ ಇಬ್ಬರು ಹೆಂಗಳೆಯರನ್ನು ಕರೆದುಕೊಂಡು ನೆರೆದವರೆಲ್ಲರಿಗೆ ಪಾನಕ ಪನಿವಾರ ಹಂಚುವ ಹೊತ್ತಿಗೆ ಚಾವಡಿ ತುಂಬಿರುತ್ತಿತ್ತು. ಅದೆಲ್ಲ ಮುಗಿಸಿ ಮನೆಗೆ ಹೋಗುವ ಮಂದಿಯ ಬಾಯಲ್ಲಿ ತಾಳ ಮದ್ದಲೆಯ ಪ್ರಸಂಗಕ್ಕಿ೦ತ ಸರಬರಾಜು ಮಾಡಿದ್ದ ಪಾನಕ ಪನಿವಾರದ ಮಾತೇ ಹೆಚ್ಚು. ಹಾಗಾಗಿಯೇ ಶಾಮಣ್ಣನವರ ಮನೆ ಇಂದಿಗೂ ಜನರ ಬಾಯಿಯಲ್ಲಿ ದೊಡ್ಡ ಮನೆಯೇ.

। ಇನ್ನು ನಾಳೆಗೆ ।

‍ಲೇಖಕರು Admin

May 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: