ಪಿ ಪಿ ಉಪಾಧ್ಯ ಸರಣಿ ಕಥೆ 49 – ಬರೀ ಕಲೆಗಾಗಿ ಕಲೆ ಎನ್ನುವ ತತ್ವ…

ಪಿ ಪಿ ಉಪಾಧ್ಯ

ಮಧ್ಯಾಹ್ನದ ಊಟ ಮತ್ತು ತುಸು ಹೊತ್ತಿನ ವಿರಾಮ. ನಂತರ ಗಂಟೆ ಎರಡು ಗಂಟೆ ಹೊತ್ತು ಕುಳಿತು, ನಿಂತು, ಅಲ್ಲೇ ತೋಟದಲ್ಲಿ ತಿರುಗಾಡುತ್ತ ಮಾತಾಡಿದ್ದರು. ಅಂತ್ಯನ ಮಾತಿನಲ್ಲಿನ ಸ್ಷಷ್ಟತೆ ವಿಷಯ ಮಂಡನೆಯಲ್ಲಿನ ತರ್ಕಬದ್ಧತೆ ಎಲ್ಲವಕ್ಕೂ ಪ್ರೊಫೆಸರರೇ ದಂಗಾಗಿದ್ದರು. ಇದೇನೂ ಪ್ರಥಮ ಬಾರಿಯಲ್ಲ. ಈ ಹಿಂದೆಯೂ ಬಹಳಷ್ಟು ಬಾರಿ ಅಂತ್ಯನೊ0ದಿಗೆ ತರ್ಕಿಸಿದ್ದಿದೆ. ಆಗೆಲ್ಲಕ್ಕಿಂತ ಈಗಿನ ರೀತಿಯೇ ಬೇರೆಯದಾಗಿ ಕಂಡಿತ್ತು. ಅವನ ಬೆಳವಣಿಗೆಯ ವೇಗಕ್ಕೆ ಪ್ರೊಫೆಸರರು ಬೆರಗಾದರು.

ಮಧ್ಯಾಹ್ನದ ಊಟದ ಹೊತ್ತಿಗೆ ಹೊರ ಹೋಗಿದ್ದ ಆದಿ ಮತ್ತೆ ಅವರ ಸಂಜೆಯ ಟೀ ಮುಗಿಯುವ ಹೊತ್ತಿಗೆ ತಿರುಗಿ ಬಂದಿದ್ದ. ಅವನು ಮೊದಲಿನಿಂದಲೂ ಹಾಗೆಯೇ. ಎಂತಹ ಗಡಿಬಿಡಿಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರೂ ಊಟ ಕಾಫಿಯ ಸಮಯದಲ್ಲಿ ಅಲ್ಲಿಂದ ಹೊರಟು ಬಿಡುತ್ತಿದ್ದ. ಎಷ್ಟೋ ಸಲ ಶಾಸ್ತ್ರೀಗಳೇ ಹೇಳಿದ್ದರು ‘ನೋಡಿ ಆದಿಯವರೇ… ಇದೆಲ್ಲ ನಿಮ್ಮದೇ ಊಟ. ನೀವೂ ನಮ್ಮ ಜೊತೆ ಸೇರಿಬಿಡಿ’ ಎಂದು.

ಆಗೆಲ್ಲ ಏನೇನೋ ಸಬೂಬು ಹೇಳಿಕೊಂಡು ತಪ್ಪಿಸಿಕೊಳ್ಳುತ್ತಿದ್ದ. ಮುಂದೆ ಶಾಸ್ತ್ರೀಗಳೂ ಒತ್ತಾಯ ಮಾಡುವುದನ್ನು ನಿಲ್ಲಿಸಿದ್ದರು. ಇವತ್ತೂ ಹಾಗೆಯೇ ಅಂತೂ ಸಂಜೆಯ ಟೀಯ ನಂತರ ಎಲ್ಲ ಒಟ್ಟಿಗೆ ಅಂತ್ಯನ ಮನೆಗೆ ಹೊರಟರು. ಅಲ್ಲಿ ಇವರಿಗಾಗಿಯೇ ಕಾಯುತ್ತಿದ್ದ ಆದಿಯ ತಂದೆ ತಾಯಿ ಇವರಿಗೆ ಸಂಭ್ರಮದ ಸ್ವಾಗತ ನೀಡಿದರು.

ಎಲ್ಲರೂ ಕುಳಿತು ಮಾತಾಡುವಾಗ ಪ್ರೊಫೆಸರರು ಅಂತ್ಯನನ್ನು ಹೊಗಳಿದ್ದೇ ಹೊಗಳಿದ್ದು. ‘ಇಂತಹ ಮಗನನ್ನು ಪಡೆಯಲು ತಂದೆ ತಾಯಿ ಇಬ್ಬರೂ ಪುಣ್ಯ ಮಾಡಿದ್ದಿರಿ’ ಎಂದರು. ಸಂತೋಷದಲ್ಲಿ ಮಾತೇ ಹೊರಡದ ತಂದೆ ತಾಯಂದಿರಿಬ್ಬರೂ ಅಂತ್ಯನನ್ನು ಆಪ್ಯಾಯಮಾನತೆಯಿಂದ ನೋಡಿದ್ದರು. ಮುಂದುವರಿಸಿದ ಪ್ರೊಫೆಸರರು ಆದಿಯನ್ನೂ ಸೇರಿಸಿ ‘ಇಬ್ಬರು ಮಕ್ಕಳೂ ಇಷ್ಟು ಮೇಧಾವಿಗಳಾಗಬೇಕೆಂದರೆ ಅದು ಸಾಮಾನ್ಯದ ಮಾತಲ್ಲ’ ಎಂದಾಗ ಮಾತ್ರ ಆ ತಾಯಿಗೆ ಇನ್ನೊಬ್ಬ ಮಗನ ನೆನಪಾಗಿ ಕಣ್ಣಂಚು ಒದ್ದೆಯಾಗಿತ್ತು. ಅದನ್ನು ಗಮನಿಸಿದ ಮಕ್ಕಳಿಬ್ಬರಿಗೂ ಅಮ್ಮನ ಮನಸ್ಥಿತಿ ಅರ್ಥವಾಗಿತ್ತು. ಅಂತ್ಯನ0ತೂ ಅನಂತನನ್ನು ಮನಸ್ಸಿನಲ್ಲಿಯೇ ಶಪಿಸಿದ.

ಮಾತು ಕತೆಯಲ್ಲಿಯೇ ಸಮಯ ಜಾರಿದ್ದು ಗೊತ್ತಾಗಿರಲಿಲ್ಲ. ಸೂರ್ಯ ಮುಳುಗಿ ಕತ್ತಲೆಯಾಗುತ್ತಿದ್ದಂತೆ ಇಲ್ಲೇ ಊಟಮಾಡಿಕೊಂಡು ಹೋಗಬೇಕು' ಎಂದು ಅಂತ್ಯನ ತಂದೆ ತಾಯಿ ಇಬ್ಬರೂ ಒತ್ತಾಯಿಸಿದ್ದರು. ಆದಿಯೂ ತನ್ನ ದನಿಯನ್ನು ಸೇರಿಸಿದ್ದ. ಅಂದು ತಿರುಗಿ ಮಂಗಳೂರಿಗೆ ಹೋಗುವ ಕಾರ್ಯಕ್ರಮವೇನೂ ಇದ್ದಿರದ ಪ್ರಫೆಸರರು ಮತ್ತು ಅವರ ಸ್ನೇಹಿತನದ್ದೇನೂ ಅಭ್ಯಂತರವಿಲ್ಲದಿದ್ದರೂ ಶಾಸ್ತ್ರೀಗಳೇ ಹಿಂದೆ ಮುಂದೆ ನೋಡಿದ್ದರು. ಅದನ್ನು ಗಮನಿಸಿದ ಅಂತ್ಯನೂ ಒತ್ತಾಯ ಮಾಡಿದ್ದರಿಂದ ಬೇರೆ ದಾರಿಯೇ ಇಲ್ಲದೆ ಒಪ್ಪಿದರು.

ತಾಯಿ ಅಡಿಗೆಯವಳಿಗೆ ಹೇಳಲು ಮತ್ತು ಅವಳಿಗೆ ಸಹಾಯ ಮಾಡಲು ಒಳಗೆ ಹೋದಳು. ಉಳಿದವರು ಮಾತುಕತೆ ಮುಂದುವರಿಸಿದರು. ಪುನಃ ಅದೇ. ಯಕ್ಷಗಾನ ಜಾನಪದ ಕಲೆಯಾಗಿಯೇ ಮುಂದುವರಿಯಬೇಕೇ ಅಥವಾ ಈಗಿನ ಜನಾಂಗಕ್ಕೆ ಬೇಕಾಗುವಂತೆ ಬದಲಾಗಬೇಕೇ ಎನ್ನುವುವದು. ಕಲೆ ಕಲೆಯಾಗಿಯೇ ಉಳಿಯಬೇಕೆಂದರೆ ಅದು ತನ್ನ ಮೂಲ ರೂಪದಲ್ಲಿಯೇ ಇರಬೇಕಲ್ಲವೇ’ ಪ್ರೊಫೆಸರರ ಪ್ರಶ್ನೆ.

ಹೌದು ಸರ್. ನೀವು ಹೇಳುವುದು ಸರಿ. ಆದರೆ ಹೊಸ ಜನಾಂಗಕ್ಕೆ, ಹೊಸ ಮಂದಿಗೆ ರುಚಿಸದಿದ್ದರೆ ಆ ಕಲೆ ಉಳಿಯುವುದು ಕಷ್ಟವಲ್ಲವೇ. ಬರೇ ಪುಸ್ತಕದಲ್ಲಿಯೇ ಉಳಿದು ಬಿಡಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವ ಹಾಗಿಲ್ಲ ಅಲ್ಲವೇ. ಅಲ್ಲದೇ ಬರೀ ಕಲೆಗಾಗಿ ಕಲೆ ಎನ್ನುವ ತತ್ವಕ್ಕೆ ಅಂಟಿಕೊ0ಡರೆ ಆ ಕಲೆಯ ಅಸ್ಥಿತ್ವವೇ ಕಷ್ಟಕರವಾಗಬಹುದು. ಹಾಗೆಯೇ ನಾವು ಈ ಜನಪದ ಕಲೆಗಳ ಮೂಲವನ್ನೂ ಗಮನಿಸಬೇಕು.

ಕೆಲಸವಿಲ್ಲದ ಕಾಲದಲ್ಲಿ ಸಮಯ ಕಳೆಯಲಿಕ್ಕಾಗಿ ಹುಟ್ಟಿಕೊಂಡ ಈ ಕಲೆ ನಡುವಿನಲ್ಲಿ ಎಲ್ಲಿಯೋ ಶಾಸ್ತ್ರೀಯ ರೂಪವನ್ನು ಪಡೆದುಕೊಂಡಿರಬೇಕಷ್ಟೇ ವಿನಃ ಹುಟ್ಟುವಾಗಲೇ ಇದು ಶಾಸ್ತ್ರೀಯವಾಗಿದ್ದಿರಲಿಲ್ಲ ಎನ್ನುವುದನ್ನು ನಾನು ಹಿಂದೊಮ್ಮೆ ತಮ್ಮೊಡನೆ ಹೇಳಿದ್ದೆ. ಅದನ್ನು ನೀವೂ ಒಪ್ಪಿದ್ದಿರಿ. ಈಗ ಇದೊಂದು ಕಲೆ... ಕಲೆಯಾಗಿಯೇ ಮುಂದುವರಿಯಬೇಕು ಎನ್ನುವುದಾದರೆ ತುಸು ಬದಲಾವಣೆಯ ಅಗತ್ಯವಂತೂ ಇದ್ದೇ ಇದೆ' ಅಂದರೆ ಯಾವ ತೆರನ ಬದಲಾವಣೆ ಎನ್ನುತ್ತೀಯ…?’ `ಇಂತಹುದೇ ಎಂದು ನಾವು ಹೇಳುವ ಹಾಗಿಲ್ಲ.

ಪ್ರೇಕ್ಷಕ ವೃಂದಕ್ಕೆ ಒಪ್ಪಿಗೆಯಾಗುವಂತಹ ಬದಲಾವಣೆಯನ್ನು ನಾವೂ ಒಪ್ಪಿಕೊಳ್ಳಬೇಕು. ಹಾಗೆಂದಾಕ್ಷಣ ಕಲೆಯ ಮೂಲರೂಪವನ್ನೇ ಬದಲಾಯಿಸಬೇಕೆಂದಲ್ಲ. ಅಥವಾ ಪ್ರೇಕ್ಷಕ ವರ್ಗ ಕೇಳುತ್ತಿದೆಯೆಂದು ಅಗ್ಗದ ಹಾಸ್ಯವನ್ನೋ ತೀರಾ ಕೀಳು ಅಭಿರುಚಿಯ ಸಂಭಾಷಣೆಯನ್ನೋ ಅಳವಡಿಸಿಕೊಳ್ಳುವುದಲ್ಲ. ಹಾಗೆ ಜಾಗ್ರತೆ ಮಾಡುತ್ತಲೇ ಕಲೆಯ ಮೂಲ ರೂಪಕ್ಕೆ ಧಕ್ಕೆ ಬರದಂತೆ ಅಲ್ಲಲ್ಲಿ ಬದಲಾವಣೆ ಮಾಡಿಕೊಳ್ಳುವುದರಲ್ಲಿ ಅಂತಹ ತಪ್ಪೇನೂ ಇಲ್ಲ ಎನ್ನುವುದು ನನ್ನ ಭಾವನೆ’ ಅದೇ ನಿಟ್ಟಿನಲ್ಲಿ ಮಾತುಕತೆ ಮುಂದುವರಿಯುತ್ತಲೇ ಇತ್ತು.

ಪ್ರೊಫೆಸರರಿಗೆ ಅಂತ್ಯನ ಅಭಿಪ್ರಾಯವನ್ನು ತಿಳಿದುಕೊಳ್ಳುವ ಕುತೂಹಲ. ಜೊತೆಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಷ್ಟು ಪ್ರಬುದ್ಧ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದ ಅವನ ಬಗ್ಗೆ ಅಭಿಮಾನ. ಜೊತೆಯಲ್ಲಿ ಬಂದಿದ್ದ ಅವರ ಸ್ನೇಹಿತರಂತೂ ದಂಗಾಗಿದ್ದರು. ಇಲ್ಲಿಯ ವರೆಗಿನ ಬುದುಕಿನ ಹೆಚ್ಚಿನಂಶವನ್ನು ಯಕ್ಷಗಾನಕ್ಕಾಗಿಯೇ ಮುಡಿಪಿಟ್ಟಿದ್ದ ಅವರು ಈ ತೆರನ ಆಲೋಚನೆಗಳು ತಮಗೆ ಬರಲೇ ಇಲ್ಲವಲ್ಲ ಎಂದು ಪೆಚ್ಚಾಗಿದ್ದೂ ಹೌದು. ಆದರೆ ಆ ಹುಡುಗನ ಬುದ್ಧಿಮತ್ತೆ ಮತ್ತು ಚಿಂತನೆಯ ದಾರಿಯನ್ನು ಮೆಚ್ಚದಿರಲು ಮಾತ್ರ ಸಾಧ್ಯವಾಗಲಿಲ್ಲ. ಪ್ರೊಫೆಸರರೊಂದಿಗೆ ಅವರೂ ತಲೆದೂಗುತ್ತಿದ್ದರು. ಅಷ್ಟರಲ್ಲಿ ಒಳಗಿನಿಂದ ಊಟಕ್ಕೆ ಕರೆ ಬಂದಿತ್ತು.

ಭರ್ಜರಿ ಊಟ. ರುಚಿಯಾಗಿತ್ತು. ಶಾಸ್ತ್ರೀಗಳು ಮೊದ ಮೊದಲು ತುಸು ದಾಕ್ಷಿಣ್ಯ ಮಾಡಿದರೂ ಮನೆಯ ಯಜಮಾನರೇ ಒತ್ತಾಯ ಮಾಡಿದಮೇಲೆ ಎಗ್ಗಿಲ್ಲದೆ ಕೇಳಿ ಕೇಳಿ ಹಾಕಿಸಿಕೊಂಡಿದ್ದರು. ಮಂಗಳೂರಿನವರಿಬ್ಬರೂ ಯಾವುದೇ ದಾಕ್ಷಿಣ್ಯವಿಲ್ಲದೇ ಹೊಡೆದಿದ್ದರು. ಅಡಿಗೆಯವಳೊಂದಿಗೆ ತಾವೇ ಬಡಿಸಲು ನಿಂತ ಮನೆಯ ಯಜಮಾನಿಯ ಒತ್ತಾಯ ಬೇರೆ.

ಅಂತೂ ಊಟ ಮುಗಿದಾಗ ರಾತ್ರಿ ಹತ್ತು ಘಂಟೆಯ ಹತ್ತಿರ ಹತ್ತಿರ. ಅಂತಹ ರುಚಿಕರವಾದ ಊಟ ಮಾಡುವಾಗಲೂ ಅವರ ಚರ್ಚೆ ಮುಂದುವರಿದಿತ್ತು. ಆದರೆ ತುಸು ಕಡಿಮೆ ಗಾಂಭೀರ್ಯದೊ0ದಿಗೆ.

ಊಟ ಮುಗಿದ ಕೂಡಲೇ ಜೊತೆಯಲ್ಲಿ ತಾನೂ ಬರುತ್ತೇನೆಂದು ಆದಿ ಹೇಳಿದರೂ ಬೇಡ ಬೇಡ ಎನ್ನುತ್ತ ಶಾಸ್ತ್ರೀಗಳು ಮತ್ತು ಮಂಗಳೂರಿನಿ0ದ ಬಂದ ಅತಿಥಿಗಳೂ ಪ್ರೊಫೆಸರರೂ ಹೊರಟು ಬಿಟ್ಟರು. ಅಂತ್ಯ ತಾನೂ ಹೊರಡುತ್ತೇನೆ ಎಂದ. ಬಹುಶಃ ಅವರ ಚರ್ಚೆ ರಾತ್ರಿಯಲ್ಲಿಯೂ ಮುಂದುವರಿಯುವುದಿದೆಯೋ ಅಥವಾ ಬೆಳಿಗ್ಗೆ ಬೇಗ ಪ್ರಾರಂಭವಾಗುತ್ತದೇನೋ ಎಂದು ಕೊಂಡ ಅವನ ಅಪ್ಪ ಅಮ್ಮನೂ ಇರಲು ಒತ್ತಾಯ ಮಾಡಲಿಲ್ಲ. ಆದಿ ತಾನೇ ಅವನನ್ನು ಬಿಟ್ಟು ಬರಲು ಹೊರಟ.

| ಇನ್ನು ನಾಳೆಗೆ |

‍ಲೇಖಕರು Admin

June 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: