ಪಿ ಪಿ ಉಪಾಧ್ಯ ಸರಣಿ ಕಥೆ 48 – ಪ್ರಸಂಗ ಅಂತ್ಯನೇ ಬರೆದದ್ದು…

ಪಿ ಪಿ ಉಪಾಧ್ಯ

ಒಮ್ಮೆ ಒಂದು ಶನಿವಾರದಂದು ಮಂಗಳೂರಿನಿOದ ಬಂದ ಪ್ರೊಫೆಸರರು ಮಾರನೆಯ ದಿನ ಹೇಗೂ ರಜೆಯೆಂದು ಆ ದಿನ ಅಲ್ಲೇ ಪಕ್ಕದ ಊರಿನಲ್ಲಿ ನಡೆಯಲಿದ್ದ ಕಾರ್ಯಕ್ರಮವನ್ನು ನೋಡಿಕೊಂಡೇ ಹೋಗೋಣ ಎಂದು ಉಳಿದಿದ್ದರು. ಪ್ರಸಂಗ ಅಂತ್ಯನೇ ಬರೆದದ್ದು. ನೋಡಿದ ಪ್ರೊಫೆಸರರಿಗೆ ದಿಗ್ಭ್ರಮೆಯಾಗಿತ್ತು. ಕಾಲಕಾಲದಿಂದ ಯಕ್ಷಗಾನದ ಬಗ್ಗೆ ಸಂಶೋಧನೆ ಮಾಡುತ್ತ ಅದರ ಬಗ್ಗೆ ಸಾಕಷ್ಟು ಉತ್ತಮ ವಿಮರ್ಶೆಗೊಳಪಟ್ಟಂತಹ ನೂರಾರು ಪುಟಗಳಷ್ಟು ಬರೆದ ತನಗೇ ಹೊಳೆಯದ ವಿಷಯಗಳು ಈ ಬಾಲಕನಿಗೆ ಹೇಗೆ ಹೊಳೆಯಿತು ಎನ್ನುವ ಆಶ್ಚರ್ಯ ಅವರನ್ನು ಆವರಿಸಿತು. ಕನಿಷ್ಟ ಒಂದು ವಾರದಷ್ಟಾದರೂ ಪುರುಸೊತ್ತು ಮಾಡಿಕೊಂಡು ಬಂದು ಅಂತ್ಯನೊOದಿಗೆ ಕಳೆಯಬೇಕು ಮತ್ತು ಕೂಲಂಕಷವಾಗಿ ಈ ವಿಷಯಗಳ ಬಗ್ಗೆ ಚರ್ಚಿಸಬೇಕು ಎಂದುಕೊOಡರು.

ಅಂತ್ಯ ತಾನು ಮೊದಲಿಗೆ ಎಣಿಸಿಕೊಂಡOತೆ ಸಾಮಾನ್ಯ ಹುಡುಗನಲ್ಲ ಎಂದು ಅದೆಷ್ಟನೇ ಬಾರಿಗೋ ಅಂದುಕೊOಡರು. ಎಂದೋ ಸುರುವಿಗೆ ಒಮ್ಮೆ ಮನಸ್ಸಿಗೆ ಬಂದಿದ್ದ `ಶಾಸ್ತ್ರೀಗಳು ಅವನಪ್ಪನ ಮತ್ತು ಅಣ್ಣನ ಹಂಗಿಗೆ ಬಿದ್ದುದರಿಂದ ಅವನಿಗೆ ಅವಕಾಶಗಳನ್ನು ಕೊಡುತ್ತಿದ್ದಾರೆ ಮತ್ತು ಅವನನ್ನು ಪ್ರೊಜೆಕ್ಟ್ ಮಾಡುತ್ತಿದ್ದಾರೆ’ ಎನ್ನುವ ಭಾವನೆ ಎಷ್ಟು ತಪ್ಪಾಗಿತ್ತು ಎನ್ನುವುದು ಆಗಾಗ್ಗೆ ಅಂತ್ಯನ ಬಗ್ಗೆ ಆಲೋಚಿಸುವಾಗೆಲ್ಲ ಮನಸ್ಸಿಗೆ ಬರುತ್ತಿದ್ದುದು ಅದೆಷ್ಟನೇ ಬಾರಿಗೋ ಮತ್ತೆ ಬಂದು ಹೋಯಿತು.

ಪ್ರೊಫೆಸರರು ಕಾರ್ಯಕ್ರಮ ಮುಗಿಸಿ ಮಂಗಳೂರಿಗೆ ಹೊರಟು ನಿಂತವರು ಅಂತ್ಯನನ್ನು ಖುದ್ದಾಗಿ ಭೇಟಿ ಮಾಡಿ ತಿರುಗಿ ಅಭಿನಂದಿಸಿದ್ದೇ ಅಲ್ಲದೆ ಇದೇ ತೆರನಲ್ಲಿ ಅವನು ತನ್ನ ಅಭಿರುಚಿ ಮತ್ತು ಆಸಕ್ತಿಯ ವಲಯದಲ್ಲಿ ಮುಂದುವರಿದದ್ದೇ ಆದರೆ ಒಂದು ದಿನ ಪ್ರಪಂಚವೇ ಗುರುತಿಸುವ ಮಟ್ಟವನ್ನು ಮುಟ್ಟುವುದರಲ್ಲಿ ಸಂಶಯವಿಲ್ಲ ಎಂದರು. ಅಂತ್ಯ ಅವರ ಹೊಗಳಿಕೆಗೆ ತುಸು ನಾಚಿ ತಲೆ ತಗ್ಗಿಸಿದರೆ ಪಕ್ಕದಲ್ಲಿಯೇ ಇದ್ದ ಶಾಸ್ತ್ರೀಗಳೂ ಹೌದೆನ್ನುತ್ತ ತಲೆಯಾಡಿಸಿದ್ದೇ ಅಲ್ಲದೆ ‘ಅವನು ಇಲ್ಲಿಗೆ ಬಂದು ಸೇರಿದಂದೇ ಅವನಲ್ಲಿ ಅಂತಹುದೊOದು ಪ್ರತಿಭೆಯ ಸುಳಿವನ್ನು ಕಂಡದ್ದರಿOದ ನಾನು ಅವನನ್ನು ಪ್ರೋತ್ಸಾಹಿಸುತ್ತ ಬಂದದ್ದು’ ಎಂದರು.

‘ಆಯ್ತು. ಈಗ ನಾನು ಮಂಗಳೂರಿಗೆ ಹೋಗುತ್ತಿದ್ದೇನೆ. ಇನ್ನೊಮ್ಮೆ ಬರುತ್ತೇನೆ. ಹಾಗೆ ಬಂದಾಗ ಮಾತ್ರ ಅಂತ್ಯನೊOದಿಗೆ ಒಂದಿಷ್ಟು ಹೊತ್ತು ಕಳೆಯಬೇಕು. ಮೊದಲಾಗಿ ಹೇಳಿಯೇ ಬರುತ್ತೇನೆ’ ಎಂದು ಶಾಸ್ತ್ರೀ ಮತ್ತು ಅಂತ್ಯ ಇಬ್ಬರನ್ನೂ ಉದ್ದೇಶಿಸಿ ಹೇಳಿದವರು ಬಸ್ಸು ಹಿಡಿಯಲು ಹೊರಟರು.

ಹಾಗೆ ಹೇಳಿ ಹೋದ ಪ್ರೊಫೆಸರರು ಮತ್ತೆರಡು ವಾರಕ್ಕೇ ಒಂದು ಶುಕ್ರವಾರ ಸಂಜೆ ಶಾಸ್ತ್ರೀಗಳಿಗೆ ಫೋನ್ ಮಾಡಿ ‘ಎರಡು ದಿನಗಳ ಮಟ್ಟಿಗೆ ನಾನು ರಜೆ ಹಾಕಿದ್ದೇನೆ, ಶನಿವಾರ ಮತ್ತು ಭಾನುವಾರ ಹೇಗೂ ರಜೆ. ಹಾಗಾಗಿ ಒಟ್ಟಿಗೆ ನಾಲ್ಕು ದಿನಗಳನ್ನು ಕೋಟದಲ್ಲಿಯೇ ಅಂತ್ಯ ಮತ್ತು ನಿಮ್ಮೊಂದಿಗೆ ಕಳೆಯುವುದಕ್ಕೋಸ್ಕರ ನಾಳೆ ಬೆಳಿಗ್ಗೆಯೇ ಬರುತ್ತೇನೆ’ ಎಂದು ಹೇಳಿದರು. ಜೊತೆಗೇ ತನ್ನ ಸ್ನೇಹಿತರೊಬ್ಬರನ್ನು ಕರೆದುಕೊಂಡು ಬರುತ್ತೇನೆ ಎಂದೂ ಸೇರಿಸಿದರು.

ಅದೇ ಸುದ್ದಿಯನ್ನು ಶಾಸ್ತ್ರೀಗಳು ಅಂತ್ಯನಿಗೂ ತಿಳಿಸಿದರು. ಈಗೀಗ ಅಂತ್ಯ ಸಾಮಾನ್ಯವಾಗಿ ವಿಶೇಷ ಕಾರ್ಯಕ್ರಮಗಳು ಇಲ್ಲದ ವಾರಾಂತ್ಯದಲ್ಲಿ ಮನೆಗೆ ಹೋಗುತ್ತಿದ್ದವ ಅಲ್ಲಿ ಅಮ್ಮ, ಅಣ್ಣ ಮತ್ತು ಅಪ್ಪನೊಂದಿಗೆ ಕಾಲ ಕಳೆದು ಆದಿತ್ಯವಾರ ಸಂಜೆ ತಿರುಗಿ ಬರುತ್ತಿದ್ದ. ಈ ವಾರ ಪ್ರೊಫೆಸರರು ಬರುತ್ತಿದ್ದಾರೆ ಅದೂ ತನ್ನನ್ನೇ ನೋಡಲು ಬರುತ್ತಿದ್ದಾರೆ ಎಂದರೆ ಮನೆಗೆ ಹೋಗುವ ಹಾಗಿಲ್ಲ ಎಂದು ಅಣ್ಣನಿಗೆ ಫೋನ್ ಮಾಡಿ ಹೇಳಿದ್ದ. ಅಂತ್ಯನ ಯಾವುದೇ ವಿಶೇಷ ಕಾರ್ಯಕ್ರಮವೆಂದರೂ ಆದಿಗೆ ಸಂಭ್ರಮವೇ. ‘ಓಹ್ ಪರವಾಯಿಲ್ಲ. ಅಮ್ಮನಿಗೆ ನಾನು ಹೇಳುತ್ತೇನೆ. ನಿನ್ನ ಕಾರ್ಯಕ್ರಮ ಮುಂದುವರಿಯಲಿ. ಸಾಧ್ಯವಾದರೆ ನಾನೂ ಬರುತ್ತೇನೆ’ ಎಂದ.

ಹೇಳಿದಂತೆಯೇ ಪ್ರೊಫೆಸರರು ಶನಿವಾರ ಬೆಳಿಗ್ಗೆ ಹತ್ತು ಘಂಟೆಗೇ ಬಂದರು. ಜೊತೆಯಲ್ಲಿಯೇ ಇನ್ನೊಬ್ಬರು ತುಸು ವಯಸ್ಸಾದವರೂ ಇದ್ದರು. ಬೆಳಿಗ್ಗಿನ ಉಪಾಹಾರವನ್ನು ಮುಗಿಸಿಯೇ ಹೊರಟಿದ್ದೇನೆಂದ ಅವರು ಶಾಸ್ತ್ರೀಗಳು ಮತ್ತು ಅಂತ್ಯನೊOದಿಗೆ ಕೂಡಲೇ ಮಾತು ಪ್ರಾರಂಭಿಸುವ ಇಚ್ಛೆ ಯನ್ನು ತೋರಿಸಿದರು. ಆಫೀಸು ಕೋಣೆಯಲ್ಲಿ ಒಂದೆರಡು ಹೆಚ್ಚಿನ ಕುರ್ಚಿಗಳನ್ನು ಹಾಕಿಸಿದ ಶಾಸ್ತ್ರೀಗಳು ಬಂದವರಿಬ್ಬರನ್ನು ಕೂರಿಸಿ ಅಂತ್ಯನನ್ನೂ ಅವರೆದುರಿಗೆ ಕೂರುವಂತೆ ಮಾಡಿ ತಾವು ಮಾತ್ರ ಪಕ್ಕದಲ್ಲಿನ ಒಂದು ಕುರ್ಚಿಯಲ್ಲಿ ಕುಳಿತುಕೊಳ್ಳಲು ನೋಡಿದರೆ ಪ್ರೊಫೆಸರರೇ ಎದುರಿಗೆ ಬಂದು ಕೂರುವಂತೆ ಹೇಳಿದರು.

ಅಂತ್ಯನೂ ತಯಾರಾಗಿಯೇ ಇದ್ದುದರಿಂದ ಕೂಡಲೇ ಪ್ರಾರಂಭಿಸಿದರು. ಮೊದಲಿಗೆ ಅಂತ್ಯನಿಗೆ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಬೇಕಿತ್ತು. ಅವೆಲ್ಲದಕ್ಕೂ ಅಂತ್ಯ ತೀರ ಸಮರ್ಪಕವಾದ ಉತ್ತರ ಕೊಟ್ಟ. ಜೊತೆಯಲ್ಲಿಯೇ ಇದ್ದ ವಯಸ್ಸಾದವರೂ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು. ಅವುಗಳಿಗೂ ಅಷ್ಟೇ ಸಮರ್ಪಕವಾಗಿ ಉತ್ತರಿಸಿದ. ‘ಈಗೀಗಿನ ಪ್ರದರ್ಶನಗಳಲ್ಲಿ ಹಿಂದೆಲ್ಲ ಸುರುವಿನಲ್ಲಿ ತೋರಿಸುತ್ತಿದ್ದಂತೆ ಕೋಡಂಗಿ ಮತ್ತು ಬಾಲಗೋಪಾಲರುಗಳನ್ನು ತೋರಿಸುವುದೇ ಇಲ್ಲ. ಅದರ ಬಗ್ಗೆ ಏನು ಹೇಳುತ್ತೀಯ? ಇಬ್ಬರೂ ಒಟ್ಟೊಟ್ಟಿಗೆ ಕೇಳಿದ್ದರು.

‘ಅದೊಂದು ಸ್ವಾಭಾವಿಕ ಬೆಳವಣಿಗೆ. ಪ್ರೇಕ್ಷಕರ ಡಿಮಾಂಡನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕಲ್ಲ. ತೀರ ಗಡಿಬಿಡಿಯಲ್ಲಿರುವ ಇಂದಿನ ಪ್ರೇಕ್ಷಕ ಆ ನೀರಸವಾದ ಸುರುವಿನ ಭಾವನ್ನು ನೋಡಲು ಬಯಸುವುದಿಲ್ಲ. ಅಷ್ಟೇ ಅಲ್ಲ ಇಂದು ಎಲ್ಲ ಪೂರ್ಣ ಮಟ್ಟದ ತರಬೇತಾದವರೇ ಪಾತ್ರಧಾರಿಗಳಾಗಿರುವುದರಿಂದ ಹಿಂದಿನ ಕಾಲದಂತೆ ಸುರುವಿನ ತರಬೇತಿಯ ಅಗತ್ಯವೂ ಇಲ್ಲ’. ಎಂದವ ತುಸು ತಡೆದ. ಚರ್ಚೆ ನಡೆಯುತ್ತಿದ್ದಂತೆಯೇ ಆದಿಯೂ ಬಂದಿದ್ದ. ‘ಬನ್ನಿ ಇಲ್ಲೇ ಕುಳಿತುಕೊಳ್ಳಿ’ ಎಂದು ಶಾಸ್ತ್ರೀಗಳು ಸನ್ನೆ ಮಾಡಿದರೂ ಅವ ದೂರದಲ್ಲಿಯೇ ಕುಳಿತ. ಪ್ರೊಫೆಸರೂ ಬನ್ನಿ ಎಂದು ಕರೆದಿದ್ದರು. ‘ಇಲ್ಲ ಇಲ್ಲ ನಾನು ಇಲ್ಲಿಯೇ ಕುಳಿತಿರುತ್ತೇನೆ’ ಎಂದು ಇವರಾಡುವ ಮಾತುಗಳು ಕೇಳುವಂತೆ ತುಸು ದೂರದಲ್ಲಿಯೇ ಕುಳಿತಿದ್ದ.

ಚರ್ಚೆ ಮುಂದುವರಿಯಿತು. ಪ್ರೊಫೆಸರರು ಮತ್ತು ಅವರೊಂದಿಗೆ ಬಂದಿದ್ದ ಆ ಹೊಸ ಮನುಷ್ಯ ಕೇಳುತ್ತಿದ್ದ ಪ್ರಶ್ನೆಗಳಿಗೆ ಅಂತ್ಯ ಕೊಡುತ್ತಿದ್ದ ಉತ್ತರ. ಅವನ ಉತ್ತರಗಳನ್ನು ಕೇಳುತ್ತ ಪ್ರಶ್ನೆ ಕೇಳಿದವರೇ ತಲೆದೂಗುತ್ತಿದ್ದ ರೀತಿ ಎಲ್ಲವನ್ನು ನೋಡುತ್ತ ಆದಿ ಬೆರಗುವಡೆದಿದ್ದ. ತಮ್ಮನ ತಿಳುವಳಿಕೆಯ ಬಗ್ಗೆ ಅವನಿಗೆ ಯಾವತ್ತೂ ಹೆಮ್ಮೆಯೇ. ಈಗ ಅಂತಹ ವಿದ್ವಾಂಸರೊOದಿಗೆ ಮಾತನಾಡುವಾಗಲೂ ತಮ್ಮ ತೋರಿಸುತ್ತಿದ್ದ ಪ್ರಬುದ್ಧತೆ, ಆ ಮಾತುಗಳಲ್ಲಡಗಿದ್ದ ಗಾಂಭೀರ್ಯ ಅವನನ್ನು ಬೆರಗುವಡೆಯುವಂತೆ ಮಾಡಿತ್ತು.

| ಇನ್ನು ನಾಳೆಗೆ |

‍ಲೇಖಕರು Admin

June 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: