ಪಿ ಪಿ ಉಪಾಧ್ಯ ಸರಣಿ ಕಥೆ 47 – ಅಂದಿನಿಂದ ಅಂತ್ಯನ ಕೆಲಸ ಬದಲಾಗಿತ್ತು. …

ಪಿ ಪಿ ಉಪಾಧ್ಯ

ಪ್ರಸಂಗಗಳೆಲ್ಲ ಒಂದು ಮೂರ್ತರೂಪ ಪಡೆದುವು ಎಂದಾದಾಗ ಶಾಸ್ತ್ರೀಗಳು ಅವುಗಳನ್ನು ಅಚ್ಚು ಹಾಕಿಸಿ ಒಂದು ಪ್ರತಿಯನ್ನು ಅಂತ್ಯನಿಗೂ ಇನ್ನೊಂದು ಪ್ರತಿಯನ್ನು ಆದಿಗೂ ಕೊಟ್ಟರು. ಹಾಗೆ ಕೊಡುವಾಗ ಜೊತೆಯಾಗಿಯೇ ಇದ್ದ ಅಣ್ಣ ತಮ್ಮಂದಿರಲ್ಲಿ ತಮ್ಮನನ್ನು ಉದ್ದೇಶಿಸಿ ಕೇಳಿದರು ‘ಅಂತ್ಯ ಇನ್ನೊಂದೆರಡು ದಿನಗಳಲ್ಲಿಯೇ ಪ್ರ್ಯಾಕ್ಟೀಸು ಪ್ರಾರಂಭಿಸುವ.

ಈ ಎರಡು ಪ್ರಸಂಗಗಳಲ್ಲಿ ನೀನು ಯಾವ ಪಾತ್ರ ತೆಗೆದುಕೊಳ್ಳುತ್ತೀಯ..?
ಪ್ರಸಂಗದ ತಯಾರಿಯಲ್ಲಿ ಸುರುವಿನಿಂದ ಕೊನೆಯವೆರೆಗೆ ತಾನೂ ತೊಡಗಿಕೊಂಡಿದ್ದ ಅಂತ್ಯನಿಗೆ ಅದರಲ್ಲಿ ನಾಯಕ ಯಾರು. ಯಾವ ಪಾತ್ರ ಪ್ರಧಾನವಾದದ್ದು ಎನ್ನುವುದರ ಪೂರ್ಣ ಅರಿವು ಇದ್ದೇ ಇತ್ತು. ಆ ಪಾತ್ರಗಳನ್ನು ಬಿಟ್ಟು ಬೇರೆ ಯಾವುದನ್ನೇ ಮಾಡುತ್ತೇನೆಂದರೆ ಶಾಸ್ತ್ರೀಗಳು ಒಪ್ಪುವುದಿಲ್ಲ ಎನ್ನುವುದೂ ತಿಳಿದಿದೆ ಅವನಿಗೆ. ಆದರೆ ಈ ಬಾರಿ ಅವನು ಬೇರೆಯೇ ಮಾತೆತ್ತಿದ.

‘ಶಾಸ್ತ್ರೀಗಳೇ ಇದು ಮಕ್ಕಳ ಮೇಳ.. ಇನ್ನೆಷ್ಟು ದಿನಗಳವರೆಗೆ ನಾನು ಪಾತ್ರವಹಿಸುವುದು ಸರಿಯಾಗುತ್ತದೆ… ಎಂದೋ ನಿಲ್ಲಿಸಬೇಕಾಗಿತ್ತು ನಾನು. ಹಾಗೆಂದು ಯೋಚಿಸುತ್ತ ವರ್ಷಗಳು ಕಳೆಯುತ್ತಲೇ ಇವೆ. ಈಗಲೇ ಇಪ್ಪತ್ತೈದು ದಾಟಿದೆ ನನಗೆ. ಇನ್ನೂ ಮುಂದುವರಿದರೆ ಅದು ಚನ್ನಾಗಿರುವುದೇ…’
ಶಾಸ್ತ್ರೀಗಳು ಕನಸಿನಲ್ಲೂ ನಿರೀಕ್ಷಿಸಿರದಿದ್ದ ಮಾತು. ಅಂತ್ಯನಿಗೆ ವಯಸ್ಸಾದುದು ಅವರ ಅರಿವಿಗೆ ಬರದ ವಿಷಯವೇನೂ ಅಲ್ಲ. ಆದರೆ ಅವನಾಗಿಯೇ ಸಾಕು ಎನ್ನುತ್ತಾನೆ ಎನ್ನುವುದು ಮಾತ್ರ ಅವರು ನಿರೀಕ್ಷಿಸಿರದ ಮಾತು.

ಇಪ್ಪತ್ತೈದು ಕಳೆದ ಮೇಲೂ ಮೇಳಕ್ಕೆ ಸೇರುತ್ತೇನೆಂದು ಬರುವವರನ್ನು ಕಂಡಿದ್ದಾರೆ ಅವರು. ಚಿಕ್ಕವರಿದ್ದಾಗ ಸೇರಿ ಇಪ್ಪತ್ತೈದು ಕಳೆದರೂ ಬಿಡಲು ತಯಾರಿಲ್ಲದೆ ಮೇಳಕ್ಕೇ ಜೋತು ಬೀಳಲು ತಯಾರಿರುವವರನ್ನೂ ನೋಡಿದ್ದಾರೆ. ‘ಇನ್ನೊಂದೆರಡು ವರ್ಷ ಹೇಗಾದರೂ ತಳ್ಳಿ ಶಾಸ್ತ್ರೀಗಳೇ’ ಎಂದು ದುಂಬಾಲು ಬೀಳುವ ಮಕ್ಕಳ ಅಪ್ಪ ಅಮ್ಮಂದಿರನ್ನೂ ಕಂಡಿದ್ದಾರೆ ಅವರು. ಅಂತಹುದರಲ್ಲಿ ಅಂತ್ಯ ತಾನೇ ದೂರ ಸರಿಯುವುದಾಗಿ ಹೇಳುತ್ತಿದ್ದಾನೆ.

ಶಾಸ್ತ್ರೀಗಳಿಗೆ ಅಯೋಮಯ. ಅಂತ್ಯ ಉಳಿದವರಂತಲ್ಲ. ಸುಮ್ಮ ಸುಮ್ಮನೇ ಮಾತನಾಡುವವನೂ ಅಲ್ಲ. ಒಂದು ಮಾತನಾಡಿದನೆಂದರೆ ಅದರ ಹಿಂದೆ ತುಂಬ ಆಲೋಚಿಸಿಯೇ ಇರುತ್ತಾನೆ. ಹಾಗಾಗಿ ಅವನ ಮಾತುಗಳನ್ನು ತಳ್ಳಿ ಹಾಕುವ ಹಾಗೂ ಇಲ್ಲ.

ಒಂದು ವೇಳೆ ಈಗ ಅಂತ್ಯ ಬಿಟ್ಟನೆಂದರೆ ಆದಿಯ ಸಹಕಾರ ಇದೇ ರೀತಿ ಮುಂದುವರಿಯುತ್ತದೆಯೇ… ಅವನ ಈ ಮಟ್ಟದ ಸಹಕಾರ ಇಲ್ಲದೆಯೂ ಮೇಳವನ್ನು ಇದೇ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಿದೆಯೇ… ಯಾವುದೇ ಹೆಸರಿನ ಬಯಕೆಯಿಲ್ಲದೆ ಸಹಾಯ ಮಾಡುವ ಆದಿತ್ಯನಂತಹ ಎಷ್ಟು ಮಂದಿ ಇದ್ದಾರೆ ಈ ಪ್ರಪಂಚದಲ್ಲಿ. ಇದ್ದರೂ ನಮಗೆ ಸಿಗಬೇಕಲ್ಲ… ಅದೂ ಸಮಸ್ಯೆ ಎಂದಾಗೆಲ್ಲ ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೆ ಬಂದು ಬಗೆಹರಿಸಿಕೊಟ್ಟು ಹೋಗುವವರು ಸಿಕ್ಕಾರೆಯೇ… ತನಗೋ ಕಲೆಯಲ್ಲಿ ಪರಿಣಿತಿಯಿದೆ ನಿಜ. ಆದರೆ ಇಂತಹ ವ್ಯವಹಾರಗಳನ್ನೆಲ್ಲ ತಾನೇ ನಿಭಾಯಿಸಿಯೇನು ಎನ್ನುವ ಧೈರ್ಯವೂ ಇಲ್ಲ.

ಧಾಷ್ಟ್ರ್ಯವೂ ಇಲ್ಲ… ಏನೆಲ್ಲ ಆಲೋಚನೆಗಳು ಮನಸ್ಸಿನಲ್ಲಿ ನುಗ್ಗುತ್ತಿದ್ದ ಹಾಗೆಯೇ ‘ಹಾಗೆಲ್ಲ ಆಗಲಿಕ್ಕಿಲ್ಲ. ಆದಿ ಅಂಥವನಲ್ಲ. ತನ್ನೂರಿನ ಮೇಳದ ಬಗ್ಗೆ ಅವನಿಗೆ ಅಭಿಮಾನ ಇದೆ. ಫಕ್ಕನೆ ಕೈ ಬಿಡಲಿಕ್ಕಿಲ್ಲ. ಅಷ್ಟೇ ಅಲ್ಲ ಅಂತ್ಯ ಇಲ್ಲಿ ಸೇರುವುದಕ್ಕೆ ಮುಂಚೆಯೇ ಎಷ್ಟೊಂದು ಸಹಾಯ ಮಾಡಿದ್ದಾರೆ ಅವನು ಮತ್ತು ಅವನಪ್ಪ’ ಎಂದೆಲ್ಲ ಸಮಾಧಾನ ಮಾಡಿಕೊಳ್ಳುವ ಪ್ರಯತ್ನ ಮಾಡಿದರು. ಅಷ್ಟರಲ್ಲಿ ಅವರ ಮನಸ್ಸನ್ನು ಓದಿಕೊಂಡನೋ ಎನ್ನುವಂತೆ ಅಂತ್ಯ ಮಾತು ಮುಂದುವರಿಸಿದ್ದ ‘ಇಲ್ಲ ಶಾಸ್ತ್ರೀಗಳೇ ನಾನು ಪ್ರಸಂಗಗಳಲ್ಲಿ ವೇಷ ಹಾಕುವುದಿಲ್ಲ ಎಂದೆ ಅಷ್ಟೆ. ಮೇಳ ಬಿಟ್ಟು ಹೋಗುವುದಿಲ್ಲ. ಇಲ್ಲೇ ಕುಳಿತು ತುಂಬಾ ಕೆಲಸ ಮಾಡುವುದಿದೆ. ಹಾಗೆಯೇ ಅಣ್ಣನಿಗೂ ಹೇಳಿದ್ದೇನೆ. ಅವನದ್ದೂ ಒಪ್ಪಿಗೆಯಿದೆ. ಜೊತೆಯಲ್ಲಿಯೇ ಅವನ ಸಹಕಾರವೂ ಮುಂದುವರಿಯುತ್ತದೆ’ ಎಂದವ ತುಸು ತಡೆದು ಮುಂದುವರಿಸುತ್ತ `ಹಾಗೆಂದು ನಾನು ವೇಷ ಹಾಕುವುದೇ ಇಲ್ಲ ಎಂದಲ್ಲ. ಅಗತ್ಯ ಬಿದ್ದರೆ ಅದೂ ನೀವು ಹೇಳಿದರೆ ಇಲ್ಲ ಎನ್ನುವುದಿಲ್ಲ. ಖಂಡಿತ ವೇಷ ಹಾಕುತ್ತೇನೆ. ಈಗಿನ ಹಾಗೆ ದಿನವೂ ವೇಷ ಹಾಕುವುದಿಲ್ಲ ಎಂದೆ ಅಷ್ಟೆ’ ಎಂದೂ ಹೇಳಿದ.
ಶಾಸ್ತ್ರೀ ಗಳಿಗೆ ನಿರಾಳ. ಆದಿಯ ಸಹಾಯ ಮುಂದುವರಿಯುತ್ತದೆ ಎನ್ನುವುದಕ್ಕಿಂತ ಅಂತ್ಯ ಇಲ್ಲೇ ತಮ್ಮ ಜೊತೆಯಲ್ಲಿಯೇ ಮುಂದೆಯೂ ಇರುತ್ತಾನೆ ಎನ್ನುವುದು ಅವರಿಗೆ ಹೆಚ್ಚಿನ ಸಮಾಧಾನ ತಂದಿತ್ತು.

ಅಂದಿನಿಂದ ಅಂತ್ಯನ ಕೆಲಸ ಬದಲಾಗಿತ್ತು. ಇಲ್ಲಿಯ ವರೆಗೆ ಶಾಸ್ತ್ರೀಗಳ ಹತ್ತಿರ ತರಬೇತಿ ಪಡೆಯುವವನಂತೆ ಇದ್ದ ಅವ ಅವರ ಜೊತೆಯಲ್ಲಿಯೇ ನಿಂತು ತರಬೇತಿ ಕೊಡುವವನಾಗಿ ಮಾರ್ಪಾಡಾಗಿದ್ದ. ಯಕ್ಷಗಾನದಲ್ಲಿ ವೇಷವನ್ನೂ ಹಾಕುತ್ತಿದ್ದು ಆ ಕಲೆಯ ಬಗ್ಗೆ ತನಗಿಂತ ತುಸು ಹೆಚ್ಚೇ ಎನ್ನಿಸುವಷ್ಟು ಓದಿಕೊಂಡಿದ್ದ ಅಂತ್ಯ ಪ್ರಸಂಗಗಳ ಪ್ರದರ್ಶನ ಮತ್ತು ಪ್ರಯೋಗಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ವಿಧಾನ ಕೆಲವೊಮ್ಮೆ ಶಾಸ್ತ್ರೀಗಳೇ ಮೂಗಿನ ಮೇಲೆ ಬೆರಳಿಡಬೇಕು ಎನ್ನುವಷ್ಟರ ಮಟ್ಟಿಗೆ ಭಿನ್ನವಾಗಿರುತ್ತಿತ್ತು ಮತ್ತು ಸರಿಯಾಗಿರುತ್ತಿತ್ತು.

| ಇನ್ನು ನಾಳೆಗೆ |

‍ಲೇಖಕರು Admin

June 20, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: