ಪಿ ಪಿ ಉಪಾಧ್ಯ ಸರಣಿ ಕಥೆ 14– ಶಾಮಣ್ಣ ಕೊಟ್ಟ ಭಕ್ಷೀಸು…

ಪಿ ಪಿ ಉಪಾಧ್ಯ

14

ಶಾಮಣ್ಣ ಕೊಟ್ಟ ಭಕ್ಷೀಸು…

ಮುಂದಿನ ವಾರವೇ ಆದಿ ಪುನಃ ಎಮ್ಮೆ ಶೀನನನ್ನು ಕರೆದುಕೊಂಡು ಹೊರಟ. ಈ ಬಾರಿ ಶೀನನನ್ನು ಕರೆದುಕೊಂಡದ್ದು ಕೋಣಗಳ ಬಾಯಿ ತೆರೆಸಿ ಅವುಗಳ ಬಾಯಿಯಲ್ಲಿ ಮೂಡಿದ ಹಲ್ಲುಗಳನ್ನು ಎಣಿಸಿ ವಯಸ್ಸು ಹೇಳುವುದಕ್ಕೆ ಮಾತ್ರ. ಉಳಿದಂತೆ ಕಂಬಳದ ಕೋಣಗಳ ಬಗ್ಗೆ ಹೇಳಲು ಅವನ ಅಗತ್ಯವೂ ಇರಲಿಲ್ಲ. ಅವನಲ್ಲಿ ಆ ಅರ್ಹತೆಯೂ ಇರಲಿಲ್ಲ.

ಜೇಬು ತುಂಬ ದುಡ್ಡು ತುಂಬಿಸಿಕೊ೦ಡ ಆದಿ ಶೀನನನ್ನು ಕರೆದುಕೊಂಡು ಊರೂರು ಸುತ್ತಿದ. ಮಂಗಳೂರು ಕಡೆಯಲ್ಲಿ ತುಳುನಾಡಿನ ಕೆಲ ಗುತ್ತಿನ ಮನೆಯವರು ಎರಡು ಮೂರು ಜೊತೆ ಕಂಬಳದ ಕೋಣಗಳನ್ನು ಸಾಕಿರುತ್ತಾರೆ ಎಂಬುದನ್ನು ಕೇಳಿ ತಿಳಿದುಕೊಂಡು ಅಲ್ಲೆಲ್ಲ ಸುತ್ತಿದ್ದರು. ಎಲ್ಲೂ ಅವರ ಮನಸ್ಸಿಗೆ ಬರುವ ಜೊತೆ ಸಿಕ್ಕಲಿಲ್ಲ. ಕೊನೆಗೆ ಮೂಡುಬಿದ್ರಿಯ ಹೆಗ್ಡೇರೊಬ್ಬರ ಮನೆಯಲ್ಲಿ ಕೋಣಗಳಿವೆಯೆಂದೂ ಕೋಣಗಳು ಎಳೆಯವೇ ಆದರೂ ವಯಸ್ಸಾದ ಹೆಗ್ಡೆಯವರಿಗೆ ಅವರ ದೈನಂದಿನ ವ್ಯವಹಾರ ಸಂಭಾಳಿಸುವುದೇ ಕಷ್ಟವಾಗಿರುವುದರಿಂದ ಈ ಕಂಬಳ ಅದು ಇದೂ ಎಂದು ನೋಡಿಕೊಳ್ಳಲಾಗುವುದಿಲ್ಲ.

ವಯಸ್ಸಿಗೆ ಬರುತ್ತಿದ್ದ ಮಕ್ಕಳ ಮೇಲೆ ನಿರೀಕ್ಷೆಯಿಟ್ಟು ಇಷ್ಟು ವರ್ಷಗಳೂ ವ್ಯವಹಾರವನ್ನು ಬೆಳೆಸುತ್ತಲೇ ಬಂದ ಹೆಗ್ಡೇರ ಮಕ್ಕಳಲ್ಲಿ ಒಬ್ಬ ತಾನು ಕಲಿಯುತ್ತೇನೆಂದು ಅದೇನೋ ಡೆಲ್ಲಿಗೋ ಗುರ್‌ಗಾಂವ್‌ಗೋ ಹೋಗಿದ್ದ. ಇನ್ನೊಬ್ಬನಂತೂ ಈ ದೇಶದ ಸಹವಾಸವೇ ಬೇಡ ಎಂದು ಅಬುದಾಬಿಯಲ್ಲಿ ಇಲ್ಲಿನವರೇ ಸ್ಥಾಪಿಸಿದ ಆಸ್ಪತ್ರೆಯೊಂದರಲ್ಲಿ ಅಕೌಂಟ೦ಟ್ ಆಗಿ ಹೋದಮೇಲೆ ಬೇರೆ ದಾರಿಯೇ ಕಾಣದೆ ಒಂದೊ೦ದೇ ಕಳಚಿಕೊಳ್ಳುತ್ತ ಬಂದ ಹೆಗ್ಡೇರು ಈಗ ಕಂಬಳದ ಕೋಣಗಳನ್ನು ಮಾರುವವರೆಗೆ ಬಂದಿದ್ದಾರೆ ಎನ್ನುವ ಸುದ್ದಿ ಸಿಕ್ಕಿದ್ದೇ ಅಲ್ಲಿಗೆ ಹೋದರು. ಆದಿನಾರಾಯಣ ಮತ್ತು ಶೀನನನ್ನು ಆದರದಿಂದ ಬರಮಾಡಿಕೊಂಡ ಅವರು ಇವರ ಪೂರ್ವಾಪರಗಳನ್ನು ವಿಚಾರಿಸಿದ್ದರು. ಎಲ್ಲ ಕೇಳಿಕೊಂಡು ತಮ್ಮ ಕೋಣಗಳನ್ನು ಚಂದದಲ್ಲಿ ನೋಡಿಕೊಂಡಾರು ಇವರು ಎನ್ನುವ ಭರವಸೆ ಮೂಡಿದ ಮೇಲೆಯೇ ಅವರು ಅವುಗಳನ್ನು ಮಾರಾಟ ಮಾಡುವ ಮಾತಿಗೆ ಮುಂದಾದದ್ದು.

ವ್ಯಾಪಾರ ಕುದುರಿ ಮಾತುಕತೆ ಮುಗಿಯುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಇನ್ನೇನು ಕೋಣಗಳ ಕುತ್ತಿಗೆಯ ಕಣ್ಣಿಯನ್ನು ಬಿಚ್ಚಿ ಹೊರಡಬೇಕು. ಹೆಗ್ಡೆಯವರ ಎರಡು ಆಳುಗಳೂ ಜೊತೆಯಲ್ಲಿ ಹೊರಡುವುದೆಂದಾಗಿತ್ತು. ‘ಪರಿಸ್ಥಿತಿ ಹೀಗೆ ಬಂದದ್ದರಿ೦ದ ಇಷ್ಟು ಕಡಿಮೆಗೆ ಒಪ್ಪಬೇಕಾಯ್ತು ಇಲ್ಲವೆಂದರೆ ಇನ್ನೊಂದು ಹತ್ತು ಸಾವಿರವಾದರೂ ಹೆಚ್ಚು ಬರುತ್ತಿತ್ತು’ ಎಂದು ಹೇಳುತ್ತಲೇ ಹೆಗ್ಡೆಯವರು ಒಪ್ಪಿದ್ದರೂ ಆದಿ ಜೇಬಿನಲ್ಲಿ ತುಂಬಿಸಿಕೊ೦ಡು ಬಂದ ದುಡ್ದು ಸಾಕಾಗಿರಲಿಲ್ಲ. ಉಳಿದ ಹಣ ಜೊತೆಯಲ್ಲಿ ಬರುವ ಆ ಇಬ್ಬರು ಆಳುಗಳೊಂದಿಗೆ ಕೊಟ್ಟು ಕಳುಹಿಸುತ್ತೇನೆಂದ.

ಹೇಗೂ ಮಧ್ಯಾಹ್ನವಾಗಿದೆ. ನಿಮಗೇನೂ ಅಭ್ಯಂತರವಿಲ್ಲದಿದ್ದರೆ ಊಟ ಮಾಡಿಕೊಂಡು ಹೊರಡಬಹುದು' ಆದಿಗೆ ಊಭಯ ಸಂಕಟ. ಗುತ್ತಿನ ಹೆಗ್ಡೇರು. ಅವರೊಡನೆ ‘ನಿಮ್ಮ ಮನೆಯಲ್ಲಿ ಊಟ ಮಾಡುವುದಿಲ್ಲ ನಾವೆಲ್ಲ’ ಎಂದು ಹೇಳಲು ದಾಕ್ಷಿಣ್ಯ. ಶೀನನಿಗಾದರೋ ಪರವಾಯಿಲ್ಲ. ಅವರು ಹೇಳಿದ್ದೇ ತಡ ಎದ್ದೇ ಬಿಟ್ಟ. ಮೀನ ಮೇಷ ಎಣಿಸುತ್ತಿದ್ದ ಆದಿಯನ್ನು ಕಂಡು ಹೆಗ್ಡೇರೇ ಹೇಳಿದರುನಾವೂ ನಿಮ್ಮಂತೆಯೇ ಸಸ್ಯಾಹಾರಿಗಳೇ. ಆದರೂ ನಮ್ಮವರ ಮನೆಯಲ್ಲಿ ಊಟ ಮಾಡಲಿಕ್ಕಿಲ್ಲ ನೀವು. ನನ್ನ ತಲೆಗೆ ಹೊಳೆಯಲೇ ಇಲ್ಲ ನೋಡಿ’ ಎಂದವರು ಒಳಗೆ ಹೊರಗೆ ಓಡಾಡಿಕೊಂಡಿದ್ದ ಆಳುಗಳನ್ನು ಕರೆದು ಬಾಳೆ ಹಣ್ಣು ಮತ್ತು ಹಾಲನ್ನು ತರಲು ಹೇಳಿ ಅಷ್ಟರಲ್ಲಿ ಊಟಕ್ಕೆ ತಯಾರಾಗಿದ್ದ ಶೀನನಿಗೆ ಅಲ್ಲೇ ಜಗಲಿಯ ಮೇಲೆ ಬಡಿಸಲು ಹೇಳಿದರು.

ಆದಿಗೆ ಮುಜುಗರವೇ. ವ್ಯವಹಾರಕ್ಕಾಗಿ ಇಷ್ಟೆಲ್ಲ ಹೊರಗಡೆ ತಿರುಗಾಡುತ್ತಿದ್ದರೂ ಅವ ಬ್ರಾಹಣರ ಮನೆ ಬಿಟ್ಟು ಬೇರೆ ಕಡೆ ಉಂಡದ್ದಿಲ್ಲ. ಹೋಟೆಲಿನಲ್ಲಿ ತಿನ್ನುವುದಾದರೆ ಅಷ್ಟೊಂದು ಚಿಂತೆ ಮಾಡದಿದ್ದ ಅವನಿಗೆ ಮನೆಯೆಂದ ಕೂಡಲೇ ಏನೋ ಇರಿಸು ಮುರಿಸು. ಆದರೆ ಹಾಲು ಹಣ್ಣಾದರೆ ಪರವಾಯಿಲ್ಲ. ತಂದಿಟ್ಟ ಪ್ಲೇಟು ತುಂಬ ತುಂಬಿದ್ದ ಬಾಳೆ ಹಣ್ಣನ್ನು ಪಟ್ಟಾಗಿ ಹೊಡೆದು ಹಾಲು ಕುಡಿದು ಏಳುವಾಗ ಶೀನನೂ ತೇಗುತ್ತ ಎದ್ದಿದ್ದ.

ಊರಿನ ಅಭಿಮುಖವಾಗಿ ಆದಿನಾರಾಯಣ, ಎಮ್ಮೆ ಶೀನ ಮತ್ತು ಹೆಗ್ಡೇರ ಇಬ್ಬರು ಆಳುಗಳು ಕೆಂಪು ಕೆಂಪಾಗಿದ್ದ ಎರಡು ಕಂಬಳದ ಕೋಣಗಳನ್ನು ಹೊಡೆದುಕೊಂಡು ಹೊರಟರು. ಹೊರಡುವ ಮುನ್ನ ನೋಡಿದವರ ದೃಷ್ಟಿ ತಾಗಬಾರದೆಂದು ಕೋಣಗಳ ಮುಖ ಮತ್ತು ಮೈಗೆ ಢಾಳಾಗಿ ಮಸಿ ಬಳಿದಿದ್ದರು ಮತ್ತು ಬೆನ್ನಿನ ಮೇಲೆ ಎರಡೆರಡು ಗೋಣಿ ಚೀಲಗಳನ್ನು ಹಾಕಿದ್ದರು. ಬಿಸಿಲಿನ ಝಳಕ್ಕೆ ಕೋಣಗಳ ಮೈ ಬಣ್ಣ ಮಾಸಬಾರದು ಎನ್ನುವುದು ಒಂದಾದರೆ ಬೇಸಗೆಯ ಬಿಸಿಲಿಗೆ ಬಿಸಿಯಾಗಬಹುದಾದ ಮೈಗೆ ದಾರಿಯುದ್ದಕ್ಕೂ ನೀರು ಸಿಕ್ಕಿದೆಡೆಯೆಲ್ಲ ಮೈಮೇಲಿನ ಗೋಣಿಚೀಲವನ್ನು ಒದ್ದೆ ಮಾಡುತ್ತ ಕೋಣಗಳ ಮೈ ತಣ್ಣಗಿರುವಂತೆ ನೋಡಿಕೊಳ್ಳುವುದು ಇನ್ನೊಂದು.

ಎರಡನೆ ದಿನ ಸಂಜೆ ಊರು ತಲುಪಿದಾಗ ಅವರಿಗೆ ಸ್ವಾಗತವೋ ಸ್ವಾಗತ. ಊರು ಹತ್ತಿರವಾಗುತ್ತಿದ್ದಂತೆ ತುಸು ಮುಂದಾಗಿ ಹೋಗಿದ್ದ ಶೀನ ಕೋಣಗಳೊಡನೆ ಇವರು ಬರುತ್ತಿರುವುದರ ಸುದ್ದಿ ತಲುಪಿಸಿದ್ದ. ಶಾಮಣ್ಣನವರ ಹೆಂಡತಿ ತಾನೇ ಖುದ್ದಾಗಿ ನಿಂತು ಅಡಿಗೆ ನೀಲಮ್ಮನಿಂದ ಆರತಿ ಮಾಡಿಸಿಕೊಂಡು ಕೋಣಗಳನ್ನು ಬರಮಾಡಿಕೊಂಡಳು. ಶಾಮಣ್ಣನವರು ಕೋಣಗಳಿಗೆ ಕಾಯಿ ಸುಳಿದು ಕೀಳಿಗೆ ಚರು ಹಾಕುತ್ತೇನೆಂದು ಹರಕೆ ಹೊತ್ತು ಹಟ್ಟಿಯ ಬಾಗಿಲನ್ನು ತೆರೆಸಿದರು. ಈಗಲೂ ಮನೆಯಲ್ಲಿ ಜಾನುವಾರುಗಳು ಕ್ಷೇಮವಾಗಿರಬೇಕಾದರೆ ಆ ಕೀಳೇ ನೋಡಿಕೊಳ್ಳಬೇಕೆಂಬುದು ಅವರ ನಂಬಿಕೆ.

ಜೊತೆಗೆ ಬಂದ ಹೆಗ್ಡೇರ ಆಳುಗಳು ಕೋಣಗಳನ್ನು ಹಟ್ಟಿಯೊಳಗೆ ಹೊಗಿಸಿದವರು ತಮ್ಮ ತಮ್ಮೊಳಗೇ ತುಳುವಿನಲ್ಲಿ ಮಾತನಾಡಿಕೊಂಡದ್ದು ಏನೆಂದು ಆದಿಗೆ ಅರ್ಥವಾಗದಿದ್ದರೂ ಅವರ ಮುಖದ ಮೇಲೆ ಮೂಡಿದ ಅಸಮಾಧಾನದ ಛಾಯೆ ಏನೋ ಹೇಳಿತ್ತು. ಅಲ್ಲ ಇದು ತತ್ಕಾಲಕ್ಕೆ. ಇನ್ನೆಂಟೇ ದಿನಗಳಲ್ಲಿ ನೋಡಿ ಅಲ್ಲಿ ಬೇರೆ ಹಟ್ಟಿಯೇ ತಯಾರಾಗುತ್ತಿದೆ. ಅಲ್ಲಿ ಕಟ್ಟುತ್ತೇವೆ' ಎಂದು ಹೊಸದಾಗಿ ಹೆಂಚಿನ ಮಾಡಿನ ಸಿಮೆಂಟಿನ ನೆಲದ ಪಕ್ಕದ ಕಟ್ಟಡವನ್ನು ತೋರಿಸಿದ. ಶಾಮಣ್ಣನವರು ಮಾಡಿದ ಮರ್ಯಾದೆ ಮತ್ತು ಕೊಟ್ಟ ಭಕ್ಷೀಸನ್ನು ತೆಗೆದುಕೊಂಡ ಆಳುಗಳಿಬ್ಬರು ಹಟ್ಟಿ ಕೆಲಸ ಮಾಡುತ್ತಿದ್ದವನಿಗೆ ಹತ್ತು ಹಲವು ಸಲಹೆಗಳನ್ನು ಕೊಟ್ಟು ಹೋಗುವಾಗಅಯ್ಯ.. ಕಂಬಳದ ದಿನಗಳಿಗೆ ಹೇಳಿ ಕಳುಹಿಸಿದರೆ ನಾವಿಬ್ಬರೂ ಬರುತ್ತೇವೆ. ಕಾಲ ಕಾಲದಿಂದ ಹೆಗ್ಡೇರ ಕೋಣಗಳನ್ನು ಓಡಿಸುತ್ತಿದ್ದವರು ನಾವೇ’ ಎಂದಿದ್ದರು. ಶಾಮಣ್ಣನವರು ಮಾಡಿದ್ದ ಮರ್ಯಾದೆ ಮತ್ತು ಕೊಟ್ಟ ಭಕ್ಷೀಸು ಅವರಿಗೆ ತೃಪ್ತಿ ತಂದದ್ದು ಪ್ರಕಟವಾಗಿಯೇ ಕಂಡಿತು.

ಅ೦ತೂ ಶಾಮಣ್ಣನವರೂ ಕಂಬಳದ ಕೋಣ ಕಟ್ಟಿದಂಥ ದೊಡ್ಡವರ ಸಾಲಿಗೆ ಸೇರಿದರು. ಯಾವತ್ತಿಂದಲೋ ಪೋಷಿಸಿಕೊಂಡು ಬಂದ ಅವರ ಆ ಆಸೆ ನಡುವಿನಲ್ಲಿ ಕೈ ಬಿಟ್ಟರೂ ಈಗ ಪೂರೈಸಿತ್ತು. ಅವರ ಚಿಕ್ಕ ಮಗ ಅನಂತನಿಗ೦ತೂ ಸಂಭ್ರಮವೋ ಸಂಭ್ರಮ. ನಾಳೆ ಶಾಲೆಯಲ್ಲಿ ಹೇಳಿಕೊಳ್ಳಬಹುದಲ್ಲ. ಸಾಮಾನ್ಯವಾಗಿ ಹಟ್ಟಿಯೊಳಗೆ ಎಂದೂ ಕಾಲಿಡದ ಅವ ಆವತ್ತು ಹತ್ತು ಸಲವಾದರೂ ಅಲ್ಲಿಗೆ ಹೋಗಿ ಕೆಂಪು ಕೆಂಪಾಗಿದ್ದ ಆ ಕೋಣಗಳ ಬೆನ್ನನ್ನು ಬಳಚಿ ಬಂದಿದ್ದ. ಮೊದ ಮೊದಲು ಹೆದರಿ ಹೆದರಿ ಹೋದವ ಆ ಕೋಣಗಳಿಂದ ವಿರೋಧವೇನೂ ಬರದಿದ್ದಾಗ ಸಲೀಸಾಗಿ `ಮರಿ ಆನೆಗಳ ಹಾಗಿದ್ದಾವಲ್ಲ’ ಎಂದು ಅವನಷ್ಟಕ್ಕೆ ಹೇಳಿಕೊಳ್ಳುತ್ತ ಕೋಣಗಳ ಮೈ ಬಳಚುತ್ತಾ ಆನಂದವನ್ನು ಅನುಭವಿಸಿದ್ದ.

। ಇನ್ನು ನಾಳೆಗೆ ।

‍ಲೇಖಕರು Admin

May 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: